ಪದ್ಯ ೧೧: ದುರ್ಯೊಧನನು ಯಾರನ್ನು ಸಮಾಧಾನ ಪಡಿಸಲು ಹೇಳಿದನು?

ಸಾಕದಂತಿರಲಿನ್ನು ವೈರಿ
ವ್ಯಾಕರಣಪಾಂಡಿತ್ಯದಲ್ಲಿ ವಿ
ವೇಕಶೂನ್ಯರು ನಾವು ಮೊದಲಾದೌರ್ಧ್ವದೈಹಿಕವ
ಆಕೆವಾಳರಿಗರುಹಿ ನೀವ
ಸ್ತೋಕಪುಣ್ಯರ ತಿಳುಹಿ ವಿಗಳಿತ
ಶೋಕರೆನಿಸುವುದಂಧನೃಪ ಗಾಂಧಾರಿದೇವಿಯರ (ಗದಾ ಪರ್ವ, ೧೦ ಸಂಧಿ, ೧೧ ಪದ್ಯ)

ತಾತ್ಪರ್ಯ:
ಅಶ್ವತ್ಥಾಮನ ಮಾತಿಗೆ ಉತ್ತರಿಸುತ್ತಾ ದುರ್ಯೋಧನನು, ಅದು ಹಾಗಿರಲಿ, ವೈರ್ಗಳೊಡನೆ ಮಾಡಿದ ಯುದ್ಧದಲ್ಲಿ ನಾವು ಅವಿವೇಕದಿಂದ ವರ್ತಿಸಿದ್ದೇವೆ. ನಮ್ಮನ್ನು ಸೇರಿಸಿ, ಎಲ್ಲರ ಅಂತ್ಯಕ್ರಿಯೆಗಳನ್ನು ಮಾಡಿಸಲು ವೀರರಿಗೆ ತಿಳಿಸಿರಿ. ನಮ್ಮ ತಂದೆ ತಾಯಿಗಳಾದ ಗಾಂಧಾರಿ, ಧೃತರಾಷ್ಟ್ರರನ್ನು ಸಮಾಧಾನ ಪಡಿಸಿ. ಅವರ ಶೋಕವನ್ನು ನಿವಾರಿಸಿರಿ ಎಂದು ಹೇಳಿದನು.

ಅರ್ಥ:
ಸಾಕು: ಕೊನೆ, ಅಂತ್ಯ; ವೈರಿ: ಶತ್ರು; ವ್ಯಾಕರಣ: ಭಾಷೆಯ ನಿಯಮಗಳನ್ನು ತಿಳಿಸುವ ಶಾಸ್ತ್ರ; ಪಾಂಡಿತ್ಯ: ವಿದ್ವತ್ತು, ಜ್ಞಾನ; ವಿವೇಕ: ಯುಕ್ತಾಯುಕ್ತ ವಿಚಾರ, ವಿವೇಚನೆ; ಶೂನ್ಯ: ಬರಿದಾದುದು, ಇಲ್ಲವಾದುದು; ಮೊದಲು: ಮುಂಚೆ; ಉರ್ಧ್ವದೇಹಿಕ: ಸತ್ತ ಮೇಲೆ ಮಾಡುವ ಕರ್ಮ; ಆಕೆವಾಳ: ವೀರ, ಪರಾಕ್ರಮಿ; ಅರುಹು: ತಿಳಿಸು; ಅಸ್ತೋಕ: ಅಧಿಕವಾದ; ಪುಣ್ಯ: ಸದ್ಗುಣ ಯುಕ್ತವಾದ; ವಿಗಳಿತ: ಜಾರಿದ, ಸರಿದ; ಶೋಕ: ದುಃಖ; ಅಂಧನೃಪ: ಧೃತರಾಷ್ಟ್ರ;

ಪದವಿಂಗಡಣೆ:
ಸಾಕ್+ಅದಂತಿರಲ್+ಇನ್ನು+ ವೈರಿ
ವ್ಯಾಕರಣ+ಪಾಂಡಿತ್ಯದಲ್ಲಿ +ವಿ
ವೇಕ+ಶೂನ್ಯರು+ ನಾವು +ಮೊದಲಾದ್+ಊರ್ಧ್ವದೈಹಿಕವ
ಆಕೆವಾಳರಿಗ್+ಅರುಹಿ +ನೀವ್
ಅಸ್ತೋಕಪುಣ್ಯರ+ ತಿಳುಹಿ +ವಿಗಳಿತ
ಶೋಕರೆನಿಸುವುದ್+ಅಂಧನೃಪ +ಗಾಂಧಾರಿ+ದೇವಿಯರ

ಅಚ್ಚರಿ:
(೧) ದುರ್ಯೋಧನನು ತನ್ನ ತಪ್ಪನ್ನು ಒಪ್ಪಿಕೊಳ್ಳುವ ಪರಿ – ವೈರಿ ವ್ಯಾಕರಣಪಾಂಡಿತ್ಯದಲ್ಲಿ ವಿವೇಕಶೂನ್ಯರು ನಾವು

ಪದ್ಯ ೨೮: ಅರ್ಜುನನ ಬಾಣ ಪ್ರಯೋಗ ಹೇಗಿತ್ತು?

