ಪದ್ಯ ೨೩: ಭೀಷ್ಮರು ಯಾರು ದುರ್ಬಲರೆಂದು ಹೇಳಿದರು?

ದೈವ ಬಲವವರಲ್ಲಿ ನೀವೇ
ದೈವ ಹೀನರು ಧರ್ಮಪರರವ
ರೈವರೂ ಸತ್ಪುರುಷಶೀಲರು ನೀವಧಾರ್ಮಿಕರು
ಮುಯ್ವನಾನುವುದವರ್ಗೆ ಭುವನವು
ಬೈವುದೈ ನಿಮ್ಮಿನಿಬರನು ನಿಮ
ಗೈವಡಿಯ ಸಹಸಿಗಳವರು ದುರ್ಬಲರು ನೀವೆಂದ (ಭೀಷ್ಮ ಪರ್ವ, ೧ ಸಂಧಿ, ೨೩ ಪದ್ಯ)

ತಾತ್ಪರ್ಯ:
ಅವರಿಗೆ ದೈವಬಲವಿದೆ. ನೀವು ದೈವ ಹೀನರು. ಅವರೈವರೂ ಸತುಪುರುಷರ ಶೀಲವುಳ್ಳವರು. ಧರ್ಮಪರರು. ನೀವು ಅಧಾರ್ಮಿಕರು. ಲೋಕವು ಅವರಿಗೆ ಗೌರವವನ್ನು ಕೊಡುತ್ತದೆ. ಅವರ ಕೆಲಸದಲ್ಲಿ ಹೆಗಲು ಕೊಡುತ್ತದೆ. ಲೋಕವು ನಿಮ್ಮನ್ನು ಬೈಯ್ಯುತ್ತದೆ. ಅವರಿಗೆ ನಿಮಗಿಂತಲೂ ಐದು ಪಟ್ಟು ಹೆಚ್ಚಿನ ಸಾಹಸವಿದೆ, ನೀವು ದುರ್ಬಲರೆಂದು ಭೀಷ್ಮರು ನುಡಿದರು.

ಅರ್ಥ:
ದೈವ: ಭಗವಂತ; ಬಲ: ಶಕ್ತಿ; ಹೀನ: ಕೆಟ್ಟದು, ತ್ಯಜಿಸಿದ; ಧರ್ಮ: ಧಾರಣೆ ಮಾಡಿದುದು; ಸತ್ಪುರುಷ: ಒಳ್ಳೆಯ ಜನ; ಶೀಲ: ಗುಣ; ಅಧಾರ್ಮಿಕ: ಧರ್ಮದ ದಾರಿಯಲ್ಲಿ ನಡೆಯದವರು; ಮುಯ್ಯಿ: ಉಡುಗೊರೆ; ಭುವನ: ಭೂಮಿ; ಬೈವುದು: ಜರಿ; ಇನಿಬರ: ಇಷ್ಟು ಜನ; ಐವಡಿ: ಐದು ಪಟ್ಟು; ಸಹಸಿ: ಪರಾಕ್ರಮಿ; ದುರ್ಬಲ: ಶಕ್ತಿಹೀನ;

ಪದವಿಂಗಡಣೆ:
ದೈವ +ಬಲವ್+ಅವರಲ್ಲಿ +ನೀವೇ
ದೈವ +ಹೀನರು +ಧರ್ಮ+ಪರರ್+ಅವರ್
ಐವರೂ+ ಸತ್ಪುರುಷಶೀಲರು +ನೀವ್+ಅಧಾರ್ಮಿಕರು
ಮುಯ್ವನ್+ಆನುವುದ್+ಅವರ್ಗೆ +ಭುವನವು
ಬೈವುದೈ+ ನಿಮ್ಮಿನಿಬರನು+ ನಿಮಗ್
ಐವಡಿಯ +ಸಹಸಿಗಳ್+ಅವರು +ದುರ್ಬಲರು +ನೀವೆಂದ

ಅಚ್ಚರಿ:
(೧) ದೈವ ಪದದ ಬಳಕೆ – ದೈವ ಬಲವವರಲ್ಲಿ ನೀವೇದೈವ ಹೀನರು
(೨) ಧರ್ಮ ಪದದ ಬಳಕೆ – ಧರ್ಮಪರರವರೈವರೂ ಸತ್ಪುರುಷಶೀಲರು ನೀವಧಾರ್ಮಿಕರು

ಪದ್ಯ ೩೪: ದುರ್ಯೋಧನನು ತನ್ನ ವಿಚಾರವನ್ನು ಹೇಗೆ ಸಮರ್ಥಿಸಿಕೊಂಡನು?

