ಪದ್ಯ ೪೧: ಅರ್ಜುನನು ತಪಸ್ಸಿಗೆ ಹೇಗೆ ಸಿದ್ಧನಾದ?

ಧರಣಿಪನ ಬೀಳ್ಕೊಂಡು ಮಾರ್ಗಾಂ
ತರದೊಳಾರಡಿಗೈದು ಹೊಕ್ಕನು
ಹರನ ಕರುಣಾ ಸಿದ್ಧಿ ಸಾಧನವೆನಿಪ ಗಿರಿವನವ
ಮರುದಿವಸದುದಯದಲಿ ಮಿಂದನು
ಸರಸಿಯಲಿ ಸಂಧ್ಯಾಭಿಮುಖದಲಿ
ತರಣಿಗರ್ಘ್ಯವನಿತ್ತು ದೇವವ್ರಜಕೆ ಕೈ ಮುಗಿದ (ಅರಣ್ಯ ಪರ್ವ, ೫ ಸಂಧಿ, ೪೧ ಪದ್ಯ)

ತಾತ್ಪರ್ಯ:
ತನ್ನ ಅಣ್ಣನಾದ ರಾಜ ಧರ್ಮಜನನ್ನು ಬೀಳ್ಕೊಂಡು, ಅನ್ಯಮಾರ್ಗಗಳಿಗೆ ಮನಸ್ಸನ್ನು ಒಡ್ಡದೆ, ತನ್ನ ಉದ್ದೇಶವನ್ನು ಸಾಧಿಸುವ ಛಲದಿಂದ ಇಂದ್ರಕೀಲ ಪರ್ವತವನ್ನು ಪ್ರವೇಶಿಸಿದನು. ಆ ಕ್ಷೇತ್ರವು ಶಿವನ ಕರುಣೆಯ ಸಿದ್ಧಿಗೆ ಅನುಕೂಲಕರವಾದುದು. ಮರುದಿವಸ ಉಷಃ ಕಾಲದಲ್ಲೆದ್ದು ಸರೋವರದಲ್ಲಿ ಸ್ನಾನಮಾಡಿ, ಸಂಧ್ಯಾ ಕರ್ಮದಲ್ಲಿ ಸೂರ್ಯನಿಗೆ ಅರ್ಘ್ಯವನ್ನು ನೀಡಿ ದೇವತಾ ಸಮೂಹಕ್ಕೆ ನಮಸ್ಕರಿಸಿದನು.

ಅರ್ಥ:
ಧರಣಿಪ: ರಾಜ; ಬೀಳ್ಕೊಂಡು: ತೆರಳು; ಮಾರ್ಗ: ದಾರಿ; ಅಂತರ: ದೂರ; ಹೊಕ್ಕು: ಸೇರು; ಹರ: ಶಿವ; ಕರುಣ: ದಯೆ; ಸಿದ್ಧಿ: ಸಾಧನೆ, ಗುರಿಮುಟ್ಟುವಿಕೆ; ಸಾಧನ: ಗುರಿಮುಟ್ಟುವ ಪ್ರಯತ್ನ; ಗಿರಿ: ಬೆಟ್ಟ; ವನ: ಕಾಡು; ಮರುದಿವಸ: ಮಾರನೆಯ ದಿನ; ಉದಯ: ಹುಟ್ಟು; ಮಿಂದು: ಮುಳುಗು; ಸರಸಿ: ನೀರು; ಸಂಧ್ಯಾ: ಉಷಃ ಕಾಲ; ತರಣಿ: ಸೂರ್ಯ; ಅರ್ಘ್ಯ: ನೀರು; ದೇವ: ದೇವತೆ; ವ್ರಜ: ಗುಂಪು; ಕೈಮುಗಿ: ನಮಸ್ಕರಿಸು;

