ಪದ್ಯ ೧೦: ಅರ್ಜುನನು ಕಂಡ ಕನಸಿನ ಮರ್ಮವೇನು?

ಕನಸನೀ ಹದನಾಗಿ ಕಂಡೆನು
ದನುಜಹರ ಬೆಸಸಿದರ ಫಲವನು
ನನಗೆನಲು ನಸುನಗುತ ನುಡಿದನು ದಾನವಧ್ವಂಸಿ
ನಿನಗೆ ಶೂಲಿಯ ಕರುಣವಾಯ್ತಿಂ
ದಿನಲಿ ಪಾಶುಪತಾಸ್ತ್ರ ನಿನ್ನದು
ದಿನದೊಳರಿ ಸೈಂಧವ ವಧವ್ಯಾಪಾರವಹುದೆಂದ (ದ್ರೋಣ ಪರ್ವ, ೯ ಸಂಧಿ, ೧೦ ಪದ್ಯ)

ತಾತ್ಪರ್ಯ:
ಅರ್ಜುನನು ಮಾತನಾಡುತ್ತಾ ತನ್ನ ಕನಸನ್ನು ಕೃಷ್ಣನಿಗೆ ವಿವರಿಸಿದನು. ಇದರ ಫಲವೇನೆಂದು ಕೃಷ್ಣನಲ್ಲಿ ಕೇಳಲು, ಶ್ರೀಕೃಷ್ಣನು ನಸುನಕ್ಕು, ನಿನಗೆ ಶಿವನ ಕರುಣೆ ದೊರಕಿತು. ಈ ದಿವಸ ಪಾಶುಪತಾಸ್ತ್ರವು ನಿನ್ನದು, ಇಂದು ಸೈಂಧವನ ವಧೆಯಾಗುತ್ತದೆ ಎಂದನು.

ಅರ್ಥ:
ಕನಸು: ಸ್ವಪ್ನ; ಹದ: ಸರಿಯಾದ ಸ್ಥಿತಿ; ಕಂಡು: ನೋಡು; ದನುಜ: ರಾಕ್ಷರ; ಹರ: ನಾಶ; ದನುಜಹರ: ಕೃಷ್ಣ; ಬೆಸ: ಕೆಲಸ, ಕಾರ್ಯ; ಫಲ: ಪ್ರಯೋಜನ; ನಸುನಗು: ಮಂದಸ್ಮಿತ; ನುಡಿ: ಮಾತು; ದಾನವ: ರಾಕ್ಷಸ; ಧ್ವಂಸಿ: ನಾಶ; ಶೂಲಿ: ಈಶ್ವರ; ಕರುಣ: ದಯೆ; ಅಸ್ತ್ರ: ಶಸ್ತ್ರ; ಅರಿ: ವೈರಿ; ವಧ: ಸಾಯಿಸು; ವ್ಯಾಪಾರ: ವ್ಯವಹಾರ;

ಪದವಿಂಗಡಣೆ:
ಕನಸನ್+ಈ+ ಹದನಾಗಿ +ಕಂಡೆನು
ದನುಜಹರ +ಬೆಸಸ್+ಇದರ +ಫಲವನು
ನನಗೆನಲು +ನಸುನಗುತ +ನುಡಿದನು +ದಾನವಧ್ವಂಸಿ
ನಿನಗೆ +ಶೂಲಿಯ +ಕರುಣವಾಯ್ತ್
ಇಂದಿನಲಿ +ಪಾಶುಪತಾಸ್ತ್ರ +ನಿನ್ನದು
ದಿನದೊಳ್+ಅರಿ +ಸೈಂಧವ +ವಧ+ವ್ಯಾಪಾರವಹುದೆಂದ

ಅಚ್ಚರಿ:
(೧) ದನುಜಹರ, ದಾನವಧ್ವಂಸಿ – ಕೃಷ್ಣನನ್ನು ಕರೆದ ಪರಿ
(೨) ನ ಕಾರದ ತ್ರಿವಳಿ ಪದ – ನನಗೆನಲು ನಸುನಗುತ ನುಡಿದನು

ಪದ್ಯ ೯: ದ್ರೋಣನು ಏನೆಂದು ಶಪಥ ಮಾಡಿದನು?

