ಪದ್ಯ ೨೯: ಭೀಮನು ಯಾವ ಉಡುಗೊರೆಯನ್ನು ಪಡೆಯಲು ಮುಂದಾದನು?

ಎಳೆಯ ಬಾಳೆಯ ಸುಳಿಗೆ ಸೀಗೆಯ
ಮೆಳೆಯೊಡನೆ ಸರಸವೆ ಕುಮಾರರ
ಬಲುಹ ನೋಡು ವಿಶೋಕ ತೊಡಗಿದರೆಮ್ಮೊಡನೆ ರಣವ
ಕಲಹದಲಿ ಮೈದೋರಿದಿವದಿರ
ತಲೆಗಳಿವು ವಾರಕದವಿವನರೆ
ಗಳಿಗೆಯಲಿ ತಾ ಕೊಂಬೆನೆಂದನು ನಗುತ ಕಲಿಭೀಮ (ದ್ರೋಣ ಪರ್ವ, ೧೨ ಸಂಧಿ, ೨೯ ಪದ್ಯ)

ತಾತ್ಪರ್ಯ:
ಭೀಮನು ವಿಶೋಕನೊಂದಿಗೆ ನುಡಿಯುತ್ತಾ, ಎಲೈ ವಿಶೋಕ, ಎಳೆಯ ಬಾಳೆಯ ಸುಳಿಯು ಸೀಗೆಯ ಮೆಳೆಯೊಡನೆ ಸರಸವಾಡಲು ಹೋದಂತೆ, ಈ ಕುಮಾರರು ನನ್ನೊಡನೆ ಯುದ್ಧಕ್ಕೆ ಬಂದರು. ಯುದ್ಧಕ್ಕೆ ಬಂದ ಇವರ ತಲೆಗಳು ನನಗೆ ಬಳುವಳಿಯಾಗಿ ಬಂದಿವೆ, ಈ ಮುಡಿಪನ್ನು ಇನ್ನು ಅರ್ಧಗಳಿಗೆಯಲ್ಲಿ ನಾನು ತೆಗೆದುಕೊಳ್ಳುತ್ತೇನೆ ಎಂದು ನಗುತ್ತಾ ಹೇಳಿದನು.

ಅರ್ಥ:
ಎಳೆ: ಚಿಕ್ಕ; ಬಾಳೆ: ಕದಳಿ; ಸುಳಿ: ಆವರಿಸು, ಮುತ್ತು; ಸೀಗೆ: ಒಂದು ಜಾತಿಯ ಮೆಳೆ ಮತ್ತು ಅದರ ಕಾಯಿ; ಮೆಳೆ: ದಟ್ಟವಾಗಿ ಬೆಳೆದ ಗಿಡಗಳ ಗುಂಪು; ಸರಸ: ಚೆಲ್ಲಾಟ, ವಿನೋದ; ಕುಮಾರ: ಪುತ್ರ; ಬಲು: ಶಕ್ತಿ; ನೋಡು: ವೀಕ್ಷಿಸು; ತೊಡಗು: ಅಡ್ಡಿ, ಅಡಚಣೆ; ರಣ: ಯುದ್ಧ; ಕಲಹ: ಯುದ್ಧ; ತೋರು: ಗೋಚರ; ಇವದಿರು: ಇಷ್ಟುಜನ; ತಲೆ: ಶಿರ; ವಾರುಕ: ಉಡುಗೊರೆ, ಪಾರಿತೋಷಕ; ಗಳಿಗೆ: ಸಮಯ; ಕೊಂಬೆ: ಕೊಲು; ನಗು: ಹರ್ಷ; ಕಲಿ: ಶೂರ;

ಪದವಿಂಗಡಣೆ:
ಎಳೆಯ +ಬಾಳೆಯ +ಸುಳಿಗೆ +ಸೀಗೆಯ
ಮೆಳೆಯೊಡನೆ +ಸರಸವೆ +ಕುಮಾರರ
ಬಲುಹ +ನೋಡು +ವಿಶೋಕ +ತೊಡಗಿದರ್+ಎಮ್ಮೊಡನೆ +ರಣವ
ಕಲಹದಲಿ +ಮೈದೋರಿದ್+ಇವದಿರ
ತಲೆಗಳಿವು +ವಾರಕದವ್+ಇವನ್+ಅರೆ
ಗಳಿಗೆಯಲಿ +ತಾ +ಕೊಂಬೆನ್+ಎಂದನು +ನಗುತ +ಕಲಿಭೀಮ

ಅಚ್ಚರಿ:
(೧) ಉಪಮಾನದ ಪ್ರಯೋಗ – ಎಳೆಯ ಬಾಳೆಯ ಸುಳಿಗೆ ಸೀಗೆಯ ಮೆಳೆಯೊಡನೆ ಸರಸವೆ

ಪದ್ಯ ೮೪: ಶಕುನಿಯು ದ್ರೌಪದಿಯನ್ನು ಹೇಗೆ ಹಂಗಿಸಿದ?

