ಪದ್ಯ ೨೫: ಪಾಂಡವರೇಕೆ ಅಳಲಿದರು?

ಒಲೆದು ಬಿದ್ದನು ಭೀಮ ಕುಲಗಿರಿ
ಮಲಗುವಂದದಲೇರಬಾಯಿಂ
ದಿಳಿವ ಶೋಣಿತಧಾರೆ ಮಗ್ಗುಲ ಮುಸುಕಿತವನಿಯಲಿ
ಎಲೆ ಮಹಾದೇವಾ ವೃಕೋದರ
ನಳಿದನೇ ಹಾ ಭೀಮ ಹಾಯೆಂ
ದಳಲಿದುದು ಪರಿವಾರ ಸಾತ್ಯಕಿ ಸೃಂಜಯಾದಿಗಳು (ಗದಾ ಪರ್ವ, ೭ ಸಂಧಿ, ೨೫ ಪದ್ಯ)

ತಾತ್ಪರ್ಯ:
ಕುಲಗಿರಿಯು ಉರುಳ್ವಂತೆ ಭೀಮನು ಒಲೆದು ಬಿದ್ದನು. ಅವನ ಬಾಯಿಂದ ರಕ್ತ ಸುರಿದು ನೆಲ ನೆನೆಯಿತು. ಶಿವಶಿವಾ ಭೀಮನು ಮಡಿದನೇ! ಹಾ ಭೀಮಾ ಎಂದು ಸಾತ್ಯಕಿ ಸಂಜಯ ಮೊದಲಾದ ಪರಿವಾರದವರು ದುಃಖಿಸಿದರು.

ಅರ್ಥ:
ಒಲೆದು: ತೂಗಾಡು; ಬಿದ್ದು: ಬೀಳು; ಕುಲಗಿರಿ: ದೊಡ್ಡ ಬೆಟ್ಟ; ಮಲಗು: ನಿದ್ರಿಸು; ಇಳಿ: ಜಾರು; ಶೋಣಿತ: ರಕ್ತ; ಧಾರೆ: ವರ್ಷ; ಮಗ್ಗುಲು: ಪಕ್ಕ, ಪಾರ್ಶ್ವ; ಮುಸುಕು: ಹೊದಿಕೆ; ಯೋನಿ; ಅವನಿ: ಭೂಮಿ; ಅಳಿ: ಸಾವು; ಅಳಲು: ದುಃಖಿಸು; ಪರಿವಾರ: ಬಂಧುಜನ; ಆದಿ: ಮುಂತಾದ; ಏರ: ಆರೋಹಿಸು;

ಪದವಿಂಗಡಣೆ:
ಒಲೆದು +ಬಿದ್ದನು+ ಭೀಮ +ಕುಲಗಿರಿ
ಮಲಗುವಂದದಲ್+ಏರ+ಬಾಯಿಂ
ದಿಳಿವ +ಶೋಣಿತ+ಧಾರೆ +ಮಗ್ಗುಲ +ಮುಸುಕಿತ್+ಅವನಿಯಲಿ
ಎಲೆ +ಮಹಾದೇವಾ +ವೃಕೋದರನ್
ಅಳಿದನೇ +ಹಾ +ಭೀಮ +ಹಾಯೆಂದ್
ಅಳಲಿದುದು +ಪರಿವಾರ +ಸಾತ್ಯಕಿ+ ಸೃಂಜಯ+ಆದಿಗಳು

ಅಚ್ಚರಿ:
(೧) ರೂಪಕದ ಪ್ರಯೋಗ – ಒಲೆದು ಬಿದ್ದನು ಭೀಮ ಕುಲಗಿರಿ ಮಲಗುವಂದದಲ್

ಪದ್ಯ ೧೧: ಭೀಮನು ಹೇಗೆ ದುರ್ಯೋಧನನ ತಲೆಗೆ ಹೊಡೆದನು?

ಹೆದರು ಹಿಂಗಿತು ನೆಲಕೆ ಮಾರು
ದ್ದಿದನು ಕರವನು ಸೂಸಿ ಹಾರಿದ
ಗದೆಯ ಕೊಂಡನು ಸೆರಗಿನಲಿ ಸಂತೈಸಿ ಶೋಣಿತವ
ಅದಿರೆ ನೆಲನವ್ವಳಿಸಿ ಮೇಲ್ವಾ
ಯಿದನು ಹೊಳಹಿನ ಹೊಯ್ಲ ಹೊದ
ರೆದ್ದುದು ವಿಭಾಡಿಸಿ ಭೀಮ ಹೊಯ್ದನು ನೃಪನ ಮಸ್ತಕವ (ಗದಾ ಪರ್ವ, ೭ ಸಂಧಿ, ೧೧ ಪದ್ಯ)

ತಾತ್ಪರ್ಯ:
ಭೀಮನು ನಿರ್ಭೀತನಾಗಿ ಕೈಯನ್ನು ನೆಲಕ್ಕುದ್ದಿ, ಜಾರಿಹೋಗಿದ್ದ ಗದೆಯನ್ನು ಹಿಡಿದುಕೊಂಡು, ರಕ್ತವನ್ನು ಸೆರಗಿನಿಂದೊರಸಿಕೊಂದು ನೆಲನಡುಗುವಂತೆ ಕೂಗಿ, ಮೇಲಕ್ಕೆದ್ದು ಹಾರಿ ದುರ್ಯೋಧನನ ತಲೆಯನ್ನು ಗದೆಯಿಂದ ಹೊಡೆದನು.

