ಪದ್ಯ ೫೩: ಭೀಮನು ಕರ್ಣನನ್ನೇಕೆ ಕೊಲ್ಲಲಿಲ್ಲ?

ಉಂಟು ಶಿವ ಶಿವ ಹುಸಿಯನುಡಿ ನಿನ
ಗುಂಟೆ ಗೆಲ್ಲದೆ ಮಾಣೆ ಶೌರ್ಯದ
ಗಂಟು ಬಲುಹದ ಕಂಡು ಬಲ್ಲೆನು ಹಲವುಬಾರಿಯಲಿ
ಸುಂಟಿಗೆಯನಾಯ್ವೆನು ಕಣಾ ಬಲು
ಕಂಟಕವಲೇ ನರನ ನುಡಿ ನೀ
ನೆಂಟುಮಡಿ ಗಳಹಿದರೆ ತಪ್ಪೇನೆಂದನಾ ಭೀಮ (ದ್ರೋಣ ಪರ್ವ, ೧೩ ಸಂಧಿ, ೫೩ ಪದ್ಯ)

ತಾತ್ಪರ್ಯ:
ನಿನ್ನ ಮಾತು ನಿಜ, ಶಿವ ಶಿವಾ ಸುಳ್ಳುಮಾತು ನಿನ್ನಿಂದ ಬರುವುದಿಲ್ಲ. ನೀನು ಗೆಲ್ಲದೆ ಬಿಡುವುದಿಲ್ಲ. ನಿನ್ನ ಸತ್ಯ ನನಗೆ ಚೆನ್ನಾಗಿ ಗೊತ್ತು. ಈಗ ತಾನೇ ಹದಿನೆಂಟು ಬಾರಿ ನಾನು ನೋಡಿದ್ದೇನೆ, ಏನು ಮಾಡುತ್ತೀ, ಅರ್ಜುನನ ಪ್ರತಿಜ್ಞೆ ನನಗೆ ಅಡ್ಡ ಬರುತ್ತಿದೆ, ಇಲ್ಲದಿದ್ದರೆ ನಿನ್ನ ಹೃದಯದ ಮಾಂಸವನ್ನು ಆರಿಸಿ ಬಿಡುತ್ತಿದ್ದೆ. ನಿಣು ಎಂಟುಮಡಿ ಬೊಗಳಿದರೂ ತಪ್ಪೇನು ಎಂದು ಭೀಮನು ಗುಡುಗಿದನು.

ಅರ್ಥ:
ಉಂಟು: ಇದೆ; ಶಿವ: ಶಂಕರ; ಹುಸಿ: ಸುಳ್ಳು; ನುಡಿ: ಮಾತು; ಗೆಲ್ಲು: ಜಯಿಸು; ಮಾಣು: ನಿಲ್ಲಿಸು; ಶೌರ್ಯ: ಸಾಹಸ, ಪರಾಕ್ರಮ; ಗಂಟು: ಮೂಟೆ; ಬಲುಹ: ಶಕ್ತಿ; ಕಂಡು: ನೋಡು; ಬಲ್ಲೆ: ತಿಳಿ; ಹಲವು: ಬಹಳ; ಬಾರಿ: ಸಲ, ಸರದಿ; ಸುಂಟಿಗೆ: ಹೃದಯದ ಮಾಂಸ; ಆಯ್ವೆ: ಹುಡುಕು; ಕಂಟಕ: ಮುಳ್ಳು, ವಿಪತ್ತು; ನರ: ಮನುಷ್ಯ; ನುಡಿ: ಮಾತು; ಮಡಿ: ಪಟ್ಟು; ಗಳಹು: ಪ್ರಲಾಪಿಸು, ಹೇಳು; ತಪ್ಪು: ಸರಿಯಿಲ್ಲದ್ದು;