ಅಹುದಲೇ ಬಳಿಕೇನು ದಾಸ್ಯಕೆ
ವಿಹಿತವಾಯಿತು ನಿನ್ನ ತನುವಿನ
ಲಹ ಮನೋವ್ಯಥೆಯೇಕೆ ರಾಣಿವಾಸ ವೀಧಿಯಲಿ
ಮಹಿಳೆಯರ ಸಖ್ಯದಲಿ ಸೌಖ್ಯದ
ರಹಣಿಗೊಡಬಡು ವಾರಕದಲತಿ
ಬಹಳ ಭೂಷಣ ಭಾರದಲಿ ಮೆರೆಯೆಂದನಾ ಶಕುನಿ (ಸಭಾ ಪರ್ವ, ೧೫ ಸಂಧಿ, ೮೪ ಪದ್ಯ)

ತಾತ್ಪರ್ಯ:
ಹೌದು ಕರ್ಣನು ಹೇಳುತ್ತಿರುವುದು ಸರಿ, ಮತ್ತೇನು, ನಿನ್ನ ದೇಹವು ಈಗ ದಾಸ್ಯಕ್ಕೆಂದೇ ಆಯಿತು. ನಿನಗೇಕೆ ಮನಸ್ಸಿನ ವ್ಯಥೆ? ರಾಣೀವಾಸದ ಬೀದಿಯಲ್ಲಿ ದಾಸಿಯರ ಜೊತೆಯಲ್ಲಿ ಸೌಖ್ಯವನ್ನು ಅನುಭವಿಸಲು ಒಪ್ಪು. ನಿನಗೆ ಬರುವ ಹೇರಳವಾದ ಆಭರಣಗಳ ಭಾರದಿಂದ ಮೆರೆ ಎಂದು ಶಕುನಿಯು ಹಂಗಿಸಿದನು.

ಅರ್ಥ:
ಅಹುದು: ನಿಜ; ಬಳಿಕ: ನಂತರ; ದಾಸ್ಯ: ಸೇವೆ; ವಿಹಿತ: ಯೋಗ್ಯ; ತನು: ದೇಹ; ವ್ಯಥೆ: ನೋವು, ಯಾತನೆ; ಮನ: ಮನಸ್ಸು; ರಾಣಿ: ಅರಸಿ; ವಾಸ: ಮನೆ; ವೀಧಿ: ದಾರಿ; ಮಹಿಳೆ: ಸ್ತ್ರೀ; ಸಖ್ಯ: ಸ್ನೇಹ; ಸೌಖ್ಯ: ಕ್ಷೇಮ; ಅಣಿ: ಅವಕಾಶ; ಕೊಡಬಡು: ಒಪ್ಪು; ವಾರಕ: ಉಡುಗೊರೆ; ಅತಿಬಹಳ: ತುಂಬ; ಭೂಷಣ: ಅಲಂಕರಿಸುವುದು; ಭಾರ: ಹೊರೆ; ಮೆರೆ: ಹೊಳೆ, ಪ್ರಕಾಶಿಸು;

ಪದವಿಂಗಡಣೆ:
ಅಹುದಲೇ +ಬಳಿಕೇನು +ದಾಸ್ಯಕೆ
ವಿಹಿತವಾಯಿತು +ನಿನ್ನ +ತನುವಿನ
ಲಹ+ ಮನೋವ್ಯಥೆಯೇಕೆ +ರಾಣಿವಾಸ+ ವೀಧಿಯಲಿ
ಮಹಿಳೆಯರ+ ಸಖ್ಯದಲಿ +ಸೌಖ್ಯದ
ರಹಣಿ+ಕೊಡಬಡು +ವಾರಕದಲ್+ಅತಿ
ಬಹಳ +ಭೂಷಣ+ ಭಾರದಲಿ+ ಮೆರೆಯೆಂದನಾ +ಶಕುನಿ

ಅಚ್ಚರಿ:
(೧) ಹಂಗಿಸುವ ಪರಿ – ದಾಸ್ಯಕೆವಿಹಿತವಾಯಿತು ನಿನ್ನ ತನು; ವಾರಕದಲತಿ ಬಹಳ ಭೂಷಣ ಭಾರದಲಿ ಮೆರೆ

ಪದ್ಯ ೯: ಮಿಕ್ಕಾವ ವಸ್ತುಗಳನ್ನು ಯುಧಿಷ್ಠಿರನು ಸೋತನು?

