ಪದ್ಯ ೧೨: ಜನರು ಪಾಂಡವರನ್ನು ಕಂಡು ಏನು ನುಡಿದರು?

ವಲಲ ಕಂಕ ಬೃಹನ್ನಳೆಯ ಮೈ
ಸುಳಿವ ಹೋಲುವರೆಂದು ಕೆಲಬರು
ಕೆಲರಿದೆತ್ತಣ ನರರು ತೆಗೆ ಸುರಲೋಕಪಾಲಕರು
ತಿಳಿಯಲರಿದೆಮಗೆಂದು ಕೆಲಬರು
ತಳವೆಳಗುಗೊಳುತಿರಲು ಮಂದಿಯ
ಕೆಲಕೆ ನೂಕಿಯೆ ತಂದೆಗುತ್ತರ ನಗುತ ಕೈ ಮುಗಿದ (ವಿರಾಟ ಪರ್ವ, ೧೧ ಸಂಧಿ, ೧೨ ಪದ್ಯ)

ತಾತ್ಪರ್ಯ:
ಪಾಂಡವರ ಕ್ಷಾತ್ರತೇಜಸ್ಸನ್ನು ನೋಡಿದ ಪರಿವಾರದವರಲ್ಲಿ ಕೆಲವರು, ಇವರು ಕಂಕ, ವಲಲ, ಬೃಹನ್ನಳೆಯನ್ನು ಹೋಲುವರಲ್ಲಾ, ಎಂದು ಮಾತಾಡಿಕೊಂಡರು, ಇವರು ಮನುಷ್ಯರಲ್ಲ, ದೇವತೆಗಳು ಎಂದು ಕೆಲವರು ಹೇಳಲು, ಮಿಕ್ಕ ಜನರು ನಮಗೇನು ತಿಳಿಯುವುದಿಲ್ಲ ಎಂದು ಇನ್ನೂ ಕೆಲವರು ಮಾತಾಡಿಕೊಂಡರು, ಆಗ ಉತ್ತರನು ಜನಗಳನ್ನು ಅತ್ತಿತ್ತ ನೂಕಿ, ತಂದೆಗೆ ಕೈಮುಗಿದು ನಗುತ್ತಾ ಹೇಳಿದನು.

ಅರ್ಥ:
ಮೈ: ತನು; ಹೋಲು: ಸದೃಶವಾಗು; ನರ: ಮನುಷ್ಯ; ತೆಗೆ: ಈಚೆಗೆ ತರು; ಸುರಲೋಕ: ದೇವಲೋಕ; ಪಾಲಕ: ಒಡೆಯ; ತಿಳಿ: ಅರಿ; ಮಂದಿ: ಜನರು; ನೂಕು: ತಳ್ಳು; ನಗು: ಸಂತಸ; ಕೈಮುಗಿ: ನಮಸ್ಕರಿಸು;

ಪದವಿಂಗಡಣೆ:
ವಲಲ +ಕಂಕ +ಬೃಹನ್ನಳೆಯ +ಮೈ
ಸುಳಿವ +ಹೋಲುವರೆಂದು +ಕೆಲಬರು
ಕೆಲರ್+ಇದೆತ್ತಣ +ನರರು +ತೆಗೆ +ಸುರಲೋಕ+ಪಾಲಕರು
ತಿಳಿಯಲ್+ಅರಿದ್+ಎಮಗೆಂದು +ಕೆಲಬರು
ತಳವೆಳಗುಗೊಳುತಿರಲು +ಮಂದಿಯ
ಕೆಲಕೆ+ ನೂಕಿಯೆ +ತಂದೆಗ್+ಉತ್ತರ +ನಗುತ +ಕೈ +ಮುಗಿದ

ಪದ್ಯ ೬೧: ವಿರಾಟನು ಭೀಮನನ್ನು ಹೇಗೆ ಹೊಗಳಿದನು?

