ಪದ್ಯ ೫೯: ಧರ್ಮಜನ ಸಹಾಯಕ್ಕೆ ಯಾರು ಬಂದರು?

ಅಕಟಕಟ ಧರ್ಮಜನನೀ ಕಂ
ಟಕಕೆ ಕೈವರ್ತಿಸಿದರೇ ಪಾ
ತಕರು ಪಾಂಡವರೆನುತ ಕುರುಬಲವೆಲ್ಲ ಸಮತಳಿಸೆ
ವಿಕಟ ರೋಷಶಿಖಿ ಸ್ಫುಲಿಂಗ
ಪ್ರಕಟ ಭೀಷಣಸಹಿತ ಕೌಕ್ಷೇ
ಯಕವ ಖಂಡಿಸಿ ಧರೆ ಬಿರಿಯೆ ಬೊಬ್ಬಿರಿದನಾ ಭೀಮ (ಶಲ್ಯ ಪರ್ವ, ೩ ಸಂಧಿ, ೫೯ ಪದ್ಯ)

ತಾತ್ಪರ್ಯ:
ಶಲ್ಯನ ಆಟೋಪವನ್ನು ಕಂಡು ಪಾಂಡವರು ಪಾಪಿಗಳು, ಧರ್ಮಜನನ್ನು ಶಲ್ಯನ ಕೈಗೆ ಕೊಟ್ಟರು ಎಂದು ಸೇನೆಯು ಗೊಂದಲಕ್ಕೀಡಾಯಿತು. ಆಗ ಭೀಮನು ಮಹಾಕೋಪದಿಂದ ಕಿಡಿಕಾರುತ್ತಾ ಶಲ್ಯನ ಖಡ್ಗವನ್ನು ಕತ್ತರಿಸಿ ಗರ್ಜಿಸಿದನು.

ಅರ್ಥ:
ಅಕಟಕಟ: ಅಯ್ಯೋ; ಕಂಟಕ: ತೊಂದರೆ; ವರ್ತಿಸು: ವಿನಿಯೋಗವಾಗು; ಪಾತಕ: ಪಾಪಿ; ಬಲ: ಸೈನ್ಯ; ಸಮತಳ: ಮಟ್ಟಮಾಡು; ವಿಕಟ: ಕುರೂಪಗೊಂಡ; ರೋಷ: ಕೋಪ; ಶಿಖಿ: ಬೆಂಕಿ; ಸ್ಫುಲಿಂಗ: ಬೆಂಕಿಯ ಕಿಡಿ; ಪ್ರಕಟ: ಸ್ಪಷ್ಟವಾದುದು; ಭೀಷಣ: ಭಯಂಕರವಾದ; ಸಹಿತ: ಜೊತೆ; ಕೌಕ್ಷೇಯಕ: ಕತ್ತಿ, ಖಡ್ಗ; ಖಂಡಿಸು: ತುಂಡು ಮಾಡು; ಧರೆ: ಭೂಮಿ; ಬಿರಿ: ಬಿರುಕು, ಸೀಳು; ಬೊಬ್ಬಿರಿ: ಗರ್ಜಿಸು;

ಪದವಿಂಗಡಣೆ:
ಅಕಟಕಟ+ ಧರ್ಮಜನನ್+ಈ+ ಕಂ
ಟಕಕೆ +ಕೈವರ್ತಿಸಿದರೇ +ಪಾ
ತಕರು +ಪಾಂಡವರ್+ಎನುತ +ಕುರುಬಲವೆಲ್ಲ+ ಸಮತಳಿಸೆ
ವಿಕಟ+ ರೋಷಶಿಖಿ+ ಸ್ಫುಲಿಂಗ
ಪ್ರಕಟ +ಭೀಷಣ+ಸಹಿತ+ ಕೌಕ್ಷೇ
ಯಕವ +ಖಂಡಿಸಿ +ಧರೆ +ಬಿರಿಯೆ +ಬೊಬ್ಬಿರಿದನಾ +ಭೀಮ

ಅಚ್ಚರಿ:
(೧) ಗರ್ಜನೆಯನ್ನು ವರ್ಣಿಸುವ ಪರಿ – ಧರೆ ಬಿರಿಯೆ ಬೊಬ್ಬಿರಿದನಾ ಭೀಮ
(೨) ಭೀಮನು ಬಂದ ಪರಿ – ವಿಕಟ ರೋಷಶಿಖಿ ಸ್ಫುಲಿಂಗ ಪ್ರಕಟ ಭೀಷಣಸಹಿತ ಕೌಕ್ಷೇಯಕವ ಖಂಡಿಸಿ
(೩) ವಿಕಟ, ಪ್ರಕಟ, ಅಕಟ – ಪ್ರಾಸ ಪದಗಳು