ಪದ್ಯ ೮: ಧರ್ಮಜನು ಯಾರನ್ನು ಸನ್ಮಾನಿಸಿದನು?

ವರ ಮುನೀಂದ್ರರ ನಿಖಿಳ ದೇಶಾಂ
ತರದ ಭೂಸುರವರ್ಗವನು ಸ
ತ್ಕರಿಸಿದನು ಗೋ ಭೂಮಿ ವಸನ ಹಿರಣ್ಯದಾನದಲಿ
ಪರಿಜನವ ಪುರಜನವ ರತ್ನಾ
ಕರಪರೀತ ಮಹೀಜನವನಾ
ದರಿಸಿದನು ವೈಭವವಿಹಿತ ಸನ್ಮಾನ ದಾನದಲಿ (ಗದಾ ಪರ್ವ, ೧೩ ಸಂಧಿ, ೮ ಪದ್ಯ)

ತಾತ್ಪರ್ಯ:
ಮುನೀಂದ್ರರು, ಎಲ್ಲಾ ದೇಶಗಲ ಬ್ರಾಹ್ಮಣರು, ಇವರೆಲ್ಲರಿಗೆ ಗೋ, ಭೂಮಿ, ವಸ್ತ್ರ, ಬಂಗಾರಗಲ ದಾನವನ್ನು ಕೊಟ್ಟು ಧರ್ಮಜನು ಸತ್ಕರಿಸಿದನು. ಪರಿಜನರು ಪುರಜನರು, ಸಮಸ್ತ ದೇಶಗಳ ಜನರನ್ನು ಧರ್ಮಜನು ವಿಹಿತವಾಗಿ ವೈಭವದಿಂದ ಸನ್ಮಾನಿಸಿದನು.

ಅರ್ಥ:
ವರ: ಶ್ರೇಷ್ಠ; ಮುನಿ: ಋಷಿ; ನಿಖಿಳ: ಎಲ್ಲಾ; ದೇಶ: ರಾಷ್ಟ್ರ; ಭೂಸುರ: ಬ್ರಾಹ್ಮಣ; ವರ್ಗ: ಗುಂಪು; ಸತ್ಕರಿಸು: ಆದರಿಸು; ಗೋ: ಆಕಳು; ಭೂಮಿ: ಅವನಿ; ವಸನ: ವಸ್ತ; ಹಿರಣ್ಯ: ಚಿನ್ನ; ದಾನ: ನೀಡುವ ಪದಾರ್ಥ; ಪರಿಜನ: ಬಂಧುಜನ; ಪುರಜನ: ಊರಿನ ಜನ; ರತ್ನಾಕರ: ಸಮುದ್ರ; ರತ್ನಾಕರಪರೀತ: ಸಮುದ್ರದಿಂದ ಸುತ್ತವರಿಯಲ್ಪಟ್ಟ; ಮಹೀ: ಭೂಮಿ; ಜನ: ಗುಂಪು; ಆದರಿಸು: ಗೌರವಿಸು; ವೈಭವ: ಶಕ್ತಿ, ಸಾಮರ್ಥ್ಯ; ಸನ್ಮಾನ: ಗೌರವ;

ಪದವಿಂಗಡಣೆ:
ವರ +ಮುನೀಂದ್ರರ+ ನಿಖಿಳ +ದೇಶಾಂ
ತರದ +ಭೂಸುರ+ವರ್ಗವನು +ಸ
ತ್ಕರಿಸಿದನು +ಗೋ +ಭೂಮಿ +ವಸನ +ಹಿರಣ್ಯ+ದಾನದಲಿ
ಪರಿಜನವ +ಪುರಜನವ +ರತ್ನಾ
ಕರಪರೀತ +ಮಹೀ+ಜನವನ್
ಆದರಿಸಿದನು +ವೈಭವವಿಹಿತ +ಸನ್ಮಾನ +ದಾನದಲಿ

ಅಚ್ಚರಿ:
(೧) ಸತ್ಕರಿಸು, ಆದರಿಸು- ಸಾಮ್ಯಾರ್ಥ ಪದ

ಪದ್ಯ ೮೦: ಧರ್ಮಜನು ಹೇಗೆ ಎಲ್ಲರನ್ನು ಸತ್ಕರಿಸಿದನು?

