ಪದ್ಯ ೧೦: ಅಂತಃಪುರದಲ್ಲಿ ಯಾವ ಭೀತಿ ಹಬ್ಬಿತು?

ಅರಮನೆಗೆ ಬಂದಖಿಳ ಸಚಿವರ
ಕರಸಿದನು ಸರಹಸ್ಯವನು ವಿ
ಸ್ತರಿಸಿದನು ಸರ್ವಾಪಹಾರವ ನೃಪಪಲಾಯನವ
ಅರಸಿಯರಿದಳು ಭಾನುಮತಿ ಮಿ
ಕ್ಕರಸಿಯರಿಗರುಹಿಸಿದಳಂತಃ
ಪುರದೊಳಲ್ಲಿಂದಲ್ಲಿ ಹರೆದುದು ಕೂಡೆ ರಣಭೀತಿ (ಗದಾ ಪರ್ವ, ೪ ಸಂಧಿ, ೧೦ ಪದ್ಯ)

ತಾತ್ಪರ್ಯ:
ಪಾಳೆಯದ ಅರಮನೆಗೆ ಸಂಜಯನು ಬಂದು, ಮಂತ್ರಿಗಳನ್ನು ಅಕ್ರೆಸಿ, ಕೌರವನ ಸರ್ವವೂ ಇಲ್ಲದಂತಾಗಿದೆ. ಅರಸನು ಓಡಿಹೋಗಿದ್ದಾನೆ ಎಂಬ ಗುಟ್ಟನ್ನು ಅವರಿಗೆ ತಿಳಿಸಿದನು. ಭಾನುಮತಿಗೆ ಇದು ತಿಳಿಯಿತು, ಅವಳು ಉಳಿದ ರಾಣಿಯರಿಗೆ ತಿಳಿಸಿದಳು. ಅಂತಃಪುರದಲ್ಲಿ ಯುದ್ಧದಲ್ಲಿ ಸೋಲಾದ ಭೀತಿ ಹಬ್ಬಿತು.

ಅರ್ಥ:
ಅರಮನೆ: ರಾಜರ ಆಲಯ; ಬಂದು: ಆಗಮಿಸು; ಅಖಿಳ: ಎಲ್ಲಾ; ಸಚಿವ: ಮಂತ್ರಿ; ಕರಸು: ಬರೆಮಾಡು; ರಹಸ್ಯ: ಗುಟ್ಟು; ವಿಸ್ತರಿಸು: ವಿಸ್ತಾರವಾಗಿ ತಿಳಿಸು; ಸರ್ವ: ಎಲ್ಲವೂ; ಅಪಹಾರ: ಕಿತ್ತುಕೊಳ್ಳುವುದು; ನೃಪ: ರಾಜ; ಪಲಾಯನ: ಓಡಿಹೋಗು; ಅರಸಿ: ರಾಣಿ; ಅರಿ: ತಿಳಿ; ಮಿಕ್ಕ: ಉಳಿದ; ಅರುಹು: ತಿಳಿಸು; ಅಂತಃಪುರ: ರಾಣಿಯರ ವಾಸಸ್ಥಾನ; ಹರೆದು: ವ್ಯಾಪಿಸು; ರಣ: ಯುದ್ಧ; ಭೀತಿ: ಭಯ;

ಪದವಿಂಗಡಣೆ:
ಅರಮನೆಗೆ +ಬಂದ್+ಅಖಿಳ +ಸಚಿವರ
ಕರಸಿದನು +ಸರಹಸ್ಯವನು +ವಿ
ಸ್ತರಿಸಿದನು +ಸರ್ವ+ಅಪಹಾರವ +ನೃಪ+ಪಲಾಯನವ
ಅರಸಿ+ಅರಿದಳು +ಭಾನುಮತಿ +ಮಿ
ಕ್ಕರಸಿಯರಿಗ್+ಅರುಹಿಸಿದಳ್+ಅಂತಃ
ಪುರದೊಳ್+ಅಲ್ಲಿಂದಲ್ಲಿ +ಹರೆದುದು +ಕೂಡೆ +ರಣಭೀತಿ

