ಪದ್ಯ ೩: ಯಾವ ಜನರು ಹಸ್ತಿನಾಪುರಕ್ಕೆ ಬಂದು ಧರ್ಮಜನನ್ನು ಕಂಡರು?

ಜಲಧಿ ಮಧ್ಯದ ಕುರುವ ಘಟ್ಟಾ
ವಳಿಯ ಕೊಳ್ಳದ ಕುಹರ ಕುಂಜದ
ನೆಲೆಯ ಗಿರಿಸಾನುಗಳ ಶಿಖರದ ದುರ್ಗವೀಥಿಗಳ
ನೆಲನಶೇಷಪ್ರಜೆ ನಿಖಿಳ ಮಂ
ಡಳಿಕೆ ಮನ್ನೆಯ ವಂದಿಜನ ಸಂ
ಕುಲ ಮತಂಗಜಪುರಿಗೆ ಬಂದುದು ನೃಪನ ಕಾಣಿಕೆಗೆ (ಗದಾ ಪರ್ವ, ೧೩ ಸಂಧಿ, ೩ ಪದ್ಯ)

ತಾತ್ಪರ್ಯ:
ಸಮುದ್ರ ಮಧ್ಯದ ದ್ವೀಪಗಳು, ಘಟ್ಟಗಳು, ಕಣಿವೆಗಳು, ಬೆಟ್ಟಗಳು, ಪ್ರಸ್ಥಭೂಮಿಗಳು, ಶಿಖರಗಳು, ಕೋಟೆಗಳಲ್ಲಿದ್ದ ಎಲ್ಲಾ ಮಾಂಡಲಿಕರು, ನಾಯಕರು, ವಂದಿಗಳು ಹಸ್ತಿನಾಪುರಕ್ಕೆ ಬಂದು ದೊರೆಗೆ ಕಾಣಿಕೆ ಕೊಟ್ಟರು.

ಅರ್ಥ:
ಜಲಧಿ: ಸಾಗರ; ಮಧ್ಯ: ನಡುವೆ; ಘಟ್ಟ: ಬೆಟ್ಟಗಳ ಸಾಲು; ಆವಳಿ: ಸಾಲು; ಕೊಳ್ಳ: ತಗ್ಗಾಗಿರುವ ಪ್ರದೇಶ, ಹಳ್ಳ; ಕುಹರ: ಗವಿ, ಗುಹೆ; ಕುಂಜ: ಗುಹೆ; ನೆಲೆ: ಭೂಮಿ; ಗಿರಿ: ಬೆಟ್ಟ; ಸಾನು: ಬೆಟ್ಟದ ಮೇಲಿನ ಸಮತಲವಾದ ಪ್ರದೇಶ, ಪ್ರಸ್ಥಭೂಮಿ; ಶಿಖರ: ಬೆಟ್ಟದ ತುದಿ; ದುರ್ಗ: ಕೋಟೆ; ವೀಥಿ: ಮಾರ್ಗ; ಶೇಷ: ಉಳಿದ; ಪ್ರಜೆ: ನಾಗರೀಕ; ವಂದಿ: ಹೊಗಳುಭಟ್ಟ; ಸಂಕುಲ: ಗುಂಪು; ಮತಂಗಜ: ಆನೆ; ಬಂದು: ಆಗಮಿಸು; ನೃಪ: ರಾಜ; ಕಾಣಿಕೆ: ಕೊಡುಗೆ;

ಪದವಿಂಗಡಣೆ:
ಜಲಧಿ +ಮಧ್ಯದ+ ಕುರುವ +ಘಟ್ಟಾ
ವಳಿಯ +ಕೊಳ್ಳದ +ಕುಹರ +ಕುಂಜದ
ನೆಲೆಯ +ಗಿರಿಸಾನುಗಳ +ಶಿಖರದ +ದುರ್ಗ+ವೀಥಿಗಳ
ನೆಲನ+ಶೇಷ+ಪ್ರಜೆ+ ನಿಖಿಳ +ಮಂ
ಡಳಿಕೆ +ಮನ್ನೆಯ +ವಂದಿಜನ +ಸಂ
ಕುಲ +ಮತಂಗಜಪುರಿಗೆ +ಬಂದುದು +ನೃಪನ +ಕಾಣಿಕೆಗೆ

ಅಚ್ಚರಿ:
(೧) ಹಸ್ತಿನಾಪುರಕ್ಕೆ ಮತಂಗಜ ಪದದ ಬಳಕೆ
(೨) ಕ ಕಾರದ ತ್ರಿವಳಿ ಪದ – ಕೊಳ್ಳದ ಕುಹರ ಕುಂಜದ

ಪದ್ಯ ೨೮: ಭೀಮನು ಹೇಗೆ ಕೌರವನನ್ನು ಪ್ರಚೋದಿಸಿದನು – ೫?