ಪದವಿಂಗಡಣೆ:
ಧರಣಿಪನ +ಬೀಳ್ಕೊಂಡು +ಮಾರ್ಗಾಂ
ತರದೊಳ್+ಆರಡಿಗೈದು+ ಹೊಕ್ಕನು
ಹರನ +ಕರುಣಾ +ಸಿದ್ಧಿ +ಸಾಧನವೆನಿಪ +ಗಿರಿವನವ
ಮರುದಿವಸದ್+ಉದಯದಲಿ +ಮಿಂದನು
ಸರಸಿಯಲಿ +ಸಂಧ್ಯ+ಅಭಿಮುಖದಲಿ
ತರಣಿಗ್+ಅರ್ಘ್ಯವನಿತ್ತು+ ದೇವ+ವ್ರಜಕೆ +ಕೈ ಮುಗಿದ

ಅಚ್ಚರಿ:
(೧)ಆರ್ಜುನನ ಅಚಲ ಮನಸ್ಸಿನ ವರ್ಣನೆ – ಮಾರ್ಗಾಂತರದೊಳಾರಡಿಗೈದು

ಪದ್ಯ ೧೯: ಶ್ರೀಕೃಷ್ಣನಿಗೂ ಯಜ್ಞಕ್ಕೂ ಇರುವ ಸಂಬಂಧವೇನು?

ಯಜ್ಞದಧಿಪತಿಯೀತನೀತನು
ಯಜ್ಞ ಪುರುಷನು ಸೃಕ್ ಸ್ರುವಾದಿ
ಯಜ್ಞಸಾಧನನೀತನೀತನು ಮಂತ್ರಕಾಲಾತ್ಮ
ಯಜ್ಞವೀತನು ಕರ್ಮವೀತನು
ಯಜ್ಞದಲಿ ಯಜಮಾನನೀತನು
ಯಜ್ಞಫಲವೀ ದೇವಕೀಸುತನೆಂದನಾ ಭೀಷ್ಮ (ಸಭಾ ಪರ್ವ, ೧೦ ಸಂಧಿ, ೧೯ ಪದ್ಯ)

ತಾತ್ಪರ್ಯ:
ಶ್ರೀಕೃಷ್ಣಉ ಯಜ್ಞಕ್ಕೆ ಅಧಿಪತಿ, ಯಜ್ಞಪುರುಷನು ಈತನೇ, ಯಜ್ಞಗಳಿಗೆ ಬಳಸುವ ಸಾಧನಗಳಾದ ಸೃಕ್, ಸ್ರುವಗಳು ಈತನೇ, ಇವನೇ ಯಜ್ಞ ಮಾಡುವವ, ಕಾಲದ ಆತ್ಮಸ್ವರೂಪನೂ ಈತನೇ, ಯಜ್ಞ ಮಂತ್ರಗಳು ಇವನದೇ, ಯಜ್ಞವೂ ಇವನೇ, ಕರ್ಮವೂ ಇವನೆ, ಯಜ್ಞಮಾಡುವ ಯಜಮಾನನೂ ಇವನೇ, ಯಜ್ಞ ಬರುವ ಅಪೂರ್ವವೆಂಬ ಫಲವೂ ಇವನೇ ಎಂದು ದೇವಕೀಸುತ ಕೃಷ್ಣನನ್ನು ಭೀಷ್ಮರು ವಿವರಿಸಿದರು.

ಅರ್ಥ:
ಯಜ್ಞ:ಯಾಗ, ಯಜನ; ಅಧಿಪತಿ: ಒಡೆಯ; ಪುರುಷ: ಪರಮಾತ್ಮ; ಸೃಕ್ ಸ್ರುವ: ಹೂವು; ಹೋಮಾದಿಗಳಲ್ಲಿ ಆಹುತಿ ಹಾಕಲು ಉಪಯೋಗಿಸುವ ಮರದ ಸೌಟು; ಸಾಧನ: ಸಲಕರಣೆ, ಉಪಕರಣ; ಮಂತ್ರ: ವೇದದಲ್ಲಿರುವ ಛಂದೋ ಬದ್ಧವೂ ಪವಿತ್ರವೂ ಆದ ದೇವತಾಸ್ತುತಿ; ಕಾಲಾತ್ಮ: ಕಾಲದ ಆತ್ಮಸ್ವರೂಪ; ಕರ್ಮ: ಕಾಯಕ, ಕಾರ್ಯದ ಫಲ; ಧರ್ಮ; ಯಜಮಾನ: ಒಡೆಯ; ಫಲ: ಫಲಿತಾಂಶ, ಪ್ರಯೋಜನ; ಸುತ: ಮಗ;

