ಪದ್ಯ ೯: ಕೌರವ ಸೈನ್ಯದ ಸ್ಥಿತಿ ಏನಾಯಿತು?

ಫಡ ಎನುತ ಪಾಂಚಾಲಬಲ ಸಂ
ಗಡಿಸಿತನಿಲಜನೊಡನೆ ಸೃಂಜಯ
ರೆಡೆಯಲಡಹಾಯಿದರು ಸುತ ಸೋಮಾದಿಗಳು ಸಹಿತ
ಕಡೆವಿಡಿದು ಕಲಿಪಾರ್ಥನಂಬಿನ
ವಡಬನೆದ್ದುದು ಕುರುಬಲದ ಹೆ
ಗ್ಗಡಲು ಬರತುದು ಹೇಳಲೇನದ ಭೂಪ ಕೇಳೆಂದ (ಶಲ್ಯ ಪರ್ವ, ೩ ಸಂಧಿ, ೯ ಪದ್ಯ)

ತಾತ್ಪರ್ಯ:
ರಾಜ ಧೃತರಾಷ್ಟ್ರ ಕೇಳು, ಥತ್ ಎಂದು ಕೌರವರನ್ನು ತಿರಸ್ಕರಿಸಿ ಪಾಂಚಾಲ ಬಲವು ಭೀಮನೊಡನೆ ಸೇರಿತು. ಸೃಂಜಯರು ಸುತಸೋಮನೇ ಮೊದಲಾದವರು ಕೌರವಬಲವನ್ನು ತಡೆದರು. ಅರ್ಜುನನ ಬಾಣಗಳ ವಡಬಾಗ್ನಿಯು ಮೇಲೆದ್ದಿತು. ಕೌರವ ಬಲದ ಕಡಲು ಬತ್ತಿಹೋಯಿತು.

ಅರ್ಥ:
ಫಡ: ತಿರಸ್ಕಾರದ ಮಾತು; ಬಲ: ಸೈನ್ಯ; ಸಂಗಡಿಸು: ಒಟ್ಟಾಗು, ಗುಂಪಾಗು; ಅನಿಲಜ: ಭೀಮ; ಅಡಹಾಯಿ: ಅಡ್ಡ ಬಂದು; ಆದಿ: ಮುಂತಾದ; ಸಹಿತ: ಜೊತೆ; ಕಡೆ: ಕೊನೆ; ಕಲಿ: ಶೂರ; ಅಂಬು: ಬಾಣ; ವಡಬ: ಸಮುದ್ರದಲ್ಲಿರುವ ಬೆಂಕಿ; ಎದ್ದು: ಮೇಲೇಳು; ಹೆಗ್ಗಡಲು: ದೊಡ್ಡ ಸಮುದ್ರ; ಬರ: ಕ್ಷಾಮ, ದುರ್ಭಿಕ್ಷ; ಭೂಪ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ಫಡ +ಎನುತ +ಪಾಂಚಾಲಬಲ +ಸಂ
ಗಡಿಸಿತ್+ಅನಿಲಜನೊಡನೆ +ಸೃಂಜಯರ್
ಎಡೆಯಲ್+ಅಡಹಾಯಿದರು +ಸುತ +ಸೋಮಾದಿಗಳು +ಸಹಿತ
ಕಡೆವಿಡಿದು +ಕಲಿ+ಪಾರ್ಥನ್+ಅಂಬಿನ
ವಡಬನೆದ್ದುದು +ಕುರುಬಲದ +ಹೆ
ಗ್ಗಡಲು +ಬರತುದು +ಹೇಳಲೇನದ +ಭೂಪ +ಕೇಳೆಂದ

ಅಚ್ಚರಿ:
(೧) ಸ ಕಾರದ ತ್ರಿವಳಿ ಪದ – ಸುತ ಸೋಮಾದಿಗಳು ಸಹಿತ
(೨) ರೂಪಕದ ಪ್ರಯೋಗ – ಕಲಿಪಾರ್ಥನಂಬಿನವಡಬನೆದ್ದುದು ಕುರುಬಲದ ಹೆಗ್ಗಡಲು ಬರತುದು

ಪದ್ಯ ೩೫: ಪಾಂಡವ ಸೈನ್ಯವು ದ್ರೋಣನನ್ನು ಹೇಗೆ ಮುತ್ತಿತು?

