ಪದ್ಯ ೬೧: ಕೌರವ ಸೈನ್ಯವು ಹೇಗೆ ಛಿದ್ರವಾಯಿತು?

ರಥ ಮುರಿದು ಮನನೊಂದು ಸುಮಹಾ
ರಥರು ಹಿಮ್ಮೆಟ್ಟಿದರು ಬಳಿಕತಿ
ರಥಭಯಂಕರನೊಡೆದು ಹೊಕ್ಕನು ವೈರಿಮೋಹರವ
ಮಥನದಲಿ ಮುರಿಯೊಡೆದ ಶೈಲ
ವ್ಯಥಿತ ಸಾಗರದಂತೆ ಬಿರಿದವು
ರಥನಿಕರ ಕಾಲಾಳು ಕುದುರೆಗಳೊಂದು ನಿಮಿಷದಲಿ (ದ್ರೋಣ ಪರ್ವ, ೪ ಸಂಧಿ, ೬೧ ಪದ್ಯ)

ತಾತ್ಪರ್ಯ:
ರಥಗಳು ಮುರಿದು ಮನನೊಂದು ಇಬ್ಬರು ಮಹಾರಥರು ಹಿಮ್ಮೆಟ್ಟಿದರು. ಅತಿರಥ ಭಯಂಕರನಾದ ಅಭಿಮನ್ಯುವು ಕೌರವ ಸೈನ್ಯವನ್ನು ಹೊಕ್ಕನು. ಮಂದರ ಪರ್ವತವನ್ನು ಕಡೆದಾಗ ಅಲ್ಲೋಲ ಕಲ್ಲೋಲವಾದ ಸಾಗರದಮ್ತೆ, ಕೌರವಸೈನ್ಯದ ಚತುರಂಗ ಬಲವು ಮನಸ್ಸಿಗೆ ಬಂದಂತೆ ಛಿದ್ರವಾಯಿತು.

ಅರ್ಥ:
ರಥ: ಬಂಡಿ ಮುರಿ: ಸೀಳು; ಮನ: ಮನಸ್ಸು; ನೊಂದು: ನೋವು; ಮಹಾರಥ: ಪರಾಕ್ರಮಿ; ಹಿಮ್ಮೆಟ್ಟು: ಹಿಂದೆ ಸರಿ; ಬಳಿಕ: ನಂತರ; ಅತಿರಥ: ಪರಾಕ್ರಮಿ; ಭಯಂಕರ: ಭಯವನ್ನುಂಟು ಮಾಡುವಂತಹದು; ಒಡೆ: ಸೀಳು; ಹೊಕ್ಕು: ಸೇರು; ವೈರಿ: ಶತ್ರು; ಮೋಹರ: ಯುದ್ಧ; ಮಥನ: ತಿಕ್ಕಾಟ, ಘರ್ಷಣೆ; ಮುರಿ: ಸೀಳು; ಶೈಲ: ಬೆಟ್ಟ; ವ್ಯಥಿತ: ದುಃಖಿತನಾದ; ಸಾಗರ: ಸಮುದ್ರ; ಬಿರಿ: ಒಡೆ; ರಥ: ಬಂಡಿ; ನಿಕರ: ಗುಂಪು; ಕಾಲಾಳು: ಸೈನಿಕ; ಕುದುರೆ: ಅಶ್ವ; ನಿಮಿಷ: ಕ್ಷಣಮಾತ್ರ;

ಪದವಿಂಗಡಣೆ:
ರಥ +ಮುರಿದು +ಮನನೊಂದು +ಸುಮಹಾ
ರಥರು +ಹಿಮ್ಮೆಟ್ಟಿದರು +ಬಳಿಕ್+ಅತಿ
ರಥ+ಭಯಂಕರನೊಡೆದು+ ಹೊಕ್ಕನು +ವೈರಿ+ಮೋಹರವ
ಮಥನದಲಿ+ ಮುರಿಯೊಡೆದ +ಶೈಲ
ವ್ಯಥಿತ+ ಸಾಗರದಂತೆ +ಬಿರಿದವು
ರಥನಿಕರ +ಕಾಲಾಳು +ಕುದುರೆಗಳ್+ಒಂದು +ನಿಮಿಷದಲಿ

ಅಚ್ಚರಿ:
(೧) ಉಪಮಾನದ ಪ್ರಯೋಗ – ವೈರಿಮೋಹರವ ಮಥನದಲಿ ಮುರಿಯೊಡೆದ ಶೈಲ ವ್ಯಥಿತ ಸಾಗರದಂತೆ

ಪದ್ಯ ೨೯: ಕರ್ಣನು ಕೌರವರ ಸ್ಥಿತಿಯನ್ನು ಹೇಗೆ ವರ್ಣಿಸಿದನು?

