ಪದ್ಯ ೩೨: ದುರ್ಯೋಧನನು ಯಾವ ಪ್ರಮಾಣವನ್ನು ಮಾಡಿದನು?

ಆಳು ಬಿದ್ದುದು ಬೇಹ ನಾಯಕ
ರೋಲಗಿಸಿತಮರಿಯರನೀ ರಣ
ದೂಳಿಗಕೆ ನಾನೊಬ್ಬನೆಂದೇ ನಿನಗೆ ತೋರಿತಲಾ
ಆಳ ಹಂಗನು ನಾಯಕರ ಬಿಲು
ಗೋಲ ಜೋಡಿನ ಬಲವ ಚಿತ್ತದೊ
ಳಾಳಿದೊಡೆ ಧೃತರಾಷ್ಟ್ರ ರಾಯನ ಕಂದನಲ್ಲೆಂದ (ಗದಾ ಪರ್ವ, ೩ ಸಂಧಿ, ೩೨ ಪದ್ಯ)

ತಾತ್ಪರ್ಯ:
ದುರ್ಯೋಧನನು ಮಾತನಾಡುತ್ತಾ, ಸೈನಿಕರು ಸತ್ತರು, ಸೇನಾನಾಯಕರು ಅಪ್ಸರೆಯರನ್ನು ಓಲೈಸಿದರು, ಯುದ್ಧಮಾಡಲು ನಾನೊಬ್ಬನೇ ಆದೆ ಎಂದು ನಿನಗೆ ತೋರಿತಲ್ಲವೇ? ಆಳುಗಳ ಹಂಗನ್ನು ಸೇನಾನಾಯಕರ ಬಿಲ್ಲು ಕವಚಗಳ ಬಲವನ್ನೂ ಮನಸ್ಸಿನಲ್ಲಾದರೂ ಬಯಸಿದರೆ ನಾನು ಧೃತರಾಷ್ಟ್ರ ಮಗನೇ ಅಲ್ಲ.

ಅರ್ಥ:
ಆಳು: ಸೇವಕ; ಬಿದ್ದು: ಬೀಳು, ಕುಸಿ; ಬೇಹ: ಬೇಕಾದ; ನಾಯಕ: ಒಡೆಯ; ಓಲಗಿಸು: ಉಪಚರಿಸು; ಅಮರಿ: ಅಪ್ಸರೆ; ರಣ: ಯುದ್ಧ; ಊಳಿಗ: ಕೆಲಸ, ಕಾರ್ಯ; ತೋರು: ಗೋಚರಿಸು; ಹಂಗ: ದಾಕ್ಷಿಣ್ಯ, ಆಭಾರ; ಕೋಲ: ಬಾಣ; ಜೋಡು: ಜೊತೆ, ಜೋಡಿ; ಬಲ: ಶಕ್ತಿ, ಸೇನೆ; ಚಿತ್ತ: ಮನಸ್ಸು; ರಾಯ: ರಾಜ; ಕಂದ: ಮಗ;

ಪದವಿಂಗಡಣೆ:
ಆಳು +ಬಿದ್ದುದು +ಬೇಹ +ನಾಯಕರ್
ಓಲಗಿಸಿತ್+ಅಮರಿಯರನ್+ಈ+ ರಣ
ದೂಳಿಗಕೆ +ನಾನೊಬ್ಬನೆಂದೇ +ನಿನಗೆ +ತೋರಿತಲಾ
ಆಳ +ಹಂಗನು +ನಾಯಕರ+ ಬಿಲು
ಗೋಲ +ಜೋಡಿನ +ಬಲವ+ ಚಿತ್ತದೊಳ್
ಆಳಿದೊಡೆ +ಧೃತರಾಷ್ಟ್ರ +ರಾಯನ +ಕಂದನಲ್ಲೆಂದ

ಅಚ್ಚರಿ:
(೧) ನಾಯಕರು ಸತ್ತರು ಎಂದು ಹೇಳುವ ಪರಿ – ಬೇಹ ನಾಯಕರೋಲಗಿಸಿತಮರಿಯರನೀ