ಪದ್ಯ ೪೯: ಶಬರಪತಿಯು ಭೀಮನಲ್ಲಿ ಏನೆಂದು ಕೇಳಿದನು?

ತಂದ ಮಾಂಸದ ಕಂಬಿಗಳು ಪು
ಳಿಂದರೊಪ್ಪಿಸಿ ಭೀಮಸೇನನ
ಮಂದಿರವ ಸಾರಿದರು ಕಂಡರು ಜನದ ಕಳವಳವ
ಇಂದಿನೀ ಸಂಗ್ರಾಮಜಯದಲಿ
ಬಂದ ಜಾಡ್ಯವಿದೇನು ಬಿನ್ನಹ
ವೆಂದು ಸಲುಗೆ ಶಬರಪತಿ ನುಡಿಸಿದನು ಪವನಜನ (ಗದಾ ಪರ್ವ, ೪ ಸಂಧಿ, ೪೯ ಪದ್ಯ)

ತಾತ್ಪರ್ಯ:
ಮಾಂಸದ ಕಂಬಿಗಲನ್ನಿಳಿಸಿ ಬೇಟೆಗಾರರು ಭೀಮನ ಮನೆಗೆ ಹೋಗಿ ಜನರು ಕಳವಳಿಸುತ್ತಿದ್ದುದನ್ನು ಕಂಡರು. ಭೀಮನಲ್ಲಿ ಸಲಿಗೆಯಿಂದಿದ್ದ ಶಬರಪತಿಯು ಒಡೆಯ, ನೀವು ಇಂದಿನ ಯುದ್ಧದಲ್ಲಿ ಜಯಶಾಲಿಗಳಾಗಿದ್ದೀರಿ, ಇಂತಹ ಸಂತೋಷದ ಸಮಯದಲ್ಲಿ ಈ ಕಳವಳದ ಜಾಡ್ಯವೇಕೆ ಎಂದು ಕೇಳಿದನು.

ಅರ್ಥ:
ಮಾಂಸ: ಅಡಗು; ಕಂಬಿ: ಲೋಹದ ತಂತಿ; ಪುಳಿಂದ: ಬೇಡ; ಒಪ್ಪಿಸು: ನೀಡು; ಮಂದಿರ: ಮನೆ; ಸಾರು: ಬಳಿ ಸೇರು, ಹತ್ತಿರಕ್ಕೆ ಬರು; ಕಂಡು: ನೋಡು; ಜನ: ಮನುಷ್ಯರ ಗುಂಪು; ಕಳವಳ: ಗೊಂದಲ; ಸಂಗ್ರಾಮ: ಯುದ್ಧ; ಜಯ: ಗೆಲುವು; ಜಾಡ್ಯ: ನಿರುತ್ಸಾಹ; ಬಿನ್ನಹ: ಕೋರಿಕೆ; ಸಲುಗೆ: ಸದರ, ಅತಿ ಪರಿಚಯ; ಶಬರಪತಿ: ಬೇಟೆಗಾರರ ಒಡೆಯ; ನುಡಿಸು: ಮಾತಾದು; ಪವನಜ: ಭೀಮ;

ಪದವಿಂಗಡಣೆ:
ತಂದ +ಮಾಂಸದ +ಕಂಬಿಗಳು +ಪು
ಳಿಂದರ್+ಒಪ್ಪಿಸಿ +ಭೀಮಸೇನನ
ಮಂದಿರವ +ಸಾರಿದರು +ಕಂಡರು +ಜನದ +ಕಳವಳವ
ಇಂದಿನ್+ಈ+ ಸಂಗ್ರಾಮ+ಜಯದಲಿ
ಬಂದ +ಜಾಡ್ಯವಿದೇನು +ಬಿನ್ನಹ
ವೆಂದು +ಸಲುಗೆ +ಶಬರಪತಿ+ ನುಡಿಸಿದನು +ಪವನಜನ

ಅಚ್ಚರಿ:
(೧) ಸಂತೋಷವಾಗಿಲ್ಲ ಎಂದು ಹೇಳುವ ಪರಿ – ಇಂದಿನೀ ಸಂಗ್ರಾಮಜಯದಲಿ ಬಂದ ಜಾಡ್ಯವಿದೇನು

ಪದ್ಯ ೫೨: ಯುದ್ಧರಂಗಕ್ಕೆ ಯಾರು ಆಗಮಿಸಿದರು?

ಇಳಿದರಿತ್ತಲು ಗಗನದಿಂ ಹೊಳೆ
ಹೊಳೆವ ಢಾಳದ ಝಾಡಿಯಲಿ ಜಗ
ಮುಳುಗೆ ಭಸ್ಮವಿಭೂಷಿತಾಂಗದ ಜಡಿವ ಕೆಂಜೆಡೆಯ
ಪುಲಿದೊಗಲ ಸುಲಿಪಲ್ಲ ಮುಕ್ತಾ
ವಳಿಯ ಮಣಿ ಜಪಮಾಲಿಕೆಯ ನಿ
ರ್ಮಳ ತಪೋಧನರೈದಿದರು ಸಂಗ್ರಾಮಭೂಮಿಯನು (ದ್ರೋಣ ಪರ್ವ, ೧೮ ಸಂಧಿ, ೫೨ ಪದ್ಯ)

ತಾತ್ಪರ್ಯ:
ಇತ್ತ ಯುದ್ಧಭೂಮಿಗೆ ತಪೋಧನರಾದ ಋಷಿಮುನಿಗಳು ಬಂದರು. ಆಗಸದಿಂದ ಕೆಳಗಿಳಿದರು, ಮೈಕಾಂತಿ ಹೊಳೆಯುತ್ತಿರಲು, ಭಸ್ಮ ವಿಭೂಷಿತರಾಗಿ, ಕೆಂಪು ಜಟೆಗಳನ್ನು ಹೊತ್ತು, ಹುಲಿಯ ಚರ್ಮವನ್ನುಟ್ಟು ಮುತ್ತು ಸ್ಫಟಿಕ ಮಣಿಗಳ ಜಪಮಾಲಿಕೆಗಳನ್ನು ಧರಿಸಿ, ಶುಭ್ರ ದಂತಕಾಂತಿಯು ಹಬ್ಬುತ್ತಿರಲು, ನಿರ್ಮಲರಾದ ತಪೋಧನರು ಆಗಮಿಸಿದರು.