ದೇವಕೀಸುತನೇನು ಬಂಡಿಯ
ಬೋವಗುಲದಲಿ ಜನಿಸಿದನೆ ಮೇ
ಣಾ ವಿರಿಂಚಿಯದಾವ ಸಾರಥಿಕುಲದ ಪೀಳಿಗೆಯೊ
ಕಾವುದೊಬ್ಬರನೊಬ್ಬರಿದರೊಳ
ಗಾವ ಹಾನಿ ಪರಪ್ರಯೋಜನ
ಭಾವಕರು ಸತ್ಪುರುಷರಿದಕೆ ವಿಚಾರವೇನೆಂದ (ಕರ್ಣ ಪರ್ವ, ೫ ಸಂಧಿ, ೩೪ ಪದ್ಯ)

ತಾತ್ಪರ್ಯ:
ದುರ್ಯೋಧನನು ತನ್ನ ಮಾತನ್ನು ಮುಂದುವರಿಸುತ್ತಾ, ಅಲ್ಲಾ ಕೃಷ್ನನು ಯಾವ ಸಾರಥಿಕುಲದಲ್ಲಿ ಹುಟ್ಟಿದವನೇ? ಸೃಷ್ಟಿಕರ್ತನಾದ ಬ್ರಹ್ಮನು ಸೂತಕುಲದವನೇ? ಒಬ್ಬರನ್ನೊಬ್ಬರು ಕಾಪಾಡಿದರೆ ಅದರಿಂದ ಯಾವ ನಷ್ಟ? ಸತ್ಪುರುಷರು ಎಂದರೆ ಪರೋಪಕಾರಭಾವವುಳ್ಳವರು. ಇದರಲ್ಲಿ ನೀವು ಹಿಂಜರಿಯುವಂತಹ ವಿಚಾರವೇನಿದೆ ಎಂದು ತನ್ನ ವಾದವನ್ನು ಸಮರ್ಥಿಸಿಕೊಂಡನು.

ಅರ್ಥ:
ದೇವಕೀಸುತ: ಕೃಷ್ಣ; ಸುತ: ಮಗ; ಬಂಡಿ: ರಥ; ಬೋವ: ಬಂಡಿ ಓಡಿಸುವವ; ಸಾರಥಿ; ಕುಲ: ವಂಶ; ಜನಿಸು: ಹುಟ್ಟು; ಮೇಣ್: ಅಥವ; ವಿರಿಂಚಿ: ಬ್ರಹ್ಮ; ಸಾರಥಿ: ಸೂತ, ರಥವನ್ನು ಓಡಿಸುವವ; ಪೀಳಿಗೆ: ಒಂದು ವಂಶದ ಕುಡಿ; ಕಾವುದು: ಕಾವಲು, ರಕ್ಷಣೆ; ಹಾನಿ: ನಷ್ಟ; ಪರ: ಬೇರೆಯವರ; ಪ್ರಯೋಜನ: ಉಪಯೋಗ; ಭಾವಕ: ಉಂಟುಮಾಡುವ; ಸತ್ಪುರುಷ: ಒಳ್ಳೆಯ ನಡತೆಯುಳ್ಳ ವ್ಯಕ್ತಿ; ವಿಚಾರ: ಮತ, ಅಭಿಪ್ರಾಯ;

