ಪದ್ಯ ೩೧: ವ್ಯಾಸರು ಭವಿಷ್ಯದ ಬಗ್ಗೆ ಯೋಜನಗಂಧಿಗೆ ಏನು ಹೇಳಿದರು?

ಹೇಳಬಾರದು ಮುಂದಣದು ದು
ಷ್ಕಾಲವಿಂದಿಗೆ ನಾಳೆ ನಾಳೆಗೆ
ನಾಳೆ ಬಿಟ್ಟಿತು ವರ್ಣಧರ್ಮಾಶ್ರಮದ ನೆಲೆಹೋಯ್ತು
ಕಾಲ ವಿಷಮವು ಕೌರವ ಕ್ಷಿತಿ
ಪಾಲ ಪಾಂಡು ಕುಮಾರರಲಿ ಕೈ
ಮೇಳವಿಸುವುದು ತಾಯೆ ಬಿಜಯಂಗೈಯಿ ನೀವೆಂದ (ಆದಿ ಪರ್ವ, ೫ ಸಂಧಿ, ೩೧ ಪದ್ಯ)

ತಾತ್ಪರ್ಯ:
ತಾಯೆ, ಮುಂದೆ ಬರುವುದು ಕೆಟ್ಟ ಕಾಲ, ಇಂದಿಗಿಂತ ನಾಳೆ ನಾಳೆಗಿಂತ ನಾಡಿದ್ದು ಹೆಚ್ಚು ಕಷ್ಟಕರ. ವರ್ಣಾಶ್ರಮ, ಧರ್ಮಗಳ ನೆಲೆ ತಪ್ಪಿತು. ವಿಷಮಕಾಲ ಬರುತ್ತದೆ. ಕೌರವರು ಪಾಂಡವರಿಗೆ ಯುದ್ಧವಾಗುತ್ತದೆ. ನೀವು ದಯಮಾಡಿಸಿ ಎಂದು ವ್ಯಾಸರು ಯೋಜನಗಂಧಿಗೆ ಹೇಳಿದರು.

ಅರ್ಥ:
ಹೇಳು: ತಿಳಿಸು; ಮುಂದಣ: ಭವಿಷ್ಯ; ದುಷ್ಕಾಲ: ಕೆಟ್ಟಕಾಲ; ನಾಳೆ: ಮರುದಿನ; ವರ್ಣ: ಬಣ, ಪಂಗಡ; ಧರ್ಮ: ಧಾರಣೆ ಮಾಡಿದುದು; ಆಶ್ರಮ: ಜೀವನದ ನಾಲ್ಕು ಘಟ್ಟಗಳು; ನೆಲೆ: ಆಶ್ರಯ, ಆಧಾರ; ಕಾಲ: ಸಮಯ; ವಿಷಮ: ಕೆಟ್ಟದ್ದು; ಕ್ಷಿತಿಪಾಲ: ರಾಜ; ಕೈಮೇಳವಿಸು: ಕಿತ್ತಾಡು; ಬಿಜಯಂಗೈ: ಹೊರಡು;

ಪದವಿಂಗಡಣೆ:
ಹೇಳಬಾರದು +ಮುಂದಣದು +ದು
ಷ್ಕಾಲವ್+ಇಂದಿಗೆ +ನಾಳೆ +ನಾಳೆಗೆ
ನಾಳೆ +ಬಿಟ್ಟಿತು+ ವರ್ಣ+ಧರ್ಮಾಶ್ರಮದ +ನೆಲೆಹೋಯ್ತು
ಕಾಲ+ ವಿಷಮವು +ಕೌರವ +ಕ್ಷಿತಿ
ಪಾಲ +ಪಾಂಡು +ಕುಮಾರರಲಿ+ ಕೈ
ಮೇಳವಿಸುವುದು +ತಾಯೆ +ಬಿಜಯಂಗೈಯಿ+ ನೀವೆಂದ

ಅಚ್ಚರಿ:
(೧) ಯುದ್ಧ ಎಂದು ಹೇಳುವ ಪರಿ – ಕೈಮೇಳವಿಸು
(೨) ನಾಳೆ ಪದದ ಬಳಕೆ – ನಾಳೆ ನಾಳೆಗೆ ನಾಳೆ

ಪದ್ಯ ೧: ಯಾವ ಜನರು ಧರ್ಮಜನನ್ನು ನೋಡಲು ಬಂದರು?

