ಪದ್ಯ ೭೮: ಭೀಮನನ್ನು ಯಾರು ತಡೆದರು?

ಕೊಂದನಿಬ್ಬರ ಸೌಬಲರ ನೃಪ
ನಂದನರ ಗಾಂಧಾರರೊಂದೆರ
ಡೆಂದು ಸಲುಗೆಗೆ ಸಲಿಸಿ ಬಂದೈನೂರ ಬರಿಕೈದು
ಬಂದ ದ್ರೋಣನ ಹಳಚಿ ಭಂಗಕೆ
ತಂದನಹಿತ ವ್ರಜವನಿತ್ತಲು
ಸಂದಣಿಸಿದರು ಕೌರವರು ಪವಮಾನಸುತನೊಡನೆ (ದ್ರೋಣ ಪರ್ವ, ೩ ಸಂಧಿ, ೭೮ ಪದ್ಯ)

ತಾತ್ಪರ್ಯ:
ಅರ್ಜುನನು ಇಬ್ಬರು ಸುಬಲ ಪುತ್ರರನ್ನು ಕೊಂದನು. ಐನೂರು ಮಂದಿ ಗಾಂಧಾರ ರಾಜರನ್ನು ಒಂದೆರಡೆಂದು ಎಣಿಸಿ ಕೊಂದನು. ದ್ರೋಣನು ಬರಲು ಅವನನ್ನು ಭಂಗಪದಿಸಿದನು. ಇತ್ತ ಕೌರವರು ಭೀಮನನ್ನು ತಡೆದರು.

ಅರ್ಥ:
ಕೊಂದು: ಸಾಯಿಸು; ಸೌಬಲ: ಸುಬಲನ ಮಕ್ಕಳು; ಸುಬಲ: ಸಿಂಧು ದೇಶದ ರಾಜ; ನೃಪ: ರಾಜ; ನಂದನ; ಮಕ್ಕಳು; ಸಲುಗೆ: ಸದರ; ಸಲಿಸು: ನೀಡು; ಕೈದು: ಆಯುಧ; ಬಂದು: ಆಗಮಿಸು; ಹಳಚು: ತಾಗುವಿಕೆ; ಭಂಗ: ಮುರಿಯುವಿಕೆ; ಅಹಿತ: ವೈರಿ; ವ್ರಜ: ಗುಂಪು; ಸಂದಣಿಸು: ಗುಂಪು; ಪವಮಾನ: ವಾಯು; ಸುತ: ಪುತ್ರ;

ಪದವಿಂಗಡಣೆ:
ಕೊಂದನ್+ಇಬ್ಬರ +ಸೌಬಲರ +ನೃಪ
ನಂದನರ +ಗಾಂಧಾರರೊಂದ್+ಎರ
ಡೆಂದು +ಸಲುಗೆಗೆ+ ಸಲಿಸಿ +ಬಂದ್+ಐನೂರ +ಬರಿಕೈದು
ಬಂದ +ದ್ರೋಣನ +ಹಳಚಿ +ಭಂಗಕೆ
ತಂದನ್+ಅಹಿತ +ವ್ರಜವನ್+ಇತ್ತಲು
ಸಂದಣಿಸಿದರು +ಕೌರವರು+ ಪವಮಾನಸುತನೊಡನೆ

ಅಚ್ಚರಿ:
(೧) ಸುತ, ನಂದನ – ಸಮಾನಾರ್ಥಕ ಪದ

ಪದ್ಯ ೪೯: ಕೌರವರು ಅರ್ಜುನನ ಮೇಲೆ ಹೇಗೆ ದಾಳಿ ಮಾಡಿದರು?

