ಪದ್ಯ ೪೧: ಪಾಂಡವರ ಸೈನ್ಯದಲ್ಲಿ ಯಾರು ಉಳಿದಿದ್ದರು?

ಉಳಿದುದೇಳಕ್ಷೋಹಿಣೀದಳ
ದೊಳಗೆ ನಾರೀನಿಕರ ವಿಪ್ರಾ
ವಳಿ ಕುಶೀಲವ ಸೂತ ಮಾಗಧ ವಂದಿಸಂದೋಹ
ಸುಳಿವ ಕಾಣೆನು ಕೈದುವಿಡಿದರ
ನುಳಿದು ಜೀವಿಸಿದಾನೆ ಕುದುರೆಗ
ಳೊಳಗೆ ಜವಿಯಿಲ್ಲೇನನೆಂಬೆನು ಜನಪ ಕೇಳೆಂದ (ಗದಾ ಪರ್ವ, ೯ ಸಂಧಿ, ೪೧ ಪದ್ಯ)

ತಾತ್ಪರ್ಯ:
ರಾಜ ಧೃತರಾಷ್ಟ್ರ ಕೇಳು, ಏಳು ಅಕ್ಷೋಹಿಣೀ ಸೈನ್ಯದಲ್ಲಿ ಈಗ ಉಳಿದಿದ್ದ ಸೇನೆ ನಾಶವಾಯಿತು. ಬ್ರಾಹ್ಮಣರು, ಸೂತರು, ಮಾಗಧರು, ವಂದಿಗಳು ಮಾತ್ರ ಉಳಿದಿದ್ದರು. ಆಯುಧಧಾರಿಗಳೆಲ್ಲ ಹೋದ ಮೇಲೆ ಆನೆ ಕುದುರೆಗಳಿದ್ದೇನು ಪ್ರಯೋಜನ?

ಅರ್ಥ:
ಉಳಿದ: ಮಿಕ್ಕ; ಅಕ್ಷೋಹಿಣಿ: ೨೧೮೭೦ ಆನೆಗಳು + ೨೧೮೭೦ ರಥಗಳು + ೬೫೬೧೦ ಕುದುರೆಗಳು + ೧೦೯೩೫೦ ಕಾಲಾಳುಗಳಿರುವ ಸೈನ್ಯ ಸಮೂಹ; ದಳ: ಸೈನ್ಯ; ನಾರಿ: ಸ್ತ್ರೀ; ನಿಕರ: ಗುಂಪು; ವಿಪ್ರ: ಬ್ರಾಹ್ಮಣ; ಆವಳಿ: ಗುಂಪು; ಕುಶೀಲ: ; ಸೂತ: ಸಾರಥಿ; ಮಾಗಧ: ಹೊಗಳುಭಟ್ಟ; ವಂದಿ: ಸ್ತುತಿಪಾಠಕ; ಸಂದೋಹ: ಗುಂಪು, ಸಮೂಹ; ಸುಳಿ: ಕಾಣಿಸಿಕೊಳ್ಳು; ಕಾಣು: ತೋರು; ಕೈದು: ಆಯುಧ; ಜೀವಿಸು: ಪ್ರಾಣವಿರುವ; ಆನೆ: ಗಜ; ಕುದುರೆ: ಅಶ್ವ; ಜವಿ: ಕೂದಲು, ಕೇಶ; ಜನಪ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ಉಳಿದುದ್+ಏಳ್+ಅಕ್ಷೋಹಿಣೀ+ದಳ
ದೊಳಗೆ +ನಾರೀ+ನಿಕರ +ವಿಪ್ರಾ
ವಳಿ +ಕುಶೀಲವ +ಸೂತ +ಮಾಗಧ +ವಂದಿ+ಸಂದೋಹ
ಸುಳಿವ+ ಕಾಣೆನು +ಕೈದುವಿಡಿದರನ್
ಉಳಿದು +ಜೀವಿಸಿದ್+ಆನೆ +ಕುದುರೆಗಳ್
ಒಳಗೆ +ಜವಿಯಿಲ್ಲೇನನೆಂಬೆನು +ಜನಪ +ಕೇಳೆಂದ

ಅಚ್ಚರಿ:
(೧) ರೂಪಕದ ಪ್ರಯೋಗ – ಉಳಿದು ಜೀವಿಸಿದಾನೆ ಕುದುರೆಗಳೊಳಗೆ ಜವಿಯಿಲ್ಲೇನನೆಂಬೆನು

ಪದ್ಯ ೧೦: ಸೈನಿಕರೇಕೆ ದ್ರೋಣನ ಮರೆಯಲ್ಲಿ ನಿಂತರು?

