ಪದ್ಯ ೪೫: ಪಾಂಡವರು ಜಯವಾಗಲು ಕಾರಣವೇನು?

ಬರುತ ಸಂಜಯ ದೂರದಲಿ ಕೃಪ
ಗುರುಸುತರ ಕೃತವರ್ಮಕನ ಕಂ
ಡರಿರಥಿಗಳಿವರಲ್ಲಲೇ ಶಿವಶಿವ ಮಹಾದೇವ
ಭರತಕುಲ ಮೊದಲೊಂದು ಬಳಿಕಾ
ಯ್ತೆರಡುಕವಲೊಬ್ಬರಿಗೆ ಜಯವಿ
ಸ್ತರಣ ಗದುಗಿನ ವೀರನಾರಾಯಣನ ಕರುಣದಲಿ (ಗದಾ ಪರ್ವ, ೩ ಸಂಧಿ, ೪೫ ಪದ್ಯ)

ತಾತ್ಪರ್ಯ:
ಸಂಜಯನು ದೂರದಲ್ಲಿ ಕೃಪ, ಅಶ್ವತ್ಥಾಮ, ಕೃತವರ್ಮರನ್ನು ನೋಡಿ, ಇವರು ಶತ್ರುರಥಿಕರಾಗಿರಲಾರರು ಎಂದುಕೊಂಡನು. ಭರತಕುಲ ಒಂದಾಗಿದ್ದುದು ಬಳಿಕ ಎರಡಾಯ್ತು. ಒಂದು ಪಕ್ಷಕ್ಕೆ ಶ್ರೀಕೃಷ್ಣನ ದಯೆಯಿಂದ ಜಯವುಂಟಾಯಿತು ಎಂದು ಚಿಂತಿಸಿದನು.

ಅರ್ಥ:
ಬರುತ: ಆಗಮಿಸು; ದೂರ: ಅಂತರ; ಗುರು: ಆಚಾರ್ಯ; ಸುತ: ಮಗ; ಕಂಡು: ನೋಡಿ; ಅರಿ: ವೈರಿ; ರಥಿ: ರಥದಲ್ಲಿ ಕುಳಿತು ಯುದ್ಧ ಮಾಡುವವನು, ಪರಾಕ್ರಮ; ಕುಲ: ವಂಶ; ಬಳಿಕ: ನಂತರ; ಕವಲು: ವಂಶ ಯಾ ಕುಲದ ಶಾಖೆ; ಜಯ: ಗೆಲುವು; ವಿಸ್ತರಣ: ಹಬ್ಬುಗೆ, ವಿಸ್ತಾರ; ಕರುಣ: ದಯೆ;

ಪದವಿಂಗಡಣೆ:
ಬರುತ +ಸಂಜಯ +ದೂರದಲಿ +ಕೃಪ
ಗುರುಸುತರ +ಕೃತವರ್ಮಕನ +ಕಂಡ್
ಅರಿ+ರಥಿಗಳ್+ಇವರಲ್ಲಲೇ +ಶಿವಶಿವ +ಮಹಾದೇವ
ಭರತಕುಲ+ ಮೊದಲೊಂದು +ಬಳಿಕಾಯ್ತ್
ಎರಡು+ಕವಲ್+ಒಬ್ಬರಿಗೆ +ಜಯ+ವಿ
ಸ್ತರಣ +ಗದುಗಿನ +ವೀರನಾರಾಯಣನ +ಕರುಣದಲಿ

ಅಚ್ಚರಿ:
(೧) ಆಶ್ಚರ್ಯವನ್ನು ಸೂಚಿಸುವ ಪರಿ – ಶಿವಶಿವ ಮಹಾದೇವ

ಪದ್ಯ ೪೨: ದುರ್ಯೋಧನನು ಜಲಸ್ತಂಭನಕ್ಕೆ ಹೇಗೆ ತಯಾರಾದನು?

