ಪದ್ಯ ೫೭: ಅಶ್ವತ್ಥಾಮನು ಕುರುಪತಿಗೆ ಏನು ಹೇಳಿದ?

ಏಳು ಕುರುಪತಿ ಪಾಂಡುನಂದನ
ರಾಳು ಬರುತಿದೆ ನಾವು ನಾಲ್ವರು
ಕಾಳೆಗದೊಳಂಘೈಸುವೆವು ಬಿಡುಬಿಡು ಸರೋವರವ
ಹೇಳು ಮನವೇನೆನಲು ನೀವಿ
ನ್ನೇಳಿ ದೂರದಲಿರಿ ವಿರೋಧಿಗ
ಳಾಳು ಮಾಡುವುದೇನು ಸಲಿಲದೊಳೆಂದನಾ ಭೂಪ (ಗದಾ ಪರ್ವ, ೪ ಸಂಧಿ, ೫೭ ಪದ್ಯ)

ತಾತ್ಪರ್ಯ:
ಅಶ್ವತ್ಥಾಮನು, ಕೌರವ ಏಳು ಪಾಂಡುಸೇನೆ ಬರುತ್ತಿದೆ. ನೀನು ಸರೋವರವನ್ನು ಬಿಟ್ಟು ಬಾ. ನಾವು ನಾಲ್ವರೂ ಯುದ್ಧ ಮಾಡೋಣ, ನಿನ್ನ ಮನಸ್ಸಿನಲ್ಲೇನಿದೆ ಹೇಳು, ಎನ್ನಲು ಕೌರವನು ನೀವು ಇಲ್ಲಿಂದ ದೂರಕ್ಕೆ ಹೋಗಿಬಿಡಿ, ನಮ್ಮ ವಿರೋಧಿಗಳು ನೀರ್ನಲ್ಲಿರುವ ನನ್ನನ್ನು ಏನು ಮಾಡಿಯಾರು ಎಂದನು.

ಅರ್ಥ:
ನಂದನ: ಮಗ; ಕಾಳೆಗ: ಯುದ್ಧ; ಅಂಗೈಸು: ಜತೆಯಾಗು; ಬಿಡು: ತೊರೆ; ಸರೋರ: ಸರಸಿ; ಹೇಳು: ತಿಳಿಸು; ಮನ: ಮನಸ್ಸು; ದೂರ: ಅಂತರ; ವಿರೋಧಿ: ವೈರಿ; ಆಳು: ಸೇವಕ; ಸಲಿಲ: ನೀರು; ಭೂಪ: ರಾಜ;

ಪದವಿಂಗಡಣೆ:
ಏಳು +ಕುರುಪತಿ +ಪಾಂಡು+ನಂದನರ್
ಆಳು +ಬರುತಿದೆ+ ನಾವು +ನಾಲ್ವರು
ಕಾಳೆಗದೊಳ್+ಅಂಘೈಸುವೆವು +ಬಿಡುಬಿಡು +ಸರೋವರವ
ಹೇಳು +ಮನವೇನ್+ಎನಲು +ನೀವಿನ್
ಏಳಿ +ದೂರದಲಿರಿ +ವಿರೋಧಿಗಳ್
ಆಳು +ಮಾಡುವುದೇನು +ಸಲಿಲದೊಳ್+ಎಂದನಾ +ಭೂಪ

ಅಚ್ಚರಿ:
(೧) ಏಳು, ಆಳು, ಹೇಳು – ಪ್ರಾಸ ಪದಗಳು

ಪದ್ಯ ೩೫: ದುರ್ಯೋಧನನು ಯಾವ ರಹಸ್ಯವನ್ನು ಸಂಜಯನಿಗೆ ಹೇಳಿದನು?