ಅರ್ಥ:
ಇಳಿ: ಬಾಗು, ಕೆಳಕ್ಕೆ ಹೋಗು; ಗಗನ: ಆಗಸ; ಹೊಳೆ: ಪ್ರಕಾಶ; ಢಾಳ: ಕಾಂತಿ, ಪ್ರಕಾಶ; ಝಾಡಿಸು: ಅಲುಗಾಡಿಸು; ಜಗ: ಪ್ರಪಂಚ; ಮುಳುಗು: ನೀರಿನಲ್ಲಿ ಮೀಯು, ಕಾಣದಾಗು; ಭಸ್ಮ: ಬೂದಿ; ವಿಭೂಷಿತ: ಶೋಭಿಸು, ಅಲಂಕೃತ; ಅಂಗ: ದೇಹದ ಭಾಗ; ಜಡಿ: ಅಲ್ಲಾಡು, ನಡುಗು; ಕೆಂಜೆಡೆ: ಕೆಂಪಾದ ಜಟೆ; ಪುಲಿ: ಹುಲಿ; ತೊಗಲು: ಚರ್ಮ; ಸುಲಿಪಲ್ಲು: ಶುಭ್ರವಾಗಿ ಹೊಳೆವ ಹಲ್ಲು; ಮುಕ್ತಾವಳಿ: ಮಣಿಗಳ ಸಾಲು, ಮುತ್ತಿನಹಾರ; ಮಣಿ: ಬೆಲೆಬಾಳುವ ರತ್ನ; ಮಾಲೆ: ಹಾರ; ನಿರ್ಮಳ: ಶುಭ್ರ; ತಪೋಧನ: ಋಷಿ ಮುನಿ; ಐದು: ಬಂದು ಸೇರು; ಸಂಗ್ರಾಮ: ಯುದ್ಧ; ಭೂಮಿ: ನೆಲ;

ಪದವಿಂಗಡಣೆ:
ಇಳಿದರ್+ಇತ್ತಲು +ಗಗನದಿಂ+ ಹೊಳೆ
ಹೊಳೆವ +ಢಾಳದ +ಝಾಡಿಯಲಿ +ಜಗ
ಮುಳುಗೆ +ಭಸ್ಮವಿಭೂಷಿತಾಂಗದ+ ಜಡಿವ +ಕೆಂಜೆಡೆಯ
ಪುಲಿ+ತೊಗಲ +ಸುಲಿಪಲ್ಲ+ ಮುಕ್ತಾ
ವಳಿಯ +ಮಣಿ +ಜಪಮಾಲಿಕೆಯ +ನಿ
ರ್ಮಳ +ತಪೋಧನರ್+ಐದಿದರು +ಸಂಗ್ರಾಮಭೂಮಿಯನು

ಅಚ್ಚರಿ:
(೧) ಋಷಿಮುನಿಗಳ ವರ್ಣನೆ – ಹೊಳೆಹೊಳೆವ ಢಾಳದ ಝಾಡಿಯಲಿ ಜಗಮುಳುಗೆ ಭಸ್ಮವಿಭೂಷಿತಾಂಗದ ಜಡಿವ ಕೆಂಜೆಡೆಯ

ಪದ್ಯ ೬೩: ಭೀಮನನ್ನು ಕರ್ಣನು ಹೇಗೆ ಹಂಗಿಸಿದನು?

ಎಲ್ಲಿ ಷಡುರಸಮಯದ ಭೋಜನ
ವೆಲ್ಲಿ ಮಧುರ ಫಲೌಘದುಬ್ಬರ
ವೆಲ್ಲಿ ನಾನಾಭಕ್ಷ್ಯಗಿರಿಗಳು ಘೃತದ ಕಡಲುಗಳು
ಅಲ್ಲಿ ನಿನ್ನುರವಣೆಗಳೊಪ್ಪುವ
ದಲ್ಲದೀ ಸಂಗ್ರಾಮ ಮುಖದಲಿ
ಬಿಲ್ಲಹಬ್ಬದ ತುಷ್ಟಿ ನಿನಗೇಕೆಂದನಾ ಕರ್ಣ (ದ್ರೋಣ ಪರ್ವ, ೧೩ ಸಂಧಿ, ೬೩ ಪದ್ಯ)

ತಾತ್ಪರ್ಯ:
ಎಲವೋ ಭೀಮ, ಎಲ್ಲಿ ಷಡ್ರಸ ಭರಿತವಾದ ಊಟವಿದೆಯೋ, ಎಲ್ಲಿ ಸಿಹಿ ಹಣ್ಣುಗಳು ಹೇರಳವಾಗಿವೆಯೋ, ಎಲ್ಲಿ ಭಕ್ಷ್ಯದ ಬೆಟ್ಟಗಳು, ತುಪ್ಪದ ಸಾಗರಗಳಿವೆಯೋ, ಅಲ್ಲಿ ನಿನ್ನ ಪರಾಕ್ರಮವು ಸಾರ್ಥಕವೆನ್ನಿಸುವುದೇ ಹೊರತು, ಯುದ್ಧರಂಗದಲ್ಲಿ ಬಿಲ್ಲಹಬ್ಬದಿಂದ ನಿನಗೆ ತೃಪ್ತಿಯಾಗಲು ಸಾಧ್ಯವೇ ಎಂದು ಕರ್ಣನು ಭೀಮನನ್ನು ಮೂದಲಿಸಿದನು.