ಚರಣವದನಕ್ಷಾಲನಾಂತಃ
ಕರಣಶುದ್ಧಿಯಲಾಚಮನವಿ
ಸ್ತರಣದಲಿ ಸತ್ಪ್ರಣವವಂಗನ್ಯಾಸವಿಧಿಗಳಲಿ
ವರುಣ ಮಂತ್ರಾಕ್ಷರದ ಜಪಪರಿ
ಕರಣದಲಿ ನಿರ್ಣಿಕ್ತ ಚೇತಃ
ಸ್ಫುರಣ ಸಲಿಲಸ್ತಂಭನವನವನೀಶ ಮಂತ್ರಿಸಿದ (ಗದಾ ಪರ್ವ, ೩ ಸಂಧಿ, ೪೨ ಪದ್ಯ)

ತಾತ್ಪರ್ಯ:
ಕಾಲು, ಮುಖಗಳನ್ನು ತೊಳೆದು, ಶುದ್ಧಮನಸ್ಸಿನಿಂದ ಆಚಮನವನ್ನು ಮಾಡಿ, ಪ್ರಣವಪೂರ್ವಕವಾಗಿ ಅಂಗನ್ಯಾಸಾದಿಗಳನ್ನು ಮಾಡಿ ವರುಣ ಮಂತ್ರಾಕ್ಷರಗಳನ್ನು ಜಪಿಸಿ ಅಂತರಂಗದಲ್ಲಿ ಜಲಸ್ತಂಭ ಮಂತ್ರವನ್ನು ಜಪಿಸಿದನು.

ಅರ್ಥ:
ಚರಣ: ಪಾದ; ವದನ: ಮುಖ; ಅಂತಃಕರಣ: ಒಳಮನಸ್ಸು; ಶುದ್ಧಿ: ನಿರ್ಮಲ; ಆಚಮನ: ಅಂಗೈಯಲ್ಲಿ ನೀರನ್ನು ಹಾಕಿಕೊಂಡು ಮಂತ್ರಪೂರ‍್ವಕವಾಗಿ ಸೇವಿಸುವುದು; ವಿಸ್ತರಣ: ವಿಶಾಲ; ಪ್ರಣವ: ಓಂಕಾರ; ಅಂಗ: ದೇಹದ ಭಾಗ; ನ್ಯಾಸ: ಜಪ ಮತ್ತು ಪೂಜೆಯ ಕಾಲಗಳಲ್ಲಿ ಮಂತ್ರಪೂರ್ವಕವಾಗಿ ಅಂಗಗಳನ್ನು ಮುಟ್ಟಿಕೊಳ್ಳುವಿಕೆ; ವಿಧಿ: ನಿಯಮ; ವರುಣ: ನೀರಿನ ಅಧಿದೇವತೆ; ಮಂತ್ರ: ವೇದದಲ್ಲಿರುವ ಛಂದೋ ಬದ್ಧವೂ ಪವಿತ್ರವೂ ಆದ ದೇವತಾಸ್ತುತಿ; ಜಪ: ಮಂತ್ರವನ್ನು ವಿಧಿಪೂರ್ವಕವಾಗಿ ಮತ್ತೆ ಮತ್ತೆ ಮೆಲ್ಲನೆ ಉಚ್ಚರಿಸುವುದು; ಪರಿಕರಣ: ಸಲಕರಣೆ, ಸಾಮಗ್ರಿ; ನಿರ್ಣಿಕ್ತ: ಶುದ್ಧಗೊಳಿಸಲ್ಪಟ್ಟ; ಚೇತ: ಮನಸ್ಸು; ಸ್ಫುರಣ: ಹೊಳಪು; ಸಲಿಲ: ಜಲ; ಸ್ತಂಭ: ಸ್ಥಿರವಾಗಿರುವಿಕೆ, ನಿಶ್ಚಲತೆ; ಅವನೀಶ: ರಾಜ; ಮಂತ್ರಿಸು: ಉಚ್ಚರಿಸು;

ಪದವಿಂಗಡಣೆ:
ಚರಣ+ವದನಕ್ಷಾಲನ್+ಅಂತಃ
ಕರಣ+ಶುದ್ಧಿಯಲ್+ಆಚಮನ+ವಿ
ಸ್ತರಣದಲಿ +ಸತ್ಪ್ರಣವವ್+ಅಂಗನ್ಯಾಸ+ವಿಧಿಗಳಲಿ
ವರುಣ +ಮಂತ್ರಾಕ್ಷರದ+ ಜಪ+ಪರಿ
ಕರಣದಲಿ +ನಿರ್ಣಿಕ್ತ+ ಚೇತಃ
ಸ್ಫುರಣ +ಸಲಿಲ+ಸ್ತಂಭನವನ್+ಅವನೀಶ +ಮಂತ್ರಿಸಿದ

ಅಚ್ಚರಿ:
(೧) ಚರಣ, ವರುಣ, ವಿಸ್ತರಣ, ಸ್ಫುರಣ, ಪರಿಕರಣ, ಕರಣ – ಪ್ರಾಸ ಪದಗಳು

ಪದ್ಯ ೨೧: ಲೋಕಗಳನ್ನು ಯಾರು ಸೃಷ್ಟಿಸುತ್ತಾರೆ?