ಹೆಣನ ತುಳಿದೊತ್ತೊತ್ತೆಯಲಿ ಸಂ
ದಣಿಸಿ ಕವಿದುದು ಮತ್ತೆ ದಳ ಭಾ
ರಣೆಯ ಬಂಕವನೇನನೆಂಬೆನು ಬಲಿದ ಲಗ್ಗೆಯಲಿ
ಕೆಣಕಿದವು ಕರಿಘಟೆಗಳೊಂದೆಸೆ
ಯಣುಕಿದವು ಹಯರಥವದೊಂದೆಸೆ
ಕಣೆಗದರಿ ಕಾಲಾಳದೊಂದೆಸೆ ಮುಸುಕಿತರ್ಜುನನ (ಭೀಷ್ಮ ಪರ್ವ, ೮ ಸಂಧಿ, ೪೯ ಪದ್ಯ)

ತಾತ್ಪರ್ಯ:
ನೆಲಕ್ಕೆ ಬಿದ್ದ ಹೆಣಗಳನ್ನು ತುಳಿದು ಕೌರವ ಸೈನ್ಯವು ಗುಂಪುಗೂಡಿ ಮತ್ತೆ ಅರ್ಜುನನ ಮೇಲೆ ಆಕ್ರಮಣ ಮಾಡಲು ಸಿದ್ಧವಾಯಿತು. ಆನೆ, ಕುದುರೆ, ಕಾಲಾಳುಗಳು, ರಥಗಳು ಎಲ್ಲಾ ದಿಕ್ಕುಗಳಿಂದ ಅರ್ಜುನನ ಮೇಲೆ ಆಕ್ರಮಿಸಿದವು.

ಅರ್ಥ:
ಹೆಣ: ಜೀವವಿಲ್ಲದ ದೇಹ; ತುಳಿ: ಮೆಟ್ಟು; ಒತ್ತು: ನೂಕು, ಸರಿಸು; ಸಂದಣಿ: ಗುಂಪು; ಕವಿ: ಆವರಿಸು; ಮತ್ತೆ: ಪುನಃ; ದಳ: ಸೈನ್ಯ; ಭಾರಣೆ: ಮಹಿಮೆ; ಬಿಂಕ: ಗರ್ವ, ಜಂಬ; ಬಲಿದ: ಶಕ್ತಿಶಾಲಿ; ಲಗ್ಗೆ: ಆಕ್ರಮಣ; ಕೆಣಕು: ರೇಗಿಸು; ಕರಿಘಟೆ: ಆನೆಗಳ ಗುಂಪು; ಅಣುಕು: ಆಕ್ರಮಿಸು; ಹಯ: ಕುದುರೆ; ರಥ: ಬಂಡಿ; ಕಣೆ: ಬಾಣ; ಕಾಲಾಳು: ಸೈನಿಕ; ಎಸೆ: ಬಾಣ ಬಿಡು, ಹೊಡೆ; ಮುಸುಕು: ಆವರಿಸು;

ಪದವಿಂಗಡಣೆ:
ಹೆಣನ +ತುಳಿದ್+ಒತ್ತೊತ್ತೆಯಲಿ +ಸಂ
ದಣಿಸಿ +ಕವಿದುದು +ಮತ್ತೆ +ದಳ +ಭಾ
ರಣೆಯ +ಬಂಕವವ್+ಏನನೆಂಬೆನು +ಬಲಿದ +ಲಗ್ಗೆಯಲಿ
ಕೆಣಕಿದವು +ಕರಿಘಟೆಗಳ್+ಒಂದ್+ಎಸೆ
ಅಣುಕಿದವು +ಹಯ+ರಥವದೊಂದ್+ಎಸೆ
ಕಣೆಗದರಿ+ ಕಾಲಾಳದೊಂದ್+ಎಸೆ +ಮುಸುಕಿತ್+ಅರ್ಜುನನ

ಅಚ್ಚರಿ:
(೧) ಕೌರವರ ಸೊಕ್ಕನ್ನು ವಿವರಿಸುವ ಪರಿ – ದಳ ಭಾರಣೆಯ ಬಂಕವನೇನನೆಂಬೆನು ಬಲಿದ ಲಗ್ಗೆಯಲಿ
(೨) ಒಂದೆಸೆ ಪದದ ಬಳಕೆ – ೪,೫,೬ ಸಾಲು

ಪದ್ಯ ೬೩: ಯುದ್ಧಕ್ಕೆ ಮತ್ತಾರು ಹೊರಟರು?

