ಪದ್ಯ ೩೩: ಯಾವದಕ್ಕೆ ಸರಿಸಾಟಿಯಾದ ಉದಾಹರಣೆ ಸಿಗುವುದಿಲ್ಲ?

ನಿವಡಿಸಿದ ವಿದ್ಯಕ್ಕೆ ಸಮ ಬಂ
ಧುವನು ರೋಗಾವಳಿಗೆ ಸಮಶ
ತ್ರುವನು ಸಂತಾನಕ್ಕೆ ಸಮ ಸಂತೋಷದುದಯವನು
ರವಿಗೆ ಸಮವಹ ತೇಜವನು ವಾ
ಸವನ ಸಮಭೋಗವನು ಬಲದಲಿ
ಶಿವನ ಬಲದಿಂದಧಿಕ ಬಲವನು ಕಾಣೆ ನಾನೆಂದ (ಉದ್ಯೋಗ ಪರ್ವ, ೩ ಸಂಧಿ, ೩೩ ಪದ್ಯ)

ತಾತ್ಪರ್ಯ:
ನಾವು ಆರ್ಜಿಸಿದ ವಿದ್ಯೆಗೆ ಸಮವೆನಿಸುವ ಬಂಧು, ರೋಗಕ್ಕೆ ಸಮನಾದ ಶತ್ರು, ಮಕ್ಕಳಿಗೆ ಸಮನಾದ ಸಂತೋಷವನ್ನು ಕೊಡುವಂಥವರು, ಸೂರ್ಯನಿಗೆ ಸಮನಾದ ತೇಜಸ್ಸು, ಇಂದ್ರನಿಗೆ ಸಮನಾದ ಭೋಗ, ಶಿವನಿಗೆ ಸಮನಾದ ಬಲವಂಥನನ್ನು ನಾನು ಕಾಣೆ ಎಂದು ವಿದುರ ಹೇಳಿದ.

ಅರ್ಥ:
ನಿವಡ: ಆಯ್ಕೆ, ಆರಿಸುವಿಕೆ; ವಿದ್ಯ: ಜ್ಞಾನ; ಸಮ: ಸರಿಸಾಟಿ; ಬಂಧು: ಸಂಬಂಧಿಕರು; ರೋಗ: ಬೇನೆ, ಕಾಯಿಲೆ; ಆವಳಿ: ಸಾಲು, ಗುಂಪು; ಶತ್ರು: ವೈರಿ; ಸಂತಾನ: ಮಕ್ಕಳು; ಸಂತೋಷ: ಹರ್ಷ; ಉದಯ: ಹುಟ್ಟು; ರವಿ: ಸೂರ್ಯ; ತೇಜ: ಕಾಂತಿ, ತೇಜಸ್ಸು; ವಾಸವ:ಇಂದ್ರ; ಭೋಗ:ಸುಖವನ್ನು ಅನುಭವಿಸುವುದು; ಬಲ: ಶಕ್ತಿ; ಅಧಿಕ: ಹೆಚ್ಚು; ಕಾಣೆ: ಸಿಗದು;

ಪದವಿಂಗಡಣೆ:
ನಿವಡಿಸಿದ +ವಿದ್ಯಕ್ಕೆ +ಸಮ +ಬಂ
ಧುವನು +ರೋಗಾವಳಿಗೆ +ಸಮಶ
ತ್ರುವನು +ಸಂತಾನಕ್ಕೆ +ಸಮ +ಸಂತೋಷದ್+ಉದಯವನು
ರವಿಗೆ+ ಸಮವಹ+ ತೇಜವನು +ವಾ
ಸವನ +ಸಮ+ಭೋಗವನು +ಬಲದಲಿ
ಶಿವನ +ಬಲದಿಂದ್+ಅಧಿಕ +ಬಲವನು +ಕಾಣೆ +ನಾನೆಂದ

ಅಚ್ಚರಿ:
(೧) ವಿದ್ಯೆ, ರೋಗ, ಸಂತಾನ, ತೇಜಸ್ಸು, ಭೋಗ, ಬಲ – ಇವುಗಳ ಮಹತ್ವವನ್ನು ತಿಳಿಸುವ ಪದ್ಯ
(೨) ಬಲದಲಿ ಶಿವನ ಬಲದಿಂದಧಿಕ ಬಲ – ಬಲ ಪದದ ಪ್ರಯೋಗ

ಪದ್ಯ ೪: ಯಾವ ವಿದ್ಯೆಯಲಿ ಬ್ರಾಹ್ಮಣರು ಪಾಂಡಿತ್ಯವನ್ನು ತೋರುವರು?