ಮರಳಿ ಹೂಡಿದನೀಜಗದ ವಿ
ಸ್ತರಣವನು ಮಾಯಾ ಮಹೋದಧಿ
ಹೊರೆದನುನ್ನತ ಸತ್ವದಲಿ ಮೇಲಾದ ಲೋಕಗಳ
ಉರಿಯಲದ್ದುವನಿವನು ಲೀಲಾ
ಚರಿತವಿದು ಕೃಷ್ಣಂಗೆ ನಿನ್ನಯ
ಸಿರಿಯ ಸಿರಿ ಬಡತನವೆ ಬಡತನವೆಂದನಾ ಮುನಿಪ (ಅರಣ್ಯ ಪರ್ವ, ೧೫ ಸಂಧಿ, ೨೧ ಪದ್ಯ)

ತಾತ್ಪರ್ಯ:
ತನ್ನ ಮಾಯಾಸಾಗರದಲ್ಲಿ ಮತ್ತೆ ಈ ಲೋಕಗಲನ್ನು ಅಣಿಮಾಡಿ ಸೃಷ್ಟಿಸಿದನು. ಈ ಲೋಕವನ್ನು ಮಹಾಸತ್ವನಾದ ಇವನು ಕಾಪಾಡುತ್ತಾನೆ. ಮತ್ತೆ ಸುಟ್ಟು ಹಾಕುತ್ತಾನೆ. ಇದು ಕೃಷ್ಣನ ಲೀಲೆ ಮತ್ತು ಆಚರಣೆ, ನಿನ್ನ ಕರ್ಮದ ದೆಸೆಯಿಂದಾಗುವ ಸಂಪತ್ತೇ ಸಂಪತ್ತು, ಮತ್ತು ಬಡತನವೇ ಬಡತನ ಆದರೆ ಕೃಷ್ಣನಿಗೆ ಕರ್ಮದ ಲೇಪವಿಲ್ಲ ಎಂದು ವೈಶಂಪಾಯನರು ಜನಮೇಜಯನಿಗೆ ಹೇಳಿದರು.

ಅರ್ಥ:
ಮರಳಿ: ಮತ್ತೆ; ಹೂಡು: ಅಣಿಗೊಳಿಸು; ಜಗ: ಜಗತ್ತು, ಪ್ರಪಂಚ; ವಿಸ್ತರಣ: ವಿಶಾಲ; ಮಾಯ: ಗಾರುಡಿ, ಇಂದ್ರಜಾಲ; ಮಹಾ: ದೊಡ್ಡ; ಉದಧಿ: ಸಾಗರ; ಹೊರೆ: ರಕ್ಷಣೆ, ಆಶ್ರಯ; ಉನ್ನತ: ಹೆಚ್ಚಿನ; ಸತ್ವ: ಶಕ್ತಿ, ಸಾರ; ಲೋಕ: ಜಗತ್ತು; ಉರಿ: ಸುಡು; ಅದ್ದು: ಮುಳುಗಿಸು; ಲೀಲೆ: ಆನಂದ, ಸಂತೋಷ; ಚರಿತ: ನಡೆದುದು, ಗತಿ; ಸಿರಿ: ಐಶ್ವರ್ಯ; ಬಡತನ: ಕೊರತೆ, ಅಭಾವ; ಮುನಿ: ಋಷಿ;

ಪದವಿಂಗಡಣೆ:
ಮರಳಿ +ಹೂಡಿದನ್+ಈ+ಜಗದ +ವಿ
ಸ್ತರಣವನು +ಮಾಯಾ +ಮಹಾ+ಉದಧಿ
ಹೊರೆದನ್+ಉನ್ನತ +ಸತ್ವದಲಿ +ಮೇಲಾದ +ಲೋಕಗಳ
ಉರಿಯಲ್+ಅದ್ದುವನ್+ಇವನು +ಲೀಲಾ
ಚರಿತವಿದು+ ಕೃಷ್ಣಂಗೆ +ನಿನ್ನಯ
ಸಿರಿಯ +ಸಿರಿ +ಬಡತನವೆ+ ಬಡತನವ್+ಎಂದನಾ +ಮುನಿಪ

