ಪದ್ಯ ೭೨: ಮಹಾಂಕುಶವು ಯಾರಿಗೆ ಮಣಿಯುತ್ತದೆ?

ಇದು ವರಾಹನ ದಾಡೆಯಿದನಾ
ತ್ರಿದಶವೈರಿಗೆ ಕೊಟ್ಟೆನವನಿಂ
ದಿದುವೆ ಭಗದತ್ತಂಗೆ ಬಂದುದು ವೈಷ್ಣವಾಸ್ತ್ರವಿದು
ಇದು ಹರಬ್ರಹ್ಮಾದಿಗಳ ಗೆಲು
ವುದು ಕಣಾ ನಿಮಿಷದಲಿ ತನಗ
ಲ್ಲದೆ ಮಹಾಂಕುಶವುಳಿದ ಭಟರಿಗೆ ಮಣಿವುದಲ್ಲೆಂದ (ದ್ರೋಣ ಪರ್ವ, ೩ ಸಂಧಿ, ೭೨ ಪದ್ಯ)

ತಾತ್ಪರ್ಯ:
ಭಗದತ್ತನು ಪ್ರಯೋಗಿಸಿದ ಮಹಾಂಕುಶವು ಯಜ್ಞವರಾಹದ ದಾಡೆ, ಅದನ್ನು ನರಕಾಸುರನಿಗೆ ಕೊಟ್ಟೆನು. ಅವನಿಮ್ದ ಇದು ಭಗದತ್ತನಿಗೆ ಬಂದಿತು. ಇದು ನಿಮಿಷಮಾತ್ರದಲ್ಲಿ ಹರ, ಬ್ರಹ್ಮಾದಿಗಳನ್ನು ಗೆಲ್ಲುತ್ತದೆ, ನನಗಲ್ಲದೆ ಇದು ಬೇರಾರಿಗೂ ಬಗ್ಗುವುದಿಲ್ಲ ಎಂದು ಕೃಷ್ಣನು ವಿವರಿಸಿದನು.

ಅರ್ಥ:
ವರಾಹ: ಹಂದಿ; ದಾಡೆ: ಹಲ್ಲು; ತ್ರಿದಶ: ದೇವತೆ; ವೈರಿ: ರಿಪು; ಕೊಟ್ಟೆ:ನೀಡು; ಅಸ್ತ್ರ: ಶಸ್ತ್ರ, ಆಯುಧ; ಹರ: ಈಶ್ವರ; ಬ್ರಹ್ಮ: ಅಜ; ಗೆಲುವು: ಜಯ; ನಿಮಿಷ: ಕ್ಷಣ; ಅಂಕುಶ: ಆನೆಯನ್ನು ಹದ್ದಿನಲ್ಲಿ ಇಡಲು ಉಪಯೋಗಿಸುವ ಒಂದು ಸಾಧನ; ಉಳಿದ: ಮಿಕ್ಕ; ಭಟರು: ಸೈನಿಕರು; ಮಣಿ: ಬಾಗು, ಬಗ್ಗು;

ಪದವಿಂಗಡಣೆ:
ಇದು +ವರಾಹನ +ದಾಡೆ+ಇದನ್+ಆ
ತ್ರಿದಶವೈರಿಗೆ+ ಕೊಟ್ಟೆನ್+ಅವನಿಂದ್
ಇದುವೆ +ಭಗದತ್ತಂಗೆ +ಬಂದುದು +ವೈಷ್ಣವಾಸ್ತ್ರವಿದು
ಇದು +ಹರ+ಬ್ರಹ್ಮಾದಿಗಳ+ ಗೆಲು
ವುದು +ಕಣಾ +ನಿಮಿಷದಲಿ +ತನಗ
ಲ್ಲದೆ +ಮಹಾಂಕುಶವ್+ಉಳಿದ +ಭಟರಿಗೆ +ಮಣಿವುದಲ್ಲೆಂದ

ಅಚ್ಚರಿ:
(೧) ನರಕಾಸುರ ಎಂದು ಕರೆಯಲು – ತ್ರಿದಶವೈರಿ ಪದದ ಬಳಕೆ
(೨) ಮಹಾಂಕುಶದ ಅಸ್ತ್ರ – ವೈಷ್ಣವಾಸ್ತ್ರ

ಪದ್ಯ ೭: ಭೀಷ್ಮನು ಯಾರ ಬಾಣಗಳಿಗೆ ಹೆದರುವೆನೆಂದನು?

