ಪದ್ಯ ೩೨: ಅರ್ಜುನನಿಗೆ ಯಾವ ಭ್ರಾಂತಿ ತೀರಿತ್ತು?

ಮುಳಿಯಲಾಗದು ಕೃಷ್ಣ ನಿಮ್ಮನು
ತಿಳುಹಲಾನು ಸಮರ್ಥನೇ ಕುಲ
ಕೊಲೆಗೆ ಕೊಕ್ಕರಿಸಿದೆನು ನನೆದನು ಕರುಣ ವಾರಿಯಲಿ
ಬಲುಹನೀ ಮುಖದಲ್ಲಿ ತೋರುವ
ಡಳುಕಿದೆನು ಸಾಮ್ರಾಜ್ಯಸಂಪ
ತ್ತಿಳೆಯ ಸಕಲಭ್ರಾಂತಿ ಬೀತುದು ದೇವ ಕೇಳೆಂದ (ಭೀಷ್ಮ ಪರ್ವ, ೩ ಸಂಧಿ, ೩೨ ಪದ್ಯ)

ತಾತ್ಪರ್ಯ:
ಅರ್ಜುನನು ಶ್ರೀಕೃಷ್ಣನಿಗೆ ಉತ್ತರಿಸುತ್ತಾ, ಕೃಷ್ಣ ನನ್ನ ಮೇಲೆ ಕೋಪಗೊಳ್ಳಬೇಡ, ನಿನಗೆ ಹೇಳುವ ಶಕ್ತಿ ನನಗಿಲ್ಲ, ಆದರೆ ಕುಲವಧೆಗೆ ನಾನು ಹೇಸಿದ್ದೇನೆ, ದುಃಖಿತನಾಗಿದ್ದೇನೆ, ಇವರೊಡನೆ ನನ್ನ ಸಾಮರ್ಥ್ಯವನ್ನು ತೋರಿಸಲು ಅಳುಕುತ್ತೇನೆ, ಸಾಮ್ರಾಜ್ಯದ ಸಂಪತ್ತು, ಭೂಮಿಯನ್ನಾಳಬೇಕೆಂಬ ಭ್ರಾಂತಿಗಳು ನನ್ನನ್ನು ಬಿಟ್ಟುಹೋದವು ಎಂದು ಹೇಳಿದನು.

ಅರ್ಥ:
ಮುಳಿ: ಸಿಟ್ಟು, ಕೋಪ; ತಿಳುಹು: ಅರಿ; ಸಮರ್ಥ: ಬಲಶಾಲಿ, ಗಟ್ಟಿಗ; ಕುಲ: ವಂಶ; ಕೊಲೆ: ನಾಶ; ಕೊಕ್ಕರಿಸು: ಅಸಹ್ಯಪಡು; ನನೆ: ತೋಯು, ಒದ್ದೆಯಾಗು; ಕರುಣ: ದಯೆ; ವಾರಿ: ನೀರು; ಬಲುಹ: ಶಕ್ತಿ; ಮುಖ: ಆನನ; ತೋರು: ಪ್ರದರ್ಶಿಸು; ಅಳುಕು: ಹೆದರು; ಸಾಮ್ರಾಜ್ಯ: ರಾಷ್ಟ್ರ, ಚಕ್ರಾಧಿಪತ್ಯ; ಸಂಪತ್ತು: ಐಶ್ವರ್ಯ; ಇಳೆ: ಭೂಮಿ; ಸಕಲ: ಎಲ್ಲಾ; ಭ್ರಾಂತಿ: ತಪ್ಪು ತಿಳಿವಳಿಕೆ, ಭ್ರಮೆ; ಬೀತು: ಬಿಟ್ಟುಹೋಗು; ದೇವ: ಭಗವಂತ; ಕೇಳು: ಆಲಿಸು;