ಜಲವಹೊಕ್ಕನ ಹುಲ್ಲ ಕಚ್ಚಿದ
ಖಳನ ತರುಗಿರಿಶಿಖರದಲಿ ಕಾ
ಲ್ದೊಳಸಿದನ ವಲ್ಮೀಕಸಂಗತನನು ನಿರಾಯುಧನ
ಕೊಲುವುದನುಚಿತವೆಂಬ ಶಾಸ್ತ್ರವ
ತಿಳಿದು ನಂಬಿದೆ ನಿನ್ನನೊಬ್ಬನ
ಕೊಲುವುದಕೆ ಶ್ರುತಶಾಸ್ತ್ರರಾವಲ್ಲೆಂದನಾ ಭೀಮ (ಗದಾ ಪರ್ವ, ೫ ಸಂಧಿ, ೨೮ ಪದ್ಯ)

ತಾತ್ಪರ್ಯ:
ನೀರನ್ನು ಹೊಕ್ಕವನನ್ನು, ಹುಲ್ಲನ್ನು ಕಚ್ಚಿದ ನೀಚನನ್ನು, ಮರದ ಮೇಲೆ ಬೆಟ್ಟದ ಕೋಡುಗಲ್ಲಿನ ಮೇಲೆ ಕಾಲನ್ನು ಸಿಕ್ಕಿಸಿದವನನ್ನು, ಹುತ್ತವನ್ನೇರಿದವನನ್ನು, ಆಯುಧವಿಲ್ಲದವನನ್ನು ಕೊಲ್ಲುವುದು ಉಚಿತವಲ್ಲೆವೆಂಬ ಶಾಸ್ತ್ರವನ್ನು ನಂಬಿದ್ದರೆ ಕೇಳು, ನಿನ್ನನ್ನು ಕೊಲ್ಲುವುದಕ್ಕೆ ನಾವು ಶಾಸ್ತ್ರವನ್ನು ಕೇಳಿಲ್ಲ, ಅರಿತಿಲ್ಲ ಎಂದು ಭೀಮನು ಗರ್ಜಿಸಿದನು.

ಅರ್ಥ:
ಜಲ: ನೀರು; ಹೊಕ್ಕು: ಸೇರು; ಹುಲ್ಲು: ತೃಣ; ಕಚ್ಚು: ಕಡಿ, ನೋಯು; ಖಳ: ದುಷ್ಟ; ತರು: ಮರ; ಗಿರಿ: ಬೆಟ್ಟ; ಶಿಖರ: ತುದಿ; ಕಾಲು: ಪಾದ; ತೊಳಸಿದ: ಸಿಕ್ಕಿಸಿದ; ವಲ್ಮೀಕ: ಹುತ್ತ; ಸಂಗ: ಜೊತೆ; ನಿರಾಯುಧ: ಶಸ್ತ್ರವಿಲ್ಲದ ಸ್ಥಿತಿ; ಕೊಲು: ಸಾಯಿಸು; ಅನುಚಿತ: ಸರಿಯಲ್ಲದ; ಶಾಸ್ತ್ರ: ಧರ್ಮ ಗ್ರಂಥ; ತಿಳಿ: ಗೊತ್ತುಮಾಡು; ನಂಬು: ವಿಶ್ವಾಸವಿಡು; ಕೊಲು: ಸಾಯಿಸು; ಶ್ರುತ: ಕೇಳಿದ, ಆಲಿಸಿದ;

ಪದವಿಂಗಡಣೆ:
ಜಲವ+ಹೊಕ್ಕನ +ಹುಲ್ಲ +ಕಚ್ಚಿದ
ಖಳನ +ತರು+ಗಿರಿ+ಶಿಖರದಲಿ +ಕಾ
ಲ್ದೊಳಸಿದನ +ವಲ್ಮೀಕ+ಸಂಗತನನು+ ನಿರಾಯುಧನ
ಕೊಲುವುದ್+ಅನುಚಿತವೆಂಬ +ಶಾಸ್ತ್ರವ
ತಿಳಿದು +ನಂಬಿದೆ +ನಿನ್ನನೊಬ್ಬನ
ಕೊಲುವುದಕೆ+ ಶ್ರುತ+ಶಾಸ್ತ್ರರಾವಲ್ಲ್+ಎಂದನಾ +ಭೀಮ

ಅಚ್ಚರಿ:
(೧) ಶಾಸ್ತ್ರದ ಪ್ರಕಾರ ಯಾರನ್ನು ಕೊಲುವುದು ಅನುಚಿತ – ಜಲವಹೊಕ್ಕನ, ಹುಲ್ಲ ಕಚ್ಚಿದ ಖಳನ, ತರು ಗಿರಿ ಶಿಖರದಲಿ ಕಾಲ್ದೊಳಸಿದನ ವಲ್ಮೀಕಸಂಗತನನು ನಿರಾಯುಧನ ಕೊಲುವುದನುಚಿತ

ಪದ್ಯ ೭೯: ಯುದ್ಧದಲ್ಲಿ ಯಾರು ಆಯಾಸಗೊಂಡರು?