ಎಲೆಲೆ ರಿಪುಸಂವರ್ತನೊಳು ಕೊಳು
ಗುಳಕೆ ವರ್ತಿಸಲರಿದೆನುತ ತ
ಲ್ಲಳಿಸಿ ತೆತ್ತುದು ಮನವನವನೀಪಾಲ ಸಂದೋಹ
ಹಳವಿನಬ್ಬರಕಂಜದಿರಿ ನಿಜ
ಗಳದ ಹಸುಗೆಯ ಹಾರದಿರಿಯೆಂ
ದಳಿಮನರು ಬೆಂಗೊಟ್ಟು ಹೊಕ್ಕುದು ಕಳಶಜನ ಮರೆಯ (ದ್ರೋಣ ಪರ್ವ, ೧೨ ಸಂಧಿ, ೧೦ ಪದ್ಯ)

ತಾತ್ಪರ್ಯ:
ಕಾಲನಂತಿರುವ ಶತ್ರುವಿನೊಡನೆ ಯುದ್ಧಮಾಡುವುದು ಅಸಾಧ್ಯವೆಂದು ಕೌರವ ಸೈನ್ಯದ ರಾಜರು ಮನಸ್ಸನ್ನಿಳಿಬಿಟ್ಟರು. ಬಾಯಲ್ಲಿ ಇವನ ಹಳೆಯ ಅಬ್ಬರಕ್ಕೆ ಬೆದರ ಬೇಡಿರಿ, ಎಂದು ಹೇಳುತ್ತಾ ಕತ್ತನ್ನು ದೇಹದಿಂದ ವಿಭಾಗ ಮಾಡಲು ಬೆದರಿ ದ್ರೋಣನ ಮರೆಯಲ್ಲಿ ಹೋಗಿ ನಿಂತರು.

ಅರ್ಥ:
ರಿಪು: ವೈರಿ; ಸಂವರ್ತ: ಅಳಿವು, ನಾಶ; ಕೊಳುಗುಳ: ಯುದ್ಧ; ವರ್ತಿಸು: ಸುತ್ತು, ತಿರುಗು; ಅರಿ: ತಿಳಿ; ತಲ್ಲಣ: ಅಂಜಿಕೆ; ತೆತ್ತು: ಮೋಸ, ವಂಚನೆ; ಮನ: ಮನಸ್ಸು; ಅವನೀಪಾಲ: ರಾಜ; ಸಂದೋಹ: ಗುಂಪು; ಹಳವು: ಹಿಂದಿನ; ಅಬ್ಬರ: ಗಲಾಟೆ, ಜೋರಾದ ಕೂಗು; ಅಂಜು: ಹೆದರು; ಕಳ: ರಣರಂಗ; ಹಸುಗೆ: ವಿಭಾಗ, ಹಂಚಿಕೆ, ಪಾಲು; ಹಾರು: ಲಂಘಿಸು, ಬಯಸು; ಅಳಿಮನ: ಉತ್ಸಾಹವಿಲ್ಲದ ಮನಸ್ಸು; ಬೆಂಗೊಟ್ಟು: ಬೆನ್ನನ್ನು ತೋರಿಸು, ಹೆದರು; ಹೊಕ್ಕು: ಸೇರು; ಕಳಶಜ: ದ್ರೋಣ; ಮರೆ: ಕಾಣದಾಗು;

