ಪದ್ಯ ೧೬: ಕೃಷ್ಣನು ಯಾವ ವಿದ್ಯೆಯಲ್ಲಿ ನಿಸ್ಸೀಮನೆಂದು ಭೂರಿಶ್ರವನು ಹೇಳಿದನು?

ಅರಿದರೀ ವಿದ್ಯವನು ಕೃಷ್ಣನೊ
ಳರಿದೆಯಾಗಲು ಬೇಕು ಕಪಟದ
ನೆರೆವಣಿಗೆಗಳನು ಅರಿಯರಿಂದ್ರ ದ್ರೋಣ ಶಂಕರರು
ಮರೆ ಮರೆಯಲಿರಿಗಾರನಸುರರ
ಮುರಿದನೆಂಬರು ಕುಹಕತಂತ್ರದ
ಹೊರಿಗೆವಾಳನ ಸಂಗದಲಿ ನೀವ್ ಕೆಟ್ಟರಕಟೆಂದ (ದ್ರೋಣ ಪರ್ವ, ೧೪ ಸಂಧಿ, ೧೬ ಪದ್ಯ)

ತಾತ್ಪರ್ಯ:
ಎಲೈ ಅರ್ಜುನ ನೀನು ಈ ವಿದ್ಯೆಯನು ಅರಿತದ್ದು ಕೃಷ್ಣನಿಂದಲೇ ಇರಬೇಕು. ಕಪಟ ವಿದ್ಯೆಗಳನ್ನು ಇಂದ್ರ, ದ್ರೋಣ, ಶಿವರು ಅರಿಯರು, ಕೃಷ್ಣನು ಮರೆಯಿರಿಗಾರ, ಮೋಸದ ತಂತ್ರಗಳನ್ನು ಮಾಡುವ ಇವನ ಸಂಗದಿಂದ ನೀವು ಅಯ್ಯೋ ಹಾಳಾದಿರಿ ಎಂದು ಭೂರಿಶ್ರವನು ಹೇಳಿದನು.

ಅರ್ಥ:
ಅರಿ: ತಿಳಿ; ವಿದ್ಯ: ಜ್ಞಾನ; ಕಪಟ: ಮೋಸ; ನೆರವಣಿಗೆ: ಪರಿಪೂರ್ಣತೆ, ಒಳ್ತನ; ಶಂಕರ: ಶಿವ; ಮರೆ: ಗುಟ್ಟು, ನೆನಪಿನಿಂದ ದೂರ ಮಾಡು; ಇರಿ: ಕರೆ, ಜಿನುಗು; ಅಸುರರ: ರಾಕ್ಷಸ; ಮುರಿ: ಸೀಳು; ಕುಹಕ: ಮೋಸ; ತಂತ್ರ: ಉಪಾಯ; ಹೊರಿಗೆ: ಹೊಣೆಗಾರಿಕೆ, ಭಾರ; ಸಂಗ: ಜೊತೆ; ಕೆಡು: ಹಾಳು; ಅಕಟ: ಅಯ್ಯೋ;

ಪದವಿಂಗಡಣೆ:
ಅರಿದರ್+ಈ+ ವಿದ್ಯವನು+ ಕೃಷ್ಣನೊಳ್
ಅರಿದೆಯಾಗಲು+ ಬೇಕು +ಕಪಟದ
ನೆರೆವಣಿಗೆಗಳನು +ಅರಿಯರ್+ಇಂದ್ರ +ದ್ರೋಣ +ಶಂಕರರು
ಮರೆ +ಮರೆಯಲಿರಿಗಾರನ್+ಅಸುರರ
ಮುರಿದನೆಂಬರು +ಕುಹಕ+ತಂತ್ರದ
ಹೊರಿಗೆವಾಳನ +ಸಂಗದಲಿ+ ನೀವ್+ ಕೆಟ್ಟರ್+ಅಕಟೆಂದ

ಅಚ್ಚರಿ:
(೧) ಕೃಷ್ಣನನ್ನು ಕರೆದ ಪರಿ – ಕುಹಕತಂತ್ರದ ಹೊರಿಗೆವಾಳನ ಸಂಗದಲಿ ನೀವ್ ಕೆಟ್ಟರಕಟೆಂದ

ಪದ್ಯ ೩೧: ರಾಜರ ಪುತ್ರರಿಗೆ ಯಾವುದು ಶೋಭಿಸುತ್ತದೆ?