ಆವರಿಸಿದುದು ಮತ್ತೆ ಹೊಸ ಮೇ
ಳಾವದಲಿ ಕುರುಸೇನೆ ಘನ ಗಾಂ
ಡೀವ ವಿಗಳಿತ ವಿಶಿಖ ವಿಸರದ ವಹಿಗೆ ವಂಚಿಸದೆ
ಲಾವಣಿಗೆಗೊಳಲಲಸಿ ಯಮನನು
ಜೀವಿಗಳ ಜಡರಾಯ್ತು ಫಲುಗುಣ
ನಾವ ವಹಿಲದಲೆಸುವನೆಂಬುದನರಿಯೆ ನಾನೆಂದ (ಕರ್ಣ ಪರ್ವ, ೧೪ ಸಂಧಿ, ೨೮ ಪದ್ಯ)

ತಾತ್ಪರ್ಯ:
ಸಂಜಯನು ಅರ್ಜುನನ ಪರಾಕ್ರಮವನ್ನು ವಿವರಿಸುತ್ತಾ, ಮತ್ತೆ ಹೊಸರಚನೆಯಿಂದ ಒಂದುಗೂಡಿದ ಕೌರವಸೇನೆಯು ಅರ್ಜುನನ ಬಾಣಗಳ ಜ್ವಾಲೆಗೆ ಬೆದರದೆ ಎದುರಾಯಿತು. ಸೈನಿಕರು ಯಮನನ್ನು ಹಿಂಬಾಲಿಸಿ ರಣರಂಅದಲ್ಲಿ ಬಿದ್ದರು. ಅರ್ಜುನನು ಅದೆಷ್ಟು ವೇಗದಿಂದ ಬಾಣಗಳನ್ನು ಬಿಟ್ಟನೋ ನಾನು ತಿಳಿಯೆ ಎಂದು ಸಂಜಯನು ಹೇಳಿದನು.

ಅರ್ಥ:
ಆವರಿಸು: ಮುಚ್ಚು; ಮತ್ತೆ: ಪುನಃ; ಹೊಸ: ನವೀನ; ಮೇಳ: ಗುಂಪು; ಘನ: ದೊಡ್ಡ, ಮಹತ್ತ್ವವುಳ್ಳ; ವಿಗಳಿತ: ಹರಡಿದ, ಜಾರಿದ; ವಿಶಿಖ: ಬಾಣ, ಅಂಬು; ವಿಸರ: ವಿಸ್ತಾರ, ವ್ಯಾಪ್ತಿ, ಗುಂಪು; ವಹಿಲ: ವೇಗ; ವಂಚಿಸು: ಮೋಸ ಮಾಡು; ಲಾವಣಿಗೆ: ಆಕ್ರಮಣ, ದಾಳಿ; ಅಲಸು: ತಡಮಾಡು, ಆಯಾಸಗೊಳ್ಳು; ಯಮ: ಜವರಾಯ; ಜೀವಿ: ಪ್ರಾಣಿ, ಉಸಿರಾಡುವ ಸಾಮರ್ಥ್ಯವುಳ್ಳದ್ದು; ಜಡ: ಅಚೇತನವಾದುದು; ವಹಿಲ:ಬೇಗ, ತ್ವರೆ;ಎಸು:ಬಾಣ ಪ್ರಯೋಗ ಮಾಡು; ಅರಿ: ತಿಳಿ;

ಪದವಿಂಗಡಣೆ:
ಆವರಿಸಿದುದು +ಮತ್ತೆ +ಹೊಸ +ಮೇ
ಳಾವದಲಿ +ಕುರುಸೇನೆ +ಘನ +ಗಾಂ
ಡೀವ +ವಿಗಳಿತ +ವಿಶಿಖ+ ವಿಸರದ +ವಹಿಗೆ +ವಂಚಿಸದೆ
ಲಾವಣಿಗೆಗೊಳ್+ಅಲಸಿ +ಯಮನನು
ಜೀವಿಗಳ +ಜಡರಾಯ್ತು +ಫಲುಗುಣನ್
ಆವ +ವಹಿಲದಲ್+ಎಸುವನ್+ಎಂಬುದನ್+ಅರಿಯೆ +ನಾನೆಂದ

ಅಚ್ಚರಿ:
(೧)ವ ಕಾರದ ಸಾಲು ಪದಗಳು – ವಿಗಳಿತ ವಿಶಿಖ ವಿಸರದ ವಹಿಗೆ ವಂಚಿಸದೆ
(೨) ಉಪಮಾನದ ಪ್ರಯೋಗ – ಲಾವಣಿಗೆಗೊಳಲಲಸಿ ಯಮನನು ಜೀವಿಗಳ ಜಡರಾಯ್ತು