ಪದವಿಂಗಡಣೆ:
ದೇವಕೀಸುತನೇನು +ಬಂಡಿಯ
ಬೋವ+ಕುಲದಲಿ+ ಜನಿಸಿದನೆ+ ಮೇಣ್
ಆ+ ವಿರಿಂಚಿ+ಅದಾವ +ಸಾರಥಿಕುಲದ +ಪೀಳಿಗೆಯೊ
ಕಾವುದ್+ಒಬ್ಬರನ್+ಒಬ್ಬರ್+ಇದರೊಳಗ್
ಅವ +ಹಾನಿ +ಪರ+ಪ್ರಯೋಜನ
ಭಾವಕರು+ ಸತ್ಪುರುಷರ್+ಇದಕೆ +ವಿಚಾರವೇನೆಂದ

ಅಚ್ಚರಿ:
(೧) ಸತ್ಪುರುಷರು ಯಾರು? ಪರಪ್ರಯೋಜನ ಭಾವಕರು ಸತ್ಪುರುಷರು
(೨) ಬೋವಕುಲ, ಸಾರಥಿಕುಲ – ಸಮನಾರ್ಥಕ ಪದ
(೩) ೪ ಸಾಲು ಒಂದೇ ಪದವಾಗಿ ರಚಿತವಾಗಿರುವುದು

ಪದ್ಯ ೧೦೦: ಸತ್ಪುರುಷರ ಅಭಿಮತವೇನು?

ಸರಸಿಜಾಕ್ಷನ ದಿವ್ಯನಾಮ
ಸ್ಮರಣವನು ಶ್ರುತಿಮೂಲ ವಾಕ್ಯೋ
ತ್ಕರುಷವನು ಭೂತಕ್ಕೆ ಹಿತವಹ ಮಾತನತಿಗಳೆದು
ಪರರ ವಾನವ ತ್ರಿಕರಣದೊಳು
ಚ್ಚರಿಸಲಾಗದು ಸರ್ವಥಾ ಸ
ತ್ಪುರುಷರಭಿಮತವಿದು ಕಣಾ ಭೂಪಾಲ ಕೇಳೆಂದ (ಉದ್ಯೋಗ ಪರ್ವ, ೪ ಸಂಧಿ, ೧೦೦ ಪದ್ಯ)

ತಾತ್ಪರ್ಯ:
ವೇದಗಳ ಸಾರವಾದ ಮಾತುಗಳು; ಭಗವನ್ನಾಮ ಸ್ಮರಣೆ, ಸಮಸ್ತ ಪ್ರಾಣಿಗಳಿಗೂ ಹಿತವನ್ನು ಬಯಸುವ ಮಾತು, ಇವುಗಳನ್ನು ಬಿಟ್ಟು ಬೇರೊಂದು ಮಾತನ್ನು ಸರ್ವಥಾ ಆಡಬಾರದು ಎನ್ನುವುದು ಸಜ್ಜನರ ಅಭಿಪ್ರಾಯವೆಂದು ಸನತ್ಸುಜಾತರು ಧೃತರಾಷ್ಟ್ರನಿಗೆ ತಿಳಿಸಿದರು.

ಅರ್ಥ:
ಸರಸಿಜಾಕ್ಷ: ವಿಷ್ಣು, ಭಗವಂತ; ದಿವ್ಯ: ಶ್ರೇಷ್ಠ; ನಾಮ: ಹೆಸರು; ಸ್ಮರಣೆ: ಜ್ಞಾಪಿಸಿಕೊಳ್ಳು; ಶ್ರುತಿ: ವೇದ; ಮೂಲ: ಬೇರು, ಬುಡ, ಕಾರಣ; ವಾಕ್ಯ: ನುಡಿ; ಉತ್ಕರ್ಷ: ಹೆಚ್ಚಳ, ಮೇಲ್ಮೆ; ಭೂತಕ್ಕೆ: ಭೂಮಿಗೆ; ಹಿತ: ಒಳ್ಳೆಯದು, ಪ್ರಿಯಕರವಾದ; ಮಾತು: ನುಡಿ; ಪರರ: ಬೇರೆಯವರ; ವಚನ: ಮಾತು; ತ್ರಿಕರಣ: ಕಾಯ, ವಾಕ್ಕು ಮತ್ತು ಮನಸ್ಸು ಎಂಬ ಮೂರು ಅಂಗಗಳು; ಉಚ್ಚರಿಸು: ಹೇಳು; ಸರ್ವಥಾ: ಯಾವಾಗಲು; ಸತ್ಪುರುಷ: ಒಳ್ಳೆಯ ಮನುಷ್ಯ; ಅಭಿಮತ: ಅಭಿಪ್ರಾಯ; ಭೂಪಾಲ: ರಾಜ; ಕೇಳು: ಆಲಿಸು; ಕಣಾ: ನೋಡಾ;

