ಪದ್ಯ ೪೨: ದುರ್ಯೋಧನನು ಯುದ್ಧಕ್ಕೆ ಹೇಗೆ ಸಿದ್ಧನಾದನು?

ಘೋಳಿಸಿದ ಕರ್ಪೂರ ಕಸ್ತುರಿ
ವೀಳೆಯವ ಕೊಂಡೆದ್ದು ಸಮರಾ
ಭೀಳ ಗದೆಯನು ತಿರುಹಿದನು ಪಯಪಾಡನಾರೈದು
ಆಳು ಕವಿಯಲಿ ರಾವುತರ ಸಮ
ಪಾಳಿಯಲಿ ಬಿಡಿ ಜೋದರಾನೆಯ
ತೂಳಿಸಲಿ ಸಮರಥರು ಸರಳಿಸಿಯೆಂದನಾ ಭೂಪ (ಗದಾ ಪರ್ವ, ೫ ಸಂಧಿ, ೪೨ ಪದ್ಯ)

ತಾತ್ಪರ್ಯ:
ಕರ್ಪೂರ ಕಸ್ತೂರಿಗಳಿಂದ ಕೂಡಿದ ವೀಳೆಯವನ್ನು ಹಾಕಿಕೊಂಡು ಸಮರ ಭಯಂಕರವಾದ ಗದೆಯನ್ನು ಪಾದಗಳ ವಿನ್ಯಾಸ ಸಹಿತವಾಗಿ ಪರೀಕ್ಷಿಸಿದನು. ಯೋಧರು ನನ್ನ ಮೇಲೆ ಮುತ್ತಿಗೆ ಹಾಕಲಿ; ರಾವುತರನ್ನು ಸರದಿಯ ಮೇಲೆ ಕಳಿಸಿರಿ, ಜೋದರು ಆನೆಗಳೊಡನೆ ನನ್ನ ಮೇಲೆ ನುಗ್ಗಲಿ; ಸಮರಥರು ಬಾಣಪ್ರಯೋಗ ಮಾಡಲಿ ಎಂದನು.

ಅರ್ಥ:
ಘೋಳಿಸು: ಉರುಳಾಡಿಸು, ತೋಯಿಸು; ಕರ್ಪೂರ: ಸುಗಂಧದ ದ್ರವ್ಯ; ಕಸ್ತುರಿ: ಕತ್ತುರಿ, ಮೃಗಮದ; ವೀಳೆ: ತಾಂಬೂಲ; ಸಮರ: ಯುದ್ಧ; ಭೀಳ: ಭಯಂಕರವಾದ; ಗದೆ: ಮುದ್ಗರ; ತಿರುಹು: ತಿರುಗಿಸು; ಪಯಪಾಡು: ಹೆಜ್ಜೆ ಹಾಕುವ ರೀತಿ; ಆಳು: ಸೇವಕ; ಕವಿ: ಆವರಿಸು; ರಾವುತ: ಕುದುರೆ ಸವಾರ; ಸಮ: ಸಮಾನವಾದ; ಪಾಳಿ: ಸರದಿ, ಸಾಲು; ಬಿಡಿ: ಪ್ರತ್ಯೇಕವಾದುದು; ಜೋದರು: ಯೋಧ, ಆನೆ ಮೇಲೆ ಕೂತು ಯುದ್ಧಮಾಡುವವ; ಆನೆ: ಗಜ; ತೂಳಿಸು: ಮೆಟ್ಟುವಿಕೆ, ತುಳಿತ; ಸಮರಥ: ಪರಾಕ್ರಮಿ; ಸರಳಿಸಿ: ಬಾಣಪ್ರಯೋಗ ಮಾಡು; ಭೂಪ: ರಾಜ;

ಪದವಿಂಗಡಣೆ:
ಘೋಳಿಸಿದ+ ಕರ್ಪೂರ +ಕಸ್ತುರಿ
ವೀಳೆಯವ +ಕೊಂಡೆದ್ದು +ಸಮರಾ
ಭೀಳ +ಗದೆಯನು +ತಿರುಹಿದನು+ ಪಯಪಾಡನ್+ಆರೈದು
ಆಳು +ಕವಿಯಲಿ+ ರಾವುತರ +ಸಮ
ಪಾಳಿಯಲಿ +ಬಿಡಿ +ಜೋದರಾನೆಯ
ತೂಳಿಸಲಿ +ಸಮರಥರು +ಸರಳಿಸಿಯೆಂದನಾ +ಭೂಪ

ಅಚ್ಚರಿ:
(೧) ಕ ಕಾರದ ತ್ರಿವಳಿ ಪದ – ಕರ್ಪೂರ ಕಸ್ತುರಿವೀಳೆಯವ ಕೊಂಡೆದ್ದು

ಪದ್ಯ ೧: ಸಂಜಯನು ಯಾವ ಮೂರು ರಥಗಳನ್ನು ನೋಡಿದನು?