ಪದವಿಂಗಡಣೆ:
ಎಲೆಲೆ +ರಿಪು+ಸಂವರ್ತನೊಳು +ಕೊಳು
ಗುಳಕೆ +ವರ್ತಿಸಲ್+ಅರಿದೆನುತ +ತ
ಲ್ಲಳಿಸಿ +ತೆತ್ತುದು +ಮನವನ್+ಅವನೀಪಾಲ+ ಸಂದೋಹ
ಹಳವಿನ್+ಅಬ್ಬರಕ್+ಅಂಜದಿರಿ +ನಿಜ
ಗಳದ +ಹಸುಗೆಯ +ಹಾರದಿರಿ+ ಎಂದ್
ಅಳಿಮನರು +ಬೆಂಗೊಟ್ಟು +ಹೊಕ್ಕುದು +ಕಳಶಜನ +ಮರೆಯ

ಅಚ್ಚರಿ:
(೧) ಸೈನಿಕರ ಸ್ಥಿತಿಯನ್ನು ವಿವರಿಸುವ ಪದ – ಅಳಿಮನರು
(೨) ಸೈನಿಕರು ಹೋದ ಪರಿ – ಅಳಿಮನರು ಬೆಂಗೊಟ್ಟು ಹೊಕ್ಕುದು ಕಳಶಜನ ಮರೆಯ

ಪದ್ಯ ೪೧: ಕೌರವನು ಯುದ್ಧಕ್ಕೆ ಹೇಗೆ ಬಂದನು?

ತಳಿತವಮಳಚ್ಛತ್ರ ಚಾಮರ
ವಲುಗಿದವು ನವಹೇಮ ದಂಡದ
ಹಳವಿಗೆಯ ತುದಿವಲಗೆಯಲಿ ಹಾಯ್ಕಿದರು ಪನ್ನಗನ
ಮೊಳಗಿದವು ನಿಸ್ಸಾಳ ಬಿರುದಾ
ವಳಿಯ ಕಹಳೆಗಳೊದಿದವು ನೆಲ
ಮೊಳಗಿದಂತಿಗೆ ಬಿರುದ ಹೊಗಳಿತು ಭಟ್ಟ ಸಂದೋಹ (ದ್ರೋಣ ಪರ್ವ, ೧೦ ಸಂಧಿ, ೪೧ ಪದ್ಯ)

ತಾತ್ಪರ್ಯ:
ಛತ್ರ ಚಾಮರಗಳು ಸಜ್ಜಾದವು. ಬಂಗಾರಾ ದಂಡಕ್ಕೆ ಸರ್ಪಧ್ವಜವನ್ನೇರಿಸಿದರು. ನಿಸ್ಸಾಳಗಳನ್ನು ಬಡಿದರು. ಬಿರುದನ್ನು ಘೋಷಿಸಿ ಕಹಳೆಗಳನ್ನೂದಿದರು. ಭಟ್ಟರು ಕೌರವನ ಬಿರುದಾವಳಿಗಳನ್ನು ಉಚ್ಛಸ್ವರದಲ್ಲಿ ಘೋಷಿಸಿದರು.

ಅರ್ಥ:
ತಳಿತ: ಚಿಗುರಿದ; ಅಮಳ: ನಿರ್ಮಲ; ಛತ್ರ: ಕೊಡೆ, ಚತ್ತರಿಗೆ; ಚಾಮರ: ಚಮರ ಮೃಗದ ಬಾಲದ ಕೂದಲಿನಿಂದ ತಯಾರಿಸಿದ ಕುಂಚ; ಅಲುಗು: ಅಳ್ಳಾಡು, ಅದುರು; ನವ: ಹೊಸ; ಹೇಮ: ಚಿನ್ನ; ದಂಡ: ಕೋಲು; ಹಳವಿಗೆ: ಬಾವುಟ; ತುದಿ: ಕೊನೆ; ಅಲಗು: ಆಯುಧದ ಮೊನೆ, ಕತ್ತಿ; ಹಾಯ್ಕು: ಇಡು, ಇರಿಸು; ಪನ್ನಗ: ಹಾವು; ಮೊಳಗು: ಹೊರಹೊಮ್ಮು; ನಿಸ್ಸಾಳ: ಒಂದು ಬಗೆಯ ಚರ್ಮವಾದ್ಯ; ಬಿರುದು: ಗೌರವ ಸೂಚಕ ಪದ; ಆವಳಿ: ಗುಂಪು; ಕಹಳೆ: ಉದ್ದವಾಗಿ ಬಾಗಿರುವ ತುತ್ತೂರಿ, ಕಾಳೆ; ಊದು: ಶಬ್ದ ಮಾಡು; ನೆಲ: ಭೂಮಿ; ಮೊಳಗು: ಧ್ವನಿ, ಸದ್ದು; ದಂತಿ: ಆನೆ; ಹೊಗಳು: ಪ್ರಶಂಶಿಸು; ಭಟ್ಟ: ಸೈನಿಕ; ಸಂದೋಹ: ಗುಂಪು, ಸಮೂಹ;

