ಪದ್ಯ ೫೫: ಧರ್ಮಜನು ಶಲ್ಯನಿಗೆ ಏನು ಹೇಳಿದನು?

ಮಾವ ಮಾಯಾಡಂಬರದ ದು
ರ್ಭಾವವೇತಕೆ ಕೌರವನೊಳೆಮ
ಗೀ ವಸುಧೆ ಹುದುವಲ್ಲ ನೆಲನೇಕಾಧಿಪತ್ಯವಲೆ
ನೀವು ಕೌರವ ಸರ್ವದಳದ ದು
ರಾವಹರಲೇ ಬಾಣಸೃಷ್ಟಿ ಕೃ
ತಾವಧಾನವ ತೋರೆನುತ ನೃಪನೆಚ್ಚು ಬೊಬ್ಬಿರಿದ (ಶಲ್ಯ ಪರ್ವ, ೨ ಸಂಧಿ, ೫೫ ಪದ್ಯ)

ತಾತ್ಪರ್ಯ:
ಧರ್ಮಜನು, ಮಾವ ಈ ಮಾಯೆಯ ತೋರಿಕೆಯ ದುಷ್ಟಭಾವವು ನಿಮಗೇಕೆ ಬಂತು? ಭೂಮಿಯು ಒಂದೇ ಒಡೆಯತನಕ್ಕೆ ಸೇರಿದ್ದು, ನೀವು ಕೌರವ ಸೇನೆಯ ಪರಮವೀರರು, ನಿಮ್ಮ ಬಾಣ ಪ್ರಯೋಗದ ಕೌಶಲ್ಯವನ್ನು ತೋರಿಸಿ ಎಂದು ಬಾಣಗಳನ್ನು ಬಿಟ್ಟು ಧರ್ಮಜನು ಬೊಬ್ಬಿರಿದನು.

ಅರ್ಥ:
ಮಾವ: ತಾಯಿಯ ತಮ್ಮ; ಮಾಯ: ಇಂದ್ರಜಾಲ; ಆಡಂಬರ: ತೋರಿಕೆ, ಢಂಭ; ದುರ್ಭಾವ; ಕೆಟ್ಟ ಭಾವನೆ; ವಸುಧೆ: ಭೂಮಿ; ಹುದು: ನಂಟು, ಸಂಬಂಧ, ಪಾಲು; ನೆಲ: ಭೂಮಿ; ಅಧಿಪತ್ಯ: ಒಡೆಯತನ; ಸರ್ವ: ಎಲ್ಲಾ; ದಳ; ಸೈನ್ಯ; ದುರಾವಹ: ಭರಿಸಲಾಗದ; ಬಾಣ: ಸರಳು; ಸೃಷ್ಟಿ: ತಯಾರಿಸು; ಅವಧಾನ: ಏಕಚಿತ್ತತೆ, ವಿದ್ವತ್ಪ್ರದರ್ಶನ; ತೋರು: ಗೋಚರ; ನೃಪ: ರಾಜ; ಎಚ್ಚು: ಬಾಣ ಪ್ರಯೋಗ ಮಾಡು; ಬೊಬ್ಬಿರಿ: ಗರ್ಜಿಸು;

ಪದವಿಂಗಡಣೆ:
ಮಾವ +ಮಾಯ+ಆಡಂಬರದ+ ದು
ರ್ಭಾವವೇತಕೆ +ಕೌರವನೊಳ್+ಎಮಗ್
ಈ+ ವಸುಧೆ +ಹುದುವಲ್ಲ+ ನೆಲನ್+ಏಕಾಧಿಪತ್ಯವಲೆ
ನೀವು +ಕೌರವ+ ಸರ್ವದಳದ+ ದು
ರಾವಹರಲೇ +ಬಾಣಸೃಷ್ಟಿ +ಕೃತ
ಅವಧಾನವ +ತೋರೆನುತ +ನೃಪನ್+ಎಚ್ಚು +ಬೊಬ್ಬಿರಿದ

ಅಚ್ಚರಿ:
(೧) ಬಾಣ ಕೌಶಲ್ಯವನ್ನು ತೋರಿ ಎಂದು ಹೇಳುವ ಪರಿ – ಬಾಣಸೃಷ್ಟಿ ಕೃತಾವಧಾನವ ತೋರೆನುತ

ಪದ್ಯ ೬೭: ಸಂಜೆಯಾದುದನ್ನು ಹೇಗೆ ವಿವರಿಸಲಾಗಿದೆ?