ಅಚ್ಚರಿ:
(೧) ಕೃಷ್ಣನ ಲೀಲೆ – ಉರಿಯಲದ್ದುವನಿವನು ಲೀಲಾಚರಿತವಿದು ಕೃಷ್ಣಂಗೆ

ಪದ್ಯ ೫: ದ್ರೌಪದಿ ಯಾರ ಬಳಿ ಬಂದು ತನ್ನ ಮನೋರಥವನ್ನು ಹೇಳಿದಳು?

ಅರಸನಲಿ ಮೇಣ್ ನಕುಲ ಸಹದೇ
ವರಲಿ ತನ್ನ ಮನೋರಥಕೆ ವಿ
ಸ್ತರಣವಾಗದು ನುಡಿವಡಿಲ್ಲರ್ಜುನ ಸಮೀಪದಲಿ
ಅರಿಭಯಂಕರ ಭೀಮನೇ ಗೋ
ಚರಿಸುವನಲಾಯೆನುತಲಾತನ
ಹೊರೆಗೆ ಬಂದಳು ನಗುತ ನುಡಿದಲು ಮಧುರ ವಚನದಲಿ (ಅರಣ್ಯ ಪರ್ವ, ೧೧ ಸಂಧಿ, ೫ ಪದ್ಯ)

ತಾತ್ಪರ್ಯ:
ದ್ರೌಪದಿಯನ್ನು ಆ ಸುಗಂಧ ಹೂವಿನ ಪರಿಮಳ ಆಕರ್ಷಿಸಿತು. ಅದನ್ನು ನೋಡಲು ಬಯಸಿದ ಆಕೆ, ಧರ್ಮಜ, ನಕುಲ ಅಥವ ಸಹದೇವರಿಂದ ನನ್ನ ಆಶೆಯು ಪೂರೈಸಲಾಗುವುದಿಲ್ಲ ಎಂದು ಅರಿತು, ಅರ್ಜುನನು ಸಮೀಪದಲ್ಲಿರದ ಕಾರಣ, ವೈರಿಗಳಲ್ಲಿ ಭಯವನ್ನುಂಟುಮಾಡುವ ಭೀಮನೇ ಈ ಕಾರ್ಯಕ್ಕೆ ಸರಿಯೆಂದು ತಿಳಿದು ದ್ರೌಪದಿಯು ಆತನ ಬಳಿಗೆ ಹೋಗಿ ಮಧುರ ವಚನದಿಂದ ಹೀಗೆ ಹೇಳಿದಳು.

ಅರ್ಥ:
ಅರಸ: ರಾಜ; ಮೇಣ್: ಅಥವ; ಮನೋರಥ: ಕಾಮನೆ, ಆಸೆ; ವಿಸ್ತರಣ: ಹರಡು, ವಿಸ್ತಾರ; ನುಡಿ: ಮಾತು; ಸಮೀಪ: ಹತ್ತಿರ; ಅರಿ: ವೈರಿ; ಭಯಂಕರ: ಸಾಹಸಿ, ಗಟ್ಟಿಗ; ಗೋಚರಿಸು: ತೋರು; ಹೊರೆ: ಆಶ್ರಯ,ರಕ್ಷಣೆ; ಬಂದು: ಆಗಮಿಸು; ನಗು: ಸಂತಸ; ನುಡಿ: ಮಾತಾಡು; ಮಧುರ: ಸಿಹಿ; ವಚನ: ನುಡಿ, ಮಾತು;

ಪದವಿಂಗಡಣೆ:
ಅರಸನಲಿ +ಮೇಣ್ +ನಕುಲ +ಸಹದೇ
ವರಲಿ +ತನ್ನ +ಮನೋರಥಕೆ +ವಿ
ಸ್ತರಣವಾಗದು +ನುಡಿವಡಿಲ್ಲ್+ಅರ್ಜುನ +ಸಮೀಪದಲಿ
ಅರಿ+ಭಯಂಕರ+ ಭೀಮನೇ +ಗೋ
ಚರಿಸುವನಲಾ+ಎನುತಲ್+ಆತನ
ಹೊರೆಗೆ +ಬಂದಳು +ನಗುತ +ನುಡಿದಲು +ಮಧುರ +ವಚನದಲಿ

