ಪದ್ಯ ೮೦: ರಾಜರ ಗುಂಪು ಶಿಶುಪಾಲನ ಸಾವಿಗೆ ಹೇಗೆ ಪ್ರತಿಕ್ರಯಿಸಿತು?

ಈಸು ಹಿರಿದೆಲ್ಲೆಂದು ಕೆಲಬರು
ಲೇಸ ಮಾಡಿದನಸುರ ರಿಪುವಿನ
ನೀಸು ಬಾಹಿರನೆಂದರಿಯೆವಾವೆಂದು ಕೆಲಕೆಲರು
ಐಸಲೇ ಕೃಷ್ಣಂಗೆ ಮುನಿದವ
ರೇಸು ದಿನ ಬದುಕುವರು ಲೇಸಾ
ಯ್ತೀ ಸುನೀತಂಗೆಂದು ನಗುತಿರ್ದುದು ನೃಪಸ್ತೋಮ (ಸಭಾ ಪರ್ವ, ೧೧ ಸಂಧಿ, ೮೦ ಪದ್ಯ)

ತಾತ್ಪರ್ಯ:
ಅಲ್ಲಿದ್ದ ರಾಜರಲ್ಲಿ ಕೆಲವರು ಇದೇನೂ ಹೆಚ್ಚಲ್ಲ ಎಂದು ನುಡಿದರೆ, ಇನ್ನೂ ಕೆಲವರು ಶಿಶುಪಾಲನಿಗೆ ಶ್ರೀಕೃಷ್ಣನು ತಕ್ಕ ಶಾಸ್ತಿಯನ್ನೇ ಮಾಡಿದನು ಎಂದು ಅಭಿಪ್ರಾಯಪಟ್ಟರು. ಶಿಶುಪಾಲನು ಇಷ್ಟು ಸನ್ಮಾರ್ಗಬಾಹಿರನೆಂದು ನಮಗೆ ತಿಳಿದಿರಲಿಲ್ಲ ಎಂದು ಕೆಲವರು ಮಾತಾಡಿದರು, ಇನ್ನೂ ಕೆಲವರು ಕೃಷ್ಣನ ಮೇಲೆ ದ್ವೇಷ ಕಟ್ಟಿಕೊಂಡವರು ಎಷ್ಟು ದಿನ ಬದುಕಲು ಸಾಧ್ಯ, ಶಿಶುಪಾಲನಿಗೆ ಸರಿಯಾದುದಾಯಿತು ಎಂದು ನಗುತ್ತಿದ್ದರು.

ಅರ್ಥ:
ಈಸು: ಇಷ್ಟು; ಹಿರಿ: ಹೆಚ್ಚು, ದೊಡ್ಡದು; ಕೆಲಬರು: ಸ್ವಲ್ಪ ಮಂದಿ; ಲೇಸು: ಒಳಿತು; ಅಸುರರಿಪು: ರಾಕ್ಷಸರ ವೈರಿ (ಕೃಷ್ಣ); ಬಾಹಿರ: ಹೊರಗಿನವ, ಹೀನಮನುಷ್ಯ; ಅರಿ: ತಿಳಿ; ಐಸಲೇ: ಅಲ್ಲವೇ; ಮುನಿ: ಕೋಪ; ಏಸು: ಎಷ್ಟು; ದಿನ: ದಿವಸ, ವಾರ; ಬದುಕು: ಜೀವಿಸು; ಸುನೀತ: ಶಿಶುಪಾಲ; ನಗು: ಸಂತಸ; ನೃಪ: ರಾಜ; ಸ್ತೋಮ: ಗುಂಪು;

ಪದವಿಂಗಡಣೆ:
ಈಸು +ಹಿರಿದೆಲ್ಲೆಂದು +ಕೆಲಬರು
ಲೇಸ +ಮಾಡಿದನ್+ಅಸುರರಿಪುವ್+ಇನನ್
ಈಸು +ಬಾಹಿರನೆಂದ್+ಅರಿಯೆವಾವೆಂದು+ ಕೆಲಕೆಲರು
ಐಸಲೇ +ಕೃಷ್ಣಂಗೆ +ಮುನಿದವರ್
ಏಸು +ದಿನ +ಬದುಕುವರು +ಲೇಸಾ
ಯ್ತೀ +ಸುನೀತಂಗೆಂದು +ನಗುತಿರ್ದುದು +ನೃಪಸ್ತೋಮ

ಅಚ್ಚರಿ:
(೧) ಈಸು, ಏಸು – ಪ್ರಾಸ ಪದಗಳು
(೨) ಕೆಲಕೆಲರು, ಕೆಲಬರು – ಪದಗಳ ಬಳಕೆ

ಪದ್ಯ ೨೪: ಭೀಮನು ತನ್ನ ಸಚಿವನಿಗೆ ಏನು ಹೇಳಿದ?