ಗುರುತನುಜ ರವಿಸೂನು ಮಾದ್ರೇ
ಶ್ವರ ಜಯದ್ರಥ ಕೌರವಾದಿಗ
ಳರಿ ಗದಾಘಾತದಲಿ ಕೈ ಮೈ ದಣಿದು ಮನದಣಿದು
ತೆರಳಿದರು ಬಳಿಕಪರಜಲಧಿಯೊ
ಳುರಿವ ವಡಬನ ದೀಪ್ತಶಿಖರದೊ
ಳೆರಗುವಂತೆ ಪತಂಗ ಮಂಡಲವಿಳಿದುದಂಬರವ (ದ್ರೋಣ ಪರ್ವ, ೩ ಸಂಧಿ, ೭೯ ಪದ್ಯ)

ತಾತ್ಪರ್ಯ:
ಅಶ್ವತ್ಥಾಮ, ಕರ್ಣ, ಶಲ್ಯ, ಜಯದ್ರಥ, ಕೌರವರು ಭೀಮನ ಗದೆಯ ಹೊಡೆತದಿಂದ ಕೈ, ಮೈ ಮನಸ್ಸುಗಳಿಂದ ದಣಿದರು. ಅಷ್ಟರಲ್ಲಿ ಪಶ್ಚಿಮ ಸಮುದ್ರದೊಳಕ್ಕೆ ಜ್ವಲಿಸುವ ಬಡಬಾನಲ ಶಿಖರಕ್ಕೆ ಎರಗುವಂತೆ ಸೂರ್ಯಮಂಡಲವು ಆಕಾಶದಿಂದ ಕೆಳಗಿಳಿಯಿತು.

ಅರ್ಥ:
ತನುಜ: ಮಗ; ಗುರು: ಆಚಾರ್ಯ; ರವಿ: ಸೂರ್ಯ; ಸೂನು: ಮಗ; ಮಾದ್ರೇಶ್ವರ: ಶಲ್ಯ, ಮದ್ರ ದೇಶದ ದೊರೆ; ಆದಿ: ಮುಂತಾದ; ಅರಿ: ಕತ್ತರಿಸು; ಗದೆ: ಮುದ್ಗರ; ಆಘಾತ: ಹೊಡೆತ; ಕೈ: ಹಸ್ತ; ಮೈ: ತನು; ದಣಿ: ಆಯಾಸ; ಮನ: ಮನಸ್ಸು; ತೆರಳು: ಹಿಂದಿರುಗು; ಬಳಿಕ: ನಂತರ; ಅಪರ: ಪಶ್ಚಿಮದಿಕ್ಕು; ಜಲಧಿ: ಸಾಗರ; ಉರಿ: ಬೆಂಕಿ; ವಡಬ: ಸಮುದ್ರದಲ್ಲಿರುವ ಬೆಂಕಿ, ಬಡ ಬಾಗ್ನಿ; ದೀಪ್ತ: ಪ್ರಕಾಶವುಳ್ಳ; ಶಿಖರ: ತುದಿ; ಎರಗು: ಬಾಗು; ಪತಂಗ: ಸೂರ್ಯ; ಮಂಡಲ:ವರ್ತುಲಾಕಾರ; ಇಳಿ: ಬಾಗು; ಅಂಬರ: ಆಗಸ;

ಪದವಿಂಗಡಣೆ:
ಗುರು+ತನುಜ +ರವಿ+ಸೂನು +ಮಾದ್ರೇ
ಶ್ವರ +ಜಯದ್ರಥ +ಕೌರವ್+ಆದಿಗಳ್
ಅರಿ +ಗದ+ಆಘಾತದಲಿ +ಕೈ +ಮೈ +ದಣಿದು +ಮನದಣಿದು
ತೆರಳಿದರು +ಬಳಿಕ್+ಅಪರ+ಜಲಧಿಯೊಳ್
ಉರಿವ +ವಡಬನ+ ದೀಪ್ತ+ಶಿಖರದೊಳ್
ಎರಗುವಂತೆ +ಪತಂಗ +ಮಂಡಲವ್+ಇಳಿದುದ್+ಅಂಬರವ

ಅಚ್ಚರಿ:
(೧) ಸೂರ್ಯ ಮುಳುಗಿದ ಎಂದು ಹೇಳುವ ಪರಿ – ಅಪರಜಲಧಿಯೊಳುರಿವ ವಡಬನ ದೀಪ್ತಶಿಖರದೊ
ಳೆರಗುವಂತೆ ಪತಂಗ ಮಂಡಲವಿಳಿದುದಂಬರವ

ಪದ್ಯ ೯೦: ಭೀಮನು ಕೀಚಕನನ್ನು ಹೇಗೆ ಬಡಿದನು?