ನಾಳೆ ಫಲುಗುಣ ತಪ್ಪಿದರೆ ಭೂ
ಪಾಲಕನ ಕಟ್ಟುವೆನು ರಣದಲಿ
ಶೂಲಿಯಡ್ಡೈಸಿದರೆ ಹಿಡಿವೆನು ಚಿಂತೆ ಬೇಡಿದಕೆ
ಕೇಳು ಪದ್ಮವ್ಯೂಹದಲಿ ಹೊ
ಕ್ಕಾಳು ಮರಳಿದಡಸ್ತ್ರವಿದ್ಯಾ
ಭಾಳಲೋಚನನೆಂಬ ಬಿರುದನು ಬಿಟ್ಟೆ ನಾನೆಂದ (ದ್ರೋಣ ಪರ್ವ, ೪ ಸಂಧಿ, ೯ ಪದ್ಯ
)

ತಾತ್ಪರ್ಯ:
ನಾಳೆ ಅರ್ಜುನನು ತಡೆಯದಿದ್ದರೆ ಶಿವನೇ ಬಂದು ಎದುರಿಸಿದರೂ ಶತ್ರುರಾಜನನ್ನು ಸೆರೆ ಹಿಡಿಯುತ್ತೇನೆ. ನನ್ನ ಪ್ರತಿಜ್ಞೆಯನ್ನು ಕೇಳು, ಪದ್ಮವ್ಯೂಹವನ್ನು ರಚಿಸುತ್ತೇನೆ. ಅದನ್ನು ಹೊಕ್ಕ ವೀರನು ಬದುಕಿ ಹಿಂದಿರುಗಿದರೆ ಅಸ್ತ್ರವಿದ್ಯಾಭಾಳಲೋಚನ ಎಂಬ ಬಿರುದನ್ನು ತ್ಯಜಿಸುತ್ತೇನೆ ಎಂದು ದ್ರೋಣನು ಶಪಥ ಮಾಡಿದನು.

ಅರ್ಥ:
ನಾಳೆ: ಮುಂದಿನ ದೈನ; ಫಲುಗುಣ: ಅರ್ಜುನ; ತಪ್ಪಿದರೆ: ಸಿಕ್ಕದಿದ್ದರೆ; ಭೂಪಾಲಕ: ರಾಜ; ಕಟ್ಟು: ಬಂಧಿಸು; ರಣ: ಯುದ್ಧ; ಶೂಲಿ: ಶಿವ; ಅಡ್ಡೈಸು: ಎದುರು; ಹಿಡಿ: ಬಂಧಿಸು; ಚಿಂತೆ: ಯೋಚನೆ; ಬೇಡ: ತ್ಯಜಿಸು; ಕೇಳು: ಆಲಿಸು; ಹೊಕ್ಕು: ಸೇರು; ಆಳು: ಸೈನಿಕ; ಮರಳು: ಹಿಂದಿರುಗು; ಅಸ್ತ್ರ: ಶಸ್ತ್ರ; ಭಾಳಲೋಚನ: ಶಿವ; ಬಿರುದು: ಗೌರವ ಸೂಚಕ ಪದ; ಬಿಟ್ಟೆ: ತ್ಯಜಿಸು;

ಪದವಿಂಗಡಣೆ:
ನಾಳೆ +ಫಲುಗುಣ +ತಪ್ಪಿದರೆ+ ಭೂ
ಪಾಲಕನ +ಕಟ್ಟುವೆನು +ರಣದಲಿ
ಶೂಲಿ+ಅಡ್ಡೈಸಿದರೆ +ಹಿಡಿವೆನು +ಚಿಂತೆ +ಬೇಡಿದಕೆ
ಕೇಳು+ ಪದ್ಮವ್ಯೂಹದಲಿ +ಹೊಕ್ಕ್
ಆಳು +ಮರಳಿದಡ್+ಅಸ್ತ್ರವಿದ್ಯಾ
ಭಾಳಲೋಚನನೆಂಬ +ಬಿರುದನು +ಬಿಟ್ಟೆ +ನಾನೆಂದ