ಪದವಿಂಗಡಣೆ:
ಉಂಟು +ಶಿವ +ಶಿವ +ಹುಸಿಯನುಡಿ +ನಿನ
ಗುಂಟೆ +ಗೆಲ್ಲದೆ +ಮಾಣೆ +ಶೌರ್ಯದ
ಗಂಟು +ಬಲುಹದ +ಕಂಡು +ಬಲ್ಲೆನು +ಹಲವು+ಬಾರಿಯಲಿ
ಸುಂಟಿಗೆಯನ್+ಆಯ್ವೆನು +ಕಣಾ +ಬಲು
ಕಂಟಕವಲೇ +ನರನ+ ನುಡಿ +ನೀನ್
ಎಂಟುಮಡಿ +ಗಳಹಿದರೆ +ತಪ್ಪೇನ್+ಎಂದನಾ +ಭೀಮ

ಅಚ್ಚರಿ:
(೧) ಉಂಟು, ಗಂಟು, ಎಂಟು – ಪ್ರಾಸ ಪದಗಳು
(೨) ಕರ್ಣನನ್ನು ಹೊಗಳುವ ಪರಿ – ಶಿವ ಶಿವ ಹುಸಿಯನುಡಿ ನಿನಗುಂಟೆ

ಪದ್ಯ ೨೬: ಕುರುಸೈನ್ಯದವರು ಭೀಮನ ಮೇಲೆ ಹೇಗೆ ಎರಗಿದರು?

ಸಿಕ್ಕಿದನು ಹಗೆ ಸ್ವಾಮಿದ್ರೋಹಿಯ
ಸೆಕ್ಕಿ ಸುರಗಿಯೊಳಿವನ ಖಂಡವ
ನಿಕ್ಕುಳಿನೊಳೊಡೆಯವಚಿ ಕೊಯ್ ಸುಂಟಿಗೆಯ ತಿನ್ನೆನುತ
ಹೊಕ್ಕು ಹೊಯ್ದರು ರಥವನಳವಿಗೆ
ಮಿಕ್ಕು ಕೈ ಮಾಡಿದರು ಕಾಲ್ದುಳಿ
ಯೊಕ್ಕಿಲಲಿ ಬೇಸರಿಸಿದರು ಪವಮಾನ ನಂದನನ (ಕರ್ಣ ಪರ್ವ, ೧೫ ಸಂಧಿ, ೨೬ ಪದ್ಯ)

ತಾತ್ಪರ್ಯ:
ಸ್ವಾಮಿ ದ್ರೋಹಿಯಾದ ಶತ್ರು ಸಿಕ್ಕಿದ್ದಾನೆ, ಸುರಗಿಯಲ್ಲಿ ಇವನ ಮಾಂಸ ಖಂಡವನ್ನು ಸಿಕ್ಕಿಸಿ ಇಕ್ಕಳಿನಲ್ಲಿ ತೆಗೆದು ಕೊಯ್ಯಿರಿ ಇವನ ಹೃದಯದವನ್ನು ಬಗೆದು ಮಾಂಸವನ್ನು ತಿನ್ನಿರಿ ಎಂದಬ್ಬರಿಸುತ್ತಾ ಹೊಕ್ಕು ರಥದ ಬಳಿ ಬಂದು ಮೇಲೇರಿ ಕೈಮಾಡಿ ಕಾಲುತುಳಿತದಿಂದ ಕುರುಸೈನಿಕರು ಭೀಮನನ್ನು ಬೇಸರಿಸಿದರು.