ಎರಗಿದೊಡೆ ಕೀಚಕನ ಗಾಯಕೆ
ತರಹರಿಸಿ ಕಲಿಭೀಮ ಮಂಡಿಸಿ
ಮರೆವಡೆದು ಮುರಿದೆದ್ದು ರೋಷದೊಳೌಡನೊಡೆಯುಗಿದು
ಬರಸಿಡಿಲು ಪರ್ವತದ ಶಿಖರವ
ನೆರಗುವಂತಿರೆ ಖಳನ ನೆತ್ತಿಯ
ನೆರಗಿದನು ರಣಧೀರನುನ್ನತ ಬಾಹುಸತ್ವದಲಿ (ವಿರಾಟ ಪರ್ವ, ೩ ಸಂಧಿ, ೯೦ ಪದ್ಯ)

ತಾತ್ಪರ್ಯ:
ಕೀಚಕನ ಒಂದಾನೊಂದು ಪೆಟ್ಟನ್ನು ಭೀಮನು ಸಹಿಸಿಕೊಂಡು ಮಂಡಿ ಹಾಕಿ ಕುಳಿತು, ಅವನ ಪೆಟ್ಟುಗಳನ್ನು ತಪ್ಪಿಸಿಕೊಂಡು, ಮೇಲೆದ್ದು ರೋಷದಿಂದ ತುಟಿಯನ್ನು ಕಚ್ಚಿ ಬರಸಿಡಿಲು ಪರ್ವತದ ಶಿಖರವನ್ನು ಅಪ್ಪಳಿಸುವಂತೆ, ಮುಷ್ಟಿಕಟ್ಟಿ ಬಾಹು ಸತ್ವದಿಂದ ಕಿಚಕನ ನೆತ್ತಿಯನ್ನು ಬಡಿದನು.

ಅರ್ಥ:
ಎರಗು: ಬಾಗು; ಗಾಯ: ಪೆಟ್ಟು; ತರಹರಿಸು: ತಡಮಾಡು; ಕಲಿ: ಶೂರ; ಮಂಡಿಸು: ಬಾಗಿಸು; ಮರೆ: ತಪ್ಪಿಸು; ಮುರಿ: ಸೀಳು; ಎದ್ದು: ಮೇಲೇಳು; ರೋಷ: ಕೋಪಲ್ ಔಡು: ಕೆಳತುಟಿ, ಹಲ್ಲಿನಿಂದ ಕಚ್ಚು; ಉಗಿ: ಇರಿತ, ತಿವಿತ; ಬರಸಿಡಿಲು: ಅನಿರೀಕ್ಷಿತವಾದ ಆಘಾತ; ಪರ್ವತ: ಬೆಟ್ಟ; ಶಿಖರ: ತುದಿ; ಖಳ: ದುಷ್ಟ; ನೆತ್ತಿ: ತಲೆ; ರಣಧೀರ: ಪರಾಕ್ರಮಿ; ಉನ್ನತ: ಹಿರಿಯ, ಉತ್ತಮ; ಬಾಹು: ತೋಳು, ಭುಜ; ಸತ್ವ: ಶಕ್ತಿ, ಬಲ;

ಪದವಿಂಗಡಣೆ:
ಎರಗಿದೊಡೆ +ಕೀಚಕನ +ಗಾಯಕೆ
ತರಹರಿಸಿ+ ಕಲಿಭೀಮ +ಮಂಡಿಸಿ
ಮರೆವಡೆದು +ಮುರಿದೆದ್ದು +ರೋಷದೊಳ್+ಔಡನ್+ಒಡೆ+ಉಗಿದು
ಬರಸಿಡಿಲು +ಪರ್ವತದ +ಶಿಖರವನ್
ಎರಗುವಂತಿರೆ +ಖಳನ +ನೆತ್ತಿಯನ್
ಎರಗಿದನು+ ರಣಧೀರನ್+ಉನ್ನತ +ಬಾಹು+ಸತ್ವದಲಿ

ಅಚ್ಚರಿ:
(೧) ಉಪಮಾನದ ಪ್ರಯೋಗ – ಬರಸಿಡಿಲು ಪರ್ವತದ ಶಿಖರವನೆರಗುವಂತಿರೆ
(೨) ಕಲಿ, ರಣಧೀರ – ಸಮನಾರ್ಥಕ ಪದ

ಪದ್ಯ ೮: ಭೀಮನ ಓಡಾಟವು ಅಡವಿಯನ್ನು ಹೇಗೆ ನಡುಗಿಸಿತು?