ಆಲವಟ್ಟದ ಗಾಳಿಯಲಿ ಮೇ
ಘಾಳಿ ಮುರಿವುದೆ ಮಿಂಚುಬುಳುವಿಗೆ
ಸೋಲುವುದೆ ಕತ್ತಲೆಯ ಕಟಕವು ಜೀಯ ಚಿತ್ತೈಸು
ಸೀಳಬಹುದೇ ಸೀಸದುಳಿಯಲಿ
ಶೈಲವನು ಹರಿಯೊಲಿದ ಮನುಜರ
ಮೇಲೆ ಮುನಿದೇಗುವರು ಕೆಲಬರು ಭೀಷ್ಮ ಹೇಳೆಂದ (ದ್ರೋಣ ಪರ್ವ, ೧ ಸಂಧಿ, ೨೯ ಪದ್ಯ)

ತಾತ್ಪರ್ಯ:
ಬಟ್ಟೆಯ ಬೀಸಣಿಕೆಯಿಂದ ಬೀಸಿದರೆ ಕಾರ್ಮೋಡಗಳು ಹಾರಿ ಹೋದಾವೇ? ಮಿಂಚುಹುಳದ ಬೆಳಕಿಗೆ ಕತ್ತಲೆ ಸೋತೀತೇ? ಸೀಸದ ಉಳಿಯಿಂದ ಬೆಟ್ಟವನ್ನು ಕತ್ತರಿಸಲು ಸಾಧ್ಯವೇ ಶ್ರೀಕೃಷ್ಣನು ಒಲಿದ ಮನುಷ್ಯರ ಮೇಲೆ ಉಳಿದವರು ಸಿಟ್ಟಾಗಿ ಏನು ಮಾಡಲು ಸಾಧ್ಯ? ಭೀಷ್ಮ ಇದ್ ನಾವಿರುವ ಸ್ಥಿತಿ ಎಂದು ಕರ್ಣನು ಹೇಳಿದನು.

ಅರ್ಥ:
ಆಲವಟ್ಟ: ಬಟ್ಟೆಯಿಂದ ಮಾಡಿದ ಬೀಸಣಿಕೆ; ಗಾಳಿ: ವಾಯು; ಮೇಘಾಳಿ: ಮೋಡಗಳ ಸಮೂಹ; ಮುರಿ: ಸೀಳು; ಮಿಂಚು: ಹೊಳಪು, ಕಾಂತಿ; ಬುಳು: ಹುಳು; ಸೋಲು: ಪರಾಭವ; ಕತ್ತಲೆ: ಅಂಧಕಾರ; ಕಟಕ: ಗುಂಪು; ಜೀಯ: ಒಡೆಯ; ಚಿತ್ತೈಸು: ಗಮನವಿಡು; ಸೀಳು: ಚೂರು, ತುಂಡು; ಸೀಸ: ತಲೆ, ಶಿರ; ಉಳಿ: ಲೋಹವನ್ನು ಕತ್ತರಿಸಲು ಉಪಯೋಗಿಸುವ ಒಂದು ಉಪಕರಣ; ಶೈಲ: ಬೆಟ್ಟ; ಹರಿ: ಸೀಳು; ಒಲಿ: ಒಪ್ಪು; ಮನುಜ: ಮನುಷ್ಯ; ಮುನಿ: ಕೋಪ; ಏಗು: ಸಾಗಿಸು, ನಿಭಾಯಿಸು; ಕೆಲ: ಸ್ವಲ್ಪ; ಹೇಳು: ತಿಳಿಸು;

ಪದವಿಂಗಡಣೆ:
ಆಲವಟ್ಟದ+ ಗಾಳಿಯಲಿ +ಮೇ
ಘಾಳಿ +ಮುರಿವುದೆ +ಮಿಂಚುಬುಳುವಿಗೆ
ಸೋಲುವುದೆ +ಕತ್ತಲೆಯ +ಕಟಕವು +ಜೀಯ +ಚಿತ್ತೈಸು
ಸೀಳಬಹುದೇ +ಸೀಸದ್+ಉಳಿಯಲಿ
ಶೈಲವನು +ಹರಿಯೊಲಿದ+ ಮನುಜರ
ಮೇಲೆ +ಮುನಿದ್+ಏಗುವರು +ಕೆಲಬರು +ಭೀಷ್ಮ +ಹೇಳೆಂದ