ಅರ್ಥ:
ಹೆದರು: ಭಯಗೊಳ್ಳು; ಹಿಂಗು: ಕಡಿಮೆಯಾಗು; ನೆಲ: ಭೂಮಿ; ಮಾರುದ್ದು: ಪರಸ್ಪರ ಉಜ್ಜು; ಕರ: ಹಸ್ತ; ಸೂಸು: ಎರಚು, ಚಲ್ಲು; ಹಾರಿ: ಲಂಘಿಸು; ಗದೆ: ಮುದ್ಗರ; ಕೊಂಡು: ಪಡೆದು ಸೆರಗು: ಬಟ್ಟೆಯ ತುದಿ; ಸಂತೈಸು: ಸಮಾಧಾನ ಪಡಿಸು; ಶೋಣಿತ: ರಕ್ತ; ಅದಿರು: ನಡುಕ, ಕಂಪನ; ಅವ್ವಳಿಸು: ತಾಗು; ಹೊಳಹು: ಪ್ರಕಾಶ; ಹೊಯ್ಲು: ಹೊಡೆತ; ಹೊದರು: ತೊಡಕು, ತೊಂದರೆ; ಎದ್ದು: ಮೇಲೇಳು; ವಿಭಾಡಿಸು: ನಾಶಮಾಡು; ಹೊಯ್ದು: ಹೊಡೆ; ನೃಪ: ರಾಜ; ಮಸ್ತಕ: ಶಿರ;

ಪದವಿಂಗಡಣೆ:
ಹೆದರು +ಹಿಂಗಿತು +ನೆಲಕೆ +ಮಾರು
ದ್ದಿದನು+ ಕರವನು +ಸೂಸಿ +ಹಾರಿದ
ಗದೆಯ +ಕೊಂಡನು +ಸೆರಗಿನಲಿ +ಸಂತೈಸಿ +ಶೋಣಿತವ
ಅದಿರೆ +ನೆಲನ್+ಅವ್ವಳಿಸಿ +ಮೇಲ್ವಾ
ಯಿದನು +ಹೊಳಹಿನ +ಹೊಯ್ಲ+ ಹೊದ
ರೆದ್ದುದು +ವಿಭಾಡಿಸಿ +ಭೀಮ +ಹೊಯ್ದನು +ನೃಪನ +ಮಸ್ತಕವ

ಅಚ್ಚರಿ:
(೧) ಹ ಕಾರದ ತ್ರಿವಳಿ ಪದ – ಹೊಳಹಿನ ಹೊಯ್ಲ ಹೊದರೆದ್ದುದು
(೨) ನಿರ್ಭಯವನ್ನು ಹೇಳುವ ಪರಿ – ಹೆದರು ಹಿಂಗಿತು

ಪದ್ಯ ೪೫: ಧರ್ಮಜನೇಕೆ ಮೂರ್ಛೆಹೋದನು?

ಗರುಡತುಂಡದ ಹತಿಗೆ ಫಣಿಯೆದೆ
ಬಿರಿವವೊಲು ಯಮಸುತನ ತನು ಜ
ರ್ಜ್ಝರಿತವಾದುದು ಜರಿವ ಜೋಡಿನ ಜಿಗಿಯ ಶೋಣಿತದ
ಮುರಿದ ಕಂಗಳ ಮಲಗಿನಲಿ ಪೈ
ಸರದ ಗಾತ್ರದ ಗಾಢವೇದನೆ
ಯುರವಣಿಸೆ ಸೊಂಪಡಗಿ ನಿಮಿಷ ಮಹೀಶ ಮೈಮರೆದ (ಶಲ್ಯ ಪರ್ವ, ೩ ಸಂಧಿ, ೪೫ ಪದ್ಯ)

ತಾತ್ಪರ್ಯ:
ಗರುಡನ ಕೊಕ್ಕಿನ ಪೆಟ್ಟಿಗೆ ಹಾವಿನೆದೆಯು ಬಿರಿಯುವಂತೆ ಧರ್ಮಜನ ದೇಹವು ಗಾಯಗೊಂಡಿತು. ಕವಚವು ಹರಿದು ಬೀಳಲು ಮೈಯೆಲ್ಲಾ ರಕ್ತಸಿಕ್ತವಾಯಿತು. ಕಣ್ಣುಗುಡ್ಡೆಗಳು ತಿರುಮುರುವಾದವು. ಅತಿಶಯವಾದ ನೋವಿನ ಭರಕ್ಕೆ ಒಂದು ನಿಮಿಷ ಧರ್ಮಜನು ಮೂರ್ಛೆಹೋದನು.

ಅರ್ಥ:
ಗರುಡ: ಹದ್ದಿನ ಜಾತಿಗೆ ಸೇರಿದ ಒಂದು ಪಕ್ಷಿ; ತುಂಡ: ಮುಖ, ಆನನ; ಹತಿ: ಸಾವು; ಫಣಿ: ಹಾವು; ಎದೆ: ಉರ; ಬಿರಿ: ಬಿರುಕು, ಸೀಳು; ಸುತ: ಮಗ; ತನು: ದೇಹ; ಜರ್ಝರಿತ: ಭಗ್ನವಾಗು; ಜರಿ: ನಿಂದಿಸು, ತಿರಸ್ಕರಿಸು; ಜೋಡು: ಜೊತೆ, ಜೋಡಿ; ಜಿಗಿ: ಹಾರು; ಶೋಣಿತ: ರಕ್ತ; ಮುರಿ: ಸೀಳು; ಕಂಗಳು: ಕಣ್ಣು; ಮಲಗು: ನಿದ್ರೆ; ಪೈಸರ: ಕುಗ್ಗು, ಕುಸಿ; ಗಾತ್ರ: ಒಡಲು, ದೇಹ, ಅವಯವ; ವೇದನೆ: ನೋವು; ಉರವಣಿಸು: ಉತ್ಸಾಹದಿಂದಿರು, ಆತುರಿಸು; ಸೊಂಪು: ಸೊಗಸು; ಅಡಗು: ಅವಿತುಕೊಳ್ಳು; ನಿಮಿಷ: ಕ್ಷಣ; ಮಹೀಶ: ರಾಜ; ಮರೆ: ಗುಟ್ಟು, ರಹಸ್ಯ;