ಒದರಿದರೆ ಪರ್ವತದ ಶಿಖರದ
ಲುದುರಿದವು ಹೆಗ್ಗುಂಡುಗಳು ಮುರಿ
ದೊದೆಯೆ ಬಿದ್ದವು ಬೇರು ಸಹಿತ ಮಹಾದ್ರುಮಾಳಿಗಳು
ಗದೆಯ ಹೊಯ್ಲಿನ ಗಂಡಶೈಲವೊ
ಕದಳಿಗಳೊ ತಾವರಿಯೆವುಬ್ಬಿದ
ಮದಮುಖನ ಪರಿಮಸಕ ಮುರಿದುದು ಗಿರಿತರುವ್ರಜವ (ಅರಣ್ಯ ಪರ್ವ, ೧೧ ಸಂಧಿ, ೮ ಪದ್ಯ)

ತಾತ್ಪರ್ಯ:
ಭೀಮನು ಅಬ್ಬರಿಸಿದರೆ ಪರ್ವತ ಶಿಖರಗಳಲ್ಲಿದ್ದ ದೊಡ್ಡ ಗುಂಡುಗಳು ಉದುರಿದವು. ಕಾಲು ಝಾಡಿಸಿದರೆ ಮಹಾವೃಕ್ಷಗಳು ಬೇರು ಸಹಿತ ಉರುಳಿದವು. ಗದೆಯ ಹೊಡೆತಕ್ಕೆ ಬೆಟ್ಟದ ಕಲ್ಲುಗಳು ಬಾಳೆಯ ಗಿಡಗಳಂತೆ ಮುರಿದುಬಿದ್ದವು. ಮದೊನ್ಮತ್ತನಾದ ಭೀಮನ ಚಲನವು ಬೆಟ್ಟ, ಅಡವಿಗಳನ್ನು ನಡುಗಿಸಿತು.

ಅರ್ಥ:
ಒದರು: ಕೊಡಹು, ಜಾಡಿಸು, ಕೂಗು; ಪರ್ವತ: ಬೆಟ್ಟ; ಶಿಖರ: ತುದಿ; ಉದುರು: ಕೆಳಕ್ಕೆ ಬೀಳು; ಹೆಗ್ಗುಂಡು: ದೊಡ್ಡ ಬಂಡೆ; ಮುರಿ: ಸೀಳು; ಒದೆ: ಕಾಲಿನಿಂದ ತಳ್ಳು; ಬಿದ್ದು: ಕೆಳಗೆ ಜಾರು; ಬೇರು: ಮೂಲ; ಸಹಿತ: ಜೊತೆ; ದ್ರುಮ: ಮರ,ವೃಕ್ಷ; ಆಳಿ: ಸಾಲು, ಗುಂಪು; ಗದೆ: ಮುದ್ಗರ; ಹೊಯ್ಲು: ಹೊಡೆತ; ಗಂಡಶೈಲ: ಬೆಟ್ಟದಿಂದ ಉರುಳಿಬಿದ್ದ ದೊಡ್ಡಬಂಡೆ; ಕದಳಿ: ಬಾಳೆ; ಉಬ್ಬು: ಹೆಚ್ಚು; ಮದ: ಮತ್ತು, ಅಮಲು; ಮುಖ: ಆನನ; ಮಸಕ: ಆಧಿಕ್ಯ, ಹೆಚ್ಚಳ, ವೇಗ; ಗಿರಿ: ಬೆಟ್ಟ; ತರು: ಮರ; ವ್ರಜ: ಗುಂಪು;

ಪದವಿಂಗಡಣೆ:
ಒದರಿದರೆ +ಪರ್ವತದ +ಶಿಖರದಲ್
ಉದುರಿದವು +ಹೆಗ್ಗುಂಡುಗಳು +ಮುರಿದ್
ಒದೆಯೆ +ಬಿದ್ದವು +ಬೇರು +ಸಹಿತ +ಮಹಾದ್ರುಮಾಳಿಗಳು
ಗದೆಯ +ಹೊಯ್ಲಿನ +ಗಂಡಶೈಲವೊ
ಕದಳಿಗಳೊ +ತಾವರಿಯೆ+ಉಬ್ಬಿದ
ಮದಮುಖನ +ಪರಿಮಸಕ +ಮುರಿದುದು +ಗಿರಿ+ತರು+ವ್ರಜವ