ಪದವಿಂಗಡಣೆ:
ಯಜ್ಞದ್+ಅಧಿಪತಿ+ಈತನ್+ಈತನು
ಯಜ್ಞ +ಪುರುಷನು +ಸೃಕ್+ ಸ್ರುವಾದಿ
ಯಜ್ಞ+ಸಾಧನನ್+ಈತನ್+ಈತನು+ ಮಂತ್ರಕಾಲಾತ್ಮ
ಯಜ್ಞವ್+ಈತನು +ಕರ್ಮವ್+ಈತನು
ಯಜ್ಞದಲಿ+ ಯಜಮಾನನ್+ಈತನು
ಯಜ್ಞ+ಫಲವ್+ಈ+ ದೇವಕೀಸುತನ್+ಎಂದನಾ +ಭೀಷ್ಮ

ಅಚ್ಚರಿ:
(೧) ಯಜ್ಞ ಪದದ ಬಳಕೆ – ಎಲ್ಲಾ ಸಾಲಿನ ಮೊದಲ ಪದ
(೨) ಈತನ್- ೭ ಬಾರಿ ಪ್ರಯೋಗ

ಪದ್ಯ ೭: ಕರ್ಣನ ಬಳಿ ಯಾವ ಕೊರತೆಯಿತ್ತು?

ಭಾರಿ ಧನುವಿದ್ದೇನು ತೋಳಿನ
ತೋರದಲಿ ಫಲವೇನು ಕೈದುಗ
ಳಾರನಂಜಿಸಲಾಪವಾಹವರಂಗ ಮಧ್ಯದಲಿ
ಸಾರಥಿಯ ಬಲುಹಿಲ್ಲದಿರ್ದಡೆ
ಭೂರಿ ಸಾಧನವಿವು ನಿರರ್ಥಕ
ವಾರಿಗುಸುರುವೆ ತನ್ನ ಕೊರತೆಯನೆಂದನಾ ಕರ್ಣ (ಕರ್ಣ ಪರ್ವ, ೫ ಸಂಧಿ, ೭ ಪದ್ಯ)

ತಾತ್ಪರ್ಯ:
ಕರ್ಣನು ತನ್ನ ಮಾತನ್ನು ಮುಂದುವರಿಸುತ್ತಾ, ದೊಡ್ಡ, ಶ್ರೇಷ್ಠವಾದ ಧನುಸ್ಸಿದ್ದರೇನು? ದಷ್ಟಪುಷ್ಟವಾದ ತೋಳಿದ್ದರೇನು? ಯುದ್ಧರಂಗದಲ್ಲಿ ಶಸ್ತ್ರಾಸ್ತ್ರಗಳು ಯಾರನ್ನು ಹೆದರಿಸಿಯಾವು? ಎಲ್ಲಾ ಉತ್ತಮ ಸಾಧನಗಳಿದ್ದರೂ ಸರಿಯಾದ ಸಾರಥಿಯಿಲ್ಲದಿದ್ದರೆ ಅರ್ಥಹೀನವಾಗುತ್ತದೆ. ನನ್ನ ಈ ಕೊರತೆಯನ್ನು ಯಾರ ಬಳಿ ಹೇಳಿಕೊಳ್ಳಲಿ ಎಂದು ಕರ್ಣನು ನುಡಿದನು.

