ಪದ್ಯ ೧೯: ದ್ರೋಣರ ಎದುರಿನಲ್ಲಿ ಏನನ್ನು ಸೇರಿಸಲಾಯಿತು?

ಎಣಿಸಲರಿಯೆನು ಬಂಡಿಗಳು ಸಂ
ದಣಿಸಿದವು ಹಕ್ಕರಿಕೆಗಳ ಹ
ಲ್ಲಣದ ಕವಚದ ಸೀಸಕದ ಜೋಡುಗಳ ರೆಂಚೆಗಳ
ಮಣಿಮಯದ ಮೋಹಳದ ಹಿರಿಯು
ಬ್ಬಣದ ಸಬಲದ ಶೂಲ ಸುರಗಿಯ
ಕಣೆಯ ಹೊರೆ ಚಾಚಿದವು ಕಟಕಾಚಾರ್ಯನಿದಿರಿನಲಿ (ದ್ರೋಣ ಪರ್ವ, ೧೫ ಸಂಧಿ, ೧೯ ಪದ್ಯ)

ತಾತ್ಪರ್ಯ:
ಎಷ್ಟು ಬಂಡಿಗಳು ಸೇರಿದವು, ಹಕ್ಕರಿಕೆ, ಹಲ್ಲಣ, ಕವಚ, ಶಿರಸ್ತ್ರಾನ, ಜೋಡುಗಳು, ಆನೆಯ ರಕ್ಷಾಕವಚಗಳು, ಹಿಡಿಕೆಯಿರುವ ಲಾಳವಿಂಡಿಗೆಗಳು, ಸಬಳ, ಶೂಲ, ಸುರಗಿ, ಬಾಣಗಳನ್ನು ಹೊರೆಕಟ್ಟಿ ಬಂಡಿಗಳಲ್ಲಿಟ್ಟರು ಎಂಬ ಎಣಿಕೆಯೇ ಸಿಗಲಿಲ್ಲ, ಇವೆಲ್ಲವೂ ದ್ರೋಣರ ಎದುರಿನಲ್ಲಿ ಸೇರಿಸಲಾಯಿತು.

ಅರ್ಥ:
ಎಣಿಸು: ಲೆಕ್ಕ ಹಾಕು; ಅರಿ: ತಿಳಿ; ಬಂಡಿ: ರಥ; ಸಂದಣಿಸು: ಗುಂಪುಗೂಡು; ಹಕ್ಕರಿಕೆ: ದಂಶನ, ಆನೆ ಕುದುರೆಗಳ ಪಕ್ಕವನ್ನು ರಕ್ಷಿಸುವ ಸಾಧನ; ಹಲ್ಲಣ: ಪಲ್ಲಣ, ಜೀನು, ತಡಿ; ಕವಚ: ಉಕ್ಕಿನ ಅಂಗಿ; ಸೀಸಕ: ಶಿರಸ್ತ್ರಾಣ; ಜೋಡು: ಜೊತೆ; ರೆಂಚೆ: ಆನೆ, ಕುದುರೆಗಳ ಪಕ್ಕರಕ್ಕೆ; ಮಣಿ: ಬೆಲೆಬಾಳುವ ರತ್ನ; ಮೋಹಳ: ಆಕರ್ಷಕ; ಹಿರಿ: ದೊಡ್ಡ; ಉಬ್ಬಣ: ಚೂಪಾದ ಆಯುಧ; ಸಬಳ: ಈಟಿ; ಶೂಲ: ಚೂಪಾದ ತುದಿಯುಳ್ಳ ಒಂದು ಬಗೆಯ ಆಯುಧ, ತ್ರಿಶೂಲ; ಸುರಗಿ: ಸಣ್ಣ ಕತ್ತಿ, ಚೂರಿ; ಕಣೆ: ಬಾಣ; ಹೊರೆ: ಭಾರ; ಚಾಚು: ಹರಡು; ಕಟಕ: ಸೈನ್ಯ ; ಆಚಾರ್ಯ: ಗುರು; ಇದಿರು: ಎದುರು;