ವಚನ ಶೂರರು ನಾವು ಪಾರ್ಥಿವ
ನಿಚಯವೇ ಭುಜ ಶೂರರನಿಬರ
ನಚಲ ಧನು ಭಂಗಿಸಿತು ನಮಗೀ ವಿದ್ಯೆ ವೈದಿಕವೆ
ಉಚಿತವಲ್ಲಿದು ನಮ್ಮ ಸಾಹಸ
ರಚನೆಯನು ನೋಡುವರೆ ಪಂಡಿತ
ನಿಚಯವಿದಿರಲಿ ನಿಲಲಿ ತೋರುವೆವಲ್ಲಿ ವಿಸ್ಮಯವ (ಆದಿ ಪರ್ವ, ೧೫ ಸಂಧಿ, ೪ ಪದ್ಯ)

ತಾತ್ಪರ್ಯ:
ನಾವು ಮಾತಿನಲ್ಲಿ ಶೂರರು, ಕ್ಷತ್ರಿಯರು ಬಾಹುಬಲದಲ್ಲಿ ಶೂರರು, ಈ ಬಿಲ್ಲು ಇಲ್ಲಿ ನೆರೆದಿದ್ದ ಸಮಸ್ತ ರಾಜರನ್ನು ಸೋಲಿಸಿ ಅವಮಾನಿಸಿತು, ಈ ಬಿಲ್ಲು ವಿದ್ಯೆ ವೈದಿಕವೆ? ಇದು ನಮಗೆ ಉಚಿತವಲ್ಲ, ನಮ್ಮ ಪಾಂಡಿತ್ಯವನ್ನು ನೋಡುವವರಿದ್ದರೆ, ವಿದ್ವಾಂಸರು ಬಂದು ಎದುರು ನಿಲ್ಲಲ್ಲಿ, ಆಗ ನಾವು ನಮ್ಮ ವಿದ್ಯೆಯ ವಿಸ್ಮಯವನ್ನು ತೋರಿಸುತ್ತೇವೆ.

ಅರ್ಥ:
ವಚನ: ಮಾತು; ಶೂರ: ಪರಾಕ್ರಮಿ; ಪಾರ್ಥಿವ: ಕ್ಷತ್ರಿಯ; ನಿಚಯ: ಗುಂಪು, ರಾಶಿ; ಭುಜ: ಬಾಹು; ಅಚಲ: ಶಾಶ್ವತ, ಚಲಿಸದ; ಧನು: ಬಿಲ್ಲು; ಭಂಗಿಸಿ: ಬಗ್ಗಿಸು, ಮುರಿ; ವಿದ್ಯೆ: ಜ್ಞಾನ; ವೈದಿಕ: ವೇದ, ವೇದಪಾರಂಗತ; ಉಚಿತ: ಸರಿಯಾದ; ಸಾಹಸ: ಶೌರ್ಯ, ಪರಾಕ್ರಮ; ರಚನೆ: ರೂಪ; ನೋಡು: ವೀಕ್ಷಿಸು; ಪಂಡಿತ: ವಿದ್ವಾಂಸ; ನಿಲಲಿ: ನಿಲು; ತೋರು: ತೋರಿಸು, ಗೋಚರಿಸು; ವಿಸ್ಮಯ: ಆಶ್ಚರ್ಯ;

ಪದವಿಂಗಡಣೆ:
ವಚನ +ಶೂರರು +ನಾವು +ಪಾರ್ಥಿವ
ನಿಚಯವೇ +ಭುಜ +ಶೂರರನ್+ಇಬರನ್
ಅಚಲ+ ಧನು +ಭಂಗಿಸಿತು+ ನಮಗೀ+ ವಿದ್ಯೆ + ವೈದಿಕವೆ
ಉಚಿತವಲ್ಲಿದು +ನಮ್ಮ +ಸಾಹಸ
ರಚನೆಯನು +ನೋಡುವರೆ+ ಪಂಡಿತ
ನಿಚಯವಿದಿರಲಿ+ ನಿಲಲಿ +ತೋರುವೆವ್+ಅಲ್ಲಿ +ವಿಸ್ಮಯವ