ಇದೆ ಸರೋವರವೊಂದು ಹರಿದೂ
ರದಲಿ ಭುವನಖ್ಯಾತ ತನ್ಮ
ಧ್ಯದಲಿ ಮುಳುಗಿಹೆನೊಂದುದಿನ ಪರಿಯಂತ ಸಲಿಲದಲಿ
ಕದನದಲಿ ಕೌಂತೇಯರನು ಯಮ
ಸದನದಲಿ ತೋರುವೆನು ತಾನೆಂ
ಬುದು ರಹಸ್ಯವು ಜನನಿ ಜನಕಂಗರುಹು ನೀನೆಂದ (ಗದಾ ಪರ್ವ, ೩ ಸಂಧಿ, ೩೫ ಪದ್ಯ)

ತಾತ್ಪರ್ಯ:
ಸಂಜಯ, ನಡೆದುಕೊಂಡು ಹೋಗಿ ಮುಟ್ಟಬಲ್ಲ ದೂರದಲ್ಲಿ ಒಂದು ವಿಶ್ವವಿಖ್ಯಾತ ಸರೋವರವಿದೆ. ಅದರ ಮಧ್ಯದಲ್ಲಿ ಒಂದು ದಿನದವರೆಗೆ ನೀರಿನಅಲ್ಲಿರುತ್ತೇನೆ. ಆನಂತರ ಯುದ್ಧಮಾಡಿ ಕುಂತಿಯ ಮಕ್ಕಳಿಗೆ ಯಮಲೋಕವನ್ನು ತೋರಿಸುತ್ತೇನೆ, ಇದು ರಹಸ್ಯ. ಇದನ್ನು ನನ್ನ ತಂದೆ ತಾಯಿಗಳಿಗೆ ತಿಳಿಸು ಎಂದು ದುರ್ಯೋಧನನು ಸಂಜಯನಿಗೆ ಹೇಳಿದನು.

ಅರ್ಥ:
ಸರೋವರ: ಸರಸಿ; ಹರಿದೂರ: ನಡಿಗೆಯ ಅಂತರ; ಭುವನ: ಭೂಮಿ; ವಿಖ್ಯಾತ: ಪ್ರಸಿದ್ಧ; ಮಧ್ಯ: ನಡುವೆ; ಮುಳುಗು: ನೀರಿನಲ್ಲಿ ಮೀಯು; ಪರಿಯಂತ: ವರೆಗು; ಸಲಲಿ: ನೀರು; ಕದನ: ಯುದ್ಧ; ಕೌಂತೇಯ: ಪಾಂಡವ; ಯಮ: ಜವ; ಸದನ: ಮನೆ, ನಿವಾಸ; ತೋರು: ಗೋಚರಿಸು; ರಹಸ್ಯ: ಗುಟ್ಟು; ಜನನಿ: ತಾಯಿ; ಜನಕ: ತಂದೆ; ಅರುಹು: ತಿಳಿಸು;

ಪದವಿಂಗಡಣೆ:
ಇದೆ+ ಸರೋವರವೊಂದು +ಹರಿ+ದೂ
ರದಲಿ +ಭುವನ+ಖ್ಯಾತ +ತನ್
ಮಧ್ಯದಲಿ+ ಮುಳುಗಿಹೆನ್+ಒಂದುದಿನ +ಪರಿಯಂತ +ಸಲಿಲದಲಿ
ಕದನದಲಿ +ಕೌಂತೇಯರನು +ಯಮ
ಸದನದಲಿ +ತೋರುವೆನು +ತಾನೆಂ
ಬುದು +ರಹಸ್ಯವು +ಜನನಿ +ಜನಕಂಗ್+ಅರುಹು +ನೀನೆಂದ

ಅಚ್ಚರಿ:
(೧) ಸಾಯಿಸುವೆ ಎಂದು ಹೇಳುವ ಪರಿ – ಕೌಂತೇಯರನು ಯಮ ಸದನದಲಿ ತೋರುವೆನು

ಪದ್ಯ ೨: ಕೃಷ್ಣನು ಅರ್ಜುನನೊಡನೆ ಎಲ್ಲಿಗೆ ಬಂದನು?

ಅಳಿಯನಳಿವನು ಹೇಳಬಾರದು
ತಿಳಿಯಲಿದನಿನ್ನೆನುತ ಚಿಂತಿಸಿ
ನಳಿನಲೋಚನ ಬರುತ ಕಂಡನು ವರ ಸರೋವರವ
ಇಳಿದು ರಥವನು ರಣ ಪರಿಶ್ರಮ
ಗಳೆವೆನೆನುತವೆ ಪಾರ್ಥ ಸಹಿತಾ
ಕೊಳನ ಹೊಕ್ಕನು ಜಗದುದರ ಲೀಲಾವತಾರಕನು (ದ್ರೋಣ ಪರ್ವ, ೮ ಸಂಧಿ, ೨ ಪದ್ಯ)