ಅಚ್ಚರಿ:
(೧) ಉಪಮಾನದ ಪ್ರಯೋಗ – ಆಲವಟ್ಟದ ಗಾಳಿಯಲಿ ಮೇಘಾಳಿ ಮುರಿವುದೆ; ಮಿಂಚುಬುಳುವಿಗೆ
ಸೋಲುವುದೆ ಕತ್ತಲೆಯ ಕಟಕವು; ಸೀಳಬಹುದೇ ಸೀಸದುಳಿಯಲಿ ಶೈಲವನು

ಪದ್ಯ ೧೯: ಧರ್ಮಜನು ಯಾವ ವನಕ್ಕೆ ಹೊರಟನು?

ಕೇಳಲಷ್ಟಾವಕ್ರ ಚರಿತವ
ಹೇಳಿದನು ಲೋಮಶ ಮುನೀಂದ್ರ ನೃ
ಪಾಲಕಂಗರುಹಿದನು ಪೂರ್ವಾಪರದ ಸಂಗತಿಯ
ಭಾಳಡವಿ ಬಯಲಾಯ್ತು ಖಗಮೃಗ
ಜಾಲ ಸವೆದುದು ಗಂಧಮಾದನ
ಶೈಲವನದಲಿ ವಾಸವೆಂದವನೀಶ ಹೊರವಂಟ (ಅರಣ್ಯ ಪರ್ವ, ೧೦ ಸಂಧಿ, ೧೯ ಪದ್ಯ)

ತಾತ್ಪರ್ಯ:
ಅಷ್ಟಾವಕ್ರನ ಚರಿತ್ರೆಯನ್ನು ಹೇಳೆಂದು ಕೇಳಲು ಲೋಮಶನು ಆ ಕಥೆಯನ್ನೆಲ್ಲವನ್ನೂ ಹೇಳಿದನು. ಪಾಂಡವರಿದ್ದ ಅಡವಿಯಲ್ಲಿ ಹಣ್ಣು ಹೂವುಗಳು ಪಕ್ಷಿ ಮೃಗಗಳು ಸವೆದು ಹೋಗಲು, ಗಂಧಮಾದನಗಿರಿಯ ವನಕ್ಕೆ ಹೋಗೋಣವೆಂದು ಧರ್ಮಜನು ಹೊರಟನು.

ಅರ್ಥ:
ಕೇಳು: ಆಲಿಸು; ಚರಿತ: ಕಥೆ; ಮುನಿ: ಋಷಿ; ನೃಪಾಲ: ರಾಜ; ಅರುಹು: ತಿಳಿಸು, ಹೇಳು; ಪೂರ್ವಾಪರ: ಹಿಂದು ಮುಂದು; ಸಂಗತಿ: ವಿಷಯ; ಭಾಳಡವಿ: ದೊಡ್ಡ ಕಾಡು; ಬಯಲು: ಬರಿದಾದ ಜಾಗ; ಖಗ: ಪಕ್ಷಿ; ಮೃಗ: ಪ್ರಾಣಿ; ಜಾಲ: ಗುಂಪು; ಸವೆ: ಉಂಟಾಗು; ಶೈಲ: ಬೆಟ್ಟ; ವಾಸ: ಜೀವಿಸು; ಅವನೀಶ: ರಾಜ; ಹೊರವಂಟ: ತೆರಳು;

ಪದವಿಂಗಡಣೆ:
ಕೇಳಲ್+ಅಷ್ಟಾವಕ್ರ +ಚರಿತವ
ಹೇಳಿದನು +ಲೋಮಶ +ಮುನೀಂದ್ರ +ನೃ
ಪಾಲಕಂಗ್+ಅರುಹಿದನು +ಪೂರ್ವಾಪರದ+ ಸಂಗತಿಯ
ಭಾಳಡವಿ+ ಬಯಲಾಯ್ತು +ಖಗ+ಮೃಗ
ಜಾಲ +ಸವೆದುದು +ಗಂಧಮಾದನ
ಶೈಲವನದಲಿ +ವಾಸವೆಂದ್+ಅವನೀಶ +ಹೊರವಂಟ

ಅಚ್ಚರಿ:
(೧) ಅಡವಿಯು ಬರಡಾಯಿತು ಎಂದು ಹೇಳಲು – ಭಾಳಡವಿ ಬಯಲಾಯ್ತು ಖಗಮೃಗ
ಜಾಲ ಸವೆದುದು

ಪದ್ಯ ೨೭: ಸಭಾಮಂಟಪದ ರಚನೆ ಹೇಗಿತ್ತು?