ಅಚ್ಚರಿ:
(೧) ದ್ರೋಣನ ಬಳಿಯಿದ್ದ ಬಿರುದು – ಅಸ್ತ್ರವಿದ್ಯಾಭಾಳಲೋಚನ
(೨) ಶೂಲಿ, ಭಾಳಲೋಚನ – ಸಮಾನಾರ್ಥಕ ಪದಗಳು

ಪದ್ಯ ೬೪: ಧರ್ಮಜನ ರಕ್ಷಣೆಗೆ ಯಾರು ಬಂದರು?

ಕಾಳಕೂಟದ ಬಹಳ ದಾಳಿಗೆ
ಶೂಲಿಯೊಡ್ಡೈಸುವವೊಲವನೀ
ಪಾಲಕನ ಹಿಂದಿಕ್ಕಿ ತಡೆದನು ಕಳಶಜನ ರಥವ
ಆಲಿಯಳುಕಿತು ತಿರುಹಿದಂಬಿನ
ಕೋಲ ಝಳಪಿಸಿ ಪೂತು ಮಝ ಮೇ
ಲಾಳು ಬಂದುದೆ ಅಕಟೆನುತ ಹಲುಮೊರೆದನಾ ದ್ರೋಣ (ದ್ರೋಣ ಪರ್ವ, ೧ ಸಂಧಿ, ೬೪ ಪದ್ಯ)

ತಾತ್ಪರ್ಯ:
ದ್ರೋಣನ ರಥವು ಕಾಳಕೂಟ ವಿಷದಂತೆ ಯುಧಿಷ್ಠಿರನನ್ನು ಹಿಡಿಯಲು ಮುಂದಾಗುತ್ತಿದ್ದರೆ, ಅರ್ಜುನನು ಶಿವನಂತೆ ಎದುರು ಬಂದು ನಿಂತನು. ಅಣ್ನನನ್ನು ಹಿಂದಿಟ್ಟು, ದ್ರೋಣನ ರಥವನ್ನು ತಡೆದನು. ಆಗ ಪ್ರಯೋಗಿಸಿದ ಬಾಣಗಲನ್ನು ನೋಡಿದವರ ಕಣ್ಣಾಲಿಗಳು ತಿರುಗಿದವು. ಆಗ ದ್ರೋಣನು ಬಾಣವನ್ನು ಝಳಪಿಸಿ ಹಲ್ಲುಕಡಿದು ಅಯ್ಯೋ ರಾಜನ ಸಹಾಯಕ್ಕೆ ವೀರರು ಬಂದರೇ ಎಂದು ಉದ್ಗರಿಸಿದನು.

ಅರ್ಥ:
ಕಾಳಕೂಟ: ಘೋರವಿಷ; ಬಹಳ: ತುಂಬ; ದಾಳಿ: ಆಕ್ರಮಣ; ಶೂಲಿ: ಶಿವ; ಒಡ್ಡು: ಅಡ್ಡ ಗಟ್ಟೆ; ಅವನೀಪಾಲಕ: ರಾಜ; ಹಿಂದಿಕ್ಕು: ಹಿಂದೆ ಸರಿಸು; ತಡೆ: ನಿಲ್ಲಿಸು; ಕಳಶಜ: ದ್ರೋಣ; ರಥ: ಬಂಡಿ; ಆಲಿ: ಕಣ್ಣುಗುಡ್ಡೆ; ಅಳುಕು: ನಡುಗು, ಹೆದರಿಕೆ; ತಿರುಹು: ತಿರುಗು; ಅಂಬು: ಬಾಣ; ಕೋಲ: ಬಾಣ; ಝಳಪಿಸು: ಪ್ರಕಾಶ; ಪೂತು: ಭಲೇ; ಮಝ: ಕೊಂಡಾಟದ ನುಡಿ; ಮೇಲಾಳು: ಪರಾಕ್ರಮಿ; ಬಂದು: ಆಗಮಿಸು; ಅಕಟ: ಅಯ್ಯೋ; ಹಲುಮೊರೆ: ಹಲ್ಲುಕಡೆ;

