ಪದ್ಯ ೩೧: ಕೌರವನೇಕೆ ಮಂತ್ರಾಕ್ಷರವನ್ನು ಮರೆತನು?

ಅರಸ ಕೇಳೈ ನಿನ್ನ ಮಗನು
ಬ್ಬರಿಸಿದನು ರೋಮಾಂಚದಲಿಗ
ಬ್ಬರಿಸುತಧಿಕಕ್ರೋಧಶಿಖಿ ಕರಣೇಂದ್ರಿಯಾದಿಗಳ
ತುರುಗಿದಂತಃಖೇದ ಮಂತ್ರಾ
ಕ್ಷರಕೆ ಜವನಿಕೆಯಾದುದೈ ನಿ
ರ್ಭರದ ವೀರಾವೇಶದಲಿ ಪಲ್ಲಟಿಸಿದನು ಭೂಪ (ಗದಾ ಪರ್ವ, ೫ ಸಂಧಿ, ೩೧ ಪದ್ಯ)

ತಾತ್ಪರ್ಯ:
ಎಲೈ ಧೃತರಾಷ್ಟ್ರ, ಈ ಘೋಷವನ್ನು ಕೇಳಿ ನಿನ್ನ ಮಗನಿಗೆ ಅತಿಶಯ ಕೋಪಾಗ್ನಿ ಉಕ್ಕಿತು. ರೋಮಾಂಚನಗೊಂಡ ಅವನ ಇಂದ್ರಿಯಗಳು ಮನಸ್ಸು ಉರಿದೆದ್ದವು. ಅಂತರಂಗದಲ್ಲಿ ದುಃಖವುಂಟಾಗಿ, ಜಲಸ್ತಂಭ ಮಂತ್ರದ ಬೀಜಾಕ್ಷರಗಳು ಮರೆತುಹೋದವು. ವೀರಾವೇಶದಿಂದ ನಿನ್ನ ಮಗನು ಕುದಿದನು.

ಅರ್ಥ:
ಅರಸ: ರಾಜ; ಕೇಳು: ಆಲಿಸು; ಮಗ: ಸುತ; ಉಬ್ಬರ: ಅತಿಶಯ, ಹೆಚ್ಚಳ; ರೋಮಾಂಚನ: ಆಶ್ಚರ್ಯ; ಗಬ್ಬ: ಅಹಂಕಾರ, ಸೊಕ್ಕು; ಅಧಿಕ: ಹೆಚ್ಚು; ಕ್ರೋಧ: ಕೋಪ; ಶಿಖಿ: ಬೆಂಕಿ; ಕರಣ: ಜ್ಞಾನೇಂದ್ರಿಯ; ಆದಿ: ಮುಂತಾದ; ತುರುಗು: ಸಂದಣಿಸು; ಅಂತಃಖೇದ: ಒಳ ದುಃಖ; ಮಂತ್ರ: ವೇದದಲ್ಲಿರುವ ಛಂದೋ ಬದ್ಧವೂ ಪವಿತ್ರವೂ ಆದ ದೇವತಾಸ್ತುತಿ; ಅಕ್ಷರ: ಅಕಾರ ಮೊದಲಾದ ವರ್ಣ; ಜವನಿಕೆ: ತೆರೆ, ಪರದೆ; ನಿರ್ಭರ: ವೇಗ, ರಭಸ; ವೀರ: ಶೂರ; ಆವೇಶ: ರೋಷ, ಆಗ್ರಹ; ಪಲ್ಲಟ: ಮಾರ್ಪಾಟು; ಭೂಪ: ರಾಜ;

ಪದವಿಂಗಡಣೆ:
ಅರಸ +ಕೇಳೈ +ನಿನ್ನ +ಮಗನ್
ಉಬ್ಬರಿಸಿದನು +ರೋಮಾಂಚದಲಿಗ್
ಅಬ್ಬರಿಸುತ್+ಅಧಿಕ+ಕ್ರೋಧ+ಶಿಖಿ +ಕರಣೇಂದ್ರಿ+ಆದಿಗಳ
ತುರುಗಿದ್+ಅಂತಃ+ಖೇದ +ಮಂತ್ರಾ
ಕ್ಷರಕೆ +ಜವನಿಕೆಯಾದುದೈ +ನಿ
ರ್ಭರದ +ವೀರಾವೇಶದಲಿ +ಪಲ್ಲಟಿಸಿದನು +ಭೂಪ

ಅಚ್ಚರಿ:
(೧) ಮಂತ್ರವನ್ನು ಮರೆತ ಎಂದು ಹೇಳುವ ಪರಿ – ಮಂತ್ರಾಕ್ಷರಕೆ ಜವನಿಕೆಯಾದುದೈ
(೨) ದುರ್ಯೋಧನನ ಸ್ಥಿತಿ – ನಿರ್ಭರದ ವೀರಾವೇಶದಲಿ ಪಲ್ಲಟಿಸಿದನು ಭೂಪ
(೩) ಅರಸ, ಭೂಪ – ಸಮಾನಾರ್ಥಕ ಪದ, ಮೊದಲ ಮತ್ತು ಕೊನೆಯ ಪದ

ಪದ್ಯ ೧೦೨: ಊರ್ವಶಿಯು ತನ್ನ ಉತ್ತರವನ್ನು ಹೇಗೆ ನೀಡಿದಳು?