ಪದವಿಂಗಡಣೆ:
ಎಣಿಸಲ್+ಅರಿಯೆನು +ಬಂಡಿಗಳು +ಸಂ
ದಣಿಸಿದವು +ಹಕ್ಕರಿಕೆಗಳ+ ಹ
ಲ್ಲಣದ +ಕವಚದ +ಸೀಸಕದ +ಜೋಡುಗಳ +ರೆಂಚೆಗಳ
ಮಣಿಮಯದ +ಮೋಹಳದ +ಹಿರಿಯು
ಬ್ಬಣದ+ ಸಬಳದ +ಶೂಲ +ಸುರಗಿಯ
ಕಣೆಯ +ಹೊರೆ +ಚಾಚಿದವು +ಕಟಕಾಚಾರ್ಯನ್+ಇದಿರಿನಲಿ

ಅಚ್ಚರಿ:
(೧) ಯುದ್ಧದ ಸಾಮಗ್ರಿಗಳನ್ನು ವಿವರಿಸುವ ಪದಗಳು – ಬಂಡಿ, ಹಕ್ಕರಿಕೆ, ಕವಚ, ಸೀಸಕ, ಸಬಳ, ಶೂಲ, ಸುರಗಿ

ಪದ್ಯ ೪೪: ಕರ್ಣನೇಕೆ ಮೌನದಿಂದ ಹಿಮ್ಮೆಟ್ಟಿದನು?

ಧನುವನಿಕ್ಕಡಿಗಳೆದು ರಿಪು ಸೂ
ತನ ಶಿರವ ಹರಿಯೆಸಲು ಸಾರಥಿ
ತನವ ತಾನೇ ಮಾಡುತಿದಿರಾದನು ಕೃಪಾಣದಲಿ
ಕನಲಿ ಖಡ್ಗವ ಮುರಿಯೆಸಲು ಮು
ಮ್ಮೊನೆಯ ಶೂಲದಲಿಟ್ಟನಂತದ
ನನಿಲಸುತ ಖಂಡಿಸಲು ಮುರಿದನು ಮೋನದಲಿ ಕರ್ಣ (ದ್ರೋಣ ಪರ್ವ, ೧೩ ಸಂಧಿ, ೪೪ ಪದ್ಯ)

ತಾತ್ಪರ್ಯ:
ಭೀಮನು ಕರ್ನನ ಧನುಸ್ಸನ್ನು ಎರಡು ತುಂಡಾಗಿ ಮುರಿದು, ಸಾರಥಿಯ ತಲೆ ಹಾರಿ ಹೋಗುವಂತೆ ಹೊಡೆಯಲು, ತಾನೇ ಸಾರಥಿತನವನ್ನು ಮಾಡುತ್ತಾ ಕರ್ಣನು ಕತ್ತಿಯನ್ನು ಹಿಡಿದು ಬರಲು, ಭೀಮನು ಅದನ್ನು ತುಂಡರಿಸಿದನು. ತ್ರಿಶೂಲವನ್ನು ಕರ್ಣನು ಪ್ರಯೋಗಿಸಲು, ಭೀಮನು ಅದನ್ನು ತುಂಡುಮಾಡಿದನು. ಕರ್ಣನು ಮೌನದಿಂದ ಹಿಮ್ಮೆಟ್ಟಿದನು.

ಅರ್ಥ:
ಧನು: ಬಿಲ್ಲು; ಇಕ್ಕಡಿ: ಎರಡೂ ಬದಿ; ರಿಪು: ವೈರಿ; ಸೂತ: ಸಾರಥಿ; ಶಿರ: ತಲೆ; ಹರಿ: ಸೀಳು; ಸಾರಥಿ: ಸೂತ; ಇದಿರು: ಎದುರು; ಕೃಪಾಣ: ಕತ್ತಿ, ಖಡ್ಗ; ಕನಲು: ಬೆಂಕಿ, ಉರಿ; ಖಡ್ಗ: ಕತ್ತಿ; ಮುರಿ: ಸೀಳು; ಎಸು: ಬಾಣ ಪ್ರಯೋಗ ಮಾಡು; ಮುಮ್ಮೊನೆ: ಮೂರು ಚೂಪಾದ ತುದಿಯುಳ್ಳ; ಶೂಲ: ತ್ರಿಶೂಲ; ಅನಿಲಸುತ: ಭೀಮ, ವಾಯುಪುತ್ರ; ಖಂಡಿಸು: ಕಡಿ, ಕತ್ತರಿಸು; ಮುರಿ: ಸೀಳು; ಮೋನ: ಮೌನ;

