ಪದ್ಯ ೭: ಜನಮೇಜಯ ರಾಜನಿಗೆ ಯಾವ ಪ್ರಶ್ನೆ ಕಾಡಿತು?

ಎಲೆಮುನೀಶ್ವರ ಪೂರ್ವದಲಿ ಯದು
ಬಲ ವಿಭಾಗದಲಿವರ ದೆಸೆಯಲಿ
ಹಲಧರನು ಕೃತವರ್ಮನಾ ಪಾಂಡವರಿಗಸುರಾರಿ
ಬಳಿಕ ಸಾತ್ಯಕಿಯೀ ಹಸುಗೆಯ
ಸ್ಖಲಿತವಿದರಲಿ ರಾಮನೀ ಕುರು
ಬಲವ ಬಿಟ್ಟನದೇಕೆನುತ ಜನಮೇಜಯನು ನುಡಿದ (ಗದಾ ಪರ್ವ, ೬ ಸಂಧಿ, ೭ ಪದ್ಯ)

ತಾತ್ಪರ್ಯ:
ಆಗ ಜನಮೇಜಯನು ವೈಶಂಪಾಯನ ಮುನೀಶ್ವರನೇ, ಈ ಹಿಂದೆ ಯಾದವ ಬಲವನ್ನು ಭಾಗಮಾಡಿದಾಗ ಪಾಂಡವರ ಕಡೆಗೆ ಶ್ರೀಕೃಷ್ಣನೂ ಸಾತ್ಯಕಿಯೂ ಬಂದರು. ಕೌರವನ ಕಡೆಗೆ ಬಲರಾಮನೂ, ಕೃತವರ್ಮನೂ ಹೋದರು. ಹೀಗಿದ್ದು ಬಲರಾಮನು ಕೌರವನ ಕಡೆಗೆ ನಿಂತು ಯುದ್ಧವನ್ನು ಮಾಡಲಿಲ್ಲವೇಕೆ ಎಂದು ಕೇಳಿದನು.

ಅರ್ಥ:
ಮುನಿ: ಋಷಿ; ಪೂರ್ವ: ಹಿಂದೆ; ಬಲ: ಸೈನ್ಯ, ಶಕ್ತಿ; ವಿಭಾಗ: ಪಾಲು; ದೆಸೆ: ದಿಕ್ಕು; ಹಲಧರ: ಬಲರಾಮ; ಅಸುರಾರಿ: ಕೃಷ್ಣ; ಬಳಿಕ: ನಂತರ; ಹಸುಗೆ: ವಿಭಾಗ; ಸ್ಖಲಿತ: ಜಾರಿಬಿದ್ದ; ಬಿಡು: ತೊರೆ; ನುಡಿ: ಮಾತಾಡು;

ಪದವಿಂಗಡಣೆ:
ಎಲೆ+ಮುನೀಶ್ವರ+ ಪೂರ್ವದಲಿ +ಯದು
ಬಲ +ವಿಭಾಗದಲ್+ಇವರ +ದೆಸೆಯಲಿ
ಹಲಧರನು +ಕೃತವರ್ಮನ್+ಆ+ ಪಾಂಡವರಿಗ್+ಅಸುರಾರಿ
ಬಳಿಕ +ಸಾತ್ಯಕಿ+ ಈ+ ಹಸುಗೆಯ
ಸ್ಖಲಿತವ್+ಇದರಲಿ +ರಾಮನ್+ಈ+ ಕುರು
ಬಲವ +ಬಿಟ್ಟನದೇಕ್+ಎನುತ +ಜನಮೇಜಯನು +ನುಡಿದ

ಅಚ್ಚರಿ:
(೧) ಕೃಷ್ಣನನ್ನು ಅಸುರಾರಿ, ಬಲರಾಮನನ್ನು ಹಲಧರ, ರಾಮ ಎಂದು ಕರೆದಿರುವುದು

ಪದ್ಯ ೧೨: ಭೀಮನು ಸೈನಿಕರಿಗೆ ಏನು ತೋರಿಸುವೆನೆಂದು ಹೇಳಿದನು?