ಪದವಿಂಗಡಣೆ:
ತಳಿತವ್+ಅಮಳ+ಚ್ಛತ್ರ +ಚಾಮರವ್
ಅಲುಗಿದವು +ನವ+ಹೇಮ +ದಂಡದ
ಹಳವಿಗೆಯ +ತುದಿವ್+ಅಲಗೆಯಲಿ +ಹಾಯ್ಕಿದರು +ಪನ್ನಗನ
ಮೊಳಗಿದವು +ನಿಸ್ಸಾಳ +ಬಿರುದಾ
ವಳಿಯ +ಕಹಳೆಗಳ್+ಊದಿದವು +ನೆಲ
ಮೊಳಗಿ+ದಂತಿಗೆ +ಬಿರುದ +ಹೊಗಳಿತು +ಭಟ್ಟ +ಸಂದೋಹ

ಅಚ್ಚರಿ:
(೧) ಬಾವುಟ ಹಾರಿಸಿದರು ಎಂದು ಹೇಳುವ ಪರಿ – ನವಹೇಮ ದಂಡದ ಹಳವಿಗೆಯ ತುದಿವಲಗೆಯಲಿ ಹಾಯ್ಕಿದರು ಪನ್ನಗನ

ಪದ್ಯ ೩೦: ರಾಕ್ಷಸಿಯರು ಏನನ್ನು ತಂದರು?

ಹೆಗಲ ಪಕ್ಕಲೆಗಳಲಿ ಕವಿದುದು
ವಿಗಡ ಪೂತನಿವೃಂದ ಜೀರ್ಕೊಳ
ವಿಗಳ ಕೈರಾಟಳದೊಳೈದಿತು ಶಾಕಿನೀ ನಿಕರ
ತೊಗಲ ಕುನಿಕಿಲ ಬಂಡಿಗಳಲಾ
ದರ್ಗಿದು ಹೊಕ್ಕರು ರಕ್ಕಸರು ಬಾ
ಯ್ದೆಗೆದು ಬಂದುದುಲೂಕ ಜಂಬುಕ ಕಾಕ ಸಂದೋಹ (ಭೀಷ್ಮ ಪರ್ವ, ೫ ಸಂಧಿ, ೩೦ ಪದ್ಯ)

ತಾತ್ಪರ್ಯ:
ಪೂತನಿಗಳು ಹೆಗಲ ಮೇಲೆ ಪಕ್ಕಲೆಗಳನ್ನು ತಂದವು. ಶಾಕಿನಿಯರು ಜೀರ್ಕೊಳವಿಗಳನ್ನು ಹಿಡಿದು ಬಂದರು. ತೊಗಲ ಚೀಳಗಲನ್ನು ಬಂಡಿಗಳಲ್ಲಿ ತಂದು ರಣರಾಕ್ಷಸರು ರಣರಂಗವನ್ನು ಹೊಕ್ಕರು. ಗೂಬೆ, ನರಿ, ಕಾಗೆಗಳು ಬಾಯ್ದೆರೆದುಕೊಂಡು ಬಂದವು.