ಪದವಿಂಗಡಣೆ:
ಮುಳಿಯಲಾಗದು+ ಕೃಷ್ಣ +ನಿಮ್ಮನು
ತಿಳುಹಲಾನು +ಸಮರ್ಥನೇ +ಕುಲ
ಕೊಲೆಗೆ +ಕೊಕ್ಕರಿಸಿದೆನು+ ನನೆದನು+ ಕರುಣ +ವಾರಿಯಲಿ
ಬಲುಹನ್+ಈ+ ಮುಖದಲ್ಲಿ+ ತೋರುವಡ್
ಅಳುಕಿದೆನು +ಸಾಮ್ರಾಜ್ಯ+ಸಂಪತ್ತ್
ಇಳೆಯ +ಸಕಲ+ಭ್ರಾಂತಿ +ಬೀತುದು +ದೇವ +ಕೇಳೆಂದ

ಅಚ್ಚರಿ:
(೧) ಅರ್ಜನನ ಸ್ಥಿತಿ – ಕುಲ ಕೊಲೆಗೆ ಕೊಕ್ಕರಿಸಿದೆನು ನನೆದನು ಕರುಣ ವಾರಿಯಲಿ
(೨) ಅರ್ಜುನನ ಭ್ರಾಂತಿ – ಸಾಮ್ರಾಜ್ಯಸಂಪತ್ತಿಳೆಯ ಸಕಲಭ್ರಾಂತಿ ಬೀತುದು

ಪದ್ಯ ೯: ಉಳಿದ ಪಾಂಡವರು ಧರ್ಮಜನಿಗೇನು ಹೇಳಿದರು?

ಒಡಲ ಬಳಿ ನೆಳಲಿಂಗೆ ಗತಿ ಬೇ
ರ್ಪಡಿಸಿಹುದೆ ಸುಖದುಃಖವಿವು ನಿ
ಮ್ಮಡಿಗಳಲಿ ತನು ನಾಲ್ಕರಲಿ ಜೀವಾತ್ಮ ನೀವೆಮಗೆ
ಅಡವಿಯೇ ಸಾಮ್ರಾಜ್ಯ ನಿಮ್ಮಡಿ
ಯೊಡನಿರಲು ನೀವಿಲ್ಲದಾ ಪುರ
ವಡವಿ ನಮಗಹುದೆಂದು ಬಿನ್ನವಿಸಿದರು ಭೂಪತಿಗೆ (ವಿರಾಟ ಪರ್ವ, ೧ ಸಂಧಿ, ೯ ಪದ್ಯ)

ತಾತ್ಪರ್ಯ:
ದೇಹವನ್ನು ಬಿಟ್ಟು ನೆರಳು ಬೇರೆಡೆಗೆ ಹೋಗಲು ಸಾಧ್ಯವೇ? ನಿಮ್ಮ ಸುಖ ದುಃಖಗಳು ನಮ್ಮವೇ ಅಲ್ಲವೇ? ನಾಲ್ವರ ದೇಹಗಳಲ್ಲಿಯೂ ಇರುವ ಜೀವಾತ್ಮನೇ ನೀವು, ನಿಮ್ಮ ಪಾದಗಳ ಬಳಿಯಲ್ಲಿದ್ದರೆ ಅಡವಿಯೇ ನಮಗೆ ಸಾಮ್ರಾಜ್ಯ. ನಿಮ್ಮನ್ನು ಬಿಟ್ಟು ನಗರದಲ್ಲಿದ್ದರೆ ಆ ಪುರವು ನಮ್ಮ ಪಾಲಿಗೆ ಅಡವಿಯ ಸಮಾನ ಎಂದು ಧರ್ಮರಾಯನಿಗೆ ಉಳಿದವರು ಹೇಳಿದರು.