ಪದವಿಂಗಡಣೆ:
ಧನುವನ್+ಇಕ್ಕಡಿಗಳೆದು +ರಿಪು +ಸೂ
ತನ +ಶಿರವ +ಹರಿ+ಎಸಲು +ಸಾರಥಿ
ತನವ+ ತಾನೇ +ಮಾಡುತ್+ಇದಿರಾದನು +ಕೃಪಾಣದಲಿ
ಕನಲಿ +ಖಡ್ಗವ +ಮುರಿ+ಎಸಲು +ಮು
ಮ್ಮೊನೆಯ +ಶೂಲದಲಿಟ್ಟ್+ಅನಂತದನ್
ಅನಿಲಸುತ +ಖಂಡಿಸಲು +ಮುರಿದನು +ಮೋನದಲಿ +ಕರ್ಣ

ಅಚ್ಚರಿ:
(೧) ತಾನೇ ರಥವನ್ನೋಡಿಸಿದ ಎಂದು ಹೇಳುವ ಪರಿ – ಸಾರಥಿ ತನವ ತಾನೇ ಮಾಡುತಿದಿರಾದನು ಕೃಪಾಣದಲಿ

ಪದ್ಯ ೭: ಚತುರಂಗ ಸೇನೆಯು ಯಾರನ್ನು ಉರುಳಿಸಿದರು?

ಉರಿಯ ಚೂಣಿಯಲುಸುರು ಮೂಗಿನ
ಲುರವಣಿಸುತಿದೆ ಧರಣಿಪತಿ ಸು
ಸ್ಥಿರನು ಹೊಯ್ ಹೊಯ್ ಹೊಳಲ ಬೆದರಿಸಿ ಸುಲಿವ ಬಣಗುಗಳ
ಹರಿಯೆನಲು ಹೊರವಂಟು ಹೊಯ್ದರು
ತುರಗ ಗಜಘಟೆ ಬೀದಿವರಿದವು
ನೆರವಿದೊಳಸಿನ ಮನ್ನೆಯರ ಸೆಣಸಿದರು ಶೂಲದಲಿ (ದ್ರೋಣ ಪರ್ವ, ೭ ಸಂಧಿ, ೭ ಪದ್ಯ)

ತಾತ್ಪರ್ಯ:
ಬಿಸಿಯುಸಿರು ಮೂಗಿನಲ್ಲಿ ಉರಿಯಂತೆ ಹೊರಬರುತ್ತಿದೆ. ದೊರೆ ಸ್ಥಿರವಾಗಿದ್ಧಾನೆ, ಬೀಡನ್ನು ಬೆದರಿಸಿ ದೋಚುತ್ತಿರುವವರನ್ನು ಬಡಿದು ಹಾಕಿ ಎಂದು ಮಂತ್ರಿಗಲು ಆಜ್ಞೆ ಮಾಡಲು ಚತುರಂಗ ಸೇನೆಯು ಹೊರಟು ಗೊಂದಲ ಮಾಡುತ್ತಿದ್ದವರನ್ನು ಶೂಲದಿಂದ ತಿವಿದು ಉರುಳಿಸಿದರು.