ಪದವಿಂಗಡಣೆ:
ಗರುಡ+ತುಂಡದ +ಹತಿಗೆ +ಫಣಿ+ಎದೆ
ಬಿರಿವವೊಲು +ಯಮಸುತನ+ ತನು+ ಜ
ರ್ಜ್ಝರಿತವಾದುದು +ಜರಿವ +ಜೋಡಿನ +ಜಿಗಿಯ +ಶೋಣಿತದ
ಮುರಿದ +ಕಂಗಳ +ಮಲಗಿನಲಿ +ಪೈ
ಸರದ+ ಗಾತ್ರದ +ಗಾಢವೇದನೆ
ಉರವಣಿಸೆ +ಸೊಂಪಡಗಿ +ನಿಮಿಷ +ಮಹೀಶ +ಮೈಮರೆದ

ಅಚ್ಚರಿ:
(೧) ಉಪಮಾನದ ಪ್ರಯೋಗ – ಗರುಡತುಂಡದ ಹತಿಗೆ ಫಣಿಯೆದೆ ಬಿರಿವವೊಲು
(೨) ಜ ಕಾರದ ತ್ರಿವಳಿ ಪದ – ಜರ್ಜ್ಝರಿತವಾದುದು ಜರಿವ ಜೋಡಿನ ಜಿಗಿಯ
(೩) ಮೂರ್ಛೆಯನ್ನು ವಿವರಿಸುವ ಪರಿ – ಗಾಢವೇದನೆಯುರವಣಿಸೆ ಸೊಂಪಡಗಿ ನಿಮಿಷ ಮಹೀಶ ಮೈಮರೆದ

ಪದ್ಯ ೨೯: ಸಾತ್ಯಕಿಯು ಭೀಮನಲ್ಲಿ ಏನು ಹೇಳಿದನು?

ಮಿಡುಕಿದನು ಸಾತ್ಯಕಿ ವೃಕೋದರ
ನೊಡೆಯವಚಿದನು ಮತ್ತೆ ಪವನಜ
ಬಿಡು ನಿನಗೆ ನೃಪನಾಣೆ ಕುಡಿವೆನು ಖಳನ ಶೋಣಿತವ
ಬಿಡು ಬಿಡಕಟಾ ಭೀಮ ಸಾತ್ಯಕಿ
ಹಿಡಿಹಿಡಿಯ ಹಮ್ಮೈಸುವನು ಬಿಡು
ತೊಡಕಿ ನೋಡಲಿಯೆನುತ ಧೃಷ್ಟದ್ಯುಮ್ನನಳ್ಳಿರಿದ (ದ್ರೋಣ ಪರ್ವ, ೧೯ ಸಂಧಿ, ೨೯ ಪದ್ಯ)

ತಾತ್ಪರ್ಯ:
ಸಾತ್ಯಕಿಯು ತಪ್ಪಿಸಿಕೊಳ್ಳಲು ಯತ್ನಿಸಿದನು ಭೀಮನು ಅವನನ್ನು ಮತ್ತೆ ಅವಚಿದನು. ಸಾತ್ಯಕಿಯು, ಭೀಂಅ ದೊರೆಯಾಣೆ ನನ್ನನ್ನು ಬಿಡು, ಆ ನೀಚನ ರಕ್ತವನ್ನು ಕುಡಿಯುತ್ತೇನೆ ಎಂದನು. ಧೃಷ್ಟದ್ಯುಮ್ನನು ಭೀಮಾ ಬಿಟ್ಟುಬಿಡು, ಸಾತ್ಯಕಿ ಮಿಸುಕಾಡುತ್ತಿದ್ದಾನೆ ಅವನನ್ನು ಬಿಡು, ನನ್ನೊಡನೆ ಯುದ್ಧಮಾಡಿ ನೋಡಲಿ ಎಂದನು.

ಅರ್ಥ:
ಮಿಡುಕು: ಅಲುಗಾಟ; ಒಡೆಯ: ನಾಯಕ; ಅವಚು: ಆವರಿಸು, ಅಪ್ಪಿಕೊಳ್ಳು; ಪವನಜ: ಭೀಮ; ಬಿಡು: ತೊರೆ; ನೃಪ: ರಾಜ; ಆಣೆ: ಪ್ರಮಾಣ; ಕುಡಿ: ಪಾನಮಾದು; ಖಳ: ದುಷ್ಟ; ಶೋಣಿತ: ರಕ್ತ; ಅಕಟ: ಅಯ್ಯೋ; ಹಿಡಿ: ಗ್ರಹಿಸು; ಹಮ್ಮೈಸು: ಎಚ್ಚರ ತಪ್ಪು, ಮೂರ್ಛೆ ಹೋಗು; ತೊಡಕು: ಸಿಕ್ಕು, ಗೋಜು; ಅಳ್ಳಿರಿ: ನಡುಗಿಸು, ಚುಚ್ಚು;

ಪದವಿಂಗಡಣೆ:
ಮಿಡುಕಿದನು +ಸಾತ್ಯಕಿ +ವೃಕೋದರ
ನೊಡೆ+ಅವಚಿದನು +ಮತ್ತೆ +ಪವನಜ
ಬಿಡು +ನಿನಗೆ +ನೃಪನಾಣೆ+ ಕುಡಿವೆನು+ ಖಳನ +ಶೋಣಿತವ
ಬಿಡು +ಬಿಡ್+ಅಕಟಾ +ಭೀಮ +ಸಾತ್ಯಕಿ
ಹಿಡಿಹಿಡಿಯ+ ಹಮ್ಮೈಸುವನು+ ಬಿಡು
ತೊಡಕಿ +ನೋಡಲಿ+ಎನುತ +ಧೃಷ್ಟದ್ಯುಮ್ನನ್+ಅಳ್ಳಿರಿದ

ಅಚ್ಚರಿ:
(೧) ವೃಕೋದರ, ಪವನಜ, ಭೀಮ – ಭೀಮನನ್ನು ಕರೆದ ಪರಿ
(೨) ಬಿಡು ಬಿಡಕಟಾ, ಹಿಡಿಹಿಡಿ – ಜೋಡಿ ಪದಗಳ ಬಳಕೆ

ಪದ್ಯ ೩೪: ಪಾಂಡವರ ಸೈನ್ಯದ ಸ್ಥಿತಿ ಹೇಗಿತ್ತು?