ಮೆಚ್ಚಿದನು ಭೂಪಾಲ ವಲಲನ
ಹಚ್ಚಿ ಕೊಂಡಾಡಿದನು ಮುನಿಯೊಳ
ಗೆಚ್ಚರಿಸಿದನು ಲೇಸ ಮಾಡಿದೆ ನಿನ್ನ ದೆಸೆಯಿಂದ
ಕಿಚ್ಚು ನಂದಿದ ತೆರನವೊಲು ಮಾ
ಯುಚ್ಚವಕೆ ಮಿಗಿಲಾಯ್ತು ಪೂತುರೆ
ನಿಚ್ಚಟದ ಸಾಹಸಿಕ ನೀನೆಂದುಲಿದನಾ ಮತ್ಸ್ಯ (ವಿರಾಟ ಪರ್ವ, ೪ ಸಂಧಿ, ೬೧ ಪದ್ಯ)

ತಾತ್ಪರ್ಯ:
ವಿರಾಟನು ಸಂತೋಷದಿಂದುಬ್ಬಿ, ವಲಲನನ್ನು ಬಹಳವಾಗಿ ಕೋಂಡಾಡಿದನು. ಅಂಕನಿಗೆ ನೀನು ಒಳ್ಳೆಯ ಕೆಲಸ ಮಾಡಿದೆ, ನಿನ್ನ ದೆಸೆಯಿಂದ ಉರಿಯು ನಂದಿದಂತಾಗಿ, ಉತ್ಸವಕ್ಕೆ ಅವಕಾಶವಾಯಿತು, ಎಂದು ಹೇಳಿ, ವಿರಾಟನು ಎಲೈ ವಲಲ ನೀನು ಮಹಾ ಸಾಹಸಿ ಎಂದು ಹೊಗಳಿದನು.

ಅರ್ಥ:
ಮೆಚ್ಚು: ಹೊಗಳು, ಪ್ರಶಂಶಿಸು; ಭೂಪಾಲ: ರಾಜ; ಹೆಚ್ಚು: ಅಧಿಕ; ಕೊಂಡಾಡು: ಪ್ರಶಂಶಿಸು; ಮುನಿ: ಯೋಗಿ; ಎಚ್ಚರ: ಹುಷಾರು, ಜೋಪಾನ; ಲೇಸು: ಒಳಿತು; ದೆಸೆ: ಕಾರಣ; ಕಿಚ್ಚು: ತಾಪ; ನಂದು: ಆರಿಸು; ತೆರೆ: ತೆರೆಯುವಿಕೆ, ಬಿಚ್ಚುವಿಕೆ; ಮಾಯುಚ್ಚವ: ಉತ್ಸವ; ಮಿಗಿಲು: ಅಧಿಕ; ಪೂತು: ಭಲೇ; ನಿಚ್ಚಟ: ಕಪಟವಿಲ್ಲದುದು; ಸಾಹಸಿ: ಪರಾಕ್ರಮಿ; ಉಲಿ: ಹೇಳು;

ಪದವಿಂಗಡಣೆ:
ಮೆಚ್ಚಿದನು+ ಭೂಪಾಲ +ವಲಲನ
ಹಚ್ಚಿ +ಕೊಂಡಾಡಿದನು +ಮುನಿಯೊಳಗ್
ಎಚ್ಚರಿಸಿದನು +ಲೇಸ +ಮಾಡಿದೆ +ನಿನ್ನ +ದೆಸೆಯಿಂದ
ಕಿಚ್ಚು +ನಂದಿದ +ತೆರನವೊಲು+ ಮಾ
ಯುಚ್ಚವಕೆ +ಮಿಗಿಲಾಯ್ತು +ಪೂತುರೆ
ನಿಚ್ಚಟದ +ಸಾಹಸಿಕ +ನೀನೆಂದ್+ಉಲಿದನಾ +ಮತ್ಸ್ಯ

ಅಚ್ಚರಿ:
(೧) ಉಪಮಾನದ ಪ್ರಯೋಗ – ಕಿಚ್ಚು ನಂದಿದ ತೆರನವೊಲು

ಪದ್ಯ ೬೦: ವಿರಾಟನು ಭೀಮನನ್ನು ಹೇಗೆ ಹೊಗಳಿದನು?

