ಪದ್ಯ ೧೧: ಎಲ್ಲಾ ಜೀವರಿಗೂ ಯಾವುದು ತಪ್ಪದೆ ಬರುತ್ತದೆ?

ಏನನೆಂದೆವು ಹಿಂದೆ ಧರ್ಮ ನಿ
ಧಾನವನು ಕಯ್ಯೊಡನೆ ಮರೆದೆಯಿ
ದೇನು ನಿನ್ನಯ ಮತಿಯ ವಿಭ್ರಮೆ ನಮ್ಮ ಹೇಳಿಕೆಗೆ
ಭಾನುಮತಿಯನು ತಿಳುಹು ನಿನ್ನಯ
ಮಾನಿನಿಯ ಸಂತೈಸು ಸಂಸಾ
ರಾನುಗತಿ ತಾನಿದು ಚತುರ್ದಶ ಜಗದ ಜೀವರಿಗೆ (ಗದಾ ಪರ್ವ, ೧೧ ಸಂಧಿ, ೧೧ ಪದ್ಯ)

ತಾತ್ಪರ್ಯ:
ಹಿಂದೆ ನಾವು ಬೋಧಿಸಿದ ಧರ್ಮ ಮಾರ್ಗವು ನೆನಪಿದೆಯಾ? ಅದನ್ನು ಕೇಳಿದೊಡನೆ ಮರೆತುಬಿಟ್ಟೆ. ಈಗ ನಾವಾಡಿದುದನ್ನು ಕೇಳಿ ಮೂರ್ಛೆಹೋದೆ. ಹೀಗೆ ಮಾಡಿದರೆ ಹೇಗೆ? ಭಾನುಮತಿ, ಗಾಂಧಾರಿಯನ್ನು ಯಾರು ಸಮಾಧಾನಪಡಿಸುವವರು? ಇದೇನು ನಿಮಗೆ ಮಾತ್ರ ಬಂದುದಲ್ಲ. ಹದಿನಾಲ್ಕು ಲೋಕಗಲ ಜಿವರಿಗೂ ಹುಟ್ಟುಸಾವಿನಂತೆ, ಸುಖ ದುಃಖಗಳೂ ತಪ್ಪದೆ ಬರುತ್ತವೆ ಎಂದು ವ್ಯಾಸರು ಹೇಳಿದರು.

ಅರ್ಥ:
ಹಿಂದೆ: ಗತಕಾಲ; ಧರ್ಮ: ಧಾರಣ ಮಾಡಿದುದು; ನಿಧಾನ: ವಿಳಂಬ, ಸಾವಕಾಶ; ಒಡನೆ: ಕೂಡಲೆ; ಮರೆತೆ: ಜ್ಞಾಪಕದಿಂದ ದೂರಮಾಡು; ಮತಿ: ಬುದ್ಧಿ; ವಿಭ್ರಮ: ಅಲೆದಾಟ, ಸುತ್ತಾಟ; ಹೇಳಿಕೆ: ನುಡಿ; ತಿಳುಹು: ತಿಳಿಸು; ಮಾನಿನಿ: ಹೆಣ್ಣು; ಸಂತೈಸು: ಸಮಾಧಾನ ಪಡಿಸು; ಸಂಸಾರ: ಬಂಧುಜನ; ಅನುಗತಿ: ಸಾವು; ಚತುರ್ದಶ: ಹದಿನಾಲ್ಕು; ಜಗ: ಪ್ರಪಂಚ; ಜೀವರು: ಜೀವಿ;

ಪದವಿಂಗಡಣೆ:
ಏನನೆಂದೆವು +ಹಿಂದೆ +ಧರ್ಮ +ನಿ
ಧಾನವನು +ಕಯ್ಯೊಡನೆ +ಮರೆದೆ+
ಇದೇನು +ನಿನ್ನಯ +ಮತಿಯ +ವಿಭ್ರಮೆ +ನಮ್ಮ +ಹೇಳಿಕೆಗೆ
ಭಾನುಮತಿಯನು +ತಿಳುಹು +ನಿನ್ನಯ
ಮಾನಿನಿಯ +ಸಂತೈಸು +ಸಂಸಾ
ರಾನುಗತಿ+ ತಾನಿದು +ಚತುರ್ದಶ +ಜಗದ +ಜೀವರಿಗೆ

ಅಚ್ಚರಿ:
(೧) ಲೋಕ ನೀತಿ – ಸಂಸಾರಾನುಗತಿ ತಾನಿದು ಚತುರ್ದಶ ಜಗದ ಜೀವರಿಗೆ

ಪದ್ಯ ೯: ರಾಣಿಯರ ಶೋಕವು ಯಾರ ಮನಸ್ಸನ್ನು ಕಲಕಿತು?