ಅಚ್ಚರಿ:
(೧) ಅರಸಿ, ಮಿಕ್ಕರಸಿ, ಕರಸಿ, ವಿಸ್ತರಿಸಿ – ಪ್ರಾಸ ಪದ

ಪದ್ಯ ೬೨: ಶಲ್ಯ ಧರ್ಮಜರ ಯುದ್ಧವು ಹೇಗೆ ನಡೆಯಿತು?

ಸಾರಥಿಗೆ ಸೂಚಿಸಿ ನೃಪಾಲನ
ಸಾರೆ ದುವ್ವಾಳಿಸಲು ಮಿಗೆ ನೃಪ
ನೋರೆಗೊಂಡನು ತಿರುಗೆ ತಿರುಗಿದನೊಲೆದೊಡೊಡ ನೊಲೆದು
ಚೂರಿಸುವ ನಾರಾಚವಿಕ್ರಮ
ದೋರಣೆಗೆ ನಾರಾಚಿಸಿತು ವಿ
ಸ್ತಾರದಲಿ ವಿಸ್ತರಿಸಿದನು ಜಯಸಮರಸಾಹಸವ (ಶಲ್ಯ ಪರ್ವ, ೩ ಸಂಧಿ, ೬೨ ಪದ್ಯ)

ತಾತ್ಪರ್ಯ:
ಶಲ್ಯನು ಸಾರಥಿಗೆ ಸೂಚನೆ ಕೊಡಲು, ಅವನು ಧರ್ಮಜನ ರಥದ ಮೇಲೆ ಆಕ್ರಮಣ ಮಾಡಿದನು. ಧರ್ಮಜನು ಓರೆಗೆ ತಿರುಗಲು, ಶಲ್ಯನ ರಥವೂ ತಿರುಗಿತು. ಅವನು ಅತ್ತಿತ್ತಾ ತಿರುಗಲು ಇವನೂ ತಿರುಗಿದನು. ಅವನು ಬಾಣಗಳನ್ನು ಬಿಟ್ಟರೆ ಇವನೂ ಬಿಟ್ಟನು. ಸಮರದಲ್ಲಿ ನಿಶ್ಚಿತವಾಗಿ ಗೆಲ್ಲುವಂತಹ ಸಾಹಸವನ್ನು ಶಲ್ಯನು ತೋರಿದನು.

ಅರ್ಥ:
ಸಾರಥಿ: ಸೂತ; ಸೂಚಿಸು: ತೋರಿಸು; ನೃಪಾಲ: ರಾಜ; ಸಾರೆ: ಹತ್ತಿರ, ಸಮೀಪ; ದುವ್ವಾಳಿಸು: ಕುದುರೆ ಸವಾರಿ ಮಾಡು; ಮಿಗೆ: ಅಧಿಕ; ನೃಪ: ರಾಜ; ಓರೆ: ಡೊಂಕು; ತಿರುಗು: ಸುತ್ತು; ಒಲೆ: ತೂಗಾಡು; ಚೂರಿಸು: ಸೀಳು; ನಾರಾಚ:ಬಾಣ, ಸರಳು; ವಿಸ್ತಾರ: ವಿಶಾಲ; ವಿಸ್ತರಿಸು: ಹರಡು; ಜಯ: ಗೆಲುವು; ಸಮರ: ಯುದ್ಧ; ಸಾಹಸ: ಪರಾಕ್ರಮ; ಓರಣೆ: ಸಾಲು, ಕ್ರಮ;