ಏನಿದೇನೈ ವಲಲ ನಿನ್ನನ
ದೇನರಿಯನೆಂದಿದ್ದೆವೈ ಸು
ಮ್ಮಾನದಿಂದಲಿ ನಿಖಿಳ ಮಲ್ಲರ ಜಯಿಸಿ ಜಯಸಿರಿಯ
ಮಾನಿನಿಯ ಕೈವಿಡಿದು ಮಲ್ಲರ
ಸಾನುರಾಗವ ಬಳಸಿಕೊಂಡೆ ಸ
ಮಾನನನು ನಾವ್ಕಾಣೆವೆಂದೆನುತರಸ ಮನ್ನಿಸಿದ (ವಿರಾಟ ಪರ್ವ, ೪ ಸಂಧಿ, ೬೦ ಪದ್ಯ)

ತಾತ್ಪರ್ಯ:
ವಿರಾಟನು, ವಲ್ವಲ, ಇದೇನು ನೀಣು ಏನನ್ನೂ ಅರಿಯದವನೆಂದು ತಿಳಿದಿದ್ದೆವು, ನೀನು ಸಂತೋಷದಿಂದ ಎಲ್ಲ ಮಲ್ಲರನ್ನೂ ಗೆದ್ದು ಜಯಲಕ್ಷ್ಮಿಯ ಕೈಹಿಡಿದೆ. ಮಲ್ಲರ ಗೌರವಕ್ಕೆ ಪಾತ್ರನಾದೆ. ನಿನಗೆ ಸಮಾನರನ್ನು ನಾನು ಕಾಣೆ ಎಂದು ಭೀಮನನ್ನು ಹೊಗಳಿದನು.

ಅರ್ಥ:
ಅರಿ: ತಿಳಿ; ಸುಮ್ಮಾನ: ಸಂತೋಷ, ಹಿಗ್ಗು; ನಿಖಿಳ: ಎಲ್ಲಾ; ಮಲ್ಲ: ಜಟ್ಟಿ; ಜಯಿಸು: ಗೆಲ್ಲು; ಸಿರಿ: ಐಶ್ವರ್ಯ; ಮಾನಿನಿ: ಹೆಣ್ಣು; ಕೈವಿಡಿ: ಕೈಹಿಡಿ; ಮಲ್ಲ: ಜಟ್ತಿ; ಸಾನುರಾಗ: ಪ್ರೀತಿಯಿಂದ ಕೂಡಿದ; ಬಳಸು: ಉಪಯೋಗಿಸು; ಸಮಾನ: ಎಣೆ, ಸಾಟಿ; ಕಾಣು: ತೋರು; ಅರಸ: ರಾಜ; ಮನ್ನಿಸು: ಗೌರವಿಸು;

ಪದವಿಂಗಡಣೆ:
ಏನಿದೇನೈ +ವಲಲ +ನಿನ್ನನದ್
ಏನ್+ಅರಿಯನೆಂದ್+ಇದ್ದೆವೈ +ಸು
ಮ್ಮಾನದಿಂದಲಿ +ನಿಖಿಳ +ಮಲ್ಲರ +ಜಯಿಸಿ +ಜಯ+ಸಿರಿಯ
ಮಾನಿನಿಯ +ಕೈವಿಡಿದು +ಮಲ್ಲರ
ಸಾನುರಾಗವ +ಬಳಸಿಕೊಂಡೆ +ಸ
ಮಾನನನು +ನಾವ್ಕಾಣೆವ್+ಎಂದೆನುತ್+ಅರಸ +ಮನ್ನಿಸಿದ

ಅಚ್ಚರಿ:
(೧) ಭೀಮನನ್ನು ಹೊಗಳಿದ ಪರಿ – ಸಮಾನನನು ನಾವ್ಕಾಣೆವೆಂದೆನುತರಸ ಮನ್ನಿಸಿದ
(೨) ಗೆದ್ದೆ ಎಂದು ಹೇಳುವ ಪರಿ – ನಿಖಿಳ ಮಲ್ಲರ ಜಯಿಸಿ ಜಯಸಿರಿಯಮಾನಿನಿಯ ಕೈವಿಡಿದು

ಪದ್ಯ ೫೬: ಮಲ್ಲಯುದ್ದವು ಹೇಗೆ ಮುಂದುವರೆಯಿತು?