ಹರಿಯ ಬಲವಂದಣ್ಣನಂಘ್ರಿಗೆ
ಶಿರವ ಚಾಚಿ ನಿಜಾಯುಧವ ವಿ
ಸ್ತರಿಸಿ ಪವನಜ ಪಾರ್ಥಮಾದ್ರೀಸುತರು ರಥವೇರಿ
ಧುರಕೆ ನಡೆದರು ದ್ರುಪದ ಸಾತ್ಯಕಿ
ವರ ವಿರಾಟಾದಿಗಳು ಚೂಣಿಯೊ
ಳುರವಣಿಸಿದರು ಸೇನೆ ನಡೆದುದು ಮುಂದೆ ಸಂದಣಿಸಿ (ಭೀಷ್ಮ ಪರ್ವ, ೧ ಸಂಧಿ, ೬೩ ಪದ್ಯ)

ತಾತ್ಪರ್ಯ:
ಭೀಮಾರ್ಜುನರು, ನಕುಲ ಸಹದೇವರು ಕೃಷ್ಣನಿಗೆ ಪ್ರದಕ್ಷಿಣೆ ಮಾಡಿ ಅಣ್ಣನ ಪಾದಗಳಿಗೆ ನಮಸ್ಕರಿಸಿ ತಮ್ಮ ಆಯುಧಗಳನ್ನು ತೆಗೆದುಕೊಂಡು ರಥಗಳನ್ನೇರಿ ಯುದ್ಧಕ್ಕೆ ಹೊರಟರು. ದ್ರುಪದ ವಿರಾಟ ಮೊದಲಾದವರು ಸೈನ್ಯಗಳೊಡನೆ ಹೊರಟರು.

ಅರ್ಥ:
ಹರಿ: ಕೃಷ್ಣ; ಬಲ: ಸೈನ್ಯ; ಅಣ್ಣ: ಸಹೋದರ; ಅಂಘ್ರಿ: ಪಾದ; ಶಿರ: ತಲೆ; ಚಾಚು: ಹರಡು; ಆಯುಧ: ಶಸ್ತ್ರ; ವಿಸ್ತರಿಸು: ಹಬ್ಬು, ಹರಡು; ಪವನಜ: ಭೀಮ; ಸುತ: ಮಕ್ಕಳು; ರಥ:ಬಂಡಿ; ಧುರ: ಯುದ್ಧ, ಕಾಳಗ; ನಡೆ: ಚಲಿಸು; ವರ: ಶ್ರೇಷ್ಠ; ಆದಿ: ಮುಂತಾದ; ಚೂಣಿ: ಮೊದಲು; ಉರವಣಿಸು: ಆತುರಿಸು; ಸೇನೆ: ಸೈನ್ಯ; ಸಂದಣಿಸು: ಒಟ್ಟಾಗು, ಗುಂಪು;

ಪದವಿಂಗಡಣೆ:
ಹರಿಯ +ಬಲವಂದ್+ಅಣ್ಣನ್+ಅಂಘ್ರಿಗೆ
ಶಿರವ +ಚಾಚಿ +ನಿಜಾಯುಧವ +ವಿ
ಸ್ತರಿಸಿ+ ಪವನಜ +ಪಾರ್ಥ+ಮಾದ್ರೀ+ಸುತರು +ರಥವೇರಿ
ಧುರಕೆ+ ನಡೆದರು +ದ್ರುಪದ +ಸಾತ್ಯಕಿ
ವರ +ವಿರಾಟಾದಿಗಳು +ಚೂಣಿಯೊಳ್
ಉರವಣಿಸಿದರು +ಸೇನೆ +ನಡೆದುದು +ಮುಂದೆ +ಸಂದಣಿಸಿ

ಅಚ್ಚರಿ:
(೧) ನಮಸ್ಕರಿಸು ಎಂದು ಹೇಳಲು – ಅಂಘ್ರಿಗೆ ಶಿರವ ಚಾಚಿ

ಪದ್ಯ ೩: ದುರ್ಯೋಧನನು ಯಾವ ಪ್ರಶ್ನೆಯನ್ನು ಕೇಳಿದನು?