ಅರ್ಥ:
ಒಡಲು: ದೇಹ; ಬಳಿ: ಹತ್ತಿರ; ನೆಳಲು: ನೆರಳು; ಗತಿ: ವೇಗ; ಬೇರ್ಪಡಿಸು: ದೂರಮಾದು; ಸುಖ: ಸಂತಸ; ದುಃಖ: ನೋವು; ಅಡಿ: ಕೆಳಗೆ, ಜೊತೆ; ತನು: ದೇಹ; ಜೀವಾತ್ಮ: ಪ್ರಾಣ; ಅಡವಿ: ಕಾಡು; ಸಾಮ್ರಾಜ್ಯ: ರಾಷ್ಟ್ರ; ಪುರ: ಊರು; ಅಡವಿ: ಕಾಡು; ಬಿನ್ನವಿಸು: ಹೇಲು; ಭೂಪತಿ: ರಾಜ;

ಪದವಿಂಗಡಣೆ:
ಒಡಲ +ಬಳಿ +ನೆಳಲಿಂಗೆ +ಗತಿ +ಬೇ
ರ್ಪಡಿಸಿಹುದೆ+ ಸುಖ+ದುಃಖವ್+ಇವು+ ನಿ
ಮ್ಮಡಿಗಳಲಿ +ತನು +ನಾಲ್ಕರಲಿ +ಜೀವಾತ್ಮ +ನೀವೆಮಗೆ
ಅಡವಿಯೇ +ಸಾಮ್ರಾಜ್ಯ +ನಿಮ್ಮಡಿ
ಯೊಡನಿರಲು +ನೀವಿಲ್ಲದಾ +ಪುರವ್
ಅಡವಿ +ನಮಗಹುದೆಂದು +ಬಿನ್ನವಿಸಿದರು +ಭೂಪತಿಗೆ

ಅಚ್ಚರಿ:
(೧) ಸುಖ, ದುಃಖ – ವಿರುದ್ಧ ಪದಗಳು
(೨) ಧರ್ಮಜನ ಮೇಲಿನ ಅಭಿಮಾನ – ಅಡವಿಯೇ ಸಾಮ್ರಾಜ್ಯ ನಿಮ್ಮಡಿಯೊಡನಿರಲು ನೀವಿಲ್ಲದಾ ಪುರ
ವಡವಿ

ಪದ್ಯ ೧೪: ಶಕುನಿ ಯಾವ ಕಾಲ ಒಳಿತೆಂದನು?

ಅವರ ವನವಾಸದ ದಿನಂಗಳು
ನವಗೆ ಸುದಿನ ಸುಖಾನುಭವವವ
ರವಧಿ ತುಂಬಿದ ಬಳಿಕ ನೋಡಾ ಸಾಧುಗಳ ಪರಿಯ
ನಿನಗೆ ದುರ್ಯೋಧನನ ಸಾಮ್ರಾ
ಜ್ಯವ ನಿರೀಕ್ಷಿಸುವರ್ತಿಯಲಿ ಪಾಂ
ಡವರ ಹಂಬಲ ಬಿಡುವುದುಚಿತವಿದೆಂದನಾ ಶಕುನಿ (ಅರಣ್ಯ ಪರ್ವ, ೧೮ ಸಂಧಿ, ೧೪ ಪದ್ಯ)

ತಾತ್ಪರ್ಯ:
ಅವರು ಕಾಡಿನಲ್ಲಿರುವ ದಿನಗಳೇ ನಮಗೆ ಸುದಿನಗಳು. ಸುಖವನ್ನನುಭವಿಸುವ ದಿನಗಳು. ವನವಾಸ ಮುಗಿಯಲಿ ನೀನು ಯಾರಿಗೆ ಮರುಗುತ್ತಿರುವೆಯೋ ಆ ಸಾಧುಗಳ ನಿಜವಾದ ಬಣ್ನ ಬಯಲಾಗುತ್ತದೆ. ದುರ್ಯೋಧನನ ಸಾಮ್ರಾಜ್ಯವನ್ನು ನೋಡುವ ಪ್ರೀತಿಯಿದ್ದರೆ, ಪಾಂಡವರು ಹಂಬಲವನ್ನು ಬಿಟ್ಟು ಬಿಡುವುದು ಉಚಿತ ಎಂದ ಶಕುನಿಯು ಹೇಳಿದನು.

