ಪದ್ಯ ೧೯: ದುರ್ಯೋಧನನು ಯಾವ ಪಾಪ ಮಾಡಿದ?

ರಣಮುಖದೊಳೇಕಾದಶಾಕ್ಷೋ
ಹಿಣೀಗೆ ಹರಿವಾಯ್ತೇ ಯುಧಿಷ್ಠಿರ
ನುಣಲಿ ಧರೆಯನು ಗೋತ್ರವಧವಿನ್ಯಸ್ತ ಕಿಲ್ಭಿಷವ
ಸೆಣಸ ಮಾಡಿದೆ ದೈವದಲಿ ಧಾ
ರುಣಿಯ ಹುದುವಿನ ಸಿರಿಗೆ ಸೇರದೆ
ಹಣಿದವಾಡಿದೆ ರಾಜವಂಶದ ಕಲ್ಪತರುವನವ (ಗದಾ ಪರ್ವ, ೩ ಸಂಧಿ, ೧೯ ಪದ್ಯ)

ತಾತ್ಪರ್ಯ:
ಸಂಜಯನು ದುರ್ಯೋಧನನ ಸ್ಥಿತಿಯನ್ನು ನೋಡಿ, ಹನ್ನೊಂದು ಅಕ್ಷೋಹಿಣೀ ಸೇನೆಯು ಯುದ್ಧದಲ್ಲಿ ನಾಶವಾಯಿತೇ? ಗೋತ್ರವಧೆಯಿಂದ ಕಳಂಕಿತವಾದ ಈ ಭೂಮಿಯನ್ನು ಧರ್ಮಜನು ಭೋಗಿಸಲಿ, ಭೂಮಿಯನ್ನು ಹಂಚಿಕೊಂಡು ಅನುಭವಿಸುವ ಐಶ್ವರ್ಯವನ್ನು ಧಿಕ್ಕರಿಸಿ, ದೈವದೊಡನೆ ಹೋರಾಡಿ, ಕುರುರಾಜವಂಶವೆಂಬ ಕಲ್ಪತರುವನ್ನು ಕಡಿದುಹಾಕಿದೆ ಎಂದು ಹೇಳಿದನು.

ಅರ್ಥ:
ರಣ: ಯುದ್ಧ; ಮುಖ: ಆನನ; ಏಕಾದಶ: ಹನ್ನೊಂದು; ಅಕ್ಷೋಹಿಣಿ: ೨೧೮೭೦ ಆನೆಗಳು + ೨೧೮೭೦ ರಥಗಳು + ೬೫೬೧೦ ಕುದುರೆಗಳು + ೧೦೯೩೫೦ ಕಾಲಾಳುಗಳಿರುವ ಸೈನ್ಯ ಸಮೂಹ; ಹರಿ: ನಾಶ; ಉಣು: ತಿನ್ನು; ಧರೆ: ಭೂಮಿ; ಗೋತ್ರ: ಕುಲ, ವಂಶ, ನಾಮಧೇಯ; ವಧ: ನಾಶ; ವಿನ್ಯಸ್ತ: ಇಟ್ಟ, ಇರಿಸಿದ; ಕಿಲ್ಬಿಷ: ಪಾಪ; ಸೆಣಸು: ಹೋರಾಡು; ದೈವ: ಭಗವಂತ; ಧಾರುಣಿ: ಭೂಮಿ; ಹುದು: ತಿರುಳು, ಸಾರ; ಸಿರಿ: ಐಶ್ವರ್ಯ; ಸೇರು: ಜೊತೆಯಾಗು; ಹಣಿ:ಬಾಗು, ಮಣಿ; ವಂಶ: ಕುಲ; ಕಲ್ಪತರು: ಬೇಡಿದುದನ್ನು ಕೊಡುವ ಸ್ವರ್ಗ ಲೋಕದ ಒಂದು ಮರ;

ಪದವಿಂಗಡಣೆ:
ರಣಮುಖದೊಳ್+ಏಕಾದಶ+ಅಕ್ಷೋ
ಹಿಣಿಗೆ+ ಹರಿವಾಯ್ತೇ +ಯುಧಿಷ್ಠಿರನ್
ಉಣಲಿ +ಧರೆಯನು +ಗೋತ್ರವಧ+ವಿನ್ಯಸ್ತ +ಕಿಲ್ಭಿಷವ
ಸೆಣಸ +ಮಾಡಿದೆ +ದೈವದಲಿ +ಧಾ
ರುಣಿಯ +ಹುದುವಿನ +ಸಿರಿಗೆ+ ಸೇರದೆ
ಹಣಿದವಾಡಿದೆ +ರಾಜವಂಶದ +ಕಲ್ಪತರು+ವನವ

ಅಚ್ಚರಿ:
(೧) ಅನುಭವಿಸಲಿ ಎಂದು ಹೇಳುವ ಪರಿ – ಯುಧಿಷ್ಠಿರನುಣಲಿ ಧರೆಯನು
(೨) ದುರ್ಯೋಧನನ ಪಾಪ – ಗೋತ್ರವಧವಿನ್ಯಸ್ತ ಕಿಲ್ಭಿಷವ ಸೆಣಸ ಮಾಡಿದೆ
(೩) ವಂಶ, ಗೋತ್ರ – ಸಮಾನಾರ್ಥಕ ಪದ