ಪದ್ಯ ೫೨: ಧರ್ಮಜನು ಶಲ್ಯನತ್ತ ಹೇಗೆ ಬಾಣಗಳನ್ನು ಬಿಟ್ಟನು?

ಬೊಬ್ಬಿರಿದುದಾ ಸೇನೆ ರಾಯನ
ಸರ್ಬದಳ ಜೋಡಿಸಿತು ಸೋಲದ
ಮಬ್ಬು ಹರೆದುದು ಜಯದ ಜಸವೇರಿದನು ನರನಾಥ
ಉಬ್ಬಿದನು ಸತ್ಕ್ಷೇತ್ರತೇಜದ
ಗರ್ಭ ಗಾಡಿಸಿತಾರಿ ಮಿಡಿದನು
ತೆಬ್ಬಿನಸ್ತ್ರವ ತೂಗಿ ತುಳುಕಿದನಂಬಿನಂಬುಧಿಯ (ಶಲ್ಯ ಪರ್ವ, ೩ ಸಂಧಿ, ೫೨ ಪದ್ಯ)

ತಾತ್ಪರ್ಯ:
ಪಾಂಡವರ ಸೇನೆಯೆಲ್ಲವೂ ಕೂಡಿ ಗರ್ಜಿಸಿತು. ಸೋಲಿನ ಮಬ್ಬು ಹಾರಿತು, ಧರ್ಮಜನು ಜಯದ ಉತ್ಸಾಹದಿಂದುಬ್ಬಿದನು. ಅವನಲ್ಲಿದ್ದ ಕ್ಷಾತ್ರತೇಜಸ್ಸು ಹೊರಹೊಮ್ಮಿತು. ಅವನು ಗರ್ಜಿಸಿ ಹೆದೆಯನ್ನು ನೇವರಿಸಿ ಬಾಣವನ್ನು ಹೂಡಿ ಅಸ್ತ್ರಗಳ ಸಮುದ್ರವನ್ನೇ ಶಲ್ಯನತ್ತ ತೂರಿದನು.

ಅರ್ಥ:
ಬೊಬ್ಬಿರಿ: ಗರ್ಜಿಸು; ಸೇನೆ: ಸೈನ್ಯ; ರಾಯ: ರಾಜ; ಸರ್ಬದಳ: ಎಲ್ಲಾ ಸೈನ್ಯ; ಜೋಡು: ಕೂಡಿಸು; ಸೋಲು: ಪರಾಭವ; ಮಬ್ಬು: ನಸುಗತ್ತಲೆ, ಮಸುಕು; ಹರೆ: ವ್ಯಾಪಿಸು; ಜಯ: ಗೆಲುವು; ಜಸ: ಯಶಸ್ಸು; ಏರು: ಮೇಲೇಳು; ನರನಾಥ: ರಾಜ; ಉಬ್ಬು: ಹಿಗ್ಗು, ಗರ್ವಿಸು; ಕ್ಷತ್ರ: ಕ್ಷತ್ರಿಯ; ತೇಜ: ಕಾಂತಿ; ಗರ್ಭ: ಹೊಟ್ಟೆ; ಗಾಢಿಸು: ತುಂಬಿಕೊಳ್ಳು; ಅರಿ: ವೈರಿ; ಮಿಡಿ: ತವಕಿಸು; ತೆಬ್ಬು: ಬಿಲ್ಲಿನ ತಿರುವು; ಅಸ್ತ್ರ: ಶಸ್ತ್ರ; ತೂಗು: ಅಲ್ಲಾಡು; ತುಳುಕು: ತುಂಬಿ ಹೊರಸೂಸು; ಅಂಬು: ಬಾಣ; ಅಂಬುಧಿ: ಸಾಗರ;

ಪದವಿಂಗಡಣೆ:
ಬೊಬ್ಬಿರಿದುದಾ +ಸೇನೆ +ರಾಯನ
ಸರ್ಬದಳ+ ಜೋಡಿಸಿತು +ಸೋಲದ
ಮಬ್ಬು +ಹರೆದುದು +ಜಯದ +ಜಸವೇರಿದನು +ನರನಾಥ
ಉಬ್ಬಿದನು +ಸತ್ಕ್ಷತ್ರ+ತೇಜದ
ಗರ್ಭ +ಗಾಡಿಸಿತ+ಅರಿ+ ಮಿಡಿದನು
ತೆಬ್ಬಿನಸ್ತ್ರವ +ತೂಗಿ +ತುಳುಕಿದನ್+ಅಂಬಿನ್+ಅಂಬುಧಿಯ

ಅಚ್ಚರಿ:
(೧) ಎಷ್ಟು ಬಾಣಗಳಿದ್ದವೆಂದು ವಿವರಿಸುವ ಪರಿ – ತುಳುಕಿದನಂಬಿನಂಬುಧಿಯ