ಬೆರಳ ಬಾಯ್ಗಳ ಬಿಸುಟ ಕೈದುಗ
ಳರೆಗಿರಿದ ಹಲ್ಲುಗಳ ಕೂಡಿದ
ಕರಪುಟದ ಬಿಡುದಲೆಯ ಬಸಿವೇರುಗಳ ಶೋಣಿತದ
ನರಳುವಾರೋಹಕರ ರಾವ್ತರ
ವರ ಮಹಾರಥ ಪಾಯದಳದು
ಬ್ಬರದ ಭಂಗವನೇನನೆಂಬೆನು ವೈರಿಸೇನೆಯಲಿ (ದ್ರೋಣ ಪರ್ವ, ೧೮ ಸಂಧಿ, ೩೪ ಪದ್ಯ)

ತಾತ್ಪರ್ಯ:
ವೈರಿಗಳಾದ ಪಾಂಡವರ ಸೈನ್ಯದಲ್ಲುಂಟಾದ ಕೆಡುಕನ್ನು ನಾನು ಹೇಗೆ ಹೇಳಲಿ? ಬೆರಳುಗಳನ್ನು ಬಾಯಲ್ಲಿಟ್ಟು, ಹಲ್ಲುಗಳನ್ನು ಕಿರಿದು, ಕೈ ಮುಗಿಯುವವರು, ತಲೆ ಕೂದಲನ್ನು ಬೆಲ್ಲಾಪಿಲ್ಲಿಯಾಗಿ ಕೆದರಿಕೊಂಡವರು, ಗಾಯಗಳಿಂದ ರಕ್ತ ಒಸರುತ್ತಿರುವವರು, ನರಳುತ್ತಿರುವ ಮಾವುತ, ರಾವುತ, ಮಹಾರಥರು, ಕಾಲಾಳುಗಳು ಎಲ್ಲೆಲ್ಲಿಯೂ ಆ ಸೈನ್ಯದಲ್ಲಿ ಕಾಣಿಸಿದರು.

ಅರ್ಥ:
ಬೆರಳು: ಅಂಗುಲಿ; ಬಿಸುಟು: ಹೊರಹಾಕು; ಕೈದು: ಆಯುಧ; ಅರೆ: ಅರ್ಧ; ಕಿರಿ: ಹಲ್ಲು ಕಿಸಿ; ಹಲ್ಲು: ದಂತ; ಕೂಡು: ಜೊತೆ; ಕರಪುಟ: ಹಸ್ತ; ಬಿಡು: ತೊರೆ; ತಲೆ: ಶಿರ; ಬಸಿ: ಒಸರು, ಸ್ರವಿಸು; ಏರು: ಹೆಚ್ಚಾಗು; ಶೋಣಿತ: ರಕ್ತ; ನರಳು: ಕೊರಗು; ಆರೋಹಕ: ಹೆಚ್ಚಾಗು; ರಾವ್ತರು: ಕುದುರೆ ಮೇಲೆ ಹೋರಾಡುವವ; ವರ: ಶ್ರೇಷ್ಠ; ಮಹಾರಥ: ಪರಾಕ್ರಮಿ; ಪಾಯದಳ: ಸೈನಿಕ; ಉಬ್ಬರ: ಅತಿಶಯ; ಭಂಗ: ಮುರಿಯುವಿಕೆ; ವೈರಿ: ಶತ್ರು; ಸೇನೆ: ಸೈನ್ಯ;

ಪದವಿಂಗಡಣೆ:
ಬೆರಳ +ಬಾಯ್ಗಳ +ಬಿಸುಟ +ಕೈದುಗಳ್
ಅರೆ+ಕಿರಿದ +ಹಲ್ಲುಗಳ +ಕೂಡಿದ
ಕರಪುಟದ+ ಬಿಡು+ತಲೆಯ +ಬಸಿವ್+ಏರುಗಳ+ ಶೋಣಿತದ
ನರಳುವ್+ಆರೋಹಕರ +ರಾವ್ತರ
ವರ+ ಮಹಾರಥ+ ಪಾಯದಳದ್
ಉಬ್ಬರದ +ಭಂಗವನೇನನ್+ಎಂಬೆನು +ವೈರಿ+ಸೇನೆಯಲಿ

ಅಚ್ಚರಿ:
(೧) ಹೆಚ್ಚು ಎಂದು ಹೇಳಲು ಆರೋಹಕರ ಪದದ ಬಳಕೆ
(೨) ಪಾಂಡವ ಸೈನಿಕರ ಮುಖದ ವೈಖರಿ – ಬೆರಳ ಬಾಯ್ಗಳ ಬಿಸುಟ ಕೈದುಗಳರೆಗಿರಿದ ಹಲ್ಲುಗಳ ಕೂಡಿದ
ಕರಪುಟದ ಬಿಡುದಲೆಯ ಬಸಿವೇರುಗಳ ಶೋಣಿತದ

ಪದ್ಯ ೧೧: ಯಾವುದರ ಬಿರುಗಾಳಿ ಯುದ್ಧದಲ್ಲಿ ಕಾಣಿಸಿತು?