ಅರ್ಥ:
ಷಡುರಸ: ಉಪ್ಪು, ಕಾರ, ಸಿಹಿ, ಕಹಿ, ಹುಳಿ ಮತ್ತು ಒಗರು ಎಂಬ ಆರು ಬಗೆಯ ರುಚಿಗಳು; ಭೋಜನ: ಊಟ; ಮಧುರ: ಸಿಹಿ; ಫಲ: ಹಣ್ಣು; ಔಘ: ಗುಂಪು, ಸಮೂಹ; ಉಬ್ಬರ: ಅತಿಶಯ; ನಾನಾ: ಹಲವಾರು; ಭಕ್ಷ್ಯ: ಊಟ; ಗಿರಿ: ಬೆಟ್ಟ; ಘೃತ: ತುಪ್ಪ; ಕಡಲು: ಸಾಗರ; ಉರವಣೆ: ಆತುರ, ಅವಸರ, ಅಬ್ಬರ; ಸಂಗ್ರಾಮ: ಯುದ್ಧ; ಮುಖ: ಆನನ; ಬಿಲ್ಲ: ಚಾಪ; ಹಬ್ಬ: ಸಡಗರ; ತುಷ್ಟಿ: ತೃಪ್ತಿ, ಆನಂದ;

ಪದವಿಂಗಡಣೆ:
ಎಲ್ಲಿ +ಷಡುರಸಮಯದ +ಭೋಜನವ್
ಎಲ್ಲಿ +ಮಧುರ +ಫಲೌಘದ್+ಉಬ್ಬರವ್
ಎಲ್ಲಿ +ನಾನಾ+ಭಕ್ಷ್ಯ+ಗಿರಿಗಳು +ಘೃತದ +ಕಡಲುಗಳು
ಅಲ್ಲಿ+ ನಿನ್ನ್+ಉರವಣೆಗಳ್+ಒಪ್ಪುವದ್
ಅಲ್ಲದ್+ಈ+ ಸಂಗ್ರಾಮ +ಮುಖದಲಿ
ಬಿಲ್ಲ+ಹಬ್ಬದ+ ತುಷ್ಟಿ+ ನಿನಗೇಕೆಂದನಾ +ಕರ್ಣ

ಅಚ್ಚರಿ:
(೧) ರೂಪಕಗಳನ್ನು ಬಳಸುವ ಪರಿ – ನಾನಾಭಕ್ಷ್ಯಗಿರಿಗಳು ಘೃತದ ಕಡಲುಗಳು

ಪದ್ಯ ೪೩: ಭೀಮ ಕರ್ಣರ ಯುದ್ಧವನ್ನು ಕವಿಯು ಯಾವುದಕ್ಕೆ ಹೋಲಿಸಿದ್ದಾರೆ?

ಸರಳ ಸರಿಸೋನೆಯನು ಪವನಜ
ಗಿರಿಗೆ ಕರೆದುದು ಕರ್ಣ ಮೇಘದ
ಹೊರಳಿಯೇನೆಂಬೆನು ಮಹಾಸಂಗ್ರಾಮ ಸಂಭ್ರಮವ
ಸರಳಿನಲಿ ಧನುವಿನಲಿ ಗದೆಯಲಿ
ಕರಹತಿಯಲಹಿತಾಸ್ತ್ರವನು ಸಂ
ಹರಿಸಿ ಬೀಸಿತು ಭೀಮಮಾರುತ ಕರ್ಣಮೇಘದಲಿ (ದ್ರೋಣ ಪರ್ವ, ೧೩ ಸಂಧಿ, ೪೩ ಪದ್ಯ)

ತಾತ್ಪರ್ಯ:
ಕರ್ಣನೆಂಬುವ ಮೋಡವು ಭೀಮನೆಂಬ ಪರ್ವತದ ಮೇಲೆ ಬಾಣಗಳ ಸೋನೆಯನ್ನು ವರ್ಷಿಸಿತು. ಬಾಣ, ಧಉಸ್ಸು, ಗದೆ, ಬರೀ ಕೈಗಳಿಂದ ಸರ್ಪಾಸ್ತ್ರಗಳನ್ನು ತಪ್ಪಿಸಿ, ಭೀಮ ಮಾರುತವು ಕರ್ಣ ಮೇಘದ ಮೇಲೆ ಬೀಸಿತು.

ಅರ್ಥ:
ಸರಳು: ಬಾಣ; ಸೋನೆ: ಮಳೆ, ವೃಷ್ಟಿ; ಪವನಜ: ಭೀಮ; ಗಿರಿ: ಬೆಟ್ಟ; ಮೇಘ: ಮೋಡ; ಹೊರಳಿ: ಗುಂಪು; ಸಂಗ್ರಾಮ: ಯುದ್ಧ; ಸಂಭ್ರಮ: ಸಡಗರ; ಧನು: ಬಿಲ್ಲು; ಗದೆ: ಮುದ್ಗರ; ಕರ: ಹಸ್ತ; ಹತಿ: ಪೆಟ್ಟು, ಹೊಡೆತ; ಅಹಿತಾಸ್ತ್ರ: ಸರ್ಪಾಸ್ತ್ರ; ಸಂಹರ: ನಾಶ; ಭೀಸು: ಎಸೆ, ಬಿಸಾಡು; ಮಾರುತ: ಗಾಳಿ, ವಾಯು;