ಅರ್ಥ:
ವನವಾಸ: ಕಾಡಿನಲ್ಲಿ ಜೀವನ; ದಿನ: ವಾರ; ಸುದಿನ: ಒಳ್ಳೆಯ ದಿನ; ಸುಖ: ನೆಮ್ಮದಿ; ಅನುಭವ: ಇಂದ್ರಿಯಗಳ ಮೂಲಕ ಬರುವ ಜ್ಞಾನ; ಬಳಿಕ: ನಂತರ; ಸಾಧು: ಒಳ್ಳೆಯ ಜನ; ಪರಿ: ರೀತಿ; ಸಾಮ್ರಾಜ್ಯ: ಚಕ್ರಾಧಿಪತ್ಯ; ನಿರೀಕ್ಷೆ: ನೋಡುವುದು; ಹಂಬಲ: ಆಸೆ; ಉಚಿತ: ಸರಿಯಾದ ರೀತಿ;

ಪದವಿಂಗಡಣೆ:
ಅವರ +ವನವಾಸದ +ದಿನಂಗಳು
ನವಗೆ +ಸುದಿನ +ಸುಖಾನುಭವವ್+
ಅವರ್+ಅವಧಿ+ ತುಂಬಿದ +ಬಳಿಕ +ನೋಡಾ +ಸಾಧುಗಳ +ಪರಿಯ
ನಿನಗೆ +ದುರ್ಯೋಧನನ +ಸಾಮ್ರಾ
ಜ್ಯವ +ನಿರೀಕ್ಷಿಸುವರ್ತಿಯಲಿ+ ಪಾಂ
ಡವರ+ ಹಂಬಲ+ ಬಿಡುವುದ್+ಉಚಿತವಿದೆಂದನಾ+ ಶಕುನಿ

ಅಚ್ಚರಿ:
(೧) ಶಕುನಿಯ ಉಪದೇಶ – ಪಾಂಡವರ ಹಂಬಲ ಬಿಡುವುದುಚಿತವಿದೆಂದನಾ ಶಕುನಿ

ಪದ್ಯ ೧: ಯಾವ ಸಾಮ್ರಾಜ್ಯವನ್ನು ಪಾಂಡವರು ಆಳಿದರು?

ಕೇಳು ಜನಮೇಜಯ ಧರಿತ್ರೀ
ಪಾಲ ನರನಾರಾಯಣಾಶ್ರಮ
ಕೂಲವತಿಗಳ ನಂದನದ ನಿರ್ಮಳ ಸರೋವರದ
ಕೇಳಿಕೆಯ ನವಿಲುಗಳ ತುಂಬಿಯ
ಮೇಳವದ ಗೀತದ ವಿನೋದದ
ಲಾಳಿದರು ವನವಾಸ ಸಾಮ್ರಾಜ್ಯವನು ಸೊಗಸಿನಲಿ (ಅರಣ್ಯ ಪರ್ವ, ೧೧ ಸಂಧಿ, ೧ ಪದ್ಯ)

ತಾತ್ಪರ್ಯ:
ಜನಮೇಜಯ ರಾಜ ಕೇಳು, ಬದರಿಕಾಶ್ರಮದ ನದಿ, ಸರೋವರಗಳ ನಿರ್ಮಲ ಸ್ಥಾನಗಳು, ನವಿಲುಗಳ, ದುಂಬಿಗಳ ಸಂಗೀತಕ್ಕೆ ಸೊಗಸುತ್ತಾ ಪಾಂಡವರು ವನವಾಸ ಸಾಮ್ರಾಜ್ಯವನ್ನಾಳಿದರು.