ತಾತ್ಪರ್ಯ:
ಅಭಿಮನ್ಯುವಿನ ಮರಣವನ್ನು ಅರ್ಜುನನಿಗೆ ನಾನು ಹೇಳಬಾರದು. ಅವನೇ ತಿಳಿದುಕೊಳ್ಳಲಿ ಎಂದು ಯೋಚಿಸಿ ರಥವನ್ನು ಪಾಳೆಯದ ಕಡೆಗೆ ನಡೆಸುತ್ತಾ, ಶ್ರೀಕೃಷ್ಣನು ಸರೋವರವೊಂದನ್ನು ಕಂಡು ಆಯಾಸ ಪರಿಹಾರಕ್ಕಾಗಿ ಅರ್ಜುನನೊಡನೆ ಸರೋವರವನ್ನು ಹೊಕ್ಕನು.

ಅರ್ಥ:
ಅಳಿಯ: ಸೋದರಿಯ ಮಗ; ಅಳಿ: ನಾಶ; ಹೇಳು: ತಿಳಿಸು; ತಿಳಿ: ಅರ್ಥೈಸು; ಚಿಂತಿಸು: ಯೋಚಿಸು; ನಳಿನಲೋಚನ: ಕಮಲದಂತ ಕಣ್ಣುಳ್ಳವ; ಬರುತ: ಆಗಮಿಸು; ಕಂಡು: ನೋಡು; ವರ: ಶ್ರೇಷ್ಠ; ಸರೋವರ: ನದಿ, ಸರಸಿ; ಇಳಿ: ಕೆಳಗೆ ಬಾಗು; ರಥ: ಬಂಡಿ; ರಣ: ಯುದ್ಧ; ಪರಿಶ್ರಮ: ಆಯಾಸ; ಕಳೆ: ನಿವಾರಿಸು; ಸಹಿತ: ಜೊತೆ; ಕೊಳ: ಸರೋವರ; ಹೊಕ್ಕು: ಸೇರು; ಜಗದುದರ: ಜಗತ್ತನ್ನೆಲ್ಲ ತನ್ನ ಹೊಟ್ಟೆ ಯಲ್ಲಿ ಇಟ್ಟು ಕೊಂಡವನು, ಕೃಷ್ಣ; ಲೀಲಾ: ಆನಂದ, ಸಂತೋಷ, ಕ್ರೀಡೆ; ಅವತಾರ: ದೇವತೆಗಳು ಭೂಮಿಯ ಮೇಲೆ ಹುಟ್ಟುವುದು;

ಪದವಿಂಗಡಣೆ:
ಅಳಿಯನ್+ಅಳಿವನು +ಹೇಳಬಾರದು
ತಿಳಿಯಲಿದನ್+ಇನ್ನೆನುತ +ಚಿಂತಿಸಿ
ನಳಿನಲೋಚನ +ಬರುತ +ಕಂಡನು +ವರ +ಸರೋವರವ
ಇಳಿದು +ರಥವನು +ರಣ +ಪರಿಶ್ರಮ
ಕಳೆವೆನ್+ಎನುತವೆ +ಪಾರ್ಥ +ಸಹಿತ+ಆ
ಕೊಳನ +ಹೊಕ್ಕನು +ಜಗದುದರ +ಲೀಲಾವತಾರಕನು

ಅಚ್ಚರಿ:
(೧) ಕೃಷ್ಣನನ್ನು ಜಗದುದರ ಲೀಲಾವತಾರಕ, ನಳಿನಲೋಚನ ಎಂದು ಕರೆದಿರುವುದು
(೨) ಅಳಿ ಪದದ ಬಳಕೆ – ಅಳಿಯನಳಿವನು
(೩) ಕೊಳ, ಸರೋವರ – ಸಾಮ್ಯಾರ್ಥ ಪದ

ಪದ್ಯ ೨೬: ಗಗನವಾಣಿ ಭೀಮನಿಗೆ ಏನು ಹೇಳಿತು?

