ಪದ್ಯ ೧೫: ಪದ್ಮವ್ಯೂಹದ ಮೊದಲ ಸಾಲು ಏನಾಯಿತು?

ಎಸಳ ಮೊನೆ ಮೋಹರದ ಸಂದಣಿ
ಯುಸಿರನುಳಿದುದು ಕೇಸರಾಕೃತಿ
ಯಸಮ ವೀರರು ಪಥಿಕರಾದರು ಗಗನಮಾರ್ಗದಲಿ
ನುಸುಳಿದರು ಕರ್ಣಿಕೆಯ ಕಾಹಿನ
ವಸುಮತೀಶರು ರಾಯನರನೆಲೆ
ದೆಸೆಗೆಸಲು ಮೊಳಗಿದನು ಪಾರ್ಥಕುಮಾರನಳವಿಯಲಿ (ದ್ರೋಣ ಪರ್ವ, ೫ ಸಂಧಿ, ೧೫ ಪದ್ಯ)

ತಾತ್ಪರ್ಯ:
ಪದ್ಮವ್ಯೂಹದ ತುದಿಯ ದಳದ ಸೈನ್ಯವು ನಾಶವಾಯಿತು. ಕೇಸರಾಕೃತಿಯಲ್ಲಿ ನಿಂತ ವೀರರು ಆಕಾಶಮಾರ್ಗದಲ್ಲಿ ನಡೆದರು. ಕರ್ಣಿಕೆಯನ್ನು ಕಾದುಕೊಳ್ಳುವ ರಾಜರು ಇಲ್ಲವಾದರು ದುರ್ಯೋಧನನ ನೆಲೆಯ ಮೇಲೆ ಅಭಿಮನ್ಯುವು ಗರ್ಜಿಸುತ್ತಾ ನುಗ್ಗಿದನು.

ಅರ್ಥ:
ಎಸಳು: ಹೂವಿನ ದಳ; ಮೊನೆ: ತುದಿ; ಮೋಹರ: ಯುದ್ಧ; ಸಂದಣಿ: ಗುಂಪು; ಉಸಿರು: ಗಾಳಿ; ಉಳಿ: ಮಿಕ್ಕ; ಕೇಸರಾಕೃತಿ: ಸಿಂಹದ ರೂಪ; ಆಕೃತಿ: ರೂಪ; ಅಸಮ: ಸಮವಲ್ಲದ; ವೀರ: ಶೂರ; ಪಥಿಕ: ದಾರಿಗ, ಪ್ರಯಾಣಿಕ; ಗಗನ: ಆಗಸ; ಮಾರ್ಗ: ದಾರಿ; ನುಸುಳು: ನುಣುಚಿಕೊಳ್ಳುವಿಕೆ; ಕರ್ಣಿಕೆ: ಕಮಲದ ಮಧ್ಯ ಭಾಗ, ಬೀಜಕೋಶ; ಕಾಹು: ಕಾಪಾಡು; ವಸುಮತೀಶ: ರಾಜ; ರಾಯ: ರಾಜ; ನೆಲೆ: ಭೂಮಿ; ಎಸಗು: ಕೆಲಸ, ಉದ್ಯೋಗ; ಮೊಳಗು: ಧ್ವನಿ, ಸದ್ದು; ಕುಮಾರ: ಪುತ್ರ; ಅಳವಿ: ಯುದ್ಧ;

ಪದವಿಂಗಡಣೆ:
ಎಸಳ+ ಮೊನೆ +ಮೋಹರದ +ಸಂದಣಿ
ಉಸಿರನ್+ಉಳಿದುದು +ಕೇಸರಾಕೃತಿ
ಅಸಮ +ವೀರರು +ಪಥಿಕರಾದರು+ ಗಗನಮಾರ್ಗದಲಿ
ನುಸುಳಿದರು +ಕರ್ಣಿಕೆಯ +ಕಾಹಿನ
ವಸುಮತೀಶರು+ ರಾಯನರನ್+ಎಲೆ
ದೆಸೆಗೆಸಲು +ಮೊಳಗಿದನು +ಪಾರ್ಥಕುಮಾರನ್+ಅಳವಿಯಲಿ

ಅಚ್ಚರಿ:
(೧) ಸತ್ತರು ಎಂದು ಹೇಳುವ ಪರಿ – ಕೇಸರಾಕೃತಿಯಸಮ ವೀರರು ಪಥಿಕರಾದರು ಗಗನಮಾರ್ಗದಲಿ

ಪದ್ಯ ೨೬: ಧರ್ಮಜನ ಅಳಲೇನು?

