ಪದ್ಯ ೯: ಶಿವನು ಅರ್ಜುನನಿಗೆ ಯಾವ ಅಸ್ತ್ರದ ಪ್ರಯೋಗವನ್ನು ತೋರಿಸಿದನು?

ಬಳಿಕ ತಿರುವಿಟ್ಟಾಗಲಸ್ತ್ರವ
ಸೆಳೆದು ಬಿಲುವಿದ್ಯಾಚಮತ್ಕೃತಿ
ಯಳವ ತೋರಿದಡಾಗಳೀಶನ ಹೊರೆಗೆ ನಾನೈದಿ
ನಿಲೆ ತದೀಯಾಸ್ತ್ರಪ್ರಯೋಗದ
ಬಲುಹನೀಕ್ಷಿಸೆ ತೆಗೆವ ಬೆಡಗನು
ಕಲಿಸೆ ಪಾಶುಪತಾಸ್ತ್ರವೆನಗಾಯ್ತಲ್ಲಿ ವಶವರ್ತಿ (ದ್ರೋಣ ಪರ್ವ, ೯ ಸಂಧಿ, ೯ ಪದ್ಯ)

ತಾತ್ಪರ್ಯ:
ಅರ್ಜುನನು ತನ್ನ ಮಾತನ್ನು ಮುಂದುವರೆಸುತ್ತಾ, ನಾನದಕ್ಕೆ ಹೆದೆಯೇರಿಸಿ ಬಿಲ್ವಿದ್ಯೆಯ ಚಮತ್ಕಾರವನ್ನು ತೋರಿಸಿ ಹರನ ಬಳಿಗೆ ಹೋಗಿ ನಿಂತೆನು. ಅವನು ಪಾಶುಪತಾಸ್ತ್ರ ಪ್ರಯೋಗ ಮಾದುವಾಗ ಅದನ್ನು ಹೇಗೆ ತೆಗೆಯಬೇಕೆಂದು ತೋರಿಸಿದನು. ಪಾಶುಪತಾಸ್ತ್ರವು ನನ್ನ ವಶವಾಯಿತು.

ಅರ್ಥ:
ಬಳಿಕ: ನಂತರ; ತಿರುವು: ತಿರುಗಿಸು; ಅಸ್ತ್ರ: ಶಸ್ತ್ರ, ಆಯುಧ; ಸೆಳೆ: ಜಗ್ಗು, ಎಳೆ; ಬಿಲು: ಬಿಲ್ಲು, ಚಾಪ; ವಿದ್ಯೆ: ಜ್ಞಾನ; ಚಮತ್ಕೃತಿ: ವಿಸ್ಮಯ; ಅಳವು: ಶಕ್ತಿ; ತೋರು: ಪ್ರದರ್ಶಿಸು; ಹೊರೆ: ರಕ್ಷಣೆ, ಆಶ್ರಯ; ಪ್ರಯೋಗ: ನಿದರ್ಶನ, ದೃಷ್ಟಾಂತ; ಬಲುಹು: ಶಕ್ತಿ; ಈಕ್ಷಿಸು: ನೋಡು; ತೆಗೆ: ಹೊರತರು; ಬೆಡಗು: ಅಂದ, ಸೊಬಗು; ಕಲಿಸು: ತಿಳಿಸು; ವಶ: ಅಧೀನ;

ಪದವಿಂಗಡಣೆ:
ಬಳಿಕ +ತಿರುವಿಟ್ಟಾಗಲ್+ಅಸ್ತ್ರವ
ಸೆಳೆದು +ಬಿಲುವಿದ್ಯಾ+ಚಮತ್ಕೃತಿ
ಯಳವ +ತೋರಿದಡ್+ಆಗಳ್+ಈಶನ +ಹೊರೆಗೆ +ನಾನೈದಿ
ನಿಲೆ +ತದೀಯಾಸ್ತ್ರ+ಪ್ರಯೋಗದ
ಬಲುಹನ್+ಈಕ್ಷಿಸೆ +ತೆಗೆವ+ ಬೆಡಗನು
ಕಲಿಸೆ +ಪಾಶುಪತಾಸ್ತ್ರವ್+ಎನಗಾಯ್ತಲ್ಲಿ +ವಶವರ್ತಿ

ಪದ್ಯ ೨೮: ಅರ್ಜುನನಿಗೆ ಯಾವ ಆಯುಧವು ದೊರೆಯಿತು?