ಅಡಸಿದರು ಚತುರಂಗ ಬಲವನು
ಕಡಿದು ಹರಹಿ ವಿರಾಟನನು ಜವ
ಗಿಡಿಸಿ ದ್ರುಪದನನೆಚ್ಚು ವಿರಥರ ಮಾಡಿ ಕೈಕೆಯರ
ನಡೆದು ಬರೆ ನಿಮಿಷದಲಿ ಬಲವವ
ಗಡಿಸಿ ಹೊಕ್ಕುದು ಮಸಗಿದಂಬುಧಿ
ವಡಬನನು ಮೊಗೆವಂತೆ ಮುತ್ತಿತು ಕಳಶಸಂಭವನ (ದ್ರೋಣ ಪರ್ವ, ೧೭ ಸಂಧಿ, ೩೫ ಪದ್ಯ)

ತಾತ್ಪರ್ಯ:
ವಿರೋಧಿಗಳು ಚತುರಂಗ ಬಲವನ್ನು ಮುಂದೊಡ್ಡಲು, ದ್ರೋಣನು ಅದನ್ನು ಕಡಿದು ಹರಡಿದನು. ವಿರಾಟ ದ್ರುಪದರನ್ನು ಹೊಡೆದು ಕೈಕೆಯರನ್ನು ವಿರಥರನ್ನಾಗಿಸಿದನು. ಮುಂದೆ ಹೋಗುತ್ತಿರಲು ಪಾಂಡವ ಸೈನ್ಯವು ವಡಬನನ್ನು ಸಮುದ್ರವು ಮುತ್ತಿದಂತೆ ದ್ರೋಣನನ್ನು ಮುತ್ತಿತು.

ಅರ್ಥ:
ಅಡಸು: ಬಿಗಿಯಾಗಿ ಒತ್ತು; ಚತುರಂಗ: ಸೈನ್ಯದ ಆನೆ, ಕುದುರೆ, ರಥ ಮತ್ತು ಕಾಲಾಳು ಎಂಬ ನಾಲ್ಕು ಅಂಗ; ಬಲ: ಸೈನ್ಯ; ಕಡಿ: ಸೀಳು; ಹರಹು: ವಿಸ್ತಾರ, ವೈಶಾಲ್ಯ; ಜವ: ಯಮ; ಎಚ್ಚು: ಬಾಣ ಪ್ರಯೋಗ ಮಾಡು; ವಿರಥ: ರಥವಿಲ್ಲದ ಸ್ಥಿತಿ; ನಡೆ: ಚಲಿಸು; ನಿಮಿಷ: ಕ್ಷಣ; ಅವಗಡಿಸು: ಕಡೆಗಣಿಸು; ಹೊಕ್ಕು: ಸೇರು; ಮಸಗು: ಹರಡು; ಕೆರಳು; ಅಂಬುಧಿ: ಸಾಗರ; ವಡಬ: ಸಮುದ್ರದಲ್ಲಿರುವ ಬೆಂಕಿ, ಬಡಬಾಗ್ನಿ; ಮೊಗೆ: ನುಂಗು, ಕಬಳಿಸು; ಮುತ್ತು: ಆವರಿಸು; ಕಳಶ: ಕುಂಭ; ಸಂಭವ: ಹುಟ್ಟು, ಜನನ;

ಪದವಿಂಗಡಣೆ:
ಅಡಸಿದರು+ ಚತುರಂಗ +ಬಲವನು
ಕಡಿದು +ಹರಹಿ +ವಿರಾಟನನು +ಜವಗ್
ಇಡಿಸಿ +ದ್ರುಪದನನ್+ಎಚ್ಚು +ವಿರಥರ +ಮಾಡಿ +ಕೈಕೆಯರ
ನಡೆದು +ಬರೆ +ನಿಮಿಷದಲಿ +ಬಲವ್+
ಅವಗಡಿಸಿ +ಹೊಕ್ಕುದು +ಮಸಗಿದ್+ಅಂಬುಧಿ
ವಡಬನನು +ಮೊಗೆವಂತೆ +ಮುತ್ತಿತು +ಕಳಶಸಂಭವನ