ಪದವಿಂಗಡಣೆ:
ಕಾಳಕೂಟದ +ಬಹಳ +ದಾಳಿಗೆ
ಶೂಲಿ+ಒಡ್ಡೈಸುವವೊಲ್+ಅವನೀ
ಪಾಲಕನ +ಹಿಂದಿಕ್ಕಿ +ತಡೆದನು+ ಕಳಶಜನ +ರಥವ
ಆಲಿ+ಅಳುಕಿತು +ತಿರುಹಿದ್+ಅಂಬಿನ
ಕೋಲ +ಝಳಪಿಸಿ +ಪೂತು +ಮಝ +ಮೇ
ಲಾಳು +ಬಂದುದೆ +ಅಕಟೆನುತ+ ಹಲುಮೊರೆದನಾ +ದ್ರೋಣ

ಅಚ್ಚರಿ:
(೧) ಉಪಮಾನದ ಪ್ರಯೋಗ – ಕಾಳಕೂಟದ ಬಹಳ ದಾಳಿಗೆಶೂಲಿಯೊಡ್ಡೈಸುವವೊಲ

ಪದ್ಯ ೬: ವಾಜಪೇಯಿಯನ್ನು ಯಾರು ಗೆದ್ದರು?

ಚಲನದಿಂದುದಯಿಸಿದ ಶೂದ್ರತೆ
ಗಲಸಿ ಸುರಗಂಗೆಯಲಿ ಮಿಂದು
ಚ್ಚಳಿಸಿ ರಜತಾದ್ರಿಯಲಿ ಶೂಲಿಯ ಪದಯುಗವ ಭಜಿಸಿ
ಬಳಿಕ ನಾಕವನೈದಿ ಸುಮನೋ
ಲಲನೆಯರ ಕುಂತಳಕೆ ಹಾಯ್ದುದು
ಬಲದ ಪದಹತಧೂಳಿ ಗೆಲಿದುದು ವಾಜಪೇಯಿಗಳ (ಭೀಷ್ಮ ಪರ್ವ, ೪ ಸಂಧಿ, ೬ ಪದ್ಯ)

ತಾತ್ಪರ್ಯ:
ಚಲನೆಯಿಂದುಂಟಾದ ಶೂದ್ರತ್ವ ಬೇಸರಗೊಂಡು ಅದನ್ನು ಕಳೆದುಕೊಳ್ಳಲು ಎದ್ದ ಧೂಳು ದೇವಗಂಗೆಯಲ್ಲಿ ಸ್ನಾನಮಾಡಿ, ಕೈಲಾಸದಲ್ಲಿ ಶಿವನ ಪಾದ ಕಮಲಗಳನ್ನು ಸೇವಿಸಿ, ಸ್ವರ್ಗಕ್ಕೆ ಹೋಗಿ ಅಪ್ಸರೆಯರ ಮುಂಗುರುಳನ್ನು ಹಿಡಿದಿತು, ವಾಜಪೇಯದಿಂದ ಸ್ವರ್ಗಕ್ಕೇರಿದ ವಾಜಪೇಯಿಗಳನ್ನು ಸೈನಿಕರ ಪದದ ಧೂಳು ಸೋಲಿಸಿತು.

