ಪದ್ಯ ೧೩: ಸೈಂಧವನ ಬಗ್ಗೆ ಗಾಂಧಾರಿ ಏನೆಂದಳು?

ತಂದೆ ನೋಡೈ ಕೃಷ್ಣ ತನ್ನಯ
ನಂದನರು ನೂರ್ವರಿಗೆ ಕಿರಿಯಳ
ನಿಂದುಮುಖಿ ದುಶ್ಶಳೆಯನಾ ಸೈಂಧವನ ವಲ್ಲಭೆಯ
ಅಂದು ವಿವಿಧವ್ಯೂಹದಲಿ ಗುರು
ನಿಂದಡೆಯು ಹುಸಿರಾತ್ರಿಯಲಿ ನೀ
ಕೊಂದಲೈ ತನ್ನಳಿಯನನು ವರ ಸಿಂಧುಭೂಪತಿಯ (ಗದಾ ಪರ್ವ, ೧೨ ಸಂಧಿ, ೧೩ ಪದ್ಯ)

ತಾತ್ಪರ್ಯ:
ಅಪ್ಪಾ ಕೃಷ್ಣ ನೋಡು, ನನ್ನ ನೂರು ಮಕ್ಕಳ ತಂಗಿಯೂ ಸೈಂಧವನ ಪತ್ನಿಯೂ ಆದ ದುಶ್ಶಳೆಯನ್ನು ನೋಡು, ಅಂದು ಹಲವು ವ್ಯೂಹಗಳನ್ನು ರಚಿಸಿ ಅದರ ನಡುವೆ ದ್ರೋಣನು ನಿಲ್ಲಿಸಿದ ನನ್ನಳಿಯ ಸೈಂಧವನನ್ನು ಹುಸಿ ರಾತ್ರಿಯನ್ನು ಸೃಷ್ಟಿಸಿ ಕೊಂದೆ ಎಂದು ತನ್ನ ದುಃಖವನ್ನು ತೋಡಿಕೊಂಡಳು.

ಅರ್ಥ:
ತಂದೆ: ಅಯ್ಯ, ಪಿತ; ನೋಡು: ವೀಕ್ಷಿಸು; ನಂದನ: ಮಕ್ಕಳು; ಕಿರಿ: ಚಿಕ್ಕವ; ಇಂದುಮುಖಿ: ಚಂದ್ರನಂತ ಮುಖವುಳ್ಳವಳು, ಹೆಣ್ಣು; ವಲ್ಲಭೆ: ಒಡತಿ, ಪತ್ನಿ; ವಿವಿಧ: ಹಲವಾರು; ವ್ಯೂಹ: ಗುಂಪು, ಸಮೂಹ, ದಳ ರಚನೆ; ಗುರು: ಆಚಾರ್ಯ; ನಿಂದು: ನಿಲ್ಲು; ಹುಸಿ: ಸುಳ್ಳು; ರಾತ್ರಿ: ಇರುಳು; ಭೂಪತಿ: ರಾಜ;

ಪದವಿಂಗಡಣೆ:
ತಂದೆ +ನೋಡೈ +ಕೃಷ್ಣ+ ತನ್ನಯ
ನಂದನರು +ನೂರ್ವರಿಗೆ +ಕಿರಿಯಳನ್
ಇಂದುಮುಖಿ +ದುಶ್ಶಳೆಯನ್+ಆ+ ಸೈಂಧವನ +ವಲ್ಲಭೆಯ
ಅಂದು +ವಿವಿಧ+ವ್ಯೂಹದಲಿ +ಗುರು
ನಿಂದಡೆಯು +ಹುಸಿ+ರಾತ್ರಿಯಲಿ +ನೀ
ಕೊಂದಲೈ +ತನ್ನಳಿಯನನು +ವರ +ಸಿಂಧು+ಭೂಪತಿಯ

ಅಚ್ಚರಿ:
(೧) ದುಶ್ಶಳೆ ಎಂದು ಕರೆದ ಪರಿ – ಇಂದುಮುಖಿ, ದುಶ್ಶಳೆ, ವಲ್ಲಭೆ;
(೨) ಕೃಷ್ಣನು ಸೈಂಧವನನ್ನು ಸಾಯಿಸಿದ ಪರಿ – ಹುಸಿರಾತ್ರಿಯಲಿ ನೀ ಕೊಂದಲೈ ತನ್ನಳಿಯನನು ವರ ಸಿಂಧುಭೂಪತಿಯ

ಪದ್ಯ ೯: ಕರ್ಣನು ಕೃಪಾಚಾರ್ಯರಿಗೆ ಹೇಗೆ ಉತ್ತರಿಸಿದನು?