ಆರು ಸಂತೈಸುವರು ಲೋಚನ
ವಾರಿ ಹೊನಲಾಯ್ತರಮನೆಯ ನೃಪ
ನಾರಿಯರ ಬಹಳ ಪ್ರಳಾಪ ವ್ಯಥೆಯ ಬೇಳುವೆಗೆ
ಆರು ಮರುಗರು ಶೋಕಪನ್ನಗ
ಘೋರವಿಷ ಮುನಿವರನ ಹೃದಯವ
ಗೋರಿತೇನೆಂಬೆನು ಲತಾಂಗಿಯರಳಲ ಕಳವಳವ (ಗದಾ ಪರ್ವ, ೧೧ ಸಂಧಿ, ೯ ಪದ್ಯ)

ತಾತ್ಪರ್ಯ:
ಸ್ತ್ರೀಯರು ಬಹಳವಾದ ವ್ಯಥೆಯಿಂದ ಅಳುವುದನ್ನು ಸಂತೈಸುವವರಾರು? ಅವರ ಕಣ್ಣೀರು ಹೊನಲಾಗಿ ಹರಿಯಿತು, ಅದನ್ನು ನೋಡಿ ಮರುಗದಿರುವವರಾರು? ಅವರ ಶೋಕ ಸರ್ಪದ ವಿಷವು ವ್ಯಾಸನ ಹೃದಯವನ್ನು ಕಲಕಿತು.

ಅರ್ಥ:
ಸಂತೈಸು: ಸಮಾಧಾನ ಪಡಿಸು; ಲೋಚನ: ಕಣ್ಣು; ವಾರಿ: ನೀರು; ಲೋಚನವಾರಿ: ಕಣ್ಣೀರು; ಹೊನಲು: ಪ್ರವಾಹ, ತೊರೆ; ಅರಮನೆ: ರಾಜರ ಆಲಯ; ನೃಪ: ರಾಜ; ನಾರಿ: ಹೆಣ್ಣು; ನೃಪನಾರಿ: ರಾಣಿ; ಬಹಳ: ತುಂಬ; ಪ್ರಳಾಪ: ಅಳಲು; ವ್ಯಥೆ: ದುಃಖ; ಬೇಳುವೆ: ಮರುಳುಮಾಡುವ; ಮರುಗು: ತಳಮಳ, ಸಂಕಟ; ಶೋಕ: ದುಃಖ; ಪನ್ನಗ: ಹಾವು; ಘೋರ: ಬಹಳ, ದೊಡ್ಡ; ವಿಷ: ಗರಳ; ಮುನಿ: ಋಷಿ; ಹೃದಯ: ಎದೆ; ಗೋರು: ದೋಚು, ಸುಲಿ, ಬಾಚು; ಲತಾಂಗಿ: ಹೆಣ್ಣು; ಕಳವಳ: ಗೊಂದಲ;

ಪದವಿಂಗಡಣೆ:
ಆರು +ಸಂತೈಸುವರು +ಲೋಚನ
ವಾರಿ +ಹೊನಲಾಯ್ತ್+ಅರಮನೆಯ +ನೃಪ
ನಾರಿಯರ +ಬಹಳ +ಪ್ರಳಾಪ +ವ್ಯಥೆಯ +ಬೇಳುವೆಗೆ
ಆರು +ಮರುಗರು +ಶೋಕ+ಪನ್ನಗ
ಘೋರವಿಷ +ಮುನಿವರನ+ ಹೃದಯವ
ಗೋರಿತ್+ಏನೆಂಬೆನು +ಲತಾಂಗಿಯರ್+ಅಳಲ +ಕಳವಳವ

ಅಚ್ಚರಿ:
(೧) ರೂಪಕದ ಪ್ರಯೋಗ – ಶೋಕಪನ್ನಗ ಘೋರವಿಷ ಮುನಿವರನ ಹೃದಯವ ಗೋರಿತೇನೆಂಬೆನು ಲತಾಂಗಿಯರಳಲ ಕಳವಳವ
(೨) ಕಣ್ಣೀರನ್ನು ಲೋಚನವಾರಿ ಎಂದು ಕರೆದಿರುವುದು
(೩) ನಾರಿ, ಲತಾಂಗಿ – ಸಾಮ್ಯಾರ್ಥ ಪದಗಳು

ಪದ್ಯ ೨೨: ಅರ್ಜುನನು ಏನೆಂದು ಕೂಗಿದನು?

