ಪದ್ಯ ೧೭: ಕೃಷ್ಣನು ಪಾರ್ಥನಿಗೆ ಯಾರ ಆಗಮನದ ಬಗ್ಗೆ ಹೇಳಿದ?

ನಿಜವರೂಥದಲಂದು ಕೌರವ
ವಿಜಯ ಮಾರುತಿ ಹೊಕ್ಕು ರಿಪು ಭೂ
ಭುಜರನರೆಯಟ್ಟಿದನು ಬಹಳಿತ ಸಿಂಹನಾದದಲಿ
ತ್ರಿಜಗ ತಲ್ಲಣಿಸಿದುದು ವರ ವಾ
ರಿಜವಿಲೋಚನ ಕೇಳಿದನು ಪವ
ನಜನ ಪಡಿಬಲ ಬಂದುದೆಮದರುಹಿದನು ಪಾರ್ಥಂಗೆ (ದ್ರೋಣ ಪರ್ವ, ೧೩ ಸಂಧಿ, ೧೭ ಪದ್ಯ)

ತಾತ್ಪರ್ಯ:
ಕೌರವರನ್ನು ಗೆದ್ದ ಭೀಮನು ತನ್ನ ರಥದಲ್ಲಿ ಕುಳಿತು ಸಿಂಹನಾದ ಮಾಡುತ್ತಾ ಶತ್ರುರಾಜರನ್ನರೆಯಟ್ಟಿದನು. ಮೂರು ಲೋಕಗಳೂ ಅವನ ಆರ್ಭಟಕ್ಕೆ ತಲ್ಲಣಿಸಿದವು. ಭೀಮನ ಕೂಗನ್ನು ಶ್ರೀಕೃಷ್ಣನು ಕೇಳಿ, ಭೀಮನ ಸಹಾಯ ಬಂದಿತು ಎಂದು ಅರ್ಜುನನಿಗೆ ಹೇಳಿದನು.

ಅರ್ಥ:
ನಿಜ: ತನ್ನ; ವರೂಥ:ತೇರು, ರಥ; ವಿಜಯ: ಗೆಲುವು; ಮಾರುತಿ: ಹನುಮ; ಹೊಕ್ಕು: ಸೇರು; ರಿಪು: ವೈರಿ; ಭೂಭುಜ: ಅರಸು; ಅಟ್ಟು: ಹಿಂಬಾಲಿಸು; ಬಹಳ: ತುಂಬ; ಸಿಂಹನಾದ: ಗರ್ಜನೆ; ತ್ರಿಜಗ: ಮೂರು ಪ್ರಪಂಚ; ತಲ್ಲಣ: ಅಂಜಿಕೆ, ಭಯ; ವರ: ಶ್ರೇಷ್ಠ; ವಾರಿಜ: ಕಮಲ ವಿಲೋಚನ: ಕಣ್ಣು; ಕೇಳು: ಆಲಿಸು; ಪವನಜ: ವಾಯುಪುತ್ರ (ಭೀಮ); ಪಡಿಬಲ: ಅಗತ್ಯಕ್ಕೆ ಸಹಾಯಕವಾಗಿ ಬರುವ ದೊಡ್ಡಪಡೆ; ಬಂದುದು: ಆಗಮಿಸು; ಅರುಹು: ಹೇಳು, ತಿಳಿಸು;

ಪದವಿಂಗಡಣೆ:
ನಿಜ+ವರೂಥದಲ್+ಅಂದು +ಕೌರವ
ವಿಜಯ +ಮಾರುತಿ +ಹೊಕ್ಕು +ರಿಪು +ಭೂ
ಭುಜರನ್+ಅರೆ+ಅಟ್ಟಿದನು +ಬಹಳಿತ +ಸಿಂಹನಾದದಲಿ
ತ್ರಿಜಗ +ತಲ್ಲಣಿಸಿದುದು +ವರ +ವಾ
ರಿಜ+ವಿಲೋಚನ +ಕೇಳಿದನು +ಪವ
ನಜನ +ಪಡಿಬಲ +ಬಂದುದೆಮದ್+ಅರುಹಿದನು +ಪಾರ್ಥಂಗೆ

ಅಚ್ಚರಿ:
(೧) ಕೃಷ್ಣನನ್ನು ವರ ವಾರಿಜ ವಿಲೋಚನ ಎಂದು ಕರೆದಿರುವುದು

ಪದ್ಯ ೫: ಅರ್ಜುನನು ಕಣ್ಣೀರಿಡುತ್ತಾ ಯಾರನ್ನು ಕರೆದನು?

