ಪದ್ಯ ೨೦: ದ್ರೋಣರು ಯಾರನ್ನು ಸನ್ಮಾನಿಸಿದರು?

ಕರೆಕರೆದು ರಥಿಕರಿಗೆ ಮಾವಂ
ತರಿಗೆ ಕಾಲಾಳಿಂಗೆ ರಾವು
ತ್ತರಿಗೆ ಕೊಡಿಸಿದನವರವರಿಗವರಂಗದಾಯುಧವ
ತರಿಸಿ ಸಾದು ಜವಾದಿಯನು ಕ
ರ್ಪುರದ ವೀಳೆಯವುಡೆಗೊರೆಗಳಲಿ
ಹಿರಿದು ಪತಿಕರಿಸಿದನು ಪರಿವಾರದವನು ಕಲಿ ದ್ರೋಣ (ದ್ರೋಣ ಪರ್ವ, ೧೫ ಸಂಧಿ, ೨೦ ಪದ್ಯ)

ತಾತ್ಪರ್ಯ:
ರಥಿಕರು, ಮಾವುತರು, ಕಾಲಾಳುಗಳು, ರಾವುತರನ್ನು ಕರೆಕರೆದು ಕೈದುಗಳನ್ನು ಕೊಡಿಸಿದನು. ಸಾದು, ಜವಾಗಿ, ಕರ್ಪೂರ, ವೀಳೆಯ, ಉಡುಗೊರೆಗಳನ್ನು ಕೊಟ್ಟು ದ್ರೋಣನು ಸೈನಿಕರನ್ನು ಸನ್ಮಾನಿಸಿದನು.

ಅರ್ಥ:
ಕರೆ: ಬರೆಮಾಡು; ರಥಿಕ: ರಥದಲ್ಲಿ ಕುಳಿತು ಯುದ್ಧಮಾಡುವವ; ಮಾವುತ: ಆನೆಯನ್ನು ಪಳಗಿಸುವ; ಕಾಲಾಳು: ಸೈನಿಕ; ರಾವುತ: ಕುದುರೆ ಸವಾರ, ಅಶ್ವಾರೋಹಿ; ಕೊಡಿಸು: ಪಡೆ; ಆಯುಧ: ಶಸ್ತ್ರ; ತರಿಸು: ಬರೆಮಾದು; ಸಾದು: ಸಿಂಧೂರ; ಜವಾಜಿ: ಸುವಾಸನ ದ್ರವ್ಯ; ಕರ್ಪುರ: ಸುಗಂಧ ದ್ರವ್ಯ; ವೀಳೆ: ತಾಂಬೂಲ; ಉಡುಗೊರೆ: ಕಾಣಿಕೆ, ಬಳುವಳಿ; ಹಿರಿದು: ಹೆಚ್ಚಿನ; ಪತಿಕರಿಸು: ಅನುಗ್ರಹಿಸು; ಪರಿವಾರ: ಸಂಬಂಧಿಕರು; ಕಲಿ: ಶೂರ;

ಪದವಿಂಗಡಣೆ:
ಕರೆಕರೆದು +ರಥಿಕರಿಗೆ +ಮಾವಂ
ತರಿಗೆ+ ಕಾಲಾಳಿಂಗೆ +ರಾವು
ತ್ತರಿಗೆ +ಕೊಡಿಸಿದನ್+ಅವರ್+ಅವರಿಗ್+ಅವರಂಗದ್+ಆಯುಧವ
ತರಿಸಿ +ಸಾದು +ಜವಾದಿಯನು +ಕ
ರ್ಪುರದ +ವೀಳೆಯವ್+ಉಡೆಗೊರೆಗಳಲಿ
ಹಿರಿದು +ಪತಿಕರಿಸಿದನು +ಪರಿವಾರದವನು +ಕಲಿ +ದ್ರೋಣ

ಅಚ್ಚರಿ:
(೧) ರಥಿಕ, ಮಾವುತ, ಕಾಲಾಳು, ರಾವುತ – ಸೈನ್ಯದವರನ್ನು ಕರೆಯಲು ಬಳಸುವ ಪದಗಳು
(೨) ಕೊಡಿಸಿದನವರವರಿಗವರಂಗದಾಯುಧವ – ಪದದ ರಚನೆ

ಪದ್ಯ ೪೯: ಅಭಿಮನ್ಯುವು ಯುದ್ಧಕ್ಕೆ ಹೇಗೆ ಸಿದ್ಧನಾದನು?