ಯಾದವರು ಪಾಂಚಾಲ ಮತ್ಸ್ಯರು
ಮೇದಿನೀಪತಿ ಪಾಂಡು ಸೋಮಕ
ರಾದಿಯಾದನ್ವಯವನಗಣಿತ ಬಂಧು ಬಳಗವನು
ಆದರಿಸಿದನು ವಿನಯದಲಿ ವಿ
ತ್ತಾದಿ ಸತ್ಕಾರದಲಿ ದಣಿದುದು
ಮೇದಿನೀ ಜನವವನಿಪನ ಸನ್ಮಾನ ದಾನದಲಿ (ವಿರಾಟ ಪರ್ವ, ೧೧ ಸಂಧಿ, ೮೦ ಪದ್ಯ)

ತಾತ್ಪರ್ಯ:
ಯಾದವರು, ಪಾಂಚಾಲರು, ಮತ್ಸ್ಯರು, ಪಾಂಡು, ಸೋಮಕ ಮೊದಲಾದವರನ್ನು ಲೆಕ್ಕವಿಲ್ಲದಷ್ಟು ಬಂಧು ಬಳಗದವರನ್ನು ಧರ್ಮಜನು ಹಣ ಮೊದಲಾದ ವಸ್ತುಗಳಿಂದ ಸತ್ಕರಿಸಿದನು. ಸರ್ವರೂ ಧರ್ಮಜನ ಸನ್ಮಾನದಿಂದ ತೃಪ್ತರಾಗಿ ಸಂತೋಷ ಪಟ್ಟರು.

ಅರ್ಥ:
ಮೇದಿನೀಪತಿ: ರಾಜ; ಆದಿ: ಮುಂತಾದ; ಅನ್ವಯ: ವಂಶ, ಸಂಬಮ್ಧ; ಅಗಣಿತ: ಎಣಿಕೆಯಿಲ್ಲದ; ಬಳಗ: ಗುಂಪು; ಆದರಿಸು: ಗೌರವಿಸು; ವಿನಯ: ಸೌಜನ್ಯ; ವಿತ್ತ: ಹಣ; ಸತ್ಕಾರ: ಗೌರವ, ಉಪಚಾರ; ದಣಿದು: ಆಯಾಸಗೊಳ್ಳು; ಜನ: ಮನುಷ್ಯ, ಗುಂಪು; ಅವನಿಪ: ರಾಜ; ಸನ್ಮಾನ: ಗೌರವ, ಮಾನ್ಯತೆ; ದಾನ: ಚತುರೋಪಾಯಗಳಲ್ಲಿ ಒಂದು, ನೀಡು;

ಪದವಿಂಗಡಣೆ:
ಯಾದವರು +ಪಾಂಚಾಲ +ಮತ್ಸ್ಯರು
ಮೇದಿನೀಪತಿ+ ಪಾಂಡು +ಸೋಮಕ
ರಾದಿಯಾದ್+ಅನ್ವಯವನ್+ಅಗಣಿತ +ಬಂಧು +ಬಳಗವನು
ಆದರಿಸಿದನು +ವಿನಯದಲಿ +ವಿ
ತ್ತಾದಿ +ಸತ್ಕಾರದಲಿ +ದಣಿದುದು
ಮೇದಿನೀ+ ಜನವ್+ಅವನಿಪನ +ಸನ್ಮಾನ +ದಾನದಲಿ