ಅರ್ಥ:
ಉರಿ: ಬೆಂಕಿ; ಚೂಣಿ: ಮುಂದಿನ ಸಾಲು, ಮುಂಭಾಗ; ಉಸುರು: ಪ್ರಾಣ, ಹೇಳು; ಮೂಗು: ನಾಸಿಕ; ಉರವಣಿಸು: ಆತುರಿಸು; ಧರಣಿಪತಿ: ರಾಜ; ಸ್ಥಿರ: ಶಾಶ್ವತವಾದ; ಹೊಯ್: ಹೊಡೆ; ಹೊಳಲು: ಪ್ರಕಾಶ, ನಗರ; ಬೆದರಿಸು: ಹೆದರಿಸು; ಸುಲಿ: ಬಿಡಿಸು, ತೆಗೆ; ಬಣಗು: ಕೀಳು, ಅಲ್ಪ; ಹರಿ: ಸೀಳು; ಹೊರವಂಟು: ತೆರಳು; ಹೊಯ್ದು: ಹೊಡೆ; ತುರಗ: ಅಶ್ವ; ಗಜಘಟೆ: ಆನೆಗಳ ಗುಂಪು; ಬೀದಿ: ಮಾರ್ಗ; ನೆರವಿ: ಗುಂಪು; ಅಸಿ: ಕತ್ತಿ, ಖಡ್ಗ; ಮನ್ನೆಯ: ಮೆಚ್ಚಿನ; ಸೆಣಸು: ಹೋರಾಡು; ಶೂಲ: ಈಟಿ, ಶಿವನ ತ್ರಿಶೂಲ;

ಪದವಿಂಗಡಣೆ:
ಉರಿಯ +ಚೂಣಿಯಲ್+ಉಸುರು +ಮೂಗಿನಲ್
ಉರವಣಿಸುತಿದೆ +ಧರಣಿಪತಿ +ಸು
ಸ್ಥಿರನು +ಹೊಯ್ +ಹೊಯ್ +ಹೊಳಲ +ಬೆದರಿಸಿ +ಸುಲಿವ +ಬಣಗುಗಳ
ಹರಿಯೆನಲು +ಹೊರವಂಟು +ಹೊಯ್ದರು
ತುರಗ+ ಗಜಘಟೆ +ಬೀದಿವರಿದವು
ನೆರವಿದೊಳ್+ಅಸಿನ +ಮನ್ನೆಯರ +ಸೆಣಸಿದರು +ಶೂಲದಲಿ

ಅಚ್ಚರಿ:
(೧) ಹ ಕಾರದ ತ್ರಿವಳಿ ಪದ – ಹರಿಯೆನಲು ಹೊರವಂಟು ಹೊಯ್ದರು

ಪದ್ಯ ೯: ಕರ್ಣನ ಮೇಲೆ ಆಕ್ರಮಣವು ಹೇಗಿತ್ತು?

ಬೀಳುವಂಬಿನ ಹೊಯ್ವ ಖಡ್ಗದ
ತೂಳುವಾನೆಯ ನೂಕಿ ತಾಗುವ
ಶೂಲಿಗೆಯ ತುಂಡಿಸುವ ವಂಕಿಯ ನೆಡುವ ಬಲ್ಲೆಹದ
ಸೀಳುವಿಟ್ಟಿಯ ಮುರಿವ ಪರಿಘದ
ಪಾಳಿಸುವ ಪರಶುವಿನ ಧಾಳಾ
ಧೂಳಿ ಮಸಗಿತು ಮತ್ತೆ ಕರ್ಣನ ರಥದ ಬಳಸಿನಲಿ (ಕರ್ಣ ಪರ್ವ, ೧೧ ಸಂಧಿ, ೯ ಪದ್ಯ)

ತಾತ್ಪರ್ಯ:
ಎಲ್ಲಾ ಕಡೆಯಿಂದ ಶೂರರು ಕರ್ಣನನ್ನು ಮುತ್ತಲು, ಕರ್ಣನ ರಥದ ಮೇಲೆ ಬಾಣಗಳ ಸುರಿಮಳೆಗೆರೆಯುತಿತ್ತು, ಖಡ್ಗಗಳು ಬೀಸುತ್ತಿದ್ದವು, ಆನೆಗಳು ನುಗ್ಗಿದವು, ಶೂಲಗಳು ಇರಿದವು, ಭಲ್ಲೆಹಗಳು ನುಗ್ಗಿದವು, ಈಟಿಗಳು ಸೀಳಲು ಮುಂದಾದವು, ಪರಿಘಗಳು ಮುರಿಯಲು ಸಿದ್ಧವಾದವು, ಗಂಡು ಗೊಡಲಿಗಳು ಕಡಿಯಲು ಬಂದವು, ಸೈನ್ಯದ ಧಾಳಿಯಧೂಳಿ ಕರ್ಣನ ರಥವನ್ನು ಮುತ್ತಿತು.