ಆ ಸುತನ ಶೋಕದ ಮರುಕವಾ
ಕಾಶ ವಚನದೊಳಾಯ್ತು ಶಿವ ಶಿವ
ವಾಸುದೇವ ಎನುತ್ತ ಫಲುಗುಣ ಜಲವ ಬಗಿದೆದ್ದು
ಘಾಸಿಯಾದನು ಮಗನಕಟ ಸಂ
ತೋಷವೆಲ್ಲಿಯದೆನುತ ಮಾಯಾ
ವೇಷಿಯನು ಕರೆದನು ವಿಲೋಚನ ವಾರಿಪೂರದಲಿ (ದ್ರೋಣ ಪರ್ವ, ೮ ಸಂಧಿ, ೫ ಪದ್ಯ)

ತಾತ್ಪರ್ಯ:
ನೀರೊಳಗಿದ್ದ ಅರ್ಜುನನು, ಕೃಷ್ಣನ ಮಾತನ್ನು ಕೇಳಿ, ಶಿವ ಶಿವಾ ಪುತ್ರಶೋಕದ ಸುದ್ದಿಯನ್ನು ಆಕಾಶವಾಣಿಯು ತಿಳಿಸಿತು ವಾಸುದೇವ ಎನ್ನುತ್ತಾ, ನೀರನ್ನು ಬಗಿದು ಮೇಲೆ ಬಂದನು. ಮಗನು ಹೋದ ಮೇಲೆ ಇನ್ನೆಲ್ಲಿಯ ಸಂತಸ ಎಂದು ಕಣ್ಣುಗಳಲ್ಲಿ ನೀರನ್ನು ತುಂಬಿಕೊಂಡು ಮಾಯಾವೇಷಧಾರಿ ಕೃಷ್ಣನನ್ನು ಕರೆದನು.

ಅರ್ಥ:
ಸುತ: ಪುತ್ರ; ಶೋಕ: ದುಃಖ; ಮರುಕ: ಬೇಗುದಿ, ಅಳಲು; ಆಕಾಶ: ಗಗನ; ವಚನ: ಮಾತು; ಶಿವ: ಶಂಕರ; ಜಲ: ನೀರು; ಬಗಿ: ಸೀಳುವಿಕೆ, ಕತ್ತರಿಸು; ಎದ್ದು: ಮೇಲೇಳು; ಘಾಸಿ: ಆಯಾಸ, ದಣಿವು; ಮಗ: ಸುತ; ಅಕಟ: ಅಯ್ಯೋ; ಸಂತೋಷ: ಹರುಷ; ಮಾಯೆ: ಗಾರುಡಿ, ಇಂದ್ರಜಾಲ; ವೇಷ: ರೂಪ; ಕರೆ: ಬರೆಮಾಡು; ವಿಲೋಚನ: ಕಣ್ಣು; ವಾರಿ: ನೀರು; ಪೂರ: ತುಂಬ;

ಪದವಿಂಗಡಣೆ:
ಆ +ಸುತನ +ಶೋಕದ +ಮರುಕವ್
ಆಕಾಶ +ವಚನದೊಳಾಯ್ತು +ಶಿವ +ಶಿವ
ವಾಸುದೇವ +ಎನುತ್ತ +ಫಲುಗುಣ +ಜಲವ +ಬಗಿದೆದ್ದು
ಘಾಸಿಯಾದನು +ಮಗನ್+ಅಕಟ +ಸಂ
ತೋಷವೆಲ್ಲಿಯದ್+ಎನುತ +ಮಾಯಾ
ವೇಷಿಯನು +ಕರೆದನು +ವಿಲೋಚನ +ವಾರಿ+ಪೂರದಲಿ

ಅಚ್ಚರಿ:
(೧) ಅರ್ಜುನನ ಆವೇಶವನ್ನು ತೋರಲು ಬಳಸಿದ ಪದ – ಫಲುಗುಣ ಜಲವ ಬಗಿದೆದ್ದು
(೨) ಕಣ್ಣೀರನ್ನು ಹೇಳಲು ತೋರಿದ ಪದ – ವಿಲೋಚನ ವಾರಿಪೂರದಲಿ

ಪದ್ಯ ೧೧: ಭೀಮನ ಗರ್ಜನೆ ಹೇಗಿತ್ತು?