ಅಚ್ಚರಿ:
(೧) ದ್ರೋಣನನ್ನು ಕಳಶಸಂಭವ ಎಂದು ಕರೆದಿರುವುದು
(೨) ಉಪಮಾನದ ಪ್ರಯೋಗ – ಬಲವವಗಡಿಸಿ ಹೊಕ್ಕುದು ಮಸಗಿದಂಬುಧಿವಡಬನನು ಮೊಗೆವಂತೆ ಮುತ್ತಿತು ಕಳಶಸಂಭವನ

ಪದ್ಯ ೫: ಘಟೋತ್ಕಚನು ಹೇಗೆ ಯುದ್ಧವನ್ನು ಮಾಡಿದನು?

ಅಗಡು ದಾನವನಿವನು ಕಡ್ಡಿಗೆ
ಬಗೆವನೇ ಸಾಗರವನರವ
ಟ್ಟಿಗೆಯನಿಟ್ಟರೆ ವಡಬನಲ್ಲಾ ನೀರ ಕುಡಿವವನು
ಹೊಗೆದುದೈ ಹೆಚ್ಚಾಳುಗಳ ನಗೆ
ಮೊಗವು ಮೋಡಾಮೋಡಿಯಲಿ ಕೈ
ಮಗುಚಿ ಕಳೆದನು ನಿಮಿಷದಲಿ ಹೇರಾಳ ರಾಶಿಗಳ (ದ್ರೋಣ ಪರ್ವ, ೧೬ ಸಂಧಿ, ೫ ಪದ್ಯ)

ತಾತ್ಪರ್ಯ:
ಅರವಟ್ಟಿಗೆಯಲ್ಲಿ ಸಾಗರವನ್ನಿಟ್ಟಾಗ ಅದನ್ನು ಕುಡಿಯಲು ಬಂಡ ವಡಬನಂತೆ, ಶತ್ರುಗಳ ಮುತ್ತಿಗೆಯನ್ನು ಘಟೋತ್ಕಚನು ಲೆಕ್ಕಿಸಲೇ ಇಲ್ಲ. ಮುತ್ತಿದ ವೀರರ ಮುಖಗಳು ಕಪ್ಪಾದವು. ಸೊಗಸಾದ ಕೈಚಳಕದಿಂದ ನಿಮಿಷ ಮಾತ್ರದಲ್ಲಿ ಅನೇಕ ಯೋಧರ ಗುಂಪುಗಳನ್ನು ಎತ್ತಿಹಾಕಿ ಸಂಹರಿಸಿದನು.

ಅರ್ಥ:
ಅಗಡು: ತುಂಟತನ; ದಾನವ: ರಾಕ್ಷಸ; ಕಡ್ಡಿ: ಸಣ್ಣ ಸಿಗುರು, ಚಿಕ್ಕದೇಟು; ಬಗೆ: ಯೋಚಿಸು; ಸಾಗರ: ಸಮುದ್ರ; ಅರವಟ್ಟಿಗೆ: ದಾರಿಹೋಕರಿಗೆ ನೀರು ಪಾನಕ, ಆಹಾರ, ಇತ್ಯಾದಿ ಕೊಡುವ ಸ್ಥಳ; ವಡಬ: ಸಮುದ್ರದಲ್ಲಿರುವ ಬೆಂಕಿ, ಬಡ ಬಾಗ್ನಿ; ನೀರು: ಜಲ; ಕುಡಿ: ಪಾನ ಮಾದು; ಹೊಗೆ: ಸುಡು, ದಹಿಸು; ಹೆಚ್ಚು: ಅಧಿಕ; ಆಳು: ಸೈನಿಕ; ನಗೆ: ಹರ್ಷ; ಮೊಗ: ಮುಖ; ಮೋಡ: ಮುಗಿಲು, ಮೇಘ; ಮೋಡಿ: ರೀತಿ, ಶೈಲಿ; ಮಗುಚು: ಹಿಂದಿರುಗಿಸು, ಮರಳಿಸು; ನಿಮಿಷ: ಕ್ಷನ; ಹೇರಾಳ: ಹೆಚ್ಚು; ರಾಶಿ: ಗುಂಪು;