ತರಿದನಗ್ಗದ ಸತ್ಯಕರ್ಮನ
ಧುರವ ಸಂತೈಸುವ ತ್ರಿಗರ್ತರ
ದೊರೆ ಸುಶರ್ಮನನವನ ಸಹಭವ ಗೋತ್ರ ಬಾಂಧವರ
ಒರಸಿದನು ಕುರುರಾಯನಾವೆಡೆ
ಬರಲಿ ತನ್ನಾಪ್ತರಿಗೆ ಕೊಟ್ಟೆನು
ಹರಿವನಿನ್ನಾಹವ ವಿಲಂಬವ ಮಾಡಬೇಡೆಂದ (ಗದಾ ಪರ್ವ, ೨ ಸಂಧಿ, ೨೨ ಪದ್ಯ)

ತಾತ್ಪರ್ಯ:
ಸತ್ಯಕರ್ಮ, ಸುಶರ್ಮ, ಅವರ ಸಹೋದರರು, ಗೋತ್ರ ಬಾಂಧವರೆಲ್ಲರನ್ನು ಅರ್ಜುನನು ಸಂಹರಿಸಿ, ದುರ್ಯೋಧನ ನಿನ್ನಪ್ತರೆಲ್ಲರನ್ನೂ ಕೊಂದಿದ್ದೇನೆ, ಯುದ್ಧಕ್ಕೆ ಬಾ ತಡಮಾಡಬೇಡ ಎಂದು ಕೂಗಿದನು.

ಅರ್ಥ:
ತರಿ: ಸೀಳು; ಅಗ್ಗ: ಶ್ರೇಷ್ಠ; ಧುರ: ಯುದ್ಧ, ಕಾಳಗ; ಸಂತೈಸು: ತಾಳ್ಮೆ, ಸಹಿಸು; ದೊರೆ: ರಾಜ; ಸಹಭವ: ಸಹೋದರ; ಗೋತ್ರ: ವಂಶ; ಬಾಂಧವ: ಸಂಬಂಧಿಕ, ಆಪ್ತ; ಒರಸು: ನಾಶ; ಬರಲಿ: ಆಗಮಿಸು; ಆಪ್ತ: ಹತ್ತಿರದ; ಕೊಡು: ನೀಡು; ಹರಿ: ನಾಶ; ಆಹವ: ಯುದ್ಧ; ವಿಲಂಬ: ತಡ;

ಪದವಿಂಗಡಣೆ:
ತರಿದನ್+ಅಗ್ಗದ +ಸತ್ಯಕರ್ಮನ
ಧುರವ +ಸಂತೈಸುವ +ತ್ರಿಗರ್ತರ
ದೊರೆ +ಸುಶರ್ಮನನ್+ ಅವನ +ಸಹಭವ +ಗೋತ್ರ +ಬಾಂಧವರ
ಒರಸಿದನು +ಕುರುರಾಯನ್+ಆವೆಡೆ
ಬರಲಿ+ ತನ್ನಾಪ್ತರಿಗೆ +ಕೊಟ್ಟೆನು
ಹರಿವನಿನ್+ಆಹವ +ವಿಲಂಬವ +ಮಾಡಬೇಡೆಂದ

ಅಚ್ಚರಿ:
(೧) ಸಹೋದರ ಎಂದು ಹೇಳುವ ಪರಿ – ಅವನ ಸಹಭವ ಗೋತ್ರ ಬಾಂಧವರ

ಪದ್ಯ ೩೯: ದ್ರೌಪದಿಯು ಏನು ಯೋಚಿಸುತ್ತಾ ಭೀಮನ ಬಳಿ ಬಂದಳು?