ಜೀಯ ಚಿತ್ತೈಸಿಂದ್ರನಲ್ಲಿ ಸ
ಹಾಯವಾದನು ಶಿವನ ಕಾರು
ಣಾಯುಧವೆ ಮಸೆದುದು ಸುರೇಂದ್ರ ಸ್ನೇಹ ಸಾಣೆಯಲಿ
ಆಯಿತೇ ದೂರ್ಜಟಿಯ ಶರಲೋ
ಕಾಯತರಿಗೇನೆಂಬೆನದು ನಿ
ರ್ದಾಯದಲಿ ವಶವರ್ತಿಯಾಯ್ತೆನಗೆಂದನಾ ಪಾರ್ಥ (ಅರಣ್ಯ ಪರ್ವ, ೧೨ ಸಂಧಿ, ೨೮ ಪದ್ಯ)

ತಾತ್ಪರ್ಯ:
ಶಿವನ ಕರುಣೆಯ ಆಯುಧವು, ದೇವೇಂದ್ರನ ಸ್ನೇಹವೆಂಬ ಸಾಣೆಯಲ್ಲಿ ಹರಿತವಾಯಿತು. ಭಕ್ತಿಹೀನರಿಗೆ ನಾಸ್ತಿಕರಿಗೆ ಶಿವನ ಅಸ್ತ್ರ ದೊರೆಯಲಿಲ್ಲ. ಅದು ನನಗೆ ಪರಿಪೂರ್ಣವಾಗಿ ದೊರಕಿತು ಎಂದು ಅರ್ಜುನನು ಅಣ್ಣನಿಗೆ ಹೇಳಿದನು.

ಅರ್ಥ:
ಜೀಯ: ಒಡೆಯ; ಚಿತ್ತೈಸು: ಗಮನವಿಟ್ಟು ಕೇಳು; ಸಹಾಯ: ನೆರವು; ಶಿವ: ಶಂಕರ; ಕಾರುಣ್ಯ: ದಯೆ; ಆಯುಧ: ಶಸ್ತ್ರ; ಮಸೆ: ಹರಿತವಾದುದು, ಚೂಪಾದುದು; ಸುರೇಂದ್ರ: ಇಂದ್ರ; ಸ್ನೇಹ: ನೆರವು; ಸಾಣೆ: ಉಜ್ಜುವ ಕಲ್ಲು; ಧೂರ್ಜಟಿ: ಶಿವ; ಶರ: ಬಾಣ; ಲೋಕ: ಜಗತ್ತು; ಲೋಕಾಯತ: ಲೋಕದಷ್ಟು ವಿಸ್ತಾರವಾದ; ನಿರ್ದಾಯದ: ಅಖಂಡ; ವಶ: ಅಧೀನ;

ಪದವಿಂಗಡಣೆ:
ಜೀಯ +ಚಿತ್ತೈಸ್+ಇಂದ್ರನಲ್ಲಿ+ ಸ
ಹಾಯವಾದನು+ ಶಿವನ+ ಕಾರು
ಣಾಯುಧವೆ +ಮಸೆದುದು +ಸುರೇಂದ್ರ +ಸ್ನೇಹ +ಸಾಣೆಯಲಿ
ಆಯಿತೇ+ ದೂರ್ಜಟಿಯ +ಶರ+ಲೋ
ಕಾಯತರಿಗ್+ಏನೆಂಬೆನ್+ಅದು +ನಿ
ರ್ದಾಯದಲಿ+ ವಶವರ್ತಿಯಾಯ್ತ್+ಎನಗೆಂದನಾ+ ಪಾರ್ಥ

ಅಚ್ಚರಿ:
(೧) ಶಿವನ ಇಂದ್ರನ ಜೋಡಿಯನ್ನು ಕಂಡ ಬಗೆ – ಶಿವನ ಕಾರುಣಾಯುಧವೆ ಮಸೆದುದು ಸುರೇಂದ್ರ ಸ್ನೇಹ ಸಾಣೆಯಲಿ

ಪದ್ಯ ೩: ಯುಧಿಷ್ಠಿರನ ಕೀರ್ತಿ ಎಂತಹುದು?