ಕೇಳುತವೆ ರೋಮಾಂಚ ಲಜ್ಜೆಯ
ಜೋಳಿಯೆದ್ದುದು ಝೋಂಪಿಸಿತು ಪುಳ
ಕಾಳಿ ಭಯವನು ಪಂಟಿಸಿದುದನುರಾಗದಭಿಮಾನ
ಮೇಲೆ ಮೇಲಭಿಲಾಷೆ ಧೈರ್ಯವ
ಚಾಳವಿಸಿ ಪರಿತೋಷ ಪೂರಣ
ದೇಳು ಮುಳುಗಾಯ್ತುತ್ತರಕೆ ನಸುಬಾಗಿದಳು ಶಿರವ (ಅರಣ್ಯ ಪರ್ವ, ೮ ಸಂಧಿ, ೧೦೨ ಪದ್ಯ)

ತಾತ್ಪರ್ಯ:
ಚಿತ್ರಸೇನನ ಮಾತನ್ನು ಕೇಳಿ ಊರ್ವಶಿಯು ರೋಮಾಂಚನಗೊಂಡಳು. ರೋಮಾಂಚನ ದೊಂದಿಗೆ ಲಜ್ಜೆಯು ಆಕೆಯನ್ನು ಆವರಿಸಿತು. ಮೈನವಿರೆದ್ದಿತು. ಭಯವನ್ನು ಅನುರಾಗವು ಮುಚ್ಚಿ ಹಾಕಿತು. ಅರ್ಜುನನ ಮೇಲಿನ ಅಭಿಲಾಷೆಯು ಧೈರ್ಯವನ್ನು ಹೆಚ್ಚಿಸಿತು. ಅತಿಶಯವಾದ ಸಂತೋಷದಲ್ಲಿ ಊರ್ವಶಿಯು ಮುಳುಗಿ ಎದ್ದಳು. ಚಿತ್ರಸೇನನಿಗೆ ಉತ್ತರವಾಗಿ ತಲೆಯನ್ನು ಸ್ವಲ್ಪ ಬಾಗಿಸಿದಳು.

ಅರ್ಥ:
ಕೇಳು: ಆಲಿಸು; ರೋಮಾಂಚನ: ಪುಳುಕಗೊಳ್ಳು; ಲಜ್ಜೆ: ನಾಚಿಕೆ; ಜೋಳಿ:ಗುಂಪು; ಝೋಂಪಿಸು: ಬೆಚ್ಚಿಬೀಳು; ಪುಳಕ: ಮೈನವಿರೇಳುವಿಕೆ; ಭಯ: ಭೀತಿ; ಪಂಟಿಸು: ಮುಚ್ಚು; ಅನುರಾಗ: ಪ್ರೀತಿ; ಅಭಿಮಾನ: ಹೆಮ್ಮೆ, ಅಹಂಕಾರ; ಮೇಲೆ: ಅನಂತರ; ಅಭಿಲಾಷೆ: ಆಸೆ, ಬಯಕೆ; ಧೈರ್ಯ: ಎದೆಗಾರಿಕೆ, ಕೆಚ್ಚು; ಚಾಳನ: ಚಲನೆ; ಪರಿತೋಷ: ಸಂತುಷ್ಟಿ, ಆನಂದ; ಪೂರಣ: ತುಂಬುವುದು; ಮುಳುಗು: ತೋಯು; ಉತ್ತರ: ಏರಿಕೆ; ನಸು: ಸ್ವಲ್ಪ; ಬಾಗು: ಬಗ್ಗು, ಮಣಿ; ಶಿರ: ತಲೆ;

ಪದವಿಂಗಡಣೆ:
ಕೇಳುತವೆ +ರೋಮಾಂಚ +ಲಜ್ಜೆಯ
ಜೋಳಿಯೆದ್ದುದು +ಝೋಂಪಿಸಿತು +ಪುಳ
ಕಾಳಿ +ಭಯವನು +ಪಂಟಿಸಿದುದ್+ಅನುರಾಗದ್+ಅಭಿಮಾನ
ಮೇಲೆ+ ಮೇಲ್+ಅಭಿಲಾಷೆ +ಧೈರ್ಯವ
ಚಾಳವಿಸಿ +ಪರಿತೋಷ +ಪೂರಣದ್
ಏಳು+ ಮುಳುಗಾಯ್ತ್+ಉತ್ತರಕೆ+ ನಸುಬಾಗಿದಳು +ಶಿರವ

ಅಚ್ಚರಿ:
(೧) ಊರ್ವಶಿಯ ಉತ್ತರ – ಮೇಲೆ ಮೇಲಭಿಲಾಷೆ ಧೈರ್ಯವಚಾಳವಿಸಿ ಪರಿತೋಷ ಪೂರಣ
ದೇಳು ಮುಳುಗಾಯ್ತುತ್ತರಕೆ ನಸುಬಾಗಿದಳು ಶಿರವ

ಪದ್ಯ ೧೫: ಆಸ್ಥಾನದವರು ಹೇಳಿದ ಮಾತಿಗೆ ಉತ್ತರನ ಪ್ರತಿಕ್ರಿಯೆ ಹೇಗಿತ್ತು?