ಎಬ್ಬಿಸಲು ಭುಗಿಲೆಂಬನೋ ಮೇ
ಣೊಬ್ಬಳೇತಕೆ ಬಂದೆ ಮೋರೆಯ
ಮಬ್ಬಿದೇನೆಂದೆನ್ನ ಸಂತೈಸುವನೊ ಸಾಮದಲಿ
ತಬ್ಬುವುದೊ ತಾ ಬಂದ ಬರವಿದು
ನಿಬ್ಬರವಲಾ ಜನದ ಮನಕಿ
ನ್ನೆಬ್ಬಿಸಿಯೆ ನೋಡುವೆನೆನುತ ಸಾರಿದಳು ವಲ್ಲಭನ (ವಿರಾಟ ಪರ್ವ, ೩ ಸಂಧಿ, ೩೯ ಪದ್ಯ)

ತಾತ್ಪರ್ಯ:
ದ್ರೌಪದಿಯು ಯೋಚಿಸುತ್ತಾ ಮುಂದೆ ನಡೆದಳು, ಎಬ್ಬಿಸಿದ ಕೂಡಲೇ ಭೀಮನು ಸಿಟ್ಟಾಗುವನೇ? ಅಥವಾ ಒಬ್ಬಳೇ ಏಕೆ ಬಂದೆ? ಮುಖವೇಕೆ ಕುಂದಿದೆ? ಸಮಾಧಾನ ಮಾಡುವನೇ? ನಾನು ಬಂದದ್ದು ಯಾರಿಗಾದರೂ ತಿಳಿದರೆ? ಎಂದು ಯೋಚಿಸಿದ ದ್ರೌಪದಿಯು ಎಬ್ಬಿಸಿ ನೋಡುವ ಎಂದು ನಿಶ್ಚಯಿಸಿ ಭೀಮನ ಬಳಿ ಬಂದಳು.

ಅರ್ಥ:
ಎಬ್ಬಿಸು: ಎಚ್ಚರಗೊಳಿಸು; ಭುಗಿಲ್: ಕೂಡಲೆ, ಒಂದು ಅನುಕರಣ ಶಬ್ದ; ಮೇಣ್: ಅಥವ; ಬಂದೆ: ಆಗಮಿಸು; ಮೋರೆ: ಮುಖ; ಮಬ್ಬು: ನಸುಗತ್ತಲೆ, ಮಸುಕು; ಸಂತೈಸು: ಸಮಾಧಾನ ಪಡಿಸು; ಸಾಮ: ಶಾಂತಗೊಳಿಸುವಿಕೆ; ತಬ್ಬು: ಅಪ್ಪುಗೆ, ಆಲಿಂಗನ; ನಿಬ್ಬರ: ಅತಿಶಯ, ಹೆಚ್ಚಳ; ಜನ: ಮನುಷ್ಯ; ಮನ: ಮನಸ್ಸು; ನೋಡು: ವೀಕ್ಷಿಸು; ಸಾರು: ಹತ್ತಿರಕ್ಕೆ ಬರು, ಸಮೀಪಿಸು; ವಲ್ಲಭ: ಗಂಡ, ಪತಿ;

ಪದವಿಂಗಡಣೆ:
ಎಬ್ಬಿಸಲು+ ಭುಗಿಲ್+ಎಂಬನೋ +ಮೇಣ್
ಒಬ್ಬಳೇತಕೆ +ಬಂದೆ +ಮೋರೆಯ
ಮಬ್ಬಿದೇನ್+ಎಂದೆನ್ನ+ ಸಂತೈಸುವನೊ +ಸಾಮದಲಿ
ತಬ್ಬುವುದೊ+ ತಾ +ಬಂದ +ಬರವಿದು
ನಿಬ್ಬರವಲಾ+ ಜನದ+ ಮನಕಿನ್
ಎಬ್ಬಿಸಿಯೆ +ನೋಡುವೆನ್+ಎನುತ +ಸಾರಿದಳು +ವಲ್ಲಭನ

ಅಚ್ಚರಿ:
(೧) ಎಬ್ಬಿಸು – ೧, ೬ ಸಾಲಿನ ಮೊದಲ ಪದ
(೨) ದ್ರೌಪದಿಯ ಪ್ರಶ್ನೆಗಳು – ಎಬ್ಬಿಸಲು ಭುಗಿಲೆಂಬನೋ, ಒಬ್ಬಳೇತಕೆ ಬಂದೆ, ಮೋರೆಯ ಮಬ್ಬಿದೇನೆಂದೆನ್ನ ಸಂತೈಸುವನೊ ಸಾಮದಲಿ

ಪದ್ಯ ೮: ಕೃಷ್ಣನು ಪಾಂಡವರನ್ನು ಹೇಗೆ ಮನ್ನಿಸಿದನು?