ತೀರಿತಿಂದ್ರಪ್ರಸ್ಥದುರು ಭಂ
ಡಾರ ತನ್ನರಮನೆಯ ಪೈಕದ
ವಾರಕದ ಭಂಗಾರವೊಡ್ಡಿತು ಕೋಟಿ ಸಂಖ್ಯೆಯಲಿ
ಸೇರಿತದು ಕುರುಪತಿಗೆ ರಾಯನ
ನಾರಿಯರ ವಿವಿಧಾಭರಣ ಸಿಂ
ಗಾರವೊಡ್ಡಿತು ಕೊಂಡು ಮುಳುಗಿತು ಖಡ್ಡತನ ನೃಪನ (ಸಭಾ ಪರ್ವ, ೧೫ ಸಂಧಿ, ೯ ಪದ್ಯ)

ತಾತ್ಪರ್ಯ:
ಇಂದ್ರಪ್ರಸ್ಥಪುರದ ಬೊಕ್ಕಸವು ಖಾಲಿಯಾಯಿತು, ಎಲ್ಲಾ ಹಣವು ಪಣವಾಗಿಟ್ಟು ಧರ್ಮಜನು ಸೋತನು. ಪರಿವಾರದವರಿಗೆ ಬಳುವಳಿಯಾಗಿ ಬಂದಿದ್ದ ಹೊನ್ನಿನ ಆಭರಣ, ಧನಗಳನ್ನು ಕೋಟಿಗಟ್ಟಲೆ ಒಡ್ಡದನು. ಅವೆಲ್ಲವೂ ಕೌರವನ ವಶವಾಯಿತು. ಅಂತಃಪುರ ಸ್ತ್ರೀಯರ ಆಭರಣಗಳನ್ನೂ ಒಡ್ಡಿದ ಯುಧಿಷ್ಠಿರನ ತಿಳಿಗೇಡಿತನವು ಅದನ್ನೂ ಸೋತಿತು.

ಅರ್ಥ:
ತೀರಿತು: ಮುಗಿಯಿತು; ಉರು: ಅತಿದೊಡ್ಡ, ಶ್ರೇಷ್ಠ; ಭಂಡಾರ: ಬೊಕ್ಕಸ; ಅರಮನೆ: ರಾಜರ ಆಲಯ; ಪೈಕ: ಪರಿವಾರ, ಪಂಗಡ; ವಾರಕ: ಅಂತಃಪುರ; ಭಂಗಾರ: ಚಿನ್ನ; ಒಡ್ಡು: ಜೂಜಿನಲ್ಲಿ ಒಡ್ಡುವ ಹಣ; ಕೋಟಿ: ಲೆಕ್ಕವಿಲ್ಲದಷ್ಟು; ಸಂಖ್ಯೆ: ಎಣಿಕೆ; ಸೇರು: ತಲುಪು; ರಾಯ: ರಾಜ; ನಾರಿ: ಹೆಣ್ಣು; ವಿವಿಧ: ಹಲವಾರು; ಆಭರಣ: ಒಡವೆ; ಸಿಂಗಾರ: ಶೃಂಗಾರ, ಚೆಲುವು; ಮುಳುಗು: ತೋಯು; ಖಡ್ಡ: ತಿಳಿಗೇಡಿ, ಹೆಡ್ಡ; ನೃಪ: ರಾಜ;

ಪದವಿಂಗಡಣೆ:
ತೀರಿತ್+ಇಂದ್ರಪ್ರಸ್ಥದ್+ಉರು +ಭಂ
ಡಾರ +ತನ್+ಅರಮನೆಯ +ಪೈಕದ
ವಾರಕದ+ ಭಂಗಾರವೊಡ್ಡಿತು+ ಕೋಟಿ +ಸಂಖ್ಯೆಯಲಿ
ಸೇರಿತದು +ಕುರುಪತಿಗೆ +ರಾಯನ
ನಾರಿಯರ +ವಿವಿಧ+ಆಭರಣ +ಸಿಂ
ಗಾರವ್+ಒಡ್ಡಿತು +ಕೊಂಡು +ಮುಳುಗಿತು +ಖಡ್ಡತನ+ ನೃಪನ

ಅಚ್ಚರಿ:
(೧) ಪೈಕ, ವಾರಕ – ಪದಗಳ ಬಳಕೆ
(೨) ಧರ್ಮಜನನ್ನು ಖಡ್ಡತನ ನೃಪ ಎಂದು ಕರೆದಿರುವುದು