ಎಂದಡುಬ್ಬರಿಸಿದನು ತಾ ಕಲಿ
ಯೆಂದು ಬಗೆದನು ಮೇಸೆಯನು ಬೆರ
ಳಿಂದ ತಿರುಹುತ ಮುಗುಳು ನಗೆ ಹರುಷದಲಿ ಮೈಮರೆದ
ಸಂದಣಿಸಿ ರೋಮಾಂಚ ಕೆಲ ಬಲ
ದಿಂದುಮುಖಿಯರ ನೋಡಿದನು ನಲ
ವಿಂದ ನುಡಿದನು ತನ್ನ ಪೌರುಷತನದ ಪರಿಣತಿಯ (ವಿರಾಟ ಪರ್ವ, ೬ ಸಂಧಿ, ೧೫ ಪದ್ಯ)

ತಾತ್ಪರ್ಯ:
ತನ್ನ ಬಂಟರು ಅವನನ್ನು ಉತ್ತೇಜಿಸಲು, ಉತ್ತರನು ಅವರ ಹೊಗಳುವಿಕೆಯಿಂದ ಉಬ್ಬಿ ತಾನು ವೀರನೆಂದು ಭ್ರಮಿಸಿ,ಬೆರಳಿಂದ ತನ್ನ ಮೀಸೆಯನ್ನು ತಿರುವುತ್ತಾ, ಹರ್ಷದಿಂದ ಉಬ್ಬಿ, ರೋಮಾಂಚನಗೊಂಡು ತರುಣಿಯರನ್ನು ನೋಡುತ್ತಾ, ತನ್ನ ಪೌರುಷವನ್ನು ಯುದ್ಧದ ಕುಶಲತೆಯನ್ನು ಹೇಳಿಕೊಂಡನು.

ಅರ್ಥ:
ಉಬ್ಬರ: ಆಡಂಬರ, ಅತಿಶಯ; ಕಲಿ: ಶೂರ; ಬಗೆದು: ತಿಳಿದು; ತಿರುಹು: ತಿರುಗಿಸು; ಮುಗುಳು: ಮಂದಸ್ಮಿತ; ನಗೆ: ಆನಂದ; ಹರುಷ: ಸಂತೋಷ; ಮೈಮರೆ: ಎಚ್ಚರತಪ್ಪು; ಸಂದಣಿ:ಗುಂಪು, ಸಮೂಹ; ರೋಮಾಂಚ: ಪುಳಕ; ಕೆಲ: ಸ್ವಲ್ಪ; ಬಲ: ಶೌರ್ಯ; ಇಂದುಮುಖಿ: ಸ್ತ್ರೀ; ನೋಡು: ವೀಕ್ಷಿಸು; ನಲವು: ಸಂತೋಷ; ನುಡಿ: ಮಾತಾಡು; ಪೌರುಷ: ಬಲ; ಪರಿಣತಿ: ಪಾಂಡಿತ್ಯ;

ಪದವಿಂಗಡಣೆ:
ಎಂದಡ್+ಉಬ್ಬರಿಸಿದನು +ತಾ +ಕಲಿ
ಯೆಂದು +ಬಗೆದನು+ ಮೀಸೆಯನು +ಬೆರ
ಳಿಂದ +ತಿರುಹುತ +ಮುಗುಳು +ನಗೆ +ಹರುಷದಲಿ +ಮೈಮರೆದ
ಸಂದಣಿಸಿ +ರೋಮಾಂಚ +ಕೆಲ+ ಬಲದ್
ಇಂದುಮುಖಿಯರ+ ನೋಡಿದನು +ನಲ
ವಿಂದ +ನುಡಿದನು +ತನ್ನ +ಪೌರುಷತನದ+ ಪರಿಣತಿಯ

ಅಚ್ಚರಿ:
(೧) ತನ್ನ ಪೌರುಷವನ್ನು ತೋರ್ಪಡಿಸುವ ಬಗೆ – ತಾ ಕಲಿ
ಯೆಂದು ಬಗೆದನು ಮೇಸೆಯನು ಬೆರಳಿಂದ ತಿರುಹುತ ಮುಗುಳು ನಗೆ ಹರುಷದಲಿ ಮೈಮರೆದ
(೨) ಜೋಡಿ ಪದಗಳು – ‘ನ’ – ನೋಡಿದನು ನಲವಿಂದ ನುಡಿದನು