ಅರ್ಥ:
ಕೇಳು: ಆಲಿಸು; ಧರಿತ್ರೀಪಾಲ: ರಾಜ; ಧರಿತ್ರೀ: ಭೂಮಿ; ಆಶ್ರಮ: ಕುಟೀರ; ಕೂಲವತಿ: ನದಿ; ನಂದನ: ಸಂತಸ; ನಿರ್ಮಳ: ಶುದ್ಧ; ಸರೋವರ: ನದಿ; ಕೇಳಿಕೆ: ಶ್ರವಣ; ನವಿಲು: ಮಯೂರ; ತುಂಬಿ: ದುಂಬಿ; ಮೇಳ: ಗುಂಪು; ಗೀತ: ಹಾಡು; ವಿನೋದ: ವಿಹಾರ, ಸಂತೋಷ; ಆಳು: ಅಧಿಕಾರ ನಡೆಸು; ವನವಾಸ: ಕಾಡಿನಲ್ಲಿರುವ ಸ್ಥಿತಿ; ಸಾಮ್ರಾಜ್ಯ: ಚಕ್ರಾಧಿಪತ್ಯ; ಸೊಗಸು: ಅಂದ;

ಪದವಿಂಗಡಣೆ:
ಕೇಳು+ ಜನಮೇಜಯ +ಧರಿತ್ರೀ
ಪಾಲ +ನರನಾರಾಯಣಾಶ್ರಮ
ಕೂಲವತಿಗಳ+ ನಂದನದ +ನಿರ್ಮಳ +ಸರೋವರದ
ಕೇಳಿಕೆಯ +ನವಿಲುಗಳ +ತುಂಬಿಯ
ಮೇಳವದ +ಗೀತದ +ವಿನೋದದಲ್
ಆಳಿದರು +ವನವಾಸ +ಸಾಮ್ರಾಜ್ಯವನು +ಸೊಗಸಿನಲಿ

ಅಚ್ಚರಿ:
(೧) ವನವಾಸವನ್ನು ಹೇಳುವ ಪರಿ – ವಿನೋದದಲಾಳಿದರು ವನವಾಸ ಸಾಮ್ರಾಜ್ಯವನು ಸೊಗಸಿನಲಿ

ಪದ್ಯ ೫೨: ದುರ್ಯೋಧನನು ಯಾವುದು ತನ್ನ ಸಾಮ್ರಾಜ್ಯವೆಂದು ಹೇಳಿದನು?

ಅರಸ ಧರ್ಮಿಷ್ಠನು ಯುಧಿಷ್ಠಿರ
ಧರಣಿಪತಿಯುತ್ತಮನು ಪವನಜ
ನರರು ವಿನಯಾನ್ವಿತರು ನೀವೇ ಪುತ್ರವತ್ಸಲರು
ಧರಣಿಗಾಗಿನ್ನೈಸಲೇ ನೂ
ರ್ವರು ಕುಮಾರರು ಹೊರಗೆ ನಿಮ್ಮಯ
ಕರುಣವೇ ಸಾಮ್ರಾಜ್ಯ ನಮ್ಮನು ಬೀಳುಗೊಡಿರೆಂದ (ಸಭಾ ಪರ್ವ, ೧೩ ಸಂಧಿ, ೫೨ ಪದ್ಯ)

ತಾತ್ಪರ್ಯ:
ತನ್ನ ತಾಯಿಯೊಂದಿಗೆ ಮಾತನ್ನು ಮುಂದುವರಿಸುತ್ತಾ, ನಮ್ಮ ತಂದೆಯು ಧರ್ಮಿಷ್ಠನು, ಯುಧಿಷ್ಠಿರನು ಉತ್ತಮನಾದವನು, ಭೀಮಾರ್ಜುನರು ವಿನಯ ಸಂಪನ್ನರು, ನಿಮ್ಮ ನೂರು ಜನ ಮಕ್ಕಳಾದ ನಾವು ಭೂಮಿಗೆ ಭಾಗಕ್ಕೆ ಸಲ್ಲದವರಲ್ಲವೇ? ನಿಮ್ಮ ಕರುಣೆಯೇ ನಮಗೆ ಸಾಮ್ಯಾಜ್ಯ, ಅದೇ ಸಾಕು, ಹೊರಡಲು ಅಪ್ಪಣೆನೀಡಿ ಎಂದು ದುರ್ಯೋಧನನು ತನ್ನ ತಾಯಿಗೆ ಹೇಳಿದನು.