ಪದವಿಂಗಡಣೆ:
ಸಾರಥಿಗೆ +ಸೂಚಿಸಿ +ನೃಪಾಲನ
ಸಾರೆ +ದುವ್ವಾಳಿಸಲು +ಮಿಗೆ +ನೃಪನ್
ಓರೆಗೊಂಡನು +ತಿರುಗೆ +ತಿರುಗಿದನ್+ಒಲೆದೊಡ್+ಒಡನೊಲೆದು
ಚೂರಿಸುವ +ನಾರಾಚ+ವಿಕ್ರಮದ್
ಓರಣೆಗೆ +ನಾರಾಚಿಸಿತು +ವಿ
ಸ್ತಾರದಲಿ +ವಿಸ್ತರಿಸಿದನು +ಜಯ+ಸಮರ+ಸಾಹಸವ

ಅಚ್ಚರಿ:
(೧) ನಾರಾಚ ಪದದ ಬಳಕೆ – ಚೂರಿಸುವ ನಾರಾಚವಿಕ್ರಮದೋರಣೆಗೆ ನಾರಾಚಿಸಿತು
(೨) ವಿಸ್ತಾರ ಪದದ ಬಳಕೆ – ವಿಸ್ತಾರದಲಿ ವಿಸ್ತರಿಸಿದನು ಜಯಸಮರಸಾಹಸವ
(೩) ಜೋಡಿ ಪದಗಳು – ತಿರುಗೆ ತಿರುಗಿದನೊಲೆದೊಡೊಡ ನೊಲೆದು

ಪದ್ಯ ೩೦: ಯಾರು ಅರಮನೆಯನ್ನು ಹೊಕ್ಕರು?

ಗುರುತನುಜ ರವಿಸೂನು ಮಾದ್ರೇ
ಶ್ವರ ಕೃಪ ದ್ರೋಣಾದಿಗಳು ಬಂ
ದರಮನೆಯ ಹೊಕ್ಕರು ನದೀ ನಂದನನ ಬಳಿವಿಡಿದು
ನೆರೆದರವನೀ ನಿರ್ಜರರು ಕೇ
ಸರಿಯ ಪೀಠವ ರಚಿಸಿ ವೈದಿಕ
ಪರಿಣತರ ಮತದಿಂದ ವಿಸ್ತರಿಸಿದರು ಮಂಗಳವ (ಭೀಷ್ಮ ಪರ್ವ, ೧ ಸಂಧಿ, ೩೦ ಪದ್ಯ)

ತಾತ್ಪರ್ಯ:
ಭೀಷ್ಮನನ್ನು ಅನುಸರಿಸಿ ಅಶ್ವತ್ಥಾಮ, ಕರ್ಣ, ಶಲ್ಯ, ಕೃಪ ದ್ರೋಣರು ಅರಮನೆಗೆ ಬಂದರು. ಬ್ರಾಹ್ಮಣರು ಬಂದು ಸಿಂಹಾಸನವನ್ನು ರಚಿಸಿ, ವೇದೋಖ್ತವಾಗಿ ಮಂಗಳ ಕಾರ್ಯವನ್ನಾರಂಭಿಸಿದರು.

ಅರ್ಥ:
ಗುರು: ಆಚಾರ್ಯ; ತನುಜ: ಮಗ; ರವಿ: ಸೂರ್ಯ; ಸೂನು: ಪುತ್ರ; ಮಾದ್ರೇಶ್ವರ: ಶಲ್ಯ; ಬಂದರು: ಆಗಮಿಸು; ಅರಮನೆ: ರಾಜರ ಆಲಯ; ಹೊಕ್ಕು: ಸೇರು; ನದೀನಂದನ: ಗಂಗಾಪುತ್ರ; ಬಳಿ: ಅನುಸರಿಸು, ದಾರಿಹಿಡಿ; ನೆರೆ: ಸೇರು; ಅವನೀ: ಭೂಮಿ; ನಿರ್ಜರ: ದೇವತೆ; ಅವನೀನಿರ್ಜರ: ಬ್ರಾಹ್ಮಣ; ಕೇಸರಿಯಪೀಠ: ಸಿಂಹಾಸನ; ರಚಿಸು: ನಿರ್ಮಿಸು; ವೈದಿಕ: ವೇದದಲ್ಲಿ ಹೇಳಿರುವ, ವೇದೋಕ್ತ; ಮತ: ವಿಚಾರ; ವಿಸ್ತರಿಸು: ಹರಡು; ಮಂಗಳ: ಶುಭ;