ಇಳಿದು ದಂಡಿಗೆಯಿಂದ ಕರುಣಾ
ಜಲಧಿ ಬಂದನು ಕಾಲುನಡೆಯಲಿ
ಸೆಳೆದು ಬಿಗಿಯಪ್ಪಿದ ನಿದೇನಾಸುರವಿದೇನೆನುತ
ಬಳಿಕ ಭೀಮಾರ್ಜುನರ ಯಮಳರ
ನೊಲಿದುಮನ್ನಿಸಿ ಸತಿಯಲೋಚನ
ಜಲವ ಸೆರಗಿನೊಳೊರಸಿ ಸಂತೈಸಿದನು ಬಾಲಕಿಯ (ಅರಣ್ಯ ಪರ್ವ, ೧೫ ಸಂಧಿ, ೮ ಪದ್ಯ)

ತಾತ್ಪರ್ಯ:
ಶ್ರೀ ಕೃಷ್ಣನು ಪಲ್ಲಕ್ಕಿಯಿಂದಿಳಿದು, ಕಾಲು ನಡೆಯಲ್ಲಿ ಬಂದು, ಇದೇನು ಇಂತಹ ರಭಸ ಎನ್ನುತ್ತಾ ಧರ್ಮಜನನ್ನು ಬಿಗಿದಪ್ಪಿದನು, ಭೀಮಾರ್ಜುನ ನಕುಲ ಸಹದೇವರನ್ನು ಮನ್ನಿಸಿ, ದ್ರೌಪದಿಯ ಕಣ್ಣೀರನ್ನು ತನ್ನ ಉತ್ತರಿಯದಿಂದ ಒರೆಸಿ ಸಂತೈಸಿದನು.

ಅರ್ಥ:
ಇಳಿದು: ಕೆಳಗೆ ಬಂದು; ದಂಡಿಗೆ: ಪಲ್ಲಕ್ಕಿ; ಕರುಣ: ದಯೆ; ಜಲಧಿ: ಸಾಗರ; ಬಂದು: ಆಗಮಿಸು; ಕಾಲುನಡೆ: ಚಲಿಸು, ಮುನ್ನಡೆ; ಸೆಳೆ: ಎಳೆತ, ಸೆಳೆತ; ಬಿಗಿ: ಭದ್ರ, ಗಟ್ಟಿ; ಅಪ್ಪು: ಆಲಿಂಗನ; ಆಸುರ: ರಭಸ; ಬಳಿಕ: ನಂತರ; ಯಮಳ: ಅಶ್ವಿನಿ ದೇವತೆಗಳು, ಅವಳಿ ಮಕ್ಕಳು; ಒಲಿದು: ಪ್ರೀತಿಸು; ಮನ್ನಿಸು: ಗೌರವಿಸು; ಸತಿ: ಗರತಿ; ಲೋಚನ: ಕಣ್ಣು; ಜಲ: ನೀರು; ಸೆರಗು: ಬಟ್ಟೆಯ ಅಂಚು; ಒರಸು: ಸಾರಿಸು, ಅಳಿಸು; ಸಂತೈಸು: ಸಾಂತ್ವನಗೊಳಿಸು; ಬಾಲಕಿ: ಹೆಣ್ಣು;

ಪದವಿಂಗಡಣೆ:
ಇಳಿದು +ದಂಡಿಗೆಯಿಂದ +ಕರುಣಾ
ಜಲಧಿ +ಬಂದನು +ಕಾಲುನಡೆಯಲಿ
ಸೆಳೆದು +ಬಿಗಿ+ಅಪ್ಪಿದನ್ +ಇದೇನ್+ಆಸುರವ್+ಇದೇನೆನುತ
ಬಳಿಕ+ ಭೀಮಾರ್ಜುನರ +ಯಮಳರನ್
ಒಲಿದು+ಮನ್ನಿಸಿ +ಸತಿಯ+ಲೋಚನ
ಜಲವ +ಸೆರಗಿನೊಳ್+ಒರಸಿ +ಸಂತೈಸಿದನು +ಬಾಲಕಿಯ

ಅಚ್ಚರಿ:
(೧) ಕೃಷ್ಣನ ಸರಳತೆ – ಕರುಣಾಜಲಧಿ ಬಂದನು ಕಾಲುನಡೆಯಲಿ ಸೆಳೆದು ಬಿಗಿಯಪ್ಪಿದ ನಿದೇನಾಸುರವಿದೇನೆನುತ; ಸತಿಯಲೋಚನಜಲವ ಸೆರಗಿನೊಳೊರಸಿ ಸಂತೈಸಿದನು ಬಾಲಕಿಯ

ಪದ್ಯ ೧೧: ಕುರುಸೇನಾ ಭಟರು ಭೀಮನಿಗೆ ಏನು ಹೇಳಿದರು?