ಎಸಳುಮೊನೆ ಮೇಲಾಗಿ ತಾವರೆ
ಮುಸುಕುತಿದೆ ನೈದಿಲಿನ ನೆತ್ತಿಯ
ಬೆಸುಗೆ ಬಿಡುತಿದೆ ಜಕ್ಕವಕ್ಕಿಯ ತೆಕ್ಕೆ ಸಡಿಲುತಿದೆ
ದೆಸೆದೆಸೆಯ ತಾಣಾಂತರದ ಹೊಂ
ಬಿಸಿಲು ಬೀತುದು ಜೀಯ ಬಿನ್ನಹ
ವಸುಧೆ ತಂಪೇರಿತ್ತು ಬಿಜಯಂಗೈಯಬೇಕೆಂದ (ವಿರಾಟ ಪರ್ವ, ೧೧ ಸಂಧಿ, ೬೭ ಪದ್ಯ)

ತಾತ್ಪರ್ಯ:
ತಾವರೆಯ ದಳಗಲ ಮೇಲುಭಾಗಗಳು ಮುಚ್ಚುತ್ತಿವೆ, ಕನ್ನೈದಿಲೆಯ ನೆತ್ತಿಯು ಅರಳುತ್ತಿದೆ, ಚಕ್ರವಾಕ ಪಕ್ಷಿಗಳ ಆಲಿಂಗನವು ಸಡಿಲುತ್ತಿದೆ, ಎಲ್ಲೆಡೆಯಿದ್ದ ಹೊಂಬಿಸಿಲು ಮೆಲ್ಲಗೆ ಮಾಯವಾಗುತ್ತಿದೆ, ನೀವಿನ್ನು ದಯಮಾಡಿಸಿ ಎಂದು ಧರ್ಮಜನು ಕೃಷ್ಣನಿಗೆ ಹೇಳಿದನು.

ಅರ್ಥ:
ಎಸಳು: ಹೂವಿನ ದಳ; ಮೊನೆ: ಮುಖ; ತಾವರೆ: ಕಮಲ; ಮುಸುಕು: ಹೊದಿಕೆ; ನೆತ್ತಿ: ಮೇಲ್ಭಾಗ, ಶಿರ; ಬೆಸುಗೆ: ಪ್ರೀತಿ; ಬಿಡು: ತೊರೆ; ಜಕ್ಕವಕ್ಕಿ: ಚಕ್ರ ವಾಕ; ತೆಕ್ಕೆ: ಅಪ್ಪುಗೆ, ಆಲಿಂಗನ; ಸಡಿಲು: ಬಿಗಿಯಿಲ್ಲದಿರುವುದು; ದೆಸೆ: ದಿಕ್ಕು; ತಾಣ: ನೆಲೆ, ಬೀಡು; ಹೊಂಬಿಸಿಲು: ಚಿನ್ನದಂತಹ ಸೂರ್ಯನ ಕಿರಣ; ಬೀತು: ಕಳೆದು; ಜೀಯ: ಒಡೆಯ; ಬಿನ್ನಹ: ಕೋರಿಕೆ; ವಸುಧೆ: ಭೂಮಿ; ತಂಪು: ತಣಿವು, ಶೈತ್ಯ; ಬಿಜಯಂಗೈ: ದಯಮಾಡು;

ಪದವಿಂಗಡಣೆ:
ಎಸಳು+ಮೊನೆ+ ಮೇಲಾಗಿ +ತಾವರೆ
ಮುಸುಕುತಿದೆ+ ನೈದಿಲಿನ +ನೆತ್ತಿಯ
ಬೆಸುಗೆ +ಬಿಡುತಿದೆ +ಜಕ್ಕವಕ್ಕಿಯ +ತೆಕ್ಕೆ +ಸಡಿಲುತಿದೆ
ದೆಸೆದೆಸೆಯ +ತಾಣಾಂತರದ +ಹೊಂ
ಬಿಸಿಲು +ಬೀತುದು +ಜೀಯ +ಬಿನ್ನಹ
ವಸುಧೆ +ತಂಪೇರಿತ್ತು +ಬಿಜಯಂಗೈಯ+ಬೇಕೆಂದ

ಅಚ್ಚರಿ:
(೧) ಸಂಜೆಯಾಗುವುದನ್ನು ಸುಂದರವಾಗಿ ವರ್ಣಿಸುವ ಪರಿ – ಎಸಳುಮೊನೆ ಮೇಲಾಗಿ ತಾವರೆ
ಮುಸುಕುತಿದೆ ನೈದಿಲಿನ ನೆತ್ತಿಯ ಬೆಸುಗೆ ಬಿಡುತಿದೆ ಜಕ್ಕವಕ್ಕಿಯ ತೆಕ್ಕೆ ಸಡಿಲುತಿದೆ