ಸೆರಗ ಸಂವರಿಸಿದನು ಮಕುಟವ
ನುರುಗದಂತಿರೆ ಮುರುಹಿ ಸಚಿವಂ
ಗರುಹಿದನು ಸನ್ನೆಯಲಿ ಸಮರಕೆ ಚಾಪಮಾರ್ಗಣವ
ಹೊರಗೆ ಸಂವರಿಸಿರಲಿ ದಳ ಕೈ
ಮರೆಯಬೇಡ ಸುನೀತನನು ನಾ
ವ್ತರುಬಿ ನಿಂದಾಕ್ಷಣದಲೊದಗುವುದೆಂದು ಸೂಚಿಸಿದ (ಸಭಾ ಪರ್ವ, ೧೧ ಸಂಧಿ, ೨೪ ಪದ್ಯ)

ತಾತ್ಪರ್ಯ:
ಭೀಮನು ತನ್ನ ಉತ್ತರೀಯವನ್ನು ಸರಿಪಡಿಸಿ, ತನ್ನ ಕಿರೀಟವನ್ನು ಬಾಗದಂತೆ ಸರಿಯಾಗಿಟ್ಟುಕೊಂಡು, ತನ್ನ ಸಚಿವನಿಗೆ ಸನ್ನೆ ಮಾಡಿ ಬಿಲ್ಲು ಬಾಣಗಳನ್ನು ತರಲು ಹೇಳಿದನು. ಸೈನ್ಯವು ಹೊರಗೆ ಸಿದ್ಧವಾಗಿರಲಿ, ನಾನು ಶಿಶುಪಾಲನನ್ನು ಸೋಲಿಸಿದೊಡನೆ ಸಹಾಯಕ್ಕೆ ಬರಲಿ ಎಂದು ಸೂಚಿಸಿದನು.

ಅರ್ಥ:
ಸೆರಗು: ಉತ್ತರೀಯ; ಸಂವರಿಸು: ಸರಿಪಡಿಸು; ಮಕುಟ: ಕಿರೀಟ; ಉರುಗು: ಬಾಗು, ಓರೆಯಾಗು; ಉರುಹು: ನೀಡು; ಸಚಿವ: ಮಂತ್ರಿ; ಅರುಹು: ಹೇಳಿ; ಸನ್ನೆ: ಸಂಜ್ಞೆ, ಸುಳಿವು; ಸಮರ: ಯುದ್ಧ; ಚಾಪ: ಬಿಲ್ಲು; ಮಾರ್ಗಣ: ಬಾಣ; ಹೊರಗೆ: ಆಚೆ; ಸಂವರಿಸು: ಸಜ್ಜು ಮಾಡು; ದಳ: ಸೈನ್ಯ; ಮರೆ: ಆಸರೆ, ಆಶ್ರಯ; ಸುನೀತ: ಶಿಶುಪಾಲ; ತರುಬು: ತಡೆ, ನಿಲ್ಲಿಸು; ಕ್ಷಣ: ಸಮಯ; ಒದಗು: ಲಭ್ಯ, ದೊರೆತುದು; ಸೂಚಿಸು: ತಿಳಿಸು;

ಪದವಿಂಗಡಣೆ:
ಸೆರಗ +ಸಂವರಿಸಿದನು+ ಮಕುಟವನ್
ಉರುಗದಂತಿರೆ +ಮುರುಹಿ +ಸಚಿವಂಗ್
ಅರುಹಿದನು +ಸನ್ನೆಯಲಿ +ಸಮರಕೆ+ ಚಾಪ+ಮಾರ್ಗಣವ
ಹೊರಗೆ +ಸಂವರಿಸಿರಲಿ +ದಳ+ ಕೈ
ಮರೆಯಬೇಡ+ ಸುನೀತನನು+ ನಾವ್
ತರುಬಿ +ನಿಂದ್+ಆ+ಕ್ಷಣದಲ್+ಒದಗುವುದೆಂದು +ಸೂಚಿಸಿದ

ಅಚ್ಚರಿ:
(೧) ಮುರುಹಿ, ಅರುಹಿ – ಪ್ರಾಸ ಪದ
(೨) ಸ ಕಾರದ ತ್ರಿವಳಿ ಪದ – ಸಚಿವಂಗರುಹಿದನು ಸನ್ನೆಯಲಿ ಸಮರಕೆ
(೩) ಸಂವರಿಸು, ಸುನೀತ, ಸೂಚಿಸು – ಸ ಕಾರದ ಪದಗಳ ಬಳಕೆ
(೪) ಬಿಲ್ಲು ಬಾಣ ಎಂದು ಹೇಳಲು – ಚಾಪಮಾರ್ಗಣ ಪದದ ಬಳಕೆ

ಪದ್ಯ ೩೯: ಆಸ್ಥಾನದ ಪರಿಸ್ಥಿತಿಯನ್ನು ಅರಿತು ಯಾರು ಮಧ್ಯ ಪ್ರವೇಶಿಸಿದರು?