ಅರ್ಥ:
ಬೀಳು: ಜಾರು, ಕುಸಿ, ಮಣಿ; ಅಂಬು: ಬಾಣ; ಹೊಯ್ವ: ಹೊಡೆ; ಖಡ್ಗ: ಕತ್ತಿ, ಕರವಾಳ; ತೂಳು: ಆವೇಶ, ಉನ್ಮಾದ; ಆನೆ: ಕರಿ, ಗಜ; ನೂಕು: ತಳ್ಳು; ತಾಗು: ಮುಟ್ಟು; ಶೂಲ: ಈಟಿ, ಶಿವನ ತ್ರಿಶೂಲ; ತುಂಡಿಸು: ಕತ್ತರಿಸು; ವಂಕಿ: ಕೊಕ್ಕೆ, ಕೊಂಡಿ, ತೋಳು ಬಂಧಿ; ನೆಡು: ಹೂಳು, ನಿಲ್ಲಿಸು; ಬಲ್ಲೆ:ಈಟಿ; ಸೀಳು: ಕತ್ತರಿಸು; ಮುರಿ: ಸೀಳು; ಪರಿಘ: ಗದೆ; ಪಾಳಿ: ಸಾಲು; ಪರಶು: ಕುಠಾರ; ಧಾಳಧೂಳಿ: ವಿಪ್ಲವ, ಚೆಲ್ಲಾಪಿಲ್ಲಿ; ಮಸಗು: ಹರಡು; ಕೆರಳು; ರಥ: ಬಂಡಿ; ಬಳಸು: ಆವರಿಸು;

ಪದವಿಂಗಡಣೆ:
ಬೀಳುವ್+ಅಂಬಿನ +ಹೊಯ್ವ +ಖಡ್ಗದ
ತೂಳುವ್+ಆನೆಯ +ನೂಕಿ +ತಾಗುವ
ಶೂಲಿಗೆಯ +ತುಂಡಿಸುವ +ವಂಕಿಯ +ನೆಡುವ +ಬಲ್ಲೆಹದ
ಸೀಳುವ್+ಇಟ್ಟಿಯ +ಮುರಿವ +ಪರಿಘದ
ಪಾಳಿಸುವ +ಪರಶುವಿನ +ಧಾಳಾ
ಧೂಳಿ +ಮಸಗಿತು+ ಮತ್ತೆ +ಕರ್ಣನ +ರಥದ +ಬಳಸಿನಲಿ

ಅಚ್ಚರಿ:
(೧) ಅಂಬು, ಖಡ್ಗ, ಶೂಲ, ವಂಕಿ, ಈಟಿ, ಪರಿಘ, ಪರಶು – ಆಯುಧಗಳ ಪರಿಚಯ

ಪದ್ಯ ೧೪: ದುರ್ಯೋಧನನ ಕಿವಿಗೆ ಪಾಂಡವರ ಮಾತು ಹೇಗಿರುತ್ತದೆ?

ಬೆರಳ ಮೀಸೆಯೊಳಿಡುತೆ ಕಿರುನಗೆ
ವೆರಸಿ ಕರ್ಣಾದಿಗಳ ವದನವ
ತಿರುಗಿ ನೋಡುತೆ ಹರಿಯ ನುಡಿಗಳ ಕಿವುಡುಗೇಳುತ್ತೆ
ಮರುಳುತನದಾಳಾಪವೇತಕೆ
ಮುರಮಥನ ಪಾಂಡವರ ಕಥನವ
ನೊರೆಯದಿರು ಕರ್ಣಕ್ಕೆ ಶೂಲವಿದೆಂದನಾ ಭೂಪ (ಉದ್ಯೋಗ ಪರ್ವ, ೯ ಸಂಧಿ, ೧೪ ಪದ್ಯ)