ಅಲ್ಲಿ ವಿಮಳೋದ್ಯಾನ ವೀಧಿಗ
ಳಲ್ಲಿ ತಾವರೆಗೊಳದ ರಚನೆಗ
ಳಲ್ಲಿ ಹಂಸ ಮಯೂರ ಮಧುಕರ ಶುಕಪಿಕಾನೀಕ
ಅಲ್ಲಿ ಕೇಳೀಶೈಲ ಹಿಮಗೃಹ
ವಲ್ಲಿ ವಿವಿಧ ವಿಳಾಸ ರಚನೆಗ
ಳಲ್ಲಿ ಹೊಯ್ಕೈಯೆನಿಸಿ ಮೆರೆದುದು ಪಾಂಡವರ ಸಭೆಯ (ಸಭಾ ಪರ್ವ, ೧೪ ಸಂಧಿ, ೨೭ ಪದ್ಯ)

ತಾತ್ಪರ್ಯ:
ಸಭಾಭವನವನ್ನು ನೋಡಲು ಧರ್ಮರಾಯ, ಧೃತರಾಷ್ಟ್ರನೊಡನೆ ಬಂದನು. ಅಲ್ಲಿ ಉದ್ಯಾನವನಗಳು, ಸುಂದರವಾದ ಮಾರ್ಗಗಳು, ತಾವರೆಕೊಳಗಳು, ಹಂಸ, ನವಿಲು, ದುಂಬಿ, ಗಿಳಿ, ಕೋಗಿಲೆಗಳು ವಿಹರಿಸುತ್ತಿದ್ದವು. ಕೀಡಾಶೈಲ, ಹಿಮಗೃಹ ಇತ್ಯಾದಿ ವಿವಿಧ ರಚನೆಗಳಿದ್ದವು. ಆ ಸಭಾಭವನನು ಪಾಂಡವರ ಸಭೆಗೆ ಸರಿಸಾಟಿಯಾಗಿತ್ತು.

ಅರ್ಥ:
ವಿಮಳ: ನಿರ್ಮಲ; ವೀಧಿ: ಮಾರ್ಗ; ಉದ್ಯಾನ: ತೋಟ, ಉಪವನ; ತಾವರೆ: ಕಮಲ; ಕೊಳ: ಚಿಕ್ಕ ಸರೋವರ; ರಚನೆ: ನಿರ್ಮಾಣ; ಹಂಸ: ಒಂದು ಬಿಳಿಯ ಬಣ್ಣದ ಪಕ್ಷಿ, ಮರಾಲ; ಮಧುಕರ: ಜೀನು, ದುಂಬಿ; ಮಯೂರ: ನವಿಲು; ಶುಕ: ಗಿಣಿ; ಪಿಕಾನೀಕ: ಕೋಗಿಲೆ; ಶೈಲ: ಬೆಟ್ಟ; ಹಿಮ: ಮಂಜು; ಗೃಹ: ಮನೆ; ವಿವಿಧ: ಹಲವಾರು; ವಿಲಾಸ: ಕ್ರೀಡೆ, ವಿಹಾರ; ರಚನೆ: ನಿರ್ಮಾಣ; ಮೆರೆ: ಹೊಳೆ, ಪ್ರಕಾಶಿಸು; ಸಭೆ: ಓಲಗ;

ಪದವಿಂಗಡಣೆ:
ಅಲ್ಲಿ +ವಿಮಳ+ಉದ್ಯಾನ +ವೀಧಿಗಳ್
ಅಲ್ಲಿ +ತಾವರೆ +ಕೊಳದ +ರಚನೆಗಳ್
ಅಲ್ಲಿ +ಹಂಸ +ಮಯೂರ+ ಮಧುಕರ+ ಶುಕ+ಪಿಕಾನೀಕ
ಅಲ್ಲಿ+ ಕೇಳ್+ಈ+ಶೈಲ +ಹಿಮಗೃಹವ್
ಅಲ್ಲಿ +ವಿವಿಧ +ವಿಳಾಸ +ರಚನೆಗಳ್
ಅಲ್ಲಿ +ಹೊಯ್ಕೈ+ಎನಿಸಿ +ಮೆರೆದುದು +ಪಾಂಡವರ+ ಸಭೆಯ