ಅಚ್ಚರಿ:
(೧) ಸತ್ಕಾರವನ್ನು ಮಾಡಿದ ಪರಿ – ಆದರಿಸಿದನು ವಿನಯದಲಿ ವಿತ್ತಾದಿ ಸತ್ಕಾರದಲಿ ದಣಿದುದು ಮೇದಿನೀ – ಭೂಮಿಯೇ ಆಯಾಸಗೊಂಡಿತು ಎಂದು ಹೇಳುವ ಪರಿ

ಪದ್ಯ ೫೯: ಅರ್ಜುನನ ಏಳಿಗೆಗೆ ಯಾರ ಆಶೀರ್ವಾದ ಕಾರಣ?

ಇದಿರುವಂದನು ಪದಯುಗದಲೆರ
ಗಿದರೆ ತೆಗೆದಪ್ಪಿದನು ಸನ್ಮಾ
ನದ ಸಘಾಡವನೇನನೆಂಬೆನು ಸಾವಿರಾಲಿಗಳ
ಹೊದರಿನಲಿ ಹೊದಿಸಿದನು ಮಿಗೆ ನಾ
ದಿದನು ಹರುಷಾಶ್ರುಗಳಲೀಯ
ಭ್ಯುದಯವೇ ನಿಮ್ಮಡಿಯ ಕರುಣ ಕಟಾಕ್ಷಕೃತಿಯೆಂದ (ಅರಣ್ಯ ಪರ್ವ, ೧೩ ಸಂಧಿ, ೫೯ ಪದ್ಯ)

ತಾತ್ಪರ್ಯ:
ನನ್ನೆದುರುಬಂದ ಸುರಪತಿಗೆ ನಾನು ನಮಸ್ಕರಿಸಿದೆನು, ಅವನು ನನ್ನನ್ನು ಮೇಲಕ್ಕೆತ್ತಿ ಅಪ್ಪಿಕೊಂಡು, ಸಾವಿರ ಕಣ್ಣುಗಳ ಸ್ನೇಹ ದೃಷ್ಟಿಯಿಂದ ನನ್ನನ್ನು ನೋಡಿದನು. ಅಣ್ಣಾ ಈ ನನ್ನ ಏಳಿಗೆಯು ನಿಮ್ಮ ಪಾದಗಳ ಕರುಣಕಟಾಕ್ಷದ ಕಾರ್ಯ ಎಂದು ಅರ್ಜುನನು ಧರ್ಮಜನಿಗೆ ಹೇಳಿದನು.

ಅರ್ಥ:
ಇದಿರು: ಎದುರು; ವಂದನು: ಬಂದನು; ಪದಯುಗ: ಚರಣದ್ವಯ; ಎರಗು: ನಮಸ್ಕರಿಸು; ಅಪ್ಪು: ಆಲಿಂಗನ; ಸನ್ಮಾನ: ವಿಶೇಷವಾದ ಗೌರವ; ಸಘಾಡ: ರಭಸ, ವೇಗ; ಸಾವಿರ: ಸಹಸ್ರ; ಆಲಿ: ಕಣ್ಣು; ಹೊದರು: ಗುಂಪು, ಸಮೂಹ; ಮಿಗೆ: ಅಧಿಕ; ನಾದು: ಒಲವು; ಹರುಷ: ಸಂತಸ; ಆಶ್ರು: ಕಣ್ಣಿರು; ಅಭ್ಯುದಯ: ಏಳಿಗೆ; ನಿಮ್ಮಡಿ: ನಿಮ್ಮ ಅಧೀನ; ಕರುಣ: ದಯೆ; ಕಟಾಕ್ಷ: ಅನುಗ್ರಹ; ಕೃತಿ: ಕಾರ್ಯ;