ಬಾಲತನವೇನೂಣಯವೆ ಕ
ಟ್ಟಾಳುತನವಾಭರಣವವನೀ
ಪಾಲ ಸುತರಿಗೆ ವಿದ್ಯವೇ ವಿಪ್ರರಿಗಲಂಕಾರ
ಆಳಿನಂಗವನೆತ್ತ ಬಲ್ಲೆ ಶ
ರಾಳಿಯಲಿ ನಿನ್ನಂಘವಣೆಯ ಛ
ಡಾಳತನವನು ಮುದ್ರಿಸುವೆನೆನುತೆಚ್ಚನಭಿಮನ್ಯು (ದ್ರೋಣ ಪರ್ವ, ೫ ಸಂಧಿ, ೩೧ ಪದ್ಯ)

ತಾತ್ಪರ್ಯ:
ಅಭಿಮನ್ಯುವು ಶಲ್ಯನಿಗೆ ಉತ್ತರಿಸುತ್ತಾ, ಬಾಲಕತನವೇನು ದೋಷವೇ? ಪರಾಕ್ರಮವು ರಾಜಪುತ್ರರಿಗೆ ಅಲಂಕಾರ, ವಿದ್ಯೆಯು ಬ್ರಾಹ್ಮಣರಿಗೆ ಅಲಂಕಾರ, ಪೌರುಷದ ಪರಿ ನಿನಗೇನು ಗೊತ್ತು, ನನ್ನ ಬಾಣಗಳಿಂದ ನಿನ್ನ ಸಾಹಸದ ದೊಡ್ಡಸ್ತಿಕೆಯನ್ನು ಕಟ್ಟಿ ಮುದ್ರಿಸುತ್ತೇನೆ ಎಂದು ಹೇಳಿ ಅಭಿಮನ್ಯುವು ಬಾಣಗಳನ್ನು ಬಿಟ್ಟನು.

ಅರ್ಥ:
ಬಾಲತನ: ಮಕ್ಕಳಾಟ; ಊಣ: ದೋಷ; ಕಟ್ಟಾಳು: ಶೂರ, ಸೇವಕ; ಆಭರಣ: ಒಡವೆ; ಅವನೀಪಾಲ: ರಾಜ; ಸುತ: ಮಕ್ಕಳು; ವಿದ್ಯ: ಜ್ಞಾನ; ವಿಪ್ರ: ಬ್ರಾಹ್ಮಣ; ಅಲಂಕಾರ: ಭೂಷಣಪ್ರಾಯ; ಆಳಿನಂಗವ: ಪೌರುಷತನ; ಅಂಗ: ರೀತಿ, ದೇಹದ ಭಾಗ; ಬಲ್ಲೆ: ತಿಳಿ; ಶರಾಳಿ: ಬಾಣದ ಗುಂಪು; ಅಂಗವಣೆ: ರೀತಿ, ಉದ್ದೇಶ; ಛಡಾಳ: ಹೆಚ್ಚಳ; ಮುದ್ರಿಸು: ಕೆತ್ತು, ಗುರುತುಮಾಡು; ಎಚ್ಚು: ಬಾಣ ಪ್ರಯೋಗ ಮಾಡು;

ಪದವಿಂಗಡಣೆ:
ಬಾಲತನವೇನ್+ಊಣಯವೆ+ ಕ
ಟ್ಟಾಳುತನವ್+ಆಭರಣವ್+ಅವನೀ
ಪಾಲ +ಸುತರಿಗೆ +ವಿದ್ಯವೇ +ವಿಪ್ರರಿಗ್+ಅಲಂಕಾರ
ಆಳಿನಂಗವನ್+ಎತ್ತ +ಬಲ್ಲೆ +ಶ
ರಾಳಿಯಲಿ +ನಿನ್ನಂಘವಣೆಯ +ಛ
ಡಾಳತನವನು +ಮುದ್ರಿಸುವೆನ್+ಎನುತ್+ಎಚ್ಚನ್+ಅಭಿಮನ್ಯು

ಅಚ್ಚರಿ:
(೧) ಯಾವುದು ಯಾರಿಗೆ ಅಲಂಕಾರ – ಕಟ್ಟಾಳುತನವಾಭರಣವವನೀಪಾಲ ಸುತರಿಗೆ ವಿದ್ಯವೇ ವಿಪ್ರರಿಗಲಂಕಾರ

ಪದ್ಯ ೧೫: ಯಾವ ಗುಣಗಿಳಿಂದ ನಾವು ಮುನ್ನಡೆಯಬೇಕು?