ಪದವಿಂಗಡಣೆ:
ಸರಳ +ಸರಿಸೋನೆಯನು +ಪವನಜ
ಗಿರಿಗೆ +ಕರೆದುದು +ಕರ್ಣ +ಮೇಘದ
ಹೊರಳಿ+ಏನೆಂಬೆನು +ಮಹಾಸಂಗ್ರಾಮ +ಸಂಭ್ರಮವ
ಸರಳಿನಲಿ +ಧನುವಿನಲಿ +ಗದೆಯಲಿ
ಕರಹತಿಯಲ್+ಅಹಿತಾಸ್ತ್ರವನು ಸಂ
ಹರಿಸಿ+ ಬೀಸಿತು +ಭೀಮ+ಮಾರುತ+ ಕರ್ಣ+ಮೇಘದಲಿ

ಅಚ್ಚರಿ:
(೧) ಕವಿಯ ಕಲ್ಪನೆಗೆ ಉತ್ಕೃಷ್ಟ ಉದಾಹರಣೆ – ಭೀಮ ನನ್ನು ಬೆಟ್ಟಕ್ಕೂ, ಕರ್ಣನನ್ನು ಮೇಘಕ್ಕು ಹೋಲಿಸಿದ ಪರಿ

ಪದ್ಯ ೧೩: ಭೀಮನೇಕೆ ಬಂದಿರುವೆನೆಂದ?

ಎಲೆ ಮರುಳೆ ಗುರುವೆಮಗೆ ನೀ ಹೆ
ಕ್ಕಳಿಸಿ ನುಡಿದರೆ ಮೊದಲಲಂಜುವೆ
ನುಳಿದ ಮಾತಿನಲೇನು ನಿಮ್ಮೊಡನೆನಗೆ ಸಂಗ್ರಾಮ
ಬಳಿಕವೀಗಳು ನಿಮ್ಮ ಮೋಹರ
ದೊಳಗೆ ಕೊಡಿ ಬಟ್ಟೆಯನು ಸಿಲುಕಿದ
ಫಲುಗುಣನ ತಹೆನಣ್ಣದೇವನ ನೇಮ ತನಗೆಂದ (ದ್ರೋಣ ಪರ್ವ, ೧೨ ಸಂಧಿ, ೧೩ ಪದ್ಯ)

ತಾತ್ಪರ್ಯ:
ಎಲೈ ಹುಚ್ಚನೇ, ನೀನು ನಮಗೆ ಗುರುವಾಗಿರುವೆ, ನೀನು ಹೆಚ್ಚಿನ ಮಾತನ್ನಾಡಿದರೆ ಮೊದಲಿಗೆ ಹೆದರುತ್ತೇನೆ, ಮಿಕ್ಕ ಮಾತು ಹಾಗಿರಲಿ, ನಿಮ್ಮೊಡನೆ ವೃಥಾ ವಾಗ್ಯುದ್ಧ ಬೇಡ, ಈಗ ಸಂದರ್ಭವೇನೆಂದರೆ, ಅಣ್ಣನು ನನಗೆ ಆಜ್ಞೆ ಮಾಡಿದ್ದಾನೆ, ನಿಮ್ಮ ಸೈನ್ಯ ಮಧ್ಯದಲ್ಲಿ ಸಿಕ್ಕಿಹಾಕಿ ಕೊಂಡಿರುವ ಅರ್ಜುನನನ್ನು ಕರೆದು ತಾ ಎಂದು, ಅದಕ್ಕಾಗಿ ನಾನಿಲ್ಲಿಗೆ ಬಂದಿದ್ದೇನೆ, ದಾರಿ ನೀಡಿ ನಾನು ಅರ್ಜುನನನ್ನು ಕರೆತರುತ್ತೇನೆ ಎಂದನು.

ಅರ್ಥ:
ಮರುಳೆ: ಮೂಢ; ಗುರು: ಆಚಾರ್ಯ; ಹೆಕ್ಕಳಿಸು: ಅಧಿಕವಾಗು, ಹೆಚ್ಚಾಗು, ಹಿಗ್ಗು; ನುಡಿ: ಮಾತಾದು; ಅಂಜು: ಹೆದರು; ಉಳಿದ: ಮಿಕ್ಕ; ಮಾತು: ನುಡಿ; ಸಂಗ್ರಾಮ: ಯುದ್ಧ; ಬಳಿಕ: ನಂತರ; ಮೋಹರ: ಉದ್ಧ; ಕೊಡಿ: ನೀಡಿ; ಬಟ್ಟೆ; ಹಾದಿ; ಸಿಲುಕು: ಬಂಧನಕ್ಕೊಳಗಾದುದು; ತಹೆ: ಹಿಂತರು; ಅಣ್ಣ: ಸಹೋದರ; ನೇಮ: ಆಜ್ಞೆ;

ಪದವಿಂಗಡಣೆ:
ಎಲೆ +ಮರುಳೆ +ಗುರುವ್+ಎಮಗೆ +ನೀ +ಹೆ
ಕ್ಕಳಿಸಿ +ನುಡಿದರೆ +ಮೊದಲಲ್+ಅಂಜುವೆನ್
ಉಳಿದ +ಮಾತಿನಲೇನು+ ನಿಮ್ಮೊಡನ್+ಎನಗೆ +ಸಂಗ್ರಾಮ
ಬಳಿಕವ್+ಈಗಳು +ನಿಮ್ಮ +ಮೋಹರ
ದೊಳಗೆ +ಕೊಡಿ +ಬಟ್ಟೆಯನು+ ಸಿಲುಕಿದ
ಫಲುಗುಣನ+ ತಹೆನ್+ಅಣ್ಣದೇವನ +ನೇಮ +ತನಗೆಂದ

ಅಚ್ಚರಿ:
(೧) ಗುರುವನ್ನು ಕರೆದ ಪರಿ – ಎಲೆ ಮರುಳೆ ಗುರುವೆಮಗೆ ನೀ

ಪದ್ಯ ೧೧: ಯುದ್ಧವು ಹೇಗೆ ಅಧ್ಬುತವಾಗಿತ್ತು?