ಪದವಿಂಗಡಣೆ:
ಗುರುತನುಜ+ ರವಿಸೂನು +ಮಾದ್ರೇ
ಶ್ವರ +ಕೃಪ+ ದ್ರೋಣಾದಿಗಳು +ಬಂ
ದರ್+ಅರಮನೆಯ +ಹೊಕ್ಕರು +ನದೀ +ನಂದನನ +ಬಳಿವಿಡಿದು
ನೆರೆದರ್+ಅವನೀ +ನಿರ್ಜರರು +ಕೇ
ಸರಿಯ +ಪೀಠವ +ರಚಿಸಿ +ವೈದಿಕ
ಪರಿಣತರ +ಮತದಿಂದ +ವಿಸ್ತರಿಸಿದರು +ಮಂಗಳವ

ಅಚ್ಚರಿ:
(೧) ಬ್ರಾಹ್ಮಣರನ್ನು ಅವನೀನಿರ್ಜರರು; ಸಿಂಹಾಸನವನ್ನು ಕೇಶರಿಯ ಪೀಠ ಎಂದು ಕರೆದಿರುವುದು

ಪದ್ಯ ೨೨: ದುರ್ಯೋಧನನು ಯಾರಿಗೆ ಆಭರಣವನ್ನು ತೊಡಿಸಿದನು?

ನೆನೆದ ಮತವನು ತನ್ನ ತಂದೆಯ
ಮನದ ಮಚ್ಚದೊಳೊರೆದು ಕರ್ಣನ
ನೆನಹಿನಲಿ ಪುಟವಿಟ್ಟು ಶಕುನಿಯ ನೀತಿಯಲಿ ನಿಗುಚಿ
ಅನುಜಮತದಲಿ ವಿಸ್ತರಿಸಿ ಮೈ
ದುನನ ನುಡಿಯಲಿ ಬಣ್ಣವಿಟ್ಟನು
ಜನಪನಪಕೀರ್ತ್ಯಂಗನೆಗೆ ತೊಡಿಸಿದನು ಭೂಷಣವ (ಉದ್ಯೋಗ ಪರ್ವ, ೨ ಸಂಧಿ, ೨೨ ಪದ್ಯ)

ತಾತ್ಪರ್ಯ:
ಕುಮಾರವ್ಯಾಸರ ಸೃಜನಾತ್ಮಕತೆಗೆ ಈ ಪದ್ಯವು ಸಾಕ್ಷಿ. ದುರ್ಯೋಧನನು ಹೇಗೆ ಅಪಕೀರ್ತಿಯನ್ನು ಬರೆಮಾಡಿಕೊಂಡು ತಾನೆ ಅದಕ್ಕೆ ಆಭರಣವನ್ನಿಟ್ಟು ಸಿಂಗರಿಸಿದನು ಎಂದು ಅಮೋಘವಾಗಿ ವರ್ಣಿಸಲಾಗಿದೆ. ಅಪಕೀರ್ತಿಯೆಂಬ ಲಲನೆಗೆ ತನ್ನ ಮಾತಿನ ಆಭರಣವನ್ನು ತೊಡಿಸಿದನು. ತೊಡಿಸುವ ಮೊದಲು ಅದನ್ನು ತನ್ನ ತಂದೆಯ ಮನಸ್ಸೆಂಬ ಒರೆಗಲ್ಲಿನಲ್ಲಿ ತಿಕ್ಕಿ, ಕರ್ಣನ ಮನಸ್ಸಿನ ಬೆಂಕಿಯಲ್ಲಿ ಪುಟವಿಟ್ಟು, ಶಕುನಿಯ ನೀತಿಯೆಂಬ ಇಕ್ಕಳದಲ್ಲಿ ಹೊರತೆಗೆದು, ದುಶ್ಯಾಸನ ಅಭಿಪ್ರಾಯದಲ್ಲಿ ಕುಟ್ಟಿ ತನ್ನ ವಿಚಾರದ ಆಭರಣವನ್ನು ಮಾಡಿ ಜಯದ್ರಥನ ಅಭಿಪ್ರಾಯದಲ್ಲಿ ಬಣ್ಣತುಂಬೆ ಅಪಕೀರ್ತಿಯ ಲಲನೆಗೆ ತೊಡಿಸಿದನು.