ತಾತ್ಪರ್ಯ:
ದುರ್ಯೋಧನನು ತನ್ನ ಬೆರಳಿನಿಂದ ಮೀಸೆಯನ್ನು ತಿರುವಿ, ಕರ್ಣಾದಿಗಳ ಮುಖವನ್ನು ಕಿರುನಗೆಯಿಂದ ನೋಡಿದನು. ಶ್ರೀಕೃಷ್ಣನ ಮಾತುಗಳು ಅವನ ಕಿವಿಗೆ ಹೋಗಲೇ ಇಲ್ಲ. ಅವನು ಕೃಷ್ಣನಿಗೆ, ಈ ನಿನ್ನ ಹುಚ್ಚು ಮಾತುಗಳನ್ನೇಕೆ ಆಡುತ್ತಿರುವೆ, ಪಾಂದವರ ಕಥೆ ನನಗೆ ಬೇಕಿಲ್ಲ. ಅವರ ಮಾತು ಕಿವಿಗೆ ಶೂಲದಂತೆ ವ್ಯಥೆಯನ್ನುಂಟು ಮಾದುತ್ತದೆ ಎಂದನು.

ಅರ್ಥ:
ಬೆರಳು: ಅಂಗುಲಿ; ಮೀಸೆ: ಗಂಡಸರಿಗೆ ಮೂಗಿನ ಕೆಳಭಾಗದಲ್ಲಿ ತೋರುವ ಕೂದಲು; ಇಡು: ಮುಟ್ಟು; ಕಿರುನಗೆ: ಮುಗುಳ್ನಗೆ; ನಗೆ: ಸಂತೋಷ; ಆದಿ: ಮುಂತಾದ; ವದನ: ಮುಖ; ತಿರುಗು: ಸುತ್ತು; ನೋಡು: ವೀಕ್ಷಿಸು; ಹರಿ: ಕೃಷ್ಣ; ನುಡಿ: ಮಾತು; ಕಿವುಡು: ಕೇಳಿಸದಿರುವ ಸ್ಥಿತಿ; ಕೇಳು: ಆಲಿಸು; ಮರುಳು: ಬುದ್ಧಿಭ್ರಮೆ, ಹುಚ್ಚು; ಆಲಾಪ: ವಿಸ್ತಾರ; ಮುರಮಥ: ಕೃಷ್ಣ; ಕಥನ: ಹೇಳುವುದು, ಹೊಗಳುವುದು; ನೊರೆ: ಎಳೆಯದು; ಶೂಲ: ತ್ರಿಶೂಲ; ಕರ್ಣ: ಕಿವಿ;

ಪದವಿಂಗಡಣೆ:
ಬೆರಳ+ ಮೀಸೆಯೊಳಿಡುತೆ+ ಕಿರುನಗೆ
ವೆರಸಿ +ಕರ್ಣಾದಿಗಳ +ವದನವ
ತಿರುಗಿ+ ನೋಡುತೆ +ಹರಿಯ +ನುಡಿಗಳ+ ಕಿವುಡು+ಕೇಳುತ್ತೆ
ಮರುಳುತನದ್+ಆಳಾಪವ್+ಏತಕೆ
ಮುರಮಥನ+ ಪಾಂಡವರ+ ಕಥನವ
ನೊರೆಯದಿರು +ಕರ್ಣಕ್ಕೆ +ಶೂಲವಿದೆಂದನಾ +ಭೂಪ

ಅಚ್ಚರಿ:
(೧) ಉಪಮಾನದ ಪರ್ಯೋಗ – ಕರ್ಣಕ್ಕೆ ಶೂಲವಿದೆಂದನಾ ಭೂಪ
(೨) ದುರ್ಯೋಧನನ ಭಂಗಿಯ ವಿವರಣೆ – ಬೆರಳ ಮೀಸೆಯೊಳಿಡುತೆ ಕಿರುನಗೆ
ವೆರಸಿ ಕರ್ಣಾದಿಗಳ ವದನವ ತಿರುಗಿ ನೋಡುತೆ ಹರಿಯ ನುಡಿಗಳ ಕಿವುಡುಗೇಳುತ್ತೆ
(೩) ನುಡಿಯು ಕೇಳಿಸದಿರುವ ಬಗೆ – ಹರಿಯ ನುಡಿಗಳ ಕಿವುಡುಗೇಳುತ್ತೆ