ಪದವಿಂಗಡಣೆ:
ಅಗಡು +ದಾನವನ್+ಇವನು +ಕಡ್ಡಿಗೆ
ಬಗೆವನೇ +ಸಾಗರವನ್+ಅರವ
ಟ್ಟಿಗೆಯನಿಟ್ಟರೆ +ವಡಬನಲ್ಲಾ +ನೀರ +ಕುಡಿವವನು
ಹೊಗೆದುದೈ +ಹೆಚ್ಚಾಳುಗಳ +ನಗೆ
ಮೊಗವು +ಮೋಡಾಮೋಡಿಯಲಿ +ಕೈ
ಮಗುಚಿ +ಕಳೆದನು +ನಿಮಿಷದಲಿ +ಹೇರಾಳ +ರಾಶಿಗಳ

ಅಚ್ಚರಿ:
(೧) ರೂಪಕದ ಪ್ರಯೋಗ – ಅಗಡು ದಾನವನಿವನು ಕಡ್ಡಿಗೆ ಬಗೆವನೇ ಸಾಗರವನರವ
ಟ್ಟಿಗೆಯನಿಟ್ಟರೆ ವಡಬನಲ್ಲಾ ನೀರ ಕುಡಿವವನು

ಪದ್ಯ ೩೩: ಶ್ರೀಕೃಷ್ಣನು ಧರ್ಮಜನಿಗೆ ಏನು ಹೇಳಿದನು?

ಪಡೆಗಡಲು ಕುಡಿನೀರು ನೆರೆ ನೀ
ರಡಿಸಿದುದು ಪಾರ್ಥನ ಶರಾವಳಿ
ವಡಬನಿದರೊಳು ಕೆಲಬಲದ ಹಂಗೇಕೆ ಕದನದಲಿ
ಕಡುಹಿನಲಿ ಸೈಂಧವನ ತಲೆಯನು
ಹೊಡೆದು ನಿನ್ನಯ ಕಾಲ ಬಳಿಯಲಿ
ಕೆಡಹುವನು ನಿಮಿಷದಲಿ ಫಲುಗುಣನೆಂದನಸುರಾರಿ (ದ್ರೋಣ ಪರ್ವ, ೯ ಸಂಧಿ, ೩೩ ಪದ್ಯ)

ತಾತ್ಪರ್ಯ:
ಕೌರವ ಸೈನ್ಯವು ಕುಡಿಯುವ ನೀರು, ಅರ್ಜುನನ ಬಾಣಗಳ ವಡಬಾಗ್ನಿಗೆ ಬಾಯಾರಿಕೆಯಾಗಿದೆ. ಬೇರಾರ ಹಂಗಿಲ್ಲದೆ ಅರ್ಜುನನು ಮಹಾ ಪೌರುಷದಿಂದ ಸೈಂಧವನ ತಲೆಯನ್ನು ನಿನ್ನ ಕಾಲ ಬಳಿ ನಿಮಿಷ ಮಾತ್ರದಲ್ಲಿ ಕೆಡವುತ್ತಾನೆ ಎಂದು ಕೃಷ್ಣನು ಹೇಳಿದನು.