ಬಿರಿದವದ್ರಿಗಳನಿಲಸುತನು
ಬ್ಬರದ ಬೊಬ್ಬೆಗೆ ಮಿಕ್ಕ ಮೃಗತತಿ
ಶರಭ ಶಾರ್ದೂಲಂಗಳಿಲ್ಲ ವಿಲೋಚನಾಂತ್ಯದಲಿ
ಮರಗಿರನ ಮೃಗಗಿಗನ ಪಾಡೇ
ನರಸ ಭೀಮನ ದನಿಗೆ ಬೆಚ್ಚದೆ
ಗಿರಿಗುಹೆಗಳೇ ಮಲೆತು ನಿಂತವು ದನಿಗೆ ದನಿಗೂಡುತ (ಅರಣ್ಯ ಪರ್ವ, ೧೧ ಸಂಧಿ, ೧೧ ಪದ್ಯ)

ತಾತ್ಪರ್ಯ:
ಭೀಮನ ಬೊಬ್ಬೆಗೆ ಬೆಟ್ಟಗಳು ಬಿರಿದವು. ಶರಭ, ಹುಲಿ ಮೊದಲಾದ ಪ್ರಾಣಿಗಳು ಕಣ್ಣಿಗೆ ಕಾಣದಂತೆ ಓಡಿದವು. ಜನಮೇಜಯ ರಾಜ ಇನ್ನು ಮರಗಿರ, ಮೃಗಗಿಗಳ ಪಾಡೇನು? ಭೀಮನ ಗರ್ಜನೆಗೆ ಬೆಟ್ಟದ ಗುಹೆಗಳೇ ಪ್ರತಿಧ್ವನಿಸುತ್ತಾ ನಿಂತವು.

ಅರ್ಥ:
ಬಿರಿ: ಬಿರುಕು, ಸೀಳು; ಅದ್ರಿ: ಬೆಟ್ಟ; ಅನಿಲಸುತ: ವಾಯುಪುತ್ರ (ಭೀಮ); ಉಬ್ಬರ: ಅತಿಶಯ; ಬೊಬ್ಬೆ: ಕೂಗು; ಮಿಕ್ಕ: ಉಳಿದ ಮೃಗ: ಪ್ರಾಣಿ; ತತಿ: ಗುಂಪು; ಶರಭ:ಎಂಟು ಕಾಲುಗಳುಳ್ಳ ಒಂದು ವಿಲಕ್ಷಣ ಪ್ರಾಣಿ; ಶಾರ್ದೂಲ: ಹುಲಿ, ವ್ಯಾಘ್ರ; ವಿಲೋಚನ: ಕಣ್ಣು; ಅಂತ: ಕೊನೆ; ಮರ: ತರು, ವೃಕ್ಷ; ಮೃಗ: ಪ್ರಾಣಿ; ಪಾಡು: ಅವಸ್ಥೆ; ಅರಸ: ರಾಜ; ದನಿ: ಧ್ವನಿ, ಶಬ್ದ; ಬೆಚ್ಚು: ಹೆದರು; ಗಿರಿ: ಬೆಟ್ಟ; ಗುಹೆ: ಗವಿ; ಮಲೆ: ಎದುರಿಸು; ನಿಲ್ಲು: ಸ್ಥಿತವಾಗಿರು; ಕೂಡು: ಜೊತೆಯಾಗು;

ಪದವಿಂಗಡಣೆ:
ಬಿರಿದವ್+ಅದ್ರಿಗಳ್+ಅನಿಲಸುತನ್
ಉಬ್ಬರದ +ಬೊಬ್ಬೆಗೆ +ಮಿಕ್ಕ +ಮೃಗ+ತತಿ
ಶರಭ+ ಶಾರ್ದೂಲಂಗಳಿಲ್ಲ +ವಿಲೋಚನ+ಅಂತ್ಯದಲಿ
ಮರಗಿರನ +ಮೃಗಗಿಗನ+ ಪಾಡೇನ್
ಅರಸ+ ಭೀಮನ +ದನಿಗೆ +ಬೆಚ್ಚದೆ
ಗಿರಿ+ಗುಹೆಗಳೇ +ಮಲೆತು +ನಿಂತವು+ ದನಿಗೆ+ ದನಿಗೂಡುತ

ಅಚ್ಚರಿ:
(೧) ಭೀಮನಿಗೆ ಎದುರು ನಿಂತವರಾರು – ಭೀಮನ ದನಿಗೆ ಬೆಚ್ಚದೆ ಗಿರಿಗುಹೆಗಳೇ ಮಲೆತು ನಿಂತವು ದನಿಗೆ ದನಿಗೂಡುತ

ಸಂಜಯನು ಯಾವ ಮಳೆಗಾಳ ಪ್ರಾರಂಭವಾಯ್ತೆಂದ?