ಅಚ್ಚರಿ:
(೧) ಅಲ್ಲಿ – ಎಲ್ಲಾ ಸಾಲುಗಳ ಮೊದಲ ಪದ
(೨) ಪಕ್ಷಿಗಳ ಹೆಸರು – ಹಂಸ, ಮಯೂರ, ಶುಕ, ಪಿಕಾನೀಕ

ಪದ್ಯ ೩೩: ಕಿಂಪುರಷರನ್ನು ಗೆದ್ದಮೇಲೆ ಯಾವ ಪರ್ವತಶ್ರೇಣಿಗೆ ಮುತ್ತಿಗೆ ಹಾಕಿದನು?

ಅಲ್ಲಿ ಕೆಲಕಡೆಯಲ್ಲಿ ಗಿರಿಗುಹೆ
ಯಲ್ಲಿ ನೆರೆದ ಕಿರಾತವರ್ಗವ
ಚೆಲ್ಲ ಬಡಿದಪಹರಿಸಿದನು ಬಹುವಿಧ ಮಹಾಧನವ
ಮೆಲ್ಲ ಮೆಲ್ಲನೆ ಹೇಮಕೂಟದ
ಕಲ್ಲನಡರಿದನಾ ಮಹಾದ್ರಿಗ
ಳಲ್ಲಿ ಹಿಮಶೈಲದ ಮಹೋನ್ನತಿ ಬಹಳ ವಿಸ್ತಾರ (ಸಭಾ ಪರ್ವ, ೩ ಸಂಧಿ, ೩೩ ಪದ್ಯ)

ತಾತ್ಪರ್ಯ:
ಯಕ್ಷ ಕಿಂಪುರುಷರನ್ನು ಗೆದ್ದಮೇಲೆ ಅಲ್ಲೆ ಕೆಲವು ಕಡೆ ಪರ್ವತದಲ್ಲಿದ್ದ ಕಿರಾತರನ್ನು ಓಡಿಸಿ ಅಪಾರಧನವನ್ನು ಅಪಹರಿಸಿದನು. ಹೇಮಕೂಟ ಪರ್ವತವನ್ನು ನಿಧಾನವಾಗಿ ಹತ್ತಿದನು. ಅವೆಲ್ಲ ಪ್ರದೇಶಗಳೂ ಹಿಮಾಲಯದಷ್ಟೇ ಎತ್ತರ ಮತ್ತು ವಿಸ್ತಾರವಾಗಿದ್ದವು.

ಅರ್ಥ:
ಗಿರಿ: ಬೆಟ್ಟ; ಗುಹೆ: ಪೊಟರೆ, ಗವಿ; ನೆರೆದ: ವಾಸಿಸುತ್ತಿದ್ದ; ವರ್ಗ: ಗುಂಪು; ಅಪಹರಿಸು: ಕದಿಯುವುದು; ಬಹುವಿಧ: ಬಹಳ; ಧನ: ಹಣ; ಅದ್ರಿ: ಬೆಟ್ಟ, ಶೈಲ; ಮಹೋನ್ನತಿ: ಬಹಳ ಎತ್ತರ; ವಿಸ್ತಾರ: ಹರಹು, ವ್ಯಾಪ್ತಿ;

ಪದವಿಂಗಡಣೆ:
ಅಲ್ಲಿ +ಕೆಲಕಡೆಯಲ್ಲಿ +ಗಿರಿ+ಗುಹೆ
ಯಲ್ಲಿ +ನೆರೆದ +ಕಿರಾತ+ವರ್ಗವ
ಚೆಲ್ಲ +ಬಡಿದ್+ಅಪಹರಿಸಿದನು +ಬಹುವಿಧ +ಮಹಾಧನವ
ಮೆಲ್ಲ +ಮೆಲ್ಲನೆ +ಹೇಮಕೂಟದ
ಕಲ್ಲನ್+ಅಡರಿದನಾ+ ಮಹಾದ್ರಿಗಳ್
ಅಲ್ಲಿ +ಹಿಮಶೈಲದ+ ಮಹೋನ್ನತಿ+ ಬಹಳ+ ವಿಸ್ತಾರ

ಅಚ್ಚರಿ:
(೧) ಗಿರಿ, ಅದ್ರಿ, ಶೈಲ – ಸಮನಾರ್ಥಕ ಪದಗಳು
(೨) ಅಲ್ಲಿ – ೧, ೬ ಸಾಲಿನ ಮೊದಲ ಪದ