ಬಿಗಿದ ಗಂಡುಡಿಗೆಯಲಿ ಹೊನ್ನಾ
ಯುಗದ ಹೊಳೆವ ಕಠಾರಿಯನು ಮೊನೆ
ಮಗುಚಿ ಸಾದು ಜವಾಜಿ ಕತ್ತುರಿ ಗಂಧಲೇಪದಲಿ
ಮಗಮಗಿಪ ಹೊಂದೊಡರ ಹಾರಾ
ದಿಗಳಲೊಪ್ಪಂಬಡೆದು ನಸುನಗೆ
ಮೊಗದ ಸೊಂಪಿನಲಾಹವಕ್ಕನುವಾದನಭಿಮನ್ಯು (ದ್ರೋಣ ಪರ್ವ, ೪ ಸಂಧಿ, ೪೯ ಪದ್ಯ)

ತಾತ್ಪರ್ಯ:
ಪೌರುಷದ ಉಡುಗೆಯನ್ನು ತೊಟ್ಟು, ಬಂಗಾರದ ಹಿಡಿಕೆಯ ಕತ್ತಿಯನ್ನು ಒರೆಯಲ್ಲಿಟ್ಟು, ಸಾದು, ಜವಾಜಿ, ಕಸ್ತೂರಿ, ಗಂಧಗಳನ್ನು ಲೇಪಿಸಿಕೊಂಡು ಬಂಗಾರದ ಹಾರಾದಿಗಳಿಂದ ಶೋಭಿತನಾಗಿ, ಹಸನ್ಮುಖಿಯಾಗಿ ಅಭಿಮನ್ಯುವು ಯುದ್ಧಕ್ಕೆ ಅನುವಾದನು.

ಅರ್ಥ:
ಬಿಗಿ: ಬಂಧಿಸು, ಭದ್ರವಾಗಿ ಕಟ್ಟು; ಗಂಡುಡಿಗೆ: ಪೌರುಷದ ಬಟ್ಟೆ; ಉಡಿಗೆ: ಬಟ್ಟೆ; ಹೊನ್ನು: ಚಿನ್ನ; ಹೊಳೆ: ಪ್ರಕಾಶ; ಕಠಾರಿ: ಚೂರಿ, ಕತ್ತಿ; ಮೊನೆ: ಚೂಪಾದ; ಮಗುಚು: ಹಿಂದಿರುಗಿಸು; ಸಾದು: ಸಿಂಧೂರ; ಜವಾಜಿ:ಸುವಾಸನಾದ್ರವ್ಯ; ಕತ್ತುರಿ: ಕಸ್ತೂರಿ; ಗಂಧ: ಚಂದನ; ಲೇಪ: ಬಳಿಯುವಿಕೆ, ಹಚ್ಚುವಿಕೆ; ಮಗಮಗಿಪ: ಸುವಾಸನೆಯನ್ನು ಬೀರು; ಹೊಂದು: ಸೇರು; ಒಡರು: ತೊಡಗು; ಹಾರ: ಮಾಲೆ; ಒಪ್ಪು: ನಸುನಗೆ: ಹಸನ್ಮುಖ; ಮೊಗ: ಮುಖ; ಸೊಂಪು: ಸೊಗಸು, ಚೆಲುವು; ಆಹವ: ಯುದ್ಧ; ಅನುವು: ಆಸ್ಪದ, ಅನುಕೂಲ;