ಅರ್ಥ:
ಪಡೆ: ಸೈನ್ಯ; ಕಡಲು: ಸಾಗರ; ಕುಡಿ: ಪಾನಮಾಡು; ನೀರು: ಜಲ; ನೆರೆ: ಗುಂಪು; ನೀರಡಿಸು: ನೀರನ್ನು ಕುಡಿ; ಶರಾವಳಿ: ಬಾಣಗಳ ಗುಂಪು; ವಡಬ: ಸಮುದ್ರದಲ್ಲಿರುವ ಬೆಂಕಿ, ಬಡ ಬಾಗ್ನಿ; ಕೆಲಬಲ: ಅಕ್ಕಪಕ್ಕ, ಎಡಬಲ; ಹಂಗು: ದಾಕ್ಷಿಣ್ಯ, ಆಭಾರ; ಕದನ: ಯುದ್ಧ; ಕಡುಹು: ಸಾಹಸ, ಹುರುಪು; ತಲೆ: ಶಿರ; ಹೊಡೆ: ಏಟು, ಹೊಡೆತ; ಕಾಲ: ಸಮಯ; ಬಳಿ: ಹತ್ತಿರ; ಕೆಡಹು: ಬೀಳಿಸು; ನಿಮಿಷ: ಕ್ಷಣಮಾತ್ರ; ಅಸುರಾರಿ: ಕೃಷ್ಣ;

ಪದವಿಂಗಡಣೆ:
ಪಡೆ+ಕಡಲು +ಕುಡಿನೀರು +ನೆರೆ +ನೀ
ರಡಿಸಿದುದು +ಪಾರ್ಥನ +ಶರಾವಳಿ
ವಡಬನ್+ಇದರೊಳು +ಕೆಲಬಲದ +ಹಂಗೇಕೆ +ಕದನದಲಿ
ಕಡುಹಿನಲಿ +ಸೈಂಧವನ +ತಲೆಯನು
ಹೊಡೆದು +ನಿನ್ನಯ +ಕಾಲ +ಬಳಿಯಲಿ
ಕೆಡಹುವನು+ ನಿಮಿಷದಲಿ+ ಫಲುಗುಣನ್+ಎಂದನ್+ಅಸುರಾರಿ

ಅಚ್ಚರಿ:
(೧) ಪಾರ್ಥನ ಬಾಣಗಳಿಗೆ ಉಪಮಾನ – ಪಡೆಗಡಲು ಕುಡಿನೀರು ನೆರೆ ನೀರಡಿಸಿದುದು ಪಾರ್ಥನ ಶರಾವಳಿ
ವಡಬನಿದರೊಳು

ಪದ್ಯ ೩೧: ಭೀಮನು ಕೋಪಗೊಂಡು ಮೇಲೆದ್ದ ರೀತಿ ಹೇಗಿತ್ತು?

ಕಡಲ ತೆರೆಗಳ ತರುಬಿ ತುಡುಕುವ
ವಡಬನಂತಿರೆ ಮೇಘಪಟಲವ
ನೊಡೆದು ಸೂಸುವ ಸಿಡಿಲಿನಂತಿರೆ ಸಭೆಯೊಳಡಹಾಯ್ದು
ಕುಡಿ ಕುಠಾರನ ರಕುತವನು ತಡೆ
ಗಡಿ ಸುಯೋಧನನೂರುಗಳ ನಿ
ಮ್ಮಡಿಸಿ ಮುನಿಯಲಿ ಧರ್ಮಸುತನೆಂದೆದ್ದನಾ ಭೀಮ (ಸಭಾ ಪರ್ವ, ೧೬ ಸಂಧಿ, ೩೧ ಪದ್ಯ)