ಅಡಸಿ ತುಂಬಿತು ಗಗನ ತಲೆಗಳ
ಗಡಣದಲಿ ದೆಸೆಯೆಲ್ಲ ಬಾಣದ
ಕಡಿಯಮಯವಾಯಿತ್ತು ಹೆಣಮಯವಾಯ್ತು ರಣಭೂಮಿ
ಕಡುಗಲಿಯ ಕೈ ಚಳಕದಂಬಿಂ
ಗೊಡಲ ತೆತ್ತುದು ವೈರಿಬಲ ಬಿಡೆ
ಜಡಿದುದಂತಕ ನಗರವದ್ಭುತವಾಯ್ತು ಸಂಗ್ರಾಮ (ಭೀಷ್ಮ ಪರ್ವ, ೯ ಸಂಧಿ, ೧೧ ಪದ್ಯ)

ತಾತ್ಪರ್ಯ:
ಪಾಂಡವ ಸೈನಿಕರ ತಲೆಗಳು ಭೀಷ್ಮನ ಬಾಣಗಳಿಂದ ಕತ್ತರಿಸಿ ಆಕಾಶವನ್ನೆಲ್ಲಾ ತುಂಬಿದವು. ದಿಕ್ಕುಗಳೆಲ್ಲವೂ ಬಾಣಗಳ ತುಂಡಿನಿಂದ ತುಂಬಿದವು. ರಣಭೂಮಿಯು ಹೆಣಗಳಿಂದ ತುಂಬಿತು. ಭೀಷ್ಮನ ಚಾತುರ್ಯದೆಸೆಗೆಗೆ ವೈರಿ ಸೈನಿಕರು ತಮ್ಮ ದೇಹಗಳನ್ನು ಒಪ್ಪಿಸಿದರು. ಯಮನಗರ ತುಂಬಿತು. ಯುದ್ಧವು ಅದ್ಭುತವಾಯಿತು.

ಅರ್ಥ:
ಅಡಸು: ಬಿಗಿಯಾಗಿ ಒತ್ತು; ತುಂಬು: ಭರ್ತಿಯಾಗು, ಪೂರ್ಣವಾಗು; ಗಗನ: ಆಗಸ; ತಲೆ: ಶಿರ; ಗಡಣ: ಕೂಡಿಸುವಿಕೆ; ದೆಸೆ: ದಿಕ್ಕು; ಬಾಣ: ಅಂಬು; ಕಡಿ: ಸೀಳು; ಹೆಣ: ಜೀವವಿಲ್ಲದ ಶರೀರ; ರಣಭೂಮಿ: ರಣರಂಗ; ಕಡುಗಲಿ: ಶೂರ; ಚಳಕ: ಚಾತುರ್ಯ; ಅಂಬು: ಬಾಣ; ತೆತ್ತು: ತಿರಿಚು, ಸುತ್ತು; ವೈರಿ: ಶತ್ರು; ಬಲ: ಸೇನೆ; ಬಿಡು: ತೊರೆ, ತ್ಯಜಿಸು; ಜಡಿ: ಕೊಲ್ಲು; ಅಂತಕ: ಯಮ; ನಗರ: ಊರು; ಅದ್ಭುತ: ಆಶ್ಚರ್ಯ; ಸಂಗ್ರಾಮ: ಯುದ್ಧ, ಕಾಳಗ; ಒಡಲು: ದೇಹ;

ಪದವಿಂಗಡಣೆ:
ಅಡಸಿ +ತುಂಬಿತು +ಗಗನ +ತಲೆಗಳ
ಗಡಣದಲಿ +ದೆಸೆಯೆಲ್ಲ +ಬಾಣದ
ಕಡಿಯಮಯವಾಯಿತ್ತು +ಹೆಣಮಯವಾಯ್ತು +ರಣಭೂಮಿ
ಕಡುಗಲಿಯ +ಕೈಚಳಕದ್+ಅಂಬಿಂಗ್
ಒಡಲ+ ತೆತ್ತುದು +ವೈರಿಬಲ +ಬಿಡೆ
ಜಡಿದುದ್+ಅಂತಕ +ನಗರವ್+ಅದ್ಭುತವಾಯ್ತು +ಸಂಗ್ರಾಮ

ಅಚ್ಚರಿ:
(೧) ರಣರಂಗದ ರೌದ್ರ ರೂಪ – ಹೆಣಮಯವಾಯ್ತು ರಣಭೂಮಿ; ವೈರಿಬಲ ಬಿಡೆ ಜಡಿದುದಂತಕ ನಗರವದ್ಭುತವಾಯ್ತು ಸಂಗ್ರಾಮ

ಪದ್ಯ ೩೪: ಕೃಷ್ಣನು ಅರ್ಜುನನಿಗೇಕೆ ಬೋಧಿಸಲು ಚಿಂತಿಸಿದನು?