ಧನಮದವ ಸತ್ಕುಲಮದವ ಯೌ
ವನಮದವ ವಿದ್ಯಾಮದವ ಪರಿ
ಜನಮದವ ವೈಭವಮದವನಾಚಾರಪದ ಮದವ
ಮನನದಿಂ ಶ್ರವಣದಿ ನಿಧಿ ಧ್ಯಾ
ಸನದಿನಿವುಗಳನೊತ್ತಿ ವಿದ್ಯಾ
ವಿನಯ ಸೌಶೀಲ್ಯದಲಿ ನಡೆವುದು ವಿಪ್ರ ಕೇಳೆಂದ (ಅರಣ್ಯ ಪರ್ವ, ೧೬ ಸಂಧಿ, ೧೫ ಪದ್ಯ)

ತಾತ್ಪರ್ಯ:
ಧರ್ಮವ್ಯಾಧನು ಬ್ರಹ್ಮಚಾರಿಗೆ, ಧನಮದ, ಕುಲಮದ, ಯೌವನಮದ, ವಿದ್ಯಾಮದ, ಪರಿಜನಮದ, ವೈಭವಮದ, ನಾನು ಸದಾಚಾರಿಯೆಂಬ ಮದ ಇವುಗಳನ್ನು ಶ್ರವಣ, ಮನನ, ನಿಧಿಧ್ಯಾಸನಗಳಿಂದ ಗೆದ್ದು, ವಿದ್ಯೆ, ವಿನಯ, ಸುಶೀಲಗಳಿಂದ ನಡೆಯಬೇಕು ಎಂದು ಹೇಳಿದನು.

ಅರ್ಥ:
ಧನ: ಐಶ್ವರ್ಯ; ಮದ: ಅಹಂಕಾರ; ಕುಲ: ವಂಶ; ಸತ್ಕುಲ: ಒಳ್ಳೆಯ ವಂಶ; ಯೌವನ: ತಾರುಣ್ಯ; ವಿದ್ಯ: ಜ್ಞಾನ; ಪರಿಜನ: ಬಂಧುಬಳಗ; ವೈಭವ: ಶ್ರೇಷ್ಠತೆ, ಆಡಂಬರ; ಆಚಾರ: ಒಳ್ಳೆಯ ನಡತೆ; ಮನನ: ಧ್ಯಾನ; ಶ್ರವಣ: ಕೇಳು; ನಿಧಿಧ್ಯಾಸನ: ಏಕಾಗ್ರತೆ; ಒತ್ತು: ಆಕ್ರಮಿಸು, ಮುತ್ತು; ವಿನಯ: ಒಳ್ಳೆಯತನ, ಸೌಜನ್ಯ; ಸೌಶೀಲ್ಯ: ಒಳ್ಳೆಯ ನಡತೆ, ಸದಾಚಾರ; ನಡೆ: ಮುನ್ನಡೆ, ಚಲಿಸು; ವಿಪ್ರ: ಬ್ರಾಹ್ಮಣ;

ಪದವಿಂಗಡಣೆ:
ಧನ+ಮದವ +ಸತ್ಕುಲ+ಮದವ +ಯೌ
ವನ+ಮದವ +ವಿದ್ಯಾ+ಮದವ+ ಪರಿ
ಜನ+ಮದವ+ ವೈಭವ+ಮದವನ್+ಆಚಾರಪದ +ಮದವ
ಮನನದಿಂ+ ಶ್ರವಣದಿ+ ನಿಧಿಧ್ಯಾ
ಸನದಿನ್+ಇವುಗಳನ್+ಒತ್ತಿ +ವಿದ್ಯಾ
ವಿನಯ +ಸೌಶೀಲ್ಯದಲಿ+ ನಡೆವುದು +ವಿಪ್ರ +ಕೇಳೆಂದ

ಅಚ್ಚರಿ:
(೧) ಮದವ – ೭ ಬಾರಿ ಪ್ರಯೋಗ
(೨) ಯಾವ ಮದವನ್ನು ಹೊರಗಿಡಬೇಕು – ಧನ, ಸತ್ಕುಲ, ಯೌವನ, ವಿದ್ಯ, ಪರಿಜನ, ವೈಭವ, ಆಚಾರಪದ

ಪದ್ಯ ೮೫: ವಿದ್ವಾಂಸರ ಲಕ್ಷಣಗಳೇನು?

ಯುಕುತಿ ವಿದುರುಗಳಾಗಿ ವಿದ್ಯಾ
ಧಿಕರೆನಿಸಿ ಸಮ ಬುದ್ಧಿಗಳ ನಾ
ಟಕವ ನಟಿಸುತ ಪರಮತತ್ತ್ವಜ್ಞಾನ ಪರರಾಗಿ
ಸಕಲ ಕಳೆಯಲಭಿಜ್ಞರಹ ಧಾ
ರ್ಮಿಕರು ಪರಪುರುಷಾರ್ಥಿಗಳು ವೈ
ದಿಕರಲೇ ವಿದ್ವಾಂಸರೆನಿಸುವರರಸ ಕೇಳೆಂದ (ಉದ್ಯೋಗ ಪರ್ವ, ೩ ಸಂಧಿ, ೮೫ ಪದ್ಯ)

