ಪದ್ಯ ೭೬: ಶಿವನ ದರುಶನವನ್ನು ಯಾರು ಪಡೆದರು?

ಸನಕ ನಾರದ ಭೃಗು ಪರಾಶರ
ತನುಜ ಭಾರದ್ವಾಜ ಗೌತಮ
ಮುನಿ ವಸಿಷ್ಠ ಸನತ್ಕುಮಾರನು ಕಣ್ವನುಪಮನ್ಯು
ವನಕೆ ಬಂದರು ಪಾರ್ಥ ಕೇಳಿದು
ನಿನಗೆ ಸಿದ್ಧಿಗಡೆಮಗೆ ಲೇಸಾ
ಯ್ತೆನುತ ಮೈಯಿಕ್ಕಿದುದು ಹರನಂಘ್ರಿಯಲಿ ಮುನಿನಿಕರ (ಅರಣ್ಯ ಪರ್ವ, ೭ ಸಂಧಿ, ೭೬ ಪದ್ಯ)

ತಾತ್ಪರ್ಯ:
ಸನಕ, ನಾರದ, ಭೃಗು, ವೇದವ್ಯಾಸ, ಭಾರದ್ವಾಜ, ಗೌತಮ, ವಸಿಷ್ಠ, ಸನತ್ಕುಮಾರ, ಕಣ್ವ, ಉಪಮನ್ಯು ಮೊದಲಾದ ಋಷಿಗಳು ಇಂದ್ರಕೀಲ ವನಕ್ಕೆ ಬಂದು ಅರ್ಜುನನ ತಪಸ್ಸಿಗೆ ಮೆಚ್ಚಿ, ನಿನ್ನ ತಪಸ್ಸಿನ ಸಿದ್ಧಿಯಿಂದ ನಮಗೆಲ್ಲರಿಗೂ ಶಿವನ ದರುಶನವಾಗಿದೆ ಎಂದು ಹೇಳಿ, ಶಿವನ ಪಾದಗಳಿಗೆ ನಮಸ್ಕರಿಸಿದರು.

ಅರ್ಥ:
ತನುಜ: ಮಗ; ಮುನಿ: ಋಷಿ; ವನ: ಕಾಡು; ಬಂದು: ಆಗಮಿಸು; ಲೇಸು: ಒಳಿತು; ಮೈಯಿಕ್ಕು: ನಮಸ್ಕರಿಸು; ಹರ: ಶಿವ; ಅಂಘ್ರಿ: ಪಾದ; ನಿಕರ: ಗುಂಪು;

ಪದವಿಂಗಡಣೆ:
ಸನಕ +ನಾರದ +ಭೃಗು +ಪರಾಶರ
ತನುಜ +ಭಾರದ್ವಾಜ +ಗೌತಮ
ಮುನಿ +ವಸಿಷ್ಠ +ಸನತ್ಕುಮಾರನು +ಕಣ್ವನ್+ಉಪಮನ್ಯು
ವನಕೆ+ ಬಂದರು +ಪಾರ್ಥ +ಕೇಳ್+ಇದು
ನಿನಗೆ +ಸಿದ್ಧಿಗಡ್+ಎಮಗೆ +ಲೇಸಾ
ಯ್ತೆನುತ +ಮೈಯಿಕ್ಕಿದುದು +ಹರನ್+ಅಂಘ್ರಿಯಲಿ +ಮುನಿನಿಕರ

ಅಚ್ಚರಿ:
(೧) ಋಷಿಮುನಿಗಳ ಪರಿಚಯ – ಸನಕ, ನಾರದ, ಭೃಗು, ವೇದವ್ಯಾಸ, ಭಾರದ್ವಾಜ, ಗೌತಮ,
ವಸಿಷ್ಠ, ಸನತ್ಕುಮಾರ, ಕಣ್ವ, ಉಪಮನ್ಯು
(೨) ವೇದವ್ಯಾಸರನ್ನು ಪರಾಶರ ತನುಜ ಎಂದು ಕರೆದಿರುವುದು

ಪದ್ಯ ೧೫: ಜೈಮಿನಿ ಮುನಿಗಳು ಧರ್ಮಜನಿಗೆ ಏನು ಹೇಳಿದರು?