ಕರಗಲಂತಃಕರಣ ಚಿಂತಾ
ತುರನು ಸಂಗ್ರಾಮದ ವಿರಕ್ತಿಯೊ
ಳಿರಲು ಕಂಡನು ಕಮಲನಾಭನು ನಗುತ ಮನದೊಳಗೆ
ತರಳನಿವನದ್ವೈತಕಲೆಯಲಿ
ಪರಿಣತನು ತಾನಲ್ಲ ನೆವದಿಂ
ನರನ ಬೋಧಿಸಬೇಕೆನುತ ನುಡಿಸಿದನು ಫಲುಗುಣನ (ಭೀಷ್ಮ ಪರ್ವ, ೩ ಸಂಧಿ, ೩೪ ಪದ್ಯ)

ತಾತ್ಪರ್ಯ:
ಅರ್ಜುನನ ಅಂತಃಕರಣವು ಕರಗಲು, ಚಿಂತೆಯಿಂದ ಯುದ್ಧದಲ್ಲಿ ವೈರಾಗ್ಯವನ್ನು ತಳೆದು ಅರ್ಜುನನಿರಲು, ಕೃಷ್ಣನು ಮನಸ್ಸಿನಲ್ಲೇ ನಕ್ಕು, ಇವನಿನ್ನೂ ಹುಡುಗ, ಅದ್ವೈತ ಕಲೆಯಲ್ಲಿ ಇವನಿಗೆ ತಿಳುವಳಿಕೆಯಿಲ್ಲ, ಆದುದರಿಂದ ಇವನಿಗೆ ಸರಿಯಾದ ಬೋಧೆ ಮಾಡಬೇಕು ಎಂದು ಅರ್ಜುನನಿಗೆ ಹೀಗೆ ಹೇಳಿದನು.

ಅರ್ಥ:
ಕರಗು: ಮಾಯವಾಗು, ಕನಿಕರ ಪಡು; ಅಂತಃಕರಣ: ಚಿತ್ತವೃತ್ತಿ; ಚಿಂತೆ: ಯೋಚನೆ; ಆತುರ: ಯಾತನೆಯಿಂದ ಪೀಡಿತನಾದವನು; ಸಂಗ್ರಾಮ: ಯುದ್ಧ; ವಿರಕ್ತಿ: ವೈರಾಗ್ಯ; ಕಂಡು: ನೋಡು; ಕಮಲನಾಭ: ವಿಷ್ಣು; ನಗು: ಸಂತಸ; ಮನ: ಮನಸ್ಸು; ತರಳ: ಬಾಲಕ, ಚಂಚಲವಾದ; ಅದ್ವೈತ: ಬ್ರಹ್ಮ ಮತ್ತು ಜೀವ ಎರಡೂ ಬೇರೆಬೇರೆಯಲ್ಲ, ಒಂದೇ ಎಂದು ಪ್ರತಿಪಾದಿಸುವ ತತ್ವ; ಕಲೆ: ಗುರುತು; ಪರಿಣತ: ಪರಿಪಕ್ವವಾದುದು; ನರ: ಅರ್ಜುನ; ಬೋಧಿಸು: ಹೇಳು, ತಿಳಿಸು; ನುಡಿಸು: ಮಾತನಾಡಿಸು; ಫಲುಗುಣ: ಅರ್ಜುನ;

ಪದವಿಂಗಡಣೆ:
ಕರಗಲ್+ಅಂತಃಕರಣ+ ಚಿಂತ
ಆತುರನು +ಸಂಗ್ರಾಮದ +ವಿರಕ್ತಿಯೊಳ್
ಇರಲು +ಕಂಡನು +ಕಮಲನಾಭನು+ ನಗುತ +ಮನದೊಳಗೆ
ತರಳನಿವನ್ +ಅದ್ವೈತ+ಕಲೆಯಲಿ
ಪರಿಣತನು+ ತಾನಲ್ಲ+ ನೆವದಿಂ
ನರನ +ಬೋಧಿಸಬೇಕೆನುತ+ ನುಡಿಸಿದನು +ಫಲುಗುಣನ

ಅಚ್ಚರಿ:
(೧) ಅರ್ಜುನನನ್ನು ಬಾಲಕನೆಂದು ಕರೆದ ಪರಿ – ತರಳನಿವನದ್ವೈತಕಲೆಯಲಿ ಪರಿಣತನು ತಾನಲ್ಲ
(೨) ನರ, ಫಲುಗುಣ – ಅರ್ಜುನನ ಹೆಸರನ್ನು ಕರೆದ ಪರಿ – ೬ ನೇ ಸಾಲಿನ ಮೊದಲ ಮತ್ತು ಕೊನೆ ಪದ

ಪದ್ಯ ೨೭: ಭೀಷ್ಮರು ಯಾವ ನಿರ್ಧಾರಕ್ಕೆ ಬಂದರು?

ಆದಡೇನಿದಿರಾವ ರಿಪುಬಲ
ವಾದುದನು ಸಂಹರಿಸಿ ಮಕ್ಕಳ
ಕಾದು ಬಿಸುಡುವೆನೊಡಲನಾ ಸಂಗ್ರಾಮ ಭೂಮಿಯಲಿ
ಆದುದಾಗಲಿ ಬಳಿಕ ಮಾಡುವ
ಭೇದ ಬೇರಿಲ್ಲೆನುತ ಹೃತ್ಸಂ
ವಾದವನು ಬೀಳ್ಕೊಟ್ಟು ಗಂಗಾಸೂನು ಪವಡಿಸಿದ (ಭೀಷ್ಮ ಪರ್ವ, ೧ ಸಂಧಿ, ೨೭ ಪದ್ಯ)

ತಾತ್ಪರ್ಯ:
ಭೀಷ್ಮನು ಯೋಚಿಸುತ್ತಾ, ಸ್ಥಿತಿಯು ಹೀಗಿರಲು ನಾನೇನು ಮಾಡಲಿ, ಎದುರಿಗೆ ಬಂದ ಶತ್ರುಸೈನ್ಯವನ್ನು ಕೊಂದು, ಮಕ್ಕಳನ್ನು ಸಂರಕ್ಷಿಸಿ, ಯುದ್ಧದಲ್ಲಿ ಈ ದೇಹವನ್ನು ಬಿಡುತ್ತೇನೆ, ಆದುದಾಗಲಿ ನಂತರ ಮಾಡುವ ಭಿನ್ನಾಭಿಪ್ರಾಯಗಳು ಬೇರಿಲ್ಲವೆಂದು ತಿಳಿದು ತನ್ನ ಮನಸ್ಸಿನ ಸಂವಾದವನ್ನು ನಿಲ್ಲಿಸಿ ಮಲಗಿಕೊಂಡನು.