ಕೇಳು ಜನಮೇಜಯ ಧರಿತ್ರೀ
ಪಾಲ ಹಿಮಗಿರಿ ತೊಡಗಿ ಸಾಗರ
ವೇಲೆ ಪರಿಯಂತಖಿಳ ನಗರ ಗ್ರಾಮ ಪುರವರದ
ಮೇಲುವರ್ಣಪ್ರಮುಖವಾ ಚಾಂ
ಡಾಲರವಧಿ ಸಮಸ್ತ ಭೂಜನ
ಜಾಲ ಹಸ್ತಿನಪುರಿಗೆ ಬಂದುದು ಕಂಡುದವನಿಪನ (ಗದಾ ಪರ್ವ, ೧೩ ಸಂಧಿ, ೧ ಪದ್ಯ)

ತಾತ್ಪರ್ಯ:
ಜನಮೇಜಯ ರಾಜ ಕೇಳು, ಹಿಮಗಿರಿಯಿಂದ ಸಮುದ್ರದವರೆಗಿರುವ ಎಲ್ಲಾ ನಗರಗಲ ಗ್ರಾಮಗಲ ಎಲ್ಲಾ ವರ್ಣಗಳ ಎಲ್ಲಾ ಜನರೂ ಹಸ್ತಿನಾಪುರಕ್ಕೆ ಬಂದು ಯುಧಿಷ್ಠಿರನನ್ನು ಕಂಡು ಕಾಣಿಕೆ ನೀಡಿದರು.

ಅರ್ಥ:
ಕೇಳು: ಆಲಿಸು; ಧರಿತ್ರೀ: ಭೂಮಿ; ಧರಿತ್ರೀಪಾಲ: ರಾಜ; ಹಿಮಗಿರಿ: ಹಿಮಾಲಯ; ತೊಡಗು: ಒದಗು; ಸಾಗರ: ಸಮುದ್ರ; ಪರಿಯಂತ: ವರೆಗೂ; ನಗರ: ಪುರ; ಗ್ರಾಮ: ಹಳ್ಳಿ; ಪುರ: ಊರು; ವರ್ಣ: ಬಣ, ಪಂಗಡ; ಪ್ರಮುಖ: ಮುಖ್ಯ; ಅವಧಿ: ಕಾಲ; ಸಮಸ್ತ: ಎಲ್ಲಾ; ಭೂ: ಭೂಮಿ; ಜನ: ಗುಂಪು; ಜಾಲ: ಗುಂಪು; ಬಂದು: ಆಗಮಿಸು; ಅವನಿಪ: ರಾಜ;

ಪದವಿಂಗಡಣೆ:
ಕೇಳು +ಜನಮೇಜಯ +ಧರಿತ್ರೀ
ಪಾಲ +ಹಿಮಗಿರಿ +ತೊಡಗಿ +ಸಾಗರ
ವೇಲೆ +ಪರಿಯಂತ್+ಅಖಿಳ +ನಗರ +ಗ್ರಾಮ +ಪುರವರದ
ಮೇಲುವರ್ಣನ+ಪ್ರಮುಖವಾ+ ಚಾಂ
ಡಾಲರ್+ಅವಧಿ +ಸಮಸ್ತ+ ಭೂಜನ
ಜಾಲ +ಹಸ್ತಿನಪುರಿಗೆ +ಬಂದುದು +ಕಂಡುದ್+ಅವನಿಪನ

ಅಚ್ಚರಿ:
(೧) ಧರಿತ್ರೀಪಾಲ, ಅವನಿಪ – ಸಮಾನಾರ್ಥಕ ಪದ
(೨) ಭಾರತದ ವಿಸ್ತಾರವನ್ನು ಹೇಳುವ ಪರಿ – ಹಿಮಗಿರಿ ತೊಡಗಿ ಸಾಗರವೇಲೆ ಪರಿಯಂತ

ಪದ್ಯ ೩೧: ಯಾರು ನಾಲ್ಕುಮುಕ್ತಿಗಳನ್ನು ಹೊಂದುತ್ತಾನೆ?

