ಪದ್ಯ ೪೫: ಕೌರವನಾಯಕರ ನಡತೆಗೆ ಅರ್ಜುನನು ಏನೆಂದು ಯೋಚಿಸಿದನು?

ಹರಿಬದಾಹವವೆಂಬರಾವೆಡೆ
ಹರೆದರೇ ರಣಗೇಡಿಗಳು ನುಡಿ
ಯುರಿಯ ಹೊರುವುದು ಘಾಯವತಿಶೀತಳ ಮಹಾದೇವ
ಅರಮನೆಯ ಕಾಲಾಳು ಕರಿ ರಥ
ತುರಗವಳಿದರೆ ತಮಗೆ ನಷ್ಟಿಯೆ
ಗರುವನೈ ಗುರುತನುಜನೆನುತೈದಿದನು ಕಲಿ ಪಾರ್ಥ (ಭೀಷ್ಮ ಪರ್ವ, ೮ ಸಂಧಿ, ೪೫ ಪದ್ಯ)

ತಾತ್ಪರ್ಯ:
ಸೇಡನ್ನು ತೀರಿಸಿಕೊಳ್ಳುವ ಯುದ್ಧವೆಂದು ಬಂದವರು ಹಿಂದಕ್ಕೆ ಸರಿದು ಬಿಟ್ಟರೇ! ಈ ಯುದ್ದಗೇಡಿಗಳ ಮಾತು ಉರಿಯನ್ನುಗುಳುತ್ತದೆ. ಅವರ ಹೊಡೆತ ತಣ್ಣಗಿರುತ್ತದೆ, ಸೈನ್ಯ ಚತುರಂಗ ಸತ್ತರೆ ತನಗೇನು ನಷ್ಟವೆಂದು ಅಶ್ವತ್ಥಾಮನು ಸುಮ್ಮನಾದನೇ ಎಂದು ಅರ್ಜುನನು ಮುಂದುವರೆದನು.

ಅರ್ಥ:
ಹರಿಬ: ಕೆಲಸ, ಕಾರ್ಯ; ಆಹವ: ಯುದ್ಧ; ಹರಿ: ಸರಿ, ನಿವಾರಿಸು; ರಣ: ರಣರಂಗ; ಹೇಡಿ: ಹೆದರುಪುಕ್ಕ, ಅಂಜು; ನುಡಿ: ಮಾತು; ಉರಿ: ಜ್ವಾಲೆ; ಘಾಯ: ಪೆಟ್ಟು; ಶೀತಳ: ತಣ್ಣಗಿರುವ; ಅರಮನೆ: ರಾಜರ ಆಲಯ; ಕಾಲಾಳು: ಸೈನಿಕ; ಕರಿ: ಆನೆ; ರಥ: ಬಂಡಿ; ತುರಗ: ಅಶ್ವ; ಅಳಿ: ನಾಶ; ನಷ್ಟ: ಹಾನಿ, ಕೆಡುಕು; ಗರುವ: ಹಿರಿಯ, ಶ್ರೇಷ್ಠ; ಗುರು: ಆಚಾರ್ಯ; ತನುಜ: ಮಗ; ಐದು: ಬಂದು ಸೇರು; ಕಲಿ: ಶೂರ;

ಪದವಿಂಗಡಣೆ:
ಹರಿಬದ್+ಆಹವವ್+ಎಂಬರ್+ಆವೆಡೆ
ಹರೆದರೇ +ರಣಗೇಡಿಗಳು+ ನುಡಿ
ಯುರಿಯ +ಹೊರುವುದು +ಘಾಯವ್+ಅತಿಶೀತಳ +ಮಹಾದೇವ
ಅರಮನೆಯ +ಕಾಲಾಳು +ಕರಿ +ರಥ
ತುರಗವ್+ಅಳಿದರೆ +ತಮಗೆ +ನಷ್ಟಿಯೆ
ಗರುವನೈ +ಗುರುತನುಜನೆನುತ್+ಐದಿದನು +ಕಲಿ +ಪಾರ್ಥ

ಅಚ್ಚರಿ:
(೧) ರಣಹೇಡಿಗಳ ಗುಣ – ರಣಗೇಡಿಗಳು ನುಡಿಯುರಿಯ ಹೊರುವುದು ಘಾಯವತಿಶೀತಳ ಮಹಾದೇವ

ಪದ್ಯ ೫೭: ಭೀಮನು ತನ್ನ ಆಯಾಸವನ್ನು ಹೇಗೆ ಕಳೆದನು?