ಮಾಣುಮಾಣುತ್ತರವ ಕೊಡು ಮುಂ
ಗಾಣಬೇಹುದು ತಂದೆ ತನಗೀ
ಕ್ಷೋಣಿಯಲಿ ಪೂರ್ವದ ಪರಿಗ್ರಹವೀ ಸರೋವರವು
ಜಾಣನಾದೊಡೆ ಜಾರಬಿಡು ಬಿಡು
ಕೇಣವನು ನೀನೆನಲು ಗಗನದ
ವಾಣಿಯನು ಮನ್ನಿಸದೆ ಮಾರುತಿಯೀಂಟಿದನು ಜಲವ (ಅರಣ್ಯ ಪರ್ವ, ೨೬ ಸಂಧಿ, ೨೬ ಪದ್ಯ)

ತಾತ್ಪರ್ಯ:
ಆಗ ಆಕಾಶವಾಣಿಯು, ಅಪ್ಪ ತಂದೆ ಭೀಮ, ಬೇಡ ಬೇಡ, ಮುಂದಿನ ಪರಿಣಾಮವನ್ನು ತಿಳಿದುಕೊಂಡು ಬೊಗಸೆಯಲ್ಲಿರುವ ನೀರನ್ನು ಕೆಳಕ್ಕೆ ಚೆಲ್ಲು, ಈ ಭೂಮಿಯಲ್ಲಿ ಈ ಸರೋವರವನ್ನು ಹಿಂದೆಯೇ ನನಗೆ ಕೊಟ್ಟಿದ್ದಾರೆ, ಜಾಣನಾದರೆ ನೀರಿನ ಮೇಲಿನ ಅತ್ಯಾಶೆಯನ್ನು ಬಿಡು, ಎಂದು ಹೇಳಲು, ಭೀಮನು ಅದನ್ನು ಕಡೆಗಣಿಸಿ ನೀರನ್ನು ಕುಡಿದನು.

ಅರ್ಥ:
ಮಾಣು: ನಿಲ್ಲು; ಮಾಣುತ್ತರ: ಪ್ರತ್ಯುತ್ತರ; ಕೊಡು: ನೀಡು; ಮುಂಗಾಣ: ಮುಂದಿನ ಪರಿಣಾಮ; ತಂದೆ: ಅಪ್ಪ; ಕ್ಷೋಣಿ: ನೆಲ, ಭೂಮಿ; ಪೂರ್ವ: ಹಿಂದಿನ; ಪರಿಗ್ರಹ: ಸ್ವೀಕರಿಸುವುದು; ಸರೋವರ:ಸರಸಿ; ಜಾಣ: ಬುದ್ಧಿವಂತ; ಜಾರ: ಅತೀವ ಆಸೆ; ಬಿಡು: ತೊರೆ; ಕೇಣ: ಕೋಪ, ಅತಿಯಾಸೆ; ಗಗನ: ಆಗಸ; ವಾಣಿ: ಮಾತು; ಮನ್ನಿಸು: ಒಪ್ಪು; ಮಾರುತಿ: ಭೀಮ; ಈಂಟು: ಪಾನಮಾಡು; ಜಲ: ನೀರು;

ಪದವಿಂಗಡಣೆ:
ಮಾಣು+ಮಾಣುತ್ತರವ+ ಕೊಡು+ ಮುಂ
ಗಾಣ+ಬೇಹುದು +ತಂದೆ +ತನಗ್+ಈ+
ಕ್ಷೋಣಿಯಲಿ +ಪೂರ್ವದ +ಪರಿಗ್ರಹವ್+ಈ+ ಸರೋವರವು
ಜಾಣನಾದೊಡೆ +ಜಾರಬಿಡು +ಬಿಡು
ಕೇಣವನು +ನೀನೆನಲು +ಗಗನದ
ವಾಣಿಯನು +ಮನ್ನಿಸದೆ +ಮಾರುತಿ+ಈಂಟಿದನು +ಜಲವ

ಅಚ್ಚರಿ:
(೧) ಜೋಡಿ ಪದಗಳು – ಮಾಣುಮಾಣುತ್ತರವ, ಜಾರಬಿಡು ಬಿಡು ಕೇಣವನು

ಪದ್ಯ ೨೦: ಅರ್ಜುನನು ಸರೋವರದ ದಡದಲ್ಲಿ ಯಾರನ್ನು ನೋಡಿದನು?