ಸಂದಣಿಸಿ ಕುರುಭೂಮಿಯಲಿ ತಾ
ಮಂದಿ ಬಿಟ್ಟುದು ನಾಡಗಾವಳಿ
ಬಂದುದಲ್ಲಿಗೆ ಕಳುಹಿದರು ದೂತರನು ದುರ್ಜನರು
ನಂದಗೋಪನ ಮಗನ ಕೊಂಡೆಯ
ದಿಂದ ಕಲಿಯೇರಿದರು ಕೃಪಣರ
ಕೊಂದೊಡಹುದಪಕೀರ್ತಿಯದಕಿನ್ನೇನು ಹದನೆಂದ (ಭೀಷ್ಮ ಪರ್ವ, ೧ ಸಂಧಿ, ೩ ಪದ್ಯ)

ತಾತ್ಪರ್ಯ:
ಕುರುಕ್ಷೇತ್ರದಲ್ಲಿ ಆ ಮಂದಿಯ ಗುಂಪು ಬೀಡುಬಿಟ್ಟು ಗದ್ದಲ ಮಾಡುತ್ತಿದೆ, ದುರ್ಜನರು ನಮ್ಮಲ್ಲಿಗೆ ದೂತರನ್ನು ಅಟ್ಟಿದರು. ನಂದಗೋಪನ ಮಗನ (ಕೃಷ್ಣ) ಚಾಡಿ ಮಾತನ್ನು ಕೇಳಿ ವೀರತನವನ್ನು ತೋರುತ್ತಿದ್ದಾರೆ, ದುರಶೆಯ ಇವರನ್ನು ಕೊಂದರೆ ಅಪಕೀರ್ತಿ ಬರುವುದು ನಮಗೇ ಏನು ಮಾಡುವುದು ಎಂದು ದುರ್ಯೋಧನನು ಕೇಳಿದನು.

ಅರ್ಥ:
ಸಂದಣಿ: ಗುಂಪು; ಭೂಮಿ: ಅವನಿ; ಮಂದಿ: ಜನರ ಗುಂಪು; ನಾಡಗಾವಳಿ: ನಾಡ ಜನರ ಗುಂಪು; ಬಂದು: ಆಗಮಿಸು; ಕಳುಹಿಸು: ತೆರಳು; ದೂತ: ಸೇವಕ; ದುರ್ಜನ: ಕೆಟ್ಟಜನ; ಮಗ: ಸುತ; ಕೊಂಡೆ:ಚಾಡಿಯ ಮಾತು; ಕಲಿ: ಶೂರ; ಕೃಪಣ: ದೈನ್ಯದಿಂದ ಕೂಡಿದುದು; ಕೊಂದು: ಕೊಲ್ಲು; ಅಪಕೀರ್ತಿ: ಅಪಯಶಸ್ಸು; ಹದ: ಸ್ಥಿತಿ;

ಪದವಿಂಗಡಣೆ:
ಸಂದಣಿಸಿ +ಕುರುಭೂಮಿಯಲಿ +ತಾ
ಮಂದಿ +ಬಿಟ್ಟುದು +ನಾಡಗಾವಳಿ
ಬಂದುದಲ್ಲಿಗೆ +ಕಳುಹಿದರು +ದೂತರನು +ದುರ್ಜನರು
ನಂದಗೋಪನ+ ಮಗನ +ಕೊಂಡೆಯ
ದಿಂದ +ಕಲಿಯೇರಿದರು +ಕೃಪಣರ
ಕೊಂದೊಡಹುದ್+ಅಪಕೀರ್ತಿ+ಅದಕಿನ್ನೇನು +ಹದನೆಂದ

ಅಚ್ಚರಿ:
(೧) ಪಾಂಡವರನ್ನು ತೆಗೆಳುವ ಪರಿ – ದುರ್ಜನರು ನಂದಗೋಪನ ಮಗನ ಕೊಂಡೆಯದಿಂದ ಕಲಿಯೇರಿದರು; ಕೃಪಣರ ಕೊಂದೊಡಹುದಪಕೀರ್ತಿ

ಪದ್ಯ ೨೫: ಭಾನುಮತಿ ಏಕೆ ಸುಮ್ಮನಿದ್ದಳು?