ಅರ್ಥ:
ಇದಿರು: ಎದುರು; ರಿಪುಬಲ: ವೈರಿಸೈನ್ಯ; ಸಂಹರಿಸು: ನಾಶಮಾಡು; ಮಕ್ಕಳು: ಸುತರು; ಕಾದು: ಹೋರಾಟ, ಯುದ್ಧ; ಬಿಸುಡು: ಹೊರಹಾಕು; ಸಂಗ್ರಾಮ: ಯುದ್ಧ; ಭೂಮಿ: ನೆಲ; ಬಳಿಕ: ನಂತರ; ಭೇದ: ಬಿರುಕು, ಛಿದ್ರ; ಬೇರೆ: ಅನ್ಯ; ಹೃತ್: ಹೃದಯ, ತನ್ನಜೊತೆ; ಸಂವಾದ: ಮಾತುಕತೆ; ಬೀಳ್ಕೊಡು: ತೆರಳು; ಪವಡಿಸು: ಮಲಗು; ಒಡಲು: ದೇಹ;

ಪದವಿಂಗಡಣೆ:
ಆದಡೇನ್+ಇದಿರಾವ +ರಿಪುಬಲವ್
ಆದುದನು +ಸಂಹರಿಸಿ+ ಮಕ್ಕಳ
ಕಾದು +ಬಿಸುಡುವೆನ್+ಒಡಲನ್+ಆ+ ಸಂಗ್ರಾಮ +ಭೂಮಿಯಲಿ
ಆದುದಾಗಲಿ +ಬಳಿಕ+ ಮಾಡುವ
ಭೇದ +ಬೇರಿಲ್ಲೆನುತ +ಹೃತ್ಸಂ
ವಾದವನು +ಬೀಳ್ಕೊಟ್ಟು +ಗಂಗಾಸೂನು +ಪವಡಿಸಿದ

ಅಚ್ಚರಿ:
(೧) ಭೀಷ್ಮರ ನಿರ್ಣಯ – ಮಕ್ಕಳ ಕಾದು ಬಿಸುಡುವೆನೊಡಲನಾ ಸಂಗ್ರಾಮ ಭೂಮಿಯಲಿ

ಪದ್ಯ ೧೦: ಕೌರವರನ್ನು ಖೇಚರರಿಂದ ಯಾರು ರಕ್ಷಿಸಿದರು?

ಹಿಂದೆ ಗಳಹುವನಿವನು ಬಾಯಿಗೆ
ಬಂದ ಪರಿಯಲಿ ಪಾಂಡುತನಯರ
ಕೊಂದನಾಗಳೆ ಕರ್ಣನಿನ್ನಾರೊಡನೆ ಸಂಗ್ರಾಮ
ಹಿಂದೆ ಹಮ್ಮಿದ ಸಮರದೊಳು ನಡೆ
ತಂದು ಖೇಚರನಡಸಿ ಕಟ್ಟಿದ
ಡಂದು ನಿನ್ನನು ಬಿಡಿಸಿದವನರ್ಜುನನೊ ರವಿಸುತನೊ (ಭೀಷ್ಮ ಪರ್ವ, ೧ ಸಂಧಿ, ೧೦ ಪದ್ಯ)

ತಾತ್ಪರ್ಯ:
ದ್ರೋಣರು ತಮ್ಮ ಮಾತನ್ನು ಮುಂದುವರೆಸುತ್ತಾ, ಈ ಕರ್ಣನು ಬೆನ್ನ ಹಿಂದೆ ಬಾಯಿಗೆ ಬಂದಂತೆ ಬೊಗಳುತ್ತಾನೆ, ಕರ್ಣನು ಪಾಂಡವರನ್ನು ಆಗಲೇ ಕೊಂದುಬಿಟ್ಟಿರುವನಲ್ಲಾ, ಇನ್ನಾರ ಜೊತೆಗೆ ಯುದ್ಧಮಾಡುತ್ತಾನೆ? ಹಿಂದೆ ಘೋಷಯಾತ್ರೆಯ ಸಮಯದಲ್ಲಿ ಗಂಧರ್ವನು ನಿನ್ನನ್ನು ಹೆಡೆಮುರಿಗೆ ಕಟ್ಟಿ ತೆಗೆದುಕೊಂಡು ಹೋದನಲ್ಲಾ, ಆಗ ನಿನ್ನನ್ನು ಬಿಡಿಸಿದವನು ಕರ್ಣನೋ ಅರ್ಜುನನೋ ಎಂದು ಕೇಳಿದರು.