ವೇದ ನಾಲ್ಕಾಶ್ರಮಮವು ತಾ ನಾ
ಲ್ಕಾದಿ ಮೂರುತಿ ನಾಲ್ಕುವರ್ಣ ವಿ
ಭೇದ ನಾಲ್ಕಾ ಕರಣನಾಲುಕುಪಾಯ ನಾಲ್ಕರಲಿ
ಭೇದಿಸಲು ಪುರುಷಾರ್ಥ ನಾಲ್ಕರ
ಹಾದಿಯರಿದು ವಿಮುಕ್ತ ನಾಲುಕ
ನೈದುವನು ಸಂದೇಹವೇ ಹೇಳೆಂದನಾ ಮುನಿಪ (ಉದ್ಯೋಗ ಪರ್ವ, ೪ ಸಂಧಿ, ೩೧ ಪದ್ಯ)

ತಾತ್ಪರ್ಯ:
ನಾಲ್ಕು ವೇದಗಳಾದ ಋಗ್, ಯಜುರ್, ಸಾಮ, ಅಥರ್ವಣ; ನಾಲ್ಕು ಆಶ್ರಮಗಳಾದ ಬ್ರಹ್ಮಚರ್ಯ, ಗೃಹಸ್ಥ, ವಾನಪ್ರಸ್ಥ, ಸಂನ್ಯಾಸ; ಬ್ರಹ್ಮ, ವಿಷ್ಣು, ಮಹೇಶ್ವರ, ದೇವಿ ಎಂಬ ನಾಲ್ಕು ಮೂರ್ತಿಗಳು; ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ಎಂಬ ನಾಲ್ಕು ವರ್ಣಗಳು; ಸಾಮ, ದಾನ, ಭೇದ, ದಂಡ ಎಂಬ ನಾಲ್ಕು ಉಪಾಯಗಳು; ಧರ್ಮ, ಅರ್ಥ, ಕಾಮ, ಮೋಕ್ಷ ಎಂಬ ನಾಲ್ಕು ಪುರುಷಾರ್ಥಗಳು; ಇವೆಲ್ಲವನ್ನು ತಿಳಿದವನು ಸಾಲೋಕ್ಯ, ಸಾಮೀಪ್ಯ, ಸಾರೂಪ್ಯ, ಸಾಯುಜ್ಯ ಎಂಬ ನಾಲ್ಕು ಮೋಕ್ಷಗಳಲ್ಲೊಂದನ್ನು ಪಡೆಯುತ್ತಾನೆ ಎಂದು ಸನತ್ಸುಜಾತರು ಹೇಳಿದರು.

ಅರ್ಥ:
ವೇದ: ಆಗಮ; ನಾಲ್ಕು: ಚತುರ್; ಆಶ್ರಮ: ಜೀವನದ ನಾಲ್ಕು ಘಟ್ಟಗಳು; ಮೂರುತಿ: ಆಕಾರ, ಸ್ವರೂಪ; ವರ್ಣ: ಪ್ರಾಚೀನ ಸಾಮಾಜಿಕ ವ್ಯವಸ್ಥೆಯಲ್ಲಿನ ಪಂಗಡ; ವಿಭೇದ: ಒಡೆಯುವಿಕೆ, ವ್ಯತ್ಯಾಸ; ಕರಣ: ಮನಸ್ಸು; ಉಪಾಯ: ಯುಕ್ತಿ; ಭೇದಿಸು: ಒಡೆ, ಸೀಳು; ಪುರುಷಾರ್ಥ: ಮೋಕ್ಷ ಮಾರ್ಗ; ಹಾದಿ: ಮಾರ್ಗ; ಅರಿ: ತಿಳಿ; ವಿಮುಕ್ತ: ಬಿಡುಗಡೆಯಾದವನು, ಮುಕ್ತ; ಐದು: ಪಡೆ; ಸಂದೇಹ: ಸಂಶಯ; ಹೇಳು: ತಿಳಿಸು; ಮುನಿ: ಋಷಿ;

ಪದವಿಂಗಡಣೆ:
ವೇದ +ನಾಲ್ಕು+ಆಶ್ರಮಮವು +ತಾ +ನಾ
ಲ್ಕಾದಿ +ಮೂರುತಿ +ನಾಲ್ಕು+ವರ್ಣ +ವಿ
ಭೇದ +ನಾಲ್ಕಾ +ಕರಣ+ನಾಲುಕ್+ಉಪಾಯ +ನಾಲ್ಕರಲಿ
ಭೇದಿಸಲು+ ಪುರುಷಾರ್ಥ +ನಾಲ್ಕರ
ಹಾದಿಯರಿದು+ ವಿಮುಕ್ತ +ನಾಲುಕನ್
ಐದುವನು +ಸಂದೇಹವೇ +ಹೇಳೆಂದನಾ +ಮುನಿಪ

