ಪದ್ಯ ೨೧: ಗಂಗೆಯ ಎಂಟನೆಯ ಮಗನ ಹೆಸರೇನು?

ಸರಸಿಜಾಸನ ಕೊಟ್ಟ ಶಾಪದಿ
ಯರಸಿಯಾದಳು ಗಂಗೆ ಬಳಿಕಿ
ಬ್ಬರಿಗೆ ಮಕ್ಕಳು ವಸುಗಳೆಂಟು ವಸಿಷ್ಠ ಶಾಪದಲಿ
ನಿರಪರಾಧಿಗಳೇಳು ಜನನಾಂ
ತರಕೆ ಮರನವ ಕಂಡರುಳಿದಂ
ಗಿರವು ಭೂಲೋಕದಲಿ ಬಲಿದುದು ಭೀಷ್ಮನಾಮದಲಿ (ಆದಿ ಪರ್ವ, ೨ ಸಂಧಿ, ೨೧ ಪದ್ಯ)

ತಾತ್ಪರ್ಯ:
ಬ್ರಹ್ಮನ ಶಾಪದಿಮ್ದ ಗಂಗೆಯು ಶಂತನುವಿನ ಪತ್ನಿಯಾದಳು. ಅವರಿಬ್ಬರಿಗೆ ವಸಿಷ್ಠನ ಶಾಪದಿಂದ ಅಷ್ಟವಸುಗಳು ಮಕ್ಕಳಾಗಿ ಹುಟ್ಟಿದರು. ಮೊದಲೇಳು ಮಂದಿ ಹುಟ್ಟಿದೊಡನೇ ಮರಣವನ್ನು ಕಂಡರು. ಎಂಟನೆಯವನು ಉಳಿದು ಭೀಷ್ಮನೆಂಬ ಹೆಸರನ್ನು ಹೊಂದಿದನು.

ಅರ್ಥ:
ಸರಸಿಜ: ಕಮಲ; ಸರಸಿಜಾಸನ: ಬ್ರಹ್ಮ; ಕೊಡು: ನೀಡು; ಶಾಪ: ನಿಷ್ಠುರದ ನುಡಿ; ಅರಸಿ: ರಾಣಿ; ಬಳಿಕ: ನಂತರ; ಮಕ್ಕಳು: ಸುತ; ವಸು: ದೇವತೆಗಳ ಒಂದು ವರ್ಗ; ನಿರಪರಾಧಿ: ತಪ್ಪು ಮಾಡದವ; ಜನನ: ಹುಟ್ಟು; ಮರಣ: ಸಾವು; ಉಳಿದ: ಮಿಕ್ಕ್; ಭೂಲೋಕ: ಜಗತ್ತು; ಬಲಿ: ಗಟ್ಟಿ, ಬಲಿಷ್ಠ; ನಾಮ: ಹೆಸರು;

ಪದವಿಂಗಡಣೆ:
ಸರಸಿಜಾಸನ+ ಕೊಟ್ಟ+ ಶಾಪದಿ
ಅರಸಿಯಾದಳು +ಗಂಗೆ +ಬಳಿಕ್
ಇಬ್ಬರಿಗೆ +ಮಕ್ಕಳು+ ವಸುಗಳೆಂಟು +ವಸಿಷ್ಠ+ ಶಾಪದಲಿ
ನಿರಪರಾಧಿಗಳ್+ಏಳು +ಜನನಾಂ
ತರಕೆ+ ಮರಣವ+ ಕಂಡರ್+ಉಳಿದಂಗ್
ಇರವು +ಭೂಲೋಕದಲಿ +ಬಲಿದುದು +ಭೀಷ್ಮ+ನಾಮದಲಿ

ಅಚ್ಚರಿ:
(೧) ಶಾಪದಲಿ, ನಾಮದಲಿ; ಸರಸಿ, ಅರಸಿ – ಪ್ರಾಸ ಪದ

ಪದ್ಯ ೩೫: ಯಾವ ರೀತಿಯ ಪ್ರಾಣಿಗಳು ಸೃಷ್ಟಿಯಾದವು?

ಭೃಗು ಪುಲಸ್ತ್ಯವಸಿಷ್ಠದಕ್ಷಾ
ದಿಗಳೆನಿಪ್ಪ ನವ ಪ್ರಜೇಶ್ವರ
ರೊಗುಮಿಗೆಯ ಮಾಡಿದರು ಸೃಷ್ಟಿಗೆ ಬೇರೆ ಬೇರವರು
ಜಗದ ಜೋಡಣೆಯಾಯ್ತು ಭೂತಾ
ಳಿಗೆ ಚತುರ್ವಿಧ ಸೃಷ್ಟಿಯೊಡ್ಡಣೆ
ನಿಗಮ ಮತದಲಿ ಹೂಡಿತವನೀಪಾಲ ಕೇಳೆಂದ (ಅರಣ್ಯ ಪರ್ವ, ೧೫ ಸಂಧಿ, ೩೫ ಪದ್ಯ)

ತಾತ್ಪರ್ಯ:
ಭೃಗು, ಪುಲಸ್ತ್ಯ, ವಸಿಷ್ಠ, ದಕ್ಷರೇ ಮೊದಲಾದ ಒಂಬತ್ತು ಜನ ಪ್ರಜಾಪತಿಗಳು ವಿಧವಿಧ ಸೃಷ್ಟಿಯನ್ನು ಮಾದಿದರು. ಜಗತ್ತು ಹೊಸದಾಗಿ ಜೋಡಣೆಯಾಯಿತು. ನಾಲ್ಕು ವಿಧದ (ಸ್ವೇದಜ, ಅಂಡಜ, ಉದ್ಭಿಜ, ಜರಾಯಜ) ಪಾಣಿಗಳು ವೇದಮತದಂತೆ ಸೃಷ್ಟಿಯಾದವು.