ಸಾಕು ಸಾಕೀ ಮಾತಿನಲಿ ಜಗ
ದೇಕ ರಾಜ್ಯದ ಪಟ್ಟವಾಯ್ತವಿ
ವೇಕಿಗಳಿಗಧಿದೈವ ತಾನೆನಗೀಸು ಹಿರಿದಲ್ಲ
ಮೂಕಭಾವದ ದೀಕ್ಷೆ ತನಗೆಂ
ದಾ ಕಮಲಮುಖಿಯಿದ್ದಳಿತ್ತಲು
ನೂಕಿದವು ದಂಡಿಗೆಗಳರಮನೆಯಿಂದ ಸಂದಣಿಸಿ (ಅರಣ್ಯ ಪರ್ವ, ೨೨ ಸಂಧಿ, ೨೫ ಪದ್ಯ)

ತಾತ್ಪರ್ಯ:
ದುರ್ಯೋಧನನ ಮಾತನ್ನು ಕೇಳಿ, ಸಾಕು ಸಾಕು ನೀವಾಡಿದ ಮಾತಿನಿಂದ ನನಗೆ ಏಕಚಕ್ರಾಧಿಪತ್ಯ ದೊರೆತಂತಾಯಿತು, ಅವಿವೇಕಿಗಳಿಗೆ ಅಧಿದೈವತೆಯಾದ ನನಗೆ ಇದೇನು ಹೆಚ್ಚಿನದಲ್ಲ. ಇನ್ನು ನಾನು ಮೂಕತನದ ಪಟ್ಟ ಕಟ್ಟಿಕೊಂಡಿರುತ್ತೇನೆ, ಎಂದು ಚಿಂತಿಸಿ ಭಾನುಮತಿಯು ಸುಮ್ಮನಿದ್ದಳು. ಇತ್ತ ಅರಮನೆಯಿಂದ ಕೌರವನಿದ್ದ ಬಳಿಗೆ ಪಲ್ಲಕ್ಕಿಗಳು ಬಂದವು.

ಅರ್ಥ:
ಸಾಕು: ನಿಲ್ಲಿಸು, ತಡೆ; ಮಾತು: ನುಡಿ; ಜಗ: ಪ್ರಪಂಚ; ರಾಜ್ಯ: ರಾಷ್ಟ್ರ; ಪಟ್ಟ: ಸಿಂಹಾಸನ ಗದ್ದುಗೆ, ಕಿರೀಟ; ಅವಿವೇಕ: ಒಳಿತನ್ನು ತಿಳಿಯಲಾರದವ; ಅಧಿದೈವ: ಮೂಲ ದೈವ; ಈಸು: ಇಷ್ಟು; ಹಿರಿದು: ಹೆಚ್ಚಿನದು; ಮೂಕ: ಮಾತನಾಡದ ಸ್ಥಿತಿ; ದೀಕ್ಷೆ: ನಿಯಮ; ಕಮಲಮುಖಿ: ಸುಂದರಿ, ಕಮಲದಂತ ಮುಖವುಳ್ಳವಳು (ದ್ರೌಪದಿ); ನೂಕು: ತಳ್ಳು; ದಂಡಿಗೆ: ಪಲ್ಲಕ್ಕಿ; ಅರಮನೆ: ರಾಜರ ವಾಸಸ್ಥಾನ; ಸಂದಣಿ: ಗುಂಪು;

ಪದವಿಂಗಡಣೆ:
ಸಾಕು +ಸಾಕ್+ಈ +ಮಾತಿನಲಿ +ಜಗ
ದೇಕ +ರಾಜ್ಯದ +ಪಟ್ಟವಾಯ್ತ್+ಅವಿ
ವೇಕಿಗಳಿಗ್+ಅಧಿದೈವ +ತಾನ್+ಎನಗ್+ಈಸು +ಹಿರಿದಲ್ಲ
ಮೂಕಭಾವದ +ದೀಕ್ಷೆ +ತನಗೆಂದ್
ಆ+ ಕಮಲಮುಖಿ+ಇದ್ದಳ್+ಇತ್ತಲು
ನೂಕಿದವು +ದಂಡಿಗೆಗಳ್+ಅರಮನೆಯಿಂದ +ಸಂದಣಿಸಿ

ಅಚ್ಚರಿ:
(೧) ಭಾನುಮತಿ ತನ್ನನ್ನ ಹಂಗಿಸಿದ ಪರಿ – ಅವಿವೇಕಿಗಳಿಗಧಿದೈವ ತಾನೆನಗೀಸು ಹಿರಿದಲ್ಲ

ಪದ್ಯ ೧೫: ಗಣಿಕೆಯರು ಯಾರ ಬಳಿ ಬಂದರು?