ಅಚ್ಚರಿ:
(೧) ನಿಚಯ – ೨, ೬ ಸಾಲಿನ ಮೊದಲ ಪದ
(೨) ಬ್ರಾಹ್ಮಣರು ವೈದಿಕ ಏಕೆ ವಿದ್ಯೆಯಲ್ಲಿ ಪ್ರವೀಣರು ಎಂದ ಹೇಳಿರುವುದು
(೩) ಶೂರ – ೧,೨ ಸಾಲಿನಲ್ಲಿ ಬರುವ ಪದ

ಪದ್ಯ ೧೦: ಯಾವ ವಿದ್ಯೆಗಳಲ್ಲಿ ಹುಡುಗರನ್ನು ಪರೀಕ್ಷೆಮಾಡಿ ಎಂದು ದ್ರೋಣರು ಹೇಳಿದರು?

ಸಕಲ ಶಸ್ತ್ರಾಸ್ತ್ರದಲಿ ಗಜ ಹಯ
ನಿಕರದೇರಾಟದಲಿ ಲೋಕ
ಪ್ರಕಟ ಮಾರ್ಗೀಕೃತ ಚತುರ್ದಶ ವಿಮಲ ವಿದ್ಯದಲಿ
ಸಕಲ ಲಕ್ಷಣ ಗಣಿತ ಗಾರುಡ
ವಿಕಟ ಭರತಾದ್ಯಖಿಲ ಕಳೆಯಲಿ
ವಿಕಳರೋ ಸಂಪೂರ್ಣರೋ ನೀವ್ ನೋಡಬೇಕೆಂದ (ಆದಿ ಪರ್ವ, ೭ ಸಂಧಿ, ೧೦ ಪದ್ಯ)

ತಾತ್ಪರ್ಯ:
ನಿಮ್ಮ ಹುಡುಗರು, ಸಕಲ ಶಸ್ತ್ರಾಸ್ತ್ರಗಳ ಪ್ರಯೋಗಗಳಲಿ, ಆನೆ ಕುದುರೆಗಳ ಸವಾರಿ, ಲೋಕ ಪ್ರಸಿದ್ಧವಾದ ಹದಿನಾಲ್ಕು ವಿದ್ಯೆಗಳಲಿ, ಸಕಲ ಲಕ್ಷಣಶಾಸ್ತ್ರದಲಿ, ಗಣಿತ,ಗಾರುಡ,ನಾಟ್ಯ ಮೊದಲಾದ ಎಲ್ಲಾ ಕಲೆಗಳಲ್ಲಿಯೂ ಇವರು ಪೂರ್ಣವಾಗಿ ವಿಶಾರದರೋ ಅಥವ ಇವರ ಕಲಿಕೆಯಲ್ಲಿ ಕೊರತೆಗಳಿವೆಯೋ ಎಂಬುದನ್ನು ನೀವು ನೋಡಬೇಕು ಎಂದು ದ್ರೋಣರು ಹೇಳಿದರು.

ಅರ್ಥ:
ಸಕಲ: ಎಲ್ಲಾ, ಸಮಸ್ತ, ಶಸ್ತ್ರಾಸ್ತ್ರ: ಆಯುಧಗಳ ವಿದ್ಯೆ; ಗಜ: ಆನೆ, ಕರಿ; ಹಯ: ಕುದುರೆ, ಅಶ್ವ;ನಿಕರ:ಗುಂಪು, ಸಮೂಹ; ಏರಾಟ: ಸ್ಪರ್ಧೆ, ಪೈಪೋಟಿ; ಲೋಕ: ಜಗತ್ತು, ವಿಶ್ವ; ಪ್ರಕಟ: ಸ್ಪಶ್ಟ, ನಿಚ್ಚಳ; ಮಾರ್ಗಣ: ಸರಿಯಾದ ರೀತಿಯನ್ನು ಪಾಲಿಸುವ; ಚತುರ್ದಶ: ಹದಿನಾಲ್ಕು; ವಿಮಲ: ನಿರ್ಮಲ, ಶುಭ್ರ; ವಿದ್ಯ: ಜ್ಞಾನ; ಲಕ್ಷಣ: ಗುರುತು, ಚಿಹ್ನೆ; ಗಣಿತ: ಲೆಕ್ಕ; ಗಾರುಡ: ಹಾವುಗಳನ್ನು ವಶಪಡಿಸಿಕೊಳ್ಳುವ ವಿದ್ಯೆ, ಐಂದ್ರಜಾಲಿಕ; ವಿಕಟ: ವಿಡಂಬನೆ, ಡೊಂಕಾದುದು; ಭರತ: ಭರತನಾಟ್ಯ, ಕಳೆ: ಕಲೆ; ವಿಕಳ: ಕೊರತೆ, ಖಿನ್ನತೆ; ಸಂಪೂರ್ಣ: ಪೂರ್ತಿ,ಭರ್ತಿ;