ತಾತ್ಪರ್ಯ:
ದುರ್ಯೋಧನನು ತನ್ನ ತೊಡೆಯನ್ನು ದ್ರೌಪದಿಗೆ ತೋರಲು ಭೀಮನು ಅತೀವ ಕೋಪಗೊಂಡನು. ಸಮುದ್ರದ ತೆರೆಗಳನ್ನು ತಡೆದು ಮೇಲಕ್ಕೆ ಬರುವ ವಡಬಾಗ್ನಿಯಂತೆ, ಮೋಡಗಳ ತೆರೆಯನ್ನು ಸೀಳಿ ಬಡಿಯುವ ಸಿಡಿಲಿನಂತೆ, ಭೀಮನು ಸಭೆಯ ಮಧ್ಯದಿಂದೆದ್ದು ದ್ರೌಪದಿಯ ಕಡೆಗೆ ನುಗ್ಗಿ, ಈ ಕ್ರೂರಿಯ ರಕ್ತವನ್ನು ಕುಡಿದು, ದುರ್ಯೋಧನನ ತೊಡೆಗಳನ್ನು ಬಡಿದು ಕಡಿಯುತ್ತೇನೆ, ಧರ್ಮರಾಯನು ಎರಡು ಪಟ್ಟು ಸಿಟ್ಟಾಗಲಿ ಎಂದು ಭೀಮನು ಗರ್ಜಿಸಿದನು.

ಅರ್ಥ:
ಕಡಲು: ಸಮುದ್ರ; ತೆರೆ: ಅಲೆ; ತರುಬು: ತಡೆ, ನಿಲ್ಲಿಸು; ತುಡುಕು: ಹೋರಾಡು, ಸೆಣಸು; ವಡಬ: ಸಮುದ್ರದಲ್ಲಿರುವ ಬೆಂಕಿ, ಬಡ ಬಾಗ್ನಿ; ಮೇಘ: ಮೋಡ; ಪಟಲ: ಸಮೂಹ; ಒಡೆ: ಸೀಳು; ಸೂಸು: ಹೊರಹೊಮ್ಮು; ಸಿಡಿಲು: ಅಶನಿ, ಆರ್ಭಟಿಸು; ಸಭೆ: ಓಲಗ; ಹಾಯ್ದು: ಮೇಲೆಬೀಳು; ಕುಡಿ: ಪಾನಮಾಡು; ಕುಠಾರ: ಕ್ರೂರಿ; ರಕುತ: ನೆತ್ತರು; ತಡೆ: ಅಡ್ಡಿ, ವಿಘ್ನ; ಊರು: ತೊಡೆ; ಇಮ್ಮಡಿಸು: ಎರಡು ಪಟ್ಟು; ಮುನಿ: ಕೋಪಗೊಳ್ಳು; ಸುತ: ಮಗ; ಎದ್ದು: ಮೇಲೇಳು;

ಪದವಿಂಗಡಣೆ:
ಕಡಲ+ ತೆರೆಗಳ+ ತರುಬಿ+ ತುಡುಕುವ
ವಡಬನಂತಿರೆ+ ಮೇಘ+ಪಟಲವನ್
ಒಡೆದು +ಸೂಸುವ +ಸಿಡಿಲಿನಂತಿರೆ+ ಸಭೆಯೊಳಡ+ಹಾಯ್ದು
ಕುಡಿ+ ಕುಠಾರನ+ ರಕುತವನು +ತಡೆ
ಗಡಿ +ಸುಯೋಧನನ್+ಊರುಗಳನ್+
ಇಮ್ಮಡಿಸಿ+ ಮುನಿಯಲಿ +ಧರ್ಮಸುತನ್+ಎಂದ್+ಎದ್ದನಾ +ಭೀಮ

ಅಚ್ಚರಿ:
(೧) ಉಪಮಾನದ ಪ್ರಯೋಗ – ಕಡಲ ತೆರೆಗಳ ತರುಬಿ ತುಡುಕುವ ವಡಬನಂತಿರೆ ಮೇಘಪಟಲವ
ನೊಡೆದು ಸೂಸುವ ಸಿಡಿಲಿನಂತಿರೆ
(೨) ಭೀಮನ ಪ್ರತಿಜ್ಞೆ – ಕುಡಿ ಕುಠಾರನ ರಕುತವನು ತಡೆಗಡಿ ಸುಯೋಧನನೂರುಗಳ

ಪದ್ಯ ೨೧: ಕರ್ಣನ ಪರಾಕ್ರಮವು ಎಂತಹದು?

ಕೊಂಬನೇ ಬಳಿಕೀ ಮಹಾರಥ
ರಂಬುಗಿಂಬನು ನಿಮ್ಮ ಹಿರಿಯರ
ಡೊಂಬಿನಾಹವವಲ್ಲಲೇ ತಮತಮಗೆ ತುಡುಕುವಡೆ
ಅಂಬುನಿಧಿ ಮಕರಂದವಾದರೆ
ತುಂಬಿಯಾಗನೆ ವಡಬನೀತನ
ನೆಂಬ ಖುಲ್ಲರು ಸುಭಟರೇ ಧೃತರಾಷ್ಟ್ರ ಕೇಳೆಂದ (ಕರ್ಣ ಪರ್ವ, ೧೧ ಸಂಧಿ, ೨೧ ಪದ್ಯ)

ತಾತ್ಪರ್ಯ:
ಕರ್ಣನ ಯುದ್ಧವು ನಿಮಗೆ ಹಿರಿಯರಾದ ಭೀಷ್ಮ ದ್ರೋಣರ ಯುದ್ಧದಂತಲ್ಲ. ಅಂಥಿಂಥವರು ಅವನನ್ನು ತಡೆಯಲಾರರು. ಮಕರಂದ ಸಮುದ್ರಕ್ಕೆ ವಡಬನೇ ದುಂಬಿಯಾದಂತೆ ಕರ್ಣನ ಪರಾಕ್ರಮವನ್ನು ನಿಂದಿಸುವವರು ವೀರರೇ ಎಂದು ಸಂಜಯನು ಧೃತರಾಷ್ಟ್ರನಿಗೆ ಕರ್ಣನ ಪರಾಕ್ರಮದ ಬಗ್ಗೆ ತಿಳಿಸಿದನು.

ಅರ್ಥ:
ಕೊಂಬು: ಹೆಮ್ಮೆ, ಹೆಚ್ಚುಗಾರಿಕೆ; ಬಳಿಕ: ನಂತರ; ಮಹಾರಥ: ವೀರ; ಹಿರಿಯ: ದೊಡ್ಡವ,ಶ್ರೇಷ್ಠ; ಡೊಂಬು: ತೋರಿಕೆ, ಬೂಟಾಟಿಕೆ; ಆಹವ: ಯುದ್ಧ; ತುಡುಕು: ಹೋರಾಡು, ಸೆಣಸು; ಅಂಬುನಿಧಿ: ಸಾಗರ; ಮಕರಂದ: ಜೇನು; ತುಂಬಿ: ದುಂಬಿ, ಜೇನು; ವಡಬ:ಸಮುದ್ರದಲ್ಲಿರುವ ಬೆಂಕಿ; ಖುಲ್ಲ:ಅಲ್ಪನಾದವನು, ನೀಚ; ಸುಭಟ: ಶ್ರೇಷ್ಠ ಸೈನಿಕ;

ಪದವಿಂಗಡಣೆ:
ಕೊಂಬನೇ+ ಬಳಿಕ್+ಈ+ ಮಹಾರಥರ್
ಅಂಬುಗಿಂಬನು +ನಿಮ್ಮ +ಹಿರಿಯರ
ಡೊಂಬಿನ್+ಆಹವವ್+ಅಲ್ಲಲೇ +ತಮತಮಗೆ+ ತುಡುಕುವಡೆ
ಅಂಬುನಿಧಿ +ಮಕರಂದವಾದರೆ
ತುಂಬಿಯಾಗನೆ +ವಡಬನ್+ಈತನನ್
ಎಂಬ +ಖುಲ್ಲರು +ಸುಭಟರೇ+ ಧೃತರಾಷ್ಟ್ರ +ಕೇಳೆಂದ

ಅಚ್ಚರಿ:
(೧) ಉಪಮಾನದ ಪ್ರಯೋಗ – ಅಂಬುನಿಧಿ ಮಕರಂದವಾದರೆ ತುಂಬಿಯಾಗನೆ ವಡಬನ್
(೨) ಅಂಬುಗಿಂಬು, ತಮತಮಗೆ, ಡೊಂಬಿ – ಆಡು ಪದಗಳ ಬಳಕೆ