ಪದವಿಂಗಡಣೆ:
ಇದಿರು+ಬಂದನು+ ಪದಯುಗದಲ್+ಎರ
ಗಿದರೆ+ ತೆಗೆದ್+ಅಪ್ಪಿದನು +ಸನ್ಮಾ
ನದ +ಸಘಾಡವನ್+ಏನನೆಂಬೆನು +ಸಾವಿರ+ಆಲಿಗಳ
ಹೊದರಿನಲಿ+ ಹೊದಿಸಿದನು+ ಮಿಗೆ+ ನಾ
ದಿದನು +ಹರುಷ+ಆಶ್ರುಗಳಲ್+ಈ+
ಅಭ್ಯುದಯವೇ +ನಿಮ್ಮಡಿಯ +ಕರುಣ +ಕಟಾಕ್ಷ+ಕೃತಿಯೆಂದ

ಅಚ್ಚರಿ:
(೧) ಸ ಕಾರದ ಜೋಡಿ ಪದ – ಸನ್ಮಾನದ ಸಘಾಡ
(೨) ಪ್ರೀತಿಯನ್ನು ತೋರಿಸುವ ಪರಿ – ಸಾವಿರಾಲಿಗಳ ಹೊದರಿನಲಿ ಹೊದಿಸಿದನು ಮಿಗೆ ನಾ
ದಿದನು ಹರುಷಾಶ್ರುಗಳ್

ಪದ್ಯ ೭೨: ಪಂಡಿತನ ಲಕ್ಷಣವೇನು?

ಇದು ಸಮಾಹಿತವಿದು ಶುಭೋದಯ
ವಿದು ಸಕಲ ಪುರುಷಾರ್ಥ ಸಾಧನ
ವಿದು ಸುಜನ ಸನ್ಮಾನವಿದು ಸಂಸಾರ ಸೌಖ್ಯಫಲ
ಇದು ಸುಬಲವಿದಬಲ ವಿದಾಮ್ನಾ
ಯದ ಸುನಿಶ್ಚಯ ನೀತಿ ಕಾರ್ಯದ
ಹದನನರಿದಾಚರಿಸಬಲ್ಲವನವನೆ ಪಂಡಿತನು (ಉದ್ಯೋಗ ಪರ್ವ, ೩ ಸಂಧಿ, ೭೨ ಪದ್ಯ)

ತಾತ್ಪರ್ಯ:
ವಿದ್ವಾಂಸ (ತಿಳಿದವನ) ಲಕ್ಷಣಗಳನ್ನು ವಿದುರ ಇಲ್ಲಿ ವಿವರಿಸಿದ್ದಾರೆ. ಈ ಮೇಲೆ ಹೇಳಿದ ನೀತಿವಾಕ್ಯಗಳನ್ನು ತಿಳಿದವರು ಒಪ್ಪಿದ್ದಾರೆ, ಇದರಿಂದ ಶುಭವಾಗುತ್ತದೆ, ಇದರಿಂದ ಎಲ್ಲಾ ಪುರುಷಾರ್ಥಗಳ ಸಾಧನೆಯೂ ಆಗುತ್ತದೆ. ಇದರಿಂದ ಸಜ್ಜನರು ಸಂತೋಷಿಸುತ್ತಾರೆ, ಸಂಸಾರ ಸೌಖ್ಯವೇ ಇದಕ್ಕೆ ಫಲ. ಇದು ಬಲವಾದುದು ಹಾಗು ಇದು ದುರ್ಬಲವಾದುದು, ಇದು ವೇದ ವಿಹಿತವಾದದ್ದು ಎನ್ನುವುದನ್ನು ನಿಶ್ಚಯಿಸಿ ನೀತಿವಂತನಾಗಿ ಕಾರ್ಯವನ್ನಾಚರಿಸುವವನೇ ಪಂಡಿತನು.