ಅರ್ಥ:
ಆದಿ: ಮುಂತಾದ; ನವ: ಹೊಸ; ಪ್ರಜೇಶ್ವರ: ಪ್ರಜಾಪತಿ, ರಾಜ; ಒಗುಮಿಗೆ: ಆಧಿಕ್ಯ, ಹೆಚ್ಚಳ; ಸೃಷ್ಟಿ: ಉತ್ಪತ್ತಿ, ಹುಟ್ಟು; ಬೇರೆ: ಅನ್ಯ; ಜಗ: ಪ್ರಪಂಚ; ಜೋಡಣೆ: ಹೊಂದಿಸು; ಭೂತ: ಚರಾಚರಾತ್ಮಕ ಜೀವರಾಶಿ; ಆಳಿ: ಗುಂಪು; ಚತುರ್ವಿಧ: ನಾಲ್ಕು ಪ್ರಭೇದ; ಒಡ್ಡಣ: ಗುಂಪು, ಸಮೂಹ; ನಿಗಮ: ವೇದ; ಮತ: ವಿಚಾರ; ಹೂಡು: ಅಣಿಗೊಳಿಸು; ಅವನೀಪಾಲ: ರಾಜ; ಅವನೀ: ಭೂಮಿ; ಕೇಳು: ಆಲಿಸು;

ಪದವಿಂಗಡಣೆ:
ಭೃಗು+ ಪುಲಸ್ತ್ಯ+ವಸಿಷ್ಠ+ದಕ್ಷ
ಆದಿಗಳ್+ಎನಿಪ್ಪ +ನವ +ಪ್ರಜೇಶ್ವರರ್
ಒಗುಮಿಗೆಯ +ಮಾಡಿದರು +ಸೃಷ್ಟಿಗೆ +ಬೇರೆ +ಬೇರವರು
ಜಗದ+ ಜೋಡಣೆಯಾಯ್ತು +ಭೂತಾ
ಳಿಗೆ +ಚತುರ್ವಿಧ +ಸೃಷ್ಟಿಯೊಡ್ಡಣೆ
ನಿಗಮ +ಮತದಲಿ +ಹೂಡಿತ್+ಅವನೀಪಾಲ+ ಕೇಳೆಂದ

ಅಚ್ಚರಿ:
(೧) ಪ್ರಜೇಶ್ವರರು – ಭೃಗು, ಪುಲಸ್ತ್ಯ, ವಸಿಷ್ಠ, ದಕ್ಷ

ಪದ್ಯ ೧೧: ಇಂದ್ರನು ವೃತನನ್ನು ಹೇಗೆ ಕೊಂದನು?

ಆ ಮುನಿಯ ಕಂಕಾಳದಲಿ ಸು
ತ್ರಾಮಕೊಂದನು ವೃತ್ರನನು ಬಳಿ
ಕಾ ಮಹಾದಾನವರು ರಕ್ಕಸಕೋಟಿಜಲಧಿಯಲಿ
ಭೀಮಬಲರಡಗಿದರು ಬಂದೀ
ಭೂಮಿಯಲ್ಲಿ ವಸಿಷ್ಠನಾಶ್ರಮ
ದಾ ಮುನೀಂದ್ರರ ತಿಂದರಂದು ಸಹಸ್ರ ಸಂಖ್ಯೆಯಲಿ (ಅರಣ್ಯ ಪರ್ವ, ೧೦ ಸಂಧಿ, ೧೧ ಪದ್ಯ)

ತಾತ್ಪರ್ಯ:
ದಧೀಚಿಯ ಎಲುಬಿನಿಂದ ವಜ್ರಾಯುಧವನ್ನು ರೈಸಿ ಇಂದ್ರನು ವೃತನನ್ನು ಸಂಹರಿಸಿದನು. ಆಗ ಅನಂತ ಸಂಖ್ಯೆಯ ರಾಕ್ಷಸರು ಸಮುದ್ರದಲ್ಲಿ ಅಡಗಿಕೊಂಡು ಹೊರಕ್ಕೆ ಬಂದ ಮೇಲೆ ಅವರು ಭೂಮಿಯಲ್ಲಿ ವಸಿಷ್ಠರ ಆಶ್ರಮದ ಸಾವಿರಾರು ಮುನಿಗಳನ್ನು ತಿಂದರು.