ಸರಳು ಸೇನೆಯ ತಾಗಿ ರಿಪುಗಳ
ಕೊರಳ ಕೊಯ್ಯದ ಮುನ್ನವರಿಮೋ
ಹರವ ಹಿಂದಿಕ್ಕುವುದು ರಥವತಿಜವದ ಜೋಕೆಯಲಿ
ಹೊರಳಿದವು ಭಟರಟ್ಟೆ ಶೋಣಿತ
ಶರಧಿ ಮಸಗಿತು ಮಕುಟಬದ್ಧರ
ಹರಣದನಿಲಸಮೂಹ ಬೀಸಿತು ನಭಕೆ ಬಿರುಬಿನಲಿ (ದ್ರೋಣ ಪರ್ವ, ೧೦ ಸಂಧಿ, ೧೧ ಪದ್ಯ)

ತಾತ್ಪರ್ಯ:
ಬಿಟ್ಟ ಬಾಣಗಳು ಶತ್ರುಗಳ ತಲೆಯನ್ನು ಹಾರಿಸುವ ಮೊದಲೇ ಅರ್ಜುನನ ರಥ ಮುಂದೆ ಹೋಗುತ್ತಿತ್ತು. ಯೋಧರ ಅಟ್ಟೆಗಳು ಹೊರಳಿದವು. ರಕ್ತ ಸಮುದ್ರವು ಉಕ್ಕಿತು. ಸತ್ತ ರಾಜರ ಪ್ರಾಣವಾಯು ಸಮೂಹ ಬಿರುಗಾಳಿಯಂತೆ ಆಕಾಶಕ್ಕೆ ಬೀಸುತ್ತಿತ್ತು.

ಅರ್ಥ:
ಸರಳು: ಬಾಣ; ಸೇನೆ: ಸೈನ್ಯ; ತಾಗು: ಮುಟ್ಟು; ರಿಪು: ವೈರಿ; ಕೊರಳು: ಗಂಟಲು; ಕೊಯ್ಯು: ಸೀಳು; ಮುನ್ನ: ಮೊದಲು; ಮೋಹರ: ಯುದ್ಧ; ಅರಿ: ವೈರಿ; ಹಿಂದೆ: ಹಿಂಭಾಗ; ರಥ: ಬಂಡಿ; ಜವ: ಯಮ; ಜೋಕೆ: ಎಚ್ಚರಿಕೆ; ಹೊರಳು: ತಿರುವು, ಬಾಗು; ಭಟ: ಸೈನಿಕ; ಅಟ್ಟೆ: ತಲೆಯಿಲ್ಲದ ದೇಹ, ಬಾಹು; ಶೋಣಿತ: ರಕ್ತ; ಶರಧಿ: ಸಾಗರ; ಮಸಗು: ಹರಡು; ಮಕುಟ: ಕಿರೀಟ; ಬದ್ಧ: ಕಟ್ಟಿದ, ಬಿಗಿದ; ಹರಣ: ಜೀವ, ಪ್ರಾಣ; ಅನಿಲ: ವಾಯು, ಗಾಳಿ; ಸಮೂಹ: ಗುಂಪು; ಬೀಸು: ಹರಡು; ನಭ: ಆಗಸ; ಬಿರುಬು: ಆವೇಶ;

ಪದವಿಂಗಡಣೆ:
ಸರಳು +ಸೇನೆಯ +ತಾಗಿ +ರಿಪುಗಳ
ಕೊರಳ +ಕೊಯ್ಯದ +ಮುನ್ನವ್+ಅರಿ+ಮೋ
ಹರವ +ಹಿಂದಿಕ್ಕುವುದು+ ರಥವತಿ+ಜವದ +ಜೋಕೆಯಲಿ
ಹೊರಳಿದವು +ಭಟರ್+ಅಟ್ಟೆ+ ಶೋಣಿತ
ಶರಧಿ+ ಮಸಗಿತು +ಮಕುಟ+ಬದ್ಧರ
ಹರಣದ್+ಅನಿಲಸಮೂಹ +ಬೀಸಿತು +ನಭಕೆ +ಬಿರುಬಿನಲಿ

ಅಚ್ಚರಿ:
(೧) ರೂಪಕದ ಪ್ರಯೋಗ – ಮಕುಟಬದ್ಧರ ಹರಣದನಿಲಸಮೂಹ ಬೀಸಿತು ನಭಕೆ ಬಿರುಬಿನಲಿ
(೨) ರಿಪು, ಅರಿ – ಸಮಾನಾರ್ಥಕ ಪದ

ಪದ್ಯ ೧೯: ಅಭಿಮನ್ಯುವಿನ ಬಾಣಗಳು ಆರು ರಥಿಕರ ಮೇಲೆ ಏನು ಮಾಡಿತು?

ವಡಬಗೌತಣವಿಕ್ಕುವರೆ ಕಡ
ಲೊಡೆಯಗಹುದು ಸಮರ್ಥನಲ್ಲಾ
ಬಿಡುಗಣೆಯ ಬೀರುವರೆ ಕಟಕಾಚಾರ್ಯನೆಂದೆನುತ
ಕಡುಮೊನೆಯ ಕೂರಂಬುಗಳ ಮಿಗೆ
ಗಡಣಿಸಿದನೊಗ್ಗೊಡೆದ ಷಡುರಥ
ರೊಡಲೊಳಂಬನು ಹೂಳಿದನು ಕಾರಿದರು ಶೋಣಿತವ (ದ್ರೋಣ ಪರ್ವ, ೬ ಸಂಧಿ, ೧೯ ಪದ್ಯ)

ತಾತ್ಪರ್ಯ:
ವಡಬಾಗ್ನಿಗೆ ಔತಣವನ್ನು ನೀಡಲು ಸಾಗರಕ್ಕೆ ಸಾಧ್ಯ, ದ್ರೋಣನು ಬಿಡಿಬಾಣಗಳನ್ನು ಬಿಡುತ್ತಾನಾಲ್ಲಾ, ಇದರಿಂದ ಏನಾದೀತು ಎನ್ನುತ್ತಾ ಅತಿ ಹರಿತವಾದ ಬಾಣಗಳನ್ನು ಬಿಟ್ಟು, ಆರು ರಥಿಕರ ಮೈಗಳಲ್ಲಿ ನೆಡಿಸಿದನು. ಅವರೆಲ್ಲರೂ ರಕ್ತವನ್ನು ಕಾರಿದರು.