ಅರ್ಥ:
ಅರಸ: ರಾಜ; ಧರ್ಮಿಷ್ಠ: ಧರ್ಮ ಮಾರ್ಗದಲ್ಲಿ ನಡೆವವ; ಧರಣಿಪತಿ: ರಾಜ; ಧರಣಿ: ಭೂಮಿ; ಉತ್ತಮ: ಶ್ರೇಷ್ಠ; ಪವನಜ: ವಾಯುಪುತ್ರ (ಭೀಮ); ನರ: ಅರ್ಜುನ; ವಿನಯ: ಒಳ್ಳೆಯತನ, ಸೌಜನ್ಯ; ಅನ್ವಿತ: ಒಡಗೂಡಿದ; ಪುತ್ರ: ಮಕ್ಕಳು; ವತ್ಸಲ: ಪ್ರೀತಿಸುವ, ಒಲುಮೆಯಿಂದ ಕೂಡಿದ; ಐಸಲೇ: ಅಲ್ಲವೇ; ನೂರು: ಶತ; ಕುಮಾರ: ಮಕ್ಕಳು; ಹೊರಗೆ: ಆಚೆ; ಕರುಣ: ದಯೆ; ಸಾಮ್ರಾಜ್ಯ: ರಾಷ್ಟ್ರ; ಬೀಳುಗೊಡು: ಕಳಿಸು;

ಪದವಿಂಗಡಣೆ:
ಅರಸ +ಧರ್ಮಿಷ್ಠನು +ಯುಧಿಷ್ಠಿರ
ಧರಣಿಪತಿ+ಉತ್ತಮನು +ಪವನಜ
ನರರು +ವಿನಯಾನ್ವಿತರು+ ನೀವೇ +ಪುತ್ರ+ವತ್ಸಲರು
ಧರಣಿಗಾಗ್+ಇನ್+ಐಸಲೇ +ನೂ
ರ್ವರು +ಕುಮಾರರು +ಹೊರಗೆ +ನಿಮ್ಮಯ
ಕರುಣವೇ +ಸಾಮ್ರಾಜ್ಯ +ನಮ್ಮನು+ ಬೀಳುಗೊಡಿರೆಂದ

ಅಚ್ಚರಿ:
(೧) ಅರಸ, ಧರಣಿಪತಿ – ಸಮನಾರ್ಥಕ ಪದ
(೨) ಕರುಣೆಯನ್ನು ಹುಟ್ಟಿಸುವ ಮಾತು – ನಿಮ್ಮಯ ಕರುಣವೇ ಸಾಮ್ರಾಜ್ಯ ನಮ್ಮನು ಬೀಳುಗೊಡಿರೆಂದ

ಪದ್ಯ ೫೨: ಧರ್ಮಜನು ಅರ್ಜುನನಿಗೆ ಏನು ಹೇಳಿದ?

ಏಳು ತಂದೆ ಕಿರೀಟಿ ತನ್ನಾ
ಣೇಳು ಸಾಕೀ ಹವಣಿನಲಿ ಮು
ನ್ನಾಳಿಕೆಯ ಕಾಂತಾರ ರಾಜ್ಯದ ಸಿರಿಯೆ ಸಾಕೆಮಗೆ
ಬಾಲಕರು ನೀವ್ ಮೇಲಣದು ದು
ಷ್ಕಾಲವೀ ಸಾಮ್ರಾಜ್ಯ ಭೋಗ
ವ್ಯಾಳ ವಿಷಕಂಜುವೆನು ಪಾಂಡುವಿನಾಣೆ ಸಾರೆಂದ (ಕರ್ಣ ಪರ್ವ, ೧೭ ಸಂಧಿ, ೫೨ ಪದ್ಯ)