ಹಿಮದ ಗಾಳಿಯ ಪಥವಿಡಿದು ಮ
ಧ್ಯಮದ ಪಾಂಡವನೈತರುತ ಮುಂ
ದಮಲ ಸರಸಿಯ ತೀರದಲಿ ಕೀಲಿಸಿದ ಮಗ್ಗುಲಲಿ
ಯಮಳರೊರಗಿರೆ ಕಂಡು ಮನದಲಿ
ತಮವ ಹಿಡಿದನು ನೀರುಗುಡಿದೀ
ಮಮತೆ ಮಿಗಲಾರೈವೆನೆನುತಿಳಿದನು ಸರೋವರವ (ಅರಣ್ಯ ಪರ್ವ, ೨೬ ಸಂಧಿ, ೨೦ ಪದ್ಯ)

ತಾತ್ಪರ್ಯ:
ತಂಗಾಳಿಯ ದಾರಿಯಲ್ಲಿ ಅರ್ಜುನನು ನಡೆದುಕೊಂಡು ಹೋಗಿ ಸರೋವರದ ತೀರದಲ್ಲಿ ತನ್ನ ಅವಳಿ ತಮ್ಮಂದಿರು ಮಗ್ಗುಲಾಗಿ ಒಬ್ಬರೊಬ್ಬರ ಪಕ್ಕದಲ್ಲಿ ಮಲಗಿರುವುದನ್ನು ಕಂಡು ದಿಗ್ಭ್ರಮೆಗೊಂಡನು. ನೀರನ್ನು ಕುಡಿದು ತಮ್ಮಂದಿರ ಗತಿಯೇನೆಂದು ನೋಡೋಣವೆಂದುಕೊಂಡು ಸರೋವರವನ್ನಿಳಿದನು.

ಅರ್ಥ:
ಹಿಮ: ಮಂಜಿನ ಹನಿ; ಗಾಳಿ: ವಾಯು; ಪಥ: ದಾರಿ; ಮಧ್ಯಮ: ನಡುವಿನ; ಐತರು: ಬಂದು ಸೇರು; ಅಮಲ: ನಿರ್ಮಲ; ಸರಸಿ: ಸರೋವರ; ತೀರ: ದಡ; ಕೀಲಿಸು: ನಾಟು, ಚುಚ್ಚು; ಮಗ್ಗು: ಕುಂದು, ಕುಗ್ಗು, ಕಡಮೆಯಾಗು; ಯಮಳ: ಅವಳಿ ಮಕ್ಕಳು; ಒರಗು: ಮಲಗು, ಸಾಯು, ಮರಣ ಹೊಂದು; ಮನ: ಮನಸ್ಸು; ಕಂಡು: ನೋಡು; ತಮ: ಕತ್ತಲೆ, ಅಂಧಕಾರ; ಹಿಡಿ: ಗ್ರಹಿಸು; ನೀರು: ಜಲ; ಕುಡಿ: ಪಾನ ಮಾಡು; ಮಮತೆ: ಪ್ರೀತಿ; ಮಿಗಲು: ಹೆಚ್ಚಾಗಲು, ಉಳಿಯಲು; ಇಳಿ: ಕೆಳಗೆ ಹೋಗು; ಸರೋವರ: ಸರಸಿ;

ಪದವಿಂಗಡಣೆ:
ಹಿಮದ +ಗಾಳಿಯ +ಪಥವಿಡಿದು +ಮ
ಧ್ಯಮದ +ಪಾಂಡವನ್+ಐತರುತ +ಮುಂದ್
ಅಮಲ+ ಸರಸಿಯ +ತೀರದಲಿ +ಕೀಲಿಸಿದ +ಮಗ್ಗುಲಲಿ
ಯಮಳರ್+ಒರಗಿರೆ +ಕಂಡು +ಮನದಲಿ
ತಮವ +ಹಿಡಿದನು +ನೀರು+ಕುಡಿದೀ
ಮಮತೆ+ ಮಿಗಲಾರೈವೆನೆನುತ್+ಇಳಿದನು+ ಸರೋವರವ

ಅಚ್ಚರಿ:
(೧) ಅರ್ಜುನನ ಮನಸ್ಥಿತಿ – ಯಮಳರೊರಗಿರೆ ಕಂಡು ಮನದಲಿ ತಮವ ಹಿಡಿದನು