ಎನುತ ಕವಿದುದು ಮತ್ತೆ ಕಾಂತಾ
ಜನ ಸುಯೋಧನನರಮನೆಯ ಸೊಂ
ಪಿನ ಸಖೀ ನಿಕುರುಂಬ ತುಂಬಿತು ವರ ತಪೋವನವ
ಮನಸಿಜನ ದಳ ನೂಕಿತೇಳೇ
ಳೆನುತ ಚೆಲ್ಲಿತು ಮುನಿನಿಕರ ನೃಪ
ವನಿತೆಯಿದಿರಲಿ ಸುಳಿದವರಿವರದಿರು ಮಂದಿ ಸಂದಣಿಸಿ (ಅರಣ್ಯ ಪರ್ವ, ೧೯ ಸಂಧಿ, ೧೫ ಪದ್ಯ)

ತಾತ್ಪರ್ಯ:
ಹೀಗೆ ಆಶ್ರಮವಾಸಿಗಳೆದುರಿನಲ್ಲಿ ವಾದಿಸಿ, ದುರ್ಯೋಧನನ ಅರಮನೆಯ ರಾಣಿಯರ ಸಖಿಯರ ತಂಡವು ತಪೋವನವನ್ನು ತುಂಬಿತು, ಕಾಮನ ಸೈನ್ಯವು ನುತ್ತಿ ಬರುತ್ತಿದೆ ಏಳಿರಿ ಎಂದು ಮುನಿಗಳು ಓಡಿದರು. ಸಖಿಯರ ಗುಂಪು ದ್ರೌಪದಿಯ ಇದಿರಿನಲ್ಲಿ ಸುಳಿದಿತು.

ಅರ್ಥ:
ಕವಿ: ಆವರಿಸು; ಕಾಂತಾಜನ: ಹೆಣ್ಣು; ಸ್ತ್ರೀಯರ ಗುಂಪು; ಅರಮನೆ: ರಾಜರ ಆಲಯ; ಸೊಂಪು: ಸೊಗಸು, ಚೆಲುವು; ಸಖಿ: ಗೆಳತಿ, ಸ್ನೇಹಿತೆ; ನಿಕುರುಂಬ: ಗುಂಪು, ಸಮೂಹ; ತುಂಬು: ಪೂರ್ಣವಾಗು; ವರ: ಶ್ರೇಷ್ಠ; ತಪೋವನ: ತಪಸ್ಸು ಮಾಡುವ ಕಾಡು; ಮನಸಿಜ: ಮದನ, ಕಾಮ; ದಳ: ಸೈನ್ಯ; ನೂಕು: ತಳ್ಳು; ಏಳು: ಮೇಲೇಳು; ಚೆಲ್ಲು: ಹರಡು, ಚದರಿ ಹೋಗು; ಮುನಿ: ಋಷಿ; ನಿಕರ: ಗುಂಪು; ನೃಪ: ರಾಜ; ವನಿತೆ: ಹೆಣ್ಣು; ಸುಳಿ:ಕಾಣಿಸಿಕೊಳ್ಳು; ಮಂದಿ: ಜನ, ಜನಸಮೂಹ; ಸಂದಣಿ: ಗುಂಪು, ಸಮೂಹ; ಇವರದಿರು: ಇವರೆದುರು;

ಪದವಿಂಗಡಣೆ:
ಎನುತ +ಕವಿದುದು +ಮತ್ತೆ +ಕಾಂತಾ
ಜನ +ಸುಯೋಧನನ್+ಅರಮನೆಯ +ಸೊಂ
ಪಿನ+ ಸಖೀ +ನಿಕುರುಂಬ +ತುಂಬಿತು +ವರ+ ತಪೋವನವ
ಮನಸಿಜನ +ದಳ +ನೂಕಿತ್+ಏಳೇಳ್
ಎನುತ +ಚೆಲ್ಲಿತು +ಮುನಿನಿಕರ+ ನೃಪ
ವನಿತೆ+ಇದಿರಲಿ+ ಸುಳಿದವರ್+ಇವರದಿರು+ ಮಂದಿ +ಸಂದಣಿಸಿ

ಅಚ್ಚರಿ:
(೧) ಸಂದಣಿಸಿ, ನಿಕರ, ನಿಕುರುಂಬ – ಸಾಮ್ಯಾರ್ಥ ಪದಗಳು