ಅರ್ಥ:
ಧನು: ಧನಸ್ಸು; ಭಾರಿ: ದೊಡ್ಡ; ತೋಳು: ಭುಜ; ತೋರು: ಪ್ರದರ್ಶಿಸು; ಫಲ: ಪ್ರಯೋಜನ; ಕೈದುಗ: ಆಯುಧ; ಅಂಜಿಸು: ಹೆದರಿಸು; ಆಹವ: ಯುದ್ಧ; ರಂಗ: ಅಂಗಳ; ಮಧ್ಯ: ನಡುವೆ; ಸಾರಥಿ: ರಥವನ್ನು ಓಡಿಸುವವ; ಬಲುಹು: ಪರಾಕ್ರಮ; ಭೂರಿ: ಹೆಚ್ಚು, ಅಧಿಕ; ಸಾಧನ: ಸಲಕರಣೆ, ಉಪಕರಣ; ನಿರರ್ಥಕ: ಪ್ರಯೋಜನವಿಲ್ಲದ; ಉಸುರು: ಹೇಳು, ಮಾತನಾಡು; ಕೊರತೆ: ನ್ಯೂನ್ಯತೆ;

ಪದವಿಂಗಡಣೆ:
ಭಾರಿ +ಧನುವಿದ್ದೇನು +ತೋಳಿನ
ತೋರದಲಿ +ಫಲವೇನು +ಕೈದುಗಳ್
ಆರನ್+ಅಂಜಿಸಲಾಪವ್+ಆಹವರಂಗ+ ಮಧ್ಯದಲಿ
ಸಾರಥಿಯ+ ಬಲುಹಿಲ್ಲದಿರ್ದಡೆ
ಭೂರಿ +ಸಾಧನವಿವು +ನಿರರ್ಥಕವ್
ಆರಿಗ್+ಉಸುರುವೆ +ತನ್ನ +ಕೊರತೆಯನೆಂದನಾ +ಕರ್ಣ

ಅಚ್ಚರಿ:
(೧) ಸಾರಥಿಯ ಮಹತ್ವವನ್ನು ಹೇಳುವ ಸಾಲು – ಸಾರಥಿಯ ಬಲುಹಿಲ್ಲದಿರ್ದಡೆ
ಭೂರಿ ಸಾಧವವಿವು ನಿರರ್ಥಕ

ಪದ್ಯ ೧೧೩: ಕೋಪವನ್ನು ಏಕೆ ಬಿಡಬೇಕು?

ಕೋಪವೆಂಬುದನರ್ಥ ಸಾಧನ
ಕೋಪವೇ ಸಂಸಾರ ಬಂಧನ
ಕೋಪದಿಂದುರುತರದ ಸುಕೃತವು ಲಯವನೈದುವುದು
ಕೋಪವನು ವರ್ಜಿಸಲು ಬೇಹುದು
ಕೋಪವುಳ್ಳವನಾವನಾಗಲಿ
ಕಾಪುರುಷನಿಹಪರಕೆ ಚಿತ್ತೈಸೆಂದನಾ ವಿದುರ (ಉದ್ಯೋಗ ಪರ್ವ, ೩ ಸಂಧಿ, ೧೧೩ ಪದ್ಯ)

ತಾತ್ಪರ್ಯ:
ಕೋಪವು ಏಕೆ ಒಳ್ಳೆಯದಲ್ಲ ಎಂದು ವಿದುರ ಇಲ್ಲಿ ವಿವರಿಸುತ್ತಾರೆ. ಅನರ್ಥಕ್ಕೆ ಕೋಪವೇ ಸಾಧನ, ಮನುಷ್ಯನನ್ನು ಸಂಸಾರದ ಹುಟ್ಟು ಸಾವುಗಳ ಚಕ್ರದಲ್ಲಿ ಬಂಧಿಸುವುದು ಕೋಪವೇ, ಮಹಾಪುಣ್ಯವು ಕೋಪದಿಂದ ನಾಶವಾಗುತ್ತದೆ,ಕೋಪವನ್ನು ಬಿಡಬೇಕು, ಇಲ್ಲದಿದ್ದರೆ ಯಾರೇ ಆಗಲಿ ಕೋಪವುಳ್ಳವನಾದರೆ ಇಹಪರಗಳೆರಡರಲ್ಲೂ ಹೀನ ಮನುಷ್ಯನಾಗುತ್ತಾನೆ.