ಅಸುರರಿಪು ಕೃಪೆಯಿಂದ ನಿರ್ವಾ
ಹಿಸಿದ ನೀ ಯಜ್ಞವನು ಪೂರ್ವದ
ವಸುಮತೀಶರ ಪಾಡಿಗೆಣೆಯೆಂದೆನ್ನ ಪತಿಕರಿಸಿ
ಬಿಸುಟು ಬಿಜಯಂಗೈದ ನೀ ಯು
ಬ್ಬಸವನಾರೊಡನುಸುರುವೆನು ಹಿಂ
ದೆಸೆವ ಗೋಕುಲವಾಯ್ತು ಪುರವಿದು ಕೃಷ್ಣವಿರಹದಲಿ (ಸಭಾ ಪರ್ವ, ೧೨ ಸಂಧಿ, ೨೬ ಪದ್ಯ)

ತಾತ್ಪರ್ಯ:
ಕೃಷ್ಣನು ದ್ವಾರಕೆಗೆ ಪ್ರಯಾಣ ಬಳಸಲು, ಧರ್ಮಜನು ಅತೀವ ದುಃಖತಪ್ತನಾದನು. ನಾನು ಹಿಂದಿನ ಚಕ್ರವರ್ತಿಗಳಿಗೆ ಸರಿಸಮಾನನೆಂದು ಕೃಪೆಮಾಡಿ ಈ ರಾಜಸೂಯ ಯಜ್ಞವನ್ನು ನೆರವೇರಿಸಿಕೊಟ್ಟನು. ಈಗ ನಮ್ಮನ್ನು ಬಿಟ್ಟು ದ್ವಾರಕೆಗೆ ಹೊರಟು ಹೋದನು. ಈ ಸಂಕಟವನ್ನು ಯಾರಿಗೆ ಹೇಳಿಕೊಳ್ಳಲಿ? ಹಿಂದೆ ಶ್ರೀಕೃಷ್ಣನು ಮಧುರಾ ನಗರಿಗೆ ಹೊರಟು ಹೋದಾಗ ಗೋಕುಲಕ್ಕೆ ಬೇಸರವುಂಟಾದಂತೆ ಈ ಇಂದ್ರಪ್ರಸ್ಥ ನಗರವೂ ದುಃಖದಿಂದ ತುಂಬಿಹೋಗಿದೆ ಎಂದು ಧರ್ಮಜನು ತನ್ನ ಅಳಲನ್ನು ತೋಡಿಕೊಂಡನು.

ಅರ್ಥ:
ಅಸುರರಿಪು: ರಾಕ್ಷಸರ ವೈರಿ (ಕೃಷ್ಣ); ಕೃಪೆ: ದಯೆ; ನಿರ್ವಹಿಸು: ಮಾಡು, ಪೂರೈಸು; ಯಜ್ಞ: ಕ್ರತು, ಅಧ್ವರ; ಪೂರ್ವ: ಹಿಂದೆ; ವಸುಮತೀಶ: ರಾಜ; ವಸುಮತಿ: ಭೂಮಿ; ಪಾಡು: ಸ್ಥಿತಿ, ಅವಸ್ಥೆ; ಎಣೆ:ಸಮ, ಸಾಟಿ; ಪತಿಕರಿಸು: ದಯೆತೋರು, ಅನುಗ್ರಹಿಸು; ಬಿಸುಟು: ಹೊರಹಾಕು; ಬಿಜಯಂಗೈ: ಪ್ರಯಾಣ ಮಾಡುವಂತೆ ಮಾಡು; ಉಬ್ಬಸ: ಕಷ್ಟ; ಉಸುರು:ಮಾತನಾಡು; ಹಿಂದೆ: ಪೂರ್ವ; ಎಸೆವ: ತೋರುವ; ಪುರ: ಊರು; ವಿರಹ: ವಿಯೋಗ;

ಪದವಿಂಗಡಣೆ:
ಅಸುರರಿಪು +ಕೃಪೆಯಿಂದ +ನಿರ್ವಾ
ಹಿಸಿದ +ನೀ +ಯಜ್ಞವನು +ಪೂರ್ವದ
ವಸುಮತೀಶರ+ ಪಾಡಿಗ್+ಎಣೆಯೆಂದ್+ಎನ್ನ +ಪತಿಕರಿಸಿ
ಬಿಸುಟು +ಬಿಜಯಂಗೈದನ್ +ಈ+
ಉಬ್ಬಸವನ್+ಆರೊಡನ್+ಉಸುರುವೆನು +ಹಿಂದ್
ಎಸೆವ +ಗೋಕುಲವಾಯ್ತು +ಪುರವಿದು+ ಕೃಷ್ಣ+ವಿರಹದಲಿ

ಅಚ್ಚರಿ:
(೧) ಕೃಷ್ಣ, ಅಸುರರಿಪು – ಕೃಷ್ಣನಿಗೆ ಬಳಸಿದ ಪದಗಳು, ಪದ್ಯದ ಮೊದಲ ಮತ್ತು ಕೊನೆಯ ಪದ
(೨) ಪೂರ್ವ, ಹಿಂದೆ – ಸಾಮ್ಯಾರ್ಥ ಪದಗಳು

ಪದ್ಯ ೩೪: ದುರ್ಯೋಧನನ ಆಸ್ಥಾನ ಹೇಗೆ ಚೆಲುವಾಯಿತು?