ಅರರೆ ಸಿಕ್ಕಿದ ವಲಲ ಹೋಹೋ
ಅರರೆ ಸೋತನು ಮಲ್ಲನೆಂಬ
ಬ್ಬರವು ಮಸಗಿರೆ ಭೀಮ ಕೇಳಿದನಧಿಕ ರೋಷದಲಿ
ತಿರುಗಿ ಪೈಸರದಿಂದ ಮಲ್ಲನ
ನೊರಸಿದನು ಮುಷ್ಟಿಯಲಿ ನೆತ್ತಿಯ
ತರಹರಿಸೆ ಸಂತವಿಸಿ ತಿವಿದನು ಮಲ್ಲ ಮಾರುತಿಯ (ವಿರಾಟ ಪರ್ವ, ೪ ಸಂಧಿ, ೫೬ ಪದ್ಯ)

ತಾತ್ಪರ್ಯ:
ಅರೇ ವಲಲನು ಸಿಕ್ಕ, ಅರೇ ಜೀಮೂತನು ಸೋತ ಎಂದು ನೋಟಕರು ಕೂಗುತ್ತಿರಲು, ಭೀಮನದನ್ನು ಕೇಳಿ ಮಹಾರೋಷದಿಂದ ಮಗ್ಗುಲಿಗೆ ಜಾರಿ, ಜೀಮೂತನ ನೆತ್ತಿಯನ್ನು ಮುಷ್ಟಿಯಿಂದ ಹೊಡೆದನು. ಜೀಮೂತನು ಅತ್ತಿತ್ತ ಅದುರಿ ಭೀಮನನ್ನು ಹೊಡೆದನು.

ಅರ್ಥ:
ಸಿಕ್ಕು: ತೊಡಕು; ಸೋಲು: ಪರಾಭವ; ಮಲ್ಲ: ಜಟ್ಟಿ; ಅಬ್ಬರ: ಆರ್ಭಟ; ಮಸಗು: ತಿಕ್ಕು, ಕೆರಳು; ಕೇಳು: ಆಲಿಸು; ಅಧಿಕ: ಹೆಚ್ಚು; ರೋಷ: ಕೋಪ; ತಿರುಗು: ಸುತ್ತು, ಅಲೆದಾಡು; ಪೈಸರ: ಮಲ್ಲಯುದ್ಧದ ಒಂದು ಪಟ್ಟು, ಕುಗ್ಗು; ಒರಸು: ಸಾರಿಸು, ನಾಶಮಾಡು; ಮುಷ್ಟಿ: ಮುಚ್ಚಿದ ಅಂಗೈ; ನೆತ್ತಿ: ಶಿರ; ತರಹರಿಸು: ತಡಮಾಡು, ಕಳವಳಿಸು; ಸಂತವಿಸು: ಸಾಂತ್ವನಗೊಳಿಸು; ತಿವಿ: ಚುಚ್ಚು; ಮಲ್ಲ: ಜಟ್ಟಿ; ಮಾರುತಿ: ವಾಯುಪುತ್ರ (ಭೀಮ);

ಪದವಿಂಗಡಣೆ:
ಅರರೆ +ಸಿಕ್ಕಿದ +ವಲಲ +ಹೋ+ಹೋ
ಅರರೆ+ ಸೋತನು +ಮಲ್ಲನೆಂಬ್
ಅಬ್ಬರವು +ಮಸಗಿರೆ+ ಭೀಮ +ಕೇಳಿದನ್+ಅಧಿಕ+ ರೋಷದಲಿ
ತಿರುಗಿ +ಪೈಸರದಿಂದ +ಮಲ್ಲನನ್
ಒರಸಿದನು +ಮುಷ್ಟಿಯಲಿ +ನೆತ್ತಿಯ
ತರಹರಿಸೆ+ ಸಂತವಿಸಿ+ ತಿವಿದನು+ ಮಲ್ಲ+ ಮಾರುತಿಯ

ಅಚ್ಚರಿ:
(೧) ಅರೆರೆ – ೧, ೨ ಸಾಲಿನ ಮೊದಲ ಪದ

ಪದ್ಯ ೫೫: ಮಲ್ಲರಿಬ್ಬರ ಯುದ್ಧವು ಹೇಗೆ ಸಾಗಿತು?

