ಪದ್ಯ ೩೫: ಕೌರವನು ಭೀಮನ ಮೇಲೆ ಹೇಗೆ ಆಕ್ರಮಣ ಮಾಡಿದನು?

ಅವನಿಪತಿ ಕೇಳ್ ಭೀಮಸೇನನ
ತಿವಿಗುಳನು ತಪ್ಪಿಸಿ ಸುಯೋಧನ
ಕವಿದು ನಾಭಿಗೆ ತೋರಿ ಜಂಘೆಗೆ ಹೂಡಿ ಝಳಪದಲಿ
ಲವಣಿಯಲಿ ಲಳಿಯೆದ್ದು ಹೊಯ್ದನು
ಪವನಜನ ಭುಜಶಿರವ ಸೀಸಕ
ಕವಚವಜಿಗಿಜಿಯಾಗೆ ಬೀಳೆನುತರಸ ಬೊಬ್ಬಿರಿದ (ಗದಾ ಪರ್ವ, ೭ ಸಂಧಿ, ೩೫ ಪದ್ಯ)

ತಾತ್ಪರ್ಯ:
ಎಲೈ ರಾಜನೇ ಕೇಳು, ಭೀಮನ ತಿವಿತವನ್ನು ತಪ್ಪಿಸಿಕೊಂಡು ಕೌರಾನು ನಾಭಿಗೆ ಗುರಿಯಿಟ್ಟು ಜಂಘೆಗೆ ಹೂಡಿ, ಮೇಲೆ ಹಾರಿ ಭೀಮನ ತಲೆ, ಭುಜಗಳಿದ್ದ ಸೀಸಕ, ಕವಚಗಳನ್ನು ಪುಡಿಪುಡಿಯಾಗುವಂತೆ ಹೊಡೆದು ಗರ್ಜಿಸಿದನು.

ಅರ್ಥ:
ಅವನಿಪತಿ: ರಾಜ; ಕೇಳ್: ಆಲಿಸು; ತಿವಿ: ಚುಚ್ಚು; ತಪ್ಪಿಸು: ಸುಳ್ಳಾಗು; ಕವಿ: ಆವರಿಸು; ನಾಭಿ: ಹೊಕ್ಕಳು; ತೋರು: ಪ್ರಕಟಿಸು; ಜಂಘೆ: ತೊಡೆ; ಝಳಪ: ವೇಗ; ಲವಣಿ: ಕಾಂತಿ; ಲಳಿ: ರಭಸ; ಎದ್ದು: ಮೇಲೆ ಬಂದು; ಹೊಯ್ದು: ಹೊಡೆ; ಪವನಜ: ಭೀಮ; ಭುಜ: ಬಾಹು; ಶಿರ: ತಲೆ; ಸೀಸಕ: ಶಿರಸ್ತ್ರಾಣ; ಕವಚ: ಹೊದಿಕೆ; ಜಿಗಿಜಿಯಾಗಿ: ಪುಡಿಯಾಗಿ; ಬೀಳು: ಎರಗು, ಬಾಗು; ಬೊಬ್ಬಿರಿ: ಗರ್ಜಿಸು; ಅರಸ: ರಾಜ;

ಪದವಿಂಗಡಣೆ:
ಅವನಿಪತಿ +ಕೇಳ್ +ಭೀಮಸೇನನ
ತಿವಿಗುಳನು+ ತಪ್ಪಿಸಿ+ ಸುಯೋಧನ
ಕವಿದು +ನಾಭಿಗೆ +ತೋರಿ +ಜಂಘೆಗೆ +ಹೂಡಿ +ಝಳಪದಲಿ
ಲವಣಿಯಲಿ +ಲಳಿಯೆದ್ದು+ ಹೊಯ್ದನು
ಪವನಜನ +ಭುಜ+ಶಿರವ +ಸೀಸಕ
ಕವಚವ+ಜಿಗಿಜಿಯಾಗೆ +ಬೀಳೆನುತ್+ಅರಸ +ಬೊಬ್ಬಿರಿದ

ಅಚ್ಚರಿ:
(೧) ಲ ಕಾರದ ಜೋಡಿ ಪದ – ಲವಣಿಯಲಿ ಲಳಿಯೆದ್ದು
(೨) ಅವನಿಪತಿ, ಅರಸ – ಸಮಾನಾರ್ಥಕ ಪದ

ಪದ್ಯ ೬: ಸಾತ್ಯಕಿ ಭೂರಿಶ್ರವರ ಖಡ್ಗ ಯುದ್ಧ ಹೇಗಿತ್ತು?

ನೆಲನ ತಗ್ಗಿನಲುಪ್ಪರದ ಮೆ
ಯ್ಯೊಲವಿನಲಿ ಪಾರಗದ ಬವರಿಯ
ಸುಳುಹಿನಲಿ ಚಮ್ಮಟದ ಪಯವಂಚನೆಯಲುಜ್ಝಟದ
ಬಲಿದ ದಂಡೆಯ ಮಸೆಯ ಬಯಸಿಕೆ
ಲುಳಿಯ ಮೈಗಳ ಲವಣಿಸಾರರು
ಕೊಳುಗಿಡಿಯ ಖಂಡೆಯದ ಖಣಿಕಟಿಲೆಸೆಯೆ ಕಾದಿದರು (ದ್ರೋಣ ಪರ್ವ, ೧೪ ಸಂಧಿ, ೬ ಪದ್ಯ)

ತಾತ್ಪರ್ಯ:
ನೆಲದ ತಗ್ಗು, ದಿನ್ನೆಯ ಎತ್ತರಗಳಲ್ಲಿ ಮೈಯನ್ನು ತಿರುಗಿಸ್, ಎದುರಾಳಿಯ ಹೊಡೆತವನ್ನು ಸುತ್ತಿ ತಪ್ಪಿಸಿಕೊಳ್ಳುವ, ಗುರಾಣಿ ಹಿಡಿದು ತಪ್ಪಿಸ್ಕೊಳ್ಳುವ ಮಂಡೆ ತೊರಿ ಹೊಡೆಯುವ ವೀರರು ಕತ್ತಿಗಳು ಕಿಡಿಯುಗುಳುತ್ತಿರಲು ಹೋರಾಡಿದರು.

ಅರ್ಥ:
ನೆಲ: ಭೂಮಿ; ತಗ್ಗು: ಹಳ್ಳ, ಗುಣಿ; ಉಪ್ಪರ: ಎತ್ತರ, ಉನ್ನತಿ; ಒಲವು: ಪ್ರೀತಿ; ಪಾರಗ: ಪಂಡಿತ, ನಿಪುಣ; ಬವರಿ: ತಿರುಗುವುದು; ಸುಳುಹು: ಗುರುತು; ರೂಪ; ಚಮ್ಮಟ: ಚಾವಟಿ; ಪಯ: ನೀರು, ಉದಕ; ವಂಚನೆ: ಮೋಸ; ಉಜ್ಝಟ: ಯುದ್ಧದ ಒಂದು ವರಸೆ; ಬಲಿ: ಗಟ್ಟಿಯಾಗು; ದಂಡೆ: ಗುರಾಣಿ; ಮಸೆ: ಹರಿತವಾದುದು; ಬಯಸು: ಇಚ್ಛಿಸು; ಉಳಿ: ಬಿಡು, ತೊರೆ, ನಿಲ್ಲು; ಮೈ: ತನು; ಲವಣಿ: ಕಾಂತಿ, ನೃತ್ಯಭಂಗಿ; ಕೊಳು

ಪದವಿಂಗಡಣೆ:
ನೆಲನ +ತಗ್ಗಿನಲ್+ಉಪ್ಪರದ+ ಮೆಯ್
ಒಲವಿನಲಿ +ಪಾರಗದ+ ಬವರಿಯ
ಸುಳುಹಿನಲಿ+ ಚಮ್ಮಟದ +ಪಯವಂಚನೆಯಲ್+ಉಜ್ಝಟದ
ಬಲಿದ +ದಂಡೆಯ +ಮಸೆಯ +ಬಯಸಿಕೆಲ್
ಉಳಿಯ +ಮೈಗಳ +ಲವಣಿಸಾರರು
ಕೊಳುಗಿಡಿಯ +ಖಂಡೆಯದ +ಖಣಿಕಟಿಲ್+ಎಸೆಯೆ +ಕಾದಿದರು

ಅಚ್ಚರಿ:
(೧) ತಗ್ಗು, ಉಪ್ಪರ – ವಿರುದ್ಧ ಪದಗಳು
(೨) ಖಡ್ಗದ ಸದ್ದನ್ನು ಹೇಳುವ ಪದ – ಖಂಡೆಯದ ಖಣಿಕಟಿಲೆಸೆಯೆ ಕಾದಿದರು

ಪದ್ಯ ೨೮: ಅರ್ಜುನ ಮತ್ತು ಶಿವ ಮಲ್ಲಯುದ್ಧವನ್ನು ಹೇಗೆ ಆಡಿದರು?

ಬಿಗಿವ ಬಿಡಿಸುವ ಬಿಡಿಸಿದಾಕ್ಷಣ
ತೆಗೆವ ಕಳಚುವ ಕೊಂಬ ಲಳಿಯಲಿ
ಹೊಗುವ ಹತ್ತುವ ಲವಣಿಯಲಿ ಲಾಗಿಸುವ ಹೊರವಡುವ
ಚಿಗಿವ ತೊಡಚುವ ಬಿಗಿವ ಬಿಡಿಸುವ
ಬಗಿವ ಬಳಸುವ ಬಂದ ಗತಿಯತಿ
ಲಗಡಿಸುವ ಲೋಕೈಕ ವೀರರು ಹೊಕ್ಕು ಹೆಣಗಿದರು (ಅರಣ್ಯ ಪರ್ವ, ೭ ಸಂಧಿ, ೨೮ ಪದ್ಯ)

ತಾತ್ಪರ್ಯ:
ಒಬ್ಬರನ್ನೊಬ್ಬರು ತೋಳುಗಳಿಂದ ಬಿಗಿಯುತ್ತಿದ್ದರು. ಅದನ್ನು ಬಿಡಿಸಿಕೊಳ್ಳುತ್ತಿದ್ದರು, ತಕ್ಷಣವೇ ಮತ್ತೆ ಎಲೆಯುತ್ತಿದ್ದರು. ಆ ಹಿಡಿತವನ್ನು ತಪ್ಪಿಸುತ್ತಿದ್ದರು, ಬೇಗವಾಗಿ ಹೊಕ್ಕು ಆಕ್ರಮಿಸುತ್ತಿದ್ದರು. ಅದನ್ನು ತಪ್ಪಿಸಿಕೊಂಡು ಹೊರ ಬರುತ್ತಿದ್ದರು, ಹಾರುತ್ತಿದ್ದರು, ಹಿಡಿಯುತ್ತಿದ್ದರು, ಬಿಡಿಸಿಕೊಳ್ಳುತ್ತಿದ್ದರು, ಲಗಡಿಯೆಂಬ ವರಸೆ ಹಾಕುತ್ತಿದ್ದರು. ಹೀಗೆ ಶಿವನೂ ಅರ್ಜುನನೂ ಮಲ್ಲಯುದ್ಧದಲ್ಲಿ ಸೆಣಸಿದರು.

ಅರ್ಥ:
ಬಿಗಿ: ಕಟ್ಟು, ಬಂಧಿಸು; ಬಿಡಿಸು: ಕಳಚು, ಸಡಿಲಿಸು; ಕ್ಷಣ: ಸಮಯ; ತೆಗೆ: ಈಚೆಗೆ ತರು, ಹೊರತರು; ಕಳಚು: ಬೇರ್ಪಡಿಸು, ಬೇರೆಮಾಡು; ಲಳಿ: ರಭಸ, ಅವೇಶ; ಹೊಗು: ಒಳಸೇರು, ಪ್ರವೇಶಿಸು; ಹತ್ತು: ಸೇರು, ಕೂಡು; ಲವಣೆ: ಚಂದ; ಚೆಲುವು; ಲವಣಿ: ಕಾಂತಿ; ಲಾಗಿಸು: ಹಾರು, ಲಂಘಿಸು; ಹೊರವಡು: ಚಿಗಿ:ನೆಗೆ, ಹಾರು; ತೊಡಚು: ಕಟ್ಟು, ಬಂಧಿಸು; ಬಿಗಿ: ಬಂಧಿಸು; ಬಗಿ: ಸೀಳು, ಹೋಳು ಮಾಡು; ಬಳಸು: ಆವರಿಸುವಿಕೆ, ಸುತ್ತುವರಿಯುವಿಕೆ; ಗತಿ: ವೇಗ; ಲಗಡಿ: ಕುಸ್ತಿಯ ಒಂದು ವರಸೆ; ಲೋಕ: ಜಗತ್ತು; ವೀರ: ಪರಾಕ್ರಮ; ಹೊಕ್ಕು: ಸೇರು; ಹೆಣಗು: ಹೋರಾಡು, ಕಾಳಗ ಮಾಡು;

ಪದವಿಂಗಡಣೆ:
ಬಿಗಿವ +ಬಿಡಿಸುವ +ಬಿಡಿಸಿದಾಕ್ಷಣ
ತೆಗೆವ+ ಕಳಚುವ +ಕೊಂಬ +ಲಳಿಯಲಿ
ಹೊಗುವ +ಹತ್ತುವ +ಲವಣಿಯಲಿ +ಲಾಗಿಸುವ +ಹೊರವಡುವ
ಚಿಗಿವ+ ತೊಡಚುವ +ಬಿಗಿವ +ಬಿಡಿಸುವ
ಬಗಿವ+ ಬಳಸುವ+ ಬಂದ +ಗತಿ+ಅತಿ
ಲಗಡಿಸುವ +ಲೋಕೈಕ+ ವೀರರು +ಹೊಕ್ಕು +ಹೆಣಗಿದರು

ಅಚ್ಚರಿ:
(೧) ಬ ಕಾರದ ಸಾಲು ಪದ – ಬಿಗಿವ ಬಿಡಿಸುವ ಬಗಿವ ಬಳಸುವ ಬಂದಗತಿ
(೨) ಬಿಗಿವ ಬಿಡಿಸುವ – ೧, ೪ ಸಾಲಿನಲ್ಲಿ ಬಳಸಿದ ಪದಗಳು
(೩) ಲಳಿ, ಲಗಡಿಸು, ಲಾಗಿಸು, ಲವಣಿ – ಲ ಕಾರದ ಪದಗಳ ಬಳಕೆ