ಪದವಿಂಗಡಣೆ:
ಬಿಗಿದ +ಗಂಡುಡಿಗೆಯಲಿ +ಹೊನ್ನಾ
ಯುಗದ +ಹೊಳೆವ +ಕಠಾರಿಯನು +ಮೊನೆ
ಮಗುಚಿ +ಸಾದು +ಜವಾಜಿ +ಕತ್ತುರಿ +ಗಂಧ+ಲೇಪದಲಿ
ಮಗಮಗಿಪ+ ಹೊಂದ್+ಒಡರ +ಹಾರಾ
ದಿಗಳಲ್+ಒಪ್ಪಂಬಡೆದು+ ನಸುನಗೆ
ಮೊಗದ +ಸೊಂಪಿನಲ್+ಆಹವಕ್+ಅನುವಾದನ್+ಅಭಿಮನ್ಯು

ಅಚ್ಚರಿ:
(೧) ಗಂಡುಡಿಗೆ, ಸಾದು, ಜವಾಜಿ, ಕತ್ತುರಿ, ಗಂಧ, ಹಾರ – ಅಭಿಮನ್ಯು ಅಲಂಕಾರಗೊಂಡ ಪರಿ

ಪದ್ಯ ೪: ವೀರರನ್ನು ದುಶ್ಯಾಸನನು ಯುದ್ಧಕ್ಕೆ ಹೇಗೆ ಸಿದ್ಧಮಾಡಿದನು?

ಕುಡಿತೆಯಲಿ ಕರ್ಪುರವ ಸುರಿಸುರಿ
ದೊಡನೆ ಸಾದು ಜವಾಜಿಲೇಪವ
ಮುದಿವ ಹೊಸಹೂಗಳನು ವರಗಂಧಾನುಲೇಪನದ
ಉಡುಗೊರೆಯ ವೀಳೆಯದ ರತ್ನದ
ತೊಡಿಗೆಗಳಲಾ ಪಟುಭಟರ ವಂ
ಗಡವ ಮನ್ನಿಸಿ ನಿನ್ನ ಮಗನನುವಾದನಾಹವಕೆ (ಕರ್ಣ ಪರ್ವ, ೧೯ ಸಂಧಿ, ೪ ಪದ್ಯ)

ತಾತ್ಪರ್ಯ:
ವೀರರೆಲ್ಲರನ್ನು ಸೇರಿಸಿ ಅವರಿಗೆ ಪಚ್ಚ ಕರ್ಪೂರ, ಸಿಂಧೂರ, ಜವಾಜಿ, ಪುಷ್ಪ, ಗಂಧದ ಅನುಲೇಪವನ್ನು ನೀಡಿದನು. ವೀಳೆಯ ಜೊತೆ ರತ್ನಾಭರಣ, ತೊಡಿಗೆಗಳಿಂದ ಅವರನ್ನು ಗೌರವಿಸಿ ತಾನು ಯುದ್ಧಕ್ಕೆ ಅನುವಾದನು.

ಅರ್ಥ:
ಕುಡಿತೆ: ಗುಟುಕು, ಬೊಗಸೆ, ಸೇರೆ; ಕರ್ಪುರ: ಸುಗಂಧ ದ್ರವ್ಯ; ಸುರಿ: ಚೆಲ್ಲು, ಹೊರಹಾಕು; ಸಾದು: ಸಿಂಧೂರ; ಜವಾಜಿ: ಸುವಾಸನ ದ್ರವ್ಯ; ಲೇಪನ: ಬಳಿಯುವಿಕೆ; ಮುಡಿ: ಕಟ್ಟು, ಗಂಟು; ಹೊಸ: ನವೀನ; ಹೂವು: ಪುಷ್ಪ; ವರ: ಶ್ರೇಷ್ಠ; ಗಂಧ; ಚಂದನ; ಉಡುಗೊರೆ: ಕಾಣಿಕೆ, ಬಳುವಳಿ; ವೀಳೆ: ತಾಂಬೂಲ; ರತ್ನ: ಮಣಿ; ತೊಡಿಗೆ: ಆಭರಣ; ಪಟುಭಟ: ವೀರರು; ವಂಗಡ: ಗುಂಪು, ಸಮೂಹ; ಮನ್ನಿಸು: ಗೌರವಿಸು; ಮಗ: ಕುಮಾರ; ಅನುವು: ಅನುಕೂಲ; ಆಹವ: ಯುದ್ಧ;