ಅರ್ಥ:
ಚಲನ: ಅಲುಗಾಟ, ಸಂಚಾರ; ಉದಯಿಸು: ಹುಟ್ಟು; ಶೂದ್ರ: ಚತುರ್ವರ್ಣಗಳಲ್ಲಿ ನಾಲ್ಕನೆಯದು; ಸುರ: ದೇವ; ಮಿಂದು: ಮುಳುಗು; ಉಚ್ಚಳಿಸು: ಮೇಲಕ್ಕೆ ಹಾರು; ರಜತಾದ್ರಿ: ಬೆಳ್ಳಿಯ ಬೆಟ್ಟ (ಹಿಮಾಲಯ); ಶೂಲಿ: ಶಿವ; ಪದಯುಗ: ಪಾದಗಳು; ಭಜಿಸು: ಆರಾಧಿಸು; ಬಳಿಕ: ನಂತರ; ನಾಕ: ಸ್ವರ್ಗ; ಐದು: ಬಂದು ಸೇರು; ಸುಮನ: ಒಳ್ಳೆಯ ಮನಸ್ಸುಳ್ಳ; ಲಲನೆ: ಹೆಣ್ಣು; ಕುಂತಳ: ಮುಂಗುರುಳು; ಹಾಯ್ದು: ಮೇಲೆ ಬಿದ್ದು; ಬಲ: ಸೇನೆ; ಪದಹತ: ಪಾದದಿಂದ ತುಳಿಯಲ್ಪಟ್ಟ; ಧೂಳು: ಮಣ್ಣಿನ ಕಣ; ಗೆಲಿದು: ಜಯಿಸಿದ; ವಾಜಪೇಯ: ಒಂದು ವಿಧವಾದ ಯಜ್ಞ; ಅಲಸು: ಆಯಾಸಗೊಳ್ಳು ;

ಪದವಿಂಗಡಣೆ:
ಚಲನದಿಂದ್+ಉದಯಿಸಿದ +ಶೂದ್ರತೆಗ್
ಅಲಸಿ+ ಸುರಗಂಗೆಯಲಿ+ ಮಿಂದ್
ಉಚ್ಚಳಿಸಿ +ರಜತಾದ್ರಿಯಲಿ +ಶೂಲಿಯ +ಪದಯುಗವ +ಭಜಿಸಿ
ಬಳಿಕ +ನಾಕವನ್+ಐದಿ +ಸುಮನೋ
ಲಲನೆಯರ +ಕುಂತಳಕೆ+ ಹಾಯ್ದುದು
ಬಲದ +ಪದಹತಧೂಳಿ +ಗೆಲಿದುದು +ವಾಜಪೇಯಿಗಳ

ಅಚ್ಚರಿ:
(೧) ಧೂಳು ಮತ್ತು ವಾಜಪೇಯವನ್ನು ಹೋಲಿಸುವ ಪರಿ

ಪದ್ಯ ೨೩: ಮಾತಲಿಯು ಅರ್ಜುನನಿಗೆ ಯಾವುದನ್ನು ವಿವರಿಸಿದನು?

ಕೇಳು ನೀನೆಲೆ ಪಾರ್ಥ ತಾರಾ
ಮಾಲೆಗಳ ವಿವರವನು ರವಿರಥ
ಕಾಲಚಕ್ರವನೈದಿ ಗಗನಾಂಗಣದಿ ಚರಿಯಿಪುದ
ಲೀಲೆಯಿಂದಬುಜೋದರನು ಸಲೆ
ಪಾಲಿಸುವ ಲೋಕಗಳನೆಂದವ
ಶೂಲಿಯಂಘ್ರಿಯ ನೆನೆದು ಪೇಳಿದ ಭುವನಕೋಶವನು (ಅರಣ್ಯ ಪರ್ವ, ೮ ಸಂಧಿ, ೨೩ ಪದ್ಯ)

ತಾತ್ಪರ್ಯ:
ಎಲೈ ಅರ್ಜುನ, ನಕ್ಷತ್ರಗಳ ಮಾಲೆಗಳನ್ನೂ, ರವಿರಥವು ಆಕಾಶದಂಗಳದಲ್ಲಿ ಕಾಲಚಕ್ರವು ಚರಿಸುವುದನ್ನೂ, ವಿಷ್ಣುವು ಪಾಲಿಸುವ ಲೋಕಗಳನ್ನೂ ಕುರಿತು ಹೇಳುತ್ತೇನೆ ಎಂದು ಮಾತಲಿಯು ಶಿವನ ಪಾದವನ್ನು ನೆನೆದು ಭುವನ ಕೋಶದ ವಿವರವನ್ನು ಹೇಳಿದನು.