ಅರ್ಥ:
ಸಿಕ್ಕು: ದೊರಕು; ಹಗೆ: ವೈರಿ; ಸ್ವಾಮಿ: ಒಡೆಯ; ದ್ರೋಹಿ: ವಂಚಕ; ಸೆಕ್ಕು:ಹಿಡಿದೆಳೆ, ಜೀರು; ಸುರಗಿ:ಸಣ್ಣ ಕತ್ತಿ, ಚೂರಿ; ಖಂಡ: ಚೂರು; ಇಕ್ಕು: ಹೊಡೆ; ಒಡೆ: ಸೀಳು, ಬಿರಿ; ಅವಚು: ಹಿಸುಕು; ಕೊಯ್: ಸೀಳು; ಸುಂಟಿಗೆ: ಹೃದಯದ ಮಾಂಸ; ತಿನ್ನು: ಭಕ್ಷಿಸು; ಹೊಕ್ಕು: ಸೇರು; ಹೊಯ್ದು: ಹೊಡೆ; ರಥ: ಬಂಡಿ; ಅಳವಿ: ವಶ; ಮಿಕ್ಕು: ಉಳಿದ; ಕೈ: ಹಸ್ತ;ಕೈಮಾಡು: ಹೊಡೆ, ಯುದ್ಧ; ಕಾಲ್ದುಳಿ: ಕಾಲು ತುಳಿತ; ಒಕ್ಕು:ಪ್ರವಹಿಸು; ಬೇಸರ: ಬೇಜಾರು, ನೋವು; ಪವಮಾನ: ವಾಯು; ನಂದನ: ಮಗ;

ಪದವಿಂಗಡಣೆ:
ಸಿಕ್ಕಿದನು +ಹಗೆ +ಸ್ವಾಮಿ+ದ್ರೋಹಿಯ
ಸೆಕ್ಕಿ+ ಸುರಗಿಯೊಳ್+ಇವನ +ಖಂಡವನ್
ಇಕ್ಕುಳಿನೊಳ್+ಒಡೆ+ಅವಚಿ +ಕೊಯ್ +ಸುಂಟಿಗೆಯ +ತಿನ್ನೆನುತ
ಹೊಕ್ಕು +ಹೊಯ್ದರು +ರಥವನ್+ಅಳವಿಗೆ
ಮಿಕ್ಕು+ ಕೈ +ಮಾಡಿದರು+ ಕಾಲ್ದುಳಿ
ಯೊಕ್ಕಿಲಲಿ+ ಬೇಸರಿಸಿದರು+ ಪವಮಾನ +ನಂದನನ

ಅಚ್ಚರಿ:
(೧) ಇಕ್ಕು, ಹೊಕ್ಕು, ಮಿಕ್ಕು – ಪ್ರಾಸ ಪದಗಳು
(೨) ಹಿಂಸಿಸುವ ಬಗೆ – ಸೆಕ್ಕಿ ಸುರಗಿಯೊಳಿವನ ಖಂಡವನಿಕ್ಕುಳಿನೊಳೊಡೆಯವಚಿ ಕೊಯ್ ಸುಂಟಿಗೆಯ ತಿನ್ನೆನುತ

ಪದ್ಯ ೩೯: ಆಸ್ಥಾನದ ಪರಿಸ್ಥಿತಿಯನ್ನು ಅರಿತು ಯಾರು ಮಧ್ಯ ಪ್ರವೇಶಿಸಿದರು?

ಕದಡಿತಾ ಆಸ್ಥಾನ ಹೋಯೆಂ
ದೊದರಿ ಋಷಿಗಳ ನಾಳಿಗೆಗಳೊಣ
ಗಿದವು ಹಲ್ಲಣಿಸಿದವು ರಥ ಮಾತಂಗ ವಾಜಿಗಳು
ಕೆದರಿತೀಚೆಯ ದೆಸೆ ಸುನೀತನ
ಸದೆದು ತೆಗೆಸುಂಟಿಗೆಯನೆನುತಲಿ
ಯದು ನೃಪಾಲರು ಗಜಬಜಿಸಲೆಡೆವೊಕ್ಕನಾ ಭೀಷ್ಮ (ಸಭಾ ಪರ್ವ, ೯ ಸಂಧಿ, ೩೯ ಪದ್ಯ)