ಅರ್ಥ:
ವಡಬ: ಸಮುದ್ರದೊಳಗಿನ ಬೆಂಕಿ; ಔತಣ: ವಿಶೇಷವಾದ ಊಟ; ಕಡಲು: ಸಾಗರ; ಸಮರ್ಥ: ಬಲಶಾಲಿ, ಗಟ್ಟಿಗ; ಬಿಡುಗಣೆ: ಬಿಟ್ಟ ಬಾಣ; ಬೀರು: ಒಗೆ, ಎಸೆ, ತೂರು; ಕಟಕ: ಸೈನ್ಯ; ಆಚಾರ್ಯ: ಗುರು; ಕಡು: ಬಹಳ, ತುಂಬ; ಮೊನೆ: ಚೂಪು, ತುದಿ; ಕೂರಂಬು: ಹರಿತವಾದ ಬಾಣ; ಮಿಗೆ: ಮತ್ತು; ಗಡಣ: ಕೂಡಿಸುವಿಕೆ; ಒಗ್ಗೊಡು: ಸೇರು; ಒಡಲು: ದೇಹ; ಅಂಬು: ಬಾಣ; ಹೂಳು: ಹೂತು ಹಾಕು; ಕಾರು: ತೋರು; ಶೋಣಿತ: ರಕ್ತ;

ಪದವಿಂಗಡಣೆ:
ವಡಬಗ್+ಔತಣವ್+ಇಕ್ಕುವರೆ +ಕಡಲ್
ಒಡೆಯಗ್+ಅಹುದು+ ಸಮರ್ಥನಲ್ಲಾ
ಬಿಡುಗಣೆಯ+ ಬೀರುವರೆ +ಕಟಕಾಚಾರ್ಯನ್+ಎಂದೆನುತ
ಕಡು+ಮೊನೆಯ +ಕೂರಂಬುಗಳ+ ಮಿಗೆ
ಗಡಣಿಸಿದನ್+ಒಗ್ಗೊಡೆದ +ಷಡುರಥರ್
ಒಡಲೊಳ್+ಅಂಬನು +ಹೂಳಿದನು+ ಕಾರಿದರು+ ಶೋಣಿತವ

ಅಚ್ಚರಿ:
(೧) ಉಪಮಾನದ ಪ್ರಯೋಗ – ವಡಬಗೌತಣವಿಕ್ಕುವರೆ ಕಡಲೊಡೆಯಗಹುದು

ಪದ್ಯ ೨೯: ವೀರರು ಯಾರ ಅರಮನೆಯನ್ನು ಸೇರಿದರು?

ಕರೆಕರೆದು ಮೂದಲಿಸಿ ಕಡುಹಿನ
ದುರುಳರುಬ್ಬಿನ ಮೇಲೆ ಹೊಕ್ಕ
ಬ್ಬರಿಸಿ ಹೊಯಿದರು ಕಾದಿಕೊಂಡರು ಕಾಲನರಮನೆಯ
ಕರುಳುಗಿಯೆ ತಲೆ ಸಿಡಿಯೆ ನಿಟ್ಟೆಲು
ಮರಿಯೆ ಮೂಳೆಗಳುದಿರೆ ಶೋಣಿತ
ಸುರಿಯೆ ಕಾಳಿಜ ಕೆದರೆ ತುಂಡಿಸಿ ಖಂಡ ಬೆಂಡೇಳೆ (ಭೀಷ್ಮ ಪರ್ವ, ೪ ಸಂಧಿ, ೨೯ ಪದ್ಯ)

ತಾತ್ಪರ್ಯ:
ಎದುರಾಳಿಗಳನ್ನು ಮೂದಲಿಸಿ ಕರೆದು, ಗರ್ಜಿಸಿ ಅವರನ್ನು ಹೊಯ್ದರು, ಕತ್ತಿಗಳ ವೀರರು ಯುದ್ಧಮಾಡಿ ಯಮನ ಅರಮನೆಯನ್ನು ಪಡೆದರು. ಅವರ ಕರುಳುಗಳು ಹೊರಬಂದವು, ತಲೆಗಳು ಸಿಡಿದವು, ಎಲುಬುಗಳು ಮುರಿದು ಕೆಳಕ್ಕುದುರಿದವು. ರಕ್ತ ನೆಣಗಳು ಸುರಿದವು, ತುಂಡಾದ ಮಾಂಸ ಬೆಂಡೆದ್ದವು.

ಅರ್ಥ:
ಕರೆ: ಬರೆಮಾಡು; ಮೂದಲಿಸು: ಹಂಗಿಸು; ಕಡುಹು: ಪರಾಕ್ರಮ; ದುರುಳ: ದುಷ್ಟ; ಹೊಕ್ಕು: ಸೇರು; ಉಬ್ಬರಿಸು: ಅತಿಶಯ, ಹೆಚ್ಚಳ; ಹೊಯ್ದು: ಹೊಡೆ; ಕಾದು: ಹೋರಾಡು; ಕಾಲ: ಯಮ; ಅರಮನೆ: ರಾಜರ ಆಲಯ; ಕರುಳು: ಪಚನಾಂಗ; ಉಗಿ: ಹೊರಹಾಕು; ತಲೆ: ಶಿರ; ಸಿಡಿ: ಹೋಳಾಗು; ನಿಟ್ಟೆಲುಬು: ನೇರವಾದ ಮೂಳೆ; ಮೂಳೆ: ಎಲುಬು; ಉದಿರು: ಕೆಳಗೆ ಬೀಳು; ಶೋಣಿತ: ರಕ್ತ; ಸುರಿ: ಹೊರಹೊಮ್ಮು; ಕಾಳಿಜ: ಪಿತ್ತಾಶಯ; ಕೆದರು: ಹರಡು; ತುಂಡಿಸು: ಚೂರುಮಾಡು; ಬೆಂಡು: ತಿರುಳಿಲ್ಲದುದು, ಪೊಳ್ಳು;