ಅರ್ಥ:
ಮುನಿ: ಋಷಿ; ಕಂಕಾಳ: ಅಸ್ತಿಪಂಜರ; ಸುತ್ರಾಮ: ಇಂದ್ರ; ಕೊಲ್ಲು: ಸಾಯಿಸು; ಬಳಿಕ: ನಂತರ; ದಾನವ: ರಾಕ್ಷಸ; ರಕ್ಕಸ: ನೆತ್ತರು; ಜಲಧಿ: ಸಾಗರ; ಭೀಮ: ಭಯಂಕರವಾದ; ಬಲ: ಶಕ್ತಿ; ಅಡಗು: ಅವಿತುಕೊಳ್ಳು; ಭೂಮಿ: ಧರಣಿ; ಆಶ್ರಮ: ಕುಟೀರ; ಮುನೀಂದ್ರ: ಋಷಿವರ್ಯ; ತಿಂದು: ಭಕ್ಷಿಸು; ಸಹಸ್ರ: ಸಾವಿರ; ಸಂಖ್ಯೆ: ಎಣಿಕೆ;

ಪದವಿಂಗಡಣೆ:
ಆ+ ಮುನಿಯ +ಕಂಕಾಳದಲಿ +ಸು
ತ್ರಾಮ+ಕೊಂದನು +ವೃತ್ರನನು +ಬಳಿ
ಕಾ +ಮಹಾ+ದಾನವರು+ ರಕ್ಕಸ+ಕೋಟಿ+ಜಲಧಿಯಲಿ
ಭೀಮ+ಬಲರ್+ಅಡಗಿದರು+ ಬಂದೀ
ಭೂಮಿಯಲ್ಲಿ +ವಸಿಷ್ಠನ್+ಆಶ್ರಮದ್
ಆ+ ಮುನೀಂದ್ರರ +ತಿಂದರ್+ಅಂದು +ಸಹಸ್ರ+ ಸಂಖ್ಯೆಯಲಿ

ಅಚ್ಚರಿ:
(೧) ರಾಕ್ಷಸರು ಅಡಗಿಕೊಂಡ ಪರಿ – ಮಹಾದಾನವರು ರಕ್ಕಸಕೋಟಿಜಲಧಿಯಲಿ
ಭೀಮಬಲರಡಗಿದರು

ಪದ್ಯ ೭೬: ಶಿವನ ದರುಶನವನ್ನು ಯಾರು ಪಡೆದರು?

ಸನಕ ನಾರದ ಭೃಗು ಪರಾಶರ
ತನುಜ ಭಾರದ್ವಾಜ ಗೌತಮ
ಮುನಿ ವಸಿಷ್ಠ ಸನತ್ಕುಮಾರನು ಕಣ್ವನುಪಮನ್ಯು
ವನಕೆ ಬಂದರು ಪಾರ್ಥ ಕೇಳಿದು
ನಿನಗೆ ಸಿದ್ಧಿಗಡೆಮಗೆ ಲೇಸಾ
ಯ್ತೆನುತ ಮೈಯಿಕ್ಕಿದುದು ಹರನಂಘ್ರಿಯಲಿ ಮುನಿನಿಕರ (ಅರಣ್ಯ ಪರ್ವ, ೭ ಸಂಧಿ, ೭೬ ಪದ್ಯ)

ತಾತ್ಪರ್ಯ:
ಸನಕ, ನಾರದ, ಭೃಗು, ವೇದವ್ಯಾಸ, ಭಾರದ್ವಾಜ, ಗೌತಮ, ವಸಿಷ್ಠ, ಸನತ್ಕುಮಾರ, ಕಣ್ವ, ಉಪಮನ್ಯು ಮೊದಲಾದ ಋಷಿಗಳು ಇಂದ್ರಕೀಲ ವನಕ್ಕೆ ಬಂದು ಅರ್ಜುನನ ತಪಸ್ಸಿಗೆ ಮೆಚ್ಚಿ, ನಿನ್ನ ತಪಸ್ಸಿನ ಸಿದ್ಧಿಯಿಂದ ನಮಗೆಲ್ಲರಿಗೂ ಶಿವನ ದರುಶನವಾಗಿದೆ ಎಂದು ಹೇಳಿ, ಶಿವನ ಪಾದಗಳಿಗೆ ನಮಸ್ಕರಿಸಿದರು.

ಅರ್ಥ:
ತನುಜ: ಮಗ; ಮುನಿ: ಋಷಿ; ವನ: ಕಾಡು; ಬಂದು: ಆಗಮಿಸು; ಲೇಸು: ಒಳಿತು; ಮೈಯಿಕ್ಕು: ನಮಸ್ಕರಿಸು; ಹರ: ಶಿವ; ಅಂಘ್ರಿ: ಪಾದ; ನಿಕರ: ಗುಂಪು;

ಪದವಿಂಗಡಣೆ:
ಸನಕ +ನಾರದ +ಭೃಗು +ಪರಾಶರ
ತನುಜ +ಭಾರದ್ವಾಜ +ಗೌತಮ
ಮುನಿ +ವಸಿಷ್ಠ +ಸನತ್ಕುಮಾರನು +ಕಣ್ವನ್+ಉಪಮನ್ಯು
ವನಕೆ+ ಬಂದರು +ಪಾರ್ಥ +ಕೇಳ್+ಇದು
ನಿನಗೆ +ಸಿದ್ಧಿಗಡ್+ಎಮಗೆ +ಲೇಸಾ
ಯ್ತೆನುತ +ಮೈಯಿಕ್ಕಿದುದು +ಹರನ್+ಅಂಘ್ರಿಯಲಿ +ಮುನಿನಿಕರ

ಅಚ್ಚರಿ:
(೧) ಋಷಿಮುನಿಗಳ ಪರಿಚಯ – ಸನಕ, ನಾರದ, ಭೃಗು, ವೇದವ್ಯಾಸ, ಭಾರದ್ವಾಜ, ಗೌತಮ,
ವಸಿಷ್ಠ, ಸನತ್ಕುಮಾರ, ಕಣ್ವ, ಉಪಮನ್ಯು
(೨) ವೇದವ್ಯಾಸರನ್ನು ಪರಾಶರ ತನುಜ ಎಂದು ಕರೆದಿರುವುದು

ಪದ್ಯ ೧೧: ಯಾವ ಮಹರ್ಷಿಗಳು ಕರ್ಣನ ಪರ ನಿಂತರು?