ಮಲ್ಲ ಗೆದ್ದನು ಈ ಕ್ಷಣದಿ ಗೆಲ
ವಿಲ್ಲ ವಲಲನಿಗಾಯ್ತು ಹೋಹೋ
ನಿಲ್ಲು ಪಡಿಸಣಿ ಗೆದ್ದನೀಗಲೆ ಗೆದ್ದ ನಾ ವಲಲ
ಗೆಲ್ಲ ಸೋಲವನರಿಯದಾ ಜನ
ವೆಲ್ಲ ಬೆರಗಾಗಿರಲು ಚೌಪಟ
ಮಲ್ಲರಿದ್ದರು ಮೇರು ಮೇರುವ ಹಳಚುವಂದದಲಿ (ವಿರಾಟ ಪರ್ವ, ೪ ಸಂಧಿ, ೫೫ ಪದ್ಯ)

ತಾತ್ಪರ್ಯ:
ಇದೋ ಈಗ ಮಲ್ಲನು ಗೆದ್ದ, ಇಲ್ಲ ಈಗ ವಲಲನಿಗೇ ಜಯವಾಯಿತು. ಬ್ಬಾಣಸಿಗನು ಗೆದ್ದ, ವಲಲನೇ ಗೆದ್ದ ಎಂದು ಜನರು ಬೆರಗಾಗಿ ನೋಡುತ್ತಿರಲು, ಮೇರುವು ಮೇರುವಿನೊಡನೆ ಯುದ್ಧ ಮಾಡುವಂತೆ ಮಲ್ಲರಿಬ್ಬರೂ ಹೋರಾಡುತ್ತಿದ್ದರು.

ಅರ್ಥ:
ಮಲ್ಲ: ಜಟ್ಟಿ; ಗೆದ್ದು: ಜಯಿಸು; ಕ್ಷಣ: ಸಮಯ; ಗೆಲವಿಲ್ಲ: ಸೋಲು; ನಿಲ್ಲು: ತಡೆ; ಪಡಿಸಣ: ಪರೀಕ್ಷೆ, ಪರಿಶೀಲನೆ; ಸೋಲು: ಪರಾಭವ; ಅರಿ: ತಿಳಿ; ಜನ: ಗುಂಪು; ಬೆರಗು: ಆಶ್ಚರ್ಯ; ಚೌಪಟಮಲ್ಲ: ಪರಾಕ್ರಮಿ; ಮೇರು: ಶ್ರೇಷ್ಠವಾದುದು, ಕನಕಾದ್ರಿ; ಹಳಚು: ತಾಗು, ಬಡಿ;

ಪದವಿಂಗಡಣೆ:
ಮಲ್ಲ +ಗೆದ್ದನು +ಈ +ಕ್ಷಣದಿ +ಗೆಲ
ವಿಲ್ಲ +ವಲಲನಿಗಾಯ್ತು+ ಹೋ+ಹೋ
ನಿಲ್ಲು+ ಪಡಿಸಣಿ+ ಗೆದ್ದನ್+ಈಗಲೆ +ಗೆದ್ದ +ನಾ +ವಲಲ
ಗೆಲ್ಲ +ಸೋಲವನ್+ಅರಿಯದ್+ಆ+ ಜನ
ವೆಲ್ಲ +ಬೆರಗಾಗಿರಲು+ ಚೌಪಟ
ಮಲ್ಲರಿದ್ದರು +ಮೇರು +ಮೇರುವ +ಹಳಚುವಂದದಲಿ

ಅಚ್ಚರಿ:
(೧) ಉಪಮಾನದ ಪ್ರಯೋಗ – ಚೌಪಟಮಲ್ಲರಿದ್ದರು ಮೇರು ಮೇರುವ ಹಳಚುವಂದದಲಿ

ಪದ್ಯ ೪೦: ವಿರಾಟನು ವಲಲನಿಗೆ ಏನು ಹೇಳಿದ?

ಬರವ ಕಾಣುತ ಮತ್ಸ್ಯನೃಪನುಪ
ಚರಿಸಿ ವಲಲಂಗೆಂದನೀ ಸಂ
ಗರದಿ ಜಯಿಸಿದರೆಮ್ಮ ಮಲ್ಲರ ಉತ್ತರಾಹಿಗಳು
ಧುರವ ಬಲ್ಲೈ ಮಲ್ಲವಿದ್ಯೆಯ
ನರಿತಿಹೈ ನೀನೆಂದು ಮುನಿವರ
ನರುಹೆ ಕೇಳ್ಚೆನು ವಲಲ ನಿನ್ನಂತಸ್ಥವೇನೆಂದ (ವಿರಾಟ ಪರ್ವ, ೪ ಸಂಧಿ, ೪೦ ಪದ್ಯ)