ಪದವಿಂಗಡಣೆ:
ಸರಸಿಜಾಕ್ಷನ+ ದಿವ್ಯನಾಮ
ಸ್ಮರಣವನು +ಶ್ರುತಿಮೂಲ +ವಾಕ್ಯ
ಉತ್ಕರುಷವನು+ ಭೂತಕ್ಕೆ +ಹಿತವಹ +ಮಾತನ್+ಅತಿಗಳೆದು
ಪರರ+ ವಚನವ+ ತ್ರಿಕರಣದೊಳ್
ಉಚ್ಚರಿಸಲಾಗದು+ ಸರ್ವಥಾ +ಸ
ತ್ಪುರುಷರ್+ಅಭಿಮತವಿದು +ಕಣಾ +ಭೂಪಾಲ +ಕೇಳೆಂದ

ಅಚ್ಚರಿ:
(೧) ಸರಸಿಜಾಕ್ಷ, ಸ್ಮರಣ, ಸರ್ವಥಾ, ಸತ್ಪುರುಷ – ‘ಸ’ ಕಾರದ ಪದಗಳು

ಪದ್ಯ ೫೦: ಯಾರನ್ನು ಪೂಜಿಸಬೇಕು?

ಮೆರೆವ ಸಚರಾಚರವಿದೆಲ್ಲವ
ನಿರುತ ತಾನೆಂದರಿತು ತನ್ನಿಂ
ದಿರವು ಬೇರಿಲ್ಲೆಂಬ ಕಾಣಿಕೆ ಯಾವನೊಬ್ಬನೊಳು
ಇರುತಿಹುದದಾವಗಮವನು ಸ
ತ್ಪುರುಷನಾತನ ಪೂಜಿಸುವುದಿಹ
ಪರದ ಸುಕೃತವ ಬಯಸುವವರವನೀಶ ಕೇಳೆಂದ (ಉದ್ಯೋಗ ಪರ್ವ, ೪ ಸಂಧಿ, ೫೦ ಪದ್ಯ)

ತಾತ್ಪರ್ಯ:
ಸಮಸ್ತ ಚರಾಚರಗಳೆಲ್ಲವೂ ತಾನೇ ಎಂದು ಅರಿತು ತನ್ನನ್ನು ಬಿಟ್ಟು ಬೇರೆ ಯಾವುದೂ ಇಲ್ಲವೆಂದು ಯಾವನು ಯಾವಾಗಲೂ ಕಾಣುವನೋ ಅವನೇ ಸತ್ಪುರುಷ. ಇಹಪರದಲ್ಲಿ ಲೇಸನ್ನು ಬಯಸುವವರು ಅವನನ್ನು ಪೂಜಿಸಬೇಕು ಎಂದು ಸನತ್ಸುಜಾತರು ಹೇಳಿದರು.