ಪದವಿಂಗಡಣೆ:
ಕುಡಿತೆಯಲಿ +ಕರ್ಪುರವ +ಸುರಿಸುರಿ
ದೊಡನೆ+ ಸಾದು +ಜವಾಜಿ+ಲೇಪವ
ಮುದಿವ +ಹೊಸ+ಹೂಗಳನು+ ವರಗಂಧಾನುಲೇಪನದ
ಉಡುಗೊರೆಯ +ವೀಳೆಯದ +ರತ್ನದ
ತೊಡಿಗೆಗಳಲಾ+ ಪಟುಭಟರ+ ವಂ
ಗಡವ +ಮನ್ನಿಸಿ +ನಿನ್ನ +ಮಗನ್+ಅನುವಾದನ್+ಆಹವಕೆ

ಅಚ್ಚರಿ:
(೧) ಜೋಡಿ ಪದಗಳು: ಕುಡಿತೆಯಲಿ ಕರ್ಪುರವ; ಸುರಿಸುರಿದೊಡನೆ ಸಾದು; ಹೊಸ ಹೂಗಳನು

ಪದ್ಯ ೯೦: ಜರಾಸಂಧನು ಕೃಷ್ಣ ಭೀಮಾರ್ಜುನರು ಸಿದ್ಧರಾಗಲು ಏನನ್ನು ತರಿಸಿದನು?

ತರಿಸಿದನು ಚಂದನದ ಸಾದಿನ
ಭರಣಿಗಳ ಕರ್ಪೂರ ವರಕ
ತ್ತುರಿ ಜವಾಜಿ ಪ್ರಮುಖ ಬಹುವಿಧಯಕ್ಷಕರ್ದಮವ
ಹರಿ ವೃಕೋದರ ಪಾರ್ಥರಿದಿರಲಿ
ಭರಣಿಗಳ ನೂಕಿದನು ಮಾಲ್ಯಾಂ
ಬರ ವಿಲೇಪನದಿಂದಲಂಕರಿಸಿದರು ನಿಜತನುವ (ಸಭಾ ಪರ್ವ, ೨ ಸಂಧಿ, ೯೦ ಪದ್ಯ)

ತಾತ್ಪರ್ಯ:
ಯುದ್ಧಕ್ಕೆ ತಯಾರಾಗಲು ತಮ್ಮ ಎದುರಾಳಿಗಳು ಸಿದ್ಧರಾಗಲು, ಜರಾಸಂಧನು ಚಂದನ, ಸಾದು ಮೊದಲಾದವುಗಳನ್ನು, ಕಸ್ತೂರಿ ಜವಾಜಿ ಮೊದಲಾದವುಗಳಿಂದ ಮಾಡಿದ ಯಕ್ಷಕರ್ದಮವನ್ನೂ ತರಿಸಿ, ಕೃಷ್ಣ, ಭೀಮ, ಅರ್ಜುನರ ಎದುರಿಗೆ ನೂಕಿದನು. ಅವರು ಉತ್ತಮವಾದ ಬಟ್ಟೆ ವಿಲೇಪನ ಹೂಗಳಿಂದ ಅಲಂಕಾರ ಮಾಡಿಕೊಂಡರು.

