ಪದ್ಯ ೭೬: ಶಿವನ ದರುಶನವನ್ನು ಯಾರು ಪಡೆದರು?

ಸನಕ ನಾರದ ಭೃಗು ಪರಾಶರ
ತನುಜ ಭಾರದ್ವಾಜ ಗೌತಮ
ಮುನಿ ವಸಿಷ್ಠ ಸನತ್ಕುಮಾರನು ಕಣ್ವನುಪಮನ್ಯು
ವನಕೆ ಬಂದರು ಪಾರ್ಥ ಕೇಳಿದು
ನಿನಗೆ ಸಿದ್ಧಿಗಡೆಮಗೆ ಲೇಸಾ
ಯ್ತೆನುತ ಮೈಯಿಕ್ಕಿದುದು ಹರನಂಘ್ರಿಯಲಿ ಮುನಿನಿಕರ (ಅರಣ್ಯ ಪರ್ವ, ೭ ಸಂಧಿ, ೭೬ ಪದ್ಯ)

ತಾತ್ಪರ್ಯ:
ಸನಕ, ನಾರದ, ಭೃಗು, ವೇದವ್ಯಾಸ, ಭಾರದ್ವಾಜ, ಗೌತಮ, ವಸಿಷ್ಠ, ಸನತ್ಕುಮಾರ, ಕಣ್ವ, ಉಪಮನ್ಯು ಮೊದಲಾದ ಋಷಿಗಳು ಇಂದ್ರಕೀಲ ವನಕ್ಕೆ ಬಂದು ಅರ್ಜುನನ ತಪಸ್ಸಿಗೆ ಮೆಚ್ಚಿ, ನಿನ್ನ ತಪಸ್ಸಿನ ಸಿದ್ಧಿಯಿಂದ ನಮಗೆಲ್ಲರಿಗೂ ಶಿವನ ದರುಶನವಾಗಿದೆ ಎಂದು ಹೇಳಿ, ಶಿವನ ಪಾದಗಳಿಗೆ ನಮಸ್ಕರಿಸಿದರು.

ಅರ್ಥ:
ತನುಜ: ಮಗ; ಮುನಿ: ಋಷಿ; ವನ: ಕಾಡು; ಬಂದು: ಆಗಮಿಸು; ಲೇಸು: ಒಳಿತು; ಮೈಯಿಕ್ಕು: ನಮಸ್ಕರಿಸು; ಹರ: ಶಿವ; ಅಂಘ್ರಿ: ಪಾದ; ನಿಕರ: ಗುಂಪು;

ಪದವಿಂಗಡಣೆ:
ಸನಕ +ನಾರದ +ಭೃಗು +ಪರಾಶರ
ತನುಜ +ಭಾರದ್ವಾಜ +ಗೌತಮ
ಮುನಿ +ವಸಿಷ್ಠ +ಸನತ್ಕುಮಾರನು +ಕಣ್ವನ್+ಉಪಮನ್ಯು
ವನಕೆ+ ಬಂದರು +ಪಾರ್ಥ +ಕೇಳ್+ಇದು
ನಿನಗೆ +ಸಿದ್ಧಿಗಡ್+ಎಮಗೆ +ಲೇಸಾ
ಯ್ತೆನುತ +ಮೈಯಿಕ್ಕಿದುದು +ಹರನ್+ಅಂಘ್ರಿಯಲಿ +ಮುನಿನಿಕರ

ಅಚ್ಚರಿ:
(೧) ಋಷಿಮುನಿಗಳ ಪರಿಚಯ – ಸನಕ, ನಾರದ, ಭೃಗು, ವೇದವ್ಯಾಸ, ಭಾರದ್ವಾಜ, ಗೌತಮ,
ವಸಿಷ್ಠ, ಸನತ್ಕುಮಾರ, ಕಣ್ವ, ಉಪಮನ್ಯು
(೨) ವೇದವ್ಯಾಸರನ್ನು ಪರಾಶರ ತನುಜ ಎಂದು ಕರೆದಿರುವುದು