ಪದ್ಯ ೩೬: ಅಶ್ವತ್ಥಾಮನು ಕೌರವನಿಗೆ ಏನನ್ನು ಹೇಳಿದನು?

ಇವೆ ಮಹಾಮಂತ್ರಾಸ್ತ್ರಸಂತತಿ
ಯಿವೆ ಮಹಾಧನುರಾಜ್ಯಸತ್ಕೃತಿ
ಸವನ ಸಾಪೇಕ್ಷಂಗಳಿವೆ ತ್ರೈರಥಿಕರೊಬ್ಬರಲಿ
ಅವನಿಪತಿ ನೀ ಸೇಸೆದಳಿ ಮಿ
ಕ್ಕವರು ಸೇನೆ ವಿರೋಧಿವರ್ಗಕೆ
ದಿವವೊ ಧರೆಯೋ ನೋಡಲಹುದೇಳೆಂದನಾ ದ್ರೌಣಿ (ಗದಾ ಪರ್ವ, ೪ ಸಂಧಿ, ೩೬ ಪದ್ಯ)

ತಾತ್ಪರ್ಯ:
ಅಶ್ವತ್ಥಾಮನು ಮಾತನಾಡುತ್ತಾ, ಇಗೋ ಅಸ್ತ್ರಗಳೆಂಬ ಮಹಾ ಮಂತ್ರಗಳಿವೆ. ಮಹಾಧನಸ್ಸುಗಳೆಂಬ ತುಪ್ಪವಿದೆ. ಸವನಗಳು ಮೂವರಲ್ಲಿ ಒಬ್ಬೊಬ್ಬರಲ್ಲೂ ಇವೆ. ರಾಜ, ನೀನು ದೀಕ್ಷಿತನಾಗು. ಉಳಿದ ಪಾಂಡವರಿಗೂ ಅವರ ಸೇನೆಗೂ ಭೂಮಿವಶವಾಗುವುದೋ, ಸ್ವರ್ಗವೋ ನೋಡಬಹುದು ಎಂದು ನುಡಿದನು.

ಅರ್ಥ:
ಮಹಾ: ಶ್ರೇಷ್ಠ; ಮಂತ್ರ: ವೇದದಲ್ಲಿರುವ ಛಂದೋ ಬದ್ಧವೂ ಪವಿತ್ರವೂ ಆದ ದೇವತಾಸ್ತುತಿ; ಅಸ್ತ್ರ: ಶಸ್ತ್ರ; ಸಂತತಿ: ವಂಶ, ಪೀಳಿಗೆ; ಧನು: ಬಿಲ್ಲು; ಸತ್ಕೃತಿ: ಒಳ್ಳೆಯ ಕಾರ್ಯ; ಸವನ: ಯಜ್ಞ, ಯಾಗ, ಮಂಗಳ ಸ್ನಾನ; ಅಪೇಕ್ಷೆ: ಇಚ್ಛೆ, ಬಯಕೆ; ತ್ರೈ: ಮೂರು; ರಥಿಕ: ರಥದಲ್ಲಿ ಕುಳಿತು ಯುದ್ಧ ಮಾಡುವವನು; ಅವನಿಪತಿ: ರಾಜ; ಸೇಸೆದಳಿ: ದೀಕ್ಷಿತನಾಗು; ಸೇಸೆ: ಮಂಗಳಾಕ್ಷತೆ; ಮಿಕ್ಕ: ಉಳಿದ; ವಿರೋಧಿ: ವೈರಿ; ವರ್ಗ: ಗುಂಪು; ದಿವ: ಸ್ವರ್ಗ; ಧರೆ: ಭೂಮಿ; ನೋಡು: ವೀಕ್ಷಿಸು; ದ್ರೌಣಿ: ಅಶ್ವತ್ಥಾಮ;

ಪದವಿಂಗಡಣೆ:
ಇವೆ +ಮಹಾಮಂತ್ರ+ಅಸ್ತ್ರ+ಸಂತತಿ
ಇವೆ +ಮಹಾಧನು+ರಾಜ್ಯ+ಸತ್ಕೃತಿ
ಸವನ+ ಸಾಪೇಕ್ಷಂಗಳಿವೆ +ತ್ರೈರಥಿಕರ್+ಒಬ್ಬರಲಿ
ಅವನಿಪತಿ +ನೀ +ಸೇಸೆದಳಿ+ ಮಿ
ಕ್ಕವರು +ಸೇನೆ +ವಿರೋಧಿ+ವರ್ಗಕೆ
ದಿವವೊ +ಧರೆಯೋ +ನೋಡಲಹುದ್+ಏಳೆಂದನಾ +ದ್ರೌಣಿ

ಅಚ್ಚರಿ:
(೧) ದಿವವೊ, ಧರೆಯೋ – ಪದಗಳ ಬಳಕೆ

ಪದ್ಯ ೩೫: ಶಿವನ ಬೇಟೆಗಾಗಿ ಯಾವ ವಸ್ತುಗಳು ಸಿದ್ಧವಾದವು?