ಅರ್ಥ:
ಕೇಳು: ಆಲಿಸು; ತಾರ: ನಕ್ಷತ್ರ; ಮಾಲೆ: ಗುಂಪು, ಸರ; ವಿವರ: ವಿವರಣೆ; ರವಿ: ಸೂರ್ಯ; ರಥ: ಬಂಡಿ; ಕಾಲ: ಸಮಯ; ಚಕ್ರ: ಗಾಲಿ; ಗಗನ: ಆಗಸ; ಅಂಗಣ: ಅಂಗಳ; ಚರಿಯಿಪು: ಚಲಿಸುವ; ಲೀಲೆ: ಆನಂದ; ಅಬುಜೋದರ: ವಿಷ್ಣು; ಅಬುಜ: ತಾವರೆ; ಉದರ: ಹೊಟ್ಟೆ; ಸಲೆ: ವಿಸ್ತೀರ್ಣ; ಪಾಲಿಸು: ರಕ್ಷಿಸು; ಲೋಕ: ಜಗತ್ತು; ಶೂಲಿ: ಶಿವ; ಅಂಘ್ರಿ: ಪಾದ; ನೆನೆ: ಜ್ಞಾಪಿಸು; ಪೇಳು: ಹೇಳು; ಭುವನ: ಜಗತ್ತು; ಕೋಶ: ಭಂಡಾರ;

ಪದವಿಂಗಡಣೆ:
ಕೇಳು+ ನೀನೆಲೆ +ಪಾರ್ಥ +ತಾರಾ
ಮಾಲೆಗಳ +ವಿವರವನು +ರವಿ+ರಥ
ಕಾಲಚಕ್ರವನ್+ಐದಿ +ಗಗನಾಂಗಣದಿ+ ಚರಿಯಿಪುದ
ಲೀಲೆಯಿಂದ್+ಅಬುಜೋದರನು +ಸಲೆ
ಪಾಲಿಸುವ +ಲೋಕಗಳನ್+ಎಂದವ
ಶೂಲಿ+ಅಂಘ್ರಿಯ +ನೆನೆದು +ಪೇಳಿದ +ಭುವನ+ಕೋಶವನು

ಅಚ್ಚರಿ:
(೧) ವಿಷ್ಣುವನ್ನು ಅಬುಜೋದರ ಎಂದು ಕರೆದಿರುವುದು

ಪದ್ಯ ೨೭: ಧರ್ಮಜನು ಅರ್ಜುನನಿಗೆ ಯಾವ ಸಲಹೆ ನೀಡಿದನು?

ಅದರಿನಾವಂಗುಪಹತಿಯ ಮಾ
ಡದಿರು ಸಚರಾಚರದಚೈತ
ನ್ಯದಲಿ ನಿನ್ನನೆ ಬೆರಸಿ ಕಾಂಬುದು ನಿನ್ನ ತನುವೆಂದು
ಬೆದರದಿರು ಬಲುತಪಕೆ ಶೂಲಿಯ
ಪದಯುಗವ ಮರೆಯದಿರು ಹರಿಯನು
ಹೃದಯದಲಿ ಪಲ್ಲಟಿಸದಿರು ಸುಖಿಯಾಗು ಹೋಗೆಂದ (ಅರಣ್ಯ ಪರ್ವ, ೫ ಸಂಧಿ, ೨೭ ಪದ್ಯ)