ಮುನಿಪನಾಶೀರ್ವದಿಸುತಾ ಯಮ
ತನಯ ಸರಿಯೇ ನಿನಗೆ ರಾಯರು
ಘನತರದ ಪುಣ್ಯಾತ್ಮ ನೀನುತ್ತಮಚಿರಿತ್ರನೆಲೆ
ದನುಜಮರ್ದನ ನಿಮ್ಮ ಸಹಚರ
ನೆನಿಸಿಕೊಂಡೊಡನಾಡಿದನು ಘನ
ಸನಕನಾರದಮುಖ್ಯರಿಂಗಿನಿತಿಲ್ಲ ಸುಖವೆಂದ (ಅರಣ್ಯ ಪರ್ವ, ೩ ಸಂಧಿ, ೧೫ ಪದ್ಯ)

ತಾತ್ಪರ್ಯ:
ಜೈಮಿನಿ ಮುನಿಗಳು ಆಗಮಿಸಲು ಧರ್ಮಜನು ಅವರಿಗೆ ನಮಸ್ಕರಿಸಿದನು, ಮುನಿಗಳು ಧರ್ಮಜನಿಗೆ ಆಶೀರ್ವದಿಸುತ್ತಾ, ಯುಧಿಷ್ಠಿರ ನಿನಗೆ ಸರಿಸಮರಾದ ರಾಜರೇ ಇಲ್ಲ. ನೀನು ಮಹಾಪುಣ್ಯಾತ್ಮ, ಉತ್ತಮ ಚರಿತೆವುಳ್ಳವನು, ಶ್ರೀ ಕೃಷ್ಣನು ನಿಮ್ಮ ಸಹಾರನಾಗಿದ್ದಾನೆ, ಸನಕಾದಿಗಳಿಗೂ, ನಾರದರಿಗೂ ಇಂತಹ ಸುಖವು ಸಿಗುವುದಿಲ್ಲ ಎಂದು ಹೇಳಿದರು.

ಅರ್ಥ:
ಮುನಿ: ಋಷಿ; ಆಶೀರ್ವಾದ: ಹರಕೆ; ತನಯ: ಮಗ; ಸರಿ: ಸಮಾನ; ರಾಯ: ರಾಜ; ಘನ: ಶ್ರೇಷ್ಠ; ಪುಣ್ಯಾತ್ಮ: ಸಜ್ಜನ; ಉತ್ತಮ: ಶ್ರೇಷ್ಠ; ಚರಿತ: ನಡವಳಿಕೆ; ದನುಜಮರ್ದನ: ರಾಕ್ಷಸರನ್ನು ಸಂಹಾರಮಾಡಿದ (ಕೃಷ್ಣ); ಸಹಚರ: ಸೇವಕ; ಆಡು: ಮಾತಾಡು; ಮುಖ್ಯ: ಪ್ರಮುಖ; ಸುಖ: ಸಂತೋಷ; ಇನಿತು: ಕೊಂಚ;

ಪದವಿಂಗಡಣೆ:
ಮುನಿಪನ್+ಆಶೀರ್ವದಿಸುತಾ+ ಯಮ
ತನಯ +ಸರಿಯೇ +ನಿನಗೆ +ರಾಯರು
ಘನತರದ +ಪುಣ್ಯಾತ್ಮ +ನೀನ್+ಉತ್ತಮ+ಚಿರಿತ್ರನ್+ಎಲೆ
ದನುಜಮರ್ದನ+ ನಿಮ್ಮ +ಸಹಚರನ್
ಎನಿಸಿಕೊಂಡ್+ಒಡನಾಡಿದನು+ ಘನ
ಸನಕ+ನಾರದ+ಮುಖ್ಯರಿಂಗ್+ಇನಿತಿಲ್ಲ+ ಸುಖವೆಂದ

ಅಚ್ಚರಿ:
(೧) ಯುಧಿಷ್ಠಿರನನ್ನು ಹೊಗಳುವ ಪರಿ – ಸರಿಯೇ ನಿನಗೆ ರಾಯರು, ಘನತರದ ಪುಣ್ಯಾತ್ಮನ್, ನೀನುತ್ತಮಚಿರಿತ್ರನ್

ಪದ್ಯ ೩೨: ವಿದ್ವಾಂಸರಿಗೆ ಯಾವ ತತ್ತ್ವವೇ ಜೀವನ?