ಅಚ್ಚರಿ:
(೧) ಭೀಮನನ್ನು ಪರಿಚಯಿಸುವ ಪರಿ – ಅರಿಭಯಂಕರ
(೨) ಕೋರಿಕೆಯನ್ನು ತಿಳಿಸುವ ಮುನ್ನ – ಆತನ ಹೊರೆಗೆ ಬಂದಳು ನಗುತ ನುಡಿದಲು ಮಧುರ ವಚನದಲಿ

ಪದ್ಯ ೧೫: ಪರಶುರಾಮರು ಎಷ್ಟು ಬಾರಿ ಕ್ಷತ್ರಿಯರನ್ನು ಸಂಹಾರ ಮಾಡಿದರು?

ಪರಶುರಾಮನ ಕಾರ್ತವೀರ್ಯನ
ಧುರದೊಳಿಪ್ಪತ್ತೊಂದು ಸೂಳಿನೊ
ಳರಿದರಾಯರ ಕಂಠನಾಳದ ನೆತ್ತರಿನ ನದಿಯ
ಪರಮ ಪಿತೃತರ್ಪಣವನಾತನ
ಪರಶುವಿನ ನೆಣವಸೆಯ ತೊಳಹದ
ವರನದಿಯ ವಿಸ್ತರಣವನು ಕೇಳಿದನು ಯಮಸೂನು (ಅರಣ್ಯ ಪರ್ವ, ೧೦ ಸಂಧಿ, ೧೫ ಪದ್ಯ)

ತಾತ್ಪರ್ಯ:
ಪರಶುರಾಮರು ಮಾಡಿದ ಕಾರ್ತಿವೀರ್ಯನ ಸಂಹಾರ, ಇಪ್ಪತ್ತೊಂದು ಬಾರಿ ಕ್ಷತ್ರಿಯರನ್ನು ಸಂಹರಿಸಿದ್ದು, ಅವರ ಕಂಠನಾಳದಿಂದ ಹರಿದ ರಕ್ತ ತರ್ಪಣವನ್ನು ಪಿತೃಗಳಿಗೆ ಕೊಟ್ಟಿದ್ದು, ಆ ರಕ್ತ ನದಿಯ ವಿವರಗಳೆಲ್ಲವನ್ನೂ ಯುಧಿಷ್ಠಿರನು ಕೇಳಿದನು.

ಅರ್ಥ:
ಧುರ: ಯುದ್ಧ, ಕಾಳಗ; ಸೂಳು: ಆವೃತ್ತಿ, ಬಾರಿ; ಅರಿ: ಕತ್ತರಿಸು; ರಾಯ: ರಾಜ; ಕಂಠ: ಕೊರಳು; ನೆತ್ತರು: ರಕ್ತ; ನದಿ: ಕೂಲವತಿ; ಪರಮ: ಶ್ರೇಷ್ಠ; ಪಿತೃ: ಪೂರ್ವಜ; ತರ್ಪಣ: ತೃಪ್ತಿಪಡಿಸುವಿಕೆ, ತಣಿವು; ಪರಶು: ಕೊಡಲಿ, ಕುಠಾರ; ನೆಣವಸೆ: ಹಸಿಯಾದ ಕೊಬ್ಬು; ನೆಣ: ಕೊಬ್ಬು; ತೊಳಸು: ಕಾದಾಟ; ವರನದಿ: ಶ್ರೇಷ್ಠವಾದ ಸರೋವರ; ವಿಸ್ತರಣ: ವ್ಯಾಪ್ತಿ; ಸೂನು: ಮಗ;

ಪದವಿಂಗಡಣೆ:
ಪರಶುರಾಮನ +ಕಾರ್ತವೀರ್ಯನ
ಧುರದೊಳ್+ಇಪ್ಪತ್ತೊಂದು +ಸೂಳಿನೊಳ್
ಅರಿದ+ರಾಯರ +ಕಂಠನಾಳದ +ನೆತ್ತರಿನ +ನದಿಯ
ಪರಮ +ಪಿತೃ+ತರ್ಪಣವನ್+ಆತನ
ಪರಶುವಿನ +ನೆಣವಸೆಯ +ತೊಳಹದ
ವರನದಿಯ +ವಿಸ್ತರಣವನು +ಕೇಳಿದನು +ಯಮಸೂನು

ಅಚ್ಚರಿ:
(೧) ಸಾಯಿಸಿದನು ಎಂದು ಹೇಳುವ ಪರಿ – ಸೂಳಿನೊಳರಿದರಾಯರ ಕಂಠನಾಳದ ನೆತ್ತರಿನ ನದಿಯ

ಪದ್ಯ ೨೨: ಅರ್ಜುನನು ಯಾವ ಯೋಚನೆಯೊಂದಿಗೆ ದ್ವಾರಕಿಗೆ ಬಂದನು?