ಹರಿಯ ಕೌಮೋದಕಿಯ ಹೊಯ್ಲನು
ಬೆರಳಲಾನುವೆನಖಿಲ ಕುಲಗಿರಿ
ಜರಿದು ಬೀಳುವಡಾನಲಾಪೆನು ನಖದ ಕೊನೆಗಳಲಿ
ಭರದಲಾದಿ ವರಾಹ ದಾಡೆಯ
ಲಿರಿದಡೆಯು ನರಸಿಂಹ ನಖದಲಿ
ಕೆರೆದಡೆಯು ಸೈರಿಸುವೆನಂನುವೆನರ್ಜುನನ ಶರಕೆ (ಭೀಷ್ಮ ಪರ್ವ, ೧೦ ಸಂಧಿ, ೭ ಪದ್ಯ)

ತಾತ್ಪರ್ಯ:
ವಿಷ್ಣುವಿನ ಕೌಮೋದಕಿ ಗದೆಯ ಹೊಡೆತವನ್ನು ಬೆರಳ ತುದಿಯಿಂದ ತಪ್ಪಿಸಬಲ್ಲೆ, ಕುಲ ಪರ್ವತಗಳು ನನ್ನ ಮೇಲೆ ಜಾರಿ ಬಿದ್ದರೂ ಉಗುರಿನ ಕೊನೆಯಿಂದ ತಡೆಯಬಲ್ಲೆ, ಆದಿ ವರಾಹನು ಅವನ ಹಲ್ಲುಗಳಿಂದ ಇರಿದರೂ, ನರಸಿಂಹನು ತನ್ನ ಉಗುರುಗಳಿಂದ ಕೆರೆದರೂ ನಾನು ಸಹಿಸಬಲ್ಲೆ, ಆದರೆ ಅರ್ಜುನನ ಬಾಣಗಳಿಗೆ ನಾನು ಹೆದರುತ್ತೇನೆ ಎಂದು ಭೀಷ್ಮರು ನುಡಿದರು.

ಅರ್ಥ:
ಹರಿ: ವಿಷ್ಣು; ಕೌಮೋದಕಿ: ವಿಷ್ಣುವಿನ ಗದೆ; ಹೊಯ್ಲು: ಹೊಡೆತ; ಆನು: ಎದುರಿಸು; ಅಖಿಲ: ಎಲ್ಲಾ; ಕುಲಗಿರಿ: ದೊಡ್ಡ ಬೆಟ್ಟ; ಜರಿ: ಸೀಳೂ; ಬೀಳು: ಕೆಳಕ್ಕೆ ಕೆಡೆ, ಕುಸಿ; ಆಪು: ಸಾಮರ್ಥ್ಯ; ನಖ: ಉಗುರು; ಕೊನೆ: ತುದಿ; ಭರ: ವೇಗ; ಆದಿ: ಮೊದಲ; ವರಾಹ: ಹಂದಿ; ದಾಡೆ: ಹಲ್ಲು; ಇರಿ: ಚುಚ್ಚು; ಕೆರೆ: ಉಗುರಿನಿಂದ ಗೀಚು, ಗೀರು; ಸೈರಿಸು: ತಾಳು; ಅಂಜು: ಹೆದರು; ಶರ: ಬಾಣ;