ಅರ್ಥ:
ಕೋಪ: ಸಿಟ್ಟು, ಮುನಿಸು; ಅನರ್ಥ: ಕೇಡು, ಉಪ ಯೋಗವಿಲ್ಲದ; ಸಾಧನ:ಗುರಿಮುಟ್ಟುವ ಪ್ರಯತ್ನ; ಸಂಸಾರ: ಹುಟ್ಟು, ಜನ್ಮ, ಲೌಕಿಕ ಜೀವನ; ಬಂಧನ: ಕಟ್ಟು, ಬಂಧ, ಸಂಕೋಲೆ; ಉರುತರ:ಬಹಳ ಶ್ರೇಷ್ಠ; ಸುಕೃತ: ಚೆನ್ನಾಗಿ ಮಾಡಿದ; ಲಯ: ನಾಶ; ವರ್ಜಿಸು: ಬಿಡು, ತ್ಯಜಿಸು; ಬೇಹುದು: ಬೇಕು;ಕಾಪುರುಷ:ಹೀನ ಮನುಷ್ಯ, ಕ್ಷುದ್ರ; ಇಹಪರ: ಈ ಲೋಕ ಮತ್ತು ಪರಲೋಕ; ಚಿತ್ತೈಸು: ಗಮನವಿಟ್ಟು ಕೇಳು;

ಪದವಿಂಗಡಣೆ:
ಕೋಪವೆಂಬುದ್+ಅನರ್ಥ +ಸಾಧನ
ಕೋಪವೇ +ಸಂಸಾರ +ಬಂಧನ
ಕೋಪದಿಂದ್+ಉರುತರದ +ಸುಕೃತವು +ಲಯವನ್+ಐದುವುದು
ಕೋಪವನು +ವರ್ಜಿಸಲು +ಬೇಹುದು
ಕೋಪವುಳ್ಳವನ್+ಆವನಾಗಲಿ
ಕಾಪುರುಷನ್+ಇಹಪರಕೆ +ಚಿತ್ತೈಸೆಂದನಾ +ವಿದುರ

ಅಚ್ಚರಿ:
(೧) ಕೋಪ – ೧-೫ ಸಾಲಿನ ಮೊದಲ ಪದ
(೨) ಸಾಧನ, ಬಂಧನ – ಅಂತ್ಯಪ್ರಾಸದ ಪದಗಳ ಬಳಕೆ

ಪದ್ಯ ೭೨: ಪಂಡಿತನ ಲಕ್ಷಣವೇನು?

ಇದು ಸಮಾಹಿತವಿದು ಶುಭೋದಯ
ವಿದು ಸಕಲ ಪುರುಷಾರ್ಥ ಸಾಧನ
ವಿದು ಸುಜನ ಸನ್ಮಾನವಿದು ಸಂಸಾರ ಸೌಖ್ಯಫಲ
ಇದು ಸುಬಲವಿದಬಲ ವಿದಾಮ್ನಾ
ಯದ ಸುನಿಶ್ಚಯ ನೀತಿ ಕಾರ್ಯದ
ಹದನನರಿದಾಚರಿಸಬಲ್ಲವನವನೆ ಪಂಡಿತನು (ಉದ್ಯೋಗ ಪರ್ವ, ೩ ಸಂಧಿ, ೭೨ ಪದ್ಯ)

ತಾತ್ಪರ್ಯ:
ವಿದ್ವಾಂಸ (ತಿಳಿದವನ) ಲಕ್ಷಣಗಳನ್ನು ವಿದುರ ಇಲ್ಲಿ ವಿವರಿಸಿದ್ದಾರೆ. ಈ ಮೇಲೆ ಹೇಳಿದ ನೀತಿವಾಕ್ಯಗಳನ್ನು ತಿಳಿದವರು ಒಪ್ಪಿದ್ದಾರೆ, ಇದರಿಂದ ಶುಭವಾಗುತ್ತದೆ, ಇದರಿಂದ ಎಲ್ಲಾ ಪುರುಷಾರ್ಥಗಳ ಸಾಧನೆಯೂ ಆಗುತ್ತದೆ. ಇದರಿಂದ ಸಜ್ಜನರು ಸಂತೋಷಿಸುತ್ತಾರೆ, ಸಂಸಾರ ಸೌಖ್ಯವೇ ಇದಕ್ಕೆ ಫಲ. ಇದು ಬಲವಾದುದು ಹಾಗು ಇದು ದುರ್ಬಲವಾದುದು, ಇದು ವೇದ ವಿಹಿತವಾದದ್ದು ಎನ್ನುವುದನ್ನು ನಿಶ್ಚಯಿಸಿ ನೀತಿವಂತನಾಗಿ ಕಾರ್ಯವನ್ನಾಚರಿಸುವವನೇ ಪಂಡಿತನು.