ಕೇಳು ಜನಮೇಜಯ ಧರಿತ್ರೀ
ಪಾಲ ಸಂಜಯ ಬರುತ ಕುರುಭೂ
ಪಾಲನರಕೆಯ ಭೀಮನವರಿವರಲ್ಲಲೇ ಎನುತ
ಮೇಲೆ ಹತ್ತಿರ ಬರಬರಲು ಸಮ
ಪಾಳಿಯಲಿ ರಥ ಮೂರರಲಿ ಕೃಪ
ಕೋಲ ಗುರುವಿನ ಮಗನಲಾ ಎನುತಲ್ಲಿಗೈತಂದ (ಗದಾ ಪರ್ವ, ೪ ಸಂಧಿ, ೧ ಪದ್ಯ)

ತಾತ್ಪರ್ಯ:
ರಾಜ ಜನಮೇಜಯ ಕೇಳು, ಕೃಪಚಾರ್ಯ ಮುಂತಾದವರುಗಳನ್ನು ನೋಡಿ ಇವರು ಭೀಮನ ಕಡೆಯವರಲ್ಲವಲ್ಲ ಎಂದು ಬೆದರುತ್ತಾ ಹತ್ತಿರಕ್ಕೆ ಬಂದು ಮೂರೂ ರಥಗಳು ಒಂದೇ ಗತಿಯಲ್ಲಿ ಬರುವುದನ್ನೂ ಅದರಲ್ಲಿ ಕೃಪ ಅಶ್ವತ್ಥಾಮರಿರುವುದನ್ನು ಕಂಡು ಹತ್ತಿರಕ್ಕೆ ಬಂದನು.

ಅರ್ಥ:
ಕೇಳು: ಆಲಿಸು; ಧರಿತ್ರೀಪಾಲ: ರಾಜ; ಬರುತ: ಆಗಮಿಸು; ಭೂಪಾಲ: ರಾಜ; ಅರಕೆ: ಕೊರತೆ, ನ್ಯೂನತೆ; ಹತ್ತಿರ: ಸಮೀಪ; ಸಮಪಾಳಿ: ಒಂದೇ ಗತಿ; ರಥ: ಬಂಡಿ; ಕೋಲ: ಬಾಣ; ಗುರು: ಆಚಾರ್ಯ; ಮಗ: ಸುತ; ಐತಂದ: ಬಂದುಸೇರು;

ಪದವಿಂಗಡಣೆ:
ಕೇಳು +ಜನಮೇಜಯ +ಧರಿತ್ರೀ
ಪಾಲ +ಸಂಜಯ +ಬರುತ +ಕುರು+ಭೂ
ಪಾಲನ್+ಅರಕೆಯ +ಭೀಮನವರಿವರಲ್ಲಲೇ+ ಎನುತ
ಮೇಲೆ +ಹತ್ತಿರ +ಬರಬರಲು +ಸಮ
ಪಾಳಿಯಲಿ +ರಥ +ಮೂರರಲಿ +ಕೃಪ
ಕೋಲ +ಗುರುವಿನ +ಮಗನಲಾ +ಎನುತ್+ಅಲ್ಲಿಗ್+ಐತಂದ

ಅಚ್ಚರಿ:
(೧) ಧರಿತ್ರೀಪಾಲ, ಭೂಪಾಲ – ಸಮಾನಾರ್ಥಕ ಪದ

ಪದ್ಯ ೭೫: ಕೃಷ್ಣನು ಜರಾಸಂಧನಿಗೆ ಭೀಮಾರ್ಜುನರನ್ನು ಹೇಗೆ ಪರಿಚಯಮಾಡಿದನು?