ಪದವಿಂಗಡಣೆ:
ಹರಿಯ +ಕೌಮೋದಕಿಯ +ಹೊಯ್ಲನು
ಬೆರಳಲ್+ಆನುವೆನ್+ಅಖಿಲ +ಕುಲಗಿರಿ
ಜರಿದು +ಬೀಳುವಡ್+ಆನಲ್+ಆಪೆನು +ನಖದ +ಕೊನೆಗಳಲಿ
ಭರದಲ್+ಆದಿ +ವರಾಹ +ದಾಡೆಯಲ್
ಇರಿದಡೆಯು +ನರಸಿಂಹ +ನಖದಲಿ
ಕೆರೆದಡೆಯು +ಸೈರಿಸುವೆನ್+ಅಂಜುವೆನ್+ಅರ್ಜುನನ +ಶರಕೆ

ಅಚ್ಚರಿ:
(೧) ಇರಿ, ಜರಿ, ಹೊಯ್ಲು, ಕೆರೆ – ಹೊಡೆತ, ನೋವನ್ನು ಸೂಚಿಸುವ ಪದಗಳು

ಪದ್ಯ ೪೭: ಯಾರ ಬಾಣವು ಹಂದಿಯನ್ನು ಸಾಯಿಸಿತು?

ಕಂಡನರ್ಜುನನೀ ವರಾಹನ
ದಂಡಿಲೇ ಸಲ್ಲೆನುತ ಬಾಣವ
ಗಾಂಡಿವದೊಳಳವಡಿಸಿ ಬೊಬ್ಬಿರಿದೆಚ್ಚನಾ ಖಳನ
ದಿಂಡುಗೆಡೆದುದು ಕಾಲಕೊಡಹುತ
ಗಂಡಶೈಲದವೋಲು ಭೂತವ
ದಿಂಡುದರಿಯುವ ಹಂದಿ ಬಿದ್ದುದು ಪಾರ್ಥನಿದಿರಿನಲಿ (ಅರಣ್ಯ ಪರ್ವ, ೬ ಸಂಧಿ, ೪೭ ಪದ್ಯ)

ತಾತ್ಪರ್ಯ:
ಈ ಹಂದಿಯು ಇರುವ ರೀತಿ ಸರಿಯಿಲ್ಲ ಎಂದು ಯೋಚಿಸಿ, ಅರ್ಜುನನು ಗಾಂಡಿವದಲ್ಲಿ ಬಾಣವನ್ನು ಹೂಡಿ ಗರ್ಜಿಸಿ ಮೂಕಾಸುರನನ್ನು ಹೊಡೆದನು. ಹಂದಿಯು ಕಾಲು ಜಾಡಿಸುತ್ತಾ, ದೊಡ್ಡ ಬೆಟ್ಟದಂತೆ ಭೂಮಿಯ ಮೇಲೆ ಬಿದ್ದಿತು. ಉಳಿದ ಪ್ರಾಣಿಗಳನ್ನು ಕತ್ತರಿಸುತ್ತಿದ್ದ ಆ ಹಂದಿಯು ಅರ್ಜುನನ ಎದುರಿನಲ್ಲಿ ಸತ್ತು ಬಿದ್ದಿತು.

ಅರ್ಥ:
ಕಂಡು: ನೋಡು; ವರಾಹ: ಹಂದಿ; ದಂಡಿ: ಶಕ್ತಿ, ಸಾಮರ್ಥ್ಯ; ಸಲ್ಲು: ಸರಿಹೊಂದು; ಬಾಣ: ಶರ; ಅಳವಡಿಸು: ಹೊಂದಿಸು; ಬೊಬ್ಬಿರಿ: ಜೋರಾಗಿ ಕೂಗು; ಎಚ್ಚ: ಬಾಣಬಿಡು; ಖಳ: ದುಷ್ಟ; ದಿಂಡು: ಧೈರ್ಯ, ದಿಟ್ಟತನ; ಕೆಡೆ: ಬೀಳು, ಕುಸಿ; ಕಾಲು: ಪಾದ; ಕೊಡಹು: ಜಾಡಿಸು; ಗಂಡ: ಶೂರ, ವೀರ; ಶೈಲ: ಬೆಟ್ಟ; ಭೂತ: ಜಗತ್ತಿನ ಪ್ರಾಣಿವರ್ಗ; ಅರಿ: ನಾಶಮಾಡು; ಬಿದ್ದು: ಕೆಳಗೆ ಬೀಳು; ಇದಿರು: ಎದುರು;