ಅರ್ಥ:
ತರಿಸು: ಬರೆಮಾಡು; ಚಂದನ: ಗಂಧ; ಸಾದಭರ ಸಿಂಧೂರ; ಭರಣಿ:ಕುಂಕುಮ ಮತ್ತು ಕಣ್ಕಪ್ಪನ್ನು ಇಡಲು ಮಾಡಿರುವ ಸಣ್ಣ ಡಬ್ಬಿ; ಕರ್ಪೂರ: ಒಂದು ಬಗೆಯ ಸುಗಂಧ ದ್ರವ್ಯ; ಕತ್ತುರಿ: ಕಸ್ತೂರಿ ಮೃಗದ ನಾಭಿಯಿಂದ ದೊರೆಯುವ ದ್ರವ್ಯ, ಮೃಗಮದ; ಜವಾಜಿ: ಪುನುಗು, ಒಂದು ಬಗೆಯ ಸುಗಂಧ ದ್ರವ್ಯ; ಪ್ರಮುಖ: ಮುಖ್ಯ; ವರ: ಶ್ರೇಷ್ಠ; ಬಹು: ಬಹಳ; ವಿಧ: ಬಗೆ; ಯಕ್ಷಕರ್ದಮ: ಪಚ್ಚಕರ್ಪೂರ ಅಗರು ಕಸ್ತೂರಿಗಳಿಂದ ಮಾಡಿದ ಅನುಲೇಪನ); ಹರಿ: ಕೃಷ್ಣ; ವೃಕೋದರ: ಭೀಮ; ಇದಿರು: ಎದುರು; ನೂಕು: ತಳ್ಳು; ಮಾಲೆ: ಸರ; ಅಂಬರ: ಬಟ್ಟೆ; ವಿಲೇಪನ: ಹಚ್ಚು; ಅಲಂಕರಿಸು: ಶೃಂಗಾರಮಾಡು; ನಿಜ: ತಮ್ಮ; ತನು: ದೇಹ;

ಪದವಿಂಗಡಣೆ:
ತರಿಸಿದನು +ಚಂದನದ +ಸಾದಿನ
ಭರಣಿಗಳ +ಕರ್ಪೂರ +ವರ+ಕ
ತ್ತುರಿ +ಜವಾಜಿ +ಪ್ರಮುಖ +ಬಹುವಿಧ+ಯಕ್ಷಕರ್ದಮವ
ಹರಿ +ವೃಕೋದರ+ ಪಾರ್ಥರ್+ಇದಿರಲಿ
ಭರಣಿಗಳ +ನೂಕಿದನು +ಮಾಲ್ಯಾಂ
ಬರ +ವಿಲೇಪನದಿಂದ್+ಅಲಂಕರಿಸಿದರು+ ನಿಜತನುವ

ಅಚ್ಚರಿ:
(೧) ಜರಾಸಂಧನ ಅಹಂಕಾರವನ್ನು ಚಿತ್ರಿಸಿರುವುದು: ಭರಣಿಗಳ ನೂಕಿದನು
(೨) ಅಲಂಕರಿಸಲು ಬಳಸುತ್ತಿದ್ದ ವಸ್ತುಗಳು – ಚಂದನ, ಸಾದು, ಕರ್ಪೂರ, ಕಸ್ತೂರಿ, ಜವಾಜಿ, ಯಕ್ಷಕರ್ದಮ, ಮಾಲೆ, ಅಂಬರ,

ಪದ್ಯ ೭೧: ಐರಾವತವನ್ನು ಸ್ವಾಗತಿಸಲು ಹಸ್ತಿನಾಪುರ ಹೇಗೆ ಸಿಂಗಾರಗೊಂಡಿತು?