ತಾತ್ಪರ್ಯ:
ಅರ್ಜುನ, ಹೀಗಿರುವುದರಿಂದ ನೀನು ಯಾರಿಗೂ ಕೇಡನ್ನು ಮಾಡಬೇಡ, ಚರಾಚರಗಳೆಲ್ಲರಲ್ಲೂ ಇರುವ ಚೈತನ್ಯವೇ ನೀನು, ಇದೆಲ್ಲವೂ ನಿನ್ನ ದೇಹವೇ ಎಂದು ಕಾಣು. ಉಗ್ರತಪಸ್ಸನ್ನು ಮಾಡಲು ಹೆದರಬೇಡ, ಶಿವನ ಪಾದಕಮಲಗಳನ್ನು ಮರೆಯಬೇಡ. ಹೃದಯದಲ್ಲಿ ಹರಿಯನ್ನು ಮರೆಯಬೇಡ, ನೀನು ಸುಖಿಯಾಗಿ ಹೋಗಿ ಬಾ ಎಂದು ಆಶೀರ್ವದಿಸಿ ಧರ್ಮಜನು ಅರ್ಜುನನನ್ನು ಕಳಿಸಿದನು.

ಅರ್ಥ:
ಅದರಿನ್: ಆದುದರಿಂದ; ಆವಂಗ್: ಯಾರಿಗೂ; ಅಪಹತಿ: ಕೇಡು; ಸಚರಾಚರ: ಚಲಿಸುವ ಹಾಗು ಚಲಿಸದಿರುವ; ಚೈತನ್ಯ: ಜೀವದ ಲಕ್ಷಣ, ಜೀವಂತಿಕೆ; ಬೆರಸು: ಸೇರಿಸು; ಕಾಂಬು: ನೋಡು; ತನು: ದೇಹ; ಬೆದರು: ಹೆದರು; ಬಲು: ಬಹಳ, ಕಠಿಣ, ದೊಡ್ಡ; ತಪ: ತಪಸ್ಸು; ಶೂಲಿ: ಶಿವ; ಪದಯುಗ: ಪಾದಕಮಲ; ಮರೆ: ನೆನಪಿನಿಂದ ದೂರ ಮಾಡು; ಹರಿ: ವಿಷ್ಣು, ಕೃಷ್ಣ; ಹೃದಯ: ಎದೆ; ಪಲ್ಲಟ: ಅವ್ಯವಸ್ಥೆ, ತಲೆಕೆಳಗು; ಸುಖಿ: ಸಂತಸ, ಕ್ಷೇಮ; ಹೋಗು: ತೆರಳು;

ಪದವಿಂಗಡಣೆ:
ಅದರಿನ್+ಆವಂಗ್+ಉಪಹತಿಯ +ಮಾ
ಡದಿರು +ಸಚರಾಚರದ+ಚೈತ
ನ್ಯದಲಿ +ನಿನ್ನನೆ +ಬೆರಸಿ +ಕಾಂಬುದು +ನಿನ್ನ +ತನುವೆಂದು
ಬೆದರದಿರು +ಬಲು+ತಪಕೆ+ ಶೂಲಿಯ
ಪದಯುಗವ +ಮರೆಯದಿರು +ಹರಿಯನು
ಹೃದಯದಲಿ +ಪಲ್ಲಟಿಸದಿರು +ಸುಖಿಯಾಗು +ಹೋಗೆಂದ

ಅಚ್ಚರಿ:
(೧) ಎಲ್ಲರಲ್ಲೂ ನಿನ್ನನ್ನೆ ಕಾಣು ಎಂಬುವ ಸಂದೇಶ – ಸಚರಾಚರದಚೈತ
ನ್ಯದಲಿ ನಿನ್ನನೆ ಬೆರಸಿ ಕಾಂಬುದು ನಿನ್ನ ತನುವೆಂದು

ಪದ್ಯ ೩೪: ತ್ರಿಪುರಗಳನ್ನು ದಹಿಸಲು ಯಾರನ್ನು ಬೇಡಿಕೊಂಡರು?