ಭೃಗು ವಸಿಷ್ಠಾಂಗಿರಸ ದಕ್ಷಾ
ದಿಗಳು ಪಾರ್ಥನ ಪಕ್ಷವಾಯ್ತೀ
ಚೆಗೆ ಪುಲಸ್ತ ಮರೀಚಿ ವಿಶ್ವಾಮಿತ್ರ ಗೌತಮರು
ಜಗದ ಜೀವರು ಧಾತುಮೂಲಾ
ದಿಗಳೊಳಿಕ್ಕಟ್ಟಾದುದೀ ಕಾ
ಳೆಗ ಚತುರ್ದಶಭುವನಜನ ಸಂಕ್ಷೋಭವಾಯ್ತೆಂದ (ಕರ್ಣ ಪರ್ವ, ೨೨ ಸಂಧಿ, ೧೧ ಪದ್ಯ)

ತಾತ್ಪರ್ಯ:
ಮಹರ್ಷಿಗಳ ಪೈಕಿ ಭೃಗು, ವಸಿಷ್ಠ, ಅಂಗಿರಸ, ದಕ್ಷನೇ ಮೊದಲಾದವರು ಅರ್ಜುನನ ಪಕ್ಷ ಸೇರಿದರು. ಪುಲಸ್ತ, ಮರೀಚಿ, ವಿಶ್ವಾಮಿತ್ರ, ಗೌತಮರು ಕರ್ಣನ ಕಡೆ ಸೇರಿದರು. ಜಗತ್ತಿನ ಜೀವರು, ಧಾತುಮೂಲಗಳು ಎರಡು ಪಕ್ಷವಾಯಿತು. ಕರ್ಣಾರ್ಜುನರ ಕಾಳಗವು ಲೋಕದ ಜನರ ತಳಮಳಕ್ಕೆ ಕಾರಣವಾಯಿತು.

ಅರ್ಥ:
ಆದಿ: ಮುಂತಾದ; ಜಗ: ಜಗತ್ತು, ಪ್ರಪಂಚ; ಜೀವರು: ಜೀವಿಸಿರುವ, ಉಸಿರಾಡುವ; ಧಾತು: ಮೂಲವಸ್ತು; ಮೂಲ: ಕಾರಣ; ಪ್ರಾರಂಭ; ಕಾಳೆಗ: ಯುದ್ಧ; ಚತುರ್ದಶ: ಹದಿನಾಲ್ಕು; ಭುವನ: ಪ್ರಪಂಚ, ಜಗತ್ತು; ಜನ: ಜೀವರು, ಮನುಷ್ಯ; ಸಂಕ್ಷೋಭ: ತಳಮಳ;

ಪದವಿಂಗಡಣೆ:
ಭೃಗು +ವಸಿಷ್ಠ+ಅಂಗಿರಸ+ ದಕ್ಷ
ಆದಿಗಳು +ಪಾರ್ಥನ +ಪಕ್ಷವಾಯ್ತ್
ಈಚೆಗೆ +ಪುಲಸ್ತ +ಮರೀಚಿ+ ವಿಶ್ವಾಮಿತ್ರ+ ಗೌತಮರು
ಜಗದ +ಜೀವರು +ಧಾತುಮೂಲಾ
ದಿಗಳೊಳ್+ಇಕ್ಕಟ್ಟಾದುದ್+ಈ+ ಕಾ
ಳೆಗ +ಚತುರ್ದಶ+ಭುವನಜನ +ಸಂಕ್ಷೋಭವಾಯ್ತೆಂದ

ಅಚ್ಚರಿ:
(೧) ಹದಿನಾಲ್ಕು ಲೋಕದ ಜನರಿಗೆ ಪರಿಣಾಮ ಬೀರಿತು ಎಂದು ಹೇಳಲು – ಚತುರ್ದಶಭುವನಜನ ಸಂಕ್ಷೋಭವಾಯ್ತೆಂದ
(೨) ಮಹರ್ಷಿಗಳ ಹೆಸರು – ಭೃಗು, ವಸಿಷ್ಠ, ಅಂಗಿರಸ, ದಕ್ಷ, ಪುಲಸ್ತ, ಮರೀಚಿ, ವಿಶ್ವಾಮಿತ್ರ, ಗೌತಮ;

ಪದ್ಯ ೨೭: ದುರ್ಯೋಧನನು ಯಾವ ರಾಶಿಯವನೆಂದು ಹೇಳಿದನು?