ಅರ್ಥ:
ಸಮಾಹಿತ: ಒಟ್ಟುಗೂಡಿಸಿದ, ಕಲೆಹಾಕಿದ; ಶುಭ: ಮಂಗಳ; ಉದಯ: ಹುಟ್ಟು; ಸಕಲ: ಎಲ್ಲಾ; ಪುರುಷಾರ್ಥ: ಮನುಷ್ಯನು ಸಾಧಿಸಬೇಕಾದ ಧರ್ಮ, ಅರ್ಥ, ಕಾಮ ಮತ್ತು ಮೋಕ್ಷ ಎಂಬ ನಾಲ್ಕು ಪರಮಧ್ಯೇಯಗಳು; ಸಾಧನ: ಗುರಿಮುಟ್ಟುವ ಪ್ರಯತ್ನ; ಸುಜನ: ಒಳ್ಳೆಯ ಜನ; ಸನ್ಮಾನ: ಗೌರವ; ಸಂಸಾರ: ಲೌಕಿಕ ಜೀವನ, ಬದುಕು; ಸೌಖ್ಯ: ಸುಖ, ನೆಮ್ಮದಿ; ಫಲ:ಪ್ರಯೋಜನ, ಲಾಭ; ಸುಬಲ:ಬಲವಾದ; ಅಬಲ:ದುರ್ಬಲ; ನಿಶ್ಚಯ: ತೀರ್ಮಾನ; ನೀತಿ: ಮಾರ್ಗ ದರ್ಶನ; ಕಾರ್ಯ: ಕೆಲಸ; ಹದ: ರೀತಿ, ಸರಿಯಾದ ಸ್ಥಿತಿ; ಅರಿ: ತಿಳಿ; ಆಚರಿಸು: ಪಾಲಿಸು; ಬಲ್ಲವ: ತಿಳಿದವ; ಪಂಡಿತ: ವಿದ್ವಾಂಸ; ಆಮ್ನಾಯ: ವೇದ;

ಪದವಿಂಗಡಣೆ:
ಇದು+ ಸಮಾಹಿತವಿದು +ಶುಭೋದಯ
ವಿದು +ಸಕಲ+ ಪುರುಷಾರ್ಥ+ ಸಾಧನ
ವಿದು+ ಸುಜನ +ಸನ್ಮಾನವಿದು+ ಸಂಸಾರ +ಸೌಖ್ಯಫಲ
ಇದು +ಸುಬಲವ್+ಇದ್+ಅಬಲ +ವಿದ್+ಆಮ್ನಾ
ಯದ +ಸುನಿಶ್ಚಯ+ ನೀತಿ+ ಕಾರ್ಯದ
ಹದನನ್+ಅರಿದ್+ಆಚರಿಸಬಲ್ಲವನ್+ಅವನೆ +ಪಂಡಿತನು

ಅಚ್ಚರಿ:
(೧) ಇದು – ೧-೪ ಸಾಲಿನ ಮೊದಲ ಪದ
(೨) ಸ ಕಾರದಿಂದ ಶುರುವಾಗುವ ಪದಗಳು: ಸಮಾಹಿತ, ಸಾಧನ, ಸುಜನ, ಸನ್ಮಾನ, ಸಂಸಾರ, ಸೌಖ್ಯ, ಸುಬಲ, ಸುನಿಶ್ಚಯ