ಪುರವ ಹೊರವಂಟೆಂಟು ತಿಂಗಳು
ಪರಿಹರಿಸಿತೀ ಕೃಷ್ಣರಾಯನ
ಪುರದೊಳಗೆ ನೂಕುವೆನು ವರ್ಷಾಕಾಲ ವಿಭ್ರಮವ
ವರುಷವೊಂದು ಸಮಾಪ್ತಿ ಬಳಿಕಿನೊ
ಳರಸನಂಘ್ರಿವಿಲೋಕನಾ ವಿ
ಸ್ತರಣವಹುದೆಂದಾತ ನಿಶ್ಚೈಸಿದನು ಮನದೊಳಗೆ (ಆದಿ ಪರ್ವ, ೧೯ ಸಂಧಿ, ೨೨ ಪದ್ಯ)

ತಾತ್ಪರ್ಯ:
ದ್ವಾರಕಿಯ ದಾರಿಯಲ್ಲಿ ಅರ್ಜುನನ ಮನದಾಳದ ಮಾತು ಹೀಗಿತ್ತು, ಊರನ್ನು ಬಿಟ್ಟು ಎಂಟು ತಿಂಗಳುಗಳಾದವು, ಇನ್ನು ಈ ಮಳೆಗಾಲವನ್ನು ದ್ವಾರಕಿಯಲ್ಲಿ ಕಳೆದರೆ ವರ್ಷ ಮುಗಿಯುತ್ತದೆ, ನಂತರ ನಮ್ಮಣ್ಣನ ಪಾದದರ್ಶನ ಮಾಡುತ್ತೇನೆ.

ಅರ್ಥ:
ಪುರ: ಊರು; ಹೊರವಂಟು: ಬಿಟ್ಟು; ತಿಂಗಳು: ಮಾಸ; ಪರಿಹರಿಸು: ನಿವಾರಿಸು; ನೂಕು:ತಳ್ಳು; ವರ್ಷ: ಮಳೆ; ವಿಭ್ರಮ:ಸುತ್ತಾಟ, ಅಲೆದಾಟ; ವರುಷ: ಸಂವತ್ಸರ; ಸಮಾಪ್ತಿ: ಮುಕ್ತಾಯ; ಬಳಿಕ: ನಂತರ; ಅರಸ: ರಾಜ; ಅಂಘ್ರಿ: ಪಾದ; ವಿಲೋಕನ: ನೋಟ, ದೃಷ್ಟಿ; ವಿಸ್ತರಣ: ಹಬ್ಬಿದುದು; ನಿಶ್ಚೈಸು: ನಿರ್ಧರಿಸು; ಮನ: ಮನಸ್ಸು;

ಪದವಿಂಗಡಣೆ:
ಪುರವ +ಹೊರವಂಟ್+ಎಂಟು +ತಿಂಗಳು
ಪರಿಹರಿಸಿತ್+ಈ+ ಕೃಷ್ಣ+ರಾಯನ
ಪುರದೊಳಗೆ +ನೂಕುವೆನು +ವರ್ಷಾ+ಕಾಲ+ ವಿಭ್ರಮವ
ವರುಷವೊಂದು +ಸಮಾಪ್ತಿ +ಬಳಿಕಿನೊಳ್
ಅರಸನ್+ಅಂಘ್ರಿ+ವಿಲೋಕನಾ +ವಿ
ಸ್ತರಣ+ವಹುದ್+ಎಂದಾತ+ ನಿಶ್ಚೈಸಿದನು +ಮನದೊಳಗೆ

ಅಚ್ಚರಿ:
(೧) ಪುರ: ೧,೩ ಸಾಲಿನ ಮೊದಲ ಪದ
(೨) ರಾಯ, ಅರಸ – ಸಮನಾರ್ಥಕ ಪದ