ಅರ್ಥ:
ಮೆರೆ: ಹೊಳೆ, ಪ್ರಕಾಶಿಸು; ಚರಾಚರ: ಚಲಿಸುವ ಮತ್ತು ಚಲಿಸದ ವಸ್ತುಗಳು; ನಿರುತ: ಸತ್ಯವಾಗಿ; ತಾನೆಂದು: ನಾನು; ಅರಿತು: ತಿಳಿದು; ಇರವು: ಇರುವಿಕೆ, ವಾಸ; ಬೇರೆ: ಅನ್ಯ; ಕಾಣಿಕೆ: ಕೊಡುಗೆ; ಇರುತಿಹುದು: ಇದೆಯೋ; ಸತ್ಪುರುಷ: ಸಜ್ಜನ; ಪೂಜಿಸು: ಅರ್ಚಿಸು; ಇಹಪರ: ಈ ಲೋಕ ಮತ್ತು ಪರ ಲೋಕ; ಸುಕೃತ: ಒಳ್ಳೆಯ ಕೆಲಸ; ಬಯಸು: ಕೋರು; ಅವನೀಶ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ಮೆರೆವ +ಸಚರಾಚರವ್+ಇದೆಲ್ಲವ
ನಿರುತ+ ತಾನೆಂದರಿತು +ತನ್ನಿಂದ್
ಇರವು +ಬೇರಿಲ್ಲೆಂಬ +ಕಾಣಿಕೆ +ಯಾವನೊಬ್ಬನೊಳು
ಇರುತಿಹುದ್+ಅದ್+ಆವಗಮ್+ಅವನು +ಸ
ತ್ಪುರುಷನ್+ಆತನ+ ಪೂಜಿಸುವುದ್+ಇಹ
ಪರದ +ಸುಕೃತವ +ಬಯಸುವವರ್+ಅವನೀಶ +ಕೇಳೆಂದ

ಅಚ್ಚರಿ:
(೧) ಸತ್ಪುರುಷನ ಲಕ್ಷಣ – ಮೆರೆವ ಸಚರಾಚರವಿದೆಲ್ಲವ ನಿರುತ ತಾನೆಂದರಿತು ತನ್ನಿಂದಿರವು ಬೇರಿಲ್ಲೆಂಬ ಕಾಣಿಕೆ ಯಾವನೊಬ್ಬನೊಳು ಇರುತಿಹುದದಾವಗಮವನು ಸತ್ಪುರುಷನು
(೨) ಸತ್ಪುರುಷ, ಸುಕೃತ, ಸಚರಾಚರ – ‘ಸ’ಕಾರದ ಪದಗಳ ಬಳಕೆ

ಪದ್ಯ ೨೬: ಜೀವಾತ್ಮ ಹೋದಮೇಲೆ ಏನೆಂದು ಸಂಭೋದಿಸುತ್ತಾರೆ?

ಅರಸನೊಡೆಯನು ದಂಡನಾಥನು
ಗುರುಹಿರಿಯನುತ್ತಮನು ದೈವಾ
ಪರನು ಸಾಹಿತ್ಯನು ಸದಸ್ಯನು ಸತ್ಪುರುಷನೆಂದು
ಪರಿಪರಿಯ ಗುಣನಾಮದೊಳಹಂ
ಕರಿಸುವರು ಜೀವಾತ್ಮ ತೊಲಗಿದೊ
ಡಿರದೆ ಹೆಣನೆಂದೆಂಬರೈ ಭೂಪಾಲ ಕೇಳೆಂದ (ಉದ್ಯೋಗ ಪರ್ವ, ೪ ಸಂಧಿ, ೨೬ ಪದ್ಯ)

ತಾತ್ಪರ್ಯ:
ನಾನು ರಾಜ, ಯಜಮಾನ, ಸೇನಾಧಿಪತಿ, ಆಚಾರ್ಯ, ದೊಡ್ಡವ, ಶ್ರೇಷ್ಠನು, ದೇವತ ಆರಾಧಕನು, ಸಾಹಿತಿಯು, ಸದಸ್ಯನು, ಒಳ್ಳೆಯ ಮನುಷ್ಯನು, ಹೀಗೆ ಹಲವಾರು ನಾಮಾವಳಿಯನ್ನು ಅಲಂಕರಿಸಿ ಅಹಂಕಾರದಿಂದ ಮೆರೆಯುತ್ತಿರುವ ದೇಹವು, ಅದರೊಳಗಿರುವ ಜೀವಾತ್ಮವು ಹೋದಮೇಲೆ ಹೆಣವೆಂಬ ಒಂದೇ ಪದದಿಂದ ಕರೆಯುತ್ತಾರೆ ಎಂದು ಸನತ್ಸುಜಾತರು ಜೀವಿತದ ಅರೆಕ್ಷಣದ ಬದುಕಿನ ಸತ್ಯವನ್ನು ಹೇಳಿದರು.

