ಪದ್ಯ ೮: ಪಾಂಡವರ ಸೇನೆಯಲ್ಲಿ ಏನು ಉಳಿದಿತ್ತು?

ವೈರಿಬಲದೊಳಗಾರು ಸಾವಿರ
ತೇರು ಗಜಘಟೆ ಮೂರು ಸಾವಿರ
ವಾರುವಂಗಳನೆಣಿಸಿ ತೆಗೆದರು ಹತ್ತು ಸಾವಿರವ
ವೀರಭಟರಾಯ್ತೊಂದು ಕೋಟಿ ಮ
ಹೀರಮಣ ಕೇಳುಭಯಬಲ ವಿ
ಸ್ತಾರ ಹದಿನೆಂಟೆನಿಸಿದಕ್ಷೋಹಿಣಿಯ ಶೇಷವಿದು (ಶಲ್ಯ ಪರ್ವ, ೨ ಸಂಧಿ, ೮ ಪದ್ಯ)

ತಾತ್ಪರ್ಯ:
ಪಾಂಡವರ ಸೇನೆಯಲ್ಲಿ ಆರುಸಾವಿರ ರಥಗಳು, ಮೂರು ಸಾವಿರ ಆನೆಗಳು, ಹತ್ತು ಸಾವಿರ ಕುದುರೆಗಳು, ಒಂದು ಕೋಟಿ ಕಾಲಾಳುಗಳು, ಉಳಿದಿದ್ದರು. ಎರಡೂ ಸೇನೆಗಳಲ್ಲಿ ಆರಂಭದಲ್ಲಿದ್ದ ಹದಿನೆಂಟು ಅಕ್ಷೋಹಿಣಿಗಳಲ್ಲಿ ಉಳಿದುದು ಇಷ್ಟೆ.

ಅರ್ಥ:
ವೈರಿ: ಶತ್ರು; ಬಲ: ಸೈನ್ಯ; ಸಾವಿರ: ಸಹಸ್ರ; ತೇರು: ಬಂಡಿ; ಗಜಘಟೆ: ಆನೆಯ ಗುಂಪು; ವಾರುವ: ಕುದುರೆ; ಅಂಗಳ: ಬಯಲು; ಎಣಿಸು: ಲೆಕ್ಕ ಹಾಕು; ತೆಗೆ: ಹೊರತರು; ವೀರ: ಶೂರ; ಭಟ: ಸೈನಿಕ; ಮಹೀರಮಣ: ರಾಜ; ಉಭಯ: ಎರಡು; ವಿಸ್ತಾರ: ವಿಶಾಲ; ಅಕ್ಷೋಹಿಣಿ: ೨೧೮೭೦ ಆನೆಗಳು + ೨೧೮೭೦ ರಥಗಳು + ೬೫೬೧೦ ಕುದುರೆಗಳು + ೧೦೯೩೫೦ ಕಾಲಾಳುಗಳಿರುವ ಸೈನ್ಯ ಸಮೂಹ; ಶೇಷ: ಉಳಿದ;

ಪದವಿಂಗಡಣೆ:
ವೈರಿಬಲದೊಳಗ್+ಆರು +ಸಾವಿರ
ತೇರು +ಗಜಘಟೆ +ಮೂರು +ಸಾವಿರ
ವಾರುವಂಗಳನ್+ಎಣಿಸಿ +ತೆಗೆದರು +ಹತ್ತು +ಸಾವಿರವ
ವೀರಭಟರಾಯ್ತೊಂದು+ ಕೋಟಿ +ಮ
ಹೀರಮಣ +ಕೇಳ್+ಉಭಯಬಲ +ವಿ
ಸ್ತಾರ +ಹದಿನೆಂಟೆನಿಸಿದ್+ಅಕ್ಷೋಹಿಣಿಯ +ಶೇಷವಿದು

ಅಚ್ಚರಿ:
(೧) ಸಾವಿರ – ೧-೩ ಸಾಲಿನ ಕೊನೆಯ ಪದ

ಪದ್ಯ ೧೦: ಕೌರವನ ಸಿರಿ ಏಕೆ ಸೂರೆಗೊಂಡಿತು?