ತೊಳೆದು ಚರಣಾನನವ ನಡುಗೊಳ
ದೊಳಗೆ ಹೊಕ್ಕಡಿಗಡಿಗೆ ಮಿಗೆ ಮು
ಕ್ಕುಳಿಸಿ ತೀರದಲುಗುಳಿ ದಿವ್ಯಾಂಭೋಜ ಪರಿಮಳವ
ತಳುವದಲೆ ತನಿಹೊರೆದ ಶೀತಳ
ಜಲವ ಕೊಂಡಾಪ್ಯಾಯಿತಾಂತ
ರ್ಲಲಿತ ಹೃದಯನು ನಿಮಿರ್ದುಹಿಡಿದನು ಕಮಲ ಪಂಕ್ತಿಗಳ (ಅರಣ್ಯ ಪರ್ವ, ೧೧ ಸಂಧಿ, ೫೭ ಪದ್ಯ)

ತಾತ್ಪರ್ಯ:
ಸರೋವರದ ಮಧ್ಯೆ ಹೆಜ್ಜೆಯಿಟ್ಟು ನಡೆದು ಭೀಮನು ಕಾಲು, ಮುಖಗಳನ್ನು ತೊಳೆದು, ಕೊಳದ ನೀರಿನಿಂದ ಬಾಯಿಯನ್ನು ಮುಕ್ಕುಳಿಸಿ ದಡದ ಮೇಲುಗುಳಿದನು. ದಿವ್ಯ ಪರಿಮಳದ ಕಮಲ ಗಂಧವನ್ನು ಹೊತ್ತ ತಣ್ಣನೆಯ ನೀರನ್ನು ಕುಡಿದು ಮನಸ್ಸು ಆಪ್ಯಾಯನಗೊಳ್ಳಲು, ಕಮಲಪುಷ್ಪಗಳನ್ನು ಕೈಯಲ್ಲಿ ಹಿಡಿದನು.

ಅರ್ಥ:
ತೊಳೆದು: ಸ್ವಚ್ಛಮಾಡು, ಶುದ್ಧಗೊಳಿಸು; ಚರಣ: ಪಾದ; ಆನನ: ಮುಖ; ನಡುಕೊಳ: ಕೊಳದ ಮಧ್ಯೆ; ಹೊಕ್ಕು: ಸೇರು; ಆಡಿಗಡಿ: ಹೆಜ್ಜೆ ಹೆಜ್ಜೆ; ಮಿಗೆ: ಮತ್ತು, ಅಧಿಕ; ಮುಕ್ಕುಳಿಸು: ಬಾಯಿಂದ ನೀರನ್ನು ಹೊರಹಾಕು; ತೀರ: ದಡ; ಉಗುಳು: ಹೊರಹಾಕು; ದಿವ್ಯ: ಶ್ರೇಷ್ಠ; ಅಂಭೋಜ: ಕಮಲ; ಪರಿಮಳ: ಸುಗಂಧ; ತಳುವು: ನಿಧಾನಿಸು; ತನಿ: ಹಿತಕರವಾದ, ಸವಿಯಾದ; ಶೀತಳ: ತಂಪಾದ; ಜಲ: ನೀರು; ಕೊಂಡು: ಪಡೆದು; ಆಪ್ಯಾಯ: ಸಂತೋಷ, ಹಿತ; ಅಂತರ್ಲಲಿತ: ಅಂತರಂಗದಲ್ಲಿ ಚೆಲುವಾದ; ಹೃದಯ: ಎದೆ, ವಕ್ಷ; ನಿಮಿರ್ದು: ನೆಟ್ಟಗಾದ; ಕಮಲ: ಪದ್ಮ; ಪಂಕ್ತಿ: ಸಾಲು;

ಪದವಿಂಗಡಣೆ:
ತೊಳೆದು +ಚರಣ+ಆನನವ +ನಡು+ಕೊಳ
ದೊಳಗೆ +ಹೊಕ್ಕ್+ಅಡಿಗಡಿಗೆ +ಮಿಗೆ +ಮು
ಕ್ಕುಳಿಸಿ+ ತೀರದಲ್+ಉಗುಳಿ +ದಿವ್ಯಾಂಭೋಜ +ಪರಿಮಳವ
ತಳುವದ್+ಅಲೆ+ ತನಿಹೊರೆದ+ ಶೀತಳ
ಜಲವ +ಕೊಂಡ್+ಆಪ್ಯಾಯಿತ್+ಅಂತ
ರ್ಲಲಿತ +ಹೃದಯನು +ನಿಮಿರ್ದು+ಹಿಡಿದನು+ ಕಮಲ +ಪಂಕ್ತಿಗಳ

ಅಚ್ಚರಿ:
(೧) ಭೀಮನು ಕಮಲವನ್ನು ಹಿಡಿದ ಪರಿ – ತಳುವದಲೆ ತನಿಹೊರೆದ ಶೀತಳ
ಜಲವ ಕೊಂಡಾಪ್ಯಾಯಿತಾಂತರ್ಲಲಿತ ಹೃದಯನು ನಿಮಿರ್ದುಹಿಡಿದನು ಕಮಲ ಪಂಕ್ತಿಗಳ

ಪದ್ಯ ೧೧: ಭೀಮನಿಗೆ ಶ್ರೀಕೃಷ್ಣ ಯಾವ ಚೋದ್ಯದ ನುಡಿಗಳನ್ನು ನುಡಿದನು?