ಮಿಸುಪ ತಮ್ಮ ಮುಖೇಂದುವನು ಸೈ
ರಿಸದ ಚಂದ್ರನ ಕಿತ್ತು ನಭದಲಿ
ಬಿಸುಟು ಬೇರ್ಗಳ ಹಿಡಿದರೋ ಹೇಳೆನಲು ಸಭೆಯೊಳಗೆ
ಶಶಿವದನೆಯರ ಕೈಯ ಸೀಗುರಿ
ವೆಸೆದವಿಕ್ಕೆಲದಲಿ ಸುಯೋಧನ
ವಸುಮತೀಶನ ವೈಭವದಲಾಸ್ಥಾನ ಚೆಲುವಾಯ್ತು (ಉದ್ಯೋಗ ಪರ್ವ, ೮ ಸಂಧಿ, ೩೪ ಪದ್ಯ)

ತಾತ್ಪರ್ಯ:
ಹೊಳೆವ ತಮ್ಮ ಮುಖದ ಚಂದ್ರನನ್ನು ಸೈರಿಸದ ಚಂದ್ರನನ್ನು ಕಿತ್ತು ಆಗಸದಲ್ಲಿ ತ್ಯಜಿಸಿ ಬೇರೆಯ ಚಂದ್ರನನ್ನು ಹಿಡಿದರೋ ಎನ್ನುವಂತೆ ಸಭೆಯ ಎರಡು ಕಡೆಯಲ್ಲೂ ಸುಂದರಿಯರು ತಮ್ಮ ಕೈಯಲ್ಲಿ ಚಾಮರವನ್ನು ಹಿಡಿದು ಬೀಸುತ್ತಿರಲು ದುರ್ಯೋಧನ ದರ್ಬಾರಿನ ವೈಭವವು ಸುಂದರವಾಗಿ ತೋರುತ್ತಿತ್ತು.

ಅರ್ಥ:
ಮಿಸುಪ: ಹೊಳೆವ, ಸುಂದರವಾದ; ತಮ್ಮ: ಅವರ; ಮುಖ: ಆನನ; ಇಂದು: ಚಂದ್ರ; ಸೈರಿಸು: ತಾಳು, ಸಹಿಸು; ಚಂದ್ರ: ಶಶಿ, ಇಂದು; ಕಿತ್ತು: ಸೀಳಿ; ನಭ: ಆಗಸ; ಬಿಸುಟು: ಬಿಸಾಕು, ಎಸೆ; ಬೇರ್ಗಳ: ಬೇರೆ; ಹಿಡಿ: ಬಂಧನ, ಸೆರೆ; ಹೇಳು: ತಿಳಿಸು; ಸಭೆ: ದರ್ಬಾರು; ಶಶಿ: ಚಂದ್ರ; ವದನ: ಮುಖ; ಶಶಿವದನೆ: ಸುಂದರಿ; ಕೈ: ಹಸ್ತ, ಕರ; ಸೀಗುರಿ: ಚಾಮರ; ಎಸೆ:ಶೋಭಿಸು; ಇಕ್ಕೆಲ:ಎರಡೂ ಕಡೆ; ವಸುಮತಿ: ಭೂಮಿ; ಈಶ: ಒಡೆಯ; ವೈಭವ: ಐಶ್ವರ್ಯ; ಚೆಲುವು: ಸುಂದರ;

ಪದವಿಂಗಡಣೆ:
ಮಿಸುಪ+ ತಮ್ಮ +ಮುಖ+ಇಂದುವನು +ಸೈ
ರಿಸದ+ ಚಂದ್ರನ+ ಕಿತ್ತು +ನಭದಲಿ
ಬಿಸುಟು +ಬೇರ್ಗಳ +ಹಿಡಿದರೋ+ ಹೇಳ್+ಎನಲು+ ಸಭೆಯೊಳಗೆ
ಶಶಿವದನೆಯರ+ ಕೈಯ +ಸೀಗುರಿವ್
ಎಸೆದವ್+ಇಕ್ಕೆಲದಲಿ +ಸುಯೋಧನ
ವಸುಮತೀಶನ+ ವೈಭವದಲ್+ಆಸ್ಥಾನ +ಚೆಲುವಾಯ್ತು

ಅಚ್ಚರಿ:
(೧) ಆಗಸದ ಚಂದ್ರನಿಗಿಂತ ಸುಂದರಿಯರ ಮುಖಾರವಿಂದ ಚೆಲುವಾಗಿತ್ತು ಎಂಬ ಉಪಮಾನದ ಕಲ್ಪನೆ
(೨) ಶಶಿ, ಇಂದು, ಚಂದ್ರ – ಸಮನಾರ್ಥಕ ಪದ

ಪದ್ಯ ೯೩ : ಪಾನೀಯಧಾರಕನ ಲಕ್ಷಣವೇನು?