ಅಚ್ಚರಿ:
(೧) ಭೀಮನ ಶಕ್ತಿಯನ್ನು ವಿವರಿಸುವ ಪರಿ – ಒದರಿದರೆ ಪರ್ವತದ ಶಿಖರದ
ಲುದುರಿದವು ಹೆಗ್ಗುಂಡುಗಳು ಮುರಿದೊದೆಯೆ ಬಿದ್ದವು ಬೇರು ಸಹಿತ ಮಹಾದ್ರುಮಾಳಿಗಳು

ಪದ್ಯ ೯೫: ಅರ್ಜುನನು ಊರ್ವಶಿಯನ್ನು ಹೇಗೆ ನೋಡಿದನು?

ಈಯಮಾನುಷ ನೃತ್ಯ ವಾದ್ಯ ಸು
ಗೇಯ ರಸದಲಿ ಮುಳುಗಿ ಕರಣದ
ಲಾಯತೊಡಕದೆ ಪಾರ್ಥನಿದ್ದನು ಧೈರ್ಯ ಶಿಖರದಲಿ
ಈ ಯುವತಿ ತಾನಾವಳೋ ಕುಸು
ಮಾಯುಧನ ಖಂಡೆಯವಲಾಮಝು
ಮಾಯೆಯೆನುತೂರ್ವಶಿಯನೆವೆಯಿಕ್ಕದೆ ನಿರೀಕ್ಷಿಸಿದ (ಅರಣ್ಯ ಪರ್ವ, ೮ ಸಂಧಿ, ೯೫ ಪದ್ಯ)

ತಾತ್ಪರ್ಯ:
ಮನುಷ್ಯರ ಅನುಭವವನ್ನೇ ಮೀರಿದ ನೃತ್ಯ, ವಾದ್ಯ, ಸಂಗೀತಗಲಲ್ಲಿ ಮನಸ್ಸನ್ನು ತೊಡಗಿಸದೆ ಅರ್ಜುನನು ಕುಳಿತಿದ್ದನು. ಈ ಯುವತಿ ಯಾರಿರಬಹುದು! ಇವಳು ಮನ್ಮಥನ ಕತ್ತಿ, ಭಲಾ! ಮಾಯೆ ಎಂದುಕೊಂಡು ಊರ್ವಶಿಯನ್ನು ಎವೆಯಿಕ್ಕದೆ ನೆಟ್ಟಕಣ್ಣಿನಿಂದ ನೋಡಿದನು.

ಅರ್ಥ:
ಮಾನುಷ: ಮನುಷ್ಯ; ನೃತ್ಯ: ನರ್ತನ; ವಾದ್ಯ: ಸಂಗೀತದ ಸಾಧನ; ಗೇಯ: ಹಾಡುವಿಕೆ, ಗಾಯನ; ರಸ: ಸಾರ; ಮುಳುಗು: ತೋಯು; ಕರಣ: ಕಾರ್ಯ; ಆಯ:ಪರಿಮಿತಿ; ತೊಡಕು: ಅಡಚಣೆ; ಧೈರ್ಯ: ದಿಟ್ಟತನ; ಶಿಖರ: ತುದಿ; ಯುವತಿ: ಹೆಣ್ಣು; ಕುಸುಮ: ಪುಷ್ಪ; ಆಯುಧ: ಶಸ್ತ್ರ; ಖಂಡೆಯ: ಕತ್ತಿ; ಮಝು: ಭಲೇ; ಮಾಯೆ: ಗಾರುಡಿ, ಇಂದ್ರಜಾಲ; ಎವೆ: ಕಣ್ಣಿನ ರೆಪ್ಪೆ; ನಿರೀಕ್ಷಿಸು: ನೋಡು;

ಪದವಿಂಗಡಣೆ:
ಈ+ಅಮಾನುಷ +ನೃತ್ಯ +ವಾದ್ಯ+ ಸು
ಗೇಯ +ರಸದಲಿ +ಮುಳುಗಿ +ಕರಣದಲ್
ಆಯ+ತೊಡಕದೆ+ ಪಾರ್ಥನಿದ್ದನು +ಧೈರ್ಯ +ಶಿಖರದಲಿ
ಈ +ಯುವತಿ +ತಾನ್+ಆವಳೋ +ಕುಸುಮ
ಆಯುಧನ +ಖಂಡೆಯವಲಾ+ಮಝು
ಮಾಯೆ+ಎನುತ್+ಊರ್ವಶಿಯನ್+ಎವೆಯಿಕ್ಕದೆ +ನಿರೀಕ್ಷಿಸಿದ

ಅಚ್ಚರಿ:
(೧) ಅರ್ಜುನನ ಸಂಯಮ – ಕರಣದಲಾಯತೊಡಕದೆ ಪಾರ್ಥನಿದ್ದನು ಧೈರ್ಯ ಶಿಖರದಲಿ
(೨) ಮನ್ಮಥನನ್ನು ಕರೆದ ಪರಿ – ಕುಸುಮಾಯುಧನ ಖಂಡೆಯವಲಾ

ಪದ್ಯ ೬೨: ಸೂರ್ಯನ ರಥದ ವಿಸ್ತಾರವೆಷ್ಟು?