ಪದವಿಂಗಡಣೆ:
ಕಂಡನ್+ಅರ್ಜುನನ್+ಈ+ ವರಾಹನ
ದಂಡಿಲೇ +ಸಲ್ಲೆನುತ +ಬಾಣವ
ಗಾಂಡಿವದೊಳ್+ಅಳವಡಿಸಿ+ ಬೊಬ್ಬಿರಿದ್+ಎಚ್ಚನಾ +ಖಳನ
ದಿಂಡುಗೆಡೆದುದು +ಕಾಲ+ಕೊಡಹುತ
ಗಂಡಶೈಲದವೋಲು+ ಭೂತವ
ದಿಂಡುದ್+ಅರಿಯುವ +ಹಂದಿ +ಬಿದ್ದುದು +ಪಾರ್ಥನ್+ಇದಿರಿನಲಿ

ಅಚ್ಚರಿ:
(೧) ಉಪಮಾನದ ಪ್ರಯೋಗ – ಹಂದಿಯ ಪರಾಕ್ರಮ – ದಿಂಡುಗೆಡೆದುದು ಕಾಲಕೊಡಹುತ
ಗಂಡಶೈಲದವೋಲು ಭೂತವದಿಂಡುದರಿಯುವ ಹಂದಿ

ಪದ್ಯ ೧೧: ಭೀಮನ ಬೇಟೆಯಾಡುವ ಪರಿ ಹೇಗಿತ್ತು?

ಕೊಡಹಿ ಬಿಸುಟನು ಕೇಸರಿಯ ಕಾ
ಲ್ವಿಡಿದು ಸೀಳಿದ ಕರಿಗಳನು ಬೆಂ
ಬಿಡದೆ ಹಿಡಿದಪ್ಪಳಿಸಿದನು ಶಾರ್ದೂಲ ಹೆಬ್ಬುಲಿಯ
ಅಡಗೆಡಹಿ ಪೆರ್ಮರಿ ವರಾಹನ
ಮಡದಲುರೆ ಘಟ್ಟಿಸಿ ವಿನೋದದಿ
ನಡೆಯೆ ಧರೆ ಕಂಪಿಸಿತು ಬಸವಳಿದುದು ಕಿರಾತಚಯ (ಅರಣ್ಯ ಪರ್ವ, ೪ ಸಂಧಿ, ೧೧ ಪದ್ಯ)

ತಾತ್ಪರ್ಯ:
ಭೀಮನು ಸಿಂಹವನ್ನು ಕೊಂದು ಬಿಸಾಕಿದನು. ಆನೆಗಳ ಕಾಲು ಹಿಡಿದು ಸೀಳಿದನು, ಬೆನ್ನು ಹತ್ತಿ ಹುಲಿಗಳನ್ನು ಹಿಡಿದಪ್ಪಳಿಸಿದನು. ಕಾಡು ಹಂದಿಯ ಮರಿಗಳನ್ನು ಕೆಡವಿ ಪಾದಗಳಿಂದ ತುಳಿದು ಮುಂದುವರೆದನು. ಅವನ ಜೊತೆ ಬೇಟೆಗೆ ಹೋಗಿದ್ದ ಕಿರಾತಕರು ಆಯಾಸಗೊಂಡರು.