ಅರ್ಥ:
ಹಿಂದೆ: ಮೊದಲು, ಪೂರ್ವದಲ್ಲಿ; ಗಳಹು: ಪ್ರಲಾಪಿಸು, ಹೇಳು; ಪರಿ: ರೀತಿ; ತನಯ: ಮಗ; ಕೊಂದು: ಸಾಯಿಸು; ಸಂಗ್ರಾಮ: ಯುದ್ಧ; ಹಮ್ಮು: ಅಹಂಕಾರ; ಸಮರ: ಯುದ್ಧ; ನಡೆ: ಚಲಿಸು; ಖೇಚರ: ಆಕಾಶದಲ್ಲಿ ಸಂಚರಿಸುವವನು; ಗಂಧರ್ವ; ಅಡಸು: ಆಕ್ರಮಿಸು, ಮುತ್ತು; ಕಟ್ಟು: ಬಂಧಿಸು; ಬಿಡಿಸು: ಕಳಚು, ಸಡಿಲಿಸು; ರವಿಸುತ: ಸೂರ್ಯನ ಮಗ (ಕರ್ಣ);

ಪದವಿಂಗಡಣೆ:
ಹಿಂದೆ +ಗಳಹುವನ್+ಇವನು +ಬಾಯಿಗೆ
ಬಂದ +ಪರಿಯಲಿ +ಪಾಂಡು+ತನಯರ
ಕೊಂದನ್+ಆಗಳೆ +ಕರ್ಣನ್+ಇನ್ನಾರೊಡನೆ +ಸಂಗ್ರಾಮ
ಹಿಂದೆ +ಹಮ್ಮಿದ+ ಸಮರದೊಳು +ನಡೆ
ತಂದು +ಖೇಚರನ್+ಅಡಸಿ +ಕಟ್ಟಿದಡ್
ಅಂದು +ನಿನ್ನನು +ಬಿಡಿಸಿದವನ್+ಅರ್ಜುನನೊ +ರವಿಸುತನೊ

ಅಚ್ಚರಿ:
(೧) ಸಂಗ್ರಾಮ, ಸಮರ – ಸಮನಾರ್ಥಕ ಪದ

ಪದ್ಯ ೩೮: ಭೀಮನು ಅರ್ಜುನನಿಗೆ ಏನು ಹೇಳಿದ?

ಬರುತ ಭೀಮನ ಕಂಡರಾತನ
ಹೊರೆಗೆ ಬಿಟ್ಟರು ರಥವನರ್ಜುನ
ಕರೆದು ಬೆಸಗೊಂಡನು ನೃಪಾಲನ ಕ್ಷೇಮ ಕೌಶಲವ
ಅರಸನಿಂದು ಸಜೀವಿಯೋ ಸುರ
ಪುರ ನಿವಾಸಿಯೊ ಹದನನೇನೆಂ
ದರಿಯೆನೀ ಸಂಗ್ರಾಮ ಧುರವೆನಗೆಂದನಾ ಭೀಮ (ಕರ್ಣ ಪರ್ವ, ೧೪ ಸಂಧಿ, ೩೮ ಪದ್ಯ)

ತಾತ್ಪರ್ಯ:
ಅರ್ಜುನನು ಧರ್ಮರಾಯನ ಪಾಳೆಯದತ್ತ ಹೋಗುತ್ತಿರಲು ದಾರಿಯಲ್ಲಿ ಭೀಮನನ್ನು ಕಂಡು ಅವನ ಬಳಿಗೆ ರಥವನ್ನು ಬಿಟ್ಟು, ಅವನಲ್ಲಿ ಅರಸನ ಯೋಗಕ್ಷೇಮವನ್ನು ಕುರಿತು ಕೇಳಿದರು. ಭೀಮನು ಧರ್ಮಜನು ಜೀವಿಸಿರುವನೋ, ಸ್ವರ್ಗಸ್ಥನಾಗಿರುವನೋ ನನಗೆ ತಿಳಿಯದು, ಈ ಯುದ್ಧದ ಭರದಲ್ಲಿದ್ದೇನೆ ಎಂದು ಅರ್ಜುನನಿಗೆ ತಿಳಿಸಿದನು.

ಅರ್ಥ:
ಬರುತ: ಆಗಮಿಸು; ಕಂಡು: ನೋಡು; ಹೊರೆ: ರಕ್ಷಣೆ, ಆಶ್ರಯ; ರಥ: ಬಂಡಿ; ಕರೆ: ಬರೆಮಾಡು; ಬೆಸ: ಕೆಲಸ, ಕಾರ್ಯ; ನೃಪಾಲ: ರಾಜ; ಕ್ಷೇಮ: ಆರೋಗ್ಯ; ಕೌಶಲ: ಕ್ಷೇಮ, ಸುಖ; ಅರಸ:ರಾಜ; ಸಜೀವಿ: ಜೀವವಿರುವವ; ಸುರಪುರ: ಸ್ವರ್ಗ; ನಿವಾಸಿ: ವಾಸಸ್ಥಾನ; ಹದ: ಸರಿಯಾದ ಸ್ಥಿತಿ; ಅರಿ: ತಿಳಿ; ಸಂಗ್ರಾಮ: ಯುದ್ಧ; ಧುರ: ಭರ, ವೇಗ

ಪದವಿಂಗಡಣೆ:
ಬರುತ +ಭೀಮನ +ಕಂಡರ್+ಆತನ
ಹೊರೆಗೆ+ ಬಿಟ್ಟರು +ರಥವನ್+ಅರ್ಜುನ
ಕರೆದು+ ಬೆಸಗೊಂಡನು +ನೃಪಾಲನ+ ಕ್ಷೇಮ +ಕೌಶಲವ
ಅರಸನ್+ಇಂದು+ ಸಜೀವಿಯೋ +ಸುರ
ಪುರ+ ನಿವಾಸಿಯೊ+ ಹದನನ್+ಏನೆಂದ್
ಅರಿಯೆನ್+ಈ+ ಸಂಗ್ರಾಮ +ಧುರವೆನಗ್+ಎಂದನಾ +ಭೀಮ

ಅಚ್ಚರಿ:
(೧) ಸತ್ತನೋ ಎಂದು ಹೇಳುವ ಬಗೆ – ಸುರಪುರ ನಿವಾಸಿಯೊ