ನೀವು ಮಾಡುವುದೇನು ರಣದಲಿ
ಕಾವೆವೆಂದಿರಿ ಸೈಂಧವನ ನಾ
ನಾವಿಧದ ವ್ಯೂಹದಲಿ ನಿಮ್ಮೀ ದ್ರೋಣನೇಗಿದನು
ತಾವು ಭಟರಾದರೆ ವಿಭಾಡಿಸಿ
ಹೇವಗೆಡಿಸುವುದುಚಿತ ಭಂಡರು
ತಾವು ಲೋಗರ ಚುನ್ನವಾಡುವರೆಂದನಾ ಕರ್ಣ (ದ್ರೋಣ ಪರ್ವ, ೧೫ ಸಂಧಿ, ೯ ಪದ್ಯ)

ತಾತ್ಪರ್ಯ:
ಕೃಪಾಚಾರ್ಯರ ಮಾತಿಗೆ ಕರ್ಣನು ಉತ್ತರಿಸುತ್ತಾ, ನೀವು ಏನು ಮಾಡಿದಿರಿ? ಸೈಂಧವನನ್ನು ಕಾಪಾಡುತ್ತೇವೆ ಎಂದಿರಿ, ನಾನಾ ವಿಧದ ವ್ಯೂಹಗಳನ್ನೊಡ್ಡಿ ದ್ರೋಣನು ಮಾದಿದ್ದಾದರೂ ಏನು? ನೀವು ವೀರರಾದರೆ ಉಳಿದವರ ಛಲವನ್ನು ಅಲ್ಲಗಳೆಯುವುದು ಸರಿಯಾದೀತು, ನೀವು ಭಂಡರು ನಾಚಿಕೆಗೆಟ್ಟವರು, ಉಳಿದವರನ್ನು ನಿಂದಿಸಿ ಮಾತನಾಡುತ್ತೀರಿ ಎಂದು ಕರ್ಣನು ನುಡಿದನು.

ಅರ್ಥ:
ರಣ: ಯುದ್ಧ; ಕಾವು: ರಕ್ಷಿಸು; ನಾನಾ: ಹಲವಾರು; ವಿಧ: ಬಗೆ; ವ್ಯೂಹ: ಗುಂಪು, ರಚನೆ; ಏಗು: ನಿಭಾಯಿಸು; ಭಟ: ಸೈನಿಕ; ವಿಭಾಡಿಸು: ನಾಶಮಾಡು; ಹೇವ: ನಾಚಿಕೆ, ಹಗೆ; ಕೆಡಿಸು: ಹಾಳುಮಾಡು; ಉಚಿತ: ಸರಿಯಾದ; ಭಂಡ: ನಾಚಿಕೆ ಇಲ್ಲದವನು; ಲೊಗರು: ಜನರು; ಚುನ್ನವಾಡು: ನಿಂದಿಸು;

ಪದವಿಂಗಡಣೆ:
ನೀವು +ಮಾಡುವುದೇನು+ ರಣದಲಿ
ಕಾವೆವ್+ಎಂದಿರಿ +ಸೈಂಧವನ+ ನಾ
ನಾ+ವಿಧದ +ವ್ಯೂಹದಲಿ +ನಿಮ್ಮೀ +ದ್ರೋಣನ್+ಏಗಿದನು
ತಾವು +ಭಟರಾದರೆ +ವಿಭಾಡಿಸಿ
ಹೇವಗೆಡಿಸುವುದ್+ಉಚಿತ +ಭಂಡರು
ತಾವು +ಲೋಗರ +ಚುನ್ನವಾಡುವರ್+ಎಂದನಾ +ಕರ್ಣ

ಅಚ್ಚರಿ:
(೧) ಕೃಪಾಚಾರ್ಯರನ್ನು ಹಂಗಿಸುವ ಪರಿ – ಭಂಡರು ತಾವು ಲೋಗರ ಚುನ್ನವಾಡುವರೆಂದನಾ ಕರ್ಣ

ಪದ್ಯ ೪೭: ಕರ್ಣನೇಕೆ ದುಃಖಿಸಿದನು?