ವೀರಭಟ ಭಾಳಾಕ್ಷ ಭೀಷ್ಮನು
ಸಾರಿದನು ಧಾರುಣಿಯನಕಟಾ
ಕೌರವನ ಸಿರಿ ಸೂರೆಯೋದುದೆ ಹಗೆಗೆ ಗೆಲವಾಯ್ತೆ
ಆರನಾವಂಗದಲಿ ಬರಿಸದು
ಘೋರ ವಿಧಿ ಶಿವಶಿವ ಎನುತ್ತಾ
ಸಾರಥಿಯು ಕಡುಖೇದದಲಿ ತುಂಬಿದನು ಕಂಬನಿಯ (ಭೀಷ್ಮ ಪರ್ವ, ೧೦ ಸಂಧಿ, ೧೦ ಪದ್ಯ)

ತಾತ್ಪರ್ಯ:
ವೀರಭಟರಲ್ಲಿ ಶಿವನಾದ ಭೀಷ್ಮನು ಭೂಮಿಯಲ್ಲಿ ಶರಶಯ್ಯೆಯ ಮೇಲೆ ಮಲಗಿದನು. ಕೌರವನ ಐಶ್ವರ್ಯವು ಸೂರೆಯಾಯಿತೇ! ವೈರಿಗೆ ಗೆಲುವಾಯಿತೇ! ಘೋರ ವಿಧಿಯು ಯಾರಿಗೆ ಯಾವ ಗತಿಯನ್ನು ತರುವುದೋ ಯಾರು ಬಲ್ಲರು ಶಿವ ಶಿವಾ ಎನ್ನುತ್ತಾ ಭೀಷ್ಮನ ಸಾರಥಿಯು ಕಡು ದುಃಖದಿಂದ ನೊಂದು ಕಂಬನಿ ಹರಿಸಿದನು.

ಅರ್ಥ:
ವೀರ: ಶೂರ; ಭಟ: ಸೈನಿಕ; ಭಾಳಾಕ್ಷ: ಹಣೆಯಲ್ಲಿ ಕಣ್ಣಿರುವ (ಶಿವ); ಸಾರು: ಡಂಗುರ ಹೊಡೆಸು; ಧಾರುಣಿ: ಭೂಮಿ; ಅಕಟ: ಅಯ್ಯೋ; ಸಿರಿ: ಐಶ್ವರ್ಯ; ಸೂರೆ: ಕೊಳ್ಳೆ, ಲೂಟಿ; ಹಗೆ: ವೈರ; ಗೆಲವು: ಜಯ; ಬರಿಸು: ತುಂಬು; ಘೋರ: ಭಯಂಕರವಾದ; ವಿಧಿ: ನಿಯಮ; ಸಾರಥಿ: ಸೂತ; ಕಡು: ತುಂಬ; ಖೇದ: ದುಃಖ; ತುಂಬು: ಭರ್ತಿಯಾಗು; ಕಂಬನಿ: ಕಣ್ಣೀರು;

ಪದವಿಂಗಡಣೆ:
ವೀರಭಟ +ಭಾಳಾಕ್ಷ +ಭೀಷ್ಮನು
ಸಾರಿದನು +ಧಾರುಣಿಯನ್+ಅಕಟಾ
ಕೌರವನ +ಸಿರಿ +ಸೂರೆಯೋದುದೆ +ಹಗೆಗೆ +ಗೆಲವಾಯ್ತೆ
ಆರನ್+ಆವಂಗದಲಿ+ ಬರಿಸದು
ಘೋರ +ವಿಧಿ +ಶಿವಶಿವ+ ಎನುತ್ತಾ
ಸಾರಥಿಯು +ಕಡು+ಖೇದದಲಿ +ತುಂಬಿದನು +ಕಂಬನಿಯ

ಅಚ್ಚರಿ:
(೧)ಭೀಷ್ಮರನ್ನು ಶಿವನಿಗೆ ಹೋಲಿಸುವ ಪರಿ – ವೀರಭಟ ಭಾಳಾಕ್ಷ ಭೀಷ್ಮನು
(೨) ವಿಧಿಯ ಘೋರ ಆಟ – ಆರನಾವಂಗದಲಿ ಬರಿಸದು ಘೋರ ವಿಧಿ ಶಿವಶಿವ

ಪದ್ಯ ೩೨: ಕರ್ಣನು ತನ್ನ ಸೈನಿಕ ಸಮೂಹಕ್ಕೆ ಯಾವ ಕರೆ ನೀಡಿದನು?