ತಾತ್ಪರ್ಯ:
ಭೀಮನು ಬರಲು, ವಿರಾಟನು ವಲಲನನ್ನು ಉಪಚರಿಸಿ, ಈ ದಿನದ ಯುದ್ಧದಲ್ಲಿ ಉತ್ತರ ದೇಶದ ಮಲ್ಲರು ನಮ್ಮ ದೇಶದ ಮಲ್ಲರನ್ನು ಸೋಲಿಸಿದರು. ವಲಲ ನಿನಗೆ ಮಲ್ಲ ವಿದ್ಯೆಗೊತ್ತು ತಾನೆ? ಮಲ್ಲ ಯುದ್ಧವನ್ನು ತಿಳಿದಿರುವೆ ತಾನೆ? ಕಂಕನು ನಿನ್ನ ಬಗ್ಗೆ ಹೇಳಿದ್ದರಿಂದ ನಿನ್ನನ್ನು ಕರೆಸಿದ್ದೇನೆ, ನಿನ್ನ ಮನಸ್ಸಿನಲ್ಲಿರುವುದನ್ನು ತಿಳಿಸೆಂದು ಹೇಳಿದನು.

ಅರ್ಥ:
ಬರ: ಬಂದು; ಕಾಣು: ವೀಕ್ಷಿಸು, ನೋಡು; ನೃಪ: ರಾಜ; ಉಪಚರಿಸು: ಸತ್ಕರಿಸು; ಸಂಗರ: ಯುದ್ಧ; ಜಯಿಸು: ಗೆಲುವು; ಮಲ್ಲ: ಜಟ್ಟಿ ಉತ್ತರ: ಉತ್ತರದಿಕ್ಕು; ಅಹಿ: ಹಾವು; ಧುರ: ಯುದ್ಧ, ಕಾಳಗ; ಬಲ್ಲೆ: ತಿಳಿದಿರುವೆ; ವಿದ್ಯೆ: ಬುದ್ಧಿ, ಜ್ಞಾನ; ಅರಿ: ತಿಳಿ; ಮುನಿ: ಋಷಿ, ಯೋಗಿ; ಅರುಹು: ಹೇಳು; ಕೇಳು: ಆಲಿಸು, ತಿಳಿಸು; ಅಂತಸ್ಥ: ಒಳಗಿರುವ;

ಪದವಿಂಗಡಣೆ:
ಬರವ +ಕಾಣುತ +ಮತ್ಸ್ಯ+ನೃಪನ್+ಉಪ
ಚರಿಸಿ+ ವಲಲಂಗ್+ಎಂದನ್+ಈ+ ಸಂ
ಗರದಿ+ ಜಯಿಸಿದರ್+ಎಮ್ಮ +ಮಲ್ಲರ +ಉತ್ತರಾಹಿಗಳು
ಧುರವ+ ಬಲ್ಲೈ +ಮಲ್ಲವಿದ್ಯೆಯನ್
ಅರಿತಿಹೈ+ ನೀನೆಂದು +ಮುನಿವರನ್
ಅರುಹೆ +ಕೇಳ್ದೆನು +ವಲಲ+ ನಿನ್ನ್+ಅಂತಸ್ಥವೇನೆಂದ

ಅಚ್ಚರಿ:
(೧) ವಲಲನಿಗೆ ಹೇಳಿದ ಸಂಗತಿ – ಸಂಗರದಿ ಜಯಿಸಿದರೆಮ್ಮ ಮಲ್ಲರ ಉತ್ತರಾಹಿಗಳು

ಪದ್ಯ ೬೩: ಸುಶರ್ಮನ ಸೈನ್ಯವು ಭೀಮನ ದಾಳಿಗೆ ಏನಾಯಿತು?

ಎಲವೆಲವೊ ಕಲಿ ವಲಲ ನಮ್ಮನು
ಸಲಹಿದವನಲ್ಲಾ ವಿರಾಟನು
ಸಿಲುಕಿದನು ದಾತಾರನವಸರಕೊದಗಬೇಹುದೆನೆ
ಉಲಿದು ಕೈಕೊಂಡಟ್ಟಿದನು ರಿಪು
ಬಲವ ತೊತ್ತಳದುಳಿಯೆ ಕವಡಿಕೆ
ಯೊಳಗೆ ಕಲು ಬಿದ್ದಂತೆ ಕೆದರಿತು ವೈರಿ ಪಾಯದಳ (ವಿರಾಟ ಪರ್ವ, ೫ ಸಂಧಿ, ೬೩ ಪದ್ಯ)