ತಾತ್ಪರ್ಯ:
ವಿದ್ವಾಂಸನ ಲಕ್ಷಣವನ್ನು ಇಲ್ಲಿ ವಿದುರ ತಿಳಿಸುತ್ತಾರೆ. ಅಧಿಕ ವಿದ್ಯಾವಂತರಾಗಿ, ಯುಕ್ತಿಯನ್ನರಿತವರಾಗಿ, ಲೋಕದಲ್ಲಿ ಎಲ್ಲರೊಡನೆ ಸ್ಮಬುದ್ಧಿಯ ನಾಟಕವನ್ನು ನಟಿಸುತ್ತಾ, ಎಲ್ಲಕ್ಕಿಂತ ಹೆಚ್ಚಿನ ಆತ್ಮ ತತ್ತ್ವಜ್ಞಾನವನ್ನೇ ಹೆಚ್ಚಿನದೆಂದು ತಿಳಿದವರಾಗಿ, ಎಲ್ಲಾ ಕಲೆಗಳನ್ನು ಅರಿತವರಾಗಿ, ಧಾರ್ಮಿಕರೂ ಮೋಕ್ಷವೆಂಬ ಪುರುಷಾರ್ಥವನ್ನೇ ಬಯಸುತ್ತಿರುವ ವೈದಿಕ ಮಾರ್ಗಾನುಯಾಯಿಗಳು ವಿದ್ವಾಂಸರೆನ್ನಿಸಿಕೊಳ್ಳುವರು.

ಅರ್ಥ:
ಯುಕುತಿ: ಬುದ್ಧಿ, ತರ್ಕಬದ್ಧವಾದ ವಾದಸರಣಿ; ವಿದುರ:ವಿದ್ವಾಂಸ, ಪಂಡಿತ; ವಿದ್ಯ: ಜ್ಞಾನ; ಅಧಿಕರ: ಒಡೆಯ; ಸಮ: ಸಮನಾದ; ಬುದ್ಧಿ:ತಿಳಿವು, ಅರಿವು; ನಾಟಕ:ಅಭಿನಯ ಪ್ರಧಾನವಾದ ದೃಶ್ಯ ಪ್ರಬಂಧ; ನಟಿಸು: ಅಭಿನಯಿಸು; ಪರಮ: ಶ್ರೇಷ್ಠ; ತತ್ತ್ವ: ರಮಾತ್ಮನ ಸ್ವರೂಪವೇ ಆಗಿರುವ ಆತ್ಮನ ಸ್ವರೂಪ, ದಿಟ; ಪರ: ದೇವರ ಸೇವೆ, ಹರಕೆ, ಸರ್ವೋತ್ತಮ; ಸಕಲ: ಎಲ್ಲಾ; ಕಳೆ: ಕಲೆಗಳು; ಅಭಿಜ್ಞ: ಅರಿತವ; ಧಾರ್ಮಿಕ: ಧರ್ಮದ ಮಾರ್ಗದಲ್ಲಿ ನಡೆಯುವವ; ಪುರುಷಾರ್ಥ: ಮನುಷ್ಯನು ಸಾಧಿಸಬೇಕಾದ ಧರ್ಮ, ಅರ್ಥ, ಕಾಮ ಮತ್ತು ಮೋಕ್ಷ ಎಂಬ ನಾಲ್ಕು ಪರಮಧ್ಯೇಯಗಳು; ವೈದಿಕ: ವೇದಗಳನ್ನು ಬಲ್ಲವನು; ವಿದ್ವಾಂಸ: ಪಂಡಿತ; ಅರಸ: ರಾಜ;

ಪದವಿಂಗಡಣೆ:
ಯುಕುತಿ +ವಿದುರುಗಳಾಗಿ +ವಿದ್ಯ
ಅಧಿಕರ್+ಎನಿಸಿ +ಸಮ +ಬುದ್ಧಿಗಳ+ ನಾ
ಟಕವ+ ನಟಿಸುತ +ಪರಮತತ್ತ್ವಜ್ಞಾನ+ ಪರರಾಗಿ
ಸಕಲ +ಕಳೆಯಲ್+ಅಭಿಜ್ಞರಹ+ ಧಾ
ರ್ಮಿಕರು+ ಪರಪುರುಷಾರ್ಥಿಗಳು +ವೈ
ದಿಕರಲೇ +ವಿದ್ವಾಂಸರ್+ಎನಿಸುವರ್+ಅರಸ +ಕೇಳೆಂದ

ಅಚ್ಚರಿ:
(೧) ಯುಕುತಿ, ವಿದ್ಯ, ಸಮಬುದ್ಧಿ, ಪರಮತತ್ತ್ವಜ್ಞಾನ, ಕಲಾಭಿಜ್ಞ, ಧಾರ್ಮಿಕರು, ಪರಪುರುಷಾರ್ಥಿಗಳು – ವಿದ್ವಾಂಸರ ಲಕ್ಷಣ