ಕೇಳು ಧೃತರಾಷ್ಟ್ರಾವನಿಪ ನಿ
ನ್ನಾಳ ಜಯಸಿರಿ ಸರ್ಪಬಾಣದ
ಮೇಳೆಯದ ಸೀಮೆಯಲಿ ನಿಂದುದು ಹಲವು ಮಾತೇನು
ಹೇಳಿ ಫಲವೇನಿನ್ನು ಮುಂದಣ
ಕಾಳೆಗದ ಕರ್ಣಾಮೃತದ ಮಳೆ
ಗಾಲ ಮಾದು ವಿಲೋಚನದ ಮಳೆಗಾಲವಾಯ್ತೆಂದ (ಕರ್ಣ ಪರ್ವ, ೨೬ ಸಂಧಿ, ೧ ಪದ್ಯ)

ತಾತ್ಪರ್ಯ:
ಕೇಳು ಧೃತರಾಷ್ಟ್ರ, ಸರ್ಪಾಸ್ತ್ರದ ಪ್ರಭಾವ ವಿರುವ ವರೆಗು ಜಯಲಕ್ಷ್ಮಿಯು ಕರ್ಣನ ಕೊರಳನ್ನು ಅಲಂಕರಿಸಿದ್ದಳು, ಇನ್ನು ಹಲವು ಮಾತೇನು, ಸರ್ಪಾಸ್ತ್ರದ ಪ್ರಭಾವ ಮುಗಿದ ಬಳಿಕ ಕರ್ಣಾಮೃತವಾಗಿದ್ದ ಕಾಳಗದ ಮಳೆಗಾಲವು ಮುಗಿದು, ಕಣ್ಣೀರಿನ ಮಳೆಗಾಲ ಆರಂಭವಾಯಿತು.

ಅರ್ಥ:
ಕೇಳು: ಆಲಿಸು; ಅವನಿಪ: ರಾಜ; ಅವನಿ: ಭೂಮಿ; ಆಳು: ಸೈನಿಕ; ಜಯ: ವಿಜಯ, ಗೆಲುವು; ಸಿರಿ: ಲಕ್ಷ್ಮೀ, ಐಶ್ವರ್ಯ; ಸರ್ಪ: ಹಾವು, ನಾಗ; ಬಾಣ: ಶರ; ಮೇಳೆ: ಗಂಟಲು ಮಣಿ, ಗೋನಾಳಿ; ಸೀಮೆ: ಎಲ್ಲೆ; ನಿಂದು: ನಿಲ್ಲು; ಹಲವು: ಬಹಳ; ಮಾತು: ವಾಣಿ, ನುಡಿ; ಹೇಳು: ತಿಳಿಸು; ಫಲ: ಪ್ರಯೋಜನ; ಮುಂದಣ: ಮುಂದಿನ; ಕಾಳೆಗ: ಯುದ್ಧ; ಅಮೃತ: ಸುಧೆ; ಮಳೆ: ವರ್ಷ; ಮಾದು: ಕಳೆದು; ವಿಲೋಚನ: ಕಣ್ಣು;

ಪದವಿಂಗಡಣೆ:
ಕೇಳು+ ಧೃತರಾಷ್ಟ್ರ+ಅವನಿಪ +ನಿ
ನ್ನಾಳ +ಜಯಸಿರಿ+ ಸರ್ಪಬಾಣದ
ಮೇಳೆಯದ +ಸೀಮೆಯಲಿ +ನಿಂದುದು +ಹಲವು +ಮಾತೇನು
ಹೇಳಿ+ ಫಲವೇನ್+ಇನ್ನು +ಮುಂದಣ
ಕಾಳೆಗದ +ಕರ್ಣಾಮೃತದ+ ಮಳೆ
ಗಾಲ +ಮಾದು +ವಿಲೋಚನದ +ಮಳೆಗಾಲವಾಯ್ತೆಂದ

ಅಚ್ಚರಿ:
(೧) ಕಣ್ಣೀರಿನ ಕಥೆ ಎಂದು ಹೇಳಲು – ಕರ್ಣಾಮೃತದ ಮಳೆಗಾಲ ಮಾದು ವಿಲೋಚನದ ಮಳೆಗಾಲವಾಯ್ತೆಂದ
(೨) ಕಿವಿಗೆ ಅಮೃತ