ಪದ್ಯ ೧: ಕೌರವ ಪಾಂಡವ ಸೈನ್ಯದಲ್ಲಿ ಏನು ತೋರುತ್ತಿತ್ತು?

ನೀನು ನೆರಹಿದ ಸುಕೃತ ಫಲವದ
ನೇನ ಹೇಳುವೆನಿತ್ತಲುಗ್ಗಡ
ದಾನೆ ಬಿದ್ದುದು ಕಾದಿ ನಸು ಸೊಪ್ಪಾದುದರಿಸೇನೆ
ಧ್ಯಾನವಿತ್ತಲು ರಾಗವತ್ತಲು
ಮೋನವಿತ್ತಲು ರಭಸವತ್ತಲು
ಹಾನಿಯಿತ್ತಲು ವೃದ್ಧಿಯತ್ತಲು ಭೂಪ ಕೇಳೆಂದ (ದ್ರೋಣ ಪರ್ವ, ೪ ಸಂಧಿ, ೧ ಪದ್ಯ)

ತಾತ್ಪರ್ಯ:
ಧೃತರಾಷ್ಟ್ರ ಕೇಳು, ನೀನು ಗಳಿಸಿದ ಪುಣ್ಯದ ಫಲವನ್ನು ಏನೆಂದು ಹೇಳಲಿ, ಮಹಾಗಜವಾದ ಸುಪ್ರತೀಕವು ಸತ್ತುಬಿದ್ದಿತು. ಯುದ್ಧದಲ್ಲಿ ಶತ್ರುಗಳ ಸೈನ್ಯಕ್ಕೆ ಸ್ವಲ್ಪ ಹಾನಿಯಾಯಿತು, ಅವರ ಸೈನ್ಯದಲ್ಲಿ ಅತಿ ಸಂತೋಷವಿದ್ದರೆ, ನಮ್ಮಲ್ಲಿ ಚಿಂತೆ, ಅಲ್ಲಿ ರಭಸ ಆವೇಶವಿದ್ದರೆ ಇಲ್ಲಿ ಮೌನ, ಅಲ್ಲಿ ಏಳಿಗೆ ಅಭ್ಯುದಯ ಕಾಣಿಸಿದರೆ ಇಲ್ಲಿ ಹಾನಿ ತೋರುತ್ತಿತ್ತು.

ಅರ್ಥ:
ನೆರಹು: ಗುಂಪು; ಸುಕೃತ: ಒಳ್ಳೆಯ ಕೆಲಸ; ಫಲ: ಪ್ರಯೋಜನ; ಹೇಳು: ತಿಳಿಸು; ಉಗ್ಗಡ: ಉತ್ಕಟತೆ, ಅತಿಶಯ; ಆನೆ: ಗಜ; ಬಿದ್ದು: ಉರುಳು; ಕಾದು: ಹೋರಾಡು; ನಸು: ಕೊಂಚ, ಸ್ವಲ್ಪ; ಸೊಪ್ಪಾದು: ಹಾನಿಯಾಗು; ಅರಿ: ವೈರಿ; ಸೇನೆ: ಸೈನ್ಯ; ಧ್ಯಾನ: ಆತ್ಮಚಿಂತನೆ; ರಾಗ:ಹಿಗ್ಗು, ಸಂತೋಷ; ಮೋನ: ಮೌನ; ರಭಸ: ವೇಗ; ಹಾನಿ: ನಾಶ; ವೃದ್ಧಿ: ಹೆಚ್ಚಳ; ಭೂಪ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ನೀನು +ನೆರಹಿದ +ಸುಕೃತ+ ಫಲವದನ್
ಏನ +ಹೇಳುವೆನ್+ಇತ್ತಲ್+ಉಗ್ಗಡದ್
ಆನೆ +ಬಿದ್ದುದು +ಕಾದಿ +ನಸು +ಸೊಪ್ಪಾದುದ್+ಅರಿಸೇನೆ
ಧ್ಯಾನವಿತ್ತಲು +ರಾಗವತ್ತಲು
ಮೋನವಿತ್ತಲು +ರಭಸವತ್ತಲು
ಹಾನಿಯಿತ್ತಲು +ವೃದ್ಧಿಯತ್ತಲು +ಭೂಪ +ಕೇಳೆಂದ

ಅಚ್ಚರಿ:
(೧) ಇತ್ತಲು ಅತ್ತಲು ಪದದ ಬಳಕೆ
(೨) ಎಂಥಾ ಪುಣ್ಯನಿನ್ನದು ಎಂದು ಹಂಗಿಸುವ ಪರಿ – ನೀನು ನೆರಹಿದ ಸುಕೃತ ಫಲವದನೇನ ಹೇಳುವೆನ್

ಪದ್ಯ ೪೯: ಯಾವ ನೀತಿಯಿಂದ ಇಹಪರಗಳೆರಡನ್ನು ಗೆಲ್ಲಬಹುದು?

ನೀತಿವಿಡಿದರಸಂಗೆ ಬಹಳ
ಖ್ಯಾತವದು ಜನರಾಗ ರಾಗ
ವ್ರಾತದಿಂ ಧನ ಧನದಿ ಪರಿಕರ ಪರಿಕರದಿ ಜಯವು
ಆತ ಜಯದಿಂ ಧರ್ಮ ಧರ್ಮಸ
ಮೇತದಿಂ ಸುರತುಷ್ಟಿ ತುಷ್ಟಿಯ
ನೀತಿಯಿಂದಿಹಪರವ ಗೆಲುವೈ ರಾಯ ಕೇಳೆಂದ (ಸಭಾ ಪರ್ವ, ೧ ಸಂಧಿ, ೪೯ ಪದ್ಯ)

ತಾತ್ಪರ್ಯ:
ನಾರದರು ಯುಧಿಷ್ಠಿರನ ಜೊತೆ ಅವರ ಮಾತನ್ನು ಮುಂದುವರಿಸುತ್ತಾ, ರಾಜ, “ನೀತಿಯಿಂದ ನಡೆಯುವ ರಾಜನು ಜನರ ಪ್ರೀತಿಗೆ ಪಾತ್ರನಾಗುತ್ತಾನೆ, ಅದರಿಂದ ಅವನು ಧನವಂತನಾಗುತ್ತಾನೆ, ಧನದಿಂದ ಸಾಧನ ಸಂಪತ್ತುಗಳು ಲಭ್ಯವಾಗುತ್ತದೆ, ಅದರಿಂದ ಜಯವು ಲಭಿಸುತ್ತದೆ, ಆ ಜಯದಿಂದ ಧರ್ಮಸಾಧನೆ, ಧರ್ಮಸಾಧನೆಯಿಂದ ದೇವತೆಗಳು ಸಂತೃತ್ಪರಾಗುತ್ತಾರೆ,
ಇಂತಹ ನೀತಿಯಿಂದ ರಾಜನು ಇಹಪರಗಳೆರಡರಲ್ಲೂ ಗೆಲ್ಲುತ್ತಾನೆ.

ಅರ್ಥ:
ನೀತಿ: ಮಾರ್ಗ; ಅರಸ: ರಾಜ; ಬಹಳ: ತುಂಬ; ಖ್ಯಾತ: ಪ್ರಸಿದ್ಧ; ರಾಗ: ಹಿಗ್ಗು, ಸಂತೋಷ; ವ್ರಾತ: ದೇಹಶ್ರಮ; ಧನ: ಐಶ್ವರ್ಯ; ಪರಿಕರ:ಪರಿ ಜನ, ಸಾಧನ ಸಂಪತ್ತು; ಜಯ: ಗೆಲುವು; ಧರ್ಮ: ನಿಯಮ, ಆಚಾರ; ಸಮೇತ: ಜೊತೆ; ಸುರ: ದೇವತೆ; ತುಷ್ಟಿ: ತೃಪ್ತಿ; ಇಹಪರ: ಲೋಕ ಮತ್ತು ಪರಲೋಕ; ರಾಯ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ನೀತಿವಿಡಿದ್+ಅರಸಂಗೆ +ಬಹಳ
ಖ್ಯಾತವದು +ಜನರಾಗ +ರಾಗ
ವ್ರಾತದಿಂ +ಧನ +ಧನದಿ+ ಪರಿಕರ+ ಪರಿಕರದಿ+ ಜಯವು
ಆತ +ಜಯದಿಂ +ಧರ್ಮ +ಧರ್ಮ+ಸ
ಮೇತದಿಂ +ಸುರತುಷ್ಟಿ +ತುಷ್ಟಿಯ
ನೀತಿಯಿಂದ್+ಇಹಪರವ +ಗೆಲುವೈ +ರಾಯ +ಕೇಳೆಂದ

ಅಚ್ಚರಿ:
(೧) ನೀತಿ – ೧, ೬ ಸಾಲಿನ ಮೊದಲ ಪದ
(೨) ಜೋಡಿ ಪದಗಳು: ಜನರಾಗ ರಾಗ, ವ್ರಾತದಿಂ ಧನ ಧನದಿ, ಪರಿಕರ ಪರಿಕರದಿ, ಧರ್ಮ ಧರ್ಮಸ, ಸುರತುಷ್ಟಿ ತುಷ್ಟಿ;
(೩) ಅರಸ, ರಾಯ – ಸಮನಾರ್ಥಕ ಪದಗಳು