ಶ್ರುತಿಗಳೂಳಿಗ ತರ್ಕಶಾಸ್ತ್ರದ
ಗತಿಯ ಸೋಹಿನ ಮಂತ್ರಮಯ ಸಂ
ತತಿಯ ಸೊಂಪಿನ ವಿವಿಧ ಜಪಯಜ್ಞಾದಿಗಳ ಬಲೆಯ
ವ್ರತದ ಜಂತ್ರದ ಕಣ್ಣಿಗಳ ಸ
ತ್ಕೃತಿಯ ಕೋಲ್ಗುಂಡುಗಳ ಯೋಗ
ಸ್ಥಿತಿಯ ಸರಳಿನ ಶಬರರೈದಿತು ಶಿವನ ಬಳಸಿನಲಿ (ಅರಣ್ಯ ಪರ್ವ, ೬ ಸಂಧಿ, ೩೫ ಪದ್ಯ)

ತಾತ್ಪರ್ಯ:
ಶಿವನ ಬೇಟೆಗಾರರ ತಂಡಕ್ಕೆ ವೇದಗಳೆ ಕೆಲಸ ಮಾಡುವ ಸೇವಕರಾದರು. ತರ್ಕ ಶಾಸ್ತ್ರವು ಮೃಗಗಳನ್ನು ಒಂದು ಕಡೆ ತರಲು ಹೊರಟ ಸೇವಕರು. ಮಂತ್ರದಿಂದ ಮಾಡಿದ ವಿವಿಧ ಜಪಯಜ್ಞಗಳೇ ಬಲೆಗಳಾದವು. ವ್ರತಗಳು ಮೃಗಗಳ ಕಾಲನ್ನು ಹಿಡಿಯುವ ಕಣ್ಣಿಗಳಾದವು, ಪುಣ್ಯ ಕರ್ಮಗಳೇ ಕೋಲು ಕವಣಿಕಲ್ಲುಗಳಾದವು. ಯೋಗವೇ ಬಾಣವಾಯಿತು ಇವನ್ನು ಹಿಡಿದ ಶಿವನ ಪ್ರಮಥಗಣಗಳು ಶಿವನ ಬಳಿ ಸೇರಿದರು.

ಅರ್ಥ:
ಶ್ರುತಿ: ವೇದ; ಊಳಿಗ: ಕೆಲಸ, ಕಾರ್ಯ; ತರ್ಕ: ವಿಚಾರ, ಪರ್ಯಾಲೋಚನೆ; ಶಾಸ್ತ್ರ: ಧಾರ್ಮಿಕ ವಿಷಯ; ಗತಿ: ಗಮನ, ಸಂಚಾರ; ಸೋಹು:ಅಟ್ಟು, ಓಡಿಸು; ಮಂತ್ರ: ವೇದದಲ್ಲಿರುವ ಛಂದೋ ಬದ್ಧವೂ ಪವಿತ್ರವೂ ಆದ ದೇವತಾಸ್ತುತಿ; ಸಂತತಿ: ಗುಂಪು; ಸೊಂಪು: ಸೊಗಸು, ಚೆಲುವು; ವಿವಿಧ: ಹಲವಾರು; ಜಪ: ತಪ, ಧ್ಯಾನ; ಯಜ್ಞ: ಯಾಗ, ಯಜನ; ಬಲೆ: ಜಾಲ; ವ್ರತ: ನಿಯಮ; ಜಂತ್ರ: ಯಂತ್ರ, ವಾದ್ಯ; ಕಣ್ಣಿ:ಹಗ್ಗ, ರಜ್ಜು; ಸತ್ಕೃತಿ: ಒಳ್ಳೆಯ ಕೆಲಸ; ಕೋಲು: ದಂಡ; ಗುಂಡು: ಗುಂಡುಕಲ್ಲು; ಸ್ಥಿತಿ: ಅವಸ್ಥೆ; ಯೋಗ: ಧ್ಯಾನ; ಸರಳು: ಬಾಣ; ಐದು: ಬಂದು ಸೇರು; ಬಳಸು: ಹತ್ತಿರ;

ಪದವಿಂಗಡಣೆ:
ಶ್ರುತಿಗಳ್+ಊಳಿಗ+ ತರ್ಕ+ಶಾಸ್ತ್ರದ
ಗತಿಯ +ಸೋಹಿನ +ಮಂತ್ರಮಯ +ಸಂ
ತತಿಯ +ಸೊಂಪಿನ+ ವಿವಿಧ +ಜಪ+ಯಜ್ಞಾದಿಗಳ+ ಬಲೆಯ
ವ್ರತದ +ಜಂತ್ರದ +ಕಣ್ಣಿಗಳ +ಸ
ತ್ಕೃತಿಯ+ ಕೋಲ್+ಗುಂಡುಗಳ +ಯೋಗ
ಸ್ಥಿತಿಯ +ಸರಳಿನ +ಶಬರರ್+ಐದಿತು +ಶಿವನ +ಬಳಸಿನಲಿ

ಅಚ್ಚರಿ:
(೧) ವೇದ, ಮಂತ್ರ, ಜಪ ಯಜ್ಞ, ಸತ್ಕೃತಿ, ಯೋಗಸ್ಥಿತಿ – ಶಿವನ ಬೇಟೆಗಾರರ ಆಯುಧ