ಅರ್ಥ:
ಸಮಾಹಿತ: ಒಟ್ಟುಗೂಡಿಸಿದ, ಕಲೆಹಾಕಿದ; ಶುಭ: ಮಂಗಳ; ಉದಯ: ಹುಟ್ಟು; ಸಕಲ: ಎಲ್ಲಾ; ಪುರುಷಾರ್ಥ: ಮನುಷ್ಯನು ಸಾಧಿಸಬೇಕಾದ ಧರ್ಮ, ಅರ್ಥ, ಕಾಮ ಮತ್ತು ಮೋಕ್ಷ ಎಂಬ ನಾಲ್ಕು ಪರಮಧ್ಯೇಯಗಳು; ಸಾಧನ: ಗುರಿಮುಟ್ಟುವ ಪ್ರಯತ್ನ; ಸುಜನ: ಒಳ್ಳೆಯ ಜನ; ಸನ್ಮಾನ: ಗೌರವ; ಸಂಸಾರ: ಲೌಕಿಕ ಜೀವನ, ಬದುಕು; ಸೌಖ್ಯ: ಸುಖ, ನೆಮ್ಮದಿ; ಫಲ:ಪ್ರಯೋಜನ, ಲಾಭ; ಸುಬಲ:ಬಲವಾದ; ಅಬಲ:ದುರ್ಬಲ; ನಿಶ್ಚಯ: ತೀರ್ಮಾನ; ನೀತಿ: ಮಾರ್ಗ ದರ್ಶನ; ಕಾರ್ಯ: ಕೆಲಸ; ಹದ: ರೀತಿ, ಸರಿಯಾದ ಸ್ಥಿತಿ; ಅರಿ: ತಿಳಿ; ಆಚರಿಸು: ಪಾಲಿಸು; ಬಲ್ಲವ: ತಿಳಿದವ; ಪಂಡಿತ: ವಿದ್ವಾಂಸ; ಆಮ್ನಾಯ: ವೇದ;

ಪದವಿಂಗಡಣೆ:
ಇದು+ ಸಮಾಹಿತವಿದು +ಶುಭೋದಯ
ವಿದು +ಸಕಲ+ ಪುರುಷಾರ್ಥ+ ಸಾಧನ
ವಿದು+ ಸುಜನ +ಸನ್ಮಾನವಿದು+ ಸಂಸಾರ +ಸೌಖ್ಯಫಲ
ಇದು +ಸುಬಲವ್+ಇದ್+ಅಬಲ +ವಿದ್+ಆಮ್ನಾ
ಯದ +ಸುನಿಶ್ಚಯ+ ನೀತಿ+ ಕಾರ್ಯದ
ಹದನನ್+ಅರಿದ್+ಆಚರಿಸಬಲ್ಲವನ್+ಅವನೆ +ಪಂಡಿತನು

ಅಚ್ಚರಿ:
(೧) ಇದು – ೧-೪ ಸಾಲಿನ ಮೊದಲ ಪದ
(೨) ಸ ಕಾರದಿಂದ ಶುರುವಾಗುವ ಪದಗಳು: ಸಮಾಹಿತ, ಸಾಧನ, ಸುಜನ, ಸನ್ಮಾನ, ಸಂಸಾರ, ಸೌಖ್ಯ, ಸುಬಲ, ಸುನಿಶ್ಚಯ

ಪದ್ಯ ೫೨: ರಾಜ್ಯದ ಜನರಿಂದ ತೆರಿಗೆಯನ್ನು ಹೇಗೆ ಸಂಗ್ರಹಿಸಬೇಕು?