ಪದವಿಂಗಡಣೆ:
ಕರೆಕರೆದು +ಮೂದಲಿಸಿ +ಕಡುಹಿನ
ದುರುಳರ್+ಉಬ್ಬಿನ +ಮೇಲೆ +ಹೊಕ್ಕ್
ಅಬ್ಬರಿಸಿ +ಹೊಯಿದರು +ಕಾದಿಕೊಂಡರು+ ಕಾಲನ್+ಅರಮನೆಯ
ಕರುಳ್+ಉಗಿಯೆ+ತಲೆ +ಸಿಡಿಯೆ +ನಿಟ್ಟೆಲು
ಮರಿಯೆ +ಮೂಳೆಗಳ್+ಉದಿರೆ +ಶೋಣಿತ
ಸುರಿಯೆ +ಕಾಳಿಜ +ಕೆದರೆ +ತುಂಡಿಸಿ +ಖಂಡ +ಬೆಂಡೇಳೆ

ಅಚ್ಚರಿ:
(೧) ಸಿಡಿಯೆ, ಮರಿಯೆ, ಉದಿರೆ, ಸುರಿಯೆ, ದೆಕರೆ – ಎ ಕಾರಾಂತ್ಯ ಪ್ರಾಸ ಪದಗಳು
(೨) ಸತ್ತರು ಎಂದು ಹೇಳಲು – ಹೊಯಿದರು ಕಾದಿಕೊಂಡರು ಕಾಲನರಮನೆಯ

ಪದ್ಯ ೨೦: ಯುಧಿಷ್ಠಿರನ ಸಹಾಯಕ್ಕೆ ಯಾರು ಬಂದರು?

ಸೈರಿಸುತ ಕೈಯೊಡ್ಡಿ ರಕುತದ
ಧಾರೆಯನು ಕೈತುಂಬ ಹಿಡಿದತಿ
ಧೀರನೋರೆಯ ನೋಟದಲಿ ಸೈರಂಧ್ರಿಯನು ಕರೆಯೆ
ನಾರಿ ಹರಿತಂದಕಟ ನೊಂದನು
ಕಾರಣಿಕ ಸನ್ಯಾಸಿಯೆನುತ ವಿ
ಕಾರಿಸದೆ ಸೆರಗಿನಲಿ ತೋದಳು ಬಹಳ ಶೋಣಿತವ (ವಿರಾಟ ಪರ್ವ, ೧೦ ಸಂಧಿ, ೨೦ ಪದ್ಯ)

ತಾತ್ಪರ್ಯ:
ಧೀರನಾದ ಯುಧಿಷ್ಠಿರನು ಆ ಹೊಡೆತವನ್ನು ಸಹಿಸಿಕೊಂಡನು. ಅವನ ಹಣೆಯಿಂದ ರಕ್ತವಉ ಕೆಳಕ್ಕೆ ಬೀಳದಂತೆ ಕೈಬೊಗಸೆಯಲ್ಲಿ ಹಿಡಿದನು. ಒಮ್ಮೆ ಓರೆ ನೋಟದಿಂದ ಸೈರಂಧಿರ್ಯನ್ನು ಕರೆದನು. ಸೈರಂಧ್ರಿಯು ಬೇಗ ಬಂದು ಅಯ್ಯೋ ಪರಮ ಜ್ಞಾನಿಯಾದ ಸನ್ಯಾಸಿಯು ನೊಂದನು ಎಂದು ಹೇಳುತ್ತಾ ರಕ್ತವು ಕೆಳಕ್ಕೆ ಬೀಳದಂತೆ ತನ್ನ ಸೆಅರ್ಗಿನಲ್ಲೇ ಹಿಡಿದಳು.

ಅರ್ಥ:
ಸೈರಿಸು: ತಾಳು; ಕೈಯೊಡ್ದು: ಹಸ್ತವನ್ನು ನೀಡು; ರಕುತ: ನೆತ್ತರು; ಧಾರೆ: ವರ್ಷ; ಕೈತುಂಬ: ಬೊಗಸೆ; ಹಿಡಿ: ಗ್ರಹಿಸು; ಧೀರ: ಬಲಶಾಲಿ; ಓರೆ: ವಕ್ರ; ನೋಟ: ವೀಕ್ಷಣೆ; ಕರೆ: ಬರೆಮಾಡು; ನಾರಿ: ಹೆಣ್ಣು; ಹರಿ: ಓಡು, ಧಾವಿಸು; ಅಕಟ: ಅಯ್ಯೋ; ನೊಂದು: ಬೇನೆ, ಶೂಲೆ; ಕಾರಣಿಕ: ಅವತಾರ ಪುರುಷ; ಸನ್ಯಾಸಿ: ಯೋಗಿ; ವಿಕಾರ: ಮಾರ್ಪಾಟು; ಸೆರಗು: ಸೀರೆಯಲ್ಲಿ ಹೊದೆಯುವ ಭಾಗ; ತೋಯು: ನೆನೆ, ಒದ್ದೆಯಾಗು; ಬಹಳ: ತುಂಬ; ಶೋಣಿತ: ರಕ್ತ;

ಪದವಿಂಗಡಣೆ:
ಸೈರಿಸುತ +ಕೈಯೊಡ್ಡಿ +ರಕುತದ
ಧಾರೆಯನು +ಕೈತುಂಬ +ಹಿಡಿದ್+ಅತಿ
ಧೀರನ್+ಓರೆಯ +ನೋಟದಲಿ+ ಸೈರಂಧ್ರಿಯನು +ಕರೆಯೆ
ನಾರಿ +ಹರಿತಂದ್+ಅಕಟ+ ನೊಂದನು
ಕಾರಣಿಕ +ಸನ್ಯಾಸಿ+ಎನುತ +ವಿ
ಕಾರಿಸದೆ +ಸೆರಗಿನಲಿ +ತೋದಳು +ಬಹಳ +ಶೋಣಿತವ