ವ್ಯಾಸ ವಚನವನಾ ವಸಿಷ್ಠ ಮು
ನೀಶನೊಳುನುಡಿಗಳನು ಕೋವಿದ
ಕೌಶಿಕನ ಕಥನವನು ಕೈಕೊಳ್ಳದೆ ಸುಯೋಧನನು
ದೇಶವನು ಪಾಂಡವರಿಗೀವ
ಭ್ಯಾಸವೆಮ್ಮೊಳಗಿಲ್ಲನೀತಿಯ
ರಾಶಿಯಾನಹೆನೆನ್ನನೊಡಬಡಿಸುವಿರಿ ನೀವೆಂದ (ಉದ್ಯೋಗ ಪರ್ವ, ೯ ಸಂಧಿ, ೨೭ ಪದ್ಯ)

ತಾತ್ಪರ್ಯ:
ವ್ಯಾಸರ ಮಾತು, ವಸಿಷ್ಠರ ಹಿತವಚನ, ವಿದ್ವಾಂಸರಾದ ಕೌಶಿಕ ಮುನಿಗಳ ವಿಚಾರ ಯಾವುದು ಸುಯೋಧನನ ಕಿವಿಗೆ ಬೀಳಲಿಲ್ಲ, ಅವರ ಮಾತನ್ನೊಪ್ಪದೆ ಪಾಂಡವರಿಗೆ ಭೂಮಿಯನ್ನು ಕೊಡವ ಅಭ್ಯಾಸ ನನಗಿಲ್ಲ, ನಾನು ಅನೀತಿಯ ರಾಶಿಯವನು, ನನ್ನನ್ನೇಕೆ ಒಪ್ಪಿಸಲು ಬರುತ್ತಿರುವಿರಿ ಎಂದು ಪ್ರಶ್ನಿಸಿದನು.

ಅರ್ಥ:
ವಚನ: ಮಾತು; ಮುನಿ: ಋಷಿ; ಮುನೀಶ: ಮುನಿಗಳಲ್ಲಿ ಶ್ರೇಷ್ಠನಾದವ; ಒಳು: ಒಳಿತು; ನುಡಿ: ಮಾತು; ಕೋವಿದ: ವಿದ್ವಾಂಸ; ಕಥನ: ವಿಚಾರ; ಕೈಕೊಳ್ಳು: ಒಪ್ಪಿಕೊ; ದೇಶ: ರಾಷ್ಟ್ರ; ಅಭ್ಯಾಸ: ರೂಢಿ; ಅನೀತಿ: ಕೆಟ್ಟ ಮಾರ್ಗ; ರಾಶಿ:ಗುಂಪು; ಒಡಬಡಿಸು: ಒಪ್ಪಿಸು;

ಪದವಿಂಗಡಣೆ:
ವ್ಯಾಸ+ ವಚನವನ್+ಆ+ ವಸಿಷ್ಠ+ ಮು
ನೀಶನ್+ಒಳುನುಡಿಗಳನು +ಕೋವಿದ
ಕೌಶಿಕನ +ಕಥನವನು +ಕೈಕೊಳ್ಳದೆ +ಸುಯೋಧನನು
ದೇಶವನು +ಪಾಂಡವರಿಗ್+ಈವ್
ಅಭ್ಯಾಸವ್+ಎಮ್ಮೊಳಗ್+ಇಲ್ಲ್+ಅನೀತಿಯ
ರಾಶಿಯಾನಹೆನ್+ಎನ್ನನೊಡಬಡಿಸುವಿರಿ+ ನೀವೆಂದ

ಅಚ್ಚರಿ:
(೧) ‘ಕ’ ಕಾರದ ಸಾಲು ಪದಗಳು – ಕೋವಿದ ಕೌಶಿಕನ ಕಥನವನು ಕೈಕೊಳ್ಳದೆ
(೨) ‘ವ’ಕಾರದ ತ್ರಿವಳಿ ಪದ – ವ್ಯಾಸ ವಚನವನಾ ವಸಿಷ್ಠ
(೩) ವಚನ, ನುಡಿ – ಸಮನಾರ್ಥಕ ಪದ

ಪದ್ಯ ೮: ಯಾವ ಮುನಿಗಳು ಯಾಗಕ್ಕೆ ಆಗಮಿಸಿದರು?

ಜನಪ ಕೇಳೀಚೆಯಲಿ ಬಂದುದು
ಮುನಿಗಳಾಂಗಿರ ಕಣ್ವ ಭೃಗು ಜೈ
ಮಿನಿ ಸುಮಂತ ವಸಿಷ್ಠ ಶೌನಕ ಗಾರ್ಗ್ಯ ಬೃಹದಶ್ವ
ಸನಕ ಶುಕ ಜಾಬಾಲಿ ತಿತ್ತಿರಿ
ವಿನುತ ಮಾರ್ಕಂಡೇಯ ಮುದ್ಗಲ
ತನಯ ರೋಮಶರೈಭ್ಯವತ್ಸನು ಶೈಬ್ಯ ನಾರದರು (ಸಭಾ ಪರ್ವ, ೮ ಸಂಧಿ, ೮ ಪದ್ಯ)