ಅರ್ಥ:
ಹೆಗಲು: ಭುಜ; ಪಕ್ಕಲೆ: ಕೊಪ್ಪರಿಗೆ; ಕವಿದುದು: ಆವರಿಸು; ವಿಗಡ: ಶೌರ್ಯ; ಪೂತನಿ: ರಾಕ್ಷಸಿ; ವೃಂದ: ಗುಂಪು; ಕೊಳವಿ: ಪೊಳ್ಳಾದ ಬಿದಿರಿನ ನಾಳ; ಕೈರಾಟಣ: ಸಣ್ಣ ಚಕ್ರ; ಐದು: ಬಂದು ಸೇರು; ಶಾಕಿನಿ: ಕ್ಷುದ್ರ ದೇವತೆ; ನಿಕರ: ಗುಂಪು; ತೊಗಲ: ಚರ್ಮ; ಕುನಿಕಿಲ: ಚೀಳ; ಬಂಡಿ: ರಥ; ಹೊಕ್ಕು: ಸೇರು; ರಕ್ಕಸ: ರಾಕ್ಷಸ; ತೆಗೆ: ಬಿಚ್ಚು; ಬಂದು: ಆಗಮಿಸು; ಉಲೂಕ: ಗೂಬೆ; ಜಂಬುಕ: ನರಿ; ಕಾಕ: ಕಾಗೆ; ಸಂದೋಹ: ಗುಂಪು;

ಪದವಿಂಗಡಣೆ:
ಹೆಗಲ +ಪಕ್ಕಲೆಗಳಲಿ +ಕವಿದುದು
ವಿಗಡ +ಪೂತನಿ+ವೃಂದ +ಜೀರ್ಕೊಳ
ವಿಗಳ +ಕೈರಾಟಳದೊಳ್+ಐದಿತು +ಶಾಕಿನೀ +ನಿಕರ
ತೊಗಲ +ಕುನಿಕಿಲ+ ಬಂಡಿಗಳಲಾ
ದರ್ಗಿದು +ಹೊಕ್ಕರು +ರಕ್ಕಸರು +ಬಾ
ಯ್ದೆಗೆದು +ಬಂದುದ್+ಉಲೂಕ+ ಜಂಬುಕ +ಕಾಕ +ಸಂದೋಹ

ಅಚ್ಚರಿ:
(೧) ವೃಂದ, ನಿಕರ, ಸಂದೋಹ – ಸಮನಾರ್ಥಕ ಪದ
(೨) ಪೂತನಿ, ಶಾಕಿನಿ – ರಾಕ್ಷಸಿಯನ್ನು ಹೇಳಲು ಬಳಸಿದ ಪದಗಳು

ಪದ್ಯ ೬೯: ವಿದ್ವಾಂಸರು ಏನು ಹೇಳುತ್ತಿದ್ದರು?

ಹೊಕ್ಕನಸುರಾರಾತಿ ಪಾಂಡವ
ರಿಕ್ಕೆಲದಿ ಬರೆ ನಗರಜನ ಮೈ
ಯಿಕ್ಕಿ ಬೀದಿಯ ಧೂಳು ಕವಿದುದು ಮುಂದೆ ಸಂದಣಿಸಿ
ಹೊಕ್ಕು ಹೊಗಳುವ ಶೃತಿತತಿಯ ಕೈ
ಮಿಕ್ಕು ಕಳೆದನು ಪಾಂಡುಸುತರಿಗೆ
ಸಿಕ್ಕಿದನು ಹರಿಯೆನುತಮಿರ್ದುದು ಸೂರಿಸಂದೋಹ (ವಿರಾಟ ಪರ್ವ, ೧೧ ಸಂಧಿ, ೬೯ ಪದ್ಯ)

ತಾತ್ಪರ್ಯ:
ಪಾಂಡವರು ಎರಡು ಬದಿಯಲ್ಲಿ ನಡೆದು ಬರುತ್ತಿರಲು, ಶ್ರೀಕೃಷ್ಣನು ವಿರಾಟನಗರದಲ್ಲಿ ನಡೆದು ಬಂದನು. ಜನರೆಲ್ಲರೂ ನಮಸ್ಕರಿಸಲು, ಆ ಧೂಳು ಗಗನ ಚುಂಬಿಯಾಯಿತು. ಅಲ್ಲಿದ್ದ ತಿಳಿದವರು, ವೇದಗಳು ಹೊಗಳುತ್ತಿರಲು ಅವಕ್ಕೆ ಸಿಕ್ಕದೆ ತಪ್ಪಿಸಿಕೊಂಡು ಹೋದ ಶ್ರೀಕೃಷ್ಣನು ಪಾಂಡವರಿಗೆ ಸಿಕ್ಕಿಬಿದ್ದುದು ಹೇಗೆ ಎಂದು ಮಾತನಾಡಿಕೊಂಡರು.