ಕಡಲ ಮೊರಹಿನ ಲಹರಿ ಲಘುವೀ
ಪಡೆಯನೊಡೆಯಲು ಯುಗಸಹಸ್ರದೊ
ಳೊಡೆಯಬಹುದೇ ದ್ರೋಣ ರಚಿಸಿದ ವ್ಯೂಹ ಪರ್ವತವ
ಒಡೆದು ಹೋಯಿತ್ತೊಡ್ಡು ಸೈಂಧವ
ನೊಡಲು ನೀಗಿತು ತಲೆಯನಕಟಾ
ತೆಡಗಿದೆವು ದೈವದಲಿ ಕಲಹವನೆಂದನಾ ಕರ್ಣ (ದ್ರೋಣ ಪರ್ವ, ೧೪ ಸಂಧಿ, ೪೭ ಪದ್ಯ)

ತಾತ್ಪರ್ಯ:
ಆರ್ಭಟಿಸುವ ಸಮುದ್ರದ ಬೆಟ್ಟದಮ್ತಹ ಅಲೆಗಳೂ, ದ್ರೋಣನು ರಚಿಸಿದ್ದ ವ್ಯೂಹ ಪರ್ವತದ ಮುಮ್ದೆ ಅಲ್ಲ, ದ್ರೋಣನು ರಚಿಸಿದ್ದ ವ್ಯೂಹ ಪರ್ವತವನ್ನು ಸಹಸ್ರಯುಗಗಳಾದರೂ ಒಡೆಯಲಾಗುತ್ತಿತ್ತೇ? ಕಟ್ಟೆ ಒಡೆದು ಹೋಯಿತು, ಸೈಂಧವನ ತಲೆ ದೇಹವನ್ನು ಬಿಟ್ಟು ಹೋಯಿತು ಅಯ್ಯೋ ನಾವು ದೈವದೊಡನೆ ಕಲಹಕ್ಕಿಳಿದೆವು ಎಂದು ಕರ್ಣನು ದುಃಖಿಸಿದನು.

ಅರ್ಥ:
ಕಡಲು: ಸಾಗರ; ಮೊರಹು: ಬಾಗು, ಕೋಪ; ಲಹರಿ: ಅಲೆ; ಲಘು: ಕ್ಷುಲ್ಲಕವಾದುದು; ಪಡೆ: ಸೈನ್ಯ; ಒಡೆ: ಚೂರಾಗು; ಯುಗ: ಕಾಲದ ಪ್ರಮಾಣ; ಸಹಸ್ರ: ಸಾವಿರ; ವ್ಯೂಹ: ಗುಂಪು, ಸೈನ್ಯ; ಪರ್ವತ: ಬೆಟ್ಟ; ಒಡ್ಡು: ಅಡ್ಡ ಗಟ್ಟೆ; ಒಡಲು: ದೇಹ; ನೀಗು: ನಿವಾರಿಸಿಕೊಳ್ಳು; ತಲೆ: ಶಿರ; ಅಕಟ: ಅಯ್ಯೋ; ದೈವ: ಭಗವಂತ; ಕಲಹ: ಯುದ್ಧ;

ಪದವಿಂಗಡಣೆ:
ಕಡಲ +ಮೊರಹಿನ +ಲಹರಿ +ಲಘುವೀ
ಪಡೆಯನ್+ಒಡೆಯಲು +ಯುಗ+ಸಹಸ್ರದೊಳ್
ಒಡೆಯಬಹುದೇ +ದ್ರೋಣ +ರಚಿಸಿದ +ವ್ಯೂಹ +ಪರ್ವತವ
ಒಡೆದು +ಹೋಯಿತ್+ಒಡ್ಡು +ಸೈಂಧವನ್
ಒಡಲು +ನೀಗಿತು +ತಲೆಯನ್+ಅಕಟಾ
ತೆಡಗಿದೆವು +ದೈವದಲಿ +ಕಲಹವನೆಂದನಾ +ಕರ್ಣ

ಅಚ್ಚರಿ:
(೧) ಉಪಮಾನದ ಪ್ರಯೋಗ – ಕಡಲ ಮೊರಹಿನ ಲಹರಿ ಲಘುವೀಪಡೆಯನೊಡೆಯಲು
(೨) ದ್ರೋಣನ ವ್ಯೂಹದ ಶಕ್ತಿ – ಯುಗಸಹಸ್ರದೊಳೊಡೆಯಬಹುದೇ ದ್ರೋಣ ರಚಿಸಿದ ವ್ಯೂಹ ಪರ್ವತವ

ಪದ್ಯ ೬೬: ದ್ರೋಣರು ಯುದ್ಧಕ್ಕೆ ಯಾವ ಆಲೋಚನೆಯನ್ನು ಮಾಡಿದ್ದರು?