ತಾತ್ಪರ್ಯ:
ಜನಮೇಜಯ ರಾಜ ಕೇಳು, ರಾಜಸೂಯ ಯಾಗಕ್ಕೆ ರಾಜರಲ್ಲದೆ ಶ್ರೇಷ್ಠ ಮುನಿವರ್ಗವು ಆಗಮಿಸಿದರು. ಅಂಗಿರಸ, ಕಣ್ವ, ಭೃಗು, ಜೈಮಿನಿ, ಸುಮಂತ, ವಸಿಷ್ಠ, ಶೌನಕ, ಗಾರ್ಗ್ಯ, ಬೃಹದಶ್ವ, ಸನಕ, ಶುಕ, ಜಾಬಾಲಿ, ತಿತ್ತಿರಿ, ಮಾರ್ಕಂಡೇಯ, ಮೌದ್ಗಲ್ಯ, ರೋಮಶ, ರೈಭ್ಯ, ಶ್ರೀವತ್ಸ, ಶೈಬ್ಯ, ನಾರದರೇ ಮೊದಲಾದ ಋಷಿಗ್ತಳು ಆಗಮಿಸಿದರು.

ಅರ್ಥ:
ಜನಪ: ರಾಜ (ಇಲ್ಲಿ ಜನಮೇಜಯ); ಕೇಳು: ಆಲಿಸು; ಈಚೆಯಲಿ: ಇತ್ತಕಡೆ; ಬಂದುದು: ಆಗಮಿಸಿದರು; ಮುನಿ: ಋಷಿ; ತನಯ: ಮಗ;

ಪದವಿಂಗಡಣೆ:
ಜನಪ +ಕೇಳ್+ಈಚೆಯಲಿ +ಬಂದುದು
ಮುನಿಗಳ್+ಆಂಗಿರ+ ಕಣ್ವ+ ಭೃಗು +ಜೈ
ಮಿನಿ +ಸುಮಂತ +ವಸಿಷ್ಠ +ಶೌನಕ+ ಗಾರ್ಗ್ಯ +ಬೃಹದಶ್ವ
ಸನಕ+ ಶುಕ +ಜಾಬಾಲಿ +ತಿತ್ತಿರಿ
ವಿನುತ +ಮಾರ್ಕಂಡೇಯ +ಮುದ್ಗಲ
ತನಯ +ರೋಮಶ+ರೈಭ್ಯ+ವತ್ಸನು+ ಶೈಬ್ಯ+ ನಾರದರು

ಅಚ್ಚರಿ:
(೧) ೨೦ ಋಷಿಗಳ ಹೆಸರನ್ನು ಹೊಂದಿರುವ ಪದ್ಯ

ಪದ್ಯ ೫೬: ವ್ರತವನ್ನು ನೋಡಲು ಯಾರು ಆಗಮಿಸಿದರು?

ಭರದಿ ಬಂದುದು ಸಕಲಮುನಿಜನ
ಪರಶುರಾಮ ವಸಿಷ್ಠ ಗೌತಮ
ವರಭರದ್ವಾಜಾತ್ರಿ ವಿಶ್ವಾಮಿತ್ರ ಮೊದಲಾದ
ಪರಮಮುನಿಜನರೈದೆ ಬಂದರು
ಹರುಷದಿಂದಿದಿರಾಗಿ ಬಂದರು
ಸುರನದೀಸುತ ವಿದುರ ಕೃಪದ್ರೋಣಾದಿಗಳು ಸಹಿತ (ಆದಿ ಪರ್ವ, ೨೧ ಸಂಧಿ, ೫೬ ಪದ್ಯ)

ತಾತ್ಪರ್ಯ:
ಪರಶುರಾಮ, ವಸಿಷ್ಠ, ಗೌತಮ, ಭರದ್ವಾಜ, ಅತ್ರಿ, ವಿಶ್ವಾಮಿತ್ರ ಮೊದಲಾದ ಎಲ್ಲಾ ಋಷಿಗಳು ಹಸ್ತಿನಾಪುರಕ್ಕೆ ಬರಲು, ಭೀಷ್ಮನು, ವಿದುರ, ಕೃಪ, ದ್ರೋಣಾಚಾರ್ಯರೇ ಮೊದಲಾದವರೊಡನೆ ಸಂತೋಷದಿಂದ ಸ್ವಾಗತಿಸಲು ಬಂದರು.

ಅರ್ಥ:
ಭರದಿ: ಬೇಗ; ಬಂದುದು: ಆಗಮಿಸಿದರು; ಸಕಲ: ಎಲ್ಲಾ; ಮುನಿ:ಋಷಿ; ಮೊದಲಾದ:ಮುಂತಾದ; ಪರಮ: ಶ್ರೇಷ್ಠ; ಹರುಷ: ಸಂತೋಷ; ಸುರನದಿ: ಗಂಗೆ; ಸುತ: ಮಗ; ಸಹಿತ: ಜೊತೆ;

ಪದವಿಂಗಡಣೆ:
ಭರದಿ +ಬಂದುದು +ಸಕಲ+ಮುನಿಜನ
ಪರಶುರಾಮ +ವಸಿಷ್ಠ+ ಗೌತಮ
ವರಭರದ್ವಾಜ+ಅತ್ರಿ+ ವಿಶ್ವಾಮಿತ್ರ +ಮೊದಲಾದ
ಪರಮಮುನಿಜನರ್+ಐದೆ +ಬಂದರು
ಹರುಷದಿಂದ್+ಇದಿರಾಗಿ+ ಬಂದರು
ಸುರನದೀಸುತ +ವಿದುರ +ಕೃಪ+ದ್ರೋಣಾದಿಗಳು+ ಸಹಿತ

ಅಚ್ಚರಿ:
(೧) ಬಂದರು – ೪,೫ ಸಾಲಿನ ಕೊನೆಯ ಪದ
(೩) ಪದ್ಯದ ೩ ಸಾಲಿನಲ್ಲಿ ಹೆಸರುಗಳನ್ನು ಅಳವಡಿಸಿರುವುದು

ಪದ್ಯ ೪೫: ಅಂಗಾರವರ್ಮನು ಪಾಂಡವರನ್ನು ಯಾರ ಆಶ್ರಮಕ್ಕೆ ಕಳುಹಿಸಿದನು?