ಅರ್ಥ:
ಕೊಡಹಿ: ಸಾಯಿಸಿ; ಬಿಸುಟು: ಎಸೆ, ಹೊರಹಾಕು; ಕೇಸರಿ: ಸಿಂಹ; ಕಾಲು: ಪಾದ; ಹಿಡಿದು: ಬಂಧಿಸು; ಸೀಳು: ಚೂರು, ತುಂಡು; ಕರಿ: ಆನೆ; ಬೆಂಬಿಡು:ಹಿಂಬಾಲಿಸದಿರು; ಹಿಡಿದು: ಗ್ರಹಿಸು, ಬಂಧಿಸು; ಅಪ್ಪಳಿಸು: ತಟ್ಟು, ತಾಗು; ಶಾರ್ದೂಲ: ಹುಲಿ; ಹೆಬ್ಬುಲಿ: ದೊಡ್ಡದಾದ ವ್ಯಾಘ್ರ; ಅಡ: ಅಡ್ಡ, ಮಧ್ಯ; ಕೆಡಹು: ಬೀಳಿಸು; ಮರಿ: ಚಿಕ್ಕ; ವರಾಹ: ಹಂದಿ; ಮಡ: ಹಿಮ್ಮಡಿ; ಉರೆ: ಅತಿಶಯವಾಗಿ; ಘಟ್ಟಿಸು: ಹೊಡೆ, ಅಪ್ಪಳಿಸು; ವಿನೋದ: ಸಂತಸ; ನಡೆ: ಚಲಿಸು; ಧರೆ: ಭೂಮಿ; ಕಂಪಿಸು: ಅಲ್ಲಾಡು; ಬಸವಳಿ:ಆಯಾಸ; ಕಿರಾತ: ಬೇಡ; ಚಯ: ಗುಂಪು;

ಪದವಿಂಗಡಣೆ:
ಕೊಡಹಿ+ ಬಿಸುಟನು +ಕೇಸರಿಯ +ಕಾಲ್
ಹಿಡಿದು +ಸೀಳಿದ +ಕರಿಗಳನು +ಬೆಂ
ಬಿಡದೆ +ಹಿಡಿದ್+ಅಪ್ಪಳಿಸಿದನು +ಶಾರ್ದೂಲ +ಹೆಬ್ಬುಲಿಯ
ಅಡ+ಕೆಡಹಿ +ಪೆರ್ಮರಿ +ವರಾಹನ
ಮಡದಲ್+ಉರೆ +ಘಟ್ಟಿಸಿ +ವಿನೋದದಿ
ನಡೆಯೆ +ಧರೆ +ಕಂಪಿಸಿತು +ಬಸವಳಿದುದು +ಕಿರಾತಚಯ

ಅಚ್ಚರಿ:
(೧) ಭೀಮನ ಬೇಟೆಯ ಪರಿ – ಕೊಡಹಿ ಬಿಸುಟನು ಕೇಸರಿಯ, ಕಾಲ್ವಿಡಿದು ಸೀಳಿದ ಕರಿಗಳನು, ಬೆಂಬಿಡದೆ ಹಿಡಿದಪ್ಪಳಿಸಿದನು ಶಾರ್ದೂಲ ಹೆಬ್ಬುಲಿಯ, ವಿನೋದದಿ ನಡೆಯೆ ಧರೆ ಕಂಪಿಸಿತು

ಪದ್ಯ ೧೩: ಅರ್ಜುನನ ಕಳೆಯೇರಲು ಕಾರಣವೇನು?

ಕುಬುಬೆನುತ ಬೊಬ್ಬಿರಿದನುಗ್ರ
ಪ್ರಬಲವಾನರ ರಾಜನಿದಿರಲಿ
ಕಬಳಿಸಿದವರ್ಜುನನ ಶರ ಕರ್ಣನ ಪತಾಕಿನಿಯ
ಶಬರರೂಪ ವರಾಹದೈತ್ಯನ
ನಿಬಿಡದರ್ಪವ ಮುರಿವವೊಲು ವರ
ವಿಬುಧತತಿ ಕೊಂಡಾಡೆ ಕಳೆಯೇರಿದನು ಕಲಿಪಾರ್ಥ (ಕರ್ಣ ಪರ್ವ, ೨೩ ಸಂಧಿ, ೧೩ ಪದ್ಯ)