ರಾಯ ಜಗಜಟ್ಟಿಗಳು ರಿಪುಕುರು
ರಾಯ ಥಟ್ಟಿನೊಳಿನಿಬರಿಗೆ ನಿ
ನ್ನಾಯತದಿ ನಿಲುವಂಘವಣೆಗಾವೇನ ಹೇಳುವೆವು
ರಾಯನನು ಸಂತೈಸುವುದು ಮಾ
ದ್ರೇಯ ಫಲುಗುಣ ಸಹಿತ ನಿಲು ನಿ
ನ್ನಾಯತದಿ ನಮ್ಮ ರಸನೊಲ್ಲನು ನಿನ್ನೊಡನೆ ರಣವ (ಕರ್ಣ ಪರ್ವ, ೧೫ ಸಂಧಿ, ೧೧ ಪದ್ಯ)

ತಾತ್ಪರ್ಯ:
ಕೌರವರಾಯನ ಸೈನ್ಯದಲ್ಲಿರುವ ಮಹಾ ಪರಾಕ್ರಮಿಗಳೆದುರು ಒಬ್ಬನೇ ನಿಲ್ಲುವ ನಿನ್ನ ಘಟ್ಟಿತನ ಮತ್ತು ದೈರ್ಯಕ್ಕೆ ಏನೆಂದು ಹೊಗಳೋಣ, ನೀನು ಹಿಂದಿರುಗಿ ಧರ್ಮಜನನ್ನು ಶುಶ್ರೂಷೆ ಮಾಡಿ ನಕುಲ ಸಹದೇವ ಮತ್ತು ಅರ್ಜುನನೊಡನೆ ಬಾ, ನಮ್ಮ ಅರಸನಿಗೆ ನಿನ್ನೊಬ್ಬನೊಡನೆ ಯುದ್ಧ ಮಾಡುವುದು ಇಷ್ಟವಿಲ್ಲವೆಂದರು.

ಅರ್ಥ:
ರಾಯ: ರಾಜ; ಜಗಜಟ್ಟಿ: ಪರಾಕ್ರಮಿ; ರಿಪು: ವೈರಿ; ಕುರುರಾಯ: ದುರ್ಯೋಧನ; ಥಟ್ಟು: ಗುಂಪು; ಇನಿಬರು: ಇಷ್ಟುಜನ; ಆಯತ: ನೆಲೆ; ನಿಲು: ಎದುರು ನಿಲ್ಲು; ಅಂಘವಣೆ: ರೀತಿ, ಬಯಕೆ; ಹೇಳು: ತಿಳಿಸು, ನುಡಿ; ಸಂತೈಸು: ಸಮಾಧಾನಪಡಿಸು; ಮಾದ್ರೇಯ: ಮಾದ್ರೀ ಸುತರು ನಕುಲ, ಸಹದೇವ; ಸಹಿತ: ಜೊತೆ; ನಿಲು: ಅಣಿಯಾಗು; ಅರಸ: ರಾಜ; ಒಲ್ಲನು: ಒಪ್ಪನು; ರಣ: ಯುದ್ಧ;

ಪದವಿಂಗಡಣೆ:
ರಾಯ +ಜಗಜಟ್ಟಿಗಳು +ರಿಪು+ಕುರು
ರಾಯ +ಥಟ್ಟಿನೊಳ್+ಇನಿಬರಿಗೆ+ ನಿ
ನ್ನಾಯತದಿ +ನಿಲುವ್+ಅಂಘವಣೆಗ್+ಆವೇನ +ಹೇಳುವೆವು
ರಾಯನನು +ಸಂತೈಸುವುದು +ಮಾ
ದ್ರೇಯ +ಫಲುಗುಣ+ ಸಹಿತ+ ನಿಲು+ ನಿ
ನ್ನಾಯತದಿ+ ನಮ್ಮ್+ಅರಸನೊಲ್ಲನು+ ನಿನ್ನೊಡನೆ+ ರಣವ

ಅಚ್ಚರಿ:
(೧) ನ ಕಾರದ ಸಾಲು ಪದ – ನಿಲು ನಿನ್ನಾಯತದಿ ನಮ್ಮರಸನೊಲ್ಲನು ನಿನ್ನೊಡನೆ ರಣವ
(೨) ರಾಯ, ಅರಸ – ಸಮನಾರ್ಥಕ ಪದ
(೩) ಆಯತದಿ – ೩, ೬ ಸಾಲಿನ ಮೊದಲ ಪದ