ಧರೆ ನಮಗೆ ವಶವರ್ತಿ ಖಂಡೆಯ
ಸಿರಿ ನಮಗೆ ಮೈವಳಿ ಯುಧಿಷ್ಠಿರ
ನರಸುತನ ನಳನಹುಷ ನೃಗ ಭರತಾದಿ ಭೂಮಿಪರ
ಮರೆಸಿತೆಂಬುದು ಲೋಕವೀ ನಿ
ಬ್ಬರದ ಹೆಸರೆಮಗಿಂದು ಬೊಪ್ಪನ
ಸಿರಿಯನೇವಣ್ಣಿಸುವೆನೆಂದನು ಸುಯ್ದು ಯಮಸೂನು (ಸಭಾ ಪರ್ವ, ೨ ಸಂಧಿ, ೩ ಪದ್ಯ)

ತಾತ್ಪರ್ಯ:
ಬಂದ ರಾಜರನ್ನು ಉದ್ದೇಶಿಸುತ್ತಾ, ಈ ರಾಜ್ಯವು ನಮಗೆ ಅಧೀನವಾಗಿದೆ (ನಮ್ಮದು), ಶಸ್ತ್ರಾಸ್ತ್ರಗಳ ಪಾಂಡಿತ್ಯವು ನಮ್ಮ ಬಳಿ ಇದೆ, ನಮ್ಮ ರಾಜ್ಯವು ನಳ, ನಹುಷ, ನೃಗ, ಭರತಾದಿ ಮಹಾರಾಜರ ಆಡಳಿತವನ್ನೂ ಮೀರಿಸಿದೆ ಎಂದು ಲೋಕ ಹೇಳುತ್ತದೆ, ಈ ಎಲ್ಲಾ ಕೀರ್ತಿ ನಮ್ಮಲ್ಲಿದ್ದರೂ, ನಮ್ಮ ತಂದೆ ಪಾಂಡುರಾಜನ ಗತಿಯನ್ನು ಏನೆಂದು ಹೇಳಲಿ ಎಂದು ನಿಟ್ಟುಸಿರುಬಿಟ್ಟನು.

ಅರ್ಥ:
ಧರೆ: ಭೂಮಿ; ವಶವರ್ತಿ: ಅಧೀನ; ಖಂಡೆಯ: ಕತ್ತಿ;ಮರೆಸಿ ಸಿರಿ: ಐಶ್ವರ್ಯ; ಮೈವಳಿ: ಅಧೀನ, ವಶ; ನರ: ಮನುಷ್ಯ; ಸುತ: ಪುತ್ರ; ಭೂಮಿ: ಧರೆ; ಭೂಮಿಪ: ರಾಜ; ಮರೆಸು: ಮರೆಯುವಂತೆ ಮಾಡು; ಲೋಕ: ಜಗತ್ತು; ನಿಬ್ಬರ:ಅತಿಶಯ; ಹೆಸರು: ನಾಮ; ಬೊಪ್ಪ: ತಂದೆ; ಸಿರಿ: ಐಶ್ವರ್ಯ; ವಣ್ಣಿಸು: ಹೇಳು; ಸುಯ್ದು: ನಿಟ್ಟುಸಿರುಬಿಟ್ಟು; ಸೂನು: ಪುತ್ರ;

ಪದವಿಂಗಡಣೆ:
ಧರೆ +ನಮಗೆ +ವಶವರ್ತಿ+ ಖಂಡೆಯ
ಸಿರಿ +ನಮಗೆ +ಮೈವಳಿ +ಯುಧಿಷ್ಠಿರನ್
ಅರಸುತನ +ನಳ+ನಹುಷ +ನೃಗ +ಭರತಾದಿ +ಭೂಮಿಪರ
ಮರೆಸಿತ್+ಎಂಬುದು +ಲೋಕವ್+ಈ+ ನಿ
ಬ್ಬರದ +ಹೆಸರ್+ಎಮಗ್+ಇಂದು +ಬೊಪ್ಪನ
ಸಿರಿಯನ್+ಏವಣ್ಣಿಸುವೆನ್+ಎಂದನು+ ಸುಯ್ದು +ಯಮಸೂನು

ಅಚ್ಚರಿ:
(೧) ನಮಗೆ – ೧, ೨ ಸಾಲಿನ ೨ನೇ ಪದ
(೨) ೪ ರಾಜರುಗಳ ಹೆಸರನ್ನು ಪ್ರಸ್ತಾಪಿಸಿರುವುದು – ನಳ, ನಹುಷ, ನೃಗ ಭರತ
(೩) ವಶವರ್ತಿ, ಮೈವಳಿ – ಸಮನಾರ್ಥಕ ಪದ