ಫಲವಹುದು ಕೆಡಲೀಯದಳಿ ಪರಿ
ಮಳವ ಕೊಂಬಂದದಲೆ ನೀನಾ
ಳ್ವಿಕೆಯ ಕರದರ್ಥವನು ತೆಗೆವೈ ಪ್ರಜೆಯ ನೋಯಿಸದೆ
ಹಲವು ಸನ್ಮಾನದಲಿ ನಯದಲಿ
ಚಲಿಸದಿಪ್ಪಂದದಲಿ ರಾಜ್ಯವ
ನಿಲಿಸುವಭಿಮತ ಮಂತ್ರಿಯುಂಟೇ ರಾಯ ನಿನಗೆಂದ (ಸಭಾ ಪರ್ವ, ೧ ಸಂಧಿ, ೫೨ ಪದ್ಯ)

ತಾತ್ಪರ್ಯ:
ಕಾಯಿ ಹಣ್ಣಾಗುವುದನ್ನು ಹೂವಿನ ಸುವಾಸನೆಗೆ ತಪ್ಪಿಸಿಕೊಳ್ಳದ ದುಂಬಿಯಂತೆ, ನೀನು ಪ್ರಜೆಗಳನ್ನು ನೋಯಿಸದೆ ತೆರಿಗೆಯ ಹಣವನ್ನು ಸಂಗ್ರಹಿಸುತ್ತಿರುವೆಯಾ? ತಪ್ಪದ ಎಣಿಕೆ, ನೀತಿಗಳನ್ನು ಪ್ರಯೋಗಿಸಿ ರಾಜ್ಯವನ್ನು ಸುಭದ್ರವಾಗಿ ನಿಲಿಸುವ ಮಂತ್ರಿ ನಿನಗಿರುವರೆ, ಎಂದು ನಾರದರು ಕೇಳಿದರು.

ಅರ್ಥ:
ಫಲ: ಹಣ್ಣು; ಅಳಿ: ದುಂಬಿ; ಕೆಡಹು: ನಾಶಮಾಡು; ಪರಿಮಳ: ಸುವಾಸನೆ; ಕೊಂಬಂತೆ: ಕೊಂಡುಹೋಗುವಂತೆ; ಆಳ್ವಿಕೆ: ರಾಜ್ಯಭಾರ; ಕರ: ತೆರಿಗೆ; ಅರ್ಥ: ಹಣ; ತೆಗೆ: ತೆಗೆದುಕೊ; ಪ್ರಜೆ: ಜನ; ನೋವು: ವ್ಯಥೆ, ಬೇನೆ; ಹಲವು: ಬಹಳ; ಸನ್ಮಾನ:ಗೌರವ, ಮಾನ್ಯತೆ; ನಯ: ನುಣುಪು, ಮೃದುತ್ವ; ಚಲಿಸು: ಓಡಾಡು; ರಾಜ್ಯ: ರಾಷ್ಟ್ರ; ಅಭಿಮತ: ಅಭಿಪ್ರಾಯ; ಮಂತ್ರಿ: ಸಚಿವ; ರಾಯ: ರಾಜ;

ಪದವಿಂಗಡಣೆ:
ಫಲವಹುದು +ಕೆಡಲೀಯದ್+ಅಳಿ +ಪರಿ
ಮಳವ +ಕೊಂಬಂದದ್+ಅಲೆ+ ನೀನ್
ಆಳ್ವಿಕೆಯ +ಕರದ್+ಅರ್ಥವನು +ತೆಗೆವೈ +ಪ್ರಜೆಯ +ನೋಯಿಸದೆ
ಹಲವು +ಸನ್ಮಾನದಲಿ +ನಯದಲಿ
ಚಲಿಸದ್+ಇಪ್ಪಂದದಲಿ ರಾಜ್ಯವ
ನಿಲಿಸುವಭಿಮತ +ಮಂತ್ರಿಯುಂಟೇ +ರಾಯ +ನಿನಗೆಂದ

ಅಚ್ಚರಿ:
(೧) ಕಾಯಿ ಹಣ್ಣಾಗುವಿಕೆ, ದುಂಬಿ ಪುಷ್ಪದ ರಸವನ್ನು ಹೀರುವಿಕೆ – ಉಪಮಾನಗಳ ಪ್ರಯೋಗ
(೨) ಮಂತ್ರಿಯ ಲಕ್ಷಣ: ಸನ್ಮಾನ, ನಯ