ಪದ್ಯ ೪೫: ಕೌರವನಾಯಕರ ನಡತೆಗೆ ಅರ್ಜುನನು ಏನೆಂದು ಯೋಚಿಸಿದನು?

ಹರಿಬದಾಹವವೆಂಬರಾವೆಡೆ
ಹರೆದರೇ ರಣಗೇಡಿಗಳು ನುಡಿ
ಯುರಿಯ ಹೊರುವುದು ಘಾಯವತಿಶೀತಳ ಮಹಾದೇವ
ಅರಮನೆಯ ಕಾಲಾಳು ಕರಿ ರಥ
ತುರಗವಳಿದರೆ ತಮಗೆ ನಷ್ಟಿಯೆ
ಗರುವನೈ ಗುರುತನುಜನೆನುತೈದಿದನು ಕಲಿ ಪಾರ್ಥ (ಭೀಷ್ಮ ಪರ್ವ, ೮ ಸಂಧಿ, ೪೫ ಪದ್ಯ)

ತಾತ್ಪರ್ಯ:
ಸೇಡನ್ನು ತೀರಿಸಿಕೊಳ್ಳುವ ಯುದ್ಧವೆಂದು ಬಂದವರು ಹಿಂದಕ್ಕೆ ಸರಿದು ಬಿಟ್ಟರೇ! ಈ ಯುದ್ದಗೇಡಿಗಳ ಮಾತು ಉರಿಯನ್ನುಗುಳುತ್ತದೆ. ಅವರ ಹೊಡೆತ ತಣ್ಣಗಿರುತ್ತದೆ, ಸೈನ್ಯ ಚತುರಂಗ ಸತ್ತರೆ ತನಗೇನು ನಷ್ಟವೆಂದು ಅಶ್ವತ್ಥಾಮನು ಸುಮ್ಮನಾದನೇ ಎಂದು ಅರ್ಜುನನು ಮುಂದುವರೆದನು.

ಅರ್ಥ:
ಹರಿಬ: ಕೆಲಸ, ಕಾರ್ಯ; ಆಹವ: ಯುದ್ಧ; ಹರಿ: ಸರಿ, ನಿವಾರಿಸು; ರಣ: ರಣರಂಗ; ಹೇಡಿ: ಹೆದರುಪುಕ್ಕ, ಅಂಜು; ನುಡಿ: ಮಾತು; ಉರಿ: ಜ್ವಾಲೆ; ಘಾಯ: ಪೆಟ್ಟು; ಶೀತಳ: ತಣ್ಣಗಿರುವ; ಅರಮನೆ: ರಾಜರ ಆಲಯ; ಕಾಲಾಳು: ಸೈನಿಕ; ಕರಿ: ಆನೆ; ರಥ: ಬಂಡಿ; ತುರಗ: ಅಶ್ವ; ಅಳಿ: ನಾಶ; ನಷ್ಟ: ಹಾನಿ, ಕೆಡುಕು; ಗರುವ: ಹಿರಿಯ, ಶ್ರೇಷ್ಠ; ಗುರು: ಆಚಾರ್ಯ; ತನುಜ: ಮಗ; ಐದು: ಬಂದು ಸೇರು; ಕಲಿ: ಶೂರ;

ಪದವಿಂಗಡಣೆ:
ಹರಿಬದ್+ಆಹವವ್+ಎಂಬರ್+ಆವೆಡೆ
ಹರೆದರೇ +ರಣಗೇಡಿಗಳು+ ನುಡಿ
ಯುರಿಯ +ಹೊರುವುದು +ಘಾಯವ್+ಅತಿಶೀತಳ +ಮಹಾದೇವ
ಅರಮನೆಯ +ಕಾಲಾಳು +ಕರಿ +ರಥ
ತುರಗವ್+ಅಳಿದರೆ +ತಮಗೆ +ನಷ್ಟಿಯೆ
ಗರುವನೈ +ಗುರುತನುಜನೆನುತ್+ಐದಿದನು +ಕಲಿ +ಪಾರ್ಥ

ಅಚ್ಚರಿ:
(೧) ರಣಹೇಡಿಗಳ ಗುಣ – ರಣಗೇಡಿಗಳು ನುಡಿಯುರಿಯ ಹೊರುವುದು ಘಾಯವತಿಶೀತಳ ಮಹಾದೇವ