ವ್ಯೂಹವನು ರಚಿಸುವೆನು ನಾಳಿನೊ
ಳಾಹವಕೆ ತಳತಂತ್ರವೊಂದೇ
ಮೋಹರಕೆ ನಡೆತರಲಿ ಷಡುರಥರಾದಿ ಯಾದವರು
ಸಾಹಸವನುದಯದಲಿ ತೋರುವೆ
ಬಾಹುಬಲವನು ಸೈಂಧವನ ಮೈ
ಗಾಹ ಬಲಿವೆನು ಕಾಂಬೆ ಕೃಷ್ಣನ ನೆನಹ ಬಳಿಕೆಂದ (ದ್ರೋಣ ಪರ್ವ, ೮ ಸಂಧಿ, ೬೬ ಪದ್ಯ)

ತಾತ್ಪರ್ಯ:
ನಾಳೆ ನಮ್ಮ ಸೈನ್ಯವನ್ನೆಲ್ಲಾ ಒಂದೇ ಕಡೆ ಸೇರಲಿ, ಯಾದವರು, ಷಡ್ರಥರೂ ಅಲ್ಲಿಗೇ ಬರಲಿ, ನಾಳೆ ಒಂದು ವ್ಯೂಹವನ್ನು ನಾನು ರಚಿಸಿ, ನನ್ನ ಚಾತುರ್ಯ ಮತ್ತು ಪರಾಕ್ರಮವನ್ನು ತೋರುತ್ತೇನೆ. ಸೈಂಧವನ ಅಂಗರಕ್ಷಣೆಗೆ ಭದ್ರವಾದ ಕಾವಲನ್ನೇರ್ಪಡಿಸುತ್ತೇನೆ, ಆಮೇಲೆ ಕೃಷ್ಣನ ಆಲೋಚನೆಯೇನು ಎಂದು ನೋಡುತ್ತೇನೆ ಎಂದು ಕೌರವನಿಗೆ ಹೇಳಿದರು.

ಅರ್ಥ:
ವ್ಯೂಹ: ಗುಂಪು, ಸಮೂಹ; ರಚಿಸು: ನಿರ್ಮಿಸು; ಆಹವ: ಯುದ್ಧ; ತಳತಂತ್ರ: ಕಾಲಾಳುಗಳ ಪಡೆ, ಸೈನ್ಯ; ಮೋಹರ: ಯುದ್ಧ; ನಡೆತರಲಿ: ಬಂದು ಸೇರಲಿ; ಷಡುರಥ: ಆರು ಮಹಾರಥಿಕರು; ಆದಿ: ಮುಂತಾದ; ಸಾಹಸ: ಪರಾಕ್ರಮ; ಉದಯ: ಬೆಳಗ್ಗೆ; ತೋರುವೆ: ಪ್ರದರ್ಶಿಸು; ಬಾಹುಬಲ: ಪರಾಕ್ರಮ; ಮೈ: ತನು, ದೇಹ; ಮೈಗಾಹ: ದೇಹ ರಕ್ಷಣೆ; ಬಲಿ: ಗಟ್ಟಿ, ದೃಢ; ನೆನಹು: ಆಲೋಚನೆ; ಬಳಿಕ: ನಂತರ;

ಪದವಿಂಗಡಣೆ:
ವ್ಯೂಹವನು+ ರಚಿಸುವೆನು +ನಾಳಿನೊಳ್
ಆಹವಕೆ +ತಳತಂತ್ರವ್+ಒಂದೇ
ಮೋಹರಕೆ +ನಡೆತರಲಿ +ಷಡುರಥರಾದಿ+ ಯಾದವರು
ಸಾಹಸವನ್+ಉದಯದಲಿ +ತೋರುವೆ
ಬಾಹುಬಲವನು +ಸೈಂಧವನ +ಮೈ
ಗಾಹ+ ಬಲಿವೆನು +ಕಾಂಬೆ +ಕೃಷ್ಣನ+ ನೆನಹ +ಬಳಿಕೆಂದ

ಅಚ್ಚರಿ:
(೧) ಆಹವ, ಮೋಹರ – ಸಮಾನಾರ್ಥಕ ಪದಗಳು

ಪದ್ಯ ೪೦: ಯುಧಿಷ್ಠಿರನು ಯುದ್ಧವೇಕೆ ಸಾಮಾನ್ಯವೆಲ್ಲೆಂದ?