ತಾತ್ಪರ್ಯ:
ಎಲೋ ನೋಡಿ ಈ ಶೂರನಾದ ವಲಲ ಆವೇಶವನ್ನು, ಅವನ ಉತ್ಸಾಹವು ಉಳಿದ ಸೈನ್ಯರನ್ನು ಹುರಿದುಂಬಿಸಿತು, ನಮ್ಮನ್ನು ವಿರಾಟರಾಜನು ಸಲಹಿ ಕಾಪಾಡಿದನು, ಈಗ ಅವನು ಶತ್ರುವಿನ ಬಳಿಯಿದ್ದಾನೆ, ಅವನನ್ನು ಈಗ ರಕ್ಷಿಸುವುದು ನಮ್ಮ ಆದ್ಯ ಕರ್ತವ್ಯ. ಆಗ ಭೀಮನು ಕೇಕೆ ಹಾಕಿ ಶತ್ರು ಸೈನ್ಯವನ್ನು ಬೆನ್ನಟ್ಟಲು, ಕವಲು ಬಾಣಕ್ಕೆ ತಗುಲಿದ ಕಲ್ಲಿನಂತೆ ಸುಶರ್ಮನ ಕಾಲಾಳುಗಳ ದಂಡು ದಿಕ್ಕುಪಾಲಾಗಿ ಓಡಿತು.

ಅರ್ಥ:
ಎಲವೊ: ಜೋರಾಗಿ ಕ್ರೊಧದಲ್ಲಿ ಕರೆಯುವ ಬಗೆ; ಕಲಿ: ಶೂರ; ಸಲಹು: ಕಾಪಾಡು; ಸಿಲುಕು: ಬಂಧನಕ್ಕೊಳಗಾಗು; ದಾತಾರ:ಸಲಹುವವ; ಅವಸರ: ಬೇಗ; ಒದಗು: ಲಭ್ಯ, ದೊರೆತುದು, ರಕ್ಷೆ; ಉಲಿ: ಧ್ವನಿಮಾಡು, ಕೂಗು; ಅಟ್ಟು: ದೂರತಳ್ಳು; ರಿಪು: ಶತ್ರು; ಬಲ: ಸೈನ್ಯ; ತೊತ್ತಲ: ನುಗ್ಗುನುರಿ, ರಭಸ; ಉಳಿ: ಬಿಡು, ತೊರೆ; ಕವಡಿ:ಮೋಸಗಾರ; ಕಲು: ಕಲ್ಲು; ಕೆದರು: ಚೆದುರು; ವೈರಿ: ಶತ್ರ; ಪಾಯ: ಅಡಿ, ಪಾದ; ದಳ: ಸೈನ್ಯ; ವಲಲ: ಅಜ್ಞಾತವಾಸದಲ್ಲಿ ಬಾಣಸಿಗನಾದ ಭೀಮಸೇನ;

ಪದವಿಂಗಡಣೆ:
ಎಲವ್+ಎಲವೊ +ಕಲಿ +ವಲಲ +ನಮ್ಮನು
ಸಲಹಿದವನಲ್ಲಾ +ವಿರಾಟನು
ಸಿಲುಕಿದನು +ದಾತಾರನ್+ಅವಸರಕ್+ಒದಗ+ಬೇಹುದ್+ಎನೆ
ಉಲಿದು +ಕೈಕೊಂಡ್+ಅಟ್ಟಿದನು +ರಿಪು
ಬಲವ +ತೊತ್ತಳದ್+ಉಳಿಯೆ +ಕವಡಿಕೆ
ಯೊಳಗೆ+ ಕಲು +ಬಿದ್ದಂತೆ +ಕೆದರಿತು+ ವೈರಿ +ಪಾಯದಳ

ಅರ್ಥ:
(೧) ಭೀಮನ ಪರಿಚಯ ವಲಲ ನಾಮದಿಂದ ಆಗಿರುವುದು, ಇನ್ನೂ ಅಜ್ಞಾತವಾಸದ ಹೆಸರು ಬಳಸಿರುವುದು
(೨) ಸೈನ್ಯವು ಹೇಗೆ ಚದುರಿತು? – ಕವಡಿಕೆ ಯೊಳಗೆ ಕಲು ಬಿದ್ದಂತೆ ಕೆದರಿತು ವೈರಿ ಪಾಯದಳ