ನಿಶಿತ ಪರಿಮಳದಿಂದ ವಾಮೋ
ದಿಸಿದ ಗಂಧ ದ್ರವ್ಯದೊಳು ಬಂ
ಧಿಸಿದ ಜೀವನ ವಿದುವೆ ತನ್ನಯ ಜೀವನವಿದೆಂದು
ವಸುಮತೀಶಂಗಿತ್ತು ತಾ ಭೋ
ಗಿಸದೆ ಬಳಸದೆ ದುರ್ಹೃದರ ತೊಲ
ಗಿಸುವವನೆ ಪಾನೀಯಧಾರಕನರಸ ಕೇಳೆಂದ (ಉದ್ಯೋಗ ಪರ್ವ, ೩ ಸಂಧಿ, ೯೩ ಪದ್ಯ)

ತಾತ್ಪರ್ಯ:
ಉತ್ತಮ ಸುಗಂಧವನ್ನು ಹೊಂದಿದ ಗಂಧದ ದ್ರವ್ಯದೊಡನೆ ಜೋಡಿಸಿದ ಜೀವನವೇ ತನ್ನದೆಂದು ನಂಬಿ, ಪಾನೀಯವನ್ನು ದೊರೆಗೆ ಕೊಟ್ಟು, ತಾನು ಭೋಗಿಸದೆ ಶತ್ರುಗಳನ್ನು ತೊಲಗಿಸುವವನೇ ಪಾನೀಯಧಾರಕನಾಗಲು ಅರ್ಹ ಎಂದು ವಿದುರ ಧೃತರಾಷ್ಟ್ರನಿಗೆ ಹೇಳಿದ.

ಅರ್ಥ:
ನಿಶಿತ: ತೀಕ್ಷ್ಣವಾದುದು; ಪರಿಮಳ: ಸುಗಂಧ; ವಾಮ: ಸುಂದರವಾದ; ಉದಿಸಿ: ಹುಟ್ಟು; ಗಂಧ: ಸುವಾಸನೆ, ಪರಿಮಳ; ದ್ರವ್ಯ: ಮೂಲಿಕೆ; ಬಂಧಿಸು: ಕಟ್ಟು; ಜೀವನ: ಜೀವ, ಬದುಕು; ವಸುಮತಿ: ಭೂಮಿ; ಈಶ: ಒಡೆಯ; ಭೋಗಿಸು: ಅನುಭವಿಸು; ಬಳಸು: ಉಪಯೋಗಿಸು; ದುರ್ಹೃದ: ಶತ್ರು; ತೊಲಗಿಸು: ಓಡಿಸು; ಅರಸ: ರಾಜ;

ಪದವಿಂಗಡಣೆ:
ನಿಶಿತ +ಪರಿಮಳದಿಂದ +ವಾಮ
ಉದಿಸಿದ +ಗಂಧ +ದ್ರವ್ಯದೊಳು +ಬಂ
ಧಿಸಿದ +ಜೀವನ +ವಿದುವೆ +ತನ್ನಯ +ಜೀವನವಿದೆಂದು
ವಸುಮತೀಶಂಗಿತ್ತು+ ತಾ +ಭೋ
ಗಿಸದೆ +ಬಳಸದೆ +ದುರ್ಹೃದರ +ತೊಲ
ಗಿಸುವವನೆ +ಪಾನೀಯಧಾರಕನ್+ಅರಸ +ಕೇಳೆಂದ

ಅಚ್ಚರಿ:
(೧) ಅರಸ, ವಸುಮತೀಶ – ರಾಜನ ಸಮಾನಾರ್ಥಕ ಪದ
(೨) ಶತ್ರುವನ್ನು ಹೇಳಲು ದುರ್ಹೃದ ಎಂಬ ಪದದ ಪ್ರಯೋಗ
(೩) ಗಂಧ, ಪರಿಮಳ – ಸಾಮ್ಯ ಪದಗಳು
(೪) ‘ಬ’ಕಾರದ ಜೋಡಿ ಪದ – ಬಳಸದೆ, ಭೋಗಿಸದೆ