ಅರ್ಥ:
ಹೊಕ್ಕು: ಸೇರು; ಅಸುರ: ರಾಕ್ಷಸ; ಅರಾತಿ: ಶತ್ರು; ಇಕ್ಕೆಲ: ಎರಡೂ ಕಡೆ; ಬರೆ: ಆಗಮನ; ನಗರ: ಊರು; ಜನ: ಮನುಷ್ಯ; ಮೈಯಿಕ್ಕು: ನಮಸ್ಕರಿಸು; ಬೀದಿ: ಮಾರ್ಗ; ಧೂಳು: ಮಣ್ಣಿನ ಕಣ; ಕವಿ: ಆವರಿಸು; ಮುಂದೆ: ಎದುರು; ಸಂದಣಿಸು: ಗುಂಪು; ಹೊಗಳು: ಪ್ರಶಂಶಿಸು; ಶೃತಿ: ವೇದ; ತತಿ: ಗುಂಪು; ಕೈಮಿಕ್ಕು: ಕೈಗೆ ಸಿಗದೆ; ಕಳೆ: ತಪ್ಪಿಸು; ಸುತ: ಮಕ್ಕಳು; ಸಿಕ್ಕು: ದೊರಕು; ಹರಿ: ವಿಷ್ಣು; ಸೂರಿ:ಪಂಡಿತ, ವಿದ್ವಾಂಸ; ಸಂದೋಹ: ಗುಂಪು;

ಪದವಿಂಗಡಣೆ:
ಹೊಕ್ಕನ್+ಅಸುರ+ಅರಾತಿ+ ಪಾಂಡವರ್
ಇಕ್ಕೆಲದಿ +ಬರೆ +ನಗರ+ಜನ +ಮೈ
ಯಿಕ್ಕಿ +ಬೀದಿಯ +ಧೂಳು +ಕವಿದುದು +ಮುಂದೆ+ ಸಂದಣಿಸಿ
ಹೊಕ್ಕು +ಹೊಗಳುವ+ ಶೃತಿ+ತತಿಯ +ಕೈ
ಮಿಕ್ಕು +ಕಳೆದನು +ಪಾಂಡು+ಸುತರಿಗೆ
ಸಿಕ್ಕಿದನು +ಹರಿ+ಎನುತಮಿರ್ದುದು +ಸೂರಿ+ಸಂದೋಹ

ಅಚ್ಚರಿ:
(೧) ಸಂದಣಿ, ಸಂದೋಹ – ಸಮನಾರ್ಥಕ ಪದ
(೨) ಉಪಮಾನದ ಪ್ರಯೋಗ – ನಗರಜನ ಮೈಯಿಕ್ಕಿ ಬೀದಿಯ ಧೂಳು ಕವಿದುದು ಮುಂದೆ ಸಂದಣಿಸಿ
(೩) ಕೃಷ್ಣನ ಹಿರಿಮೆ – ಹೊಕ್ಕು ಹೊಗಳುವ ಶೃತಿತತಿಯ ಕೈಮಿಕ್ಕು ಕಳೆದನು ಪಾಂಡುಸುತರಿಗೆ
ಸಿಕ್ಕಿದನು ಹರಿ

ಪದ್ಯ ೪೧: ಶಿಶುಪಾಲನು ಹೇಗೆ ಕೃತಾರ್ಥನಾಗಲು ಇಚ್ಛಿಸಿದನು?