ಅಚ್ಚರಿ:
(೧) ರಕುತ, ಶೋಣಿತ – ಸಮನಾರ್ಥಕ ಪದ
(೨) ದ್ರೌಪದಿಯನ್ನು ಕರೆದ ಪರಿ – ಓರೆಯ ನೋಟದಲಿ ಸೈರಂಧ್ರಿಯನು ಕರೆಯೆ

ಪದ್ಯ ೪೯: ಪಿಂಗಳನು ಹೇಗೆ ಸತ್ತನು?

ಕಂಡು ಪವನಜ ತುಡುಕಿ ಮಿಗೆ ಮುಂ
ಕೊಂಡು ನೆಲಕಪ್ಪಳಿಸೆ ಮೆಲ್ಲನೆ
ದೊಂಡೆಗರುಳುರೆ ಸೂಸೆ ಚೆಲ್ಲಿತು ರಾಜಸಭೆಯೊಳಗೆ
ಖಂಡ ಮಿದುಳಿನ ಹೊನಲಿನಲಿ ಕಡಿ
ಖಂಡ ಶೋಣಿತವಾರಿಯೊಳು ಮಿಗೆ
ದಿಂಡುಗೆಡೆದೊರಗಿದನು ಪಿಂಗಳ ಸಭೆಯ ಮಧ್ಯದಲಿ (ವಿರಾಟ ಪರ್ವ, ೪ ಸಂಧಿ, ೪೯ ಪದ್ಯ)

ತಾತ್ಪರ್ಯ:
ಪಿಂಗಳನು ಭರದಿಂದ ಬರುವುದನ್ನು ನೋಡಿದ ಭೀಮನು, ಅವನನ್ನು ಹಿಡಿದು ನೆಲಕ್ಕಪ್ಪಳಿಸಿದನು. ಅವನ ಮಿದುಳು, ಕರುಳು ಮಾಂಸಖಂಡಗಳು ಚೂರಾಗಿ ಹೊರಬಂದವು, ರಕ್ತಧಾರೆ ಜೋರಾಗಿ ಹರಿಯಿತು, ಪಿಂಗಳನ ದೇಹವು ಸಭೆಯ ಮಧ್ಯದಲ್ಲಿ ನೆಲದ ಮೇಲೆ ಮಲಗಿತು.

ಅರ್ಥ:
ಕಂಡು: ನೋಡು; ಪವನಜ: ವಾಯುಪುತ್ರ (ಭೀಮ); ತುಡುಕು: ಹೋರಾಡು, ಸೆಣಸು; ಮಿಗೆ: ಮತ್ತು, ಅಧಿಕವಾಗಿ; ಮುಂಕೊಂಡು: ಮುಂಭಾಗದಲ್ಲಿ ಹಿಡಿದು; ನೆಲ: ಭೂಮಿ; ಅಪ್ಪಳಿಸು: ಎತ್ತಿಕುಕ್ಕು; ಮೆಲ್ಲನೆ: ನಿಧಾನವಾಗಿ; ದೊಂಡೆ: ಜಿಗುಟಾದುದು; ಕರುಳು: ಪಚನಾಂಗದ ಭಾಗ; ಉರೆ: ಅಧಿಕವಾಗಿ; ಸೂಸು: ಎರಚು, ಚಲ್ಲು; ಚೆಲ್ಲು: ಹರಡು; ಸಭೆ: ಓಲಗ; ಖಂಡ: ತುಂಡು, ಚೂರು; ಮಿದುಳು: ತಲೆಯ ಭಾಗ; ಹೊನಲು: ಪ್ರವಾಹ; ಕಡಿ: ತುಂಡು, ಹೋಳು; ಶೋಣಿತ: ರಕ್ತ; ವಾರಿ: ಜಲ; ಮಿಗೆ: ಅಧಿಕ; ದಿಂಡು: ಶರೀರ, ದೇಹ; ಒರಗು: ಮಲಗು; ಸಭೆ: ಓಲಗ; ಮಧ್ಯ: ನಡುವೆ;

ಪದವಿಂಗಡನೆ:
ಕಂಡು+ ಪವನಜ+ ತುಡುಕಿ +ಮಿಗೆ +ಮುಂ
ಕೊಂಡು +ನೆಲಕ್+ಅಪ್ಪಳಿಸೆ +ಮೆಲ್ಲನೆ
ದೊಂಡೆ+ಕರುಳ್+ಉರೆ +ಸೂಸೆ +ಚೆಲ್ಲಿತು +ರಾಜಸಭೆಯೊಳಗೆ
ಖಂಡ +ಮಿದುಳಿನ +ಹೊನಲಿನಲಿ +ಕಡಿ
ಖಂಡ +ಶೋಣಿತವಾರಿಯೊಳು +ಮಿಗೆ
ದಿಂಡುಗೆಡೆದ್+ಒರಗಿದನು +ಪಿಂಗಳ +ಸಭೆಯ +ಮಧ್ಯದಲಿ

ಅಚ್ಚರಿ:
(೧) ಪಿಂಗಳನ ಸ್ಥಿತಿಯನ್ನು ವಿವರಿಸುವ ಪರಿ – ಖಂಡ ಮಿದುಳಿನ ಹೊನಲಿನಲಿ ಕಡಿಖಂಡ ಶೋಣಿತವಾರಿಯೊಳು ಮಿಗೆದಿಂಡುಗೆಡೆದೊರಗಿದನು ಪಿಂಗಳ ಸಭೆಯ ಮಧ್ಯದಲಿ