ಅರ್ಥ:
ಅರಸ: ರಾಜ; ಒಡೆಯ: ಯಜಮಾನ; ದಂಡನಾಥ: ಸೇನಾಧಿಪತಿ; ಗುರು: ಆಚಾರ್ಯ; ಹಿರಿಯ: ದೊಡ್ಡವ; ಉತ್ತಮ: ಶ್ರೇಷ್ಠ; ದೈವಾಪರ: ದೇವರಲ್ಲಿ ನಂಬಿಕೆಯಿರುವವ; ಸಾಹಿತಿ: ಸಾಹಿತ್ಯಕೃಷಿ ಮಾದುವವ; ಸದಸ್ಯ: ಸಂಘ, ಸಮಿತಿ ಘಟಕಗಳಲ್ಲಿ ಸಂಬಂಧವನ್ನು ಹೊಂದಿರುವವನು; ಸತ್ಪುರುಷ: ಒಳ್ಳೆಯ ಮನುಷ್ಯ; ಪರಿಪರಿ: ಹಲವಾರು; ಗುಣ: ನಡತೆ, ಸ್ವಭಾವ; ನಾಮ: ಹೆಸರು; ಅಹಂಕರಿಸು: ನಾನು ಎಂಬುದನ್ನು ಮೆರೆಸು, ಗರ್ವ; ಜೀವಾತ್ಮ: ಜೀವಿಗಳಲ್ಲೆಲ್ಲ ಇರುವ ಆತ್ಮ; ತೊಲಗು: ಹೊರಹೋಗು, ತ್ಯಜಿಸು; ಹೆಣ: ಜೀವವಿಲ್ಲದ, ಚರ; ಭೂಪಾಲ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ಅರಸನ್+ಒಡೆಯನು +ದಂಡನಾಥನು
ಗುರು+ಹಿರಿಯನ್+ಉತ್ತಮನು +ದೈವಾ
ಪರನು +ಸಾಹಿತ್ಯನು+ ಸದಸ್ಯನು+ ಸತ್ಪುರುಷನೆಂದು
ಪರಿಪರಿಯ +ಗುಣನಾಮದೊಳ್+ಅಹಂ
ಕರಿಸುವರು +ಜೀವಾತ್ಮ +ತೊಲಗಿದೊಡ್
ಇರದೆ +ಹೆಣನೆಂದ್+ಎಂಬರೈ +ಭೂಪಾಲ +ಕೇಳೆಂದ

ಅಚ್ಚರಿ:
(೧) ೧೦ ರೀತಿಯ ಗುಣವಾಚಕಗಳನ್ನು ದೇಹಕ್ಕೆ ಹೇಳುವ ಪರಿಯನ್ನು ತೋರಿಸುವ ಪದ್ಯ
(೨) ‘ಸ’ ಕಾರದ ತ್ರಿವಳಿ ಪದ – ಸಾಹಿತ್ಯನು ಸದಸ್ಯನು ಸತ್ಪುರುಷನೆಂದು;

ಪದ್ಯ ೩೧: ಧರ್ಮರಾಯನ ಆಳ್ವಿಕೆಯನ್ನರಿಯಲು ನಾರದರು ಮತ್ತಾವ ಪ್ರಶ್ನೆಗಳನ್ನು ಕೇಳಿದರು?

ಜಾತಿ ಸಂಕರವಿಲ್ಲಲೇ ಜನ
ಜಾತದಲಿ ಹೀನೋತ್ತಮರು ನಿ
ರ್ಣಿತರೇ ನಿಜಮಾರ್ಗದಲಿ ಕುಲವಿಹಿತ ಧರ್ಮದಲಿ
ಖ್ಯಾತರೇ ಸತ್ಪುರುಷರಧಿಕ
ದ್ಯೂತಕೇಳಿಗಳಿಲ್ಲಲೇ ಮೃಗ
ಯಾತಿರೇಕ ವ್ಯಸನ ಕಿರಿದೇ ರಾಯ ನಿನಗೆಂದ (ಸಭಾ ಪರ್ವ, ೧ ಸಂಧಿ, ೩೧ ಪದ್ಯ)