ತಾತ್ಪರ್ಯ:
ಅಪ್ಪಾ ಅರ್ಜುನ ನೀನು ಮೇಲೇಳು, ನನ್ನಾಣೆ ಮೇಲೇಳು, ಈಗಿರುವ ಸ್ಥಿತಿಯಲ್ಲಿ ನನಗೆ ಕಾಡಿನ ರಾಜ್ಯದ ಐಶ್ವರ್ಯವೇ ಸಾಕು. ನೀವಿನ್ನೂ ಹುಡುಗರು. ಮುಂದೆ ದುಷ್ಕಾಲ ಬರುತ್ತದೆ. ಸಾಮ್ರಾಜ್ಯ ಭೋಗವೆಂಬ ಸರ್ಪದ ವಿಷಕ್ಕೆ ಹೆದರುತ್ತೇನೆ, ಪಾಂಡುವಿನಾಣೆ ನೀನು ಹೊರಡು ಎಂದು ಧರ್ಮಜನು ಅರ್ಜುನನಿಗೆ ಹೇಳಿದನು.

ಅರ್ಥ:
ಏಳು: ಮೇಲೇಳು; ತಂದೆ: ಪ್ರೀತಿಯಿಂದ ತಮ್ಮನನ್ನು ಕರೆಯುವ ಪದ, ಪಿತ, ಅಪ್ಪ; ಆಣೆ: ಪ್ರಮಾಣ; ಸಾಕು: ನಿಲ್ಲಿಸು; ಹವಣ: ಸಿದ್ಧತೆ, ಪ್ರಯತ್ನ, ತೂಗು; ಕಾಂತಾರ: ಅಡವಿ, ಅರಣ್ಯ; ಮುನ್ನಾಳಿಕೆ: ಮುಂದಿರುವ; ರಾಜ್ಯ: ರಾಷ್ಟ್ರ; ಸಿರಿ: ಐಶ್ವರ್ಯ; ಸಾಕು: ಇನ್ನು ಬೇಡ; ಬಾಲಕ: ಹುಡುಗ; ಮೇಲಣ: ಮುಂದೆ; ದುಷ್ಕಾಲ: ಕೆಟ್ಟ ಕಾಲ; ಸಾಮ್ರಾಜ್ಯ: ರಾಷ್ಟ್ರ,ಚಕ್ರಾಧಿಪತ್ಯ; ಭೋಗ: ಸುಖವನ್ನು ಅನುಭವಿಸುವುದು; ವ್ಯಾಳ: ಸರ್ಪ; ವಿಷ: ನಂಜು; ಅಂಜು: ಭಯ; ಸಾರು: ಹೊರಡು;

ಪದವಿಂಗಡಣೆ:
ಏಳು+ ತಂದೆ +ಕಿರೀಟಿ +ತನ್ನ
ಆಣೆ+ಏಳು +ಸಾಕ್+ಈ+ ಹವಣಿನಲಿ +ಮು
ನ್ನಾಳಿಕೆಯ +ಕಾಂತಾರ +ರಾಜ್ಯದ +ಸಿರಿಯೆ +ಸಾಕೆಮಗೆ
ಬಾಲಕರು +ನೀವ್ +ಮೇಲಣದು +ದು
ಷ್ಕಾಲವೀ +ಸಾಮ್ರಾಜ್ಯ +ಭೋಗ
ವ್ಯಾಳ +ವಿಷಕ್+ಅಂಜುವೆನು +ಪಾಂಡುವಿನಾಣೆ+ ಸಾರೆಂದ

ಅಚ್ಚರಿ:
(೧) ರಾಜರ ಪದವಿಯನ್ನು ಹೋಲಿಸುವ ಪರಿ – ಸಾಮ್ರಾಜ್ಯ ಭೋಗವ್ಯಾಳ ವಿಷಕಂಜುವೆನು