ಅರ್ಥ:
ನೆನೆ: ಆಲೋಚಿಸು, ಸ್ಮರಿಸು; ಮತ: ವಿಚಾರ; ತಂದೆ: ಅಪ್ಪ, ತೀರ್ಥರೂಪ; ಮನ: ಮನಸ್ಸು; ಮಚ್ಚ: ಒರೆಗಲ್ಲು; ಒರೆ:ಉಜ್ಜುವಿಕೆ; ನೆನಹು: ಚಿತ್ತ, ಮನಸ್ಸು; ಪುಟ:ಪದರ, ಕೌಪೀನ; ನೀತಿ:ಮಾರ್ಗ ದರ್ಶನ; ನಿಗುಚಿ:ಹೊರಚಾಚು; ಅನುಜ: ತಮ್ಮ; ಮತ: ವಿಚಾರ; ವಿಸ್ತರಿಸು: ಹಬ್ಬುಗೆ, ವಿವರಣೆ; ನುಡಿ: ಮಾತು; ಬಣ್ಣವಿಟ್ಟು: ಚೆಂದವಾಗಿ ಹೇಳಿ; ಜನಪ: ರಾಜ; ಅಪಕೀರ್ತಿ: ಅಪಯಶಸ್ಸು; ಅಂಗನೆ: ಲಲನೆ; ತೊಡಿಸು: ಹಾಕು; ಭೂಷಣ: ಆಭರಣ;

ಪದವಿಂಗಡಣೆ:
ನೆನೆದ +ಮತವನು +ತನ್ನ +ತಂದೆಯ
ಮನದ +ಮಚ್ಚದೊಳ್+ಒರೆದು +ಕರ್ಣನ
ನೆನಹಿನಲಿ +ಪುಟವಿಟ್ಟು +ಶಕುನಿಯ +ನೀತಿಯಲಿ +ನಿಗುಚಿ
ಅನುಜ+ಮತದಲಿ +ವಿಸ್ತರಿಸಿ+ ಮೈ
ದುನನ+ ನುಡಿಯಲಿ +ಬಣ್ಣವಿಟ್ಟನು
ಜನಪನ್+ಅಪಕೀರ್ತಿ+ಅಂಗನೆಗೆ+ ತೊಡಿಸಿದನು+ ಭೂಷಣವ

ಅಚ್ಚರಿ:
(೧) ಅಪಕೀರ್ತಿಯನ್ನು ಬರೆಮಾಡಿಕೊಂಡನು ಎಂದು ವಿಶೇಷವಾಗಿ ತಿಳಿಸಿರುವುದು
(೨) ಒರೆದು, ಪುಟವಿಟ್ಟು, ನಿಗುಚಿ, ವಿಸ್ತರಿಸಿ, ಬಣ್ಣವಿಟ್ಟು – ಹೇಗೆ ತನ್ನ ಮಾತುಗಳನ್ನು ಮೊನಚುಗೊಳಿಸಿದ
(೩) ಮನದ ಮಚ್ಚದೊಳ್, ನೀತಿಯಲಿ ನಿಗುಚಿ – ಜೋಡಿ ಪದ