ಕಂದ ವೈರಿ ವ್ಯೂಹವಸದಳ
ವೆಂದೆನಿಪುದದರೊಳಗೆ ಕೃಪ ಗುರು
ನಂದನರು ರಾಧೇಯ ಭೂರಿಶ್ರವ ಜಯದ್ರಥರು
ಇಂದುಧರನಡಹಾಯ್ದರೊಮ್ಮಿಗೆ
ಹಿಂದು ಮುಂದೆನಿಸುವರು ನೀ ಗೆಲು
ವಂದವೆಂತೈ ಸಮರವಿದು ಸಾಮಾನ್ಯವಲ್ಲೆಂದ (ದ್ರೋಣ ಪರ್ವ, ೪ ಸಂಧಿ, ೪೦ ಪದ್ಯ)

ತಾತ್ಪರ್ಯ:
ಕಂದ ಅಭಿಮನ್ಯು, ಶತ್ರುಗಳು ಒಡ್ಡಿರುವ ವ್ಯೂಹವು ಭೇದಿಸಲು ಅಸಾಧ್ಯವೆನ್ನಿಸಿಕೊಳ್ಳುತ್ತದೆ. ಆ ವ್ಯೂಹದಲ್ಲಿ ಕೃಪ, ಅಶ್ವತ್ಥಾಮ, ಕರ್ಣ, ಭೂರಿಶ್ರವ, ಜಯದ್ರಥರು, ಶಿವನೇ ಒಮ್ಮೆ ಬಂದರೂ ಅವನು ಬೆನ್ನು ತಿರುಗಿಸುವಂತೆ ಮಾಡಬಲ್ಲರು, ನೀನು ಗೆಲ್ಲುವ ಬಗೆಯಾದರೂ ಯಾವುದು? ಇದು ಸಾಮಾನ್ಯ ಯುದ್ಧವಲ್ಲ ಎಂದು ಯುಧಿಷ್ಠಿರನು ಹೇಳಿದನು.

ಅರ್ಥ:
ಕಂದ: ಮಗು; ವೈರಿ: ಶತ್ರು; ವ್ಯೂಹ: ಸಮೂಹ; ದಳ: ಸೈನ್ಯ; ಗುರು: ಆಚಾರ್ಯ; ನಂದನ: ಮಗ; ರಾಧೇಯ: ಕೃಷ್ಣ; ಇಂದು: ಚಂದ್ರ; ಧರ: ಧರಿಸಿದವ; ಇಂದುಧರ: ಶಿವ; ಅಡಹಾಯ್ದು: ಅಡ್ಡ ಬಂದ; ಹಿಂದು: ಹಿಂಭಾಗ; ಗೆಲುವು: ಜಯ; ಸಮರ: ಯುದ್ಧ; ಸಾಮಾನ್ಯ: ಸಹಜ; ಅಸದಳ: ಅಸಾಧ್ಯ;

ಪದವಿಂಗಡಣೆ:
ಕಂದ +ವೈರಿ +ವ್ಯೂಹವ್+ಅಸದಳವ್
ಎಂದೆನಿಪುದ್+ಅದರೊಳಗೆ +ಕೃಪ +ಗುರು
ನಂದನರು +ರಾಧೇಯ +ಭೂರಿಶ್ರವ +ಜಯದ್ರಥರು
ಇಂದುಧರನ್+ಅಡಹಾಯ್ದರ್+ಒಮ್ಮಿಗೆ
ಹಿಂದು +ಮುಂದೆನಿಸುವರು +ನೀ +ಗೆಲು
ವಂದವ್+ಎಂತೈ +ಸಮರವಿದು+ ಸಾಮಾನ್ಯವಲ್ಲೆಂದ

ಅಚ್ಚರಿ:
(೧) ಪರಾಕ್ರಮಿಗಳ ಶೂರತ್ವ – ಇಂದುಧರನಡಹಾಯ್ದರೊಮ್ಮಿಗೆ ಹಿಂದು ಮುಂದೆನಿಸುವರು