ಹರಿ ಸರೋಜಾಸನರು ಶೂಲಿಯ
ಹೊರೆಗೆ ಬಂದರು ದೇವ ದೈತ್ಯರ
ಪುರವಧರ್ಮದ ಪೇಟೆಯಾದುದು ನಯನಪಾವಕನ
ಕರೆದು ಬೆಸಸುವಡಿದು ಸಮಯವೀ
ಸುರರ ಸಲಹುವ ಚಿತ್ತವುಳ್ಳರೆ
ಕರುಣಿ ಬಿಜಯಂಗೈವುದೆಂದರು ಪಾರ್ವತೀಪತಿಗೆ (ಕರ್ಣ ಪರ್ವ, ೭ ಸಂಧಿ, ೩೪ ಪದ್ಯ)

ತಾತ್ಪರ್ಯ:
ಬ್ರಹ್ಮ, ವಿಷ್ಣು ಶಿವನ ಬಳಿಗೆ ಬಂದು, “ದೇವ ರಾಕ್ಷಸರ ನಗರಗಳು ಅಧರ್ಮದ ಪೇಟೆಗಳಾವಿಗೆ. ನಿಮ್ಮ ಹಣೆಗಣ್ಣಿನಲ್ಲಿರುವ ಅಗ್ನಿಯನ್ನು ಕರೆದು ತ್ರಿಪುರಗಳನ್ನು ದಹಿಸು ಎಂದು ಹೇಳಲು ಇದೇ ಸರಿಯಾದ ಸಮಯ ದೇವತೆಗಳನ್ನು ಕಾಪಾಡುವ ಮನಸ್ಸಿದ್ದರೆ ನೀವು ಬರಬೇಕು ಎಂದು ಬೇಡಿಕೊಂಡರು.

ಅರ್ಥ:
ಹರಿ: ವಿಷ್ಣು; ಸರೋಜಾಸನ: ಬ್ರಹ್ಮ; ಶೂಲಿ: ಶಿವ; ಹೊರೆ: ರಕ್ಷಣೆ, ಆಶ್ರಯ; ಬಂದರು: ಆಗಮಿಸು; ದೇವ: ಭಗವಂತ; ದೈತ್ಯ: ದಾನವ; ಪುರ: ಊರು; ಅಧರ್ಮ: ನ್ಯಾಯವಲ್ಲದುದು; ಪೇಟೆ: ಊರು; ನಯನ: ಕಣ್ಣು; ಪಾವಕ: ಅಗ್ನಿ; ಕರೆ: ಬರೆಮಾಡು; ಬೆಸುಸು: ಹೇಳು, ಆಜ್ಞಾಪಿಸು; ಸಮಯ: ಕಾಲ; ಸುರ: ದೇವತೆ; ಸಲಹು: ಕಾಪಾಡು; ಚಿತ್ತ: ಮನಸ್ಸು; ಕರುಣಿ:ದಯೆ; ಬಿಜಯಂಗೈ: ದಯಮಾಡಿಸು; ಪತಿ: ಗಂಡ;

ಪದವಿಂಗಡಣೆ:
ಹರಿ +ಸರೋಜಾಸನರು +ಶೂಲಿಯ
ಹೊರೆಗೆ +ಬಂದರು +ದೇವ +ದೈತ್ಯರ
ಪುರವ್+ಅಧರ್ಮದ +ಪೇಟೆಯಾದುದು+ ನಯನ+ಪಾವಕನ
ಕರೆದು +ಬೆಸಸುವಡಿದು +ಸಮಯವೀ
ಸುರರ +ಸಲಹುವ +ಚಿತ್ತವುಳ್ಳರೆ
ಕರುಣಿ +ಬಿಜಯಂಗೈವುದ್ +ಎಂದರು +ಪಾರ್ವತೀಪತಿಗೆ

ಅಚ್ಚರಿ:
(೧) ಬ್ರಹ್ಮ ಶಿವನನ್ನು ಸರೋಜಾಸನ ಮತ್ತು ಶೂಲಿ ಎಂದು ಕರೆದಿರುವುದು
(೨) ಶಿವನನ್ನು ಶೂಲಿ, ಪಾರ್ವತೀಪತಿ ಎಂದು ಕರೆದಿರುವುದು