ಕದಡಿತಾ ಆಸ್ಥಾನ ಹೋಯೆಂ
ದೊದರಿ ಋಷಿಗಳ ನಾಳಿಗೆಗಳೊಣ
ಗಿದವು ಹಲ್ಲಣಿಸಿದವು ರಥ ಮಾತಂಗ ವಾಜಿಗಳು
ಕೆದರಿತೀಚೆಯ ದೆಸೆ ಸುನೀತನ
ಸದೆದು ತೆಗೆಸುಂಟಿಗೆಯನೆನುತಲಿ
ಯದು ನೃಪಾಲರು ಗಜಬಜಿಸಲೆಡೆವೊಕ್ಕನಾ ಭೀಷ್ಮ (ಸಭಾ ಪರ್ವ, ೯ ಸಂಧಿ, ೩೯ ಪದ್ಯ)

ತಾತ್ಪರ್ಯ:
ಯಾದವರು ಆಯುಧಗಳನ್ನು ಹೊರತೆಗೆಯಲು ಆಸ್ಥಾನದ ವಾತಾವರಣವು ಕದಡಿತು, ಋಷಿಗಳು ಹೋಯೆಂದು ಕೂಗಿದರು, ಅವರ ನಾಲಿಗೆಗಳು ಒಣಗಿದವು. ರಥ, ಆನೆ, ಕುದುರೆಗಳು ಯುದ್ಧಕ್ಕೆ ಸಿದ್ಧವಾದವು. ಯಾದವರಾಜರು ಈಚೆ ನಿಂತು ಈ ಸುನೀತನನ್ನು(ದುಷ್ಟನನ್ನು, ಶಿಶುಪಾಲನನ್ನು ವ್ಯಂಗ್ಯವಾಗಿ ಒಳ್ಳೆಯ ನಡತೆಯುಳ್ಳವನೆಂದು ಹೇಳಿರುವುದು) ಬಡಿದು ಇವನ ಹೃದಯವನ್ನು ತೆಗೆಯಿರಿ ಎಂದು ಗರ್ಜಿಸಲು ಭೀಷ್ಮನು ಇವರ ನಡುವೆ ಬಂದನು.

ಅರ್ಥ:
ಕದಡು: ಕ್ಷೋಭೆಗೊಳಿಸು; ಆಸ್ಥಾನ: ದರ್ಬಾರು; ಹೋ: ಜೋರಾಗಿ ಕೂಗುವ ಶಬ್ದ; ಒದರು: ಹೇಳು; ಋಷಿ: ಮುನಿ; ನಾಳಿಗೆ: ನಾಲಗೆ, ಜಿಹ್ವೆ; ಒಣಗು: ಬಾಡು, ನೀರಿಲ್ಲದ; ಹಲ್ಲಣ:ಜೀನು, ಕಾರ್ಯ; ರಥ: ಬಂಡಿ; ಮಾತಂಗ: ಆನೆ; ವಾಜಿ: ಕುದುರೆ; ಕೆದರು: ಹರಡು, ಚದರಿಸು; ದೆಸೆ: ದಿಕ್ಕು; ನೀತಿ: ಒಳ್ಳೆಯ ನಡತೆ; ಸದೆ:ಕುಟ್ಟು, ಪುಡಿಮಾಡು; ತೆಗೆಸು: ಹೊರಹಾಕು; ಸುಂಟಿಗೆ: ಹೃದಯದ ಮಾಂಸ; ಎನುತ: ಹೇಳಿ; ನೃಪ: ರಾಜ; ಗಜಬಜ: ಗಲಾಟೆ, ಕೋಲಾಹಲ; ಎಡೆ: ಹತ್ತಿರ, ಸಮೀಪ; ಹೊಕ್ಕು: ಸೇರು;

ಪದವಿಂಗಡಣೆ:
ಕದಡಿತಾ +ಆಸ್ಥಾನ +ಹೋಯೆಂದ್
ಒದರಿ +ಋಷಿಗಳ +ನಾಳಿಗೆಗಳ್+ಒಣ
ಗಿದವು +ಹಲ್ಲಣಿಸಿದವು +ರಥ +ಮಾತಂಗ +ವಾಜಿಗಳು
ಕೆದರಿತ್+ಈಚೆಯ +ದೆಸೆ +ಸುನೀತನ
ಸದೆದು +ತೆಗೆ+ಸುಂಟಿಗೆಯನ್+ಎನುತಲಿ
ಯದು +ನೃಪಾಲರು +ಗಜಬಜಿಸಲ್+ಎಡೆ+ವೊಕ್ಕನಾ +ಭೀಷ್ಮ

ಅಚ್ಚರಿ:
(೧) ಶಿಶುಪಾಲನನ್ನು ವ್ಯಂಗ್ಯವಾಗಿ ಸುನೀತನೆಂದು ಕರೆದಿರುವುದು