ಪದವಿಂಗಡನೆ:
ಸಕಲ + ಶಸ್ತ್ರಾಸ್ತ್ರದಲಿ+ ಗಜ +ಹಯ
ನಿಕರದ್+ಏರಾಟದಲಿ+ ಲೋಕ
ಪ್ರಕಟ+ ಮಾರ್ಗೀಕೃತ+ ಚತುರ್ದಶ +ವಿಮಲ +ವಿದ್ಯದಲಿ
ಸಕಲ+ ಲಕ್ಷಣ +ಗಣಿತ +ಗಾರುಡ
ವಿಕಟ +ಭರತಾದ್ಯ+ಅಖಿಲ +ಕಳೆಯಲಿ
ವಿಕಳರೋ +ಸಂಪೂರ್ಣರೋ +ನೀವ್ +ನೋಡಬೇಕೆಂದ

ಅಚ್ಚರಿ:
(೧) ಸಕಲ ಪದವು ೧, ೪ ಸಾಲಿನ ಮೊದಲ ಪದವಾಗಿರುವುದು
(೨) ವಿಮಲ ವಿದ್ಯದಲಿ, ಗಣಿತ ಗಾರುಡ, ನೀವ್ ನೋಡಬೇಕು – ಜೋಡಿ ಪದಗಳು

ಪದ್ಯ ೭: ದ್ರೋಣರು ಯಾರಿಗೆ ಸಕಲ ವಿದ್ಯೆ ಯನ್ನು ಧಾರೆಯೆರೆದರು?

ಹಿರಿದು ಮೆಚ್ಚಿ ಧನಂಜಯನನಾ
ದರಿಸಿ ಕೊಟ್ಟನು ಸಕಲ ವಿದ್ಯವ
ನುರುತರ ಪ್ರೇಮದಲಿ ಸೆಣಸಿದೊಡೇಕಲವ್ಯಕನ
ಬೆರಳಕೊಂಡನು ಪಾರ್ಥನನು ಪತಿ
ಕರಿಸಿದನು ತನಗಾದ ನೆಗಳಿನ
ದರಧುರದ ಭೀತಿಯನು ಗೆಲಿದನು ನರನ ದೆಸೆಯಿಂದ (ಆದಿ ಪರ್ವ, ೭ ಸಂಧಿ, ೭ ಪದ್ಯ)

ತಾತ್ಪರ್ಯ:
ಗುರುವು ತೋರಿದ ಲಕ್ಷ್ಯವನ್ನು ಭೇದಿಸಿದ ಅರ್ಜುನನ ಜಾಣ್ಮೆಯನ್ನು ದ್ರೋಣನು ಅತಿಯಾಗಿ ಮೆಚ್ಚಿ ಅವನನ್ನು ಅತಿಯಾಗಿ ಆದರಿಸಿ ಅವನಿಗೆ ಪ್ರೀತಿಯಿಂದ ಸಕಲ ವಿದ್ಯೆಯನ್ನು ಧಾರೆಯೆರೆದನು. ಅರ್ಜುನನಿಗೆ ನಿಲುಕದ ಶಬ್ಧಭೇದಿ ವಿದ್ಯೆಯನ್ನು ಕಲಿತಿರಲು, ಅವನಿಂದ ಹೆಬೆಟ್ಟನ್ನು ಗುರುದಕ್ಷಿಣೆಯಾಗಿ ಸ್ವೀಕರಿಸಿ, ಅರ್ಜುನನ್ನು ಸರ್ವಶ್ರೇಷ್ಠ ಬಿಲ್ಲುಗಾರನನ್ನಾಗಿ ಮಾಡಿದನು. ತನಗೆ ಒದಗಿದ ಮೊಸಳೆಯ ಭೀತಿಯನ್ನು ಅರ್ಜುನನ ಸಹಾಯದಿಂದ ನಿವಾರಿಸಿಕೊಂಡನು (ಹುಡುಗರನ್ನು ಪರೀಕ್ಷಿಸಲು ದ್ರೋಣನು ರಚಿಸಿದ ಒಂದು ಸಂಚು)