ಅಚ್ಚರಿ:
(೧) ೮ ಬಾರಿ ನಾಲ್ಕು ಪದದ ಬಳಕೆ – ೩ ಬಾರಿ ೩ನೇ ಸಾಲಿನಲ್ಲಿ
(೨) ವೇದ, ಆಶ್ರಮ, ಮೂರುತಿ, ವರ್ಣ, ಕರಣ, ಉಪಾಯ, ಪುರುಷಾರ್ಥ, ಮುಕ್ತಿ – ನಾಲ್ಕರ ಸಂದೇಶ ಸಾರುವ ಪದಗಳು

ಪದ್ಯ ೬: ಯಾರು ಗುರು ಎಂದು ವಿದುರ ಹೇಳಿದನು?

ಒಂದು ವರ್ಣವನರುಹಿದವ ಗುರು
ವೊಂದಪಾಯದೊಳುಳುಹಿದವ ಗುರು
ಬಂದ ವಿಗ್ರಹದೊಳಗೆ ರಕ್ಷಿಸಿದಾತ ಪರಮ ಗುರು
ಒಂದೆರಡು ಮೂರೈಸಲೇ ತಾ
ನೆಂದು ಗರ್ವೀಕರಿಸಿದವರುಗ
ಳೊಂದುವರು ಚಾಂಡಾಲಯೋನಿಯೊಳರಸ ಕೇಳೆಂದ (ಉದ್ಯೋಗ ಪರ್ವ, ೩ ಸಂಧಿ, ೬ ಪದ್ಯ)

ತಾತ್ಪರ್ಯ:
ಒಂದು ಅಕ್ಷರ ನಮಗೆ ಹೇಳಿಕೊಟ್ಟವರು ಗುರು, ಯಾವುದಾದೊಂದಪಾಯದಿಂದ ರಕ್ಷಿಸಿದವನು ಗುರು, ರಣರಂಗದಲ್ಲಿ ರಕ್ಷಿಸಿದವನು ಶ್ರೇಷ್ಠಗುರುವು, ಯಾವುದೋ ಒಂದೆರಡು ಮೂರು ಸಂದರ್ಭದಲ್ಲಿ ತಾನೆ ಅವನು ಸಹಾಯಮಾಡಿದ್ದು ಅವನೇನು ಮಹಾ ಎಂದು ಯಾರಾದರೂ ಗರ್ವ ಪಟ್ಟರೆ ಅಂತಹವರು ಚಾಂಡಾಲಯೋನಿಯಲ್ಲಿ ಹುಟ್ಟುತ್ತಾರೆ.

ಅರ್ಥ:
ಒಂದು: ಏಕ; ವರ್ಣ: ಅಕ್ಷರ; ಅರುಹು:ತಿಳಿಸು; ಗುರು: ಆಚಾರ್ಯ; ಅಪಾಯ: ವಿಪತ್ತು, ಕೇಡು; ಅಳುಹು: ಬಯಸು, ಅಪೇಕ್ಷಿಸು, ರಕ್ಷಿಸು; ವಿಗ್ರಹ: ಯುದ್ಧ; ರಕ್ಷಿಸು: ಕಾಪಾಡು; ಪರಮ: ಶ್ರೇಷ್ಠ; ಗರ್ವ: ಅಹಂಕಾರ, ದರ್ಪ; ಚಾಂಡಾಲ: ದುಷ್ಟ, ಕ್ರೂರ ಕೆಲಸ ಮಾಡುವವ; ಯೋನಿ:ಗರ್ಭಕೋಶ; ಅರಸ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ಒಂದು+ ವರ್ಣವನ್+ಅರುಹಿದವ +ಗುರು
ವೊಂದ್+ಅಪಾಯದೊಳ್+ಉಳುಹಿದವ+ ಗುರು
ಬಂದ +ವಿಗ್ರಹದೊಳಗೆ+ ರಕ್ಷಿಸಿದಾತ +ಪರಮ+ ಗುರು
ಒಂದೆರಡು +ಮೂರೈಸಲೇ +ತಾ
ನೆಂದು +ಗರ್ವೀಕರಿಸಿದವರುಗ
ಳೊಂದುವರು +ಚಾಂಡಾಲಯೋನಿಯೊಳ್+ಅರಸ+ ಕೇಳೆಂದ

ಅಚ್ಚರಿ:
(೧) ಗುರು – ಮೊದಲ ಮೂರು ಸಾಲಿನ ಕೊನೆ ಪದ