ವೀರಭಟರಾಹವವ ಹೊಗಿ ಜ
ಝ್ಝಾರರಿತ್ತಲು ನಡೆಯಿ ಕದನವಿ
ಚಾರಶೀಲರು ಮುಂದೆ ಹೋಗಿ ಮಹಾರಥಾದಿಗಳು
ಆರು ಬಲ್ಲರು ಸಮರ ಯಜ್ಞದ
ಸಾರವನು ಪಾಪಿಗಳಿರಕಟ ಶ
ರೀರವನು ಕೊಡಿ ಪಡೆಯಿ ಮುಕ್ತಿಯನೆಂದನಾ ಕರ್ಣ (ಕರ್ಣ ಪರ್ವ, ೮ ಸಂಧಿ, ೩೨ ಪದ್ಯ)

ತಾತ್ಪರ್ಯ:
ವೀರ ಸೈನಿಕರು ಯುದ್ಧದಲ್ಲಿ ತೊಡಗಿರಿ, ಪರಾಕ್ರಮಿಗಳು ಇತ್ತ ನಡೆಯಿರಿ, ಕದನದ ಬಗ್ಗೆ ವಿಚಾರಮಾಡುವವ ಮಹಾಪರಾಕ್ರಮಿಗಳು ಮೊದಲಾದವರು ಮುನ್ನಡೆಯಿರಿ, ಯುದ್ಧ ಯಜ್ಞದ ಸಾರವನ್ನು ಯಾರು ಬಲ್ಲರು, ಅಯ್ಯೋ ಪಾಪಿಗಳಾ ಈ ಯುದ್ಧವೆಂಬ ಯಜ್ಞದಲ್ಲಿ ನಿಮ್ಮ ಶರೀರವನ್ನು ಧಾರೆಯೆರೆದು ಮುಕ್ತಿಗೆ ಪಾತ್ರರಾಗಿರಿ ಎಂದು ಕರ್ಣನು ತನ್ನ ಸೈನಿಕ ಸಮೂಹಕ್ಕೆ ಕರೆ ನೀಡಿದನು.

ಅರ್ಥ:
ವೀರ: ಪರಾಕ್ರಮಿ; ಭಟ: ಸೈನಿಕ; ಆಹವ: ಯುದ್ಧ; ಹೊಗಿ: ಹೋಗು; ಜಝ್ಝಾರಿ: ಪರಾಕ್ರಮಿ; ನಡೆ: ಬನ್ನಿ, ಹೋಗಿ; ಕದನ: ಯುದ್ಧ; ವಿಚಾರಶೀಲ: ವಿಷಯವನ್ನು ಕೂಲಂಕುಶವಾಗಿ ಅರಿಯುವ, ಮಗ್ನರಾಗಿರುವ; ಮುಂದೆ: ಮುಂಚೂಣಿ; ಮಹಾರಥ: ಶೂರ; ಆದಿ: ಮೊದಲಾದವರು, ಮುಂತಾದವರು; ಆರು: ಯಾರು; ಬಲ್ಲರು: ತಿಳಿದವರು; ಸಮರ: ಯುದ್ಧ; ಯಜ್ಞ: ಯಾಗ, ಯಜನ; ಸಾರ: ರಸ,ತಿರುಳು, ಗುಣ; ಪಾಪಿ: ದುಷ್ಟ; ಅಕಟ: ಅಯ್ಯೊ; ಶರೀರ: ಕಾಯ, ದೇಹ; ಕೊಡಿ: ನೀಡಿ; ಪಡೆ: ತೆಗೆದುಕೊಳ್ಳಿ; ಮುಕ್ತಿ:ಬಿಡುಗಡೆ, ವಿಮೋಚನೆ;

ಪದವಿಂಗಡಣೆ:
ವೀರಭಟರ್+ಆಹವವ +ಹೊಗಿ +ಜ
ಝ್ಝಾರರ್+ಇತ್ತಲು +ನಡೆಯಿ +ಕದನ+ವಿ
ಚಾರಶೀಲರು +ಮುಂದೆ +ಹೋಗಿ +ಮಹಾರಥಾದಿಗಳು
ಆರು +ಬಲ್ಲರು +ಸಮರ +ಯಜ್ಞದ
ಸಾರವನು +ಪಾಪಿಗಳಿರ್+ಅಕಟ+ ಶ
ರೀರವನು+ ಕೊಡಿ +ಪಡೆಯಿ +ಮುಕ್ತಿಯನೆಂದನಾ ಕರ್ಣ

ಅಚ್ಚರಿ:
(೧) ಕರ್ಣನ ನುಡಿ: ಶರೀರವನು ಕೊಡಿ ಪಡೆಯಿ ಮುಕ್ತಿಯನೆಂದನಾ ಕರ್ಣ
(೨) ಆಹವ, ಸಮರ, ಕದನ – ಸಮನಾರ್ಥಕ ಪದ
(೩) ವೀರಭಟ, ಜಝ್ಝಾರಿ, ಮಹಾರಥ – ಸಮನಾರ್ಥಕ ಪದ