ಗಾಲಿ ಮಾನಸ ಗಿರಿಯ ಶಿಖರದ
ಮೇಲೆ ತಿರುಗುವುದೊಂದು ಕಡೆ ಸುರ
ಶೈಲದಲಿ ಬಿಗಿದಚ್ಚು ಕೋಟಿಯ ಮೇಲೆಯೈವತ್ತು
ಏಳುಲಕ್ಕದ ನೀಳ ರಥದ ವಿ
ಶಾಲವದು ಮುವ್ವತ್ತು ಸಾವಿರ
ಮೇಲೆ ಧ್ರುವ ಮಂಡಲಕೆ ಬಿಗಿದಿಹುದನಿಲಪಾಶದಲಿ (ಅರಣ್ಯ ಪರ್ವ, ೮ ಸಂಧಿ, ೬೨ ಪದ್ಯ)

ತಾತ್ಪರ್ಯ:
ಸೂರ್ಯನ ರಥವು ಒಂದು ಕೋಟಿ ಐವತ್ತೇಳು ಲಕ್ಷ ಯೋಜನ ಉದ್ದವಾಗಿದೆ. ಮೂವತ್ತು ಸಾವಿರ ಯೋಜನ ವಿಸ್ತಾರವಾಗಿದೆ. ಹಿಮಾಲಯದಲ್ಲಿ ಅದನ್ನು ಬಿಗಿದಿರುವ ಅಚ್ಚಿದೆ, ಮಾನಸಗಿರಿಯ ಮೇಲೆ ತಿರುಗುತ್ತದೆ. ಧೃವ ಮಂಡಲಕ್ಕೆ ಅನಿಲ ಪಾಶದಿಂದ ಬಿಗಿದಿದೆ.

ಅರ್ಥ:
ಗಾಲಿ: ಚಕ್ರ; ಗಿರಿ: ಬೆಟ್ಟ; ಶಿಖರ: ತುದಿ, ಅಗ್ರ; ತಿರುಗು: ಸುತ್ತು; ಕಡೆ: ಕೊನೆ; ಸುರ: ದೇವತೆ; ಶೈಲ: ಬೆಟ್ಟ; ಲಕ್ಕ: ಲಕ್ಷ; ನೀಳ: ಉದ್ದ; ರಥ: ಬಂಡಿ; ವಿಶಾಲ: ವಿಸ್ತಾರ; ಸಾವಿರ: ಸಹಸ್ರ; ಮಂಡಲ: ಜಗತ್ತು, ವರ್ತುಲಾಕಾರ; ಬಿಗಿ: ಭದ್ರವಾಗಿರುವುದು; ಅನಿಲ: ವಾಯು; ಪಾಶ: ಹಗ್ಗ;

ಪದವಿಂಗಡಣೆ:
ಗಾಲಿ +ಮಾನಸ +ಗಿರಿಯ +ಶಿಖರದ
ಮೇಲೆ +ತಿರುಗುವುದೊಂದು +ಕಡೆ+ ಸುರ
ಶೈಲದಲಿ +ಬಿಗಿದಚ್ಚು +ಕೋಟಿಯ +ಮೇಲೆ+ಐವತ್ತು
ಏಳು+ಲಕ್ಷದ+ ನೀಳ +ರಥದ +ವಿ
ಶಾಲವದು +ಮುವ್ವತ್ತು +ಸಾವಿರ
ಮೇಲೆ +ಧ್ರುವ +ಮಂಡಲಕೆ+ ಬಿಗಿದಿಹುದ್+ಅನಿಲ+ಪಾಶದಲಿ

ಪದ್ಯ ೭೧: ಬೆಳಗಿನ ಆಗಸದಲ್ಲಿ ಏನು ಕಂಡವು?