ತಾತ್ಪರ್ಯ:
ಯಾದವರು ಆಯುಧಗಳನ್ನು ಹೊರತೆಗೆಯಲು ಆಸ್ಥಾನದ ವಾತಾವರಣವು ಕದಡಿತು, ಋಷಿಗಳು ಹೋಯೆಂದು ಕೂಗಿದರು, ಅವರ ನಾಲಿಗೆಗಳು ಒಣಗಿದವು. ರಥ, ಆನೆ, ಕುದುರೆಗಳು ಯುದ್ಧಕ್ಕೆ ಸಿದ್ಧವಾದವು. ಯಾದವರಾಜರು ಈಚೆ ನಿಂತು ಈ ಸುನೀತನನ್ನು(ದುಷ್ಟನನ್ನು, ಶಿಶುಪಾಲನನ್ನು ವ್ಯಂಗ್ಯವಾಗಿ ಒಳ್ಳೆಯ ನಡತೆಯುಳ್ಳವನೆಂದು ಹೇಳಿರುವುದು) ಬಡಿದು ಇವನ ಹೃದಯವನ್ನು ತೆಗೆಯಿರಿ ಎಂದು ಗರ್ಜಿಸಲು ಭೀಷ್ಮನು ಇವರ ನಡುವೆ ಬಂದನು.

ಅರ್ಥ:
ಕದಡು: ಕ್ಷೋಭೆಗೊಳಿಸು; ಆಸ್ಥಾನ: ದರ್ಬಾರು; ಹೋ: ಜೋರಾಗಿ ಕೂಗುವ ಶಬ್ದ; ಒದರು: ಹೇಳು; ಋಷಿ: ಮುನಿ; ನಾಳಿಗೆ: ನಾಲಗೆ, ಜಿಹ್ವೆ; ಒಣಗು: ಬಾಡು, ನೀರಿಲ್ಲದ; ಹಲ್ಲಣ:ಜೀನು, ಕಾರ್ಯ; ರಥ: ಬಂಡಿ; ಮಾತಂಗ: ಆನೆ; ವಾಜಿ: ಕುದುರೆ; ಕೆದರು: ಹರಡು, ಚದರಿಸು; ದೆಸೆ: ದಿಕ್ಕು; ನೀತಿ: ಒಳ್ಳೆಯ ನಡತೆ; ಸದೆ:ಕುಟ್ಟು, ಪುಡಿಮಾಡು; ತೆಗೆಸು: ಹೊರಹಾಕು; ಸುಂಟಿಗೆ: ಹೃದಯದ ಮಾಂಸ; ಎನುತ: ಹೇಳಿ; ನೃಪ: ರಾಜ; ಗಜಬಜ: ಗಲಾಟೆ, ಕೋಲಾಹಲ; ಎಡೆ: ಹತ್ತಿರ, ಸಮೀಪ; ಹೊಕ್ಕು: ಸೇರು;

ಪದವಿಂಗಡಣೆ:
ಕದಡಿತಾ +ಆಸ್ಥಾನ +ಹೋಯೆಂದ್
ಒದರಿ +ಋಷಿಗಳ +ನಾಳಿಗೆಗಳ್+ಒಣ
ಗಿದವು +ಹಲ್ಲಣಿಸಿದವು +ರಥ +ಮಾತಂಗ +ವಾಜಿಗಳು
ಕೆದರಿತ್+ಈಚೆಯ +ದೆಸೆ +ಸುನೀತನ
ಸದೆದು +ತೆಗೆ+ಸುಂಟಿಗೆಯನ್+ಎನುತಲಿ
ಯದು +ನೃಪಾಲರು +ಗಜಬಜಿಸಲ್+ಎಡೆ+ವೊಕ್ಕನಾ +ಭೀಷ್ಮ

ಅಚ್ಚರಿ:
(೧) ಶಿಶುಪಾಲನನ್ನು ವ್ಯಂಗ್ಯವಾಗಿ ಸುನೀತನೆಂದು ಕರೆದಿರುವುದು