ಕೇಳಿ ಮಾಡುವುದೇನು ತಾನಸು
ರಾಳಿ ಧೂಳೀಪಟಲ ವೈರಿ ನೃ
ಪಾಲ ಚೌಪಟಮಲ್ಲನೀತನು ಭೀಮಸೇನಕಣಾ
ಭಾಳನೇತ್ರನ ಭುಜಬಲದ ಸಮ
ಪಾಳಿಯರ್ಜುನನೀತನೇಳಾ
ಕಾಳಗವ ಕೊಡು ನಮ್ಮೊಳೊಬ್ಬರಿಗೆಂದನಸುರಾರಿ (ಸಭಾ ಪರ್ವ, ೨ ಸಂಧಿ, ೭೫ ಪದ್ಯ)

ತಾತ್ಪರ್ಯ:
ನಮ್ಮ ನೈಜತನವನ್ನು ಕೇಳಿ ನೀನು ಮಾಡುವುದಾದರು ಏನು? ನಾನು ರಾಕ್ಷಸರನ್ನು ಧೂಳೀಪಟಮಾಡಿದ ಕೃಷ್ಣ, ಶತ್ರುರಾಜರು ನಾಲ್ಕು ಕಡೆಯಿಂದ ಮುತ್ತಿದರೂ ಅವರನ್ನು ನಿಗ್ರಹಿಸಬಲ್ಲ ಭೀಮನಿವನು. ಶಿವನ ಸರಿಸಮಾನ ಭುಜಬಲವಿರವ ಅರ್ಜುನನು ಈತ. ಎದ್ದೇಳು, ನಮ್ಮೂವರಲ್ಲಿ ಯಾರೊಬ್ಬರ ಜೊತೆ ಯುದ್ಧಮಾಡು ಎಂದು ಕೃಷ್ಣನು ಹೇಳಿದನು.

ಅರ್ಥ:
ಕೇಳು: ಆಲಿಸು; ಅಸುರಾಳಿ: ಕೃಷ್ಣ; ಅಸುರ: ರಾಕ್ಷಸ; ಅಳಿ: ಸಂಹಾರ, ನಾಶ; ಧೂಳಿ: ಮಣ್ಣಿನಪುಡಿ, ಧೂಳು; ಧೂಳೀಪಟಲ: ಧೂಳಿನ ಸಮೂಹ; ಪಟಳ: ಸಮೂಹ,ಗುಂಪು; ವೈರಿ: ಶತ್ರು; ನೃಪಾಲ: ರಾಜ; ಚೌಪಟಮಲ್ಲ: ಕುಸ್ತಿಪಟು, ಜಟ್ಟಿ; ಚೌಪಟಮಲ್ಲ: ನಾಲ್ಕು ದಿಕ್ಕಿನಲ್ಲಿಯೂ ಯುದ್ಧ ಮಾಡುವವನು; ಭಾಳ: ಹಣೆ; ನೇತ್ರ: ಕಣ್ಣು; ಭುಜಬಲ: ಶೌರ್ಯ; ಸಮ: ಸದೃಶವಾದುದು; ಕಾಳಗ: ಯುದ್ಧ; ಅಸುರಾರಿ: ಕೃಷ್ಣ;

ಪದವಿಂಗಡಣೆ:
ಕೇಳಿ +ಮಾಡುವುದೇನು +ತಾನ್+ಅಸು
ರಾಳಿ +ಧೂಳೀಪಟಲ +ವೈರಿ +ನೃ
ಪಾಲ +ಚೌಪಟಮಲ್ಲನ್ +ಈತನು +ಭೀಮಸೇನ+ಕಣಾ
ಭಾಳ+ನೇತ್ರನ +ಭುಜಬಲದ+ ಸಮ
ಪಾಳಿಯ+ ಅರ್ಜುನನ್+ಈತನ್+ಏಳಾ
ಕಾಳಗವ +ಕೊಡು +ನಮ್ಮೊಳ್+ಒಬ್ಬರಿಗ್+ಎಂದನ್+ಅಸುರಾರಿ

ಅಚ್ಚರಿ:
(೧) ಮೂವರನ್ನು ಪರಿಚಯಿಸುವ ಬಗೆ – ಧೂಳೀಪಟ, ಚೌಪಟಮಲ್ಲ, ಭುಜಬಲದ ಸಮಪಾಳಿ
(೨) ಕೇಳಿ, ಅಸುರಾಳಿ, ಸಮಪಾಳಿ – ಪ್ರಾಸ ಪದಗಳ ಬಳಕೆ
(೩) ಕೇಳಿ ಇಂದ ಪದ್ಯ ಶುರುವಾಗಿ, ಕೊನೆಯಲ್ಲಿ ಹೇಳಿದನು ಇಂದ ಕೊನೆಗೊಳ್ಳುವುದು