ತಾತ್ಪರ್ಯ:
ಅರ್ಜುನನ ರಥದಮೇಲೆ ಹನುಮಂತನು ಕುಬುಬೆನುತ್ತಾ ಗರ್ಜಿಸಿದನು. ಅರ್ಜುನನ ಬಾಣಗಳು ಕರ್ಣನ ಸೇನೆಯನ್ನು ಸಂಹರಿಸಿದವು. ಶಿವನು ಶಬರರೂಪದಿಂದ ವರಾಹ ವೇಷಧಾರಿಯಾದ ಮೂಕಾಸುರನ ದರ್ಪವನ್ನು ಮುರಿದಂತೆ, ಶತ್ರುಗಳನ್ನು ಸಂಹರಿಸಿದನೆಂದು ತಿಳಿದವರು ಹೊಗಳಲು ಅರ್ಜುನನು ಕಳೆಯೇರಿದನು.

ಅರ್ಥ:
ಕುಬುಬು: ಅನುಕರಣ ಶಬ್ದ; ಬೊಬ್ಬಿರಿ: ಗರ್ಜಿಸು, ಆರ್ಭಟ; ಉಗ್ರ: ಭಯಂಕರ, ಭೀಕರ; ಪ್ರಬಲ: ಬಹಳ ಶಕ್ತಿಶಾಲಿ, ಗಟ್ಟಿಗ; ವಾನರ: ಹನುಮಂತ; ರಾಜ: ನೃಪ; ಇದಿರು: ಎದುರು; ಕಬಳಿಸು: ಲಪಟಾಯಿಸು; ಶರ: ಬಾಣ; ಪತಾಕ: ಬಾವುಟ; ಪತಾಕಿನಿ: ಸೈನ್ಯ; ಶಬರ: ಬೇಡ, ಕಿರಾತ, ಶಿವ; ರೂಪ: ಆಕೃತಿ; ವರಾಹ: ಹಂದಿ, ಸೂಕರ; ದೈತ್ಯ: ರಾಕ್ಷಸ; ನಿಬಿಡ: ದಟ್ಟವಾದ; ದರ್ಪ: ಅಹಂಕಾರ; ಮುರಿದು: ಸೀಳು; ವರ: ಶ್ರೇಷ್ಠ; ವಿಬುಧ: ಪಂಡಿತ, ವಿದ್ವಾಂಸ; ಕೊಂಡಾಡು: ಹೊಗಳು; ತತಿ: ಸಮೂಹ; ಕಳೆ: ಕಾಂತಿ, ತೇಜ; ಏರು: ಹೆಚ್ಚಾಗು; ಕಲಿ: ಶೂರ, ಒರಸು, ಉಜ್ಜು;

ಪದವಿಂಗಡಣೆ:
ಕುಬುಬೆನುತ +ಬೊಬ್ಬಿರಿದನ್+ಉಗ್ರ
ಪ್ರಬಲ+ವಾನರ +ರಾಜನ್+ಇದಿರಲಿ
ಕಬಳಿಸಿದವ್+ಅರ್ಜುನನ +ಶರ +ಕರ್ಣನ +ಪತಾಕಿನಿಯ
ಶಬರರೂಪ+ ವರಾಹ+ದೈತ್ಯನ
ನಿಬಿಡ+ದರ್ಪವ +ಮುರಿವವೊಲು +ವರ
ವಿಬುಧತತಿ+ ಕೊಂಡಾಡೆ +ಕಳೆಯೇರಿದನು+ ಕಲಿಪಾರ್ಥ

ಅಚ್ಚರಿ:
(೧) ಉಪಮಾನದ ಪ್ರಯೋಗ – ಶಬರರೂಪ ವರಾಹದೈತ್ಯನ ನಿಬಿಡದರ್ಪವ ಮುರಿವವೊಲು
(೨) ಕ ಕಾರದ ತ್ರಿವಳಿ ಪದ – ಕೊಂಡಾಡೆ ಕಳೆಯೇರಿದನು ಕಲಿಪಾರ್ಥ