ಎಲೆ ಮಹಾದೇವಾಯ್ತು ಹಾಲಾ
ಹಲ ಸುಧಾರಸ ಉಕ್ಕಿದುರಿಯ
ಗ್ಗಳದ ಶೀತಳವಾಯ್ತು ಸಿಡಿಲಾಟೋಪ ನಯವಾಯ್ತು
ಕೊಳೂಗುಳಕೆ ಪವಮಾನನಂದನ
ನಳುಕಿದನು ಮಝಮಾಯೆ ಕುಂತೀ
ಲಲನೆ ಹೆತ್ತಳು ಸುತರನೆಂದನು ಶೌರಿ ನಸುನಗುತ (ಉದ್ಯೋಗ ಪರ್ವ, ೬ ಸಂಧಿ, ೧೧ ಪದ್ಯ)

ತಾತ್ಪರ್ಯ:
ಭೀಮನ ಸಂಧಿಯ ಪ್ರಸ್ತಾವನೆಯನ್ನು ಕೇಳಿದ ಕೃಷ್ಣನು ಆಶ್ಚರ್ಯಗೊಂಡು, “ಓಹೋ ಇದೇನಿದು ಶಿವ ಶಿವ ಹಾಲಾಹಲವು ಅಮೃತವಾಯಿತಲ್ಲಾ, ಭಾರಿಯ ಬೆಂಕಿ ಒಮ್ಮೆಲೆ ತಣ್ಣಗಾಯಿತಲ್ಲಾ, ಸಿಡಿಲ ಜೋರು ನಯವಾಯಿತಲ್ಲಾ, ಭೀಮನು ಯುದ್ಧಕ್ಕೆ ಬೆದರಿದನೇ? ಭಲೇ ಮಾಯೆಯಾಟವೇ, ಕುಂತೀದೇವಿಯು ಎಂಥ ಮಕ್ಕಳನ್ನು ಹಡೆದಳು, ಸಾರ್ಥಕವಾಯಿತೆಂದು” ನಸುನಗುತ ನುಡಿದನು

ಅರ್ಥ:
ಮಹಾದೇವ: ಶಿವ; ಹಾಲಾಹಲ: ವಿಷ, ಗರಲ, ನಂಜು; ಸುಧ: ಅಮೃತ; ರಸ: ಸಾರ; ಉಕ್ಕು: ಚಿಮ್ಮು; ಉರಿ: ಬೆಂಕಿ; ಅಗ್ಗ: ಕಡಿಮೆ; ಸಿಡಿಲು: ಅಶನಿ, ಚಿಮ್ಮು, ಗರ್ಜಿಸು; ಶೀತಳ: ತಣ್ಣಗಾಗು; ನಯ: ಮೃದುತ್ವ, ಅಂದ; ಕೊಳುಗುಳ: ಯುದ್ಧ; ನಂದನ: ಮಗ; ಪವಮಾನ: ವಾಯು; ಅಳುಕು: ಹೆದರು; ಮಝ: ಕೊಂಡಾಟದ ಒಂದು ಮಾತು; ಲಲನೆ: ಹೆಣ್ಣು; ಹೆತ್ತು: ಹಡೆ; ಸುತ: ಮಕ್ಕಳು; ಶೌರಿ: ಕೃಷ್ಣ; ನಗು: ಸಂತೋಷ; ಆಟೋಪ:ಆಡಂಬರ;

ಪದವಿಂಗಡಣೆ:
ಎಲೆ+ ಮಹಾದೇವ+ಆಯ್ತು +ಹಾಲಾ
ಹಲ +ಸುಧಾರಸ+ ಉಕ್ಕಿದ್+ಉರಿ
ಅಗ್ಗಳದ +ಶೀತಳವಾಯ್ತು +ಸಿಡಿಲ+ಆಟೋಪ+ ನಯವಾಯ್ತು
ಕೊಳೂಗುಳಕೆ +ಪವಮಾನ+ನಂದನನ್
ಅಳುಕಿದನು +ಮಝಮಾಯೆ +ಕುಂತೀ
ಲಲನೆ +ಹೆತ್ತಳು +ಸುತರನೆಂದನು +ಶೌರಿ +ನಸುನಗುತ

ಅಚ್ಚರಿ:
(೧) ಉಪಮಾನಗಳ ಬಳಕೆ – ಆಯ್ತು ಹಾಲಾಹಲ ಸುಧಾರಸ, ಉಕ್ಕಿದುರಿಯಗ್ಗಳದ ಶೀತಳವಾಯ್ತು, ಸಿಡಿಲಾಟೋಪ ನಯವಾಯ್ತು
(೨) ಭೀಮನು ಬಲಶಾಲಿ ಎಂದು ತಿಳಿದಿದ್ದರು ಅವನ ಬಲವನ್ನೇ ಅಸ್ತ್ರವಾಗಿಸಿ ಅವನನ್ನು ತಿವಿಯುವ ಪರಿ