ನುಡಿಗಳಲಿ ಸದ್ಧರ್ಮ ಸಂಗತಿ
ನಡವಳಿಯಲನ್ಯಾಯವೆಂದೇ
ಕೆಡಹಿದವು ಹಂಸೆಯನು ನಾನಾ ವಿಹಗ ಸಂದೋಹ
ನುಡಿವುದಲ್ಲದೆ ಮೇಣುನಯದಲಿ
ನಡೆದುದಿಲ್ಲೆಲೆ ಭೀಷ್ಮ ನಿನ್ನನು
ಕಡಿದು ಭೂತಕೆ ಬಡಿಸಿದರೆ ಕೃತಕೃತ್ಯನಹೆನೆಂದ (ಸಭಾ ಪರ್ವ, ೧೧ ಸಂಧಿ, ೪೧ ಪದ್ಯ)

ತಾತ್ಪರ್ಯ:
ಮಾನಸ ತೀರದ ಪಕ್ಷಿಗಳು, ಈ ಹಂಸವು ಮಾತಿನಲ್ಲಿ ಧರ್ಮವನ್ನು ಹೇಳುತ್ತದೆ, ನಡವಳಿಕೆಯೆಲ್ಲಾ ಅನ್ಯಾಯ ಎಂದು ಅದನ್ನು ಹೊಡೆದು ಕೆಡವಿದವು. ಭೀಷ್ಮ ನೀನು ಸಹ ಧರ್ಮವನ್ನು ಹೇಳುತ್ತಿರುವೆ, ಆದರೆ ಧರ್ಮಕ್ಕನುಸಾರವಾಗಿ ನಡೆಯಲಿಲ್ಲ. ನಿನ್ನನ್ನು ಕಡಿದು ಭೂತಗಳಿಗೆ ಬಲಿಕೊಟ್ಟರೆ ನಾನು ಕೃತಾರ್ಥನಾಗುತ್ತೇನೆ ಎಂದು ಶಿಶುಪಾಲನು ನುಡಿದನು.

ಅರ್ಥ:
ನುಡಿ: ಮಾತು; ಧರ್ಮ:ಧಾರಣೆ ಮಾಡಿದುದು; ಸಂಗತಿ: ವಿಚಾರ; ನಡವಳಿ: ಆಚರಣೆ; ಅನ್ಯಾಯ: ಯೋಗ್ಯವಲ್ಲದ, ಸರಿಯಲ್ಲದ; ಕೆಡಹು: ತಳ್ಳು; ಹಂಸ: ಒಂದು ಜಾತಿಯ ಪಕ್ಷಿ; ವಿಹಗ: ಪಕ್ಷಿ; ಸಂದೋಹ: ಗುಂಪು, ಸಮೂಹ; ಮೇಣ್: ಅಥವ; ನಯ: ನುಣುಪು, ಮೃದುತ್ವ; ನಡೆ: ನಡಿಗೆ; ಕಡಿ: ಸೀಳು; ಭೂತ: ದೆವ್ವ, ಪಿಶಾಚಿ; ಬಡಿಸು: ಉಣಿಸು, ಹಾಕು; ಕೃತಕೃತ್ಯ: ಕೃತಾರ್ಥ;

ಪದವಿಂಗಡಣೆ:
ನುಡಿಗಳಲಿ +ಸದ್ಧರ್ಮ +ಸಂಗತಿ
ನಡವಳಿಯಲ್+ಅನ್ಯಾಯವೆಂದೇ
ಕೆಡಹಿದವು+ ಹಂಸೆಯನು +ನಾನಾ +ವಿಹಗ +ಸಂದೋಹ
ನುಡಿವುದಲ್ಲದೆ +ಮೇಣು+ನಯದಲಿ
ನಡೆದುದಿಲ್+ಎಲೆ +ಭೀಷ್ಮ+ ನಿನ್ನನು
ಕಡಿದು+ ಭೂತಕೆ +ಬಡಿಸಿದರೆ+ ಕೃತಕೃತ್ಯನಹೆನೆಂದ

ಅಚ್ಚರಿ:
(೧) ನುಡಿ, ನಡೆ – ೧,೨,೪,೫ ಸಾಲಿನ ಮೊದಲ ಪದಗಳಾಗಿ ಬಳಕೆ