ಆಗಲದು ತಪ್ಪೇನು ಧರ್ಮಜ
ನಾಗುಹೋಗರ್ಜುನನ ಮೇಲೆ ವಿ
ಭಾಗದಲಿ ಬಂದುದು ಸುಯೋಧನ ಸೈನ್ಯ ಧುರವೆಮಗೆ
ಈಗಳೊಬ್ಬನೆ ವಿಷಮ ವಿಗ್ರಹ
ಯಾಗದಲಿ ರಿಪುಸುಭಟಪಶು ಹಿಂ
ಸಾಗಮವ ತೋರುವೆನು ಸೈರಿಸಿಯೆಂದನಾ ಭೀಮ (ಕರ್ಣ ಪರ್ವ, ೧೫ ಸಂಧಿ, ೧೨ ಪದ್ಯ)

ತಾತ್ಪರ್ಯ:
ಸೈನ್ಯದವರು ಭೀಮನನ್ನು ಹಿಂದಿರುಗು ಎಂದು ಹೇಳಿದಾಗ ಅದಕ್ಕುತ್ತರವಾಗಿ ಭೀಮನು ಆಗಲಿ ನಿಮ್ಮೊಡೆಯನು ಹೇಳಿರುವುದರಲ್ಲಿ ತಪ್ಪೇನು ಇಲ್ಲ. ಆದರೆ ಧರ್ಮಜನನ್ನು ಸಂತೈಸುವ ಯೋಗವು ಅರ್ಜುನನಿಗೆ ಬಂದಿದ್ದರೆ, ನಮಗೆ ಕೌರವ ಸೈನ್ಯದೊಡನೆ ಯುದ್ಧಮಾಡುವ ಅವಕಾಶ ದೊರೆತಿದೆ. ಈಗ ನಾನೊಬ್ಬನೆ ವಿಷಮ ಯುದ್ಧವೆಂಬ ಯಾಗದಲ್ಲಿ ಶತ್ರು ಸುಭಟರೆಂಬ ಪಶುಗಳನ್ನು ವಧಿಸಿ ತೋರಿಸುತ್ತೇನೆ ನೀವು ತಾಳಿ ಎಂದು ಭೀಮನು ಹೇಳಿದನು.

ಅರ್ಥ:
ಆಗು: ಉಂಟಾಗು; ತಪ್ಪು: ಸರಿಯಲ್ಲದ; ವಿಭಾಗ:ವಿಂಗಡಣೆ, ಹಂಚಿಕೆ; ಬಂದು: ಆಗಮಿಸು; ಸೈನ್ಯ: ದಳ; ಧುರ: ಯುದ್ಧ, ಕಾಳಗ; ವಿಷಮ: ಕಷ್ಟ ಪರಿಸ್ಥಿತಿ, ಆಪತ್ತು; ವಿಗ್ರಹ: ಯುದ್ಧ; ಯಾಗ: ಯಜ್ಞ, ಕ್ರತು; ರಿಪು: ವೈರಿ; ಸುಭಟ: ಸೈನಿಕ; ಪಶು: ಪ್ರಾಣಿ; ಹಿಂಸೆ:ನೋವು, ತೊಂದರೆ; ಆಗಮ: ಬರುವ; ತೋರು: ಪ್ರದರ್ಶಿಸು; ಸೈರಿಸು: ತಾಳು;

ಪದವಿಂಗಡಣೆ:
ಆಗಲದು +ತಪ್ಪೇನು +ಧರ್ಮಜನ್
ಆಗುಹೋಗ್+ಅರ್ಜುನನ +ಮೇಲೆ +ವಿ
ಭಾಗದಲಿ+ ಬಂದುದು +ಸುಯೋಧನ +ಸೈನ್ಯ +ಧುರವೆಮಗೆ
ಈಗಳೊಬ್ಬನೆ +ವಿಷಮ +ವಿಗ್ರಹ
ಯಾಗದಲಿ +ರಿಪು+ಸುಭಟ+ಪಶು+ ಹಿಂ
ಸಾಗಮವ+ ತೋರುವೆನು+ ಸೈರಿಸಿ+ಎಂದನಾ +ಭೀಮ

ಅಚ್ಚರಿ:
(೧) ವಿಭಾಗ, ವಿಗ್ರಹ, ವಿಷಮ – ವಿ ಕಾರದ ಪದಗಳ ಬಳಕೆ
(೨) ಯುದ್ಧವನ್ನು ಯಾಗಕ್ಕೆ ಹೋಲಿಸಿರುವುದು