ಮನುವರಿವನಜ ಬಲ್ಲನೀಶ್ವರ
ನೆರೆವ ನಾರದ ಮುನಿಪ ವರ್ಣಿಪ
ಮನದಿ ಸನಕ ಸನತ್ಸುಜಾತಾದ್ಯರಿಗಿದೇ ವ್ಯಸನ
ಮುನಿಗಳಿಗೆ ಮುಕ್ತರಿಗೆ ಕರ್ಮದ
ಕಣಿಗಳಿಗೆ ಕೋವಿದರಿಗಿದೆ ಜೀ
ವನವಿದೇಗತಿ ಪರಮವೈಷ್ಣವ ತತ್ತ್ವವಿದೆಯೆಂದ (ಸಭಾ ಪರ್ವ, ೧೦ ಸಂಧಿ, ೩೨ ಪದ್ಯ)

ತಾತ್ಪರ್ಯ:
ಸರ್ವವ್ಯಾಪಿಯಾದ ಹೆಚ್ಚಿನ ತತ್ವವಾದ ಶ್ರೀಕೃಷ್ಣನ ರೀತಿಯನ್ನು ನಿಜವನ್ನು ಮನುವು ಬಲ್ಲ, ಬ್ರಹ್ಮನುಬಲ್ಲ, ಶಿವನು ನೆನೆಯುತ್ತಾನೆ, ನಾರದನು ಕೀರ್ತಿಸುತ್ತಾನೆ. ಸನಕಾದಿಗಳಿಗೆ ಈ ತತ್ವವನ್ನು ಸ್ಮರಿಸುವದೇ ಗೀಳು ಆತ್ಮ ತತ್ತ್ವವನ್ನು ಮನನಮಾಡುವ ಮುನಿಗಳಿಗೆ ಆತ್ಮ ನಿಷ್ಠೆಯಲ್ಲಿ ನೆಲೆ ನಿಂತ ಜೀವನ್ಮುಕ್ತರಿಗೆ ವೈದಿಕ ಕರ್ಮ ನಿರತರಿಗೆ ತಿಳಿದ ವಿದ್ವಾಂಸರಿಗೆ ಈ ತತ್ತ್ವವೇ ಜೀವನ. ಅವರೆಲ್ಲಾ ಬಂದು ಸೇರುವುದು ಇಲ್ಲಿಯೇ ಎಂದು ಭೀಷ್ಮರು ತಿಳಿಸಿದರು.

ಅರ್ಥ:
ಅಜ: ಬ್ರಹ್ಮ; ಮನು: ಸ್ವಾಯಂಭು ಮನು; ಅರಿ: ತಿಳಿ; ಈಶ್ವರ: ಭಗವಂತ; ಬಲ್ಲ: ತಿಳಿ; ನೆನೆ: ಜ್ಞಾಪಿಸಿಕೊಳ್ಳು, ಸ್ಮರಿಸು; ಮುನಿ: ಋಷಿ; ವರ್ಣಿಪ: ಮನ: ಮನಸ್ಸು; ಆದಿ: ಮುಂತಾದ; ವ್ಯಸನ: ಗೀಳು, ಚಟ; ಮುಕ್ತ: ಬಿಡುಗಡೆ ಹೊಂದಿದವನು; ಕರ್ಮ: ಕೆಲಸ; ಕಣಿ: ನೋಟ, ಕಾಣ್ಕೆ; ಕೋವಿದ: ವಿದ್ವಾಂಸ, ಪಂಡಿತ; ಜೀವನ: ಬಾಳು, ಬದುಕು; ಗತಿ: ಅವಸ್ಥೆ; ಪರಮ: ಶ್ರೇಷ್ಠ; ವೈಷ್ಣವ: ವಿಷ್ಣುಭಕ್ತ; ತತ್ವ: ಪರಮಾತ್ಮನ ಸ್ವರೂಪವೇ ಆಗಿರುವ ಆತ್ಮನ ಸ್ವರೂಪ

ಪದವಿಂಗಡಣೆ:
ಮನುವ್+ಅರಿವನ್+ಅಜ +ಬಲ್ಲನ್+ಈಶ್ವರ
ನೆರೆವ+ ನಾರದ+ ಮುನಿಪ+ ವರ್ಣಿಪ
ಮನದಿ +ಸನಕ+ ಸನತ್ಸುಜಾತಾದ್ಯರಿಗ್+ಇದೇ +ವ್ಯಸನ
ಮುನಿಗಳಿಗೆ +ಮುಕ್ತರಿಗೆ +ಕರ್ಮದ
ಕಣಿಗಳಿಗೆ+ ಕೋವಿದರಿಗಿದೆ +ಜೀ
ವನವ್+ಇದೇಗತಿ+ ಪರಮವೈಷ್ಣವ +ತತ್ತ್ವವಿದೆಯೆಂದ