ಅರ್ಥ:
ಹಿರಿದು: ಹೆಚ್ಚು, ಅತಿಶಯ; ಮೆಚ್ಚು: ಒಲಿ, ಪ್ರೀತಿಸು, ಇಷ್ಟವಾಗು; ಆದರಿಸು: ಪ್ರೀತಿಸು, ಗೌರವಿಸು; ಸಕಲ: ಎಲ್ಲ, ವಿದ್ಯ: ಜ್ಞಾನ, ಉರು: ಗಟ್ಟಿಮಾಡು, ಹೆಚ್ಚಿನ, ಶ್ರೇಷ್ಠವಾದ, ಉತ್ತಮವಾದ; ಪ್ರೇಮ: ಪ್ರೀತಿ,ಒಲವು, ಅನುರಾಗ; ಸೆಣಸು: ಹೋರಾಡು; ಕೊಂಡು: ತೆಗೆದುಕೊ; ಪತಿಕರಿಸು: ಆದರಿಸು, ಸತ್ಕರಿಸು, ಕಾಪಾಡು; ನೆಗಳು: ಉಂಟಾಗು, ಸಂಭವಿಸು;ಧುರ: ಹೊಣೆ, ಕಾಳಗ; ಭೀತಿ: ಭಯ; ಗೆಲಿ: ಜಯ; ದೆಸೆ: ಕಾರಣ, ಸಹಾಯ; ಉರ: ಎದೆ, ವಕ್ಷಸ್ಥಳ;
ಅರ: ಚಲಿಸುವುದು, ವೇಗ; ಅರದ: ಹಲ್ಲು ಇಲ್ಲದ

ಪದವಿಂಗಡನೆ:
ಹಿರಿದು + ಮೆಚ್ಚಿ + ಧನಂಜಯನನ್+ಆ
ದರಿಸಿ + ಕೊಟ್ಟನು +ಸಕಲ+ ವಿದ್ಯವನ್
ಉರುತರ + ಪ್ರೇಮದಲಿ +ಸೆಣಸಿದೊಡ್+ಏಕಲವ್ಯಕನ
ಬೆರಳ+ಕೊಂಡನು +ಪಾರ್ಥನನು+ ಪತಿ
ಕರಿಸಿದನು +ತನಗಾದ +ನೆಗಳಿನದ್
ಅರ+ಧುರದ +ಭೀತಿಯನು +ಗೆಲಿದನು +ನರನ+ ದೆಸೆಯಿಂದ

ಅಚ್ಚರಿ:
(೧) ಕೊನೆಯ ಸಾಲಿನಲ್ಲಿ ಪಾರ್ಥನ ಬದಲು ನರನ ಪದದ ಬಳಕೆ. ಇದ್ದ ಎಲ್ಲ ವಿದ್ಯಾರ್ಥಿಗಳಲ್ಲಿ ಅವನೊಬ್ಬನೆ “ನರ”, ಉಳಿದವರಾರು ಗುರುವಿನ ರಕ್ಷಣೆಗೆ ಬರಲಿಲ್ಲ. ಆದ್ದರಿಂದ ಪಾರ್ಥ, ಅರ್ಜುನ ಹೆಸರಿನ ಬದಲು “ನರ” ಪದದ ಪ್ರಯೋಗ
(೨) ಧನಂಜಯ, ಪಾರ್ಥ: ಅರ್ಜುನನ ಹೆಸರುಗಳ ಬಳಕೆ (೧, ೪ ಸಾಲು)
(೩) ರಿ ಕಾರವಿರುವ ಪದಗಳು: ಹಿರಿದು, ಆದರಿಸು,ಪತಿಕರಿಸು,
(೪) ಪ್ರೇಮ, ಪತಿಕರಿಸು, ಆದರಿಸು – ಸಮಾನ ಅರ್ಥ ಕೊಡುವ ಪದಗಳ ಬಳಕೆ
(೫)ದರಧುರದ, ನರನ – ವಿಶೇಷ ಪದಗಳು – ಹೇಗೆ ಓದಿದರು (ಎಡ ದಿಂದ ಬಲ ಹಾಗೂ ಬಲ ದಿಂದ ಎಡ)ಒಂದೆ ಆಗಿರುವ ಪದಗಳು (೬ ಸಾಲು)