ನಡುಗಿತವನಿಯಕಾಲದಲಿ ಬರ
ಸಿಡಿಲು ಸುಳಿದುದು ಹಗಲು ತಾರೆಗ
ಳಿಡಿದುವರ್ಭ್ರದಲಿಳೆಗೆ ಸುಳಿದುದು ರುಧಿರಮಯ ವರ್ಷ
ಮಿಡುಕಿದವು ಪ್ರತಿಮೆಗಳು ಶಿಖರದಿ
ನುಡಿದು ಬಿದ್ದುದು ಕಳಶ ಹೆಮ್ಮರ
ವಡಿಗಡಿಗೆ ಕಾರಿದವು ರುಧಿರವನರಸಕೇಳೆಂದ (ಸಭಾ ಪರ್ವ, ೧೧ ಸಂಧಿ, ೭೧ ಪದ್ಯ)

ತಾತ್ಪರ್ಯ:
ಜನಮೇಜಯ ರಾಜ ಕೇಳು ಆ ಯುದ್ಧದ ತೀವ್ರತೆಯನು. ಅಕಾಲದಲ್ಲಿ ಭೂಮಿಯು ನಡುಗಿತು, ಬರಸಿಡಿಲು ಬಡಿಯಿತು, ಹಗಲು ಹೊತ್ತಿನಲ್ಲಿ ಆಕಾಶದ ತುಂಬಾ ನಕ್ಷತ್ರಗಳು ದಂಡವು. ರಕ್ತದ ಮಳೆ ಸುರಿಯಿತು. ದೇವಾಲಯಗಳಲ್ಲಿ ವಿಗ್ರಹವು ಅಲುಗಾಡಿದವು, ದೇವಾಲಯದ ಶಿಖರದಿಂದ ಕಳಶವು ಕಳಚಿಬಿತ್ತು. ದೊಡ್ಡ ದೊಡ್ಡ ಮರಗಳು ರಕ್ತವನ್ನು ಕಾರಿದವು.

ಅರ್ಥ:
ನಡುಗು: ಅಲುಗಾಡು; ಅವನಿ: ಭೂಮಿ; ಕಾಲ: ಸಮಯ; ಅಕಾಲ: ಸರಿಯಲ್ಲದ ಸಮಯ; ಬರಸಿಡಿಲು: ಅನಿರೀಕ್ಷಿತವಾದ ಆಘಾತ; ಸುಳಿ: ಬೀಸು, ತೀಡು; ಹಗಲು: ಬೆಳಗ್ಗೆ; ತಾರೆ:ನಕ್ಷತ್ರ; ಅಭ್ರ: ಆಕಾಶ; ಇಡಿ: ತೋರು; ಇಳೆ: ಭೂಮಿ; ರುಧಿರ; ರಕ್ತ; ವರ್ಷ: ಮಳೆ; ಮಿಡುಕು: ಅಲುಗಾಡು; ಪ್ರತಿಮೆ: ವಿಗ್ರಹ; ಶಿಖರ: ತುದಿ; ಉಡಿ: ಮುರಿ, ತುಂಡು ಮಾಡು; ಬಿದ್ದು: ಕೆಳಗೆ ಬೀಳು; ಕಳಶ: ದೇವಸ್ಥಾನದ ಗೋಪುರಗಳ ತುದಿಯಲ್ಲಿರುವ ಕುಂಭ; ಹೆಮ್ಮರ: ದೊಡ್ಡದಾದ ಮರ/ತರು; ಅಡಿಗಡಿಗೆ: ಮತ್ತೆ ಮತ್ತೆ; ಕಾರು: ಕೆಸರು; ಅರಸ: ರಾಜ;

ಪದವಿಂಗಡಣೆ:
ನಡುಗಿತ್+ಅವನಿ+ಅಕಾಲದಲಿ +ಬರ
ಸಿಡಿಲು +ಸುಳಿದುದು +ಹಗಲು +ತಾರೆಗಳ್
ಇಡಿದುವ್+ಅರ್ಭ್ರದಲ್+ಇಳೆಗೆ +ಸುಳಿದುದು +ರುಧಿರಮಯ +ವರ್ಷ
ಮಿಡುಕಿದವು+ ಪ್ರತಿಮೆಗಳು +ಶಿಖರದಿನ್
ಉಡಿದು +ಬಿದ್ದುದು +ಕಳಶ +ಹೆಮ್ಮರವ್
ಅಡಿಗಡಿಗೆ +ಕಾರಿದವು +ರುಧಿರವನ್+ಅರಸ+ಕೇಳೆಂದ

ಅಚ್ಚರಿ:
(೧) ರಕ್ತದ ಮಳೆ ಎಂದು ಹೇಳಲು – ಇಳೆಗೆ ಸುಳಿದುದು ರುಧಿರಮಯ ವರ್ಷ
(೨) ಉಡಿ, ಅಡಿ, ಇಡಿ, ಸಿಡಿ – ಪ್ರಾಸ ಪದಗಳು
(೩) ನಡುಗು, ಮಿಡುಕು – ಸಾಮ್ಯಾರ್ಥ ಪದಗಳು