ತಾತ್ಪರ್ಯ:
ನಾರದರು ತಮ್ಮ ಪ್ರಶ್ನೆಗಳನ್ನು ಮುಂದುವರೆಸುತ್ತಾ, ಧರ್ಮರಾಯ ನಿನ್ನ ರಾಜ್ಯದಲ್ಲಿ ಜಾತಿಗಳ ಮಧ್ಯೆ ಕಲೆಬೆರಕೆ ಇಲ್ಲತಾನೆ? ಪ್ರತಿಯೊಬ್ಬರು ತಮ್ಮ ಆಚಾರ ಕುಲಕ್ಕನುಗುಣವಾದ ಧರ್ಮದಿಂದ ಯಾರು ಉತ್ತಮರು ಯಾರಲ್ಲ ಅನ್ನುವುದು ನಿರ್ಣಯವಾಗುತ್ತದೆ ತಾನೆ? ಸತ್ಪುರುಷರು ಸುಪ್ರಸಿದ್ಧರಾಗಿದ್ದಾರೆಯೆ? ಜೂಜಾಟ ಅತಿಯಾಗಿಲ್ಲವೇ? ಬೇಟೆಯ ವ್ಯಸನ ನಿನಗೆ ಹೆಚ್ಚಾಗಿಲ್ಲ ತಾನೆ? ಎಂದು ಪ್ರಶ್ನಿಸಿದರು.

ಅರ್ಥ:
ಜಾತಿ:ಹುಟ್ಟಿದ ಕುಲ; ಸಂಕರ:ಮಿಶ್ರಣ; ಜನ: ಮನುಷ್ಯ; ಜಾತ: ಹುಟ್ಟಿದ; ಹೀನ: ಕೀಳು; ಉತ್ತಮ: ಶ್ರೇಷ್ಠ; ನಿರ್ಣೀತ: ನಿರ್ಣಯಮಾಡು; ನಿಜ: ಸತ್ಯ; ಮಾರ್ಗ: ದಾರಿ; ಕುಲ: ವಂಶ; ವಿಹಿತ: ಯೋಗ್ಯವಾದ; ಧರ್ಮ: ನಿಯಮ, ಆಚಾರ; ಖ್ಯಾತ: ಪ್ರಸಿದ್ಧ; ಸತ್ಪುರುಷ: ಒಳ್ಳೆಯ ಜನ; ಅಧಿಕ: ಬಹಳ; ದ್ಯೂತ: ಜೂಜು; ಮೃಗ: ಪಶು; ಅತಿರೇಕ: ಬಹಳ; ವ್ಯಸನ: ಹವ್ಯಾಸ; ಕಿರಿದು: ಚಿಕ್ಕದು; ರಾಯ: ರಾಜ;

ಪದವಿಂಗಡಣೆ:
ಜಾತಿ +ಸಂಕರವಿಲ್ಲಲೇ +ಜನ
ಜಾತದಲಿ +ಹೀನ+ಉತ್ತಮರು +ನಿ
ರ್ಣಿತರೇ +ನಿಜ+ಮಾರ್ಗದಲಿ +ಕುಲವಿಹಿತ+ ಧರ್ಮದಲಿ
ಖ್ಯಾತರೇ +ಸತ್ಪುರುಷರ್+ಅಧಿಕ
ದ್ಯೂತಕೇಳಿಗಳ್+ಇಲ್ಲಲೇ +ಮೃಗಯ
ಅತಿರೇಕ+ ವ್ಯಸನ+ ಕಿರಿದೇ +ರಾಯ +ನಿನಗೆಂದ

ಅಚ್ಚರಿ:
(೧) ೧ ಸಾಲಿನ ಮೊದಲ ಹಾಗು ಕೊನೆ ಪದ “ಜ” ಕಾರದಿಂದ ಪ್ರಾರಂಭ, ಜಾತಿ, ಜನ
(೨) ಸಂಕರವಿಲ್ಲಲೇ, ಕೇಳಿಗಳಿಲ್ಲಲೇ – ಇಲ್ಲಲೇ ಪದದಿಂದ ಕೊನೆಗೊಳ್ಳುವ ಪದ