ಓರಣದ ಬೀದಿಯಲಿ ತಳಿತುವು
ತೋರಣಂಗಳು ಹಲವು ಪರಿಯಲಿ
ಸಾರಿಸಿತು ಮುಗಿಲುಗಳು ಸಾದು ಜವಾದಿ ಕೆಸರಿನಲಿ
ಕಾರಣೆಯ ನವಕುಂಕುಮದ ಪ
ನ್ನೀರಚಳಯಂಗಳಲಿ ವರಭಾ
ಗೀರಥೀನಂದನನು ಹಸ್ತಿನಪುರವ ವಿರಚಿಸಿದ (ಆದಿ ಪರ್ವ, ೨೧ ಸಂಧಿ, ೭೧ ಪದ್ಯ)

ತಾತ್ಪರ್ಯ:
ಹಸ್ತಿನಾಪುರದ ಬೀದಿಗಳಲ್ಲಿ ಅಚ್ಚುಕಟ್ಟಾಗಿ ತೋರಣಗಳನ್ನು ಕಟ್ಟಿದರು. ಸಾದು ಜವಾಜಿಗಳಿಂದ ಬೀದಿಗಳನ್ನು ಸಾರಿಸಲು ಕುಂಕುಮದ ಕಾರಣೆಗಳಿಂದ ಮನೆಗಳನ್ನಲಂಕರಿಸಿದರು. ಪನ್ನೀರನ್ನು ಎಲ್ಲೆಡೆ ಚುಮುಕಿಸಿದರು. ಹೀಗೆ ಭೀಷ್ಮರು ಹಸ್ತಿನಾಪುರವನ್ನು ಸಿಂಗರಿಸಿದರು.

ಅರ್ಥ:
ಓರಣ:ಅಚ್ಚುಕಟ್ಟು; ಬೀದಿ: ರಸ್ತೆ; ತಳಿ: ಚಿಮುಕಿಸು, ಸಿಂಪಡಿಸು; ತೋರಣ: ಹೊರಬಾಗಿಲು, ಅಲಂಕಾರಕ್ಕಾಗಿ ಬಾಗಿಲು; ಹಲವು: ನಾನಾ; ಪರಿ: ರೀತಿ; ಸಾರಿಸು:ನೆಲವನ್ನು ಒರೆಸು; ಮುಗಿಲು: ಬಾನು; ಸಾದು:ಸಿಂಧೂರ; ಜವಾದಿ:ಸುಗಂಧದ್ರವ್ಯ; ಕೆಸರು:ಪಂಕ, ರಾಡಿ; ಕಾರಣೆ:ಮೇಜುಕಟ್ಟು; ನವ: ಹೊಸ; ಕುಂಕುಮ:ಕೇಸರಿ, ಮಂಗಳ ದ್ರವ್ಯ; ಪನ್ನೀರು:ಸುಗಂಧಯುಕ್ತವಾದ ನೀರು; ವರ: ಶ್ರೇಷ್ಠ; ಭಾಗೀರಥಿ: ಗಂಗೆ; ನಂದನ: ಪುತ್ರ; ವಿರಚಿಸು: ರಚಿಸು;

ಪದವಿಂಗಡಣೆ:
ಓರಣದ +ಬೀದಿಯಲಿ+ ತಳಿತುವು
ತೋರಣಂಗಳು +ಹಲವು +ಪರಿಯಲಿ
ಸಾರಿಸಿತು +ಮುಗಿಲುಗಳು +ಸಾದು +ಜವಾದಿ +ಕೆಸರಿನಲಿ
ಕಾರಣೆಯ +ನವಕುಂಕುಮದ +ಪ
ನ್ನೀರಚಳ+ಯಂಗಳಲಿ+ ವರಭಾ
ಗೀರಥೀ+ನಂದನನು+ ಹಸ್ತಿನಪುರವ+ ವಿರಚಿಸಿದ

ಅಚ್ಚರಿ:
(೧) ಓರಣ, ತೋರಣ – ಪ್ರಾಸ ಪದ ೧, ೨ ಸಾಲಿನ ಮೊದಲ ಪದ
(೨) ಕೆಸರು – ರಾಡಿ ಎಂಬ ಅರ್ಥ, ಇಲ್ಲಿ ಪನ್ನೀರು, ಸುಗಂಧದ್ರವ್ಯಗಳ ರಾಡಿ, ಅತ್ಯಂತ ಸುಗಂಧಭರಿತವಾಗಿತ್ತು ಎಂದು ಸೂಚಿಸಲು