ಇಲ್ಲಿಗಿದೆ ನಾಲೈದು ಯೋಜನ
ದಲ್ಲಿ ಧೌಮ್ಯಾಶ್ರಮ ವಸಿಷ್ಠ
ಗಲ್ಲಿ ಸನ್ನಿಧಿಯಾ ವಸಿಷ್ಠಂಗಾತನನುಜಾತ
ಅಲ್ಲಿ ಪೌರೋಹಿತ್ಯವನು ನಿಮ
ಗೊಲ್ಲೆನೆನ್ನದೆ ಮುನಿಪ ಮಾಡಿದ
ಡೆಲ್ಲ ಲೇಸಹುದೆಂದು ಕಳುಹಿದನಿವರನಾ ಖಚರ (ಆದಿ ಪರ್ವ, ೧೧ ಸಂಧಿ, ೪೫ ಪದ್ಯ)

ತಾತ್ಪರ್ಯ:
ಕ್ಷಾತ್ರ ತೇಜಸ್ಸಿನೊಂದಿಗೆ ಬ್ರಹ್ಮ ತೇಜಸ್ಸು ಕೂಡಿದರೆ ನೀವು ಏನನ್ನು ಬೇಕಾದರು ಸಾಧಿಸಬಹುದು ಎಂದು ಹೇಳಿ, ಇಲ್ಲಿಂದ ನಾಲ್ಕೈದು ಯೋಜನ ದೂರದಲ್ಲಿ ಧೌಮ್ಯರ ಆಶ್ರಮವಿದೆ, ವಸಿಷ್ಠರು ಸಹ ಅಲ್ಲೇ ಇರುತ್ತಾರೆ, ಧೌಮ್ಯರು ವಸಿಷ್ಠರ ತಮ್ಮ. ಅವರ ಬಳಿ ಹೋಗಿ, ನಿಮಗೆ ಪುರೋಹಿತನಾಗಲು ಅವರಲ್ಲಿ ಪ್ರಾರ್ಥಿಸಿ, ಅವರೊಪ್ಪಿ ಕೊಂಡರೆ ನಿಮಗೆ ಎಲ್ಲವೂ ಒಳ್ಳೆಯದಾಗುತ್ತದೆ ಎಂದು ಹೇಳಿ ಅಂಗಾರವರ್ಮನು ಧೌಮ್ಯರ ಆಶ್ರಮಕ್ಕೆ ಕಳುಹಿಸಿದನು.

ಅರ್ಥ:
ಯೋಜನ: ದೂರವನ್ನು ಅಳೆಯುವ ಒಂದು ಪ್ರಮಾಣ (ಸುಮಾರು ೧೨ ಮೈಲಿ); ಆಶ್ರಮ: ಕುಟೀರ; ಸನ್ನಿಧಿ: ಒಳ್ಳೆಯ ನೆಲೆ, ಹಿರಿಯರನ್ನು ಸಂಬೋಧಿಸುವಾಗ ಸೂಚಿಸುವ ಪದ; ಅನುಜಾತ: ತಮ್ಮ; ಪೌರೋಹಿತ್ಯ: ಧಾರ್ಮಿಕ ವ್ರತಾದಿಗಳನ್ನು ಮಾಡುವ ಕೆಲಸ; ಒಲ್ಲೆ: ಬೇಡ; ಲೇಸು: ಒಳ್ಳೆಯದು; ಕಳುಹಿಸು: ಹೋಗೆಂದು ಸೂಚಿಸು; ಖಚರ: ಗಂಧರ್ವ;

ಪದವಿಂಗಡನೆ:
ಇಲ್ಲಿ+ಗಿದೆ +ನಾಲ್ಕ್+ಐದು +ಯೋಜನ
ದಲ್ಲಿ+ ಧೌಮ್ಯ+ಆಶ್ರಮ +ವಸಿಷ್ಠಂಗ್
ಅಲ್ಲಿ +ಸನ್ನಿಧಿಯ+ಆ+ ವಸಿಷ್ಠಂಗ್+ಆತನ್+ಅನುಜಾತ
ಅಲ್ಲಿ +ಪೌರೋಹಿತ್ಯವನು +ನಿಮಗ್
ಒಲ್ಲೆನ್+ಎನ್ನದೆ+ ಮುನಿಪ+ ಮಾಡಿದಡ್
ಎಲ್ಲ +ಲೇಸಹುದ್+ಎಂದು +ಕಳುಹಿದನ್+ಇವರನ್+ಆ+ ಖಚರ

ಅಚ್ಚರಿ:
(೧) ಅಲ್ಲಿ – ೨,೩,೪ ಸಾಲಿನ ಮೊದಲ ಪದ
(೨) ಅಲ್ಲಿ, ಇಲ್ಲಿ, ಎಲ್ಲ – ಪದಗಳ ಬಳಕೆ
(೩) ಗಂಧರ್ವ (ಅಂಗಾರವರ್ಮ)ನನ್ನು ಖಚರ ಪದದ ಪ್ರಯೋಗ
(೪) ವಸಿಷ್ಠ – ೨ ಬಾರಿ ೨, ೩ ಸಾಲಿನಲ್ಲಿ ಪ್ರಯೋಗ
(೫) ಧೌಮ್ಯ ಮತ್ತು ವಸಿಷ್ಠರ ಸಂಬಂಧವನ್ನು ವಿವರಿಸಿರುವುದು (ಅನುಜಾತ)

ಪದ್ಯ ೪೩: ಬ್ರಹ್ಮತೇಜದ ಶಕ್ತಿ ಎಂತಹುದು?

ಆ ವಸಿಷ್ಠನ ಕೌಶಿಕನ ಯು
ದ್ಧಾವಲಂಬನವೇನನೆಂಬೆನು
ದೇವಕುಲವಂಜುವುದು ವಿಶ್ವಾಮಿತ್ರನುಬ್ಬಟೆಗೆ
ಆ ವಿವಿಧ ಮಂತ್ರಾಸ್ತ್ರವನು ಶತ
ಸಾವಿರವನಾ ಬ್ರಹ್ಮದಂಡದ
ಡಾವರದಲೇ ಗೆಲಿದನೊಬ್ಬ ವಸಿಷ್ಠ ಮುನಿಯೆಂದ (ಆದಿ ಪರ್ವ, ೧೧ ಸಂಧಿ, ೪೩ ಪದ್ಯ)

ತಾತ್ಪರ್ಯ:
ಅಂಗಾರವರ್ಮನು ಕೌಶಿಕ ಮತ್ತು ವಸಿಷ್ಟರ ಮಧ್ಯೆಯಾದ ಯುದ್ಧದ ಬಗ್ಗೆ ಹೇಳುತ್ತ ಬ್ರಹ್ಮ ತೇಜದ ಶಕ್ತಿಯನ್ನು ವಿವರಿಸುತ್ತಾನೆ, ಹಿಂದೆ ವಸಿಷ್ಠ ಮತ್ತು ಕೌಶಿಕ ಮಹಾರಾಜನಿಗು ಬಹಳ ಘೋರ ಯುದ್ದವಾಯಿತು. ಆ ಯುದ್ಧದಲ್ಲಿ ಕೌಶಿಕನ (ಮುಂದೆ ಈತನೆ ವಿಶ್ವಾಮಿತ್ರನಾಗುವುದು) ಮಂತ್ರಾಸ್ತ್ರಗಳ ಪ್ರಯೋಗದಿಂದ ದೇವತೆಗಳೆ ಅಂಜಿದರು, ಆದರೆ ಆ ಎಲ್ಲಾ ಅಸ್ತ್ರಗಳು ವಸಿಷ್ಥರ ಒಂದು ಬ್ರಹ್ಮ ದಂಡದೆದುರು ಮಣಿಯಬೇಕಾಯಿತು.

ಅರ್ಥ:
ಯುದ್ಧ: ಕಾಳಗ; ಅವಲಂಬನ: ಆಸರೆ; ದೇವಕುಲ: ದೇವತೆಗಳು; ಅಂಜು: ಹೆದರು; ಉಬ್ಬಟೆ:ಹೆಚ್ಚಳ, ಶೌರ್ಯ; ವಿವಿಧ: ಹಲವಾರು; ಮಂತ್ರ: ಪವಿತ್ರ ದೇವತಾಸ್ತುತಿ; ಶತ: ನೂರು; ಸಾವಿರ: ಸಹಸ್ರ; ದಂಡ: ಕೋಲು; ಡಾವರ: ರಭಸ, ತೀವ್ರತೆ; ಗೆಲಿ: ವಿಜಯ, ಗೆಲ್ಲು; ಮುನಿ: ಋಷಿ;

ಪದವಿಂಗಡನೆ:
ಆ +ವಸಿಷ್ಠನ+ ಕೌಶಿಕನ +ಯು
ದ್ಧ+ಅವಲಂಬನವ+ಏನನೆಂಬೆನು
ದೇವಕುಲವ್ಂಜುವುದು +ವಿಶ್ವಾಮಿತ್ರನ+ಉಬ್ಬಟೆಗೆ
ಆ +ವಿವಿಧ+ ಮಂತ್ರಾಸ್ತ್ರವನು+ ಶತ
ಸಾವಿರವನ್+ಆ+ ಬ್ರಹ್ಮದಂಡದ
ಡಾವರದಲೇ +ಗೆಲಿದನ್+ಒಬ್ಬ +ವಸಿಷ್ಠ+ ಮುನಿಯೆಂದ

ಅಚ್ಚರಿ:
(೧) ಆ – ೧,೪ ಸಾಲಿನ ಮೊದಲ ಅಕ್ಷರ;
(೨) ವಸಿಷ್ಠ – ಪದ್ಯದ ಆರಂಭದ ೨ ಪದ, ಮತ್ತು ಕೊನೆಯ ೨ ಪದ