ಪದ್ಯ ೬೧: ಅಭಿಮನ್ಯುವಿನ ಬಾಣಗಳು ಶತ್ರುಸೈನ್ಯವನ್ನು ಹೇಗೆ ನಾಶಮಾಡಿದವು?

ಭಟ ಛಡಾಳಿಸಿದನು ಘೃತಾಹುತಿ
ಘಟಿಸಿದಗ್ನಿಯವೋಲು ರಣ ಚೌ
ಪಟ ಚತುರ್ಬಲದೊಳಗೆ ಹೊಕ್ಕನು ಸಿಂಹನಾದದಲಿ
ನಿಟಿಲನೇತ್ರನ ಕೋಪಶಿಖಿ ಲಟ
ಕಟಿಸುವಂತಿರೆ ಹೆಚ್ಚಿದರಿಬಲ
ದಟವಿಯನು ಸವರಿದುದು ಪಾರ್ಥಕುಮಾರ ಶರಜಾಲ (ದ್ರೋಣ ಪರ್ವ, ೫ ಸಂಧಿ, ೬೧ ಪದ್ಯ)

ತಾತ್ಪರ್ಯ:
ತುಪ್ಪದ ಆಹುತಿಯಿಮ್ದ ಹೆಚ್ಚುವ ಹೋಮಾಗ್ನಿಯಂತೆ ಅಭಿಮನ್ಯುವಿನ ಪರಾಕ್ರಮ ವರ್ಧಿಸಿತು. ಶಿವನ ಹಣೆಯ ನೇತ್ರದ ಅಗ್ನಿ ಛಟಛಟಿಸುವಂತೆ, ಶತ್ರು ಸೈನ್ಯವೆಂಬ ಕಾಡನ್ನು ಅಭಿಮನ್ಯುವಿನ ಬಾಣಗಳು ನಾಶಮಾಡಿದವು.

ಅರ್ಥ:
ಭಟ: ಸೈನಿಕ; ಛಡಾಳಿಸು: ಹೆಚ್ಚಾಗು, ಅಧಿಕವಾಗು; ಘೃತ: ತುಪ್ಪ, ಆಜ್ಯ; ಆಹುತಿ: ಯಜ್ಞಾಯಾಗಾದಿಗಳಲ್ಲಿ ದೇವತೆಗಳಿಗಾಗಿ ಅಗ್ನಿಯಲ್ಲಿ ಅರ್ಪಿಸುವ ಹವಿಸ್ಸು; ಘಟಿಸು: ಸಂಭವಿಸು; ಅಗ್ನಿ: ಬೆಂಕಿ; ರಣ: ಯುದ್ಧ; ಚೌಪಟ: ನಾಲ್ಕು ಪಟ್ಟು; ಚತುರ್ಬಲ: ಸೈನ್ಯದ ಆನೆ, ಕುದುರೆ, ರಥ ಮತ್ತು ಕಾಲಾಳು ಎಂಬ ನಾಲ್ಕು ಅಂಗ; ಹೊಕ್ಕು: ಸೇರು; ಸಿಂಹ: ಕೇಸರಿ; ಸಿಂಹನಾದ: ಗರ್ಜನೆ; ನಿಟಿಲ: ಹಣೆ, ಫಾಲ; ನೇತ್ರ: ಕಣ್ಣು; ಕೋಪ: ಕ್ರೋಧ; ಶಿಖಿ: ಬೆಂಕಿ; ಲಟಕಟ: ಉದ್ರೇಕಗೊಳ್ಳು; ಹೆಚ್ಚು: ಅಧಿಕ; ಅಟವಿ: ಕಾಡು; ಸವರಿಸು: ನಾಶಮಾದು; ಕುಮಾರ: ಮಗ; ಶರ: ಬಾಣ; ಜಾಲ: ಸಮೂಹ;

ಪದವಿಂಗಡಣೆ:
ಭಟ +ಛಡಾಳಿಸಿದನು +ಘೃತ+ಆಹುತಿ
ಘಟಿಸಿದ್+ಅಗ್ನಿಯವೋಲು +ರಣ +ಚೌ
ಪಟ +ಚತುರ್ಬಲದೊಳಗೆ +ಹೊಕ್ಕನು +ಸಿಂಹನಾದದಲಿ
ನಿಟಿಲನೇತ್ರನ +ಕೋಪ+ಶಿಖಿ +ಲಟ
ಕಟಿಸುವಂತಿರೆ+ ಹೆಚ್ಚಿದ್+ಅರಿ+ಬಲದ್
ಅಟವಿಯನು +ಸವರಿದುದು +ಪಾರ್ಥಕುಮಾರ +ಶರಜಾಲ

ಅಚ್ಚರಿ:
(೧) ಉಪಮಾನದ ಪ್ರಯೋಗ – ಭಟ ಛಡಾಳಿಸಿದನು ಘೃತಾಹುತಿ ಘಟಿಸಿದಗ್ನಿಯವೋಲು; ನಿಟಿಲನೇತ್ರನ ಕೋಪಶಿಖಿ ಲಟಕಟಿಸುವಂತಿರೆ

ಪದ್ಯ ೩೪: ಹಾವು ಭೀಮನನ್ನು ಹೇಗೆ ಬಿಗಿಯಿತು?

ಭಟ ಮರಳಿ ಸಂತೈಸಿಕೊಂಡಟ
ಮಟಿಸಿ ಗದೆಯಲಿ ಹೊಯ್ದು ಬಿಗುಹಿನ
ಕಟಕವನು ಬಿಚ್ಚಿದನು ಹೆಚ್ಚಿದನುಬ್ಬಿ ಬೊಬ್ಬಿಡುತ
ಪುಟದ ಕಂತುಕದಂತೆ ಫಣಿ ಲಟ
ಕಟಿಸಲೌಕಿತು ಮತ್ತೆ ಗಿಡಗನ
ಪುಟದ ಗಿಳಿಯಂದದಲಿ ಗಿರಿಗಿರಿಗುಟ್ಟಿದನು ಭೀಮ (ಅರಣ್ಯ ಪರ್ವ, ೧೪ ಸಂಧಿ, ೩೪ ಪದ್ಯ)

ತಾತ್ಪರ್ಯ:
ಭೀಮನು ಸುಧಾರಿಸಿಕೊಂಡು ಉಪಾಯದಿಂದ ಗದಾಪ್ರಹಾರ ಮಾಡಿ ಹಾವಿನ ಬಿಗಿತವನ್ನು ತಪ್ಪಿಸಿಕೊಂಡು ಗರ್ಜಿಸಿದನು. ಆದರೆ ಹೆಬ್ಬಾವು ನೆಗೆದ ಚಂಡಿನಂತೆ ಭೀಮನನ್ನು ತನ್ನ ಹಿಡಿತದಲ್ಲಿ ಸಿಕ್ಕಿಸಿಕೊಂಡು ಬಿಗಿಯಿತು. ಗಿಡಗನ ಹಿಡಿತದಲ್ಲಿ ಸಿಕ್ಕ ಗಿಣಿಯಂತೆ ಭೀಮನು ಆಯಾಸಗೊಂಡು ಗಿರಿಗುಟ್ಟಿದನು.

ಅರ್ಥ:
ಭಟ: ಬಲಶಾಲಿ; ಮರಳಿ: ಪುನಃ; ಸಂತೈಸು: ಸಮಾಧಾನಿಸು; ಅಟಮಟಿಸು: ಮೋಸ ಮಾಡು; ಗದೆ: ಮುದ್ಗರ; ಹೊಯ್ದು: ಹೊಡೆ; ಬಿಗುಹು: ಬಿಗಿ, ಗಟ್ತಿ; ಕಟಕ: ಕೈಬಳೆ; ಬಿಚ್ಚು: ಸಡಲಿಸು; ಹೆಚ್ಚು: ಅಧಿಕ; ಉಬ್ಬು: ಹಿಗ್ಗು; ಬೊಬ್ಬಿಡು: ಜೋರಾಗಿ ಕೂಗು; ಪುಟ: ನೆಗೆತ; ಕಂದುಕ:ಚೆಂಡು; ಫಣಿ: ಹಾವು; ಲಟಕಟಿಸು: ಚಕಿತನಾಗು; ಔಕು: ಒತ್ತು, ನೂಕು; ಗಿಡಗ: ಹದ್ದಿನ ಜಾತಿಯ ಹಕ್ಕಿ; ಗಿಳಿ: ಶುಕ; ಗಿರಿಗಿರಿಗುಟ್ಟು: ಗರಗರ ತಿರುಗು;

ಪದವಿಂಗಡಣೆ:
ಭಟ +ಮರಳಿ +ಸಂತೈಸಿಕೊಂಡ್+ಅಟ
ಮಟಿಸಿ+ ಗದೆಯಲಿ +ಹೊಯ್ದು +ಬಿಗುಹಿನ
ಕಟಕವನು +ಬಿಚ್ಚಿದನು +ಹೆಚ್ಚಿದನ್+ಉಬ್ಬಿ +ಬೊಬ್ಬಿಡುತ
ಪುಟದ +ಕಂತುಕದಂತೆ +ಫಣಿ +ಲಟ
ಕಟಿಸಲ್+ಔಕಿತು +ಮತ್ತೆ +ಗಿಡಗನ
ಪುಟದ +ಗಿಳಿಯಂದದಲಿ+ ಗಿರಿಗಿರಿಗುಟ್ಟಿದನು +ಭೀಮ

ಅಚ್ಚರಿ:
(೧) ಉಪಮಾನದ ಪ್ರಯೋಗ – ಪುಟದ ಕಂತುಕದಂತೆ ಫಣಿ ಲಟಕಟಿಸಲೌಕಿತು ಮತ್ತೆ ಗಿಡಗನ
ಪುಟದ ಗಿಳಿಯಂದದಲಿ ಗಿರಿಗಿರಿಗುಟ್ಟಿದನು ಭೀಮ

ಪದ್ಯ ೪೦: ಅರ್ಜುನನು ಯಾವ ಬಾಣವನ್ನು ಪುಡಿಮಾಡಿದನು?

ಲಟಕಟಿಸುವಾ ಮುರು ಕೋಟಿಯ
ಭಟರು ಕರೆದರು ಕಲುವಳೆಯನು
ಬ್ಬಟೆಯನದನೇನೆಂಬೆನವದಿರ ಸಮರ ಸಂಭ್ರಮವ
ಕುಟಿಲತನದಿಂದೊದಗಿದರು ಕಲು
ಕುಟಿಗಶರ ಶತಕೋಟಿಯಲಿ ಪಡಿ
ಭಟ ಬಲವ ಬೆದರಿಸಿದೆ ಚಿತ್ತೈಸೆಂದನಾ ಪಾರ್ಥ (ಅರಣ್ಯ ಪರ್ವ, ೧೩ ಸಂಧಿ, ೪೦ ಪದ್ಯ)

ತಾತ್ಪರ್ಯ:
ಅರ್ಜುನನು ಮುಂದುವರೆಸುತ್ತಾ, ಮೂರು ಕೋಟಿ ಯೋಧರು ಕಲ್ಲಿನ ಮಳೆಯನ್ನು ಸುರಿಸಿದರು. ಅದರ ಆರ್ಭಟವನ್ನು ನಾನು ಹೇಗೆ ಹೇಳಲಿ. ಅವರ ಈ ಕುಟಿಲ ಯುದ್ಧವನ್ನು ನಾನು ಕಲ್ಲು ಮುರಿಯುವ ಅಸಂಖ್ಯಾತ ಬಾಣಗಳನ್ನು ಬಿಟ್ಟು ಅವರನ್ನು ಮತ್ತು ಅವರು ಬಿಟ್ಟ ಕಲ್ಲುಗಳನ್ನು ಪುಡಿಮಾಡಿದೆನು.

ಅರ್ಥ:
ಲಟಕಟ: ಚಕಿತನಾಗು; ಭಟ: ಸೈನಿಕರು; ಕರೆ: ಬರೆಮಾಡು; ಕಲುವಳೆ: ಕಲ್ಲಿನ ಮಳೆ; ಉಬ್ಬಟೆ: ಅತಿಶಯ; ಅವದಿರ: ಅವರು, ಆಷ್ಟು ಜನ; ಸಮರ: ಯುದ್ಧ; ಸಂಭ್ರಮ: ಉತ್ಸಾಹ, ಸಡಗರ; ಕುಟಿಲ: ಮೋಸ; ಒದಗು: ದೊರೆತುದು; ಕಲು: ಕಲ್ಲು; ಕಲುಕುಟಿಗ: ಕಲ್ಲನ್ನು ಪುಡಿಮಾಡು; ಶರ: ಬಾಣ; ಶತ: ನೂರು; ಪಡಿಭಟ: ಎದುರಾಳಿ ಸೈನಿಕರು; ಬಲ: ಪರಾಕ್ರಮ, ಶಕ್ತಿ; ಬೆದರಿಸು: ಹೆದರಿಸು; ಚಿತ್ತೈಸು: ಗಮನವಿಟ್ಟು ಕೇಳು;

ಪದವಿಂಗಡಣೆ:
ಲಟಕಟಿಸುವಾ+ ಮೂರು+ ಕೋಟಿಯ
ಭಟರು+ ಕರೆದರು +ಕಲುವಳೆಯನ್
ಉಬ್ಬಟೆಯನ್+ಅದನೇನ್+ಎಂಬೆನ್+ಅವದಿರ +ಸಮರ +ಸಂಭ್ರಮವ
ಕುಟಿಲತನದಿಂದ್+ಒದಗಿದರು +ಕಲು
ಕುಟಿಗ+ಶರ+ ಶತಕೋಟಿಯಲಿ +ಪಡಿ
ಭಟ +ಬಲವ +ಬೆದರಿಸಿದೆ+ ಚಿತ್ತೈಸೆಂದನಾ +ಪಾರ್ಥ

ಅಚ್ಚರಿ:
(೧) ಕಲುವಳೆ, ಕಲುಕುಟಿಗ – ಪದಗಳ ಬಳಕೆ

ಪದ್ಯ ೧೩: ಭೀಮನು ಯಾವ ರಾಕ್ಷಸನೊಡನೆ ಯುದ್ಧ ಮಾಡಿದನು?

ಆ ತಪೋವನವಿವರ ಘಲ್ಲಣೆ
ಗಾತುದಿಲ್ಲ ವಿನೋದದಲಿ ವಿ
ಖ್ಯಾತ ಶೈಲದ ಮೇಖಲೆಯ ತುದಿಗೇರಿದನು ಭೀಮ
ಈತನನು ಹಳಚಿದನು ದೈತ್ಯನ
ಭೀತ ಮಣಿಮಾನೆಂಬವನು ಪದ
ಘಾತಿಯಲಿ ಲಟಕಟಿಸೆ ಗಿರಿ ಕಾದಿದರು ಪಟುಭಟರು (ಅರಣ್ಯ ಪರ್ವ, ೧೨ ಸಂಧಿ, ೧೩ ಪದ್ಯ)

ತಾತ್ಪರ್ಯ:
ಗಂಧಮಾದನ ಪರ್ವತದ ತಪೋವನವು ಇವರ ಆಕ್ರಮಣಕ್ಕೆ ಈಡಾಗಲಿಲ್ಲ. ಭೀಮನು ವಿನೋದಾರ್ಥವಾಗಿ ಗಂಧಮಾದನ ಪರ್ವತವನ್ನೇರಿದನು. ಅಲ್ಲಿ ಮಣಿಮಮ್ತನೆಂಬ ಭಯರಹಿತ ರಾಕ್ಷಸನು ಭೀಮನೊಡನೆ ಯುದ್ಧಮಾಡಿದನು. ಪರ್ವತವು ಇವರ ಹೋರಾಟಕ್ಕೆ ಜೋರಾಗಿ ನಡುಗಿತು.

ಅರ್ಥ:
ತಪೋವನ: ತಪಸ್ಸು ಮಾಡುವ ಸ್ಥಳ; ಘಲ್ಲಣೆ: ಘಲ್ ಘಲ್ ಎಂಬ ಶಬ್ದ; ಆತು: ಹೊಂದಿಕೊಂಡು, ಸರಿಯಾಗಿ ಹಿಡಿದು; ವಿನೋದ: ಹಾಸ್ಯ, ತಮಾಷೆ; ವಿಖ್ಯಾತ: ಪ್ರಸಿದ್ಧಿ, ಖ್ಯಾತಿ; ಶೈಲ: ಬೆಟ್ಟ; ಮೇಖಲೆ: ತಪ್ಪಲು, ಮಧ್ಯಭಾಗ; ತುದಿ: ಅಗ್ರಭಾಗ; ಏರು: ಮೇಲಕ್ಕೆ ಹತ್ತು; ಹಳಚು: ತಾಗು, ಬಡಿ; ದೈತ್ಯ: ರಾಕ್ಷಸ; ಭೀತ: ಭಯ; ಪದ: ಪಾದ, ಕಾಲು; ಘಾತ: ಹೊಡೆತ, ಪೆಟ್ಟು; ಲಟಕಟಿಸು: ಉದ್ರೇಕಗೊಳ್ಳು; ಗಿರಿ: ಬೆಟ್ಟ; ಕಾದು: ಹೋರಾಡು; ಪಟು: ಸಮರ್ಥ, ಕುಶಲ; ಭಟ: ಸೈನಿಕ;

ಪದವಿಂಗಡಣೆ:
ಆ +ತಪೋವನವ್+ಇವರ +ಘಲ್ಲಣೆಗ್
ಆತುದಿಲ್ಲ +ವಿನೋದದಲಿ +ವಿ
ಖ್ಯಾತ +ಶೈಲದ +ಮೇಖಲೆಯ +ತುದಿಗೇರಿದನು+ ಭೀಮ
ಈತನನು +ಹಳಚಿದನು +ದೈತ್ಯನ
ಭೀತ +ಮಣಿಮಾನೆಂಬವನು+ ಪದ
ಘಾತಿಯಲಿ+ ಲಟಕಟಿಸೆ +ಗಿರಿ +ಕಾದಿದರು +ಪಟು+ಭಟರು

ಅಚ್ಚರಿ:
(೧) ಭೀಮ ಮಣಿಮಾನನ ಯುದ್ಧದ ತೀವ್ರತೆ – ದೈತ್ಯನ ಭೀತ ಮಣಿಮಾನೆಂಬವನು ಪದ
ಘಾತಿಯಲಿ ಲಟಕಟಿಸೆ ಗಿರಿ ಕಾದಿದರು ಪಟುಭಟರು

ಪದ್ಯ ೪೩: ಮಲ್ಲಯುದ್ಧದ ಯಾವ ವರಸೆಗಳನ್ನು ಇಬ್ಬರೂ ಪ್ರದರ್ಶಿಸಿದರು?

ತೆಗೆದು ಗಳಹತ್ತದಲಿ ಕೊರಳನು
ಬಿಗಿಯೆ ಬಿಡಿಸುವ ತೋರಹತ್ತದ
ಹೊಗುತೆಯನು ವಂಚಿಸುವ ತಳಹತ್ತದಲಿ ತವಕಿಸುವ
ಲಗಡಿಯಲಿ ಲಟಕಟಿಸುವಂತರ
ಲಗಡಿಯಲಿ ಲಾಲಿಸುವ ಡೊಕ್ಕರ
ಣೆಗಳ ಬಿಗುಹಿನ ಬಿಡೆಯ ಬಿನ್ನಾಣದಲಿ ಹೆಣಗಿದರು (ಕರ್ಣ ಪರ್ವ, ೧೯ ಸಂಧಿ, ೪೩ ಪದ್ಯ)

ತಾತ್ಪರ್ಯ:
ಹಸ್ತಗಳಿಂದ ಕತ್ತುಗಳನ್ನು ಹಿಡಿದುದನ್ನು ಬಿಡಿಸಿಕೊಳ್ಳುವ, ನೇರವಾಗಿ ತೋಳಿನಿಂದ ತಿವಿದುದನ್ನು ತಪ್ಪಿಸುವ, ಕೈಯನ್ನು ಕೆಳಗಿಳಿಸಿ ಕಾಲುಹಿಡಿಯಲು ತವಕಿಸುವ, ಲಗಡಿಯನ್ನುಪಯೋಗಿಸಿ ಹಿಡಿಯಲು ಆತುರಪಡುವ, ಅಂತರ ಲಗಡಿಯಿಂದ ಲಾಲಿಸುವ, ಡೊಕ್ಕರಣೆಗಳ ಬಿಗಿಯನ್ನು ಬಿಗಿಯಲೆತ್ನಿಸುವ ಬಿನ್ನಾಣಗಳನ್ನು ಇಬ್ಬರೂ ತೋರಿಸಿದರು.

ಅರ್ಥ:
ತೆಗೆ: ಹೊರಹಾಕು; ಗಳಹತ್ತ: ಮಲ್ಲಯುದ್ಧದ ಪಟ್ಟು; ಕೊರಳು: ಕತ್ತು; ಬಿಗಿ: ಬಂಧಿಸು; ಬಿಡಿಸು: ಕಳಚು, ಸಡಿಲಿಸು; ತೋರಹತ್ತ: ದಪ್ಪನಾದ ಕೈಯುಳ್ಳವನು, ರಣಧೀರ; ಹೊಗು: ಪ್ರವೇಶಿಸು; ವಂಚಿಸು: ಮೋಸ; ತಳ: ಕೆಳಭಾಗ; ತವಕ: ಕಾತುರ, ಕುತೂಹಲ; ಲಗಡಿ: ಕುಸ್ತಿಯ ಒಂದು ವರಸೆ; ಲಟಕಟಿಸು: ಉದ್ರೇಕಗೊಳ್ಳು, ಚಕಿತನಾಗು; ಲಾಲಿಸು: ಆರೈಕೆ ಮಾಡು;
ಡೊಕ್ಕರ: ಗುದ್ದು; ಬಿಗುಹು: ಗಟ್ಟಿ, ಬಂಧಿಸು; ಬಿಡೆಯ: ದಾಕ್ಷಿಣ್ಯ, ಸಂಕೋಚ; ಬಿನ್ನಾಣ: ಸೊಬಗು; ಹೆಣಗು: ಹೋರಾಡು, ಕಾಳಗ ಮಾಡು

ಪದವಿಂಗಡಣೆ:
ತೆಗೆದು +ಗಳಹತ್ತದಲಿ +ಕೊರಳನು
ಬಿಗಿಯೆ +ಬಿಡಿಸುವ+ ತೋರಹತ್ತದ
ಹೊಗುತೆಯನು +ವಂಚಿಸುವ +ತಳಹತ್ತದಲಿ+ ತವಕಿಸುವ
ಲಗಡಿಯಲಿ +ಲಟಕಟಿಸುವ್+ಅಂತರ
ಲಗಡಿಯಲಿ +ಲಾಲಿಸುವ+ ಡೊಕ್ಕರ
ಣೆಗಳ +ಬಿಗುಹಿನ+ ಬಿಡೆಯ +ಬಿನ್ನಾಣದಲಿ+ ಹೆಣಗಿದರು

ಅಚ್ಚರಿ:
(೧) ಬ ಕಾರದ ತ್ರಿವಳಿ ಪದ – ಬಿಗುಹಿನ ಬಿಡೆಯ ಬಿನ್ನಾಣದಲಿ
(೨) ಲ ಕಾರದ ಜೋಡಿ ಪದ – ಲಗಡಿಯಲಿ ಲಟಕಟಿಸುವ, ಲಗಡಿಯಲಿ ಲಾಲಿಸುವ