ಪದ್ಯ ೪೪: ಪಾಂಡವರ ಸ್ಥಿತಿ ಹೇಗಾಯಿತು?

ಮುರಿದುದಾಬಲವಿಳೆಯೊಡೆಯೆ ಬೊ
ಬ್ಬಿರಿದುದೀ ಬಲವಪಜಯದ ಮಳೆ
ಗರೆದುದವರಿಗೆ ಹರಿದುದಿವರಿಗೆ ಸರ್ಪರಜ್ಜುಭಯ
ತೆರಳಿತಾಚೆಯ ಥಟ್ಟು ಮುಂದಣಿ
ಗುರವಣಿಸಿತೀಯೊಡ್ಡು ಕೌರವ
ರರಸನುತ್ಸಾಹವನು ಬಣ್ಣಿಸಲಿರಿಯೆನಾನೆಂದ (ದ್ರೋಣ ಪರ್ವ, ೧೭ ಸಂಧಿ, ೪೪ ಪದ್ಯ)

ತಾತ್ಪರ್ಯ:
ಪಾಂಡವರ ಸೈನ್ಯ ಮುರಿಯಿತು. ಭೂಮಿ ಬಿರಿಯುವಂತೆ ಕೌರವ ಬಲ ಬೊಬ್ಬಿರಿಯಿತು. ಅವರಿಗೆ ಅಪಜಯದ ಮಳೆ ವರ್ಷಿಸಿತು ಇವರಿಗೆ ಹಾವು ಹಗ್ಗದ ಭಯ ಬಿಟ್ಟಿತು. ಆಚೆಯ ಸೈನ್ಯ ಓಡಿತು, ಈ ಸೈನ್ಯ ಮುನ್ನುಗ್ಗಿತು. ಕೌರವನ ರಣೋತ್ಸಾಹ ಅವರ್ಣನೀಯವಾಗಿತ್ತು.

ಅರ್ಥ:
ಮುರಿ: ಸೀಳು; ಬಲ: ಸೈನ್ಯ; ಇಳೆ: ಭೂಮಿ; ಒಡೆಯ: ರಾಜ; ಬೊಬ್ಬಿರಿ: ಗರ್ಜಿಸು; ಅಪಜಯ: ಸೋಳು; ಮಳೆ: ವರ್ಷ; ಹರಿ: ಪ್ರವಹಿಸು, ಚಲಿಸು; ಸರ್ಪ: ಉರಗ; ರಜ್ಜು: ಹಗ್ಗ; ತೆರಳು: ಮರಳು; ಥಟ್ಟು: ಗುಂಪು; ಮುಂದಣಿ: ಮುಂಚೆ; ಉರವಣಿಸು: ಉತ್ಸಾಹದಿಂದಿರು, ಆತುರಿಸು; ಒಡ್ಡು: ರಾಶಿ, ಸಮೂಹ; ಅರಸ: ರಾಜ; ಉತ್ಸಾಹ: ಹುರುಪು, ಆಸಕ್ತಿ; ಬಣ್ಣಿಸು: ವರ್ಣಿಸು; ಅರಿ: ತಿಳಿ;

ಪದವಿಂಗಡಣೆ:
ಮುರಿದುದ್+ಆ+ಬಲವ್ + ಇಳೆ+ಒಡೆಯೆ+ ಬೊ
ಬ್ಬಿರಿದುದ್+ಈ+ ಬಲವ್+ಅಪಜಯದ +ಮಳೆ
ಗರೆದುದ್+ಅವರಿಗೆ +ಹರಿದುದ್+ಇವರಿಗೆ+ ಸರ್ಪ+ರಜ್ಜು+ಭಯ
ತೆರಳಿತ್+ಆಚೆಯ +ಥಟ್ಟು +ಮುಂದಣಿಗ್
ಉರವಣಿಸಿತ್+ಈ+ ಒಡ್ಡು +ಕೌರವರ್
ಅರಸನ್+ಉತ್ಸಾಹವನು +ಬಣ್ಣಿಸಲ್+ಅರಿಯೆ+ನಾನೆಂದ

ಅಚ್ಚರಿ:
(೧) ಕೌರವರ ಸ್ಥಿತಿಯನ್ನು ಹೇಳುವ ಪರಿ – ಹರಿದುದಿವರಿಗೆ ಸರ್ಪರಜ್ಜುಭಯ
(೨) ರಾಜನನ್ನು ಇಳೆಯೊಡೆಯ ಎಂದು ಕರೆದಿರುವುದು

ಪದ್ಯ ೬೭: ನಹುಷನ ಶಾಪವಿಮೋಚನೆಯ ಮಾರ್ಗವೇನು?

ಸರ್ಪ ಪರಿಸರ್ಪತ್ವಮನೆ ಫಡ
ಸರ್ಪ ನೀನಾಗೆನಲು ತನ್ನಯ
ದರ್ಪವನು ಕೆಡೆನೂಕಿ ಬಿದ್ದೆನು ಮುನಿಯ ಚರಣದಲಿ
ಸರ್ಪತನದನುಭವಕೆ ಕಡೆಯೆಂ
ದಪ್ಪುದೆನೆ ಧರ್ಮಜನ ವರವಾ
ಗ್ದರ್ಪಣದಲಹುದೆಂದೊಡಿದು ಸಂಘಟಿಸಿತೆನಗೆಂದ (ಅರಣ್ಯ ಪರ್ವ, ೧೪ ಸಂಧಿ, ೬೭ ಪದ್ಯ)

ತಾತ್ಪರ್ಯ:
ನಹುಷನು ತನ್ನ ಮಾತನ್ನು ಮುಂದುವರಿಸುತ್ತಾ, ನಾನು ಅಗಸ್ತ್ಯನಿಗೆ ಬೇಗ ಬೇಗ ಓಡು ಎಂದೆನು ಅವನು ಫಡ, ನೀನು ಸರ್ಪನಾಗು ಎಂದು ಶಪಿಸಲು, ನಾನು ದರ್ಪವನ್ನು ತೊರೆದು ಅವನಿಗೆ ಶರಣಾಗತನಾದೆನು. ನನಗೆ ಹಾವಿನ ದೇಹವು ಎಂದಿಗೆ ಹೋಗುವುದು ಎಂದು ಕೇಳಲು ಆತನು, ಧರ್ಮಜನ ನಿರ್ಮಲವಾದ ಮಾತುಗಳ ಕನ್ನಡಿಯಿಂದ ನಿನ್ನ ಸರ್ಪತ್ವವು ಹೋಗುತ್ತದೆ ಎಂದನು. ಅದರಂತೆ ಈಗ ನನಗೆ ಸರ್ಪತ್ವವು ಹೋಗುತ್ತದೆ ಎಂದನು.

ಅರ್ಥ:
ಸರ್ಪ: ಹಾವು, ಉರಗ; ಪರಿ: ಓಟ, ಧಾವಿಸುವಿಕೆ; ಫಡ: ತಿರಸ್ಕಾರ ಹಾಗೂ ಕೋಪಗಳನ್ನು ಸೂಚಿಸುವ ಒಂದು ಮಾತು; ದರ್ಪ: ಗರ್ವ, ಠೀವಿ; ಕೆಡೆ: ಬೀಳು, ಕುಸಿ; ಬಿದ್ದು: ಕೆಳಗೆ ಬೀಳು; ಮುನಿ: ಋಷಿ; ಚರಣ: ಪಾದ; ಅನುಭವ: ಇಂದ್ರಿಯಗಳ ಮೂಲಕ ಬರುವ ಜ್ಞಾನ; ಅಪ್ಪುದು: ಅಪ್ಪುಗೆ, ಆಲಂಗಿಸು; ವರ: ಶ್ರೇಷ್ಠ; ವಾಗ್: ವಾಕ್, ವಾಣಿ; ದರ್ಪಣ: ಕನ್ನಡಿ; ಸಂಘಟಿಸು: ಸಾಧ್ಯವಾಗುವಂತೆ ಮಾಡು, ಕೂಡು; ಕಡೆ: ಕೊನೆ;

ಪದವಿಂಗಡಣೆ:
ಸರ್ಪ+ ಪರಿಸರ್ಪತ್ವಮನೆ +ಫಡ
ಸರ್ಪ +ನೀನಾಗೆನಲು+ ತನ್ನಯ
ದರ್ಪವನು+ ಕೆಡೆನೂಕಿ+ ಬಿದ್ದೆನು+ ಮುನಿಯ +ಚರಣದಲಿ
ಸರ್ಪತನದ್+ಅನುಭವಕೆ +ಕಡೆಯೆಂದ್
ಅಪ್ಪುದೆನೆ +ಧರ್ಮಜನ +ವರ+ವಾಗ್
ದರ್ಪಣದಲಹುದೆಂದ್+ಒಡಿದು +ಸಂಘಟಿಸಿತ್+ಎನಗೆಂದ

ಅಚ್ಚರಿ:
(೧) ಬೇಗ ಹೋಗು ಎಂದು ಹೇಳುವ ಪರಿ – ಸರ್ಪ ಪರಿಸರ್ಪತ್ವಮನೆ

ಪದ್ಯ ೩: ಸಂಜಯನು ಪಾಂಡವರ ಹಿರಿಮೆಯನ್ನು ಹೇಗೆ ವರ್ಣಿಸಿದನು?

ಜೀಯ ಬಿನ್ನಹವಿಂದು ಪಾಂಡವ
ರಾಯನೈಶ್ವರ್ಯವನು ಸಾವಿರ
ಬಾಯಸರ್ಪನು ಹೊಗಳಲಳವಲ್ಲೆನ್ನ ಪಾಡೇನು
ನಾಯಕರ ಕಡುಹುಗಳನವರವ
ರಾಯತವನನಿಬರಿಗೆ ಕಮಲದ
ಳಾಯತಾಕ್ಷನ ಕರುಣದಳತೆ ವಿಚಿತ್ರತರವೆಂದ (ಉದ್ಯೋಗ ಪರ್ವ, ೫ ಸಂಧಿ, ೩ ಪದ್ಯ)

ತಾತ್ಪರ್ಯ:
ಸಂಜಯನು ತನ್ನ ಮಾತನ್ನು ಮುಂದುವರಿಸುತ್ತಾ, “ಒಡೆಯ, ಯುಧಿಷ್ಠಿರನ ಐಶ್ವರ್ಯವನ್ನು ಹೊಗಳಲು ಸಾವಿರ ಬಾಯಿರುವ ಆದಿಶೇಷನಿಗೂ ಸಾಧ್ಯವಿಲ್ಲ, ಇನ್ನು ನನ್ನ ಪಾಡೇನು? ಅಲ್ಲಿರುವ ನಾಯಕರ ಪರಾಕ್ರಮ ಉತ್ಸಾಹಗಳನ್ನು ಅವರ ಬಲಾತಿಶಯವನ್ನು ಅವರೆಲ್ಲರಿಗೂ ಇರುವ ಶ್ರೀಕೃಷ್ಣನ ಕೃಪಾಕಟಾಕ್ಷವನ್ನು ಹೇಳಲು ಮಾತುಗಳಿಲ್ಲ, ಅದು ಅತಿ ವಿಚಿತ್ರವಾದ ವಿದ್ಯಮಾನ” ಎಂದು ವಿವರಿಸಲು ಪ್ರಾರಂಭಿಸಿದನು.

ಅರ್ಥ:
ಜೀಯ: ಒಡೆಯ; ಬಿನ್ನಹ: ವಿಜ್ಞಾಪಿಸು; ರಾಯ; ರಾಜ; ಐಶ್ವರ್ಯ: ಸಿರಿ; ಸಾವಿರ: ಸಹಸ್ರ; ಬಾಯಿ: ಶಬ್ದದ ಉದ್ಗಾರಗಳಿಗೂ ಬಳಸುವ ಮುಖದ ಅಂಗ; ಸರ್ಪ: ಉರಗ, ಹಾವು; ಹೊಗಳು: ಸ್ತುತಿ, ಕೊಂಡಾಟ; ಪಾಡು: ಗೀತೆ, ಹಾಡು, ಕೀರ್ತನೆ; ನಾಯಕ: ಮುಖಂಡ; ಕಡುಹು: ಸಾಹಸ, ಹುರುಪು, ಉತ್ಸಾಹ; ಆಯತ: ವಿಶಾಲವಾದ; ಅನಿಬರು: ಅಷ್ಟುಜನರು; ಕಮಲ: ತಾವರೆ; ಆಯತಾಕ್ಷ: ದೊಡ್ಡ ಕಣ್ಣು; ಕಮಲದಳಾಯತಾಕ್ಷ: ಕೃಷ್ಣ; ಕರುಣ: ದಯೆ;ವಿಚಿತ್ರ:ಆಶ್ಚರ್ಯಕರ; ತರ: ರೀತಿ; ಅಳವು: ಶಕ್ತಿ, ಸಾಮರ್ಥ್ಯ;

ಪದವಿಂಗಡಣೆ:
ಜೀಯ+ ಬಿನ್ನಹವಿಂದು +ಪಾಂಡವ
ರಾಯನ್+ಐಶ್ವರ್ಯವನು +ಸಾವಿರ
ಬಾಯ+ಸರ್ಪನು +ಹೊಗಳಲ್+ಅಳವಲ್ಲ್+ಎನ್ನ +ಪಾಡೇನು
ನಾಯಕರ+ ಕಡುಹುಗಳನ್+ಅವರವರ್
ಆಯತವನ್+ಅನಿಬರಿಗೆ +ಕಮಲದ
ಳಾಯತಾಕ್ಷನ +ಕರುಣದಳತೆ+ ವಿಚಿತ್ರತರವೆಂದ

ಅಚ್ಚರಿ:
(೧) ಉಪಮಾನದ ಪ್ರಯೋಗ – ಸಾವಿರ ಬಾಯಸರ್ಪನು ಹೊಗಳಲಳವಲ್ಲೆನ್ನ ಪಾಡೇನು
(೨) ‘ಅ’ ಕಾರದ ತ್ರಿವಳಿ ಪದ – ಅವರವರ್ ಆಯತವನ್ ಅನಿಬರಿಗೆ
(೩) ಜೀಯ, ನಾಯಕ – ಸಮನಾರ್ಥಕ ಪದ
(೪) ಆಯತ ಪದದ